ಪದ್ಯ ೨೦: ದ್ರೋಣನು ಯಾರನ್ನು ಯುದ್ಧಕ್ಕೆ ಕರೆದನು?

ತಳಿತ ಸತ್ತಿಗೆಗಳ ಪತಾಕಾ
ವಳಿಯ ಪಡಪಿನ ಬಿರುದಿನುಬ್ಬಟೆ
ಗಾಳ ವಿಡಾಯಿಯ ಸಿಂಧ ಸೆಳೆ ಸೀಗುರಿಯ ಸುಳಿವುಗಳ
ಕಳಕಳಿಕೆ ಕಡುಹೇರಿ ತಳ ಪಟ
ದೊಳಗೆ ತಲೆದೋರಿದರು ಫಡಫಡ
ಫಲುಗುಣನ ಬರಹೇಳೆನುತ ದ್ರೋಣಾದಿ ನಾಯಕರು (ಭೀಷ್ಮ ಪರ್ವ, ೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಥಗಳ ಮೇಲೆ ಪತಾಕೆಗಳು ಬಿರುದಾವಳಿಗಳು ಕಂಡವು. ಚಾಮರಗಳು ಬೀಸಿದವು. ಸದ್ದು ಹೆಚ್ಚಾಗಲು ದ್ರೋಣನೇ ಮೊದಲಾದ ನಾಯಕರು ರಣರಂಗಕ್ಕೆ ಬಂದು ಅರ್ಜುನನನ್ನು ಕರೆ ಎಂದು ಗರ್ಜಿಸಿದನು.

ಅರ್ಥ:
ತಳಿತ: ಚಿಗುರಿದ; ಸತ್ತಿಗೆ: ಕೊಡೆ, ಛತ್ರಿ; ಪತಾಕೆ: ಬಾವುಟ; ಆವಳಿ: ಸಾಲು; ಪಡಪು: ಪಡೆದುದು; ಬಿರುದು: ಗೌರವ ಸೂಚಕದ ಹೆಸರು; ಉಬ್ಬಟೆ: ಅತಿಶಯ, ಹಿರಿಮೆ; ವಿಡಾಯ: ತೋರಿಕೆ; ಆಧಿಕ್ಯ, ಶಕ್ತಿ; ಸಿಂಧ: ಒಂದು ಬಗೆ ಪತಾಕೆ, ಬಾವುಟ; ಸೆಳೆ: ಎಳೆತ, ಸೆಳೆತ; ಸೀಗುರಿ: ಚಾಮರ, ಚವರಿ; ಸುಳಿವು: ಗುರುತು, ಕುರುಹು; ಕಳಕಳಿ: ಉತ್ಸಾಹ; ಕಡುಹು: ಪರಾಕ್ರಮ; ತಳ: ನೆಲ, ಭೂಮಿ; ತಳಪಟ: ಅಂಗಾತವಾಗಿ ಬೀಳು; ಸೋಲು; ತಲೆ: ಶಿರ; ತೋರು: ಗೋಚರ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು, ಪದ; ಬರಹೇಳು: ಕರೆ; ನಾಯಕ: ಒಡೆಯ;

ಪದವಿಂಗಡಣೆ:
ತಳಿತ +ಸತ್ತಿಗೆಗಳ +ಪತಾಕಾ
ವಳಿಯ+ ಪಡಪಿನ +ಬಿರುದಿನ್+ಉಬ್ಬಟೆ
ಗಾಳ +ವಿಡಾಯಿಯ +ಸಿಂಧ +ಸೆಳೆ +ಸೀಗುರಿಯ +ಸುಳಿವುಗಳ
ಕಳಕಳಿಕೆ +ಕಡುಹೇರಿ+ ತಳಪಟ
ದೊಳಗೆ +ತಲೆದೋರಿದರು +ಫಡಫಡ
ಫಲುಗುಣನ +ಬರಹೇಳೆನುತ+ ದ್ರೋಣಾದಿ +ನಾಯಕರು

ಅಚ್ಚರಿ:
(೧) ಸ ಕಾರದ ಸಾಲು ಪದ – ಸಿಂಧ ಸೆಳೆ ಸೀಗುರಿಯ ಸುಳಿವುಗಳ
(೨) ಫ ಕಾರದ ಪದಗಳ ಬಳಕೆ – ಫಡಫಡ ಫಲುಗುಣನ

ಪದ್ಯ ೧೯: ಚತುರಂಗ ಸೈನ್ಯವೇಕೆ ಕಾರಣದಾಯಿತು?

ಕೊರಳ ತೆತ್ತುದು ಚೂಣಿ ದಳ ಮು
ಖ್ಯರಿಗೆ ಹೇಳಿಕೆಯಾಯ್ತು ಮೋಹರ
ವೆರಡರಲಿ ಮೊನೆಯುಳ್ಳ ನಾಯಕವಾಡಿ ನಲವಿನಲಿ
ಕರಿ ತುರಗ ರಥ ಪಾಯದಳದಲಿ
ಹೊರಳಿ ತಗ್ಗಿತು ರಥದ ಲಗ್ಗೆಯ
ಧರಧುರದ ದೆಖ್ಖಾಳ ಮಿಗೆ ನೂಕಿದರು ಸಂಗರಕೆ (ಭೀಷ್ಮ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮುಂಚೂಣೀಯಲ್ಲಿದ್ದ ಸೈನ್ಯದ ತುಕುಡಿಯ ಸೈನಿಕರು ಮಡಿದರು, ನಾಯಕರು ಬರಬೇಕೆಂದು ಸಾರಿದರು, ಎರಡೂ ದಳಗಳಲ್ಲಿ ನಾಯಕರು ತಮ್ಮ ರಥಗಳಲ್ಲಿ ಯುದ್ಧಕ್ಕೆ ನುಗ್ಗಿದರು. ಚತುರಂಗ ಸೈನ್ಯವು ಕಾಣದಾಯಿತು.

ಅರ್ಥ:
ಕೊರಳು: ಗಂಟಲು; ತೆತ್ತು: ತಿರಿಚು, ಸುತ್ತು; ಚೂಣಿ:ಮುಂದಿನ ಸಾಲು, ಮುಂಭಾಗ; ದಳ: ಸೈನ್ಯ; ಮುಖ್ಯ: ಪ್ರಮುಖ; ಹೇಳು: ತಿಳಿಸು; ಮೋಹರ: ಯುದ್ಧ; ಮೊನೆ: ತುದಿ; ನಾಯಕ: ಒಡೆಯ; ನಲವು: ಸಂತೋಷ; ಕರಿ: ಆನೆ; ತುರಗ: ಅಶ್ವ; ರಥ: ಬಂಡಿ; ಪಾಯದಳ: ಸೈನಿಕ; ಹೊರಳು: ತಿರುವು, ಬಾಗು; ತಗ್ಗು: ಬಾಗು; ರಥ: ಬಂಡಿ; ಲಗ್ಗೆ: ಮುತ್ತಿಗೆ, ಆಕ್ರಮಣ; ಧರಧುರ: ಆಧಿಕ್ಯ, ಅತಿಶಯ; ದೆಖ್ಖಾಳ: ಗೊಂದಲ, ಗಲಭೆ; ಮಿಗೆ: ಅಧಿಕ; ನೂಕು: ತಳ್ಳು; ಸಂಗರ: ಯುದ್ಧ;

ಪದವಿಂಗಡಣೆ:
ಕೊರಳ +ತೆತ್ತುದು +ಚೂಣಿ +ದಳ +ಮು
ಖ್ಯರಿಗೆ +ಹೇಳಿಕೆಯಾಯ್ತು +ಮೋಹರವ್
ಎರಡರಲಿ +ಮೊನೆಯುಳ್ಳ +ನಾಯಕವಾಡಿ +ನಲವಿನಲಿ
ಕರಿ +ತುರಗ +ರಥ +ಪಾಯದಳದಲಿ
ಹೊರಳಿ +ತಗ್ಗಿತು +ರಥದ +ಲಗ್ಗೆಯ
ಧರಧುರದ +ದೆಖ್ಖಾಳ +ಮಿಗೆ +ನೂಕಿದರು +ಸಂಗರಕೆ

ಅಚ್ಚರಿ:
(೧) ನಾಯಕ, ದಳಮುಖ್ಯ – ಸಾಮ್ಯಾರ್ಥ ಪದ
(೨) ಚತುರಂಗ ಸೈನ್ಯವನ್ನು ಹೇಳುವ ಪರಿ – ಕರಿ ತುರಗ ರಥ ಪಾಯದಳದಲಿ ಹೊರಳಿ ತಗ್ಗಿತು

ಪದ್ಯ ೧೮: ರಣರಂಗವು ಏಕೆ ಭಯಾನಕವಾಗಿತ್ತು?

ಕಡಿದು ಚಿಮ್ಮಿದ ಬೆರಳುಗಳ ಹಿ
ಮ್ಮಡಿಯ ಘಾಯದ ನಾಳ ಹರಿದರೆ
ಮಡಿದ ಗೋಣಿನ ಬೆಸುಗೆ ಬಿರಿದ ಕಪಾಲದೋಡುಗಳ
ಉಡಿದ ತೊಡೆಗಳ ಹರಿದ ಹೊಟ್ಟೆಯ
ಹೊಡೆ ಮರಳಿದಾಲಿಗಳ ತೋಳಿನ
ಕಡಿಕುಗಳ ರಣಮಹಿ ಭಯಾನಕ ರಸಕೆ ಗುರಿಯಾಯ್ತು (ಭೀಷ್ಮ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕಡಿದು ಚಿಮ್ಮಿದ ಬೆರಳುಗಳು, ಹಿಮ್ಮಡಿ ಕತ್ತರಿಸಿ ಹರಿದ ರಕ್ತ ನಾಳಗಳು, ತಲೆಗಳಿಗೆ ಹೊಡೆತ ಬಿದ್ದಾಗ ಕತ್ತರಿಸಿದ ಕಪಾಲ, ಹರಿದ ಹೊಟ್ಟೆ, ಮುರಿದ ತೊಡೆ ಹಿಂದಕ್ಕೆ ನೆಟ್ಟ ಕಣ್ಣುಗಳಿಂದ ರಣರಂಗವು ಭಯಾನಕವಾಗಿ ತೋರಿತು.

ಅರ್ಥ:
ಕಡಿ: ಕತ್ತರಿಸು; ಚಿಮ್ಮು: ಹೊರಹೊಮ್ಮು; ಬೆರಳು: ಅಂಗುಲಿ; ಹಿಮ್ಮಡಿ: ಕಾಲಿನ ಹಿಂಭಾಗ; ಘಾಯ: ಪೆಟ್ಟು; ನಾಳ: ದೇಹದೊಳಗಿರುವ ರಕ್ತನಾಳ; ಹರಿ: ಸೀಳು; ಮಡಿ: ಸತ್ತ; ಗೋಣು:ಕಂಠ, ಕುತ್ತಿಗೆ; ಬೆಸುಗೆ: ಪ್ರೀತಿ; ಬಿರಿ: ಸೀಳು; ಕಪಾಲ: ಕೆನ್ನೆ; ಓಡು: ತಲೆಬುರುಡೆ; ಉಡಿ: ಸೊಂಟ; ತೊಡೆ: ಊರು; ಹರಿ: ಸೀಳು, ಕಡಿ, ಕತ್ತರಿಸು; ಹೊಟ್ಟೆ; ಉದರ; ಹೊಡೆ: ಏಟುಕೊಡು, ಪೆಟ್ಟುಹಾಕು; ಮರಳು:ಹಿಂದಕ್ಕೆ ಬರು, ಹಿಂತಿರುಗು; ಆಲಿ: ಕಣ್ಣು; ತೋಳು: ಬಾಹು; ಕಡಿಕು: ತುಂಡು; ರಣ: ರಣರಂಗ; ಮಹಿ: ಭೂಮಿ; ಭಯಾನಕ: ಭಯಂಕರ, ಘೋರ; ರಸ: ದ್ರವ, ಲಾಲಾ; ಗುರಿ: ಉದ್ದೇಶ;

ಪದವಿಂಗಡಣೆ:
ಕಡಿದು +ಚಿಮ್ಮಿದ +ಬೆರಳುಗಳ +ಹಿ
ಮ್ಮಡಿಯ +ಘಾಯದ +ನಾಳ +ಹರಿದರೆ
ಮಡಿದ+ ಗೋಣಿನ+ ಬೆಸುಗೆ +ಬಿರಿದ +ಕಪಾಲದ್+ಓಡುಗಳ
ಉಡಿದ +ತೊಡೆಗಳ +ಹರಿದ +ಹೊಟ್ಟೆಯ
ಹೊಡೆ +ಮರಳಿದ್+ಆಲಿಗಳ +ತೋಳಿನ
ಕಡಿಕುಗಳ +ರಣಮಹಿ +ಭಯಾನಕ +ರಸಕೆ+ ಗುರಿಯಾಯ್ತು

ಅಚ್ಚರಿ:
(೧) ಕಡಿ, ಹಿಮ್ಮಡಿ, ಮಡಿ, ಉಡಿ – ಪ್ರಾಸ ಪದಗಳು
(೨) ಹ ಕಾರದ ತ್ರಿವಳಿ ಪದ – ಹರಿದ ಹೊಟ್ಟೆಯ ಹೊಡೆ

ಪದ್ಯ ೧೭: ಚತುರಂಗ ಸೈನ್ಯದ ಸಾವೇಕೆ ಕೌತುಕವನ್ನು ತೋರಿತು?

ಪಿರಿದು ಮೊನೆಗುತ್ತಿನಲಿ ನೆತ್ತರು
ಸುರಿದುದಡಹೊಯ್ಲಿನಲಿ ಖಂಡದ
ಹೊರಳಿ ತುಳಿತುದು ಕಾಯವಜಿಗಿಜಿಯಾಯ್ತು ಲೌಡಿಯಲಿ
ಸರಳ ಚೌಧಾರೆಯಲಿ ಹಾಯ್ದವು
ಕರುಳು ಕಬ್ಬುನ ಕೋಲಿನಲಿ ಕ
ತ್ತರಿಸಿದವು ಕಾಲುಗಳು ಕೌತುಕವಾಯ್ತು ಚತುರಂಗ (ಭೀಷ್ಮ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಇರಿದಾಗ ನೆತ್ತರು ಚಿಮ್ಮಿ ಹಿರಿಯಿತು. ಪಕ್ಕದಿಂದ ಬೀಸಿದಾಗ ಮಾಂಸಖಂಡ ಹೊರಬಂತು. ಲೌಡಿಯ ಹೊಡೆತಕ್ಕೆ ದೇಹವು ಗಿಜಿಗಿಜಿಯಾಯ್ತು, ನಾಲ್ಕೂ ಕಡೆಯಿಂದ ಬಂದು ನಾಟಿದ ಬಾಣಗಳು ಕರುಳುಗಳನ್ನು ಹೊರ ತಂದವು. ಕಾಲುಗಳು ಕತ್ತರಿಸಿದವು. ಹೀಗೆ ಚತುರಂಗ ಸೈನ್ಯದ ಸಾವು ಕೌತುಕವನ್ನು ತಂದಿತು.

ಅರ್ಥ:
ಪಿರಿ: ದೊಡ್ಡ; ಮೊನೆ: ತುದಿ, ಚೂಪು; ಕುತ್ತು: ಚುಚ್ಚು, ತಿವಿ; ನೆತ್ತರು: ರಕ್ತ; ಸುರಿ: ಮೇಲಿನಿಂದ ಬೀಳು, ವರ್ಷಿಸು; ಹೊಯ್ಲು: ಏಟು, ಹೊಡೆತ; ಖಂಡ: ತುಂಡು, ಚೂರು; ಹೊರಳು: ತಿರುವು, ಬಾಗು; ತುಳಿ: ಮೆಟ್ಟುವಿಕೆ, ತುಳಿತ; ಕಾಯ: ದೇಹ; ಗಿಜಿಗಿಜಿ: ಅಸಹ್ಯ ಬರುವಂತೆ ಅಂಟಾಗಿರುವುದು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಸರಳ: ಬಾಣ; ಚೌಧಾರೆ: ನಾಲ್ಕು ಕಡೆಯ ಪ್ರವಾಹ; ಹಾಯ್ದು: ಹೊಡೆ; ಕರುಳು: ಪಚನಾಂಗ; ಕಬ್ಬು: ಇಕ್ಷುದಂಡ; ಕೋಲು: ಬಾಣ; ಕತ್ತರಿಸು: ಚೂರುಮಾಡು; ಕಾಲು: ಪಾದ; ಕೌತುಕ: ಆಶ್ಚರ್ಯ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಅಡವೊಯ್ಲು: ಅಡ್ಡ ಹೊಡೆತ;

ಪದವಿಂಗಡಣೆ:
ಪಿರಿದು +ಮೊನೆ+ಕುತ್ತಿನಲಿ +ನೆತ್ತರು
ಸುರಿದುದ್+ಅಡಹೊಯ್ಲಿನಲಿ +ಖಂಡದ
ಹೊರಳಿ +ತುಳಿತುದು +ಕಾಯವಜಿಗಿಜಿಯಾಯ್ತು +ಲೌಡಿಯಲಿ
ಸರಳ+ ಚೌಧಾರೆಯಲಿ+ ಹಾಯ್ದವು
ಕರುಳು +ಕಬ್ಬುನ +ಕೋಲಿನಲಿ+ ಕ
ತ್ತರಿಸಿದವು +ಕಾಲುಗಳು +ಕೌತುಕವಾಯ್ತು +ಚತುರಂಗ

ಅಚ್ಚರಿ:
(೧) ಕ ಕಾರದ ಸಾಲು ಪದ – ಕರುಳು ಕಬ್ಬುನ ಕೋಲಿನಲಿ ಕತ್ತರಿಸಿದವು ಕಾಲುಗಳು ಕೌತುಕವಾಯ್ತು

ಪದ್ಯ ೧೬: ಯೋಧರು ಹೇಗೆ ಹೋರಾಡಿದರು?

ಕೋಡಕೈಗಳ ಭಟರಲಗುಯೆಡೆ
ಯಾಡಿದವು ಹೆಗಲಡ್ದವರಿಗೆಯ
ನೀಡಿ ಮೈಮಣಿದೌಕಿ ತಿವಿದಾಡಿದರು ಸಬಳಿಗರು
ಕೂಡೆ ತಲೆವರಿಗೆಗಳಲುರೆ ಕೈ
ಮಾಡಿದರು ಖಡ್ಗಿಗಳು ಥಟ್ಟಿನ
ಜೋಡು ಜರಿಯಲು ಹೊಕ್ಕು ಬೆರಸಿದವಾನೆ ಕುದುರೆಗಳು (ಭೀಷ್ಮ ಪರ್ವ, ೮ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕಪಿಮುಷ್ಟಿಯ ಯೋಧರ ಕೈಗಳಲ್ಲಿ ಶಸ್ತ್ರಗಳ ಪ್ರಯೋಗವಾಯಿತು. ಗುರಾಣಿಯನ್ನು ಅಡ್ಡಹಿಡಿದು ಮೈಬಾಗಿಸಿ ಶತ್ರುಗಳ ಮೇಲೆ ಸಬಳಗಳನ್ನು ಹಿಡಿದು ತಿವಿದಾಡಿದರು. ತಲೆ ಮೇಲೆ ಗುರಾಣಿ ಹಿಡಿದು ಎದುರಾಳಿಗಲ ಮೇಲೆ ಖಡ್ಗ ಪ್ರಯೋಗ ಮಾಡಿದರು. ಆನೆ ಕುದುರೆಗಳು ಸಾಲಾಗಿನಿಂತಿದ್ದ ಜೊತೆಯನ್ನು ಬಿಟ್ಟು ಯುದ್ಧಕ್ಕೆ ಮುಂದುವರಿದವು.

ಅರ್ಥ:
ಕೋಡಕೈ:ಒಂದು ಬಗೆಯ ಆಯುಧ; ಭಟ: ಸೈನಿಕ; ಅಲಗು: ಆಯುಧಗಳ ಹರಿತವಾದ ಅಂಚು, ಖಡ್ಗ; ಹೆಗಲು: ಭುಜ, ಸ್ಕಂದ; ಅಡ್ಡವರಿಗೆ: ಗುರಾಣಿ; ಮೈಮಣಿ: ಬಾಗಿದ ದೇಹ; ಔಕು: ನೂಕು; ತಿವಿ: ಚುಚ್ಚು; ಸಬಳ: ಈಟಿ, ಭರ್ಜಿ; ಕೂಡು: ಜೊತೆ; ತಲೆವರಿಗೆ: ಗುರಾಣಿ; ಕೈಮಾಡು: ಹೋರಾಡು; ಖಡ್ಗ: ಕತ್ತಿ, ಕರವಾಳ; ಥಟ್ಟು: ಗುಂಪು; ಜೋಡು: ಜೊತೆ; ಜರಿ: ಪತನವಾಗು, ಬೀಳು; ಹೊಕ್ಕು: ಸೇರು; ಬೆರಸು: ಸೇರಿಸು; ಆನೆ: ಕರಿ; ಕುದುರೆ: ಅಶ್ವ;

ಪದವಿಂಗಡಣೆ:
ಕೋಡಕೈಗಳ+ ಭಟರ್+ಅಲಗು+ಎಡೆ
ಯಾಡಿದವು +ಹೆಗಲ್+ಅಡ್ದವರಿಗೆಯ
ನೀಡಿ +ಮೈಮಣಿದ್+ಔಕಿ +ತಿವಿದಾಡಿದರು +ಸಬಳಿಗರು
ಕೂಡೆ +ತಲೆವರಿಗೆಗಳಲ್+ಉರೆ +ಕೈ
ಮಾಡಿದರು +ಖಡ್ಗಿಗಳು +ಥಟ್ಟಿನ
ಜೋಡು +ಜರಿಯಲು +ಹೊಕ್ಕು +ಬೆರಸಿದವ್+ಆನೆ +ಕುದುರೆಗಳು

ಅಚ್ಚರಿ:
(೧) ಆಯುಧಗಳ ಹೆಸರು – ಕೋಡುಕೈ, ಸಬಳಿ, ಅಲಗು, ತಲೆವರಿಗೆ, ಖಡ್ಗ

ಪದ್ಯ ೧೫: ಸೈನಿಕರಿಗೆ ಯಾವುದು ಅಡ್ಡಿಯೊಡ್ಡಿತು?

ಚೂಣಿ ತಲೆಯೊತ್ತಿದುದು ಹರಣದ
ವಾಣಿ ಕೇಣಿಯ ಕುಹಕವಿಲ್ಲದೆ
ಗೋಣುಮಾರಿಗಳೋಲಗದ ಹಣರುಣವ ನೀಗಿದರು
ಹೂಣಿಗರು ಹುರಿಬಲಿದು ಹಾಣಾ
ಹಾಣಿಯಲಿ ಹೊಯ್ಯಾಡಿದರು ಘನ
ಶೋಣ ಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ (ಭೀಷ್ಮ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮುಂದಿದ್ದ ಸೈನ್ಯದ ತುಕಡಿಗಳು ತಲೆಗೆ ತಲೆಯೊಡ್ಡಿ ಯಾವ ಮಿತಿಯೂ ಇಲ್ಲದ ರಭಸದಿಂದ ತಮ್ಮ ಕತ್ತುಗಳನ್ನು ಮಾರಿ ಒಡೆಯನ ಋಣವನ್ನು ಕಳೆದುಕೊಂಡರು. ಶಪಥ ಮಾಡಿ ಯುದ್ಧಕ್ಕಿಳಿದರು, ಹುರಿಯ ಮೂರು ಭಾಗಗಳು ಹೊಂದಿದಂತೆ ಯುದ್ಧದಲ್ಲಿ ಶತ್ರುಗಳೊಡನೆ ಹಾಣಾಹಾಣಿ ಕಾಳಗವನ್ನು ಮಾಡಿದರು. ಆ ಸಮರದಲ್ಲಿ ಹರಿದ ರಕ್ತ ಪ್ರವಾಹವು ಯುದ್ಧಕ್ಕೆ ಬರುವವರಿಗೆ ಅಡ್ಡಿಯಾಯಿತು.

ಅರ್ಥ:
ಚೂಣಿ: ಮುಂದಿನ ಸಾಲು, ಮುಂಭಾಗ; ತಲೆ: ಶಿರ; ಒತ್ತು: ಆಕ್ರಮಿಸು, ಮುತ್ತು, ಒತ್ತಡ; ಹರಣ: ಜೀವ, ಪ್ರಾಣ, ಅಪಹರಿಸು; ವಾಣಿ: ಮಾತು; ಕೇಣಿ: ಗುತ್ತಿಗೆ, ಗೇಣಿ; ಕುಹಕ: ಮೋಸ, ವಂಚನೆ; ಗೋಣು: ಕಂಠ, ಕುತ್ತಿಗೆ; ಮಾರಿ:ಅಳಿವು, ನಾಶ, ಮೃತ್ಯು; ಓಲಗ: ಅಗ್ರಪೂಜೆಗಾಗಿ ಕೂಡಿದ, ಸೇವೆ; ಉಣು: ತಿನ್ನು; ನೀಗು:ನಿವಾರಿಸಿಕೊಳ್ಳು; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಹುರಿ: ಕಾಯಿಸು, ತಪ್ತಗೊಳಿಸು; ಬಲಿ: ಗಟ್ಟಿ, ದೃಢ; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಘನ:ಶ್ರೇಷ್ಠ; ಶೋಣ:ಕೆಂಪು ಬಣ್ಣ; ಸಲಿಲ: ನೀರು; ಶೋಣ ಸಲಿಲ: ರಕ್ತ; ಹೊನಲು: ತೊರೆ, ಹೊಳೆ; ಹೊಯ್ದು: ಹೊಡೆದು; ಹೊಗು: ಪ್ರವೇಶಿಸು; ಬವರಿ: ತಿರುಗುವುದು;

ಪದವಿಂಗಡಣೆ:
ಚೂಣಿ +ತಲೆ+ಒತ್ತಿದುದು +ಹರಣದ
ವಾಣಿ +ಕೇಣಿಯ +ಕುಹಕವಿಲ್ಲದೆ
ಗೋಣು+ಮಾರಿಗಳ್+ಓಲಗದ +ಹಣರ್+ಉಣವ +ನೀಗಿದರು
ಹೂಣಿಗರು+ ಹುರಿಬಲಿದು +ಹಾಣಾ
ಹಾಣಿಯಲಿ +ಹೊಯ್ಯಾಡಿದರು +ಘನ
ಶೋಣ +ಸಲಿಲದ +ಹೊನಲು +ಹೊಯ್ದುದು +ಹೊಗುವ +ಬವರಿಗರ

ಅಚ್ಚರಿ:
(೧) ಯುದ್ಧದ ಘೋರತೆಯ ದೃಶ್ಯ, ರಕ್ತವು ನದಿಯಾಗಿ ಹರಿಯಿತು ಎಂದ್ ಹೇಳುವ ಪರಿ – ಘನ
ಶೋಣ ಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ
(೨) ಹ ಕಾರದ ಸಾಲು ಪದಗಳು – ಹೂಣಿಗರು ಹುರಿಬಲಿದು ಹಾಣಾಹಾಣಿಯಲಿ ಹೊಯ್ಯಾಡಿದರು; ಹೊನಲು ಹೊಯ್ದುದು ಹೊಗುವ ಬವರಿಗರ

ಪದ್ಯ ೧೪: ಸೈನ್ಯದವರು ಯಾವ ರಚನೆಯಲ್ಲಿ ನಿಂತರು?

ವಿತತ ವಾಜಿವ್ರಜದ ಘನಹೇ
ಷಿತದ ಘಲ್ಲಣೆ ಗಜದಳದ ಬೃಂ
ಹಿತದ ಬಹಳಿಕೆ ರಥಚಯವ ಚೀತ್ಕೃತಿಯ ಚಪ್ಪರಣೆ
ನುತ ಪದಾತಿಯ ಗರ್ಜನೆ ಸಮು
ದ್ಧತ ಧನುಷ್ಠಂಕಾರ ರೌದ್ರಾ
ಯತ ಛಡಾಳಿಸಲೊಡ್ಡಿದರು ಮಂಡಳಿಸಿ ಮೋಹರವ (ಭೀಷ್ಮ ಪರ್ವ, ೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕುದುರೆಗಳ ಹೇಷಾರವ, ಆನೆಗಳ ಬೃಂಹಿತ, ರಥಗಳು ಚಲಿಸುವಾಗ ಕೇಳುವ ಈತ್ಕಾರ, ಕುದುರೆಗಳನ್ನು ಚಪ್ಪರಿಸುವ ಸದ್ದು ಕಾಲಾಳುಗಳ ಗರ್ಜನೆ ಧನುಷ್ಠಂಕಾರದ ಭಯಮ್ಕರ ಸದ್ದು, ಇವುಗಳೊಡನೆ ಸೈನ್ಯಗಳನ್ನು ವ್ಯೂಹಾಕಾರವಾಗಿ ನಿಲ್ಲಿಸಿದರು.

ಅರ್ಥ:
ವಿತ: ಹರಡಿಕೊಂಡಿರುವ; ವಾಜಿ: ಕುದುರೆ; ವ್ರಜ: ಗುಂಪು; ಘನ: ಶ್ರೇಷ್ಠ; ಹೇಷ: ಕುದುರೆಗಳ ಕೂಗು; ಘಲ್ಲಣೆ: ಘಲ್ ಎಂಬ ಶಬ್ದ; ಗಜ: ಆನೆ; ದಳ: ಸೈನ್ಯ; ಬೃಂಹಿತ: ಆನೆಯ ಕೂಗು; ಬಹಳತೆ: ವಿಶೇಷತೆ; ರಥ: ಬಂಡಿ; ಚಯ: ಗುಂಪು; ಚೀತ್ಕೃತಿ: ಚೀತ್ಕಾರ; ಚಪ್ಪರಣೆ: ಗದರಿಸುವಿಕೆ; ನುತ: ಸ್ತುತಿಸಲ್ಪಡುವ; ಪದಾತಿ: ಸೈನಿಕ; ಗರ್ಜನೆ: ಕೂಗು; ಸಮುದ್ಧತ: ವಿಶೇಷವಾದ ಅಹಂಕಾರದಿಂದ ಕೂಡಿದ; ರೌದ್ರ: ಭಯಂಕರ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಒಡ್ಡು: ರಾಶಿ, ಸಮೂಹ; ಮಂಡಳಿಸು: ನಾಡಿನ ಒಂದು ಭಾಗ; ಮೋಹರ: ಯುದ್ಧ;

ಪದವಿಂಗಡಣೆ:
ವಿತತ +ವಾಜಿ+ವ್ರಜದ +ಘನ+ಹೇ
ಷಿತದ +ಘಲ್ಲಣೆ +ಗಜದಳದ+ ಬೃಂ
ಹಿತದ +ಬಹಳಿಕೆ +ರಥ+ಚಯವ +ಚೀತ್ಕೃತಿಯ +ಚಪ್ಪರಣೆ
ನುತ +ಪದಾತಿಯ +ಗರ್ಜನೆ +ಸಮು
ದ್ಧತ +ಧನುಷ್ಠಂಕಾರ+ ರೌದ್ರಾ
ಯತ +ಛಡಾಳಿಸಲ್+ಒಡ್ಡಿದರು +ಮಂಡಳಿಸಿ +ಮೋಹರವ

ಅಚ್ಚರಿ:
(೧) ಹೇಷ, ಬೃಂಹಿತ, ಚೀತ್ಕೃತಿ, ಗರ್ಜನೆ, ಧನುಷ್ಠಂಕಾರ – ಶಬ್ದಗಳನ್ನು ವಿವರಿಸುವ ಪದ

ಪದ್ಯ ೧೩: ಭೀಷ್ಮನು ಯಾರೊಡನೆ ಯುದ್ಧಕ್ಕೆ ಬಂದನು?

ಹೊಗರೊಗುವ ಝಳಪಿಸುವಡಾಯುಧ
ನೆಗಹಿ ತೂಗುವ ಲೌಡಿಗಳ ಮೊನೆ
ಝಗಝಗಿಸಿ ಝಾಡಿಸುವ ಸಬಳದ ತಿರುಹುವಂಕುಶದ
ಬಿಗಿದುಗಿವ ಬಿಲ್ಲುಗಳ ಬೆರಳೊಳ
ಗೊಗೆವ ಕೂರಂಬುಗಳ ಸುಭಟಾ
ಳಿಗಳೊಡನೆ ಗಾಂಗೇಯ ಹೊಕ್ಕನು ಕಾಳೆಗದ ಕಳನ (ಭೀಷ್ಮ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಝಳಪಿಸುವ ಕತ್ತಿಗಳ ಕಾಂತಿ, ಮೇಲೆತ್ತಿ ತೂಗುವ ಲೌಡಿಗಳು, ಝಾಡಿಸುವ ಸಬಳಗಳ ಹೊಳಪು, ತಿರುವುತ್ತಿದ್ದ ಅಂಕುಶಗಳು ಹೆದೆಯೇರಿಸಿದ ಬಿಲ್ಲು, ಕೈಯಲ್ಲಿ ಹಿಡಿದ ಕೂರಂಬುಗಳು ಇವನ್ನು ಧರಿಸಿದ ಸುಭಟರೊಡನೆ ಭೀಷ್ಮನು ಕಾಳಗದ ಕಣವನ್ನು ಹೊಕ್ಕನು.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಝಳ; ಪ್ರಕಾಶ, ಕಾಂತಿ; ಆಯುಧ: ಶಸ್ತ್ರ; ನೆಗಹು: ಮೇಲೆತ್ತು; ತೂಗು: ಅಲ್ಲಾಡಿಸು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ, ದೊಣ್ಣೆಯಂತಹ ಸಾಧನ; ಮೊನೆ: ಚೂಪು, ತುದಿ; ಝಗಿಸು: ಕಾಂತಿಯುಕ್ತವಾಗಿ ಹೊಳೆ; ಝಾಡಿ: ಕಾಂತಿ; ಸಬಳ: ಈಟಿ, ಭರ್ಜಿ; ತಿರುಹು: ತಿರುಗಿಸು; ಅಂಕುಶ: ಹಿಡಿತ, ಹತೋಟಿ; ಬಿಗಿ: ಕಟ್ಟು, ಬಂಧಿಸು; ಬಿಲ್ಲು: ಚಾಪ; ಬೆರಳು: ಅಂಗುಲಿ; ಒಗೆ: ಎಸೆ, ಹೊಡೆ; ಕೂರಂಬು: ಹರಿತವಾದ ಬಾಣ; ಸುಭಟ: ಸೈನಿಕ; ಆಳಿ: ಗುಂಪು; ಗಾಂಗೇಯ: ಭೀಷ್ಮ; ಹೊಕ್ಕು: ಸೇರು; ಕಾಳೆಗ: ಯುದ್ಧ; ಕಳ: ರಣರಂಗ;

ಪದವಿಂಗಡಣೆ:
ಹೊಗರೊಗುವ +ಝಳಪಿಸುವಡ್+ಆಯುಧ
ನೆಗಹಿ+ ತೂಗುವ +ಲೌಡಿಗಳ +ಮೊನೆ
ಝಗಝಗಿಸಿ +ಝಾಡಿಸುವ +ಸಬಳದ +ತಿರುಹುವ್+ಅಂಕುಶದ
ಬಿಗಿದುಗಿವ+ ಬಿಲ್ಲುಗಳ+ ಬೆರಳೊಳಗ್
ಒಗೆವ +ಕೂರಂಬುಗಳ +ಸುಭಟಾ
ಳಿಗಳೊಡನೆ +ಗಾಂಗೇಯ +ಹೊಕ್ಕನು +ಕಾಳೆಗದ+ ಕಳನ

ಅಚ್ಚರಿ:
(೧) ಹೊಗರು, ಝಳ, ಝಗ, ಝಾಡಿ – ಸಾಮ್ಯಾರ್ಥ ಪದಗಳು

ಪದ್ಯ ೧೨: ಸೇನೆಯು ಯುದ್ಧರಂಗಕ್ಕೆ ಹೇಗೆ ಬಂದು ನಿಂತಿತು?

ಭುವನಗರ್ಭಿತವಾದುದಾ ಮಾ
ಧವನ ಜಠರದವೋಲು ವರ ಭಾ
ಗವತನಂತಿರೆ ವಿಷ್ಣುಪದ ಸಂಸಕ್ತ ತನುವಾಯ್ತು
ರವಿಯವೊಲು ಶತಪತ್ರ ಸಂಘಾ
ತವನು ಪಾದದಲಣೆದು ಕೆಂಧೂ
ಳವಗಡಿಸೆ ಕುರುಸೇನೆ ಕೈಕೊಂಡುದು ರಣಾಂಗಣವ (ಭೀಷ್ಮ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ವಿಷ್ಣುವು ಭೂಮಿಯನ್ನು ತನ್ನ ಜಠರದಲ್ಲಿ ತಾಳುವಂತೆ ಸೈನ್ಯವು ರಣರಂಗದ ಸುತ್ತ ನಿಂತು ಆ ಭೂಮಿಯನ್ನು ತನ್ನೊಳಗೆ ತಾಳಿತು. ಭಾಗವತನು ವಿಷ್ಣುವಿನ ಪಾದಗಳಿಗೆ ತನ್ನ ಶರೀರವನ್ನು ಸೇರಿಸಿದಂತೆ, ಸೈನ್ಯದ ಧ್ವಜಾದಿಗಳು ವಿಷ್ಣು ಪದಕ್ಕೆ ಅಂಟಿಕೊಂಡವು. ಸೂರ್ಯನಂತೆ ಕಮಲ ಪುಷ್ಪಗಳನ್ನು ತಟ್ಟಿ ಕೆಂಧೂಳೆಬ್ಬಿಸುತ್ತಾ ಕೌರವ ಸೈನ್ಯವು ಯುದ್ಧರಂಗಕ್ಕೆ ಬಂದು ನಿಂತಿತು.

ಅರ್ಥ:
ಭುವನ: ಜಗತ್ತು; ಗರ್ಭ:ಹೊಟ್ಟೆ; ಮಾಧವ: ವಿಷ್ಣು; ಜಠರ: ಹೊಟ್ಟೆ; ವರ: ಶ್ರೇಷ್ಠ; ಭಾಗವತ: ಹರಿಭಕ್ತ; ಪದ: ಚರಣ; ಸಂಸಕ್ತ: ಮಗ್ನವಾದ; ತನು: ದೇಹ; ರವಿ: ಸೂರ್ಯ; ಶತಪತ್ರ: ತಾವರೆ; ಸಂಘಾತ: ಗುಂಪು; ಪಾದ: ಚರಣ; ಅಣೆ:ಹೊಡೆ, ಆವರಿಸು; ಕೆಂಧೂಳ: ಕೆಂಪಾದ ಧೂಳು; ಅವಗಡಿಸು: ಕಡೆಗಣಿಸು, ಸೋಲಿಸು; ರಣಾಂಗಣ: ಯುದ್ಧಭೂಮಿ;

ಪದವಿಂಗಡಣೆ:
ಭುವನಗರ್ಭಿತವಾದುದ್+ಆ+ ಮಾ
ಧವನ+ ಜಠರದವೋಲು +ವರ+ ಭಾ
ಗವತನಂತಿರೆ+ ವಿಷ್ಣುಪದ +ಸಂಸಕ್ತ +ತನುವಾಯ್ತು
ರವಿಯವೊಲು +ಶತಪತ್ರ+ ಸಂಘಾ
ತವನು +ಪಾದದಲ್+ಅಣೆದು +ಕೆಂಧೂಳ್
ಅವಗಡಿಸೆ +ಕುರುಸೇನೆ+ ಕೈಕೊಂಡುದು +ರಣಾಂಗಣವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭುವನಗರ್ಭಿತವಾದುದಾ ಮಾಧವನ ಜಠರದವೋಲು; ರವಿಯವೊಲು ಶತಪತ್ರ ಸಂಘಾತವನು ಪಾದದಲಣೆದು ಕೆಂಧೂಳವಗಡಿಸೆ

ಪದ್ಯ ೧೧: ಕೌರವಸೇನೆಯು ಹೇಗೆ ಯುದ್ಧ ಸನ್ನದ್ಧವಾಯಿತು?

ವೀರ ಸೇನಾಪತಿಯ ಸನ್ನೆಗೆ
ಭೂರಿಬಲ ಹಬ್ಬಿದುದು ದಿಕ್ಕುಗ
ಳೋರೆ ಹಿಗ್ಗಿದವಮಮ ತಗ್ಗಿದರಹಿಪ ಕೂರುಮರು
ಚಾರು ಚಾಮರ ಸಿಂಧ ಸತ್ತಿಗೆ
ಯೋರಣದ ಕಲ್ಪಾಂತ ಮೇಘದ
ಭಾರಣೆಯನೊಟ್ಟೈಸಿ ಥಟ್ಟಯಿಸಿತ್ತು ಕುರುಸೇನೆ (ಭೀಷ್ಮ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಷ್ಮನು ಸನ್ನೆ ಮಾಡಿದೊಡನೆ ಸೈನ್ಯವು ದಿಕ್ಕು ದಿಕ್ಕಿಗೆ ಚದುರಿ ನಿಲ್ಲಲು ದಿಕ್ಕಿನ ಮೂಲೆಗಳೇ ಹಿಗ್ಗಿದವು. ಆದಿಶೇಷ ಕೂರ್ಮರು ಕುಸಿದರು. ಚಾಮರ, ಧ್ವಜ, ಛತ್ರಗಳು, ಕಲ್ಪಾಂತ ಮೇಘದಂತೆ ಕಾಣುತ್ತಿದ್ದವು. ಕೌರವ ಸೇನೆಯು ಯುದ್ಧ ಸನ್ನದ್ಧವಾಯಿತು.

ಅರ್ಥ:
ವೀರ: ಶೂರ, ಪರಾಕ್ರಮ; ಸೇನಾಪತಿ: ಸೈನ್ಯದ ಮುಖ್ಯಸ್ಥ; ಸನ್ನೆ: ಗುರುತು, ಚಿಹ್ನೆ; ಭೂರಿ: ಹೆಚ್ಚು; ಬಲ: ಸೈನ್ಯ; ಹಬ್ಬು: ಹರಡು; ದಿಕ್ಕು: ದಿಶೆ; ಓರೆ: ಡೊಂಕು; ಹಿಗ್ಗು: ಸಂತೋಷ, ಆನಂದ; ತಗ್ಗು: ಕುಗ್ಗು, ಕುಸಿ; ಅಹಿಪ: ಆಧಿಶೇಷ; ಕೂರುಮ: ಕೂರ್ಮ, ಆಮೆ; ಚಾರು: ಸುಂದರ; ಚಾಮರ: ಚಮರ, ಬಾಲದಲ್ಲಿ ಉದ್ದವಾದ ಕೂದಲುಳ್ಳ ಒಂದು ಮೃಗ; ಸಿಂಧ: ಒಂದು ಬಗೆ ಪತಾಕೆ, ಬಾವುಟ; ಸತ್ತಿಗೆ: ಕೊಡೆ, ಛತ್ರಿ; ಓರಣ: ಕ್ರಮ, ಸಾಲು; ಕಲ್ಪಾಂತ: ಪ್ರಳಯ; ಮೇಘ: ಮೋಡ; ಭಾರಣೆ: ಮಹಿಮೆ, ಗೌರವ; ಒಟ್ಟೈಸು: ಒಟ್ಟಾಗಿ ಸೇರಿಸು; ಥಟ್ಟು: ಪಕ್ಕ, ಕಡೆ;

ಪದವಿಂಗಡಣೆ:
ವೀರ +ಸೇನಾಪತಿಯ +ಸನ್ನೆಗೆ
ಭೂರಿಬಲ +ಹಬ್ಬಿದುದು +ದಿಕ್ಕುಗಳ್
ಓರೆ +ಹಿಗ್ಗಿದವ್+ಅಮಮ +ತಗ್ಗಿದರ್+ಅಹಿಪ+ ಕೂರುಮರು
ಚಾರು +ಚಾಮರ +ಸಿಂಧ +ಸತ್ತಿಗೆ
ಓರಣದ +ಕಲ್ಪಾಂತ +ಮೇಘದ
ಭಾರಣೆಯನ್+ಒಟ್ಟೈಸಿ +ಥಟ್ಟಯಿಸಿತ್ತು +ಕುರುಸೇನೆ

ಅಚ್ಚರಿ:
(೧) ಜೋಡಿ ಅಕ್ಷರದ ಬಳಕೆ – ಚಾರು ಚಾಮರ ಸಿಂಧ ಸತ್ತಿಗೆ