ಪದ್ಯ ೧೨: ಗಾಂಧಾರಿ ಯಾರನ್ನು ನೋಡಿ ದುಃಖಿಸಿದಳು?

ಭಾನುದತ್ತನ ಮೇಲೆ ಹೊರಳುವ
ಮಾನಿನಿಯರ ನಿರೀಕ್ಷಿಸೈ ಮ
ತ್ಸೂನುಗಳ ನೋಡಿತ್ತಲಿದೆ ದುಶ್ಯಾಸನಾದಿಗಳ
ಏನನೆಂಬೆನು ತನ್ನ ಸೊಸೆಯರ
ಹಾನಿಯನು ಮಾದ್ರೇಶನರಸಿಯ
ರೇನಧರ್ಮವ ನೆನೆದರೆಂದಳಲಿದಳು ಗಾಂಧಾರಿ (ಗದಾ ಪರ್ವ, ೧೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಭಾನುದತ್ತನ ಮೇಲೆ ಹೊರಲಾಡುತ್ತಿರುವ ಅವನ ಹೆಂಡಿರನ್ನು ನೋಡು. ದುಶ್ಯಾಸನನೇ ಮೊದಲಾದ ನನ್ನ ಮಕ್ಕಳ ದೇಹಗಳನ್ನು ಇತ್ತ ನೋಡು. ಇದರಿಂದ ನನ್ನ ಸೊಸೆಯರಿಗಾದ ಹಾನಿಯನ್ನು ನಾನು ಏನೆಂದು ಹೇಳಲಿ. ಅದಿರಲಿ ಶಲ್ಯನ ಬಳಿ ಅಳುತ್ತಿರುವ ಅವನ ಪತ್ನಿಯರು ಯಾವ ಅಧರ್ಮವನ್ನು ಆಚರಿಸಿದ್ದರು?

ಅರ್ಥ:
ಹೊರಳು: ತಿರುವು, ಬಾಗು; ಮಾನಿನಿ: ಹೆಣ್ಣು; ನಿರೀಕ್ಷಿಸು: ತಾಳು; ಸೂನು: ಮಗ; ಆದಿ: ಮುಂತಾದ; ಎಂಬೆ: ಹೇಳು; ಸೊಸೆ: ಮಗನ ಹೆಂಡತಿ; ಹಾನಿ: ನಾಶ; ಅರಸಿ:ರಾಣಿ; ಅಧರ್ಮ: ಸರಿಯಿಲ್ಲದ; ನೆನೆ: ಜ್ಞಾಪಿಸು; ಅಳುಲು: ದುಃಖಿಸು; ಮತ್: ನನ್ನ;

ಪದವಿಂಗಡಣೆ:
ಭಾನುದತ್ತನ +ಮೇಲೆ +ಹೊರಳುವ
ಮಾನಿನಿಯರ +ನಿರೀಕ್ಷಿಸೈ +ಮ
ತ್ಸೂನುಗಳ +ನೋಡ್+ಇತ್ತಲಿದೆ +ದುಶ್ಯಾಸನಾದಿಗಳ
ಏನನೆಂಬೆನು +ತನ್ನ+ ಸೊಸೆಯರ
ಹಾನಿಯನು +ಮಾದ್ರೇಶನ್+ಅರಸಿಯರ್
ಏನ್+ಅಧರ್ಮವ +ನೆನೆದರ್+ಎಂದಳ್+ಅಳಲಿದಳು +ಗಾಂಧಾರಿ

ಅಚ್ಚರಿ:
(೧) ಮಾನಿನಿ, ಅರಸಿ, ಸೊಸೆ – ಹೆಂಗಸು ಎಂದು ವಿವರಿಸುವ ಪದಗಳು

ಪದ್ಯ ೧೦: ಅಶ್ವತ್ಥಾಮನು ಯಾವ ಭಾವದಿಂದ ಮೇಲೆದ್ದನು?

ಕೆದರಿ ಹೊರಳುವ ಸಾರಥಿಯನೆ
ತ್ತಿದನು ರಣವೃತ್ತಾಂತವನು ಕೇ
ಳಿದನು ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ
ಒದೆದನಳಲನು ರೋಮ ಹರುಷವ
ಹೊದೆದು ಹೊರೆ ಹೆಚ್ಚಿದನು ಕಾಹೇ
ರಿದನು ಕಲಿ ಮನವಳುಕಿ ತಗ್ಗಿತು ರೋಷಭಾವದಲಿ (ದ್ರೋಣ ಪರ್ವ, ೧೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕೆಳಕ್ಕೆ ಬಿದ್ದು ತಲೆಗೆದರಿ, ಮನಕರಗಿ ಹೊರಳುವ ಸಾರಥಿಯಿಂದ ಯುದ್ಧದ ವೃತ್ತಾಂತವನ್ನು ಅಶ್ವತ್ಥಾಮನು ತಿಳಿದುಕೊಂಡನು. ಶಮೆ, ತಾಳ್ಮೆ, ವಿವೇಕ, ನೋವುಗಳನ್ನು ಹೊರನೂಕಿ, ತನ್ನ ರೋಮ ರೋಮದಲ್ಲೂ ರೋಮಾಂಚನಗೊಂಡು ವೀರನಾದ ಅವನ ಮನಸ್ಸು ರೋಷಭಾವದಿಂದ ತುಂಬಿತು.

ಅರ್ಥ:
ಕೆದರು: ಹರಡು; ಹೊರಳು: ತಿರುವು, ಬಾಗು; ಸಾರಥಿ: ಸೂತ; ಎತ್ತು: ಮೇಲೇಳಿಸು; ರಣ: ಯುದ್ಧ; ವೃತ್ತಾಂತ: ವಿಚಾರ; ಕೇಳು: ಆಲಿಸು; ಶಮೆ: ಮನೋನಿಗ್ರಹ; ಸೈರಣೆ: ತಾಳ್ಮೆ; ವಿವೇಕ: ಯುಕ್ತಾಯುಕ್ತ ವಿಚಾರ; ನೂಕು: ತಳ್ಳು; ಸೆರೆ: ಬಂಧನ; ಒದೆ: ನೂಕು; ಅಳಲು: ಗೋಳಾಟ, ನೋವು; ರೋಮ: ಕೂದಲು; ಹರುಷ: ಸಂತಸ; ಹೊದೆ:ಧರಿಸಿಕೊಳ್ಳು; ಹೊರೆ: ಭಾರ; ಹೆಚ್ಚು: ಅಧಿಕ; ಕಾವು: ತಾಪ; ಕಲಿ: ಶೂರ; ಮನ: ಮನಸ್ಸು; ಅಳುಕು: ಹೆದರು; ತಗ್ಗು: ಕಡಿಮೆಯಾಗು; ರೋಷ: ಕೋಪ; ಭಾವ: ಭಾವನೆ;

ಪದವಿಂಗಡಣೆ:
ಕೆದರಿ +ಹೊರಳುವ +ಸಾರಥಿಯನ್
ಎತ್ತಿದನು +ರಣ+ವೃತ್ತಾಂತವನು +ಕೇ
ಳಿದನು +ಶಮೆ +ಸೈರಣೆ+ವಿವೇಕವ+ ನೂಕಿದನು +ಸೆರೆಗೆ
ಒದೆದನ್+ಅಳಲನು +ರೋಮ +ಹರುಷವ
ಹೊದೆದು +ಹೊರೆ +ಹೆಚ್ಚಿದನು +ಕಾಹೇ
ರಿದನು +ಕಲಿ+ ಮನವ್+ಅಳುಕಿ +ತಗ್ಗಿತು +ರೋಷ+ಭಾವದಲಿ

ಅಚ್ಚರಿ:
(೧) ಹ ಕಾರದ ಸಾಲು ಪದ – ಹರುಷವ ಹೊದೆದು ಹೊರೆ ಹೆಚ್ಚಿದನು
(೨) ಕೋಪದ ಸ್ಥಿತಿ – ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ
(೩) ರೋಮಾಂಚನವನ್ನು ವಿವರಿಸುವ ಪರಿ – ರೋಮ ಹರುಷವ ಹೊದೆದು

ಪದ್ಯ ೪: ಅರ್ಜುನನು ಏನನ್ನು ನೋಡಿದನು?

ಒಳಗೊಳಗೆ ಹೊಯಿದಾಡಿ ಹೊರಳುವ
ಬಲುಭಟರನಗಿದೊಗುವ ಬಲುಗ
ತ್ತಲೆಯ ಕೋಳಾಹಳವನುಭಯದ ಚಾತುರಂಗದಲಿ
ಬಲಿದ ತೂಕಡಿಕೆಗಳ ನಸು ಬೆದ
ರೊಲಹುಗಳ ಜವವೆದ್ದ ಝೊಮ್ಮಿನ
ಬಲೆಗೆ ಸಿಲುಕಿದ ಬಲವನರ್ಜುನದೇವನೀಕ್ಷಿಸಿದ (ದ್ರೋಣ ಪರ್ವ, ೧೭ ಸಂಧಿ, ೪ ಪದ್ಯ)

ತಾತ್ಪರ್ಯ:
ತಮ್ಮ ತಮ್ಮಲ್ಲೇ ಹೊಯ್ದಾಡಿ ಸತ್ತು ಬೀಳುವ ವೀರರನ್ನೂ, ಉಭಯ ಸೈನ್ಯವನ್ನೂ ಮುತ್ತುವ ಕತ್ತಲೆಯನ್ನೂ, ಯೋಧರು ತೂಕಡಿಸುವುದನ್ನೂ, ಮೈ ಝೊಮ್ಮಿನಿಂದ ಬೆದರಿ ಬಳಲುವ ಸೈನ್ಯವನ್ನೂ ಅರ್ಜುನನು ನೋಡಿದನು.

ಅರ್ಥ:
ಒಳಗೆ: ಅಂತರ್ಯ; ಹೊಯಿದಾಡು: ಹೋರಾಡು; ಹೊರಳು: ತಿರುವು, ಬಾಗು; ಬಲು: ಶಕ್ತಿ; ಭಟ: ಸೈನಿಕ; ಅಗಿ: ತೋಡು; ಬಲುಗತ್ತಲೆ: ಬಹಳ ಅಂಧಕಾರ; ಕೋಳಾಹಳ: ಗೊಂದಲ; ಉಭಯ: ಎರಡು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲಿ: ಗಟ್ಟಿಯಾದ; ತೂಕಡಿಕೆ: ನಿದ್ದೆ ಬಂದ ಸ್ಥಿತಿ; ನಸು: ಕೊಂಚ, ಸ್ವಲ್ಪ; ಬೆದರು: ಹೆದರು; ಒಲಹು: ಪ್ರೀತಿ; ಜವ: ಯಮ, ವೇಗ; ಝೊಮ್ಮು: ಪುಳುಕಿತ; ಬಲೆ: ಜಾಲ; ಸಿಲುಕು: ಬಂಧಿಸು; ಬಲ: ಶಕ್ತಿ; ಈಕ್ಷಿಸು: ನೋಡು;

ಪದವಿಂಗಡಣೆ:
ಒಳಗೊಳಗೆ +ಹೊಯಿದಾಡಿ +ಹೊರಳುವ
ಬಲು+ಭಟರನ್+ಅಗಿದೊಗುವ +ಬಲುಗ
ತ್ತಲೆಯ +ಕೋಳಾಹಳವನ್+ಉಭಯದ +ಚಾತುರಂಗದಲಿ
ಬಲಿದ +ತೂಕಡಿಕೆಗಳ +ನಸು +ಬೆದರ್
ಒಲಹುಗಳ +ಜವವೆದ್ದ +ಝೊಮ್ಮಿನ
ಬಲೆಗೆ +ಸಿಲುಕಿದ +ಬಲವನ್+ಅರ್ಜುನದೇವನ್+ಈಕ್ಷಿಸಿದ

ಅಚ್ಚರಿ:
(೧) ಬಲುಭಟ, ಬಲುಗತ್ತಲೆ – ಬಲು ಪದದ ಬಳಕೆ

ಪದ್ಯ ೩೧: ಅರ್ಜುನನು ಕೃಷ್ಣನ ಯೋಚನೆಯನ್ನೇಕೆ ಪ್ರಶ್ನಿಸಿದನು?

ನರಕಕರ್ಮವ ಮಾಡಿ ಇಹದೊಳು
ದುರಿತ ಭಾಜನನಾಗಿ ಕಡೆಯಲಿ
ಪರಕೆ ಬಾಹಿರನಾಗಿ ನಾನಾಯೋನಿಯೊಳು ಸುಳಿದು
ಹೊರಳುವನುವನು ಕೃಷ್ಣದೇವನು
ಕರುಣಿಸಿದನೇ ಹಿತವನೇ ಹರ
ಹರ ಮಹಾದೇವೊಂದು ಬೋಳಕೆ ಬದುಕಿದೆನುಯೆಂದ (ಭೀಷ್ಮ ಪರ್ವ, ೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅತಿಕಷ್ಟವಾದ ಕೆಲವನ್ನು ಮಾಡಿ, ಪಾಪಕ್ಕೆ ಪಕ್ಕಾಗಿ, ಪರಲೋಕದಲ್ಲಿ ನರಕಕ್ಕೆ ಹೋಗಿ, ಹಲವಾರು ತಿರ್ಯಗ್ಯೋನಿಗಳಲ್ಲಿ ಜನಿಸುವುದಕ್ಕೆ ದಾರಿ ಮಾಡುಕೊಡುವಂತಹ ಕೆಲಸವನ್ನು ಕೃಷ್ಣನು ನನಗೆ ಬೆಸಸಿದನೇ? ಇವನು ನನಗೆ ಹಿತವನೇ? ಇಂತಹ ಮಹತ್ತಾದ ಆಪತ್ತನ್ನೆದುರಿಸಲೆಂದೇ ನಾನು ಇಷ್ಟು ದಿನ ಜೀವಿಸಿದೆನಲ್ಲಾ ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ನರಕ: ಅಧೋಲೋಕ; ಕರ್ಮ: ಕಾರ್ಯದ ಫಲ; ಇಹ: ಇರುವಿಕೆ, ಸಂಸಾರ; ದುರಿತ: ಪಾಪ, ಪಾತಕ; ಭಾಜನ: ಯೋಗ್ಯ, ಅರ್ಹ; ಕಡೆ: ಕೊನೆ; ಪರ: ಭವಿಷ್ಯತ್ತು; ಬಾಹಿರ: ಹೊರಗಿನವ; ಯೋನಿ: ಉತ್ಪತ್ತಿ ಸ್ಥಾನ; ನಾನಾ: ಹಲವಾರು; ಸುಳಿ: ಸುತ್ತು; ಹೊರಳು: ತಿರುಗು; ಕರುಣೆ: ದಯೆ; ಹಿತ: ಒಳ್ಳೆಯದು; ಬೋಳ: ಸಾವು, ಮೃತ್ಯು; ಬದುಕು: ಜೀವಿಸು; ಅನುವು: ರೀತಿ;

ಪದವಿಂಗಡಣೆ:
ನರಕ+ಕರ್ಮವ +ಮಾಡಿ +ಇಹದೊಳು
ದುರಿತ+ ಭಾಜನನಾಗಿ+ ಕಡೆಯಲಿ
ಪರಕೆ+ ಬಾಹಿರನಾಗಿ+ ನಾನಾ+ಯೋನಿಯೊಳು +ಸುಳಿದು
ಹೊರಳುವ್+ಅನುವನು +ಕೃಷ್ಣದೇವನು
ಕರುಣಿಸಿದನೇ +ಹಿತವನೇ+ ಹರ
ಹರ +ಮಹಾದೇವ್+ಒಂದು +ಬೋಳಕೆ +ಬದುಕಿದೆನುಯೆಂದ

ಅಚ್ಚರಿ:
(೧) ಭಾಜನನಾಗಿ, ಬಾಹಿರನಾಗಿ – ಪದಗಳ ಬಳಕೆ

ಪದ್ಯ ೪೦: ಕರ್ಣನು ಹೇಗೆ ಧನ್ಯನಾಗುತ್ತಾನೆಂದು ಯೋಚಿಸಿದ?

ಅವನ ಮುಂದಲೆ ತನ್ನ ಕೈಯಲಿ
ಅವನ ಕೈಯಲಿ ತನ್ನ ಮುಂದಲೆ
ಅವನ ದೇಹದ ಘಾಯವೆನ್ನಯ ಘಾಯ ಚುಂಬಿಸುತ
ಅವನ ಖಡುಗದಲೆನ್ನ ಮೈ ನಾ
ತಿವಿದ ಖಡ್ಗಕೆ ನರನ ಮೈ ಲವ
ಲವಿಸಲಡಿಮೇಲಾಗಿ ಹೊರಳ್ದರೆ ಧನ್ಯ ತಾನೆಂದ (ಕರ್ಣ ಪರ್ವ, ೮ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನ ಮುಂಭಾಗದ ಕೂದಲು ಎಳೆದು ನನ್ನ ಕೈಯಲ್ಲಿ ಹಿಡಿದು, ನನ್ನ ಮುಂದಲೆಯು ಅವನು ಹಿಡಿದು, ಅವನ ಮೈಮೇಲಾದ ಘಾಯವು ನನ್ನ ಮೈಮೇಲಾದ ಘಾಯವು ಒಂದೊಂದನ್ನು ಮುಟ್ಟುತ್ತಿರಲು, ಅವನ ಖಡ್ಗದ ಹೊಡೆತಕ್ಕೆ ತನ್ನ ಮೈ ನನ್ನ ಖಡ್ಗದ ಹೊಡೆತಕ್ಕೆ ಅವನ ಮೈ ಹರ್ಷಿಸಲು, ನಾವಿಬ್ಬರು ಅಡಿಮೇಲಾಗಿ ಹೊರಳಿದರೆ ನಾನು ಧನ್ಯನೆಂದು ಕರ್ಣನು ತನ್ನ ಮತ್ತು ಅರ್ಜುನನ ಕಾಳಗದ ದೃಶ್ಯವನ್ನು ಕಲ್ಪಿಸಿಕೊಳ್ಳುತ್ತಿದ್ದ.

ಅರ್ಥ:
ಮುಂದಲೆ: ತಲೆಯ ಮುಂಭಾಗದಲ್ಲಿರುವ ಕೂದಲು; ಕೈ: ಹಸ್ತ, ಕರ; ಘಾಯ: ಪೆಟ್ಟು; ಚುಂಬಿಸು: ಮುತ್ತು, ತಾಗು; ಖಡುಗ: ಕತ್ತಿ; ಮೈ: ತನು, ದೇಹ; ತಿವಿ: ಚುಚ್ಚು; ನರ: ಅರ್ಜುನ; ಲವಲವಿಸು: ಹರ್ಷಿಸು; ಅಡಿ: ಪಾದ; ಹೊರಳು: ತಿರುವು, ಉರುಳಾಡು;

ಪದವಿಂಗಡಣೆ:
ಅವನ +ಮುಂದಲೆ +ತನ್ನ +ಕೈಯಲಿ
ಅವನ +ಕೈಯಲಿ +ತನ್ನ +ಮುಂದಲೆ
ಅವನ +ದೇಹದ +ಘಾಯವ್+ಎನ್ನಯ +ಘಾಯ +ಚುಂಬಿಸುತ
ಅವನ +ಖಡುಗದಲ್+ಎನ್ನ +ಮೈ +ನಾ
ತಿವಿದ+ ಖಡ್ಗಕೆ +ನರನ +ಮೈ +ಲವ
ಲವಿಸಲ್+ಅಡಿ+ಮೇಲಾಗಿ +ಹೊರಳ್ದರೆ+ ಧನ್ಯ +ತಾನೆಂದ

ಅಚ್ಚರಿ:
(೧) ಘಾಯ ಚುಂಬಿಸು, ಲವಲವಿಸು, ಹೊರಳಾಡು – ಯುದ್ಧವನ್ನು ಸರಸ ರೀತಿಯಲ್ಲಿ ನೋಡುವ ಪರಿಕಲ್ಪನೆ