ಪದ್ಯ ೨೫: ಸೂತನು ಮಗುವನ್ನು ಯಾರಿಗೆ ಕೊಟ್ಟನು?

ತೃಣವಲಾ ತ್ರೈಲೋಕ್ಯ ರಾಜ್ಯವ
ಗಣಿಸುವೆನೆ ತಾನಿನ್ನು ತನ್ನಲಿ
ಋಣವಿಶೇಷವಿದೇನೊ ಮೇಣ್ ಈ ಬಾಲಕಂಗೆನುತ
ಕ್ಷಣದೊಳೊದಗುವ ಬಾಷ್ಪಲುಳಿತೇ
ಕ್ಷಣನು ಬಂದನು ಮನೆಗೆ ಪರುಷದ
ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ (ಆದಿ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅವನು ಕಣ್ಣಿನಲ್ಲಿ ಆನಂದಾಶ್ರುಗಳನ್ನು ತುಂಬಿಕೊಂದು, ನನಗೂ ಈ ಬಾಲಕನಿಗೂ ಯಾವ ವಿಶೇಷವಾದ ಋಣಾನುಬಂಧವಿದ್ದೀತು. ಈಗ ಮೂರು ಲೋಕಗಳ ರಾಜಪದವಿಯು ದೊರೆತರೂ ಅದನ್ನು ಹುಲ್ಲುಕಡ್ದಿಯೆಮ್ದು ಬಗೆಯುತ್ತೇನೆಂದು ಯೋಚಿಸುತ್ತಾ ಸ್ಪರ್ಶಮಣಿಯಂತಿದ್ದ ಆ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿ ತನ್ನ ಹೆಂಡತಿಗೆ ಕೊಟ್ಟನು.

ಅರ್ಥ:
ತೃಣ: ಹುಲ್ಲು; ತ್ರೈಲೋಕ: ಮೂರು ಲೋಕ; ರಾಜ್ಯ: ರಾಷ್ಟ್ರ; ಋಣ: ಹಂಗು; ವಿಶೇಷ: ಪ್ರತ್ಯೇಕವಾದುದು; ಮೇಣ್; ಅಥವ; ಬಾಲಕ: ಹುಡುಗ; ಕ್ಷಣ: ಸಮಯ; ಒದಗು: ಲಭ್ಯ, ದೊರೆತುದು; ಬಾಷ್ಪ: ಕಣ್ಣೀರು; ಲುಳಿ: ರಭಸ; ಮನೆ: ಆಲಯ; ಪರುಷ: ಸ್ಪರ್ಶಮಣಿ; ರಮಣಿ: ಹೆಂಡತಿ, ಚೆಲುವೆ; ಕೊಳ್ಳು: ತೆಗೆದುಕೋ; ಅರ್ಭಕ: ಶಿಶು, ಸಣ್ಣ ಹುಡುಗ

ಪದವಿಂಗಡಣೆ:
ತೃಣವಲಾ +ತ್ರೈಲೋಕ್ಯ +ರಾಜ್ಯವ
ಗಣಿಸುವೆನೆ +ತಾನಿನ್ನು+ ತನ್ನಲಿ
ಋಣ+ವಿಶೇಷವಿದೇನೊ +ಮೇಣ್ +ಈ +ಬಾಲಕಂಗೆನುತ
ಕ್ಷಣದೊಳ್+ಒದಗುವ +ಬಾಷ್ಪಲುಳಿತೇ
ಕ್ಷಣನು+ ಬಂದನು +ಮನೆಗೆ +ಪರುಷದ
ಕಣಿಯ +ತಂದೆನು +ರಮಣಿ +ಕೊಳ್ಳೆಂದ್+ಇತ್ತನ್+ಅರ್ಭಕನ

ಅಚ್ಚರಿ:
(೧) ಮಗನನ್ನು ಪಡೆದ ಸಂತೋಷವನ್ನು ಹೋಲಿಸುವ ಪರಿ – ತೃಣವಲಾ ತ್ರೈಲೋಕ್ಯ ರಾಜ್ಯವಗಣಿಸುವೆನೆ
(೨) ಕ್ಷಣ ಪದದ ಬಳಕೆ – ಕ್ಷಣದೊಳೊದಗುವ ಬಾಷ್ಪಲುಳಿತೇಕ್ಷಣನು

ಪದ್ಯ ೪೨: ಕೌರವ ಸೈನ್ಯವು ಏಕೆ ನಡುಗಿತು?

ಏನಿದೆತ್ತಣ ರಭಸ ತ್ರೈಲೋ
ಕ್ಯಾನುಕಂಪನವಾಯ್ತು ಶಿವ ಎನು
ತಾ ನರೇಂದ್ರನಿಕಾಯ ನಡುಗಿತು ಕೌರವೇಶ್ವರನ
ಸೇನೆ ತಲೆಕೆಳಕಾಯ್ತು ಪಾರ್ಥನ
ಸೂನುವಿನ ಮರಣದಲಿ ಮಂತ್ರ
ಧ್ಯಾನ ನಮಗಾಯ್ತೆಂದು ತಲ್ಲಣಿಸಿತ್ತು ನೃಪಕಟಕ (ದ್ರೋಣ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕೌರವ ಪಕ್ಷದ ರಾಜರು ಮೂರು ಲೋಕಗಳು ನಡುಗುವಂತಹ ಈ ಭಯಂಕರವಾದ ಸದ್ದು ಎಲ್ಲಿಂದ ಬಂತು ಶಿವಶಿವಾ ಎಂದು ರಾಜರ ಗುಂಪು ಬೆದರಿದರು. ಕೌರವ ಸೇನೆಯು ತಲೆಕೆಳಗಾಯಿತು, ಹೆಚ್ಚಿನ ಭಯದಿಂದ ನಡುಗಿತು. ಅಭಿಮನ್ಯುವಿನ ಮರಣವು ನಮ್ಮನ್ನು ಮಂತ್ರವನ್ನು ಜಪಿಸುವಂತೆ ಮಾಡಿತು ಎಂದು ಕೌರವಸೈನ್ಯ ತಲ್ಲಣಿಸಿತು.

ಅರ್ಥ:
ಎತ್ತಣ: ಎಲ್ಲಿಗೆ; ರಭಸ: ವೇಗ; ತ್ರೈಲೋಕ: ಮೂರು ಲೋಕ; ಅನುಕಂಪ: ಕನಿಕರ, ಸಹಾನುಭೂತಿ; ಶಿವ: ಶಂಕರ; ನರೇಂದ್ರ: ಇಂದ್ರ; ನಿಕಾಯ: ಗುಂಪು; ನಡುಗು: ಭಯಪಡು, ಕಂಪನ; ಸೇನೆ: ಸೈನ್ಯ; ತಲೆಕೆಳಗೆ: ಉಲ್ಟ, ಮೇಲೆ ಕೆಳಗೆ; ಸೂನು: ಮಗ; ಮರಣ: ಸಾವು; ಮಂತ್ರ: ದೇವತಾ ಸ್ತುತಿ; ಧ್ಯಾನ: ಚಿಂತನೆ, ಮನನ; ತಲ್ಲಣ: ಅಂಜಿಕೆ, ಭಯ; ನೃಪ: ರಾಜ; ಕಟಕ: ಸೈನ್ಯ;

ಪದವಿಂಗಡಣೆ:
ಏನಿದೆತ್ತಣ +ರಭಸ +ತ್ರೈಲೋಕ್ಯ
ಅನುಕಂಪನವಾಯ್ತು +ಶಿವ+ ಎನುತ್
ಆ+ ನರೇಂದ್ರನಿಕಾಯ +ನಡುಗಿತು +ಕೌರವೇಶ್ವರನ
ಸೇನೆ +ತಲೆಕೆಳಕಾಯ್ತು +ಪಾರ್ಥನ
ಸೂನುವಿನ +ಮರಣದಲಿ +ಮಂತ್ರ
ಧ್ಯಾನ +ನಮಗಾಯ್ತೆಂದು +ತಲ್ಲಣಿಸಿತ್ತು +ನೃಪ+ಕಟಕ

ಅಚ್ಚರಿ:
(೧) ಪಾರ್ಥನ ಪ್ರಮಾಣದ ಪರಿಣಾಮ – ನರೇಂದ್ರನಿಕಾಯ ನಡುಗಿತು ಕೌರವೇಶ್ವರನ ಸೇನೆ ತಲೆಕೆಳಕಾಯ್ತು

ಪದ್ಯ ೨೦: ಭೀಷ್ಮರನ್ನು ಯುಧಿಷ್ಠಿರ ಹೇಗೆ ಹೊಗಳಿದನು?

ಎಮಗೆ ಜಯವೆಂತಹುದು ರಾಜ್ಯ
ಭ್ರಮೆಯ ರಾಜಸಬುದ್ಧಿಗಳು ವಿ
ಕ್ರಮವಿಹೀನರು ನಾವು ನೀವ್ ತ್ರೈಲೋಕ್ಯವಿಜಯಿಗಳು
ಸಮರ ಸೋತುದು ನಮ್ಮ ಸುಭಟರು
ಯಮನ ಸೇವಕರಾಯ್ತು ಕೃಪೆಯಿಂ
ದೆಮಗೆ ನಿಮ್ಮಭಿಮತವ ಬೆಸಸುವುದೆಂದನಾ ಭೂಪ (ಭೀಷ್ಮ ಪರ್ವ, ೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನ ಮಾತನ್ನು ಮುಂದುವರೆಸುತ್ತಾ, ನಾವು ಹೇಗೆ ಹೆದ್ದೆವು? ರಾಜ್ಯ ಭ್ರಮೆ ಹಿಡಿದ ರಾಜಸ ಬುದ್ಧಿ ನಮಗಿದೆ. ನಮ್ಮಲ್ಲಿ ವಿಕ್ರಮವಿಲ್ಲ, ನೀವು ಮೂರು ಲೋಕಗಳನ್ನು ಗೆದ್ದವರು, ನಮ್ಮ ಸೇವಕರು ಯಮನ ಸೇವಕರಾದರು, ಯುದ್ಧದಲ್ಲಿ ಸೋತು ಹೋದೆವು, ನಿಮ್ಮ ಮನಸ್ಸಿನ ಸಂಕಲ್ಪವೇನು ಎಂಬುದನ್ನು ಅಪ್ಪಣೆ ನೀಡಿ ಎಂದು ಭೀಷ್ಮರಲ್ಲಿ ತಿಳಿಸಿದನು.

ಅರ್ಥ:
ಜಯ: ಗೆಲುವು; ಭ್ರಮೆ: ಭ್ರಾಂತಿ, ಹುಚ್ಚು; ರಾಜಸ: ಕಾಮ ಕ್ರೋಧಗಳಿಂದ ಕೂಡಿದ ಗುಣ, ರಜೋಗುಣ; ಬುದ್ಧಿ: ತಿಳಿವು; ವಿಕ್ರಮ: ಶೂರ, ಸಾಹಸ; ವಿಹೀನ: ತ್ಯಜಿಸಿದ, ಬಿಟ್ಟ; ತ್ರೈಲೋಕ: ಮೂರು ಲೋಕ; ವಿಜಯ: ಗೆಲುವು; ಸಮರ: ಯುದ್ಧ; ಸೋತು: ಪರಾಭವ; ಸುಭಟ: ಸೈನಿಕ; ಯಮ: ಕಾಲ; ಸೇವಕ: ದಾಸ; ಕೃಪೆ: ದಯೆ; ಅಭಿಮತ: ಅಭಿಪ್ರಾಯ; ಬೆಸಸು: ಹೇಳು, ಆಜ್ಞಾಪಿಸು; ಭೂಪ: ರಾಜ;

ಪದವಿಂಗಡಣೆ:
ಎಮಗೆ +ಜಯವೆಂತಹುದು +ರಾಜ್ಯ
ಭ್ರಮೆಯ +ರಾಜಸ+ಬುದ್ಧಿಗಳು +ವಿ
ಕ್ರಮ+ವಿಹೀನರು +ನಾವು +ನೀವ್ +ತ್ರೈಲೋಕ್ಯವಿಜಯಿಗಳು
ಸಮರ +ಸೋತುದು +ನಮ್ಮ +ಸುಭಟರು
ಯಮನ +ಸೇವಕರಾಯ್ತು +ಕೃಪೆಯಿಂದ್
ಎಮಗೆ +ನಿಮ್ಮ್+ಅಭಿಮತವ +ಬೆಸಸುವುದ್+ಎಂದನಾ +ಭೂಪ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ನಮ್ಮ ಸುಭಟರು ಯಮನ ಸೇವಕರಾಯ್ತು

ಪದ್ಯ ೫೩: ಮೂರು ಲೋಕದಲ್ಲಿ ಏನು ಕಂಡವು?

ಝಳಪಿಸಿದುದೆರಡಂಕದಲಿ ನಿ
ಷ್ಕಲಿತ ತೇಜಃಪುಂಜವಿಬ್ಬರ
ಹಳಹಳಿಕೆ ಹಬ್ಬಿದುದು ಗಬ್ಬರಿಸಿದುದು ಗಗನದಲಿ
ಹಿಳುಕನೀದವೊ ಹಿಳುಕು ಮೊನೆಯಲ
ಗಲಗನುಗುಳ್ದವೊ ಕಣೆಗಳಲಿ ಕಣೆ
ತಳಿತವೋ ತ್ರೈಲೋಕ್ಯಬಾಣಾದ್ವೈತವಾಯ್ತೆಂದ (ಕರ್ಣ ಪರ್ವ, ೨೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಇಬ್ಬರ ಪ್ರಭೆಯೊ ಎರಡು ಪಕ್ಷಗಳಲ್ಲೂ ರಂಜಿಸಿತು. ಇಬ್ಬರ ರಭಸವೂ ಆಕಾಶದಲ್ಲಿ ಹಬ್ಬಿತು. ಬಾಣಗಳು ಬಾಣಗಳನ್ನೀದವೋ, ಬಾಣದ ಮೊನೆಗಳು ಬಾಣಗಳನ್ನುಗುಳಿದವೋ ಅಥವಾ ಬಾಣಗಳಲ್ಲಿ ಬಾಣಗಳು ಚಿಗುರಿದವೋ ತಿಳಿಯದು. ಮೂರು ಲೋಕಗಳಲ್ಲೂ ಬಾಣಗಳೇ ಕಂಡವು ಇನ್ನೇನೂ ಕಾಣಲಿಲ್ಲ.

ಅರ್ಥ:
ಝಳಪಿಸು: ಶೋಭಿಸು, ಪ್ರಕಾಶಿಸು; ಅಂಕ: ಯುದ್ಧ, ವಿಭಾಗ; ನಿಷ್ಕಲಿತ: ಜಾರಿಹೋಗುವ; ತೇಜ: ಕಾಂತಿ; ಪ್ರಕಾಶ; ಹಳಹಳಿಕೆ: ಕಾಂತಿ, ತೇಜಸ್ಸು; ಹಬ್ಬು: ಹರಡು; ಗಬ್ಬರಿಸು: ತೋಡು, ಬಗಿ, ಆವರಿಸು; ಗಗನ: ಆಗಸ; ಹಿಳುಕು: ಬಾಣದ ಹಿಂಭಾಗ, ಬಾಣದ ಗರಿ; ಮೊನೆ: ತುದಿ; ಅಲಗು: ಮೊನೆ, ಹರಿತವಾದ ಬಾಯಿ; ಉಗುಳು: ಹೊರಹಾಕು; ಕಣೆ: ಬಾಣ; ತಳಿತ: ಹೊಡೆ; ತ್ರೈಲೋಕ: ಮೂರು ಲೋಕ; ದ್ವೈತ: ಜೊತೆ;

ಪದವಿಂಗಡಣೆ:
ಝಳಪಿಸಿದುದ್+ಎರಡ್+ಅಂಕದಲಿ+ ನಿ
ಷ್ಕಲಿತ+ ತೇಜಃ+ಪುಂಜವ್+ಇಬ್ಬರ
ಹಳಹಳಿಕೆ+ ಹಬ್ಬಿದುದು +ಗಬ್ಬರಿಸಿದುದು +ಗಗನದಲಿ
ಹಿಳುಕನೀದವೊ+ ಹಿಳುಕು+ ಮೊನೆಯಲಗ್
ಅಲಗನ್+ಉಗುಳ್ದವೊ +ಕಣೆಗಳಲಿ +ಕಣೆ
ತಳಿತವೋ +ತ್ರೈಲೋಕ್ಯ+ಬಾಣಾದ್ವೈತವಾಯ್ತೆಂದ

ಅಚ್ಚರಿ:
(೧) ಜೋಡಿ ಪದಗಳು – ಹಳಹಳಿಕೆ ಹಬ್ಬಿದುದು; ಗಬ್ಬರಿಸಿದುದು ಗಗನದಲಿ; ತಳಿತವೋ ತ್ರೈಲೋಕ್ಯ
(೨) ಬಾಣಗಳು ಹಬ್ಬಿದವು ಎಂದು ಹೇಳಲು – ಬಾಣಾದ್ವೈತ ಪದದ ಬಳಕೆ