ಪದ್ಯ ೩೫: ಧರ್ಮಜನ ಮೇಲೆ ದುರ್ಯೋಧನನು ಹೇಗೆ ದಾಳಿ ಮಾಡಿದನು?

ಧರಣಿಪನ ಥಟ್ಟಣೆಗೆ ನಿಲ್ಲದೆ
ತೆರಳಿದನು ಸಹದೇವನಾತನ
ಹಿರಿಯನಡ್ಡೈಸಿದಡೆ ಕೊಟ್ಟನು ಬೋಳೆಯಂಬಿನಲಿ
ಶರಹತಿಗೆ ಸೆಡೆದಾ ನಕುಲ ಪೈ
ಸರಿಸಿದನು ನುರಾನೆಯಲಿ ಡಾ
ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ (ಗದಾ ಪರ್ವ, ೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಜೋರಿನ ಹೊಡೆತವನ್ನು ತಡೆಯಲಾದರೆ ಸಹದೇವನು ಹಿಂದಿರುಗಿದನು. ನಕುಲನು ಬರಲು ಕೌರವನು ಬೋಳೆಯಂಬಿನಿಂದ ಹೊಡೆದನು. ನಕುಲನು ಸಹ ಇದನ್ನು ತಡೆಯಲಾರದೆ ಜಾರಿದನು. ಧೀರ ಕೌರವನು ನೂರಾನೆಗಳ ಸೈನ್ಯದೊಂದಿಗೆ ಧರ್ಮಜನ ದಳದ ಮೇಲೆ ದಾಳಿಮಾಡಿದನು.

ಅರ್ಥ:
ಧರಣಿಪ: ರಾಜ; ಥಟ್ಟಣೆ: ಗುಂಪು; ನಿಲ್ಲು: ತಡೆ; ತೆರಳು: ಹಿಂದಿರುಗು; ಹಿರಿಯ: ದೊಡ್ಡ; ಅಡ್ಡೈಸು: ಅಡ್ಡ ಹಾಕು; ಕೊಡು: ನೀಡು; ಅಂಬು: ಬಾಣ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಸೆಡೆ: ಗರ್ವಿಸು; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಆನೆ: ಗಜ; ಡಾವರಿಸು: ಸುತ್ತು, ತಿರುಗಾಡು; ದಳ: ಸೈನ್ಯ; ಧೀರ: ಶೂರ;

ಪದವಿಂಗಡಣೆ:
ಧರಣಿಪನ +ಥಟ್ಟಣೆಗೆ +ನಿಲ್ಲದೆ
ತೆರಳಿದನು +ಸಹದೇವನ್+ಆತನ
ಹಿರಿಯನ್+ಅಡ್ಡೈಸಿದಡೆ +ಕೊಟ್ಟನು +ಬೋಳೆ+ಅಂಬಿನಲಿ
ಶರಹತಿಗೆ +ಸೆಡೆದ್+ಆ+ ನಕುಲ+ ಪೈ
ಸರಿಸಿದನು +ನುರಾನೆಯಲಿ +ಡಾ
ವರಿಸಿದನು+ ಧರ್ಮಜನ +ದಳದಲಿ+ ಧೀರ+ ಕುರುರಾಯ

ಅಚ್ಚರಿ:
(೧) ಪೈಸರಿಸಿದನು, ಡಾವರಿಸಿದನು, ತೆರಳಿದನು – ಪ್ರಾಸ ಪದಗಳು

ಪದ್ಯ ೩೪: ಕುರುಪತಿಯು ಯಾರ ಮೇಲೆ ಮತ್ತೆ ಯುದ್ಧಮಾಡಲು ಮುಂದಾದನು?

ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ (ಗದಾ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶಕುನಿಯ ದಳದಲ್ಲಿ ಓಡಿಹೋಗಿ ಬದುಕಿದವರು, ಧೈರ್ಯವನ್ನು ಮಾಡಿ ಒಂದುಗೂಡಿ ನೂರು ಆನೆಗಳೊಡನೆ ಕೌರವನನ್ನು ಕೂಡಿಕೊಂಡಿತು. ಕೌರವನು ಏಕೆ ಓಡಿಹೋಗಲಿ, ಇನ್ನೊಂದು ಹಲಗೆ ಆಟವಾಡೋಣ ಎನ್ನುವಂತೆ ಸಹದೇವನ ಮೇಲೆ ಆಕ್ರಮಣ ಮಾಡಿದನು.

ಅರ್ಥ:
ಓಡು: ಧಾವಿಸು; ಧೈರ್ಯ: ಎದೆಗಾರಿಕೆ, ಕೆಚ್ಚು; ಹರಿಹಂಚು: ಚದುರಿದ; ಸುಭಟ: ಸೈನಿಕ; ಕೂಡು: ಜೊತೆಯಾಗು, ಸೇರು; ನೂರು: ಶತ; ಮದದಾನೆ: ಮತ್ತಿನಿಂದ ಕೂಡಿದ ಗಜ; ಹಲಗೆ: ಪಲಗೆ, ಮರ, ಜೂಜಿನ ಒಂದು ಆಟ; ನೋಡು: ವೀಕ್ಷಿಸು; ಕೈಮಾಡು: ಹೋರಾಡು; ಇದಿರು: ಎದುರು;

ಪದವಿಂಗಡಣೆ:
ಓಡಿದವರ್+ಅಲ್ಲಲ್ಲಿ +ಧೈರ್ಯವ
ಮಾಡಿ +ಹರಿಹಂಚಾದ +ಸುಭಟರು
ಕೂಡಿಕೊಂಡುದು +ನೂರು +ಮದದಾನೆಯಲಿ +ಕುರುಪತಿಯ
ಓಡಲೇಕಿನ್ನೊಂದು +ಹಲಗೆಯನ್
ಆಡಿ +ನೋಡುವೆನೆಂಬವೊಲು +ಕೈ
ಮಾಡಿದನು +ಕುರುರಾಯನ್+ಆ+ ಸಹದೇವನ್+ ಇದಿರಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಓಡಲೇಕಿನ್ನೊಂದು ಹಲಗೆಯನಾಡಿ ನೋಡುವೆನೆಂಬವೊಲು ಕೈ ಮಾಡಿದನು ಕುರುರಾಯ
(೨) ಕುರುಪತಿ, ಕುರುರಾಯ – ದುರ್ಯೋಧನನನ್ನು ಕರೆದ ಪರಿ

ಪದ್ಯ ೩೩: ಕುರುಸೇನೆಯ ಸ್ಥಿತಿ ಏನಾಯಿತು?

ಹರಿಬದಲಿ ಹೊಕ್ಕೆರಡು ಸಾವಿರ
ತುರಗ ಬಿದ್ದವು ನೂರು ಮದಸಿಂ
ಧುರಕೆ ಗಂಧನವಾಯ್ತು ಪಯದಳವೆಂಟು ಸಾವಿರದ
ಬರಹ ತೊಡೆದುದು ನೂರು ರಥ ರಿಪು
ಶರದೊಳಕ್ಕಾಡಿತು ವಿಡಂಬದ
ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ (ಗದಾ ಪರ್ವ, ೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರನೇ ಕೇಳು, ಸಹದೇವನ ಮೇಲೆ ನುಗ್ಗಿದ ಎರಡುಸಾವಿರ ಕುದುರೆಗಳು, ನುರು ಆನೆಗಳು, ಎಂಟು ಸಾವಿರ ಕಾಲಾಳುಗಳು ಮಡಿದರು. ನೂರು ರಥಗಳು ಮುರಿದವು. ಕುರುಸೇನಾ ಸಮುದ್ರವು ಬತ್ತಿಹೋಯಿತು.

ಅರ್ಥ:
ಹರಿಬ: ಕೆಲಸ, ಕಾರ್ಯ; ಹೊಕ್ಕು: ಸೇರು; ಸಾವಿರ: ಸಹಸ್ರ; ತುರಗ: ಕುದುರೆ; ಬಿದ್ದು: ಬೀಳು, ಕುಸಿ; ನೂರು: ಶತ; ಮದ: ಅಹಂಕಾರ; ಸಿಂಧುರ: ಆನೆ, ಗಜ; ಗಂಧನ: ಅಳಿವು, ಕೊಲೆ; ಪಯದಳ: ಕಾಲಾಳು; ಬರ: ಕ್ಷಾಮ; ತೊಡೆ: ಬಳಿ, ಸವರು; ರಥ: ಬಂಡಿ; ರಿಪು: ವೈರಿ; ಶರ: ಬಾಣ; ವಿಡಂಬ: ಅನುಸರಣೆ; ಅಂಬುಧಿ: ಸಾಗರ; ಕೂಡೆ: ತಕ್ಷಣ; ಬರತುದು: ಬತ್ತಿಹೋಗು; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹರಿಬದಲಿ +ಹೊಕ್ಕ್+ಎರಡು +ಸಾವಿರ
ತುರಗ +ಬಿದ್ದವು +ನೂರು +ಮದ+ಸಿಂ
ಧುರಕೆ+ ಗಂಧನವಾಯ್ತು +ಪಯದಳವೆಂಟು +ಸಾವಿರದ
ಬರಹ +ತೊಡೆದುದು +ನೂರು +ರಥ +ರಿಪು
ಶರದೊಳಕ್+ಆಡಿತು +ವಿಡಂಬದ
ಕುರುಬಲಾಂಬುಧಿ +ಕೂಡೆ +ಬರತುದು +ನೃಪತಿ+ ಕೇಳೆಂದ

ಅಚ್ಚರಿ:
(೧) ಮಡಿದುದು ಎಂದು ಹೇಳಲು – ನೂರು ಮದಸಿಂಧುರಕೆ ಗಂಧನವಾಯ್ತು

ಪದ್ಯ ೩೨: ಶಕುನಿಯ ಸೈನ್ಯವನ್ನು ಯಾರು ಕೊಂದರು?

ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ (ಗದಾ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಕುನಿಯ ಸೇನೆಯು ವಡಬಾಗ್ನಿಯನ್ನು ಕವಿಯುವ ದುಂಬಿಗಳಂತೆ ಸಹದೇವನನ್ನು ಸುತ್ತುವರಿದಿತು. ಸಹದೇವನು ನಿಮಿಷಾರ್ಧದಲ್ಲಿ ಅವರೆಲ್ಲರನ್ನೂ ತಡೆದು ಶಕುನಿಯ ಸೇನೆಯನ್ನು ಕೊಂದನು.

ಅರ್ಥ:
ಕವಿ: ಆವರಿಸು; ಪರಿವಾರ: ಪರಿಜನ, ಬಂಧುಜನ; ವಡಬ: ಸಮುದ್ರದೊಳಗಿರುವ ಬೆಂಕಿ; ತಿವಿ: ಚುಚ್ಚು; ತುಂಬಿ: ದುಂಬಿ, ಭ್ರಮರ; ಬವರ: ಕಾಳಗ, ಯುದ್ಧ; ಮಂಡಳಿಸು: ಸುತ್ತುವರಿ; ರಥ: ಬಂಡಿ; ಅಗ್ರ: ಮುಂಭಾಗ; ತೆವರು: ಹಿಮ್ಮೆಟ್ಟು, ಅಟ್ಟು, ಓಡಿಸು; ಅನಿಬರ: ಅಷ್ಟುಜನ; ನಿಮಿಷ: ಕ್ಷಣ; ಸಂತವಿಸು: ಸಮಾಧಾನಗೊಳಿಸು; ಕೊಂದು: ಕೊಲ್ಲು; ಬಲ: ಶಕ್ತಿ, ಸೈನ್ಯ;

ಪದವಿಂಗಡಣೆ:
ಕವಿದುದಾ+ ಪರಿವಾರ +ವಡಬನ
ತಿವಿವ+ ತುಂಬಿಗಳಂತೆ +ಶಕುನಿಯ
ಬವರಿಗರು +ಮಂಡಳಿಸೆ +ಸಹದೇವನ +ರಥಾಗ್ರದಲಿ
ತೆವರಿಸಿದನ್+ಅನಿಬರ +ಚತುರ್ಬಲ
ನಿವಹವನು +ನಿಮಿಷಾರ್ಧದಲಿ +ಸಂ
ತವಿಸಿದನು +ಸಹದೇವ +ಕೊಂದನು +ಸೌಬಲನ +ಬಲವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕವಿದುದಾ ಪರಿವಾರ ವಡಬನತಿವಿವ ತುಂಬಿಗಳಂತೆ

ಪದ್ಯ ೩೧: ಶಕುನಿಯ ಅಂತ್ಯವು ಹೇಗಾಯಿತು?

ಬಳಿಕ ಕಾಲಾಳಾಗಿ ಖಡುಗವ
ಝಳಪಿಸುತ ಬರೆ ಶಕ್ತಿಯಲಿ ಕೈ
ಚಳಕ ಮಿಗೆ ಸಹದೇವನಿಟ್ಟನು ಸುಬಲನಂದನನ
ಖಳನೆದೆಯನೊದೆದಪರಭಾಗಕೆ
ನಿಲುಕಿತದು ಗಾಂಧಾರಬಲ ಕಳ
ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ (ಗದಾ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶಕುನಿಯು ಕತ್ತಿಯನ್ನು ಝಳಪಿಸುತ್ತಾ ಕಾಲಾಳಾಗಿ ಸಹದೇವನ ಮೇಲೆ ಹೋಗಲು, ಸಹದೇವನು ಶಕುನಿಯ ಮೇಲೆ ಶಕ್ತಿಯನ್ನು ಪ್ರಯೋಗಿಸಲು, ಅದು ಶಕುನಿಯ ಎದೆಯನ್ನು ಹೊಕ್ಕು ಬೆನ್ನಿನಲ್ಲಿ ಕಾಣಿಸಿಕೊಂಡಿತು. ಶಕುನಿಯು ಅಪ್ಸರೆಯರ ತೋಳಿನಲ್ಲಿ ಸುಳಿದನು. ಗಾಂಧಾರ ಬಲವು ಕಳವಳಗೊಂಡಿತು.

ಅರ್ಥ:
ಬಳಿಕ: ನಂತರ; ಕಾಲಾಳು: ಸೈನಿಕ; ಖಡುಗ: ಕತ್ತಿ; ಝಳಪಿಸು: ಹೆದರಿಸು, ಬೀಸು; ಬರೆ: ತಿದ್ದು; ಶಕ್ತಿ: ಬಲ; ಕೈಚಳಕ: ಚಾಣಾಕ್ಷತನ; ಮಿಗೆ: ಅಧಿಕ; ನಂದನ: ಮಗ; ಖಳ: ದುಷ್ಟ; ಎದೆ: ಉರ; ಒದೆ: ನೂಕು; ಅಪರಭಾಗ: ಹಿಂಭಾಗ; ನಿಲುಕು: ನಿಲ್ಲು; ಕಳವಳ: ಗೊಂದಲ; ಸುಳಿ: ಆವರಿಸು, ಮುತ್ತು; ಸುರತರುಣಿ: ಅಪ್ಸರೆ; ತೋಳು: ಬಾಹು;

ಪದವಿಂಗಡಣೆ:
ಬಳಿಕ +ಕಾಲಾಳಾಗಿ +ಖಡುಗವ
ಝಳಪಿಸುತ +ಬರೆ +ಶಕ್ತಿಯಲಿ +ಕೈ
ಚಳಕ+ಮಿಗೆ +ಸಹದೇವನಿಟ್ಟನು+ ಸುಬಲ+ನಂದನನ
ಖಳನ್+ಎದೆಯನ್+ಒದೆದ್+ಅಪರಭಾಗಕೆ
ನಿಲುಕಿತದು +ಗಾಂಧಾರಬಲ+ ಕಳ
ವಳಿಸೆ +ಸುಳಿದನು +ಶಕುನಿ +ಸುರತರುಣಿಯರ +ತೋಳಿನಲಿ

ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ಸುಳಿದನು ಶಕುನಿ ಸುರತರುಣಿಯರ ತೋಳಿನಲಿ
(೨) ಪದದ ರಚನೆ – ಖಳನೆದೆಯನೊದೆದಪರಭಾಗಕೆ
(೩) ಶಕುನಿ, ಸುಬಲನಂದನ – ಶಕುನಿಯನ್ನು ಕರೆದ ಪರಿ

ಪದ್ಯ ೩೦: ಶಕುನಿ ಸಹದೇವರ ಯುದ್ಧ ಹೇಗಿತ್ತು?

ತೇರು ಹುಡಿಹುಡಿಯಾಗೆ ಹೊಯ್ದನು
ವಾರುವನ ಮೇಲುಗಿದಡಾಯುಧ
ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ
ವೀರನಹೆಯೋ ಶಕುನಿ ಜೂಜಿನ
ಚೋರವಿದ್ಯೆಯ ಬಿಟ್ಟೆಲಾ ಜ
ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ (ಗದಾ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಶಕುನಿಯ ರಥವು ಪುಡಿ ಪುಡಿಯಾಗಲು, ಕುದುರೆಯನ್ನೇರಿ ಖಡ್ಗವನ್ನು ಝಳುಪಿಸುತ್ತಾ ಜೋರಿನಿಮ್ದ ಸಹದೇವನ ಇದಿರಿಗೆ ಹೋದನು. ಸಹದೇವನು ಶಕುನಿ ಭಲೇ ಮೋಸದ ಕಳ್ಳ ಜೂಜನ್ನು ಬಿಟ್ಟೆಯಲ್ಲವೇ, ಶೂರನಾಗಿದ್ದೀಯೇ? ಎನ್ನುತ್ತಾ ಕುದುರೆಯನ್ನು ಕಡಿದನು.

ಅರ್ಥ:
ತೇರು: ಬಂಡಿ; ಹುಡಿ: ಪುಡಿ; ಹೊಯ್ದು: ಹೊಡೆ; ವಾರುವ: ಕುದುರೆ; ಉಗಿ: ಹೊರಹಾಕು; ಆಯುಧ: ಶಸ್ತ್ರ; ಆರುಭಟೆ: ಆರ್ಭಟ, ಕೂಗು; ಬಿಡು: ತ್ಯಜಿಸು; ಅಭಿಮುಖ: ಎದುರು; ವೀರ: ಶೂರ; ಜೂಜು: ದ್ಯೂತ; ಚೋರ: ಕಳ್ಳತನ; ವಿದ್ಯೆ: ಜ್ಞಾನ; ಜಜ್ಝಾರ: ಶಕ್ತಿ, ಪರಾಕ್ರಮ; ಮಝ: ಭಲೇ; ಪೂತ: ಪಾವನವಾದುದು; ಖಂಡಿಸು: ತುಂಡು ಮಾಡು; ಹಯ: ಕುದುರೆ;

ಪದವಿಂಗಡಣೆ:
ತೇರು +ಹುಡಿಹುಡಿಯಾಗೆ +ಹೊಯ್ದನು
ವಾರುವನ +ಮೇಲ್+ಉಗಿದಡ್+ಆಯುಧದ್
ಆರುಭಟೆಯಲಿ +ಬಿಟ್ಟನಾ +ಸಹದೇವನ್+ಅಭಿಮುಖಕೆ
ವೀರನಹೆಯೋ +ಶಕುನಿ +ಜೂಜಿನ
ಚೋರವಿದ್ಯೆಯ +ಬಿಟ್ಟೆಲಾ +ಜ
ಜ್ಝಾರನಹೆ +ಮಝ +ಪೂತೆನುತ+ ಖಂಡಿಸಿದನಾ +ಹಯವ

ಅಚ್ಚರಿ:
(೧) ಕುದುರೆಮೇಲೆ ಕೂತನು ಎಂದು ಹೇಳಲು – ವಾರುವನ ಮೇಲುಗಿದಡಾಯುಧದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ