ಪದ್ಯ ೧೦: ಅಶ್ವತ್ಥಾಮನು ಯಾವ ಭಾವದಿಂದ ಮೇಲೆದ್ದನು?

ಕೆದರಿ ಹೊರಳುವ ಸಾರಥಿಯನೆ
ತ್ತಿದನು ರಣವೃತ್ತಾಂತವನು ಕೇ
ಳಿದನು ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ
ಒದೆದನಳಲನು ರೋಮ ಹರುಷವ
ಹೊದೆದು ಹೊರೆ ಹೆಚ್ಚಿದನು ಕಾಹೇ
ರಿದನು ಕಲಿ ಮನವಳುಕಿ ತಗ್ಗಿತು ರೋಷಭಾವದಲಿ (ದ್ರೋಣ ಪರ್ವ, ೧೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕೆಳಕ್ಕೆ ಬಿದ್ದು ತಲೆಗೆದರಿ, ಮನಕರಗಿ ಹೊರಳುವ ಸಾರಥಿಯಿಂದ ಯುದ್ಧದ ವೃತ್ತಾಂತವನ್ನು ಅಶ್ವತ್ಥಾಮನು ತಿಳಿದುಕೊಂಡನು. ಶಮೆ, ತಾಳ್ಮೆ, ವಿವೇಕ, ನೋವುಗಳನ್ನು ಹೊರನೂಕಿ, ತನ್ನ ರೋಮ ರೋಮದಲ್ಲೂ ರೋಮಾಂಚನಗೊಂಡು ವೀರನಾದ ಅವನ ಮನಸ್ಸು ರೋಷಭಾವದಿಂದ ತುಂಬಿತು.

ಅರ್ಥ:
ಕೆದರು: ಹರಡು; ಹೊರಳು: ತಿರುವು, ಬಾಗು; ಸಾರಥಿ: ಸೂತ; ಎತ್ತು: ಮೇಲೇಳಿಸು; ರಣ: ಯುದ್ಧ; ವೃತ್ತಾಂತ: ವಿಚಾರ; ಕೇಳು: ಆಲಿಸು; ಶಮೆ: ಮನೋನಿಗ್ರಹ; ಸೈರಣೆ: ತಾಳ್ಮೆ; ವಿವೇಕ: ಯುಕ್ತಾಯುಕ್ತ ವಿಚಾರ; ನೂಕು: ತಳ್ಳು; ಸೆರೆ: ಬಂಧನ; ಒದೆ: ನೂಕು; ಅಳಲು: ಗೋಳಾಟ, ನೋವು; ರೋಮ: ಕೂದಲು; ಹರುಷ: ಸಂತಸ; ಹೊದೆ:ಧರಿಸಿಕೊಳ್ಳು; ಹೊರೆ: ಭಾರ; ಹೆಚ್ಚು: ಅಧಿಕ; ಕಾವು: ತಾಪ; ಕಲಿ: ಶೂರ; ಮನ: ಮನಸ್ಸು; ಅಳುಕು: ಹೆದರು; ತಗ್ಗು: ಕಡಿಮೆಯಾಗು; ರೋಷ: ಕೋಪ; ಭಾವ: ಭಾವನೆ;

ಪದವಿಂಗಡಣೆ:
ಕೆದರಿ +ಹೊರಳುವ +ಸಾರಥಿಯನ್
ಎತ್ತಿದನು +ರಣ+ವೃತ್ತಾಂತವನು +ಕೇ
ಳಿದನು +ಶಮೆ +ಸೈರಣೆ+ವಿವೇಕವ+ ನೂಕಿದನು +ಸೆರೆಗೆ
ಒದೆದನ್+ಅಳಲನು +ರೋಮ +ಹರುಷವ
ಹೊದೆದು +ಹೊರೆ +ಹೆಚ್ಚಿದನು +ಕಾಹೇ
ರಿದನು +ಕಲಿ+ ಮನವ್+ಅಳುಕಿ +ತಗ್ಗಿತು +ರೋಷ+ಭಾವದಲಿ

ಅಚ್ಚರಿ:
(೧) ಹ ಕಾರದ ಸಾಲು ಪದ – ಹರುಷವ ಹೊದೆದು ಹೊರೆ ಹೆಚ್ಚಿದನು
(೨) ಕೋಪದ ಸ್ಥಿತಿ – ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ
(೩) ರೋಮಾಂಚನವನ್ನು ವಿವರಿಸುವ ಪರಿ – ರೋಮ ಹರುಷವ ಹೊದೆದು