ಪದ್ಯ ೧೦: ಅಶ್ವತ್ಥಾಮನು ಯಾವ ಭಾವದಿಂದ ಮೇಲೆದ್ದನು?

ಕೆದರಿ ಹೊರಳುವ ಸಾರಥಿಯನೆ
ತ್ತಿದನು ರಣವೃತ್ತಾಂತವನು ಕೇ
ಳಿದನು ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ
ಒದೆದನಳಲನು ರೋಮ ಹರುಷವ
ಹೊದೆದು ಹೊರೆ ಹೆಚ್ಚಿದನು ಕಾಹೇ
ರಿದನು ಕಲಿ ಮನವಳುಕಿ ತಗ್ಗಿತು ರೋಷಭಾವದಲಿ (ದ್ರೋಣ ಪರ್ವ, ೧೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕೆಳಕ್ಕೆ ಬಿದ್ದು ತಲೆಗೆದರಿ, ಮನಕರಗಿ ಹೊರಳುವ ಸಾರಥಿಯಿಂದ ಯುದ್ಧದ ವೃತ್ತಾಂತವನ್ನು ಅಶ್ವತ್ಥಾಮನು ತಿಳಿದುಕೊಂಡನು. ಶಮೆ, ತಾಳ್ಮೆ, ವಿವೇಕ, ನೋವುಗಳನ್ನು ಹೊರನೂಕಿ, ತನ್ನ ರೋಮ ರೋಮದಲ್ಲೂ ರೋಮಾಂಚನಗೊಂಡು ವೀರನಾದ ಅವನ ಮನಸ್ಸು ರೋಷಭಾವದಿಂದ ತುಂಬಿತು.

ಅರ್ಥ:
ಕೆದರು: ಹರಡು; ಹೊರಳು: ತಿರುವು, ಬಾಗು; ಸಾರಥಿ: ಸೂತ; ಎತ್ತು: ಮೇಲೇಳಿಸು; ರಣ: ಯುದ್ಧ; ವೃತ್ತಾಂತ: ವಿಚಾರ; ಕೇಳು: ಆಲಿಸು; ಶಮೆ: ಮನೋನಿಗ್ರಹ; ಸೈರಣೆ: ತಾಳ್ಮೆ; ವಿವೇಕ: ಯುಕ್ತಾಯುಕ್ತ ವಿಚಾರ; ನೂಕು: ತಳ್ಳು; ಸೆರೆ: ಬಂಧನ; ಒದೆ: ನೂಕು; ಅಳಲು: ಗೋಳಾಟ, ನೋವು; ರೋಮ: ಕೂದಲು; ಹರುಷ: ಸಂತಸ; ಹೊದೆ:ಧರಿಸಿಕೊಳ್ಳು; ಹೊರೆ: ಭಾರ; ಹೆಚ್ಚು: ಅಧಿಕ; ಕಾವು: ತಾಪ; ಕಲಿ: ಶೂರ; ಮನ: ಮನಸ್ಸು; ಅಳುಕು: ಹೆದರು; ತಗ್ಗು: ಕಡಿಮೆಯಾಗು; ರೋಷ: ಕೋಪ; ಭಾವ: ಭಾವನೆ;

ಪದವಿಂಗಡಣೆ:
ಕೆದರಿ +ಹೊರಳುವ +ಸಾರಥಿಯನ್
ಎತ್ತಿದನು +ರಣ+ವೃತ್ತಾಂತವನು +ಕೇ
ಳಿದನು +ಶಮೆ +ಸೈರಣೆ+ವಿವೇಕವ+ ನೂಕಿದನು +ಸೆರೆಗೆ
ಒದೆದನ್+ಅಳಲನು +ರೋಮ +ಹರುಷವ
ಹೊದೆದು +ಹೊರೆ +ಹೆಚ್ಚಿದನು +ಕಾಹೇ
ರಿದನು +ಕಲಿ+ ಮನವ್+ಅಳುಕಿ +ತಗ್ಗಿತು +ರೋಷ+ಭಾವದಲಿ

ಅಚ್ಚರಿ:
(೧) ಹ ಕಾರದ ಸಾಲು ಪದ – ಹರುಷವ ಹೊದೆದು ಹೊರೆ ಹೆಚ್ಚಿದನು
(೨) ಕೋಪದ ಸ್ಥಿತಿ – ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ
(೩) ರೋಮಾಂಚನವನ್ನು ವಿವರಿಸುವ ಪರಿ – ರೋಮ ಹರುಷವ ಹೊದೆದು

ಪದ್ಯ ೩೪: ಅಭಿಮನ್ಯುವು ಕರ್ಣನಿಗೆ ಏನೆಂದು ನುಡಿದನು?

ಆವ ಶರಸಂಧಾನ ಲಾಘವ
ದಾವ ಪರಿ ಮಝ ಪೂತು ಪಾಯಿಕು
ದೇವ ಬಿಲ್ಲಾಳೆಂತು ಕಡಿದೈ ಕರ್ಣ ನೀ ಧನುವ
ಈ ವಿವೇಕದಾರ ಸೇರುವೆ
ಯಾವಗಹುದಿದು ಹಿಂದೆ ಬಂದೆಸು
ವೀ ವಿಗಡತನ ನಿನಗೆ ಮೆರೆವುದು ಕರ್ಣ ಕೇಳೆಂದ (ದ್ರೋಣ ಪರ್ವ, ೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ಭಲೆ, ಭೇಷ್ ಕರ್ಣ, ಯಾವ ಬಾಣವನ್ನು ಹೂಡಿಸುವ ಕಲೆ, ಏನು ಕುಶಲತೆ, ಬಿಲ್ಲುಗಾರನಲ್ಲಿ ದೇವನಾದ ಕರ್ಣ, ನನ್ನ ಬಿಲ್ಲನ್ನು ಹೇಗೆ ಮುರಿದುಬಿಟ್ಟೆ, ಇಂತಹ ವಿವೇಕ ನಿನಗೆ ಯಾರ ಸ್ನೇಹದಲ್ಲಿ ಬಂದಿತು? ಯಾವಾಗ ಬಂದಿತು? ಕರ್ಣಾ ಹಿಂದಿನಿಂದ ಬಿಲ್ಲನ್ನು ಮುರಿಯುವ ಶೌರ್ಯವು ನಿನಗೆ ಭೂಷಣವಾಗಿದೆ ಎಂದು ಅಭಿಮನ್ಯುವು ನುಡಿದನು.

ಅರ್ಥ:
ಶರ: ಬಾಣ; ಸಂಧಾನ: ಸೇರಿಸುವುದು; ಲಾಘವ: ಹಗುರತನ; ಪರಿ: ರೀತಿ; ಮಝ: ಭಲೇ, ಪೂತು: ಭೇಷ್; ಪಾಯಿಕು: ಹೊಗಳುವ ನುಡಿ; ದೇವ: ಒಡೆಯ, ಭಗವಂತ; ಬಿಲ್ಲಾಳು: ಬಿಲ್ಲುಗಾರ; ಕಡಿ: ಸೀಳು; ಧನು: ಬಿಲ್ಲು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಸೇರು: ಮುಟ್ಟು, ಕೂಡು; ಹಿಂದೆ: ಪೂರ್ವ; ಬಂದು: ಆಗಮಿಸು; ಎಸು: ಬಾಣ ಪ್ರಯೋಗ; ವಿಗಡತನ:ಪರಾಕ್ರಮಿ; ಮೆರೆ: ಶೋಭಿಸು; ಕೇಳು: ಆಲಿಸು;

ಪದವಿಂಗಡಣೆ:
ಆವ +ಶರಸಂಧಾನ +ಲಾಘವದ್
ಆವ+ ಪರಿ +ಮಝ +ಪೂತು +ಪಾಯಿಕು
ದೇವ +ಬಿಲ್ಲಾಳೆಂತು +ಕಡಿದೈ+ ಕರ್ಣ +ನೀ +ಧನುವ
ಈ +ವಿವೇಕದಾರ+ ಸೇರುವೆ
ಯಾವಗ್+ಅಹುದಿದು +ಹಿಂದೆ +ಬಂದ್+ಎಸುವ್
ಈ+ ವಿಗಡತನ +ನಿನಗೆ +ಮೆರೆವುದು +ಕರ್ಣ +ಕೇಳೆಂದ

ಅಚ್ಚರಿ:
(೧)ಕರ್ಣನನ್ನು ಹಂಗಿಸುವ ಪರಿ – ಈ ವಿಗಡತನ ನಿನಗೆ ಮೆರೆವುದು ಕರ್ಣ; ಮಝ ಪೂತು ಪಾಯಿಕು
ದೇವ ಬಿಲ್ಲಾಳೆಂತು ಕಡಿದೈ ಕರ್ಣ ನೀ ಧನುವ

ಪದ್ಯ ೨೮: ದುರ್ಯೋಧನನೇಕೆ ಚಿಂತಾಕುಲನಾದನು?

ಸಾಕು ಸಾಕೈ ತಂದೆ ನನ್ನನು
ಸಾಕಿಕೊಂಡೈ ಪಾರ್ಥ ಘನ ತೃ
ಷ್ಣಾಕುಲತೆ ಬೀಳ್ಕೊಂಡುದತಿಶಯ ತೃಪ್ತಿ ನನಗಾಯ್ತು
ಸಾಕೆನುತ ಫಲುಗುಣನ ಪರಮ ವಿ
ವೇಕವನು ಪತಿಕರಿಸಿ ನೆರೆ ಚಿಂ
ತಾಕುಳನ ಮಾಡಿದನು ಕೌರವ ರಾಯನನು ಭೀಷ್ಮ (ಭೀಷ್ಮ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ತಂದೆ ಅರ್ಜುನ, ಸಾಕು, ಸಾಕು ನನ್ನ ಬಾಯಾರಿಕೆ ಹೋಗಿ ತೃಪ್ತನಾದೆನು. ನೀನು ನನ್ನನ್ನು ಸಾಕಿಕೊಂಡೆ, ನೀರು ಸಾಕು ಎಂದು ಅರ್ಜುನನ ವಿವೇಕವನ್ನು ಮನ್ನಿಸಿದನು. ಇದರಿಂದ ಕೌರವನು ಚಿಂತಾಕುಲನಾದನು.

ಅರ್ಥ:
ಸಾಕು: ನಿಲ್ಲಿಸು; ತಂದೆ: ಅಯ್ಯ, ಪಿತ; ಸಾಕು: ಸಲಹು; ಘನ: ಶ್ರೇಷ್ಠ; ತೃಷ್ಣ: ತೃಷೆ, ನೀರಡಿಕೆ; ಆಕುಲತೆ: ವ್ಯಾಕುಲ, ಚಿಂತಿತ; ಬೀಳ್ಕೊಂಡು: ತೆರಳು; ಅತಿಶಯ: ಹೆಚ್ಚಿನ; ತೃಪ್ತಿ: ಸಮಾಧಾನ; ಪರಮ: ಶ್ರೇಷ್ಠ; ವಿವೇಕ: ಯುಕ್ತಾಯುಕ್ತ ವಿಚಾರ; ಪತಿಕರಿಸು: ದಯೆತೋರು, ಅನುಗ್ರಹಿಸು; ನೆರೆ: ಪಕ್ಕ; ಚಿಂತೆ: ಯೋಚನೆ;

ಪದವಿಂಗಡಣೆ:
ಸಾಕು +ಸಾಕೈ +ತಂದೆ +ನನ್ನನು
ಸಾಕಿಕೊಂಡೈ +ಪಾರ್ಥ +ಘನ +ತೃ
ಷ್ಣಾಕುಲತೆ +ಬೀಳ್ಕೊಂಡುದ್+ಅತಿಶಯ +ತೃಪ್ತಿ +ನನಗಾಯ್ತು
ಸಾಕೆನುತ +ಫಲುಗುಣನ +ಪರಮ +ವಿ
ವೇಕವನು +ಪತಿಕರಿಸಿ+ ನೆರೆ +ಚಿಂ
ತಾಕುಳನ +ಮಾಡಿದನು +ಕೌರವ +ರಾಯನನು +ಭೀಷ್ಮ

ಅಚ್ಚರಿ:
(೧) ಪಾರ್ಥನನ್ನು ಹೊಗಳಿದ ಪರಿ – ಘನ ತೃಷ್ಣಾಕುಲತೆ ಬೀಳ್ಕೊಂಡುದತಿಶಯ ತೃಪ್ತಿ ನನಗಾಯ್ತು; ಫಲುಗುಣನ ಪರಮ ವಿವೇಕವನು ಪತಿಕರಿಸಿ
(೨) ಸಾಕು, ಸಾಕಿಕೊಂಡೆ; ತೃಷ್ಣಾಕುಲತೆ, ಚಿಂತಾಕುಳ – ಪದಗಳ ಬಳಕೆ

ಪದ್ಯ ೩೭: ವಿರಾಟನು ಕಂಕನಿಗೆ ಏನು ಹೇಳಿದ?

ಎಲೆ ಮಹೀಸುರ ಯೀವಿವೇಕವ
ಬಳಸುವೆನೆ ನೀನರಿಯದಿದ್ದೊಡೆ
ತಿಳಿವೆ ನಾನೆಲ್ಲವನು ಸಂಹರಿಸುವನು ಸಿಂಧುರನು
ಉಳಿದವರ ಗಣಿಸುವನೆ ತಾನಿ
ನ್ನುಳಿದವರು ಕೃಶರೆಂದು ಬಡವನ
ಕೊಲಿಸ ಬಗೆವರೆ ಕಂಕ ನೀ ಹೇಳೆಂದನಾ ಮತ್ಸ್ಯ (ವಿರಾಟ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲೈ ಬ್ರಾಹ್ಮಣ, ನಿನ್ನ ತೀರ್ಮಾನವನ್ನು ಒಪ್ಪಿಕೊಳ್ಳುವುದಾದರೆ ಸಿಂಧುರನು ಬಾಣಸಿಗನಾದ ವಲಲನನ್ನು ಕೊಲ್ಲುತ್ತಾನೆ, ನಮ್ಮ ಉಳಿದ ಮಲ್ಲರು ದುರ್ಬಲರೆಂದು ಪರದೇಶಿಯಾದ ಈ ಬಡ ಬಾಣಸಿಗನನ್ನು ಕೊಲ್ಲಿಸಲು ಲೆಕ್ಕಿಸುವುದೇ? ಕಂಕ ನೀನೇ ಹೇಳು ಎಂದು ಮತ್ಸ್ಯನು ಹೇಳಿದನು.

ಅರ್ಥ:
ಮಹೀಸುರ: ಬ್ರಾಹ್ಮಣ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಬಳಸು: ಉಪಯೋಗ ಮಾಡು; ಅರಿ: ತಿಳಿ; ಸಂಹರಿಸು: ನಾಶಮಾಡು; ಉಳಿದ: ಮಿಕ್ಕ; ಗಣಿಸು: ಲಕ್ಷಿಸು; ಉಳಿದ: ಮಿಕ್ಕ; ಕೃಶ: ದುರ್ಬಲ, ತೆಳುವಾದ; ಬಡವ: ದೀನ; ಕೊಲಿಸು: ಸಾಯಿಸು; ಬಗೆ: ರೀತಿ; ಹೇಳು: ತಿಳಿಸು;

ಪದವಿಂಗಡಣೆ:
ಎಲೆ +ಮಹೀಸುರ +ಯೀ+ವಿವೇಕವ
ಬಳಸುವೆನೆ+ ನೀನ್+ಅರಿಯದಿದ್ದೊಡೆ
ತಿಳಿವೆ+ ನಾನೆಲ್ಲವನು +ಸಂಹರಿಸುವನು+ ಸಿಂಧುರನು
ಉಳಿದವರ+ ಗಣಿಸುವನೆ+ ತಾನ್
ಇನ್ನುಳಿದವರು +ಕೃಶರೆಂದು +ಬಡವನ
ಕೊಲಿಸ +ಬಗೆವರೆ+ ಕಂಕ+ ನೀ +ಹೇಳೆಂದನಾ +ಮತ್ಸ್ಯ

ಅಚ್ಚರಿ:
(೧) ವಿರಾಟನು ಮುಂಚೆಯೇ ತೀರ್ಮಾನಿಸಿದ ಪರಿ – ನೀನರಿಯದಿದ್ದೊಡೆ ತಿಳಿವೆ ನಾನೆಲ್ಲವನು ಸಂಹರಿಸುವನು ಸಿಂಧುರನು

ಪದ್ಯ ೭೦: ಗಾಂಧಾರಿಯು ಧೃತರಾಷ್ಟ್ರನಿಗೆ ಏನು ಹೇಳಿದಳು?

ಏಕೆ ನಿಮಗೀ ಚಿಂತೆಯಿಂದೆರ
ಡೌಕಿದವು ದುಷ್ಕಾರ್ಯ ಸಂಧಿ ವಿ
ವೇಕ ನಿಕರದಲೊರೆದು ಮೋಹರಿಸೊಂದು ಬಾಹೆಯಲಿ
ಈ ಕುರುವ್ರಜ ನೂರ ಹಿಡಿ ಕುಂ
ತೀ ಕುಮಾರರ ಬಿಡು ತನೂಜರ
ನೂಕು ಹಿಡಿ ಪಾಂಡವರನೆಂದಳು ಪತಿಗೆ ಗಾಂಧಾರಿ (ಸಭಾ ಪರ್ವ, ೧೩ ಸಂಧಿ, ೭೦ ಪದ್ಯ)

ತಾತ್ಪರ್ಯ:
ನಿಮಗೆ ಚಿಂತೆಯಾದರು ಏಕೆ, ಈಗ ಎರಡು ಕಾರ್ಯಗಳು ಎದುರಾಗಿವೆ, ವಿವೇಕದ ಕೆಲಸ ಅಥವ ದುಷ್ಕಾರ್ಯದಲ್ಲಿ ಕಾರ್ಯ. ನಮ್ಮ ಮಕ್ಕಳಾದ ನೂರ್ವರು ಕೌರವರನ್ನು ಹಿಡಿದು ಪಾಂಡವರನ್ನು ಬಿಡುವುದು, ಇಲ್ಲವೇ ನಮ್ಮ ಮಕ್ಕಳನ್ನು ಹೊರಹಾಕಿ ಪಾಂಡವರನ್ನು ಹಿಡಿಯುವುದು, ಎರಡರಲ್ಲೊಂದನ್ನು ಮಾಡಿದರಾಯಿತು ಎಂದಳು.

ಅರ್ಥ:
ಚಿಂತೆ: ಯೋಚನೆ; ಔಕು: ನೂಕು, ತಳ್ಳು; ದುಷ್ಕಾರ್ಯ: ಕೆಟ್ಟ ಕೆಲಸ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಸಂಧಿ: ಸೇರಿಕೆ, ಸಂಯೋಗ; ನಿಕರ: ಗುಂಪು; ಒರೆ: ಶೋಧಿಸಿ ನೋಡು; ಮೋಹರ: ಯುದ್ಧ; ಬಾಹೆ: ಪಕ್ಕ, ಪಾರ್ಶ್ವ; ವ್ರಜ: ಗುಂಪು; ಹಿಡಿ: ಹಿಡಿಕೆ, ಕಾವು; ಬಿಡು: ತೊರೆ; ನೂಕು: ತಳ್ಳು; ತನೂಜ: ಮಕ್ಕಳು;

ಪದವಿಂಗಡಣೆ:
ಏಕೆ+ ನಿಮಗೀ +ಚಿಂತೆ+ಇಂದ್+ಎರಡ್
ಔಕಿದವು +ದುಷ್ಕಾರ್ಯ +ಸಂಧಿ +ವಿ
ವೇಕ +ನಿಕರದಲ್+ಒರೆದು +ಮೋಹರಿಸೊಂದು+ ಬಾಹೆಯಲಿ
ಈ +ಕುರುವ್ರಜ +ನೂರ +ಹಿಡಿ +ಕುಂ
ತೀ +ಕುಮಾರರ +ಬಿಡು +ತನೂಜರ
ನೂಕು +ಹಿಡಿ +ಪಾಂಡವರನ್+ಎಂದಳು +ಪತಿಗೆ +ಗಾಂಧಾರಿ

ಅಚ್ಚರಿ:
(೧) ಬಿಡು, ನೂಕು – ಸಾಮ್ಯಾರ್ಥ ಪದಗಳ ಬಳಕೆ

ಪದ್ಯ ೨೬: ಅರ್ಜುನನಿಗೆ ಕೃಷ್ಣನು ಏನು ಬೋಧಿಸಿದ?

ಸಾಕದಂತಿರಲಾಹವಕೆ ಬರ
ಲೇಕೆ ಕಬ್ಬಿನ ಬನವೆ ಬಾಣಾ
ನೀಕಕಭಿಮುಖವಾಗೆ ಸಾವರು ನೋವರಿದಕೇನು
ಈ ಕುಠಾರನನೀಕ್ಷಣಕೆ ಕೈ
ತೂಕದಲಿ ಕಾದದೆ ವಿವೇಕದೊ
ಳಾಕರಿಸು ಜಯವಧುವನೆಂದನು ಕೃಷ್ಣನರ್ಜುನನ (ಕರ್ಣ ಪರ್ವ, ೨೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಅರ್ಜುನನಿಗೆ ಬುದ್ಧಿಯನ್ನು ಹೇಳುತ್ತಾ, ಅರ್ಜುನ ಯುದ್ಧರಂಗವೇನು ಕಬ್ಬಿನ ಗದ್ದೆಯೇ? ಯುದ್ಧಕ್ಕೆ ಬಂದ ಮೇಲೆ ಬಾಣಗಳು ನಮ್ಮ ಮೇಲೆ ಬರುತ್ತದೆ ಇದರಿಂದ ನೋಯುತ್ತಾರೆ, ಸಾಯುತ್ತಾರೆ. ಅದನ್ನೆಲ್ಲಾ ಲೆಕ್ಕಿಸಬಾರದು. ಈ ದುಷ್ಟನೊಡನೆ ಚಮತ್ಕಾರದಿಂದ ಯುದ್ಧಮಾಡಿ ಕಾಲಕಳೆಯಬೇಡ, ವಿವೇಕದಿಂದ ಕಾದಿ ಜಯವಧುವಿನ ಕೈಹಿಡಿ ಎಂದು ಬೋಧಿಸಿದನು.

ಅರ್ಥ:
ಸಾಕು: ಇನ್ನು ಬೇಡ, ನಿಲ್ಲಿಸು; ಆಹವ: ಯುದ್ಧ; ಬರಲು: ಆಗಮಿಸು; ಕಬ್ಬು: ಇಕ್ಷುದಂಡ; ಬನ: ಕಾದು; ಬಾಣ: ಶರ, ಅಂಬು; ಆನೀಕ:ಸೈನ್ಯ, ಗುಂಪು; ಅಭಿಮುಖ: ಎದುರು; ಸಾವರು: ಸಾಯುತ್ತಾರೆ; ನೋವು: ಪೆಟ್ಟು; ಕುಠಾರ: ದುಷ್ಟ; ಈಕ್ಷಣ: ನೋಡುವಿಕೆ; ಕ್ಷಣ: ಕಾಲದ ಪ್ರಮಾಣ, ನಿಮಿಷ; ಕೈತೂಕ: ತೋಳ್ಬಲ; ವಿವೇಕ: ಯುಕ್ತಿ, ವಿಚಾರದಿಂದ ಕೂಡಿದ; ಆಕರಿಸು: ಸಂಗ್ರಹಿಸು, ಹಿಡಿ; ಜಯವಧು: ಗೆಲುವು;

ಪದವಿಂಗಡಣೆ:
ಸಾಕದಂತಿರಲ್+ಆಹವಕೆ +ಬರ
ಲೇಕೆ +ಕಬ್ಬಿನ+ ಬನವೆ+ ಬಾಣ
ಆನೀಕಕ್+ಅಭಿಮುಖವಾಗೆ +ಸಾವರು+ ನೋವರಿದಕೇನು
ಈ +ಕುಠಾರನನ್+ಈಕ್ಷಣಕೆ+ ಕೈ
ತೂಕದಲಿ +ಕಾದದೆ +ವಿವೇಕದೊಳ್
ಆಕರಿಸು +ಜಯವಧುವನೆಂದನು+ ಕೃಷ್ಣನರ್ಜುನನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಾಕದಂತಿರಲಾಹವಕೆ ಬರಲೇಕೆ ಕಬ್ಬಿನ ಬನವೆ ಬಾಣಾನೀಕ
(೨) ಕೃಷ್ಣನ ಉಪದೇಶ – ವಿವೇಕದೊಳಾಕರಿಸು ಜಯವಧುವನೆಂದನು

ಪದ್ಯ ೨೩: ಕೃಷ್ಣನು ಏತಕ್ಕೆ ಬಂದಿರುವುದೆಂದು ಕುಂತಿಗೆ ತಿಳಿಸಿದನು?

ಲೋಕ ಮೆಚ್ಚಲು ನಿನ್ನ ಸುತರು ದೃ
ಢೈಕಸತ್ಯರು ನುಡಿದ ಕಾಲವ
ನೂಕಿದರು ರಾಜ್ಯಾಭಿಲಾಷೆಗೆ ನೆರಹಿದರು ಬಲವ
ಆ ಕುಮಾರರಿಗರ್ಧ ರಾಜ್ಯವ
ನೀ ಕುಠಾರರಲೀಸಿಕೊಡುವ ವಿ
ವೇಕದಲಿ ತಾ ಬಂದೆನೆಂದನು ಕುಂತಿಗಸುರಾರಿ (ಉದ್ಯೋಗ ಪರ್ವ, ೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಿನ್ನ ಸುತರು ಸತ್ಯನಿಷ್ಠರು, ಧರ್ಮದ ದಾರಿಯಲ್ಲಿ ನಡೆಯುವವರು, ಲೋಕ ಮೆಚ್ಚವ ರೀತಿಯಲ್ಲಿ ಅವರು ಒಪ್ಪಿದ ಕಾಲವನ್ನು ತಳ್ಳಿದ್ದಾರೆ, ಈಗ ರಾಜ್ಯವನ್ನು ಪಡೆಯಲು ಬಲವನ್ನು ಸೇರಿಸಿದ್ದಾರೆ. ಪಾಂಡವರಿಗೆ ಅರ್ಧ ರಾಜ್ಯವನ್ನು ಈ ಕ್ರೂರಿಗಳಿಂದ ಕೊಡಿಸಲು ವಿವೇಕದಲಿ ಇದನ್ನು ಅವರಿಗೆ ಹೇಳಲು ನಾನು ಬಂದಿರುವೆ ಎಂದು ಕೃಷ್ಣನು ಕುಂತಿಗೆ ತಿಳಿಸಿದನು.

ಅರ್ಥ:
ಲೋಕ: ಜಗತ್ತು; ಮೆಚ್ಚು: ಪ್ರೀತಿ, ಇಷ್ಟ; ಸುತರು: ಮಕ್ಕಳು; ದೃಢ:ಸ್ಥಿರತೆ; ಸತ್ಯ: ನಿಜ; ನುಡಿ: ಮಾತು; ಕಾಲ: ಸಮಯ; ನೂಕು: ತಳ್ಳು; ಅಭಿಲಾಷೆ: ಆಸೆ; ನೆರಹು: ಒಟ್ಟುಗೂಡಿಸು, ನೆರವು; ಬಲ: ಸೈನ್ಯ; ಕುಮಾರ: ಮಕ್ಕಳು; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ರಾಜ್ಯ: ಪ್ರಾಂತ; ಕುಠಾರ:ಕ್ರೂರಿ, ಕೊಡಲಿ; ಈಸು: ತೆಗೆದುಕೋ; ಕೊಡು: ನೀಡು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಬಂದೆ: ಆಗಮಿಸಿದೆ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಲೋಕ +ಮೆಚ್ಚಲು +ನಿನ್ನ +ಸುತರು+ ದೃ
ಢೈಕ+ಸತ್ಯರು +ನುಡಿದ +ಕಾಲವ
ನೂಕಿದರು+ ರಾಜ್ಯಾಭಿಲಾಷೆಗೆ +ನೆರಹಿದರು +ಬಲವ
ಆ +ಕುಮಾರರಿಗ್+ಅರ್ಧ +ರಾಜ್ಯವ
ನೀ+ ಕುಠಾರರಲ್+ಈಸಿಕೊಡುವ+ ವಿ
ವೇಕದಲಿ +ತಾ +ಬಂದೆನ್+ಎಂದನು +ಕುಂತಿಗ್+ಅಸುರಾರಿ

ಅಚ್ಚರಿ: