ಪದ್ಯ ೪೬: ಉತ್ತರನು ಅರ್ಜುನನ ಚರಣಕ್ಕೆ ಏಕೆ ಎರಗಿದನು?

ಅಹುದು ಬಳಿಕೇನುಳಿದವರಿಗೀ
ಮಹಿಮೆ ತಾನೆಲ್ಲಿಯದು ಕಾಣಲು
ಬಹುದಲಾ ಜೀವಿಸಿದರತಿಶಯವನು ಮಹಾದೇವ
ಗಹನ ಮಾಡದೆ ನುಡಿದ ತಪ್ಪಿನ
ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು ಪದಕೆ (ವಿರಾಟ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಉತ್ತರನು, ಹೌದು ನಿಮಗಲ್ಲದೆ ಉಳಿದವರಿಗೆ ಇಂತಹ ಹಿರಿಮೆ ಎಲ್ಲಿಂದ ಬಂದೀತು? ಶಿವ ಶಿವಾ ನಾನು ಮೊದಲೇ ಹೇಳಿದಂತೆ, ಬದುಕಿದ್ದರೆ ಎಂತಹ ಆಶ್ಚರ್ಯವನ್ನಾದರೂ ನೋಡಬಹುದು, ನಿನ್ನೊಡನೆ ನಾನು ವರ್ತಿಸಿದ ರೀತಿ ಆಡಿದ ಮಾತುಗಳ ತಪ್ಪುಗಳನ್ನೇ ಭಾವಿಸದೆ, ನನ್ನನ್ನು ಕುಹಕಿಯೆನ್ನದೆ ಕಾಪಾಡು ಎಂದು ನಮಸ್ಕರಿಸಿದನು.

ಅರ್ಥ:
ಬಳಿಕ: ನಂತರ; ಉಳಿದ: ಮಿಕ್ಕ; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಕಾಣು: ತೋರು; ಜೀವಿಸು: ಬಾಳು; ಅತಿಶಯ: ಹೆಚ್ಚು; ಗಹನ: ದಟ್ಟವಾದ, ನಿಬಿಡವಾದ; ನುಡಿ: ಮಾತಾಡು; ತಪ್ಪು: ಸರಿಯಲ್ಲದ; ಬಹಳ: ಅಧಿಕ, ಹೆಚ್ಚು; ಭಾವಿಸು: ತಿಳಿ; ಕುಹಕ: ಮೋಸ, ವಂಚನೆ; ಕಾಯ: ರಕ್ಷಿಸು; ಎರಗು: ನಮಸ್ಕರಿಸು, ಬಾಗು; ಪದ: ಪಾದ, ಚರಣ;

ಪದವಿಂಗಡಣೆ:
ಅಹುದು +ಬಳಿಕೇನ್+ಉಳಿದವರಿಗ್+ಈ
ಮಹಿಮೆ +ತಾನೆಲ್ಲಿಯದು +ಕಾಣಲು
ಬಹುದಲಾ +ಜೀವಿಸಿದರ್+ಅತಿಶಯವನು +ಮಹಾದೇವ
ಗಹನ+ ಮಾಡದೆ +ನುಡಿದ +ತಪ್ಪಿನ
ಬಹಳತೆಯ +ಭಾವಿಸದೆ +ತನ್ನನು
ಕುಹಕಿಯೆನ್ನದೆ+ ಕಾಯಬೇಕೆಂದ್+ಎರಗಿದನು +ಪದಕೆ

ಅಚ್ಚರಿ:
(೧) ಉತ್ತರನು ತನ್ನನ್ನು ಕ್ಷಮಿಸು ಎಂದು ಹೇಳುವ ಪರಿ – ನುಡಿದ ತಪ್ಪಿನ ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು

ಪದ್ಯ ೪೫: ಅರ್ಜುನನು ಪಾಂಡವರನ್ನು ಉತ್ತರನಿಗೆ ಹೇಗೆ ಪರಿಚಯಿಸಿದನು?

ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸಿನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ (ವಿರಾಟ ಪರ್ವ, ೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ಕೇಳು ಉತ್ತರಕುಮಾರ, ನಾನೇ ಅರ್ಜುನ, ವಲಲನಾಗಿ ಬಾಣಸಿಯಾದವನು ಭೀಮ, ಕಂಕನು ಧರ್ಮಜನು, ಗೋಕುಲವನ್ನು ರಕ್ಷಿಸಿದವನು ಸಹದೇವ, ಕುದುರೆಗಳನ್ನು ಕಾಯುತ್ತಿದ್ದವನು ಸಹದೇವ, ನಮ್ಮ ಪತ್ನಿಯಾದ ದ್ರೌಪದಿ ಸೈರಂಧ್ರಿಯಾಗಿ ದಾಸಿಯಾಗಿದ್ದವಳು ಎಂದು ಪರಿಚಯಿಸಿದನು.

ಅರ್ಥ:
ಬಾಣಸಿ: ಅಡಗೆಯವ; ವರ: ಶ್ರೇಷ್ಠ; ಯತಿ: ಸಂನ್ಯಾಸಿ; ಗೋಕುಲ: ಗೋಸಮೂಹ; ಕಾದವ: ರಕ್ಷಿಸು; ವಿಳಾಸಿನಿ: ಸ್ತ್ರೀ, ದಾಸಿ; ರಾಣಿ: ಅರಸಿ; ರಾವುತ: ಅಶ್ವ;

ಪದವಿಂಗಡಣೆ:
ಆದೊಡ್+ಆನ್+ಅರ್ಜುನನು +ಬಾಣಸಿ
ಯಾದ +ವಲಲನು +ಭೀಮ +ವರ+ಯತಿ
ಯಾದ +ಕಂಕನು+ ಧರ್ಮಪುತ್ರನು +ನಿಮ್ಮ+ ಗೋಕುಲವ
ಕಾದವನು +ಸಹದೇವ +ರಾವುತ
ನಾದವನು +ನಕುಲನು +ವಿಳಾಸಿನಿ
ಯಾದವಳು+ ಸೈರಂಧ್ರಿ +ರಾಣೀವಾಸವ್+ಎಮಗೆಂದ

ಅಚ್ಚರಿ:
(೧) ಕಾದವನು, ಆದವನು – ಪ್ರಾಸ ಪದಗಳು

ಪದ್ಯ ೪೪: ಉತ್ತರನು ಸಾರಥಿಯನ್ನು ಯಾರೆಂದು ಊಹಿಸಿದನು?

ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡಕು
ಮಾರರಾಯುಧತತಿಯ ನೀನೆಂತರಿವೆ ಹೇಳೆಂದ (ವಿರಾಟ ಪರ್ವ, ೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲೈ ಸಾರಥಿ ನೀನಾದರು ಯಾರು? ಅರ್ಜುನನೋ, ನಕುಲನೋ, ವಾಯುಪುತ್ರನಾದ ಭೀಮನೋ, ವೀರ ಯುಧಿಷ್ಠಿರನೋ, ಸಹದೇವನೋ ಅಥವ ಅವರ ಬಾಂಧವನೋ, ಎಲೈ ಶೂರ,ನಾನು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ತಿಳಿಸು, ಈ ಪಾಂಡವರ ಆಯುಧಗಳೆಲ್ಲವೂ ನಿನಗೆ ಹೇಗೆ ತಿಳಿದಿದೆ ಎಂದು ಕೇಳಿದನು.

ಅರ್ಥ:
ವೀರ: ಶೂರ; ಸುತ: ಮಗ; ಮಾರುತ: ವಾಯು; ಮೇಣ್: ಅಥವ; ಬಾಂಧವ: ಸಂಬಂಹಿಕ; ಧೀರ: ಶೂರ; ಹೇಳು: ತಿಳಿಸು; ಬೇಡು: ಯಾಚಿಸು; ಕಾರಣ: ನಿಮಿತ್ತ, ಹೇತು; ವಿಸ್ತರಿಸು: ವಿವರಣೆ; ಕುಮಾರ: ಮಕ್ಕಳು; ಆಯುಧ: ಶಸ್ತ್ರ; ತತಿ: ಗುಂಪು; ಅರಿ: ತಿಳಿ; ಹೇಳು: ತಿಳಿಸು;

ಪದವಿಂಗಡಣೆ:
ಆರು+ ನೀನ್+ಅರ್ಜುನನೊ +ನಕುಲನೊ
ಮಾರುತನ +ಸುತನೋ +ಯುಧಿಷ್ಠಿರ
ವೀರನೋ +ಸಹದೇವನೋ +ಮೇಣ್+ಅವರ +ಬಾಂಧವನೊ
ಧೀರ +ಹೇಳೈ +ಬೇಡಿಕೊಂಬೆನು
ಕಾರಣವ +ವಿಸ್ತರಿಸು +ಪಾಂಡ+ಕು
ಮಾರರ್+ಆಯುಧ+ತತಿಯ+ ನೀನೆಂತರಿವೆ+ ಹೇಳೆಂದ

ಅಚ್ಚರಿ:
(೧) ವೀರ, ಧೀರ; ಸುತ, ಕುಮಾರ – ಸಮನಾರ್ಥಕ ಪದ

ಪದ್ಯ ೪೩: ಉತ್ತರನು ಆಶ್ಚರ್ಯಗೊಂಡು ಏನೆಂದು ಕೇಳಿದನು?

ಅವರವರ ಬತ್ತಳಿಕೆ ಚಾಪವ
ನವರ ಶರವನು ಕಂಬು ಖಡುಗವ
ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ
ವಿವಿಧ ಶಸ್ತ್ರಾಸ್ತ್ರವನು ಫಲುಗುಣ
ವಿವರಿಸಲು ಬೆರಗಾಗಿ ಸಾರಥಿ
ಯಿವನು ತಾನಾರೆಂದು ಮತ್ಸ್ಯನಸೂನು ಬೆಸಗೊಂಡ (ವಿರಾಟ ಪರ್ವ, ೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ಪಾಂಡವರ ಪ್ರತಿಯೊಬ್ಬರ ಬಿಲ್ಲು, ಬಾಣ, ಬತ್ತಳಿಕೆ, ಶಂಖ, ಖಡ್ಗ, ಕವಚ, ಶಿರಸ್ತ್ರಾಣ, ಪಾದರಕ್ಷೆ, ಧ್ವಜ ಮುಂತಾದ ಆಯುಧಗಳ ವಿವರವನ್ನು ಹೇಳಲು, ಉತ್ತರನು ಆಶ್ಚರ್ಯಗೊಂಡು, ಎಲೈ ಸಾರಥಿ ಇವನ್ನೆಲ್ಲಾ ಬಲ್ಲ ನೀನು ಯಾರು ಎಂದು ಕೇಳಿದನು.

ಅರ್ಥ:
ಬತ್ತಳಿಕೆ: ಬಾಣಗಳನ್ನು ಇಡುವ ಸ್ಥಳ; ಚಾಪ: ಬಿಲ್ಲು; ಶರ: ಬಾಣ; ಕಂಬು: ಕಡಗ, ಶಂಖ; ಖಡುಗ: ಕತ್ತಿ, ಕರವಾಳ; ಕವಚ: ಹೊದಿಕೆ, ಉಕ್ಕಿನ ಅಂಗಿ; ಸೀಸಕ: ಶಿರಸ್ತ್ರಾಣ; ಜೋಡು: ಕವಚ, ಪಾದರಕ್ಷೆ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಟೆಕ್ಕೆ: ಧ್ವಜ; ವಿವಿಧ: ಹಲವಾರು; ಶಸ್ತ್ರ: ಆಯುಧ; ವಿವರಿಸು: ಹೇಳು; ಬೆರಗು: ಆಶ್ಚರ್ಯ; ಸಾರಥಿ: ಸೂತ; ಸೂನು: ಮಗ; ಬೆಸ:ಕೇಳುವುದು;

ಪದವಿಂಗಡಣೆ:
ಅವರವರ +ಬತ್ತಳಿಕೆ +ಚಾಪವನ್
ಅವರ +ಶರವನು+ ಕಂಬು +ಖಡುಗವ
ಕವಚ +ಸೀಸಕ+ ಜೋಡುಗಳ +ಬಿರುದುಗಳ +ಟೆಕ್ಕೆಯವ
ವಿವಿಧ +ಶಸ್ತ್ರಾಸ್ತ್ರವನು +ಫಲುಗುಣ
ವಿವರಿಸಲು +ಬೆರಗಾಗಿ +ಸಾರಥಿ
ಇವನು +ತಾನ್+ಆರೆಂದು +ಮತ್ಸ್ಯನ+ಸೂನು ಬೆ+ಸಗೊಂಡ

ಅಚ್ಚರಿ:
(೧) ಆಯುಧಗಳ ಪರಿಚಯ – ಚಾಪ, ಶರ, ಕಂಬು, ಖಡುಗ, ಕವಚ, ಸೀಸಕ, ಟೆಕ್ಕೆ

ಪದ್ಯ ೪೨: ಅರ್ಜುನನು ಆಯುಧಗಳನ್ನು ಹೇಗೆ ಪರಿಚಯಿಸಿದನು?

ಇದು ಕಣಾ ಗಾಂಡೀವವೆಂದೆಂ
ಬುದು ಮಹಾಧನು ಪಾರ್ಥನದು ಬಳಿ
ಕಿದು ಯುಧಿಷ್ಠಿರ ಚಾಪವೀ ಧನು ಭೀಮಸೇನನದು
ಇದು ನಕುಲ ಕೋದಂಡ ಬಿಲು ತಾ
ನಿದುವೆ ಸಹದೇವನದು ಭಾರಿಯ
ಗದೆಯಿದನಿಲಜನದು ಕಿರೀಟಿಯ ಬಾಣವಿವುಯೆಂದ (ವಿರಾಟ ಪರ್ವ, ೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅರ್ಜುನನು ಅಲ್ಲಿದ್ದ ಆಯುಧಗಳನ್ನು ಪರಿಚಯಿಸುತ್ತಾ, ಇದು ಅರ್ಜುನನ ಗಾಂಡೀವವೆಂಬ ಶ್ರೇಷ್ಠವಾದ ಧನುಸ್ಸು, ಇದು ಯುಧಿಷ್ಠಿರನದು, ಈ ಬಿಲ್ಲು ಭೀಮಸೇನನಉ, ಇಲ್ಲಿ ಕಾಣುವ ಬಿಲ್ಲು ನಕುಲನದು, ಮತ್ತು ಈ ಬಿಲ್ಲು ಸಹದೇವನದು, ಈ ಮಹಾಗದೆಯು ಭೀಮನದು ಮತ್ತು ಈ ಬಾಣಗಳು ಅರ್ಜುನವು ಎಂದು ಪರಿಚಯಿಸಿದನು.

ಅರ್ಥ:
ಮಹಾಧನು: ಶ್ರೇಷ್ಠವಾದ ಬಿಲ್ಲು; ಚಾಪ: ಬಿಲ್ಲು; ಕೋಡಂಡ: ಬಿಲ್ಲು; ಭಾರಿ: ದೊಡ್ಡ; ಗದೆ: ಮುದ್ಗರ; ಅನಿಲಜ: ವಾಯುಪುತ್ರ (ಭೀಮ); ಕಿರೀಟಿ: ಅರ್ಜುನ; ಬಾಣ: ಶರ;

ಪದವಿಂಗಡಣೆ:
ಇದು +ಕಣಾ +ಗಾಂಡೀವವೆಂದ್+ಎಂ
ಬುದು +ಮಹಾಧನು +ಪಾರ್ಥನದು +ಬಳಿ
ಕಿದು +ಯುಧಿಷ್ಠಿರ +ಚಾಪವ್+ಈ+ ಧನು +ಭೀಮಸೇನನದು
ಇದು +ನಕುಲ +ಕೋದಂಡ +ಬಿಲು +ತಾ
ನಿದುವೆ +ಸಹದೇವನದು +ಭಾರಿಯ
ಗದೆ+ಯಿದ್+ ಅನಿಲಜನದು +ಕಿರೀಟಿಯ+ ಬಾಣವಿವುಯೆಂದ

ಅಚ್ಚರಿ:
(೧) ಧನು, ಚಾಪ, ಕೋದಂಡ – ಸಮನಾರ್ಥಕ ಪದಗಳು

ಪದ್ಯ ೪೧: ಉತ್ತರನು ಯಾವ ಪ್ರಶ್ನೆಗಳನ್ನು ಕೇಳಿದನು?

ಹೇಳು ಸಾರಥಿ ಬಿಲ್ಲದಾವನ
ತೋಳಿಗಳವದುವುದು ಮಹಾಶರ
ಜಾಲ ಬೆಸರಿದಪವಿದಾರಿಗೆ ಮಿಕ್ಕ ಬಿಲ್ಲುಗಳು
ಕಾಳಗದೊಳಿವನಾರು ತೆಗೆವರು
ಮೇಲುಗೈದುಗಳಾರಿಗಿವು ಕೈ
ಮೇಳವಿಸುವವು ಮನದ ಸಂಶಯ ಹಿಂಗೆ ಹೇಳೆಂದ (ವಿರಾಟ ಪರ್ವ, ೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಉತ್ತರನು ತನ್ನ ಪ್ರಶ್ನೆಗಳನ್ನು ಮುಂದುವರೆಸುತ್ತಾ, ಸಾರಥೀ ಈ ದೊಡ್ಡ ಬಿಲ್ಲು ಯಾರ ತೋಳಿನಲ್ಲಿರುತ್ತದೆ? ಈ ಮಹಾಶರಗಳು ಯಾರ ಅಧೀನದಲ್ಲಿವೆ? ಉಳಿದ ಬಿಲ್ಲುಗಳು ಯಾರವು? ಯುದ್ಧದಲ್ಲಿ ಇವನ್ನಾರು ಉಪಯೋಗಿಸುತ್ತಾರೆ? ಉಳಿದ ಆಯುಧಗಳು ಯಾರವು? ನನ್ನ ಮನಸ್ಸಿನ ಸಂಶಯವನ್ನು ನಿವಾರಿಸು ಎಂದು ಕೇಳಿದನು.

ಅರ್ಥ:
ಹೇಳು: ತಿಳಿಸು; ಸಾರಥಿ: ಸೂತ; ಬಿಲ್ಲು: ಚಾಪ; ತೋಳು: ಬಾಹು; ಅಳವಡು: ಹೊಂದು, ಸೇರು, ಕೂಡು; ಮಹಾಶರ: ದೊಡ್ಡ ಬಾಣ; ಜಾಲ: ಗುಂಪು; ಬೆಸಗೈ: ಅಪ್ಪಣೆಮಾದು; ಮಿಕ್ಕ: ಉಳಿದ; ಕಾಳಗ: ಯುದ್ಧ; ತೆಗೆ:ಹೊರತರು; ಮೇಲು: ಹಿರಿಯ, ದೊಡ್ಡ; ಕೈದು: ಆಯುಧ, ಕತ್ತಿ; ಕೈಮೇಳ: ಕೈಗೆ ಸೇರುವ; ಮನ: ಮನಸ್ಸು; ಸಂಶಯ: ಅನುಮಾನ; ಹಿಂಗು: ತಗ್ಗು; ಹೇಳು: ತಿಳಿಸು;

ಪದವಿಂಗಡಣೆ:
ಹೇಳು +ಸಾರಥಿ+ ಬಿಲ್ಲದ್+ಆವನ
ತೋಳಿಗ್+ಅಳವಡುವುದು +ಮಹಾಶರ
ಜಾಲ +ಬೆಸರಿದಪವಿದಾರಿಗೆ+ ಮಿಕ್ಕ+ ಬಿಲ್ಲುಗಳು
ಕಾಳಗದೊಳ್+ಇವನಾರು +ತೆಗೆವರು
ಮೇಲು+ಕೈದುಗಳ್+ಆರಿಗಿವು+ ಕೈ
ಮೇಳವಿಸುವವು +ಮನದ+ ಸಂಶಯ +ಹಿಂಗೆ+ ಹೇಳೆಂದ

ಅಚ್ಚರಿ:
(೧) ಹೇಳು – ಪದ್ಯದ ಮೊದಲ ಹಾಗು ಕೊನೆ ಪದ

ಪದ್ಯ ೪೦: ಯಾವ ಆಯುಧಗಳನ್ನು ಉತ್ತರನು ಅರ್ಜುನನಿಗೆ ನೀಡಿದನು?

ಗಿರಿಯನೆತ್ತಲುಬಹುದು ಬಿಲುಗಳ
ತೆರಳಿಚುವೊಡಾರೆನು ಬೃಹನ್ನಳೆ
ಧರಿಸಲಾಪೈ ನೀ ಸಮರ್ಥನು ನಿನಗೆ ಶರಣೆನುತ
ಸರಳ ಹೊದೆಗಳ ದೇವ ದತ್ತವ
ಪರಶು ತೋಮರ ಕುಂತವಸಿ ಮು
ದ್ಗರ ಗದಾ ದಂಡಾದಿ ಶಸ್ತ್ರವ ತೆಗೆದು ನೀಡಿದನು (ವಿರಾಟ ಪರ್ವ, ೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಉತ್ತರನು ಬೆಟ್ತವನ್ನೆತ್ತಬಹುದು, ಈ ಬಿಲ್ಲುಗಳನ್ನು ಮಿಸುಕಿಸುವುದು ಅಸಾಧ್ಯ. ಹೀಗಿರಲು, ಬೃಹನ್ನಳೆ ನೀನು ಅನಾಯಾಸವಾಗಿ ಅವನನ್ನು ತೆಗೆದುಕೊಂಡೆ, ನೀನು ಸಮರ್ಥ ಎಂದು ಬಾಣಗಳು ದೇವದತ್ತ ಶಂಖ, ಗಂಡುಗೊಡಲಿ, ಕತ್ತಿ, ಕುಂತ, ಮುದ್ಗರ, ಗದೆ ಮುಂತಾದ ಆಯುಧಗಳನ್ನು ಅರ್ಜುನನಿಗೆ ನೀಡಿದನು.

ಅರ್ಥ:
ಗಿರಿ: ಬೆಟ್ಟ; ಬಿಲು: ಬಿಲ್ಲು, ಚಾಪ; ತೆರಳು: ಹಿಂಜರಿ, ಮುರುಟು; ಧರಿಸು: ಹೊರು; ಸಮರ್ಥ: ಬಲಶಾಲಿ, ಗಟ್ಟಿಗ; ಶರಣು: ನಮಸ್ಕಾರ; ಸರಳ: ಬಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ದತ್ತ: ಲಭ್ಯ, ಕೊಡಲ್ಪಟ್ಟ; ಪರಶು: ಕೊಡಲಿ, ಕುಠಾರ; ತೋಮರ: ಈಟಿಯಂತಿರುವ ಆಯುಧ; ಕುಂತ: ಈಟಿ, ಭರ್ಜಿ; ಮುದ್ಗರ: ಗದೆ; ದಂಡ:ಕೋಲು, ದಡಿ; ಶಸ್ತ್ರ: ಆಯುಧ; ತೆಗೆ: ಹೊರತರು; ಅಸಿ: ಕತ್ತಿ;

ಪದವಿಂಗಡಣೆ:
ಗಿರಿಯನ್+ಎತ್ತಲುಬಹುದು +ಬಿಲುಗಳ
ತೆರಳಿಚುವೊಡಾರೆನು+ ಬೃಹನ್ನಳೆ
ಧರಿಸಲಾಪೈ+ ನೀ +ಸಮರ್ಥನು +ನಿನಗೆ +ಶರಣೆನುತ
ಸರಳ +ಹೊದೆಗಳ +ದೇವದತ್ತವ
ಪರಶು +ತೋಮರ +ಕುಂತವ್+ಅಸಿ+ ಮು
ದ್ಗರ +ಗದಾ +ದಂಡ+ ಆದಿ+ ಶಸ್ತ್ರವ +ತೆಗೆದು +ನೀಡಿದನು

ಅಚ್ಚರಿ:
(೧) ಆಯುಧಗಳ ಹೆಸರು – ಸರಳ, ಪರಶು, ತೋಮರ, ಕುಂತ, ಅಸಿ, ಮುದ್ಗರ, ಗದಾ, ದಂಡ

ಪದ್ಯ ೩೯: ಅರ್ಜುನನಿಗೆ ಉತ್ತರನು ಯಾವ ಧನುಸ್ಸನ್ನು ನೀಡಿದನು?

ಉಲಿದು ಸತ್ವದೊಳೌಕಿ ಕಾಯವ
ಬಲಿದು ತೆಕ್ಕೆಯೊಳೊತ್ತಿ ಬೆವರಿದು
ಬಳಲಿ ನೀಡಿದನರ್ಜುನನ ಕರತಳಕೆ ಗಾಂಡಿವವ
ಬಲುಹಿನಿಂದವಡೊತ್ತಿ ತೆಗೆತೆಗೆ
ದುಳಿದ ಬಿಲುಗಳ ನೀಡಿ ಮರನನು
ಮಲಗಿ ಢಗೆಯಿಂದಳ್ಳೆವೊಯ್ದು ಕುಮಾರನಿಂತೆಂದ (ವಿರಾಟ ಪರ್ವ, ೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಜೋರಾಗಿ ಕೂಗಿ, ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ದೇಹವನ್ನು ಬಿಗಿಹಿಡಿದು ತೆಕ್ಕೆಯಲ್ಲಿ ತೆಗೆದುಕೊಂಡು ಆಯಾಸಗೊಂದು ಅರ್ಜುನನ ಕೈಗೆ ಗಾಂಡೀವ ಧನುಸ್ಸನ್ನು ಕೊಟ್ಟನು. ಅವಡುಗಚ್ಚಿ ಬಲವನ್ನೆಲ್ಲಾ ಬಿಟ್ಟು ಉಳಿದ ಬಿಲ್ಲುಗಳನ್ನೂ ಕೊಟ್ಟು ತಾಪದಿಂದ ಉಸಿರುಸಿರು ಬಿಡುತ್ತಾ ಮರದ ಕೊಂಬೆಯ ಮೇಲೆ ಮಲಗಿ ಉತ್ತರನು ಹೀಗೆಂದು ನುಡಿದನು.

ಅರ್ಥ:
ಉಲಿ: ಧ್ವನಿ; ಸತ್ವ: ಸಾರ; ಔಕು: ಒತ್ತು, ಹಿಚುಕು; ಕಾಯ: ದೇಹ; ಬಲಿ: ಗಟ್ಟಿ, ದೃಢ; ತೆಕ್ಕೆ: ಅಪ್ಪುಗೆ, ಆಲಿಂಗನ; ಬೆವರು: ಸ್ವೇದ ಜಲ; ಬಳಲು: ಆಯಾಸ, ದಣಿವು; ಕರತಳ: ಅಂಗೈ; ಬಲುಹು: ಶಕ್ತಿ; ತೆಗೆ: ಹೊರತರು; ಉಳಿದ: ಮಿಕ್ಕ; ಬಿಲು: ಬಿಲ್ಲು; ನೀಡು: ಕೊಡು; ಮರ: ತರು; ಮಲಗು: ಶಯನ, ನಿದ್ದೆ ಮಾಡು; ಢಗೆ: ತಾಪ; ಕುಮಾರ: ಪುತ್ರ;

ಪದವಿಂಗಡಣೆ:
ಉಲಿದು +ಸತ್ವದೊಳ್+ಔಕಿ +ಕಾಯವ
ಬಲಿದು +ತೆಕ್ಕೆಯೊಳೊತ್ತಿ +ಬೆವರಿದು
ಬಳಲಿ +ನೀಡಿದನ್+ಅರ್ಜುನನ +ಕರತಳಕೆ +ಗಾಂಡಿವವ
ಬಲುಹಿನಿಂದ್+ಅವಡೊತ್ತಿ+ ತೆಗೆತೆಗೆದ್
ಉಳಿದ+ ಬಿಲುಗಳ +ನೀಡಿ +ಮರನನು
ಮಲಗಿ +ಢಗೆಯಿಂದಳ್ಳೆವೊಯ್ದು +ಕುಮಾರನ್+ಇಂತೆಂದ

ಅಚ್ಚರಿ:
(೧) ಉತ್ತರನು ಕಷ್ಟಪಟ್ಟು ಗಾಂಡಿವ ತೆಗೆದ ಪರಿ – ಉಲಿದು ಸತ್ವದೊಳೌಕಿ ಕಾಯವ ಬಲಿದು ತೆಕ್ಕೆಯೊಳೊತ್ತಿ ಬೆವರಿದು ಬಳಲಿ ನೀಡಿದನರ್ಜುನನ ಕರತಳಕೆ ಗಾಂಡಿವವ

ಪದ್ಯ ೩೮: ಅರ್ಜುನನು ಉತ್ತರನಿಗೆ ಹೇಗೆ ಧೈರ್ಯವನ್ನು ನೀಡಿದನು?

ತುಡಕಬಹುದೇ ದೋಷಿ ಹಾವಿನ
ಕೊಡನ ನಿನಗಿವು ಕೈದುಗಳೆ ಬರ
ಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲಂಜುವೆನು
ಬಿಡಿಸು ಸಾರಥಿಯೆನ್ನನೆನೆ ಫಡ
ನಡುಗದಿರು ಫಲುಗುಣನ ನೆನೆ ಕೈ
ದುಡುಕು ಕೈವಶವಹವು ತೆಗೆ ಸಾಕೆಂದನಾ ಪಾರ್ಥ (ವಿರಾಟ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕಳ್ಳತನ ಮಾಡಿದವನು ಹಾವಿನ ಕೊಡದಲ್ಲಿ ಕೈಯಿಡಬಹುದೇ? ಇವು ಖಂಡಿತ ಆಯುಧಗಲಲ್ಲಿ, ಬರಸಿಡಿಲುಗಳನ್ನು ಕಟ್ಟಿ ಹಾಕಿರುವ ದಾವಣಿ. ಕೈಯಿಡಲು ಹೆದರುತ್ತೇನೆ, ಎಂದು ಉತ್ತರನು ಹೇಳಿದನು. ಅರ್ಜುನನು ಉತ್ತರನ ಮಾತನ್ನು ಕೇಳಿ, ಹೆದರಬೇಡ ಅರ್ಜುನನನ್ನು ನೆನೆದು ಕೈಯಿಟ್ಟರೆ ಅವೆಲ್ಲ ವಶವಾಗುತ್ತವೆ ಅವನ್ನು ಕೊಡು ಎಂದನು.

ಅರ್ಥ:
ತುಡುಕು: ತೆಗೆದುಕೊಳ್ಳು; ದೋಷಿ: ಆರೋಪಿ; ಹಾವು: ಉರಗ; ಕೊಡ: ಬಿಂದಿಗೆ; ಕೈ: ಹಸ್ತ; ಕೈದು: ಶಸ್ತ್ರ; ಬರಸಿಡಿಲು: ಅಕಾಲದಲ್ಲಿ ಬೀಳುವ ಸಿಡಿಲು, ಆಘಾತ; ದಾವಣಿ:ಕಟ್ಟು, ಬಂಧನ, ಸಮೂಹ; ಕೈ: ಹಸ್ತ; ಅಂಜು: ಹೆದರು; ಬಿಡಿಸು: ತೊರೆ; ಸಾರಥಿ: ಸೂತ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ನಡುಗು: ಅಲ್ಲಾಡು, ಹೆದರು; ಫಲುಗುಣ: ಅರ್ಜುನ; ನೆನೆ: ಜ್ಞಾಪಿಸಿಕೋ; ದುಡುಕು: ವಿಚಾರಣೆ ಮಾಡದೆ ಮುನ್ನುಗ್ಗು; ವಶ: ಅಧೀನ, ಅಂಕೆ; ತೆಗೆ: ಹೊರತರು; ಸಾಕು: ಇನ್ನು ಬೇಡ;

ಪದವಿಂಗಡಣೆ:
ತುಡಕಬಹುದೇ+ ದೋಷಿ +ಹಾವಿನ
ಕೊಡನ +ನಿನಗ್+ಇವು +ಕೈದುಗಳೆ +ಬರ
ಸಿಡಿಲ +ದಾವಣಿಯಾಗುತಿವೆ +ಕೈಯಿಕ್ಕಲ್+ಅಂಜುವೆನು
ಬಿಡಿಸು +ಸಾರಥಿ +ಎನ್ನನ್+ಎನೆ +ಫಡ
ನಡುಗದಿರು+ ಫಲುಗುಣನ +ನೆನೆ +ಕೈ
ದುಡುಕು +ಕೈವಶವಹವು+ ತೆಗೆ+ ಸಾಕೆಂದನಾ +ಪಾರ್ಥ

ಅಚ್ಚರಿ:
(೧) ಎನ್ನನೆನೆ, ನೆನೆ – ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ತುಡಕಬಹುದೇ ದೋಷಿ ಹಾವಿನ ಕೊಡನ

ಪದ್ಯ ೩೭: ಉತ್ತರನು ಅರ್ಜುನನಿಗೆ ಏನು ಹೇಳಿದ?

ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆ ಶಸ್ತ್ರ ಸೀಮೆಯಲಿ (ವಿರಾಟ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಆಯುಧಗಳ ಅಲಗಿನ ಧಾರೆಗಳ ಕಾಂತಿಯ ಗುಚ್ಚಗಳು ಒಂದು ಕಡೆ ಥಳಥಳಿಸಿದರೆ, ಅದನ್ನು ನೋಡಿ ನಗುವಂತೆ ಬಂಗಾರದ ಹಿಡಿಕೆಗಳ ಕಾಂತಿಯು ಝಗಝಗಿಸಿತು. ಉತ್ತರನು ಕಣ್ಮುಚ್ಚಿ ಅರ್ಜುನನಿಗೆ ಕೈಮುಗಿದು ತಂದೆ ನನ್ನನ್ನು ಇಳಿಸಿಕೊಂಡು ಬಿಡು, ನಾನು ಶಸ್ತ್ರಗಳ ಸೀಮೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದನು.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಹೊರಳಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಧಾರೆ: ಪ್ರವಾಹ; ತಳಪದ: ಕೆಳಗೆ, ಒಂದು ಬದಿ; ಕಾಂತಿ: ಪ್ರಕಾಶ; ಹೊನ್ನು: ಚಿನ್ನ; ಹೊನ್ನಾಯುಗ: ಬಂಗಾರದ ಹಿಡಿಕೆ; ಬಹಳ: ತುಂಬ; ಪ್ರಭೆ: ಕಾಂತಿ; ಶರ: ಬಾಣ; ಶರೌಘ: ಬಾಣಗಳ ಸಮೂಹ; ಶರೌಘಾನಲ: ಬಾಣಗಳ ಸಮೂಹದಿಂದ ಹುಟ್ಟಿದ ಬೆಂಕಿ; ಗಹಗಹಿಸು: ಗಟ್ಟಿಯಾಗಿ ನಗು; ಝಗಝಗಿಸು: ಹೊಳೆ, ಪ್ರಕಾಶಿಸು; ಕಣ್ಣು: ನಯನ; ಮುಚ್ಚು: ಮರೆಮಾಡು, ಹೊದಿಸು; ಕೈ: ಹಸ್ತ; ಕೈಮುಗಿ: ನಮಸ್ಕರಿಸು; ಸಾರಥಿ: ಸೂತ; ತೆಗೆದುಕೊ: ಹೊರತರು; ತಂದೆ: ಅಪ್ಪ, ಅಯ್ಯ; ಸಿಲುಕು: ಬಂಧನಕ್ಕೊಳಗಾದುದು; ಶಸ್ತ್ರ: ಆಯುಧ; ಸೀಮೆ: ಎಲ್ಲೆ, ಗಡಿ;

ಪದವಿಂಗಡಣೆ:
ಹೊಗರ+ ಹೊರಳಿಯ +ಹೊಳೆವ +ಬಾಯ್
ಧಾರೆಗಳ+ತಳಪದ+ ಕಾಂತಿ +ಹೊನ್ನಾ
ಯುಗದ +ಬಹಳ +ಪ್ರಭೆ +ಶರೌಘ+ಅನಲನ +ಗಹಗಹಿಸಿ
ಝಗಝಗಿಸೆ+ ಕಣ್ಮುಚ್ಚಿ +ಕೈಗಳ
ಮುಗಿದು +ಸಾರಥಿಗೆಂದನ್+ಎನ್ನನು
ತೆಗೆದುಕೊಳ್ಳೈ +ತಂದೆ +ಸಿಲುಕಿದೆ +ಶಸ್ತ್ರ +ಸೀಮೆಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಗರ ಹೊರಳಿಯ ಹೊಳೆವ
(೨) ಜೋಡಿ ಪದಗಳು – ಗಹಗಹಿಸಿ, ಝಗಝಗಿಸಿ