ಪದ್ಯ ೩೧: ಶಕುನಿಯ ಅಂತ್ಯವು ಹೇಗಾಯಿತು?

ಬಳಿಕ ಕಾಲಾಳಾಗಿ ಖಡುಗವ
ಝಳಪಿಸುತ ಬರೆ ಶಕ್ತಿಯಲಿ ಕೈ
ಚಳಕ ಮಿಗೆ ಸಹದೇವನಿಟ್ಟನು ಸುಬಲನಂದನನ
ಖಳನೆದೆಯನೊದೆದಪರಭಾಗಕೆ
ನಿಲುಕಿತದು ಗಾಂಧಾರಬಲ ಕಳ
ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ (ಗದಾ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶಕುನಿಯು ಕತ್ತಿಯನ್ನು ಝಳಪಿಸುತ್ತಾ ಕಾಲಾಳಾಗಿ ಸಹದೇವನ ಮೇಲೆ ಹೋಗಲು, ಸಹದೇವನು ಶಕುನಿಯ ಮೇಲೆ ಶಕ್ತಿಯನ್ನು ಪ್ರಯೋಗಿಸಲು, ಅದು ಶಕುನಿಯ ಎದೆಯನ್ನು ಹೊಕ್ಕು ಬೆನ್ನಿನಲ್ಲಿ ಕಾಣಿಸಿಕೊಂಡಿತು. ಶಕುನಿಯು ಅಪ್ಸರೆಯರ ತೋಳಿನಲ್ಲಿ ಸುಳಿದನು. ಗಾಂಧಾರ ಬಲವು ಕಳವಳಗೊಂಡಿತು.

ಅರ್ಥ:
ಬಳಿಕ: ನಂತರ; ಕಾಲಾಳು: ಸೈನಿಕ; ಖಡುಗ: ಕತ್ತಿ; ಝಳಪಿಸು: ಹೆದರಿಸು, ಬೀಸು; ಬರೆ: ತಿದ್ದು; ಶಕ್ತಿ: ಬಲ; ಕೈಚಳಕ: ಚಾಣಾಕ್ಷತನ; ಮಿಗೆ: ಅಧಿಕ; ನಂದನ: ಮಗ; ಖಳ: ದುಷ್ಟ; ಎದೆ: ಉರ; ಒದೆ: ನೂಕು; ಅಪರಭಾಗ: ಹಿಂಭಾಗ; ನಿಲುಕು: ನಿಲ್ಲು; ಕಳವಳ: ಗೊಂದಲ; ಸುಳಿ: ಆವರಿಸು, ಮುತ್ತು; ಸುರತರುಣಿ: ಅಪ್ಸರೆ; ತೋಳು: ಬಾಹು;

ಪದವಿಂಗಡಣೆ:
ಬಳಿಕ +ಕಾಲಾಳಾಗಿ +ಖಡುಗವ
ಝಳಪಿಸುತ +ಬರೆ +ಶಕ್ತಿಯಲಿ +ಕೈ
ಚಳಕ+ಮಿಗೆ +ಸಹದೇವನಿಟ್ಟನು+ ಸುಬಲ+ನಂದನನ
ಖಳನ್+ಎದೆಯನ್+ಒದೆದ್+ಅಪರಭಾಗಕೆ
ನಿಲುಕಿತದು +ಗಾಂಧಾರಬಲ+ ಕಳ
ವಳಿಸೆ +ಸುಳಿದನು +ಶಕುನಿ +ಸುರತರುಣಿಯರ +ತೋಳಿನಲಿ

ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ಸುಳಿದನು ಶಕುನಿ ಸುರತರುಣಿಯರ ತೋಳಿನಲಿ
(೨) ಪದದ ರಚನೆ – ಖಳನೆದೆಯನೊದೆದಪರಭಾಗಕೆ
(೩) ಶಕುನಿ, ಸುಬಲನಂದನ – ಶಕುನಿಯನ್ನು ಕರೆದ ಪರಿ

ಪದ್ಯ ೧೩: ಭೀಷ್ಮನು ಯಾರೊಡನೆ ಯುದ್ಧಕ್ಕೆ ಬಂದನು?

ಹೊಗರೊಗುವ ಝಳಪಿಸುವಡಾಯುಧ
ನೆಗಹಿ ತೂಗುವ ಲೌಡಿಗಳ ಮೊನೆ
ಝಗಝಗಿಸಿ ಝಾಡಿಸುವ ಸಬಳದ ತಿರುಹುವಂಕುಶದ
ಬಿಗಿದುಗಿವ ಬಿಲ್ಲುಗಳ ಬೆರಳೊಳ
ಗೊಗೆವ ಕೂರಂಬುಗಳ ಸುಭಟಾ
ಳಿಗಳೊಡನೆ ಗಾಂಗೇಯ ಹೊಕ್ಕನು ಕಾಳೆಗದ ಕಳನ (ಭೀಷ್ಮ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಝಳಪಿಸುವ ಕತ್ತಿಗಳ ಕಾಂತಿ, ಮೇಲೆತ್ತಿ ತೂಗುವ ಲೌಡಿಗಳು, ಝಾಡಿಸುವ ಸಬಳಗಳ ಹೊಳಪು, ತಿರುವುತ್ತಿದ್ದ ಅಂಕುಶಗಳು ಹೆದೆಯೇರಿಸಿದ ಬಿಲ್ಲು, ಕೈಯಲ್ಲಿ ಹಿಡಿದ ಕೂರಂಬುಗಳು ಇವನ್ನು ಧರಿಸಿದ ಸುಭಟರೊಡನೆ ಭೀಷ್ಮನು ಕಾಳಗದ ಕಣವನ್ನು ಹೊಕ್ಕನು.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಝಳ; ಪ್ರಕಾಶ, ಕಾಂತಿ; ಆಯುಧ: ಶಸ್ತ್ರ; ನೆಗಹು: ಮೇಲೆತ್ತು; ತೂಗು: ಅಲ್ಲಾಡಿಸು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ, ದೊಣ್ಣೆಯಂತಹ ಸಾಧನ; ಮೊನೆ: ಚೂಪು, ತುದಿ; ಝಗಿಸು: ಕಾಂತಿಯುಕ್ತವಾಗಿ ಹೊಳೆ; ಝಾಡಿ: ಕಾಂತಿ; ಸಬಳ: ಈಟಿ, ಭರ್ಜಿ; ತಿರುಹು: ತಿರುಗಿಸು; ಅಂಕುಶ: ಹಿಡಿತ, ಹತೋಟಿ; ಬಿಗಿ: ಕಟ್ಟು, ಬಂಧಿಸು; ಬಿಲ್ಲು: ಚಾಪ; ಬೆರಳು: ಅಂಗುಲಿ; ಒಗೆ: ಎಸೆ, ಹೊಡೆ; ಕೂರಂಬು: ಹರಿತವಾದ ಬಾಣ; ಸುಭಟ: ಸೈನಿಕ; ಆಳಿ: ಗುಂಪು; ಗಾಂಗೇಯ: ಭೀಷ್ಮ; ಹೊಕ್ಕು: ಸೇರು; ಕಾಳೆಗ: ಯುದ್ಧ; ಕಳ: ರಣರಂಗ;

ಪದವಿಂಗಡಣೆ:
ಹೊಗರೊಗುವ +ಝಳಪಿಸುವಡ್+ಆಯುಧ
ನೆಗಹಿ+ ತೂಗುವ +ಲೌಡಿಗಳ +ಮೊನೆ
ಝಗಝಗಿಸಿ +ಝಾಡಿಸುವ +ಸಬಳದ +ತಿರುಹುವ್+ಅಂಕುಶದ
ಬಿಗಿದುಗಿವ+ ಬಿಲ್ಲುಗಳ+ ಬೆರಳೊಳಗ್
ಒಗೆವ +ಕೂರಂಬುಗಳ +ಸುಭಟಾ
ಳಿಗಳೊಡನೆ +ಗಾಂಗೇಯ +ಹೊಕ್ಕನು +ಕಾಳೆಗದ+ ಕಳನ

ಅಚ್ಚರಿ:
(೧) ಹೊಗರು, ಝಳ, ಝಗ, ಝಾಡಿ – ಸಾಮ್ಯಾರ್ಥ ಪದಗಳು

ಪದ್ಯ ೬೪: ಶಿಶುಪಾಲನ ರಾಜರು ಏಕೆ ಭಯಭೀತರಾದರು?

ಝಂಕೆಮಿಗೆ ಹೊರವಂಟುದೆಡಬಲ
ವಂಕದಲಿ ಯದುಸೇನೆ ಪಾಂಡವ
ರಂಕೆಯಲಿ ದಳ ಜೋಡಿಸಿತು ಝಳಪಿಸುವ ಕೈದುಗಳ
ಮುಂಕುಡಿಯ ಮೋಹರದ ದಳನಿ
ಶ್ಶಂಕೆಯಲಿ ಜೋಡಿಸಿತು ಭೂಪರ
ಬಿಂಕ ಬೀತುದು ಭೀತಿ ಹೂತುದು ಹುದುಗಿತಾಟೋಪ (ಸಭಾ ಪರ್ವ, ೧೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಎಡಬಲಗಳಲ್ಲಿ ಯಾದವ ಸೈನ್ಯವು ಅಬ್ಬರಿಸುತ್ತಾ ಹೊರಟಿತು. ಪಾಂಡವರ ಅಪ್ಪಣೆಯಂತೆ ಅವರ ಸೈನ್ಯ ಸಿದ್ಧವಾಯಿತು. ಮುಂಚೂಣಿಯ ಸೈನ್ಯಗಳು ಭಯರಹಿತವಾಗಿ ಮುನ್ನುಗ್ಗಿದವು. ಶಿಶುಪಾಲನೊಡನೆ ಇದ್ದ ರಾಜರ ಅಬ್ಬರ ಕಡಿಮೆಯಾಗಿ ಭೀತಿಯು ಅವರನ್ನಾವರಿಸಿತು.

ಅರ್ಥ:
ಝಂಕೆ: ಆರ್ಭಟ, ಗರ್ಜನೆ; ಮಿಗೆ: ಅಧಿಕ; ಹೊರವಂಟು: ತೆರಳು; ಎಡಬಲ: ಅಕ್ಕಪಕ್ಕ; ವಂಕ: ಗುಂಪು; ಸೇನೆ: ಸೈನ್ಯ; ಅಂಕೆ: ಅಪ್ಪಣೆ; ದಳ: ಸೈನ್ಯ; ಜೋಡಿಸು: ಕೂಡಿಸು; ಝಳ: ಶೆಕೆ, ತಾಪ; ಕೈದು: ಕತ್ತಿ; ಮುಂಕುಡಿ: ಮುಂದಿರುವ, ಅಗ್ರ; ಕುಡಿ: ತುದಿ; ಮೋಹರ: ಯುದ್ಧದ; ನಿಶ್ಶಂಕೆ: ನಿಸ್ಸಂಶಯ; ಭೂಪ: ರಾಜ; ಬಿಂಕ: ಗರ್ವ, ಜಂಬ; ಬೀತು: ಕಡಿಮೆಯಾಗು; ಭೀತಿ: ಭಯ, ಹೆದರಿಕೆ; ಹೂತು: ಅಡಗು; ಹುದುಗು: ಸೇರು, ಕೂಡು; ಆಟೋಪ: ಆಡಂಬರ;

ಪದವಿಂಗಡಣೆ:
ಝಂಕೆಮಿಗೆ +ಹೊರವಂಟುದ್+ಎಡಬಲ
ವಂಕದಲಿ +ಯದುಸೇನೆ+ ಪಾಂಡವರ್
ಅಂಕೆಯಲಿ +ದಳ +ಜೋಡಿಸಿತು+ ಝಳಪಿಸುವ+ ಕೈದುಗಳ
ಮುಂಕುಡಿಯ +ಮೋಹರದ +ದಳನಿ
ಶ್ಶಂಕೆಯಲಿ +ಜೋಡಿಸಿತು +ಭೂಪರ
ಬಿಂಕ+ ಬೀತುದು+ ಭೀತಿ+ ಹೂತುದು +ಹುದುಗಿತ್+ಆಟೋಪ

ಅಚ್ಚರಿ:
(೧) ಬ ಕಾರದ ಸಾಲು ಪದ – ಭೂಪರ ಬಿಂಕ ಬೀತುದು ಭೀತಿ
(೨) ಹ ಕಾರದ ಜೋಡಿ ಪದ – ಹೂತುದು ಹುದುಗಿತಾಟೋಪ
(೩) ಝಂಕೆ, ಅಂಕೆ, ಶಂಕೆ – ಪ್ರಾಸ ಪದಗಳು

ಪದ್ಯ ೫೩: ಮೂರು ಲೋಕದಲ್ಲಿ ಏನು ಕಂಡವು?

ಝಳಪಿಸಿದುದೆರಡಂಕದಲಿ ನಿ
ಷ್ಕಲಿತ ತೇಜಃಪುಂಜವಿಬ್ಬರ
ಹಳಹಳಿಕೆ ಹಬ್ಬಿದುದು ಗಬ್ಬರಿಸಿದುದು ಗಗನದಲಿ
ಹಿಳುಕನೀದವೊ ಹಿಳುಕು ಮೊನೆಯಲ
ಗಲಗನುಗುಳ್ದವೊ ಕಣೆಗಳಲಿ ಕಣೆ
ತಳಿತವೋ ತ್ರೈಲೋಕ್ಯಬಾಣಾದ್ವೈತವಾಯ್ತೆಂದ (ಕರ್ಣ ಪರ್ವ, ೨೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಇಬ್ಬರ ಪ್ರಭೆಯೊ ಎರಡು ಪಕ್ಷಗಳಲ್ಲೂ ರಂಜಿಸಿತು. ಇಬ್ಬರ ರಭಸವೂ ಆಕಾಶದಲ್ಲಿ ಹಬ್ಬಿತು. ಬಾಣಗಳು ಬಾಣಗಳನ್ನೀದವೋ, ಬಾಣದ ಮೊನೆಗಳು ಬಾಣಗಳನ್ನುಗುಳಿದವೋ ಅಥವಾ ಬಾಣಗಳಲ್ಲಿ ಬಾಣಗಳು ಚಿಗುರಿದವೋ ತಿಳಿಯದು. ಮೂರು ಲೋಕಗಳಲ್ಲೂ ಬಾಣಗಳೇ ಕಂಡವು ಇನ್ನೇನೂ ಕಾಣಲಿಲ್ಲ.

ಅರ್ಥ:
ಝಳಪಿಸು: ಶೋಭಿಸು, ಪ್ರಕಾಶಿಸು; ಅಂಕ: ಯುದ್ಧ, ವಿಭಾಗ; ನಿಷ್ಕಲಿತ: ಜಾರಿಹೋಗುವ; ತೇಜ: ಕಾಂತಿ; ಪ್ರಕಾಶ; ಹಳಹಳಿಕೆ: ಕಾಂತಿ, ತೇಜಸ್ಸು; ಹಬ್ಬು: ಹರಡು; ಗಬ್ಬರಿಸು: ತೋಡು, ಬಗಿ, ಆವರಿಸು; ಗಗನ: ಆಗಸ; ಹಿಳುಕು: ಬಾಣದ ಹಿಂಭಾಗ, ಬಾಣದ ಗರಿ; ಮೊನೆ: ತುದಿ; ಅಲಗು: ಮೊನೆ, ಹರಿತವಾದ ಬಾಯಿ; ಉಗುಳು: ಹೊರಹಾಕು; ಕಣೆ: ಬಾಣ; ತಳಿತ: ಹೊಡೆ; ತ್ರೈಲೋಕ: ಮೂರು ಲೋಕ; ದ್ವೈತ: ಜೊತೆ;

ಪದವಿಂಗಡಣೆ:
ಝಳಪಿಸಿದುದ್+ಎರಡ್+ಅಂಕದಲಿ+ ನಿ
ಷ್ಕಲಿತ+ ತೇಜಃ+ಪುಂಜವ್+ಇಬ್ಬರ
ಹಳಹಳಿಕೆ+ ಹಬ್ಬಿದುದು +ಗಬ್ಬರಿಸಿದುದು +ಗಗನದಲಿ
ಹಿಳುಕನೀದವೊ+ ಹಿಳುಕು+ ಮೊನೆಯಲಗ್
ಅಲಗನ್+ಉಗುಳ್ದವೊ +ಕಣೆಗಳಲಿ +ಕಣೆ
ತಳಿತವೋ +ತ್ರೈಲೋಕ್ಯ+ಬಾಣಾದ್ವೈತವಾಯ್ತೆಂದ

ಅಚ್ಚರಿ:
(೧) ಜೋಡಿ ಪದಗಳು – ಹಳಹಳಿಕೆ ಹಬ್ಬಿದುದು; ಗಬ್ಬರಿಸಿದುದು ಗಗನದಲಿ; ತಳಿತವೋ ತ್ರೈಲೋಕ್ಯ
(೨) ಬಾಣಗಳು ಹಬ್ಬಿದವು ಎಂದು ಹೇಳಲು – ಬಾಣಾದ್ವೈತ ಪದದ ಬಳಕೆ

ಪದ್ಯ ೫: ಕೌರವ ಸೈನ್ಯದಲ್ಲಿ ಸಂತಸ ಪಸರಿಸಲು ಕಾರಣವೇನು?

ತಳಿತು ಮುತ್ತುವ ಮುಗಿಲ ಝಾಡಿಸಿ
ಝಳಪಿಸುವ ರವಿಯಂತೆ ಭುವನವ
ಬೆಳಗಲುದ್ರೇಕಿಸುವ ಭರ್ಗನ ಭಾಳಶಿಖಿಯಂತೆ
ಹೊಳೆಹೊಳೆವ ಕರ್ಣ ಪ್ರತಾಪಾ
ನಳನ ನಾಟ್ಯವ ಕಂಡು ಕೌರವ
ಬಲದೊಳೊಸಗೆಯ ಲಗ್ಗೆ ಮಸಗಿತು ಭೂಪ ಕೇಳೆಂದ (ಕರ್ಣ ಪರ್ವ, ೨೧ ಸಂಧಿ, ೫ ಪದ್ಯ)

ತಾತ್ಪರ್ಯ:
ಮರೆ ಮಾಡಲು ಬಂದ ಮೋಡಗಳನ್ನು ಸರಸಿ ಹೊಳೆಯುವ ಸೂರ್ಯನಂತೆ ಲೋಕವನ್ನು ಬೆಳಗುವ ಶಿವನ ಹಣೆಗಣ್ಣಿನ ಅಗ್ನಿಯಂತೆ ಹೊಳೆ ಹೊಳೆಯುವ ಕರ್ಣನ ಪ್ರತಾಪದ ಅಗ್ನಿಯ ನೃತ್ಯವನ್ನು ಕಂಡು ಕೌರವಸೈನ್ಯದಲ್ಲಿ ಸಂತಸವು ಪಸರಿಸಿತು ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ತಳಿತ: ಚಿಗುರಿದ; ಮುತ್ತು: ಆವರಿಸು; ಮುಗಿಲು: ಆಗಸ; ಝಾಡಿಸು: ಹೊಡೆ; ಝಳಪಿಸು: ಹೊಳೆವ; ರವಿ: ಭಾನು; ಭುವನ: ಭೂಮಿ; ಬೆಳಗು: ಹಗಲು, ಹೊಳೆ; ಉದ್ರೇಕ: ಉದ್ವೇಗ, ಆವೇಗ; ಭರ್ಗ: ಶಿವ, ಈಶ್ವರ; ಭಾಳ: ಹಣೆ; ಶಿಖಿ: ಬೆಂಕು; ಹೊಳೆ: ಕಾಂತಿ; ಪ್ರತಾಪ: ಪರಾಕ್ರಮ; ಆನಳ:ಬೆಂಕಿ; ನಾಟ್ಯ: ನೃತ್ಯ; ಕಂಡು: ನೋಡಿ; ಬಲ: ಸೈನ್ಯ; ಒಸಗೆ: ಕಾಣಿಕೆ, ಉಡುಗೊರೆ; ಲಗ್ಗೆ: ಮುತ್ತಿಗೆ, ಆಕ್ರಮಣ; ಮಸಗು: ಹರಡು, ಕೆರಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತಳಿತು +ಮುತ್ತುವ +ಮುಗಿಲ +ಝಾಡಿಸಿ
ಝಳಪಿಸುವ +ರವಿಯಂತೆ +ಭುವನವ
ಬೆಳಗಲ್+ಉದ್ರೇಕಿಸುವ +ಭರ್ಗನ +ಭಾಳ+ಶಿಖಿಯಂತೆ
ಹೊಳೆಹೊಳೆವ+ ಕರ್ಣ+ ಪ್ರತಾಪಾ
ನಳನ ನಾಟ್ಯವ ಕಂಡು ಕೌರವ
ಬಲದೊಳೊಸಗೆಯ ಲಗ್ಗೆ ಮಸಗಿತು ಭೂಪ ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಳಿತು ಮುತ್ತುವ ಮುಗಿಲ ಝಾಡಿಸಿ ಝಳಪಿಸುವ ರವಿಯಂತೆ; ಭುವನವ ಬೆಳಗಲುದ್ರೇಕಿಸುವ ಭರ್ಗನ ಭಾಳಶಿಖಿಯಂತೆ
(೨) ಪ್ರತಾಪಾನಳ ನಾಟ್ಯ – ಪರಾಕ್ರಮದ ಅಗ್ನಿಯ ನಾಟ್ಯ – ಪದಪ್ರಯೋಗ
(೩) ಝಾಡಿಸಿ ಝಳಪಿಸುವ – ಝ ಕಾರದ ಜೋಡಿ ಪದಗಳು
(೪) ಭ ಕಾರದ ಸಾಲು ಪದಗಳು – ಭುವನವ ಬೆಳಗಲುದ್ರೇಕಿಸುವ ಭರ್ಗನ ಭಾಳಶಿಖಿಯಂತೆ