ಪದ್ಯ ೪೦: ಚಿತ್ರಸೇನನ ಸೈನ್ಯದವರು ಹೇಗೆ ಮುನ್ನಡೆದರು?

ಅವರು ಮರ್ತ್ಯರು ನಮ್ಮದಕಟಾ
ದಿವಿಜರೀ ವಿಧಿಯಾದುದೇ ಕವಿ
ಕವಿಯೆನುತ ಬೇಹವರಿಗಿತ್ತನು ರಣಕೆ ವೀಳೆಯವ
ಗವಿಯ ಗರುವರು ಗಾಢಿಸಿತು ಮಾ
ನವರ ಮುರುಕಕೆ ಮುರಿದುದೀ ಸುರ
ನಿವಹ ಸುಡಲಾಹವವನೆನುತೈದಿದರು ಸೂಟಿಯಲಿ (ಅರಣ್ಯ ಪರ್ವ, ೧೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅವರು ಮನುಷ್ಯರು, ನಾವು ದೇವತೆಗಳು, ಅಯ್ಯೋ ನಮಗೆ ಈ ದುರ್ಗತಿ ಬಂದಿತೇ! ಎಂದುಕೊಂಡು ತನ್ನ ಆಪ್ತರಿಗೆ ಹೋಗಿ ಶತ್ರುಗಳನ್ನು ಮುತ್ತಿರಿ, ಎಂದು ಚಿತ್ರಸೇನನು ಯುದ್ಧಕ್ಕೆ ವೀಳೆಯವನ್ನು ಕೊಟ್ಟನು. ಚಿತ್ರಸೇನನ ಕಡೆಯವರು, ಈ ಮನುಷ್ಯರ ಉಪಟಳ ಹೆಚ್ಚಿತು, ಮನುಷ್ಯರ ಬಲಕ್ಕೆ ದೇವತೆಗಳು ಸೋಲುವುದೇ? ಇದೆಂತಹ ದುರ್ವಿಧಿ! ಈ ಯುದ್ಧವನ್ನು ಸುಡಲಿ ಎಮ್ದು ವೇಗದಿಂದ ಯುದ್ಧಕ್ಕೆ ಹೊರಟರು.

ಅರ್ಥ:
ಮರ್ತ್ಯರು: ಮನುಷ್ಯ; ಅಕಟ: ಅಯ್ಯೋ; ದಿವಿಜ: ದೇವತೆ; ವಿಧಿ: ನಿಯಮ, ಬ್ರಹ್ಮ; ಕವಿ: ಆವರಿಸು; ಬೇಹು:ಗೂಢಚರ್ಯೆ; ರಣ: ಯುದ್ಧ; ವೀಳೆ: ಆಮಂತ್ರಣ; ಗವಿ: ಆಶ್ರಯಸ್ಥಾನ; ಗರುವ: ಶ್ರೇಷ್ಠ, ಶೂರ; ಗಾಢಿಸು: ತುಂಬು; ಮಾನವ: ಮನುಷ್ಯ; ಮುರುಕ: ಸೊಕ್ಕು, ಗರ್ವ; ಮುರಿ: ಸೀಳು; ಸುರ: ದೇವತೆ; ನಿವಹ: ಗುಂಪು; ಸುಡು: ದಹಿಸು; ಆಹವ: ಯುದ್ಧ; ಐದು: ಬಂದು ಸೇರು; ಸೂಟಿ: ವೇಗ, ರಭಸ;

ಪದವಿಂಗಡಣೆ:
ಅವರು +ಮರ್ತ್ಯರು +ನಮ್ಮದ್+ಅಕಟಾ
ದಿವಿಜರೀ+ ವಿಧಿಯಾದುದೇ +ಕವಿ
ಕವಿ+ಎನುತ +ಬೇಹವರಿಗಿತ್ತನು+ ರಣಕೆ +ವೀಳೆಯವ
ಗವಿಯ +ಗರುವರು +ಗಾಢಿಸಿತು+ ಮಾ
ನವರ+ ಮುರುಕಕೆ +ಮುರಿದುದೀ +ಸುರ
ನಿವಹ+ ಸುಡಲ್+ಆಹವವನ್+ಎನುತ್+ಐದಿದರು +ಸೂಟಿಯಲಿ

ಅಚ್ಚರಿ:
(೧) ತ್ರಿವಳಿ ಪದಗಳು – ಗವಿಯ ಗರುವರು ಗಾಢಿಸಿತು; ಮಾನವರ ಮುರುಕಕೆ ಮುರಿದುದೀ; ಸುರ
ನಿವಹ ಸುಡಲಾಹವವನೆನುತೈದಿದರು ಸೂಟಿಯಲಿ

ಪದ್ಯ ೩೯: ಚಿತ್ರಸೇನಂಗೆ ಕಾವಲುಗಾರರು ಏನು ಹೇಳಿದರು?

ತೋಟ ಹುಡುಹುಡಿಯಾಯ್ತು ಮುರಿದುದು
ತೋಟಿಯಲಿ ನಮ್ಮವರು ಹಗೆಗಳ
ಗಾಟವವರಾಚೆಯಲಿ ದುರ್ಬಲ ನಮ್ಮದೀಚೆಯಲಿ
ಆಟವಿಕದಳ ಹೊಯ್ದು ಮಿಂಡರ
ಮೀಟನೆತ್ತಿದರವರು ಕಾಹಿನ
ಕೋಟಲೆಗೆ ನಾವೋಲ್ಲೆವೆಂದರು ಚಿತ್ರಸೇನಂಗೆ (ಅರಣ್ಯ ಪರ್ವ, ೧೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ತೋಟ ಹಾಳಾಯಿತು, ಶತ್ರುಗಳು ಬಲಶಾಲಿಗಳು, ನಮ್ಮವರು ದುರ್ಬಲರು, ಅವರು ನಮ್ಮವರನ್ನು ಬಡಿದು ಹಾಕಿದರು, ನಮಗೆ ಈ ಕಾವಲು ಕಾಯುವ ಕೆಲಸವೇ ಬೇಡ ಎಂದು ಗಂಧರ್ವರು ಚಿತ್ರಸೇನನಿಗೆ ತಿಳಿಸಿದರು.

ಅರ್ಥ:
ತೋಟ: ಹಣ್ಣುಗಳನ್ನು ಬೆಳೆಯುವ ಭೂಮಿ; ಹುಡುಹುಡಿ: ಹಾಳಾಗು; ಮುರಿ: ಸೀಳು; ತೋಟಿ: ಕಲಹ, ಜಗಳ; ಹಗೆ: ವೈರಿ; ಗಾಟ: ದೊಡ್ಡಿತು; ಆಚೆ: ಹೊರಗಡೆ; ದುರ್ಬಲ: ನಿಶ್ಯಕ್ತ; ಈಚೆ: ಈಭಾಗ; ಆಟವಿಕ: ಆಟಗಾರ, ಧೂರ್ತ; ದಳ: ಸೈನ್ಯ; ಹೊಯ್ದು: ಹೊಡೆ; ಮಿಂಡ: ವೀರ, ಶೂರ; ಮೀಟನೆತ್ತು: ಸನ್ನೆಗೋಲಿನಿಂದ ಮೇಲಕೆತ್ತು; ಕಾಹಿ: ಕಾಯುವವ, ರಕ್ಷಿಸುವವ; ಕೋಟಲೆ: ತೊಂದರೆ, ಕಾಟ; ಒಲ್ಲೆ: ಸಮ್ಮತಿವಿಲ್ಲದ ಸ್ಥಿತಿ;

ಪದವಿಂಗಡಣೆ:
ತೋಟ +ಹುಡುಹುಡಿಯಾಯ್ತು +ಮುರಿದುದು
ತೋಟಿಯಲಿ +ನಮ್ಮವರು +ಹಗೆಗಳಗ್
ಆಟವವರ್+ಆಚೆಯಲಿ +ದುರ್ಬಲ +ನಮ್ಮದ್+ಈಚೆಯಲಿ
ಆಟವಿಕದಳ +ಹೊಯ್ದು +ಮಿಂಡರ
ಮೀಟನೆತ್ತಿದರ್+ಅವರು +ಕಾಹಿನ
ಕೋಟಲೆಗೆ +ನಾವೋಲ್ಲೆವೆಂದರು +ಚಿತ್ರಸೇನಂಗೆ

ಅಚ್ಚರಿ:
(೧) ತೋಟ, ತೋಟಿ – ಪ್ರಾಸ ಪದ
(೨) ಜೋಡಿ ಅಕ್ಷರದ ಪದಗಳು – ಕಾಹಿನ ಕೋಟಲೆಗೆ; ಮಿಂಡರ ಮೀಟನೆತ್ತಿದರವರು

ಪದ್ಯ ೩೮: ಹಣ್ಣಿನ ಗಿಡಗಳಿಗೆ ಬಂದ ದುಸ್ಥಿತಿ ಎಂತಹುದು?

ಕದಡಿದವು ಸರಸಿಗಳು ಕೆಡೆದವು
ಕದಳಿಗಳು ಗೊನೆಸಹಿತ ಮುಂಡಿಗೆ
ಮುದುಡಿ ನೆಲಕೊರಗಿದವು ಮಿರುಗುವ ನಾಗವಲ್ಲಿಗಳು
ತುದಿಗೊನೆಯ ಚೆಂದೆಂಗು ಖುರ್ಜೂ
ರದಲಿ ಕಾಣೆನು ಹುರುಳ ನಾರಂ
ಗದ ವಿರಾಮವನೇನನೆಂಬೆನು ನಿಮಿಷ ಮಾತ್ರದಲಿ (ಅರಣ್ಯ ಪರ್ವ, ೧೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸರೋವರಗಳು ಕದಡಿದವು, ಗೊನೆಸಹಿತ ಬಾಳೆ ಗಿಡಗಳು ಬಿದ್ದವು, ಕೇದಗೆ ನೆಲಕ್ಕೊರಗಿದವು, ಮಿರುಗುವ ವೀಳೆಯದೆಲೆಯ ಬಳ್ಳಿಗಳು, ಗೊನೆ ಬಿಟ್ಟ ಕೆಂಪು ತೆಂಗಿನ ಕಾಯಿ ಗೊನೆಗಳು, ಖರ್ಜೂರಗಳು ನಾಶವಾದವು. ಕಿತ್ತಲೆ ಗಿಡಗಳಿಗೆ ಬಂದ ದುಸ್ಥಿತಿಯನ್ನು ನಾನು ಏನೆಂದು ಹೇಳಲಿ ಎಂದು ವೈಶಂಪಾಯನರು ಹೇಳಿದರು.

ಅರ್ಥ:
ಕದಡು: ಬಗ್ಗಡ, ರಾಡಿ; ಸರಸಿ: ಸರೋವರ; ಕೆಡೆ: ಬೀಳು, ಕುಸಿ; ಕದಳಿ: ಬಾಳೆ; ಗೊನೆ: ತುದಿ, ಅಗ್ರಭಾಗ, ಗೊಂಚಲು; ಸಹಿತ: ಜೊತೆ; ಮುಂಡಿಗೆ: ಕಟ್ಟು, ಕಂತೆ; ಮುದುಡು: ಬಾಗು, ಕೊಂಕು; ನೆಲ: ಭೂಮಿ; ಒರಗು: ಮಲಗು, ಕೆಳಕ್ಕೆ ಬಾಗು; ಮಿರುಗು: ಕಾಂತಿ, ಹೊಳಪು; ನಾಗವಲ್ಲಿ: ವೀಳ್ಯದೆಲೆ; ತುದಿ: ಅಗ್ರಭಾಗ; ಚೆಂದೆಂಗು: ಚೆಲುವಾಗ ತೆಂಗು; ಕಾಣೆ: ತೋರು; ನಾರಂಗ: ಕಿತ್ತಲೆ; ವಿರಾಮ: ಬಿಡುವು; ನಿಮಿಷ: ಕ್ಷಣ;

ಪದವಿಂಗಡಣೆ:
ಕದಡಿದವು +ಸರಸಿಗಳು +ಕೆಡೆದವು
ಕದಳಿಗಳು +ಗೊನೆ+ಸಹಿತ+ ಮುಂಡಿಗೆ
ಮುದುಡಿ +ನೆಲಕೊರಗಿದವು+ ಮಿರುಗುವ +ನಾಗವಲ್ಲಿಗಳು
ತುದಿ+ಗೊನೆಯ +ಚೆಂದೆಂಗು +ಖುರ್ಜೂ
ರದಲಿ +ಕಾಣೆನು +ಹುರುಳ +ನಾರಂ
ಗದ +ವಿರಾಮವನ್+ಏನನೆಂಬೆನು +ನಿಮಿಷ +ಮಾತ್ರದಲಿ

ಅಚ್ಚರಿ:
(೧) ಕದಳಿ, ಮುಂಡಿಗೆ, ನಾಗವಲ್ಲಿ, ತೆಂಗು, ಖರ್ಜೂರ, ನಾರಂಗ – ಗಿಡಗಳ ಹೆಸರು

ಪದ್ಯ ೩೭: ಯಾವ ಮರಗಳು ಸೈನ್ಯರ ಕಾಲ್ತುಳಿತಕ್ಕೆ ಬಿದ್ದವು?

ಬಲದ ಪದಘಟ್ಟಣೆಗೆ ಹೆಮ್ಮರ
ನುಲಿದು ಬಿದ್ದವು ಸಾಲ ಪೂಗಾ
ವಳಿ ಕಪಿತ್ಥ ಲವಂಗ ತುಂಬುರ ನಿಂಬ ದಾಳಿಂಬ
ಫಲ ಪಲಾಶ ರಸಾಲ ಶಮಿಗು
ಗ್ಗುಳ ಮಧೂಕಾಶೋಕ ಬಿಲ್ವಾ
ಮಲಕ ಜಂಬೀರಾದಿಗಳು ನುಗ್ಗಾಯ್ತು ನಿಮಿಷದಲಿ (ಅರಣ್ಯ ಪರ್ವ, ೧೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸೈನ್ಯದ ಕಾಲ್ತುಳಿತಕ್ಕೆ, ಹೆಮ್ಮರಗಳು ಸದ್ದು ಮಾಡುತ್ತಾ ಮುರಿದು ಬಿದ್ದವು. ನಿಮಿಷ ಮಾತ್ರದಲ್ಲಿ ಸಾಲ, ಅಡಕೆ, ಬೇಲ, ಲವಂಗ, ತುಂಬುರ, ನಿಮ್ಬೆ, ದಾಳಿಂಬೆ, ಮುತ್ತುಗ, ಮಾವು, ಬನ್ನಿ, ಗುಗ್ಗಳ, ಹಿಪ್ಪೆ, ಅಶೋಕ, ಬಿಲ್ವ, ನೆಲ್ಲಿ, ಕಂಚಿ ಮೊದಲಾದ ಮರಗಳು ಹಣ್ಣುಗಳೊಡನೆ ಬಿದ್ದವು.

ಅರ್ಥ:
ಬಲ: ಸೈನ್ಯ; ಪದ: ಕಾಲು; ಘಟ್ಟಣೆ: ಅಪ್ಪಳಿಸುವಿಕೆ, ಹೊಡೆತ; ಹೆಮ್ಮರ: ದೊಡ್ಡ ಮರ; ಉಲಿ: ಧ್ವನಿ; ಬಿದ್ದು: ಕೆಳಕ್ಕೆ ಉರುಳು; ಸಾಲ: ಮತ್ತಿಮರ, ಸರ್ಜ ವೃಕ್ಷ; ಪೂಗ: ಅಡಿಕೆಮರ; ಆವಳಿ: ಸಾಲು, ಗುಂಪು; ಕಪಿತ್ಥ: ಬೇಲದ ಮರ; ತುಂಬುರ: ಒಂದು ಬಗೆಯ ಮರ; ನಿಂಬ: ಮಂದಾರವೃಕ್ಷ, ನಿಂಬೆ; ಫಲ: ಹಣ್ಣು; ಪಲಾಶ: ಮುತ್ತುಗದ ಮರ; ರಸಾಲ: ಮಾವು; ಶಮಿ: ಬನ್ನಿಯ ಮರ; ಗುಗ್ಗುಳ: ಸಾಂಭ್ರಾಣಿ, ಒಂದು ಬಗೆಯ ಮರ; ಮಧೂಕ: ಒಂದು ಜಾತಿಯ ಗಿಡ; ಅಶೋಕ: ಒಂದು ಜಾತಿಯ ಮರ; ಅಮಲ: ನೆಲ್ಲಿ; ಜಂಬೀರ: ನಿಂಬೆಯ ಗಿಡ; ನುಗ್ಗು: ನೂಕಾಟ, ಪುಡಿ; ನಿಮಿಷ: ಕ್ಷಣ;

ಪದವಿಂಗಡಣೆ:
ಬಲದ +ಪದಘಟ್ಟಣೆಗೆ +ಹೆಮ್ಮರ
ನುಲಿದು +ಬಿದ್ದವು +ಸಾಲ+ ಪೂಗಾ
ವಳಿ +ಕಪಿತ್ಥ +ಲವಂಗ +ತುಂಬುರ +ನಿಂಬ+ ದಾಳಿಂಬ
ಫಲ+ ಪಲಾಶ+ ರಸಾಲ +ಶಮಿ+ಗು
ಗ್ಗುಳ +ಮಧೂಕ+ಅಶೋಕ +ಬಿಲ್ವಾ
ಮಲಕ+ ಜಂಬೀರಾದಿಗಳು+ ನುಗ್ಗಾಯ್ತು +ನಿಮಿಷದಲಿ

ಅಚ್ಚರಿ:
(೧) ಮರಗಳ ಹೆಸರು – ಸಾಲ, ಪೂಗ, ಕಪಿತ್ಥ, ಲವಂಗ, ತುಂಬುರ, ನಿಂಬ, ದಾಳಿಂಬ,
ಫಲ, ಪಲಾಶ, ರಸಾಲ, ಶಮಿ, ಗುಗ್ಗುಳ, ಮಧೂಕ,ಅಶೋಕ, ಬಿಲ್ವ, ಅಮಲ, ಜಂಬೀರ

ಪದ್ಯ ೩೬: ಕೌರವನ ಸೈನ್ಯದ ಪ್ರತ್ಯುತ್ತರ ಹೇಗಿತ್ತು?

ಹಲ್ಲಣಿಸಿದುದು ಚಾತುರಂಗವ
ದೆಲ್ಲ ಕವಿದುದು ಹೊಕ್ಕು ದಿವಿಜರ
ಚೆಲ್ಲ ಬಡಿದರು ಚಾಚಿದರು ತೋಪಿನ ಕವಾಟದಲಿ
ನಿಲ್ಲದೌಕಿದರಂತಕನ ಪುರ
ದೆಲ್ಲೆಯಲಿ ಹೆಕ್ಕಳದ ಖಡುಗದ
ಘಲ್ಲಣಿಯ ಖಣಿಖಟಿಲ ಗಾಢಿಕೆ ಘಲ್ಲಿಸಿತು ನಭವ (ಅರಣ್ಯ ಪರ್ವ, ೧೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವನ ಚತುರಂಗದ ಸೈನ್ಯವು ಸಿದ್ಧವಾಗಿ ಗಂಧರ್ವರ ಮೇಲೆ ಬಿದ್ದು ಅವರನ್ನು ಹೊಡೆದೋಡಿಸಿತು. ಹಲವರನ್ನು ಕೊಂದು ತೋಪಿನ ಬಾಗಿಲಿನಲ್ಲಿ ನೂಕಿತು. ನಿರ್ದಯದಿಂದ ಯಮಪುರಕ್ಕಟ್ಟಿತು. ಖಡ್ಗ ಯುದ್ಧದ ಖಣಿ ಖಟಿಲೆಂಬ ಧ್ವನಿ ಆಕಾಶಕ್ಕೇರಿತು.

ಅರ್ಥ:
ಹಲ್ಲಣಿಸು: ತಡಿಹಾಕು, ಧರಿಸು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಕವಿ: ಆವರಿಸು; ಹೊಕ್ಕು: ಸೇರು; ದಿವಿಜ: ದೇವತೆ; ಬಡಿ: ಹೊಡೆ, ತಾಡಿಸು; ಚಾಚು: ಹರಡು; ತೋಪು: ಗುಂಪು; ಕವಾಟ: ಬಾಗಿಲು, ಕದ; ನಿಲ್ಲು: ತಡೆ; ಔಕು: ನೂಕು; ಅಂತಕ: ಯಮ; ಪುರ: ಊರು; ಎಲ್ಲೆ: ಸೀಮೆ; ಹೆಕ್ಕಳ: ಹೆಚ್ಚಳ, ಅತಿಶಯ; ಖಡುಗ: ಕತ್ತಿ; ಘಲ್ಲಣೆ: ಘಲ್ ಘಲ್ ಎಂಬ ಶಬ್ದ; ಖಣಿಖಟಿಲ: ಶಬ್ದವನ್ನು ವಿವರಿಸುವ ಪದ; ಗಾಢಿಸು: ತುಂಬು; ಘಲ್ಲಿಸು: ಪೀಡಿಸು; ನಭ: ಆಗಸ;

ಪದವಿಂಗಡಣೆ:
ಹಲ್ಲಣಿಸಿದುದು +ಚಾತುರಂಗವ
ದೆಲ್ಲ+ ಕವಿದುದು +ಹೊಕ್ಕು +ದಿವಿಜರ
ಚೆಲ್ಲ +ಬಡಿದರು +ಚಾಚಿದರು +ತೋಪಿನ +ಕವಾಟದಲಿ
ನಿಲ್ಲದ್+ಔಕಿದರ್+ಅಂತಕನ+ ಪುರದ್
ಎಲ್ಲೆಯಲಿ+ ಹೆಕ್ಕಳದ +ಖಡುಗದ
ಘಲ್ಲಣಿಯ +ಖಣಿಖಟಿಲ +ಗಾಢಿಕೆ +ಘಲ್ಲಿಸಿತು +ನಭವ

ಅಚ್ಚರಿ:
(೧) ಹಲ್ಲಣಿ, ಘಲ್ಲಣಿ – ಪ್ರಾಸ ಪದ
(೨) ಸಾಯಿಸು ಎಂದು ಹೇಳಲು – ಔಕಿದರಂತಕನ ಪುರದೆಲ್ಲೆಯಲಿ