ಪದ್ಯ ೫೩: ಮೂರು ಲೋಕದಲ್ಲಿ ಏನು ಕಂಡವು?

ಝಳಪಿಸಿದುದೆರಡಂಕದಲಿ ನಿ
ಷ್ಕಲಿತ ತೇಜಃಪುಂಜವಿಬ್ಬರ
ಹಳಹಳಿಕೆ ಹಬ್ಬಿದುದು ಗಬ್ಬರಿಸಿದುದು ಗಗನದಲಿ
ಹಿಳುಕನೀದವೊ ಹಿಳುಕು ಮೊನೆಯಲ
ಗಲಗನುಗುಳ್ದವೊ ಕಣೆಗಳಲಿ ಕಣೆ
ತಳಿತವೋ ತ್ರೈಲೋಕ್ಯಬಾಣಾದ್ವೈತವಾಯ್ತೆಂದ (ಕರ್ಣ ಪರ್ವ, ೨೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಇಬ್ಬರ ಪ್ರಭೆಯೊ ಎರಡು ಪಕ್ಷಗಳಲ್ಲೂ ರಂಜಿಸಿತು. ಇಬ್ಬರ ರಭಸವೂ ಆಕಾಶದಲ್ಲಿ ಹಬ್ಬಿತು. ಬಾಣಗಳು ಬಾಣಗಳನ್ನೀದವೋ, ಬಾಣದ ಮೊನೆಗಳು ಬಾಣಗಳನ್ನುಗುಳಿದವೋ ಅಥವಾ ಬಾಣಗಳಲ್ಲಿ ಬಾಣಗಳು ಚಿಗುರಿದವೋ ತಿಳಿಯದು. ಮೂರು ಲೋಕಗಳಲ್ಲೂ ಬಾಣಗಳೇ ಕಂಡವು ಇನ್ನೇನೂ ಕಾಣಲಿಲ್ಲ.

ಅರ್ಥ:
ಝಳಪಿಸು: ಶೋಭಿಸು, ಪ್ರಕಾಶಿಸು; ಅಂಕ: ಯುದ್ಧ, ವಿಭಾಗ; ನಿಷ್ಕಲಿತ: ಜಾರಿಹೋಗುವ; ತೇಜ: ಕಾಂತಿ; ಪ್ರಕಾಶ; ಹಳಹಳಿಕೆ: ಕಾಂತಿ, ತೇಜಸ್ಸು; ಹಬ್ಬು: ಹರಡು; ಗಬ್ಬರಿಸು: ತೋಡು, ಬಗಿ, ಆವರಿಸು; ಗಗನ: ಆಗಸ; ಹಿಳುಕು: ಬಾಣದ ಹಿಂಭಾಗ, ಬಾಣದ ಗರಿ; ಮೊನೆ: ತುದಿ; ಅಲಗು: ಮೊನೆ, ಹರಿತವಾದ ಬಾಯಿ; ಉಗುಳು: ಹೊರಹಾಕು; ಕಣೆ: ಬಾಣ; ತಳಿತ: ಹೊಡೆ; ತ್ರೈಲೋಕ: ಮೂರು ಲೋಕ; ದ್ವೈತ: ಜೊತೆ;

ಪದವಿಂಗಡಣೆ:
ಝಳಪಿಸಿದುದ್+ಎರಡ್+ಅಂಕದಲಿ+ ನಿ
ಷ್ಕಲಿತ+ ತೇಜಃ+ಪುಂಜವ್+ಇಬ್ಬರ
ಹಳಹಳಿಕೆ+ ಹಬ್ಬಿದುದು +ಗಬ್ಬರಿಸಿದುದು +ಗಗನದಲಿ
ಹಿಳುಕನೀದವೊ+ ಹಿಳುಕು+ ಮೊನೆಯಲಗ್
ಅಲಗನ್+ಉಗುಳ್ದವೊ +ಕಣೆಗಳಲಿ +ಕಣೆ
ತಳಿತವೋ +ತ್ರೈಲೋಕ್ಯ+ಬಾಣಾದ್ವೈತವಾಯ್ತೆಂದ

ಅಚ್ಚರಿ:
(೧) ಜೋಡಿ ಪದಗಳು – ಹಳಹಳಿಕೆ ಹಬ್ಬಿದುದು; ಗಬ್ಬರಿಸಿದುದು ಗಗನದಲಿ; ತಳಿತವೋ ತ್ರೈಲೋಕ್ಯ
(೨) ಬಾಣಗಳು ಹಬ್ಬಿದವು ಎಂದು ಹೇಳಲು – ಬಾಣಾದ್ವೈತ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ