ಪದ್ಯ ೫: ಸಾತ್ಯಕಿಯು ಹೇಗೆ ಉತ್ತರಿಸಿದನು?

ದ್ರೋಣಸುತ ಕುರುಪತಿಯ ಸಮರಕೆ
ಹೂಣಿಗನಲೇ ಬಲ್ಲೆವಿದರಲಿ
ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ
ಕಾಣಲಹುದಂತಿರಲಿ ನಿಮಗೀ
ಕೇಣದಲಿ ಫಲವಿಲ್ಲ ಕೃಪ ತ
ನ್ನಾಣೆ ನೀ ಮರಳೆಂದು ಸಾತ್ಯಕಿ ಸುರಿದನಂಬುಗಳ (ಗದಾ ಪರ್ವ, ೨ ಸಂಧಿ, ೫ ಪದ್ಯ)

ತಾತ್ಪರ್ಯ:
ಸಾತ್ಯಕಿಯು ನುಡಿಯುತ್ತಾ, ಅಶ್ವತ್ಥಾಮ ನೀನು ಕೌರವನ ಪಕ್ಷದಲ್ಲಿ ಛಲದಿಂದ ಯುದ್ಧಮಾಡುವವನಲ್ಲವೇ? ನಿಮ್ಮ ಬಿಲ್ವಿದ್ಯೆಯನ್ನು ಮೆರೆದು ಸಂಜಯನನ್ನು ಬಿಡಿಸುವವರಲ್ಲವೇ? ಅದನ್ನು ನೋಡಿಕೊಳ್ಳೋಣ, ಕೋಪಮಾಡಿದರೆ ಅದು ಫಲಿಸದು, ಕೃಪ ನನ್ನಾಣೆ, ನೀನು ಹಿಂದಿರುಗು ಎಂದು ಬಾಣಗಳ ಮಳೆಗೆರೆದನು.

ಅರ್ಥ:
ಸುತ: ಮಗ; ಸಮರ: ಯುದ್ಧ; ಹೂಣಿಗ: ಬಿಲ್ಲುಗಾರ, ಸಾಹಸಿ; ಬಲ್ಲೆ: ತಿಳಿದಿರುವೆ; ಬಾಣ: ಸರಳ; ವಿದ್ಯೆ: ಜ್ಞಾನ; ಬೀರು: ಹರಡು; ಬಿಡಿಸು: ಕಳಚು, ಸಡಿಲಿಸು; ಕಾಣು: ತೋರು; ಕೇಣ: ಹೊಟ್ಟೆಕಿಚ್ಚು, ಮತ್ಸರ, ಕೋಪ; ಫಲ: ಪ್ರಯೋಜನ; ಆಣೆ: ಮಾತು, ಭಾಷೆ; ಮರಳು: ಹಿಂದಿರುಗು; ಸುರಿ: ವರ್ಷಿಸು; ಅಂಬು: ಬಾಣ;

ಪದವಿಂಗಡಣೆ:
ದ್ರೋಣಸುತ +ಕುರುಪತಿಯ +ಸಮರಕೆ
ಹೂಣಿಗನಲೇ +ಬಲ್ಲೆವ್+ಇದರಲಿ
ಬಾಣ+ವಿದ್ಯೆಯ +ಬೀರಿ +ಬಿಡಿಸುವರ್+ ಇವರು +ಸಂಜಯನ
ಕಾಣಲಹುದಂತಿರಲಿ+ ನಿಮಗೀ
ಕೇಣದಲಿ +ಫಲವಿಲ್ಲ +ಕೃಪ+ ತ
ನ್ನಾಣೆ +ನೀ +ಮರಳೆಂದು +ಸಾತ್ಯಕಿ+ ಸುರಿದನ್+ಅಂಬುಗಳ

ಅಚ್ಚರಿ:
(೧) ಅಶ್ವತ್ಥಾಮನನ್ನು ಹೂಣಿಗ ಎಂದು ಕರೆದಿರುವುದು
(೨) ಬಾಣ, ಅಂಬು – ಸಮಾನಾರ್ಥಕ ಪದ

ಪದ್ಯ ೨೯: ಪಾಂಡವರನ್ನು ಯುದ್ಧದಲ್ಲಿ ಹೇಗೆ ಸಿಲುಕಿಸಲಾಯಿತು?

ತೆಗೆದರರ್ಜುನನನು ಸುಧರ್ಮನ
ವಿಗಡ ರಥಿಕರು ಭೀಮಸೇನನ
ನುಗಿದನಿತ್ತಲು ನಿನ್ನ ಮಗನಾ ಸಾತ್ಯಕಿಯ ರಥವ
ಹೊಗರುಗಣೆಯಲಿ ಮುಸುಕಿದನು ಹೂ
ಣಿಗನಲೇ ಗುರುಸೂನು ನಕುಲನ
ತೆಗೆಸಿದನು ಕೂರಂಬಿನಲಿ ತೆರಳದೆ ಕೃಪಾಚಾರ್ಯ (ಶಲ್ಯ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸುಶರ್ಮನ ವೀರಭಟರು ಅರ್ಜುನನನ್ನು ಯುದ್ಧಕ್ಕೆಳೆದರು. ನಿನ್ನ ಮಗನು (ದುರ್ಯೋಧನ) ಭೀಮನನ್ನು ಇದಿರಿಸಿದನು. ಅಶ್ವತ್ಥಾಮನು ಬಾಣಗಳಿಂದ ಸಾತ್ಯಕಿಯ ರಥವನ್ನು ಮುಚ್ಚಿದನು. ಕೃಪಾಚಾರ್ಯನು ವೈರಿಯ ಬಾಣಗಳನ್ನು ಲೆಕ್ಕಿಸದೆ ನಕುಲನನ್ನು ಯುದ್ಧಕ್ಕೆಳೆದನು.

ಅರ್ಥ:
ತೆಗೆ: ಹೊರತರು; ವಿಗಡ: ಶೌರ್ಯ, ಪರಾಕ್ರಮ; ರಥಿಕ: ರಥಿ, ರಥದಲ್ಲಿ ಕುಳಿತು ಯುದ್ಧ ಮಾಡುವವನು; ಉಗಿ: ಹೊರಹಾಕು; ಮಗ: ಸುತ; ರಥ: ಬಂಡಿ; ಹೊಗರು: ಕಾಂತಿ, ಪ್ರಕಾಶ; ಕಣೆ: ಬಾಣ; ಮುಸುಕು: ಆವರಿಸು; ಹೂಣಿಗ: ಬಿಲ್ಲುಗಾರ, ಸಾಹಸಿ; ಸೂನು: ಮಗ; ತೆಗೆಸು: ಹೊರತರು; ಕೂರಂಬು: ಹರಿತವಾದ ಬಾಣ; ತೆರಳು: ಹೋಗು;

ಪದವಿಂಗಡಣೆ:
ತೆಗೆದರ್+ಅರ್ಜುನನನು+ ಸುಶರ್ಮನ
ವಿಗಡ +ರಥಿಕರು+ ಭೀಮಸೇನನನ್
ಉಗಿದನ್+ಇತ್ತಲು +ನಿನ್ನ +ಮಗನಾ +ಸಾತ್ಯಕಿಯ +ರಥವ
ಹೊಗರು+ಕಣೆಯಲಿ +ಮುಸುಕಿದನು +ಹೂ
ಣಿಗನಲೇ +ಗುರುಸೂನು +ನಕುಲನ
ತೆಗೆಸಿದನು +ಕೂರಂಬಿನಲಿ +ತೆರಳದೆ +ಕೃಪಾಚಾರ್ಯ

ಅಚ್ಚರಿ:
(೧) ತೆಗೆದು, ತೆಗೆಸು, ತೆರಳು – ಪದಗಳ ಬಳಕೆ
(೨) ಮಗ, ಸೂನು – ಸಮಾನಾರ್ಥಕ ಪದ

ಪದ್ಯ ೨೨: ದ್ರೋಣನು ಸೈನಿಕರಿಗೆ ಏನು ಹೇಳಿದ?

ಚೂಣಿ ತೆಗೆಯಲಿ ಮಿಸುಕಿದರೆ ನೃಪ
ನಾಣೆ ಬರಿದೇಕಾಳು ಕುದುರೆಯ
ಗೋಣನವರಿಗೆ ಮಾರುವಿರಿ ಕೌರವನ ಥಟ್ಟಿನಲಿ
ದ್ರೋಣನಲ್ಲಾ ರಕ್ಷಕನು ರಣ
ಹೂಣಿಗರು ನಿಲಿ ಭೀಮ ಪಾರ್ಥರ
ಕಾಣಬಹುದೋ ಕರೆಯೆನುತ ಗರ್ಜಿಸಿದನಾಚಾರ್ಯ (ದ್ರೋಣ ಪರ್ವ, ೧೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ದ್ರೋಣನು ಗರ್ಜಿಸಿ, ಸೈನ್ಯವು ಹಿಂದಕ್ಕೆ ಬರಲಿ, ಮೂಮ್ದೆ ಕಾಲಿಟ್ಟರೆ ದೊರೆಯಾಣೆ. ಕೇವಲ ಯೋದರ ಕುದುರೆಗಳ ಕತ್ತುಗಳನ್ನು ಅವರಿಗೇಕೆ ಮಾರುತ್ತೀರಿ, ಸುಮ್ಮನೆ ಸಾಯಬೇಡಿ, ಯುದ್ಧ ಕುತೂಹಲಿಗಳು ನಿಂತುಕೊಳ್ಳಿ, ನಿಮ್ಮ ರಕ್ಷಕನಾದ ದ್ರೋಣನಿರಲು, ಭೀಮಾರ್ಜುನರನ್ನು ಅವರ ಸತ್ವವನ್ನು ನೋಡಬಹುದು.

ಅರ್ಥ:
ಚೂಣಿ: ಮುಂದಿನ ಸಾಲು, ಮುಂಭಾಗ; ತೆಗೆ: ಹೊರತರು; ಮಿಸುಕು: ಅಲುಗಾಟ; ನೃಪ: ರಾಜ; ಆಣೆ: ಪ್ರಮಾಣ; ಬರಿ: ಕೇವಲ; ಆಳು: ಸೈನಿಕ; ಕುದುರೆ: ಅಶ್ವ; ಗೋಣು: ಕಂಠ, ಕುತ್ತಿಗೆ; ಮಾರು: ವಿಕ್ರಯಿಸು; ಥಟ್ಟು: ಗುಂಪು; ರಕ್ಷಕ: ಕಾಪಾಡುವವ; ರಣ: ಯುದ್ಧ; ಹೂಣಿಗ: ಬಿಲ್ಲುಗಾರ; ಕರೆ: ಬರೆಮಾಡು; ಗರ್ಜಿಸು: ಆರ್ಭಟಿಸು; ಆಚಾರ್ಯ: ಗುರು;

ಪದವಿಂಗಡಣೆ:
ಚೂಣಿ +ತೆಗೆಯಲಿ +ಮಿಸುಕಿದರೆ +ನೃಪ
ನಾಣೆ +ಬರಿದೇಕ್+ಆಳು+ ಕುದುರೆಯ
ಗೋಣನವರಿಗೆ+ ಮಾರುವಿರಿ +ಕೌರವನ +ಥಟ್ಟಿನಲಿ
ದ್ರೋಣನಲ್ಲಾ +ರಕ್ಷಕನು +ರಣ
ಹೂಣಿಗರು +ನಿಲಿ +ಭೀಮ +ಪಾರ್ಥರ
ಕಾಣಬಹುದೋ+ ಕರೆಯೆನುತ +ಗರ್ಜಿಸಿದನ್+ಆಚಾರ್ಯ

ಅಚ್ಚರಿ:
(೧) ದ್ರೋಣನ ಹಿರಿಮೆಯನ್ನು ಹೇಳುವ ಪರಿ – ಕೌರವನ ಥಟ್ಟಿನಲಿ ದ್ರೋಣನಲ್ಲಾ ರಕ್ಷಕನು

ಪದ್ಯ ೧೮: ದ್ರೋಣರೇಕೆ ಯುದ್ಧರಂಗದಲ್ಲಿ ಕಾಣಿಸುತ್ತಿರಲಿಲ್ಲ?

ದ್ರೋಣನೆಂಬರೆ ಮುನ್ನವೇ ನಿ
ರ್ಯಾಣದೀಕ್ಷಿತನಾದನಾತನ
ಕಾಣೆವೈ ಗುರುಸುತನದೃಶ್ಯಾಂಜನವೆ ಸಿದ್ಧಿಸಿತು
ಹೂಣಿಗರು ಮತ್ತಾರು ಶಲ್ಯ
ಕ್ಷೋಣಿಪತಿ ಕೃತವರ್ಮ ಕೃಪನತಿ
ಜಾಣರೋಟದ ವಿದ್ಯೆಗೆನುತಿರ್ದುದು ಭಟಸ್ತೋಮ (ದ್ರೋಣ ಪರ್ವ, ೧೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ದ್ರೋಣನ ಸುದ್ದಿಯೇನು, ಎಂದು ಕೇಳಿದರೆ ಅವನು ಮರಣ ದೀಕ್ಷೆಯನ್ನು ಕೈಗೊಂಡನೋ ಏನೋ, ಎಲ್ಲೂ ಕಾಣಿಸುತ್ತಿಲ್ಲ. ಅಶ್ವತ್ಥಾಮನನ್ನು ಹುಡುಕಲು ಕಣ್ಣಿಗೆ ಅಂಜನವನ್ನು ಹಚ್ಚಿಕೊಳ್ಳಬೇಕು. ಇನ್ನು ಮುನ್ನುಗ್ಗಿ ಯುದ್ಧಮಾಡುವವರಾರು? ಶಲ್ಯ ಕೃತವರ್ಮ, ಕೃಪರು ಓಟದಲ್ಲಿ ಜಾಣರಾದರು ಎಂದು ಸೈನಿಕರು ಮಾತಾಡಿಕೊಳ್ಳುತ್ತಿದ್ದರು.

ಅರ್ಥ:
ಮುನ್ನ: ಮುಂಚೆ; ನಿರ್ಯಾಣ: ಅದೃಶ್ಯವಾಗುವಿಕೆ, ಸಾವು; ದೀಕ್ಷೆ: ಸಂಸ್ಕಾರ; ಕಾಣು: ತೋರು; ಗುರು: ಆಚಾರ್ಯ; ಸುತ: ಮಗ; ಅಂಜನ:ಕಾಡಿಗೆ, ಕಪ್ಪು; ದೃಶ್ಯ: ನೋಟ; ಸಿದ್ಧಿ: ಗುರಿಮುಟ್ಟುವಿಕೆ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಕ್ಷೋಣಿ: ನೆಲ, ಭೂಮಿ; ಪತಿ: ಒಡೆಯ; ಕ್ಷೋಣಿಪತಿ: ರಾಜ; ಜಾಣ: ಬುದ್ಧಿವಂತ; ಓಟ: ಧಾವಿಸು; ವಿದ್ಯೆ: ಜ್ಞಾನ; ಭಟ: ಸೈನಿಕ; ಸ್ತೋಮ: ಗುಂಪು;

ಪದವಿಂಗಡಣೆ:
ದ್ರೋಣನೆಂಬರೆ+ ಮುನ್ನವೇ +ನಿ
ರ್ಯಾಣ+ದೀಕ್ಷಿತನಾದನ್+ಆತನ
ಕಾಣೆವೈ +ಗುರುಸುತನ+ದೃಶ್ಯಾಂಜನವೆ+ ಸಿದ್ಧಿಸಿತು
ಹೂಣಿಗರು+ ಮತ್ತಾರು +ಶಲ್ಯ
ಕ್ಷೋಣಿಪತಿ+ ಕೃತವರ್ಮ +ಕೃಪನ್+ಅತಿ
ಜಾಣರ್+ಓಟದ +ವಿದ್ಯೆಗೆನುತಿರ್ದುದು +ಭಟಸ್ತೋಮ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕ್ಷೋಣಿಪತಿ ಕೃತವರ್ಮ ಕೃಪನತಿ
(೨) ದ್ರೋಣನು ಕಾಣದಿರುವುದಕ್ಕೆ ಕಾರಣ – ನಿರ್ಯಾಣದೀಕ್ಷಿತನಾದನಾತನ ಕಾಣೆವೈ

ಪದ್ಯ ೧೪: ಘಟೋತ್ಕಚನನೆದುರು ಕುರುಸೈನ್ಯವೇಕೆ ನಿಲ್ಲಲಿಲ್ಲ?

ಇವನ ಧಾಳಿಯನಿವನ ಧೈರ್ಯವ
ನಿವನ ಹೂಣಿಗತನವನಿವನಾ
ಹವದ ಹೊರಿಗೆಯನಿವನ ಭಾರಿಯ ವೆಗ್ಗಳೆಯತನವ
ದಿವಿಜರಾನಲು ನೂಕದಿದು ನ
ಮ್ಮವರ ಪಾಡೇನೈ ಪಲಾಯನ
ತವನಿಧಿಯಲೇ ನಿಮ್ಮ ಬಲ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೧೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಘಟೋತ್ಕಚನ ದಾಳಿ, ಧೈರ್ಯ, ಯುದ್ಧದ ಚಾತುರ್ಯ, ಇವನ ಮೀರಿದ ಸತ್ವಗಳನ್ನು ದೇವತೆಗಳೂ ಎದುರಿಸಿ ನಿಲ್ಲಲಾರರು ಎಂದ ಮೇಲೆ ನಮ್ಮ ಕುರುಸೈನ್ಯದ ಪಾಡೇನು. ನಿಮ್ಮ ಸೈನ್ಯವು ಪಲಾಯನ ಮಾಡಿದರು.

ಅರ್ಥ:
ಧಾಳಿ: ಆಕ್ರಮಣ; ಧೈರ್ಯ: ದಿಟ್ಟತನ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ, ಸಾಹಸಿ; ಆಹವ: ಯುದ್ಧ; ಹೊರೆಗೆ: ಭಾರ, ಹೊರೆ; ಭಾರಿ: ಅತಿಶಯವಾದ; ವೆಗ್ಗಳಿಕೆ: ಶ್ರೇಷ್ಠತೆ; ದಿವಿಜ: ಅಮರರು; ನೂಕು: ತಳ್ಳು; ಪಾಡು: ಸ್ಥಿತಿ; ಪಲಾಯನ: ಓಡುವಿಕೆ, ಪರಾರಿ; ತವನಿಧಿ: ಕೊನೆಯಾಗದ ಭಂಡಾರ; ಬಲ: ಸೈನ್ಯ; ಕೇಳು: ಆಲಿಸು;

ಪದವಿಂಗಡಣೆ:
ಇವನ+ ಧಾಳಿಯನ್+ಇವನ +ಧೈರ್ಯವನ್
ಇವನ +ಹೂಣಿಗತನವನ್+ಇವನ್
ಆಹವದ +ಹೊರಿಗೆಯನ್+ಇವನ +ಭಾರಿಯ +ವೆಗ್ಗಳೆಯತನವ
ದಿವಿಜರಾನಲು +ನೂಕದಿದು+ ನ
ಮ್ಮವರ +ಪಾಡೇನೈ +ಪಲಾಯನ
ತವನಿಧಿಯಲೇ +ನಿಮ್ಮ +ಬಲ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಪಲಾಯನವನ್ನು ವಿವರಿಸುವ ಪರಿ – ನಮ್ಮವರ ಪಾಡೇನೈ ಪಲಾಯನ ತವನಿಧಿಯಲೇ ನಿಮ್ಮ ಬಲ

ಪದ್ಯ ೧೯: ಭೀಮನ ಆಕ್ರಮಣವು ಹೇಗಿತ್ತು?

ಹರಿಯ ಕುಲಿಶದ ಧಾಳಿಯಲಿ ಕುಲ
ಗಿರಿಗಳಿಬ್ಬಗಿಯಾದವೊಲು ಮಂ
ದರದ ಘಾರಾಘಾರಿಯಲಿ ಬಾಯ್ವಿಡುವ ಕಡಲಂತೆ
ಅರಿವರೂಥಿನಿ ಕೆದರಿ ತಳಿತವು
ತುರಗ ಕರಿ ರಥ ಪಾಯದಳ ಬಲ
ಹೊರಳಿಯೊಡೆದುದು ಹೊದರು ತಗ್ಗಿತು ಹೂಣಿಗರ ಮನದ (ದ್ರೋಣ ಪರ್ವ, ೧೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಇಂದ್ರನ ವಜ್ರಾಯುಧದ ದಾಳಿಯಿಂದ ಕುಲಗಿರಿಗಳು ಸೀಳಿದಮ್ತೆ ಮಂದರದಿಮ್ದ ಕಡೆದಾಗ ಸಮುದ್ರವು ಬಾಯಿಬಿಟ್ಟಂತೆ ಶತ್ರು ಸೈನ್ಯವು ಕೆದರಿತು. ಚತುರಂಗ ಸೈನ್ಯವು ಚೆಲ್ಲಾಪಿಲ್ಲಿಯಾಯಿತು. ಸಾಹಸಿಗರ ಮನಸ್ಸಿನ ಆವೇಗ ತಗ್ಗಿ ಹೋಯಿತು.

ಅರ್ಥ:
ಹರಿ: ಇಂದ್ರ; ಕುಲಿಶ: ವಜ್ರಾಯುಧ; ಧಾಳಿ: ಆಕ್ರಮಣ; ಕುಲಗಿರಿ: ದೊಡ್ಡ ಬೆಟ್ಟ; ಇಬ್ಬಗಿ: ಎರಡು ಭಾಗವಾಗು; ಮಂದರ: ಬೆಟ್ಟದ ಹೆಸರು; ಘಾರಘಾರಿ: ಕಡೆತದಿಂದ ಉಂಟಾದ ಹಿಂಸೆ; ಕಡಲು: ಸಾಗರ; ಅರಿ: ಶತ್ರು; ವರೂಥ: ತೇರು, ರಥ; ಕೆದರು: ಹರಡು, ಚದರಿಸು; ತಳಿತ: ಚಿಗುರು; ತುರಗ: ಅಶ್ವ; ಕರಿ: ಆನೆ; ರಥ: ಬಂಡಿ; ಪಾಯದಳ: ಸೈನಿಕ; ಬಲ: ಸೈನ್ಯ, ಶಕ್ತಿ; ಹೊರಳು: ಉರುಳು, ತಿರುಗು; ಹೊದರು: ಗುಂಪು, ಸಮೂಹ; ತಗ್ಗು: ಕಡಿಮೆಯಾಗು; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ, ಸಾಹಸಿ; ಮನ: ಮನಸ್ಸು;

ಪದವಿಂಗಡಣೆ:
ಹರಿಯ +ಕುಲಿಶದ +ಧಾಳಿಯಲಿ +ಕುಲ
ಗಿರಿಗಳ್+ಇಬ್ಬಗಿಯಾದವೊಲು +ಮಂ
ದರದ+ ಘಾರಾಘಾರಿಯಲಿ +ಬಾಯ್ವಿಡುವ +ಕಡಲಂತೆ
ಅರಿ+ವರೂಥಿನಿ+ ಕೆದರಿ+ ತಳಿತವು
ತುರಗ +ಕರಿ +ರಥ +ಪಾಯದಳ +ಬಲ
ಹೊರಳಿ+ಒಡೆದುದು +ಹೊದರು +ತಗ್ಗಿತು +ಹೂಣಿಗರ +ಮನದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿಯ ಕುಲಿಶದ ಧಾಳಿಯಲಿ ಕುಲಗಿರಿಗಳಿಬ್ಬಗಿಯಾದವೊಲು ಮಂ
ದರದ ಘಾರಾಘಾರಿಯಲಿ ಬಾಯ್ವಿಡುವ ಕಡಲಂತೆ

ಪದ್ಯ ೫೦: ದ್ರೋಣರಲ್ಲಿ ಅರ್ಜುನನು ಏನು ಬೇಡಿದನು?

ನೀವು ಹೂಣಿಗರಾಗಿ ರಿಪುವನು
ಕಾವಡಿತ್ತಲೆ ತೊಲಗುವೆನು ಕರು
ಣಾವಲೋಕನವೆನ್ನ ಮೇಲುಂಟಾದಡಿದಿರಹೆನು
ಆವುದನು ನಮಗೇನು ಗತಿ ತಲೆ
ಗಾವ ಮತವೇ ನಿಮ್ಮ ಚಿತ್ತದೊ
ಳಾವ ಹದನೆನೆ ಮುಗುಳುನಗೆಯಲಿ ದ್ರೋಣನಿಂತೆಂದ (ದ್ರೋಣ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ನೀವು ಮಹಾಸಾಹಸಿಗರಾಗಿ ಶತ್ರುಗಳನ್ನು ಕಾಪಾಡುವ ಹಠ ತೊಟ್ಟರೆ ಹೇಳಿಬಿಡಿ, ನಾನು ಇಲ್ಲಿಂದಲೇ ಹಿಂದಿರುಗಿ ಬಿಡುತ್ತೇನೆ, ಕರುಣೆದೋರಿ ನನ್ನನ್ನು ನೋಡಿದರೆ ನಿಮ್ಮನ್ನು ಎದುರಿಸಿ ಹೋರಾಡುತ್ತೇನೆ, ಯಾವುದನ್ನೂ ಹೇಳಿಬಿಡಿ, ನಮ್ಮ ತಲೆಯನ್ನು ರಕ್ಷಿಸುವ ಅಭಿಪ್ರಾಯ ಮನಸ್ಸಿನಲ್ಲಿದೆಯೇ, ನಿಮ್ಮ ಅಭಿಪ್ರಾಯವೇನು, ಎಂದು ಅರ್ಜುನನು ಕೇಳಿಕೊಳ್ಳಲು ದ್ರೋಣನು ಮುಗುಳುನಗೆಯಿಂದ ಹೀಗೆಂದನು.

ಅರ್ಥ:
ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ರಿಪು: ವೈರಿ; ಕಾವು: ಕಾಪಾಡು; ತೊಲಗು: ದೂರ ಸರಿ; ಕರುಣ: ದಯೆ; ಅವಲೋಕ: ನೋಡು; ಇದಿರು: ಎದುರು; ಗತಿ: ಸ್ಥಿತಿ; ತಲೆ: ಶಿರ; ಮತ: ವಿಚಾರ; ಚಿತ್ತ: ಮನಸ್ಸು; ಹದ: ಸ್ಥಿತಿ; ಮುಗುಳುನಗೆ: ಮಂದಸ್ಮಿತ;

ಪದವಿಂಗಡಣೆ:
ನೀವು +ಹೂಣಿಗರಾಗಿ +ರಿಪುವನು
ಕಾವಡ್+ಇತ್ತಲೆ +ತೊಲಗುವೆನು +ಕರು
ಣಾವಲೋಕನವ್+ಎನ್ನ +ಮೇಲುಂಟಾದಡ್+ ಇದಿರಹೆನು
ಆವುದನು +ನಮಗೇನು +ಗತಿ +ತಲೆ
ಗಾವ +ಮತವೇ +ನಿಮ್ಮ +ಚಿತ್ತದೊಳ್
ಆವ +ಹದನ್+ಎನೆ+ ಮುಗುಳುನಗೆಯಲಿ +ದ್ರೋಣನಿಂತೆಂದ

ಅಚ್ಚರಿ:
(೧) ಗತಿ, ಹದ – ಸಾಮ್ಯಾರ್ಥ ಪದ

ಪದ್ಯ ೫೫: ಅಭಿಮನ್ಯುವು ಗಾಲಿಯಿಂದ ಹೇಗೆ ಯುದ್ಧ ಮಾಡಿದನು?

ಸುರಿವ ರಕುತದ ಸರಿಯ ಸೆರಗಿನೊ
ಳೊರಸಿ ರಥದಚ್ಚುಗಳನೊದೆದನು
ತಿರುಹಿ ಗಾಲಿಯ ತೆಗೆದು ಮುಂಗೈಗೊಂಡು ನಡೆನಡೆದು
ಅರಿಬಲವನಿಡೆ ಮುಗ್ಗಿ ಕೆಡೆದುದು
ತುರಗವಜಿಗಿಜಿಯಾದುದಿಭ ತತಿ
ಯುರುಳಿದವು ಹೊರಳಿದವು ಹೂಣಿಗರಟ್ಟೆ ಸಮರದಲಿ (ದ್ರೋಣ ಪರ್ವ, ೬ ಸಂಧಿ, ೫೫ ಪದ್ಯ)

ತಾತ್ಪರ್ಯ:
ಸುರಿಯುತ್ತಿದ್ದ ರಕ್ತವನ್ನು ಸೆರಗಿನಿಂದ ಒರೆಸಿಕೊಂಡು ಕಾಲಿನಿಂದ ತನ್ನ ರಥದ ಗಾಲಿಗಳನ್ನು ಒದೆದು, ಗಾಲಿಯನ್ನು ಮುಂಗೈಯಲ್ಲಿ ತೆಗೆದುಕೊಂಡು ಶತ್ರುಬಲವನ್ನು ಅಪ್ಪಳಿಸಲು ಆನೆ, ಕುದುರೆ, ಯೋಧರು ಕೆಳಗುರುಳಿ ಹೊರಳಿದರು.

ಅರ್ಥ:
ಸುರಿ: ಬೀಳುವ, ವರ್ಷ; ರಕುತ: ನೆತ್ತರು; ಸರಿ: ಹೋಗು, ಗಮಿಸು; ಸೆರಗು: ಬಟ್ಟೆ; ಒರಸು: ಸಾರಿಸು, ಅಳಿಸು; ರಥ: ಬಂಡಿ; ಅಚ್ಚು: ಚಕ್ರ; ಒದೆ: ತಳ್ಳು; ತಿರುಹಿ: ತಿರುಗಿಸು; ಗಾಲಿ: ಚಕ್ರ; ತೆಗೆ: ಹೊರತರು; ಮುಂಗೈ: ಹಸ್ತ; ಕೈಕೊಂಡು: ಧರಿಸು; ನಡೆ: ಚಲಿಸು; ಅರಿ: ವೈರಿ; ಬಲ: ಸೈನ್ಯ; ಮುಗ್ಗು: ಮುನ್ನುಗ್ಗು; ಕೆಡೆ: ಬೀಳು, ಕುಸಿ; ತುರಗ: ಅಶ್ವ; ಇಭ: ಆನೆ; ತತಿ: ಗುಂಪು; ಉರುಳು: ಬೀಳು; ಹೊರಳು: ತಿರುವು, ಬಾಗು; ಹೂಣಿಗ:ಬಾಣವನ್ನು ಹೂಡುವವನು, ಬಿಲ್ಲುಗಾರ; ಸಮರ: ಯುದ್ಧ; ಅಟ್ಟು: ಓಡಿಸು;

ಪದವಿಂಗಡಣೆ:
ಸುರಿವ +ರಕುತದ +ಸರಿಯ +ಸೆರಗಿನೊಳ್
ಒರಸಿ +ರಥದ್+ಅಚ್ಚುಗಳನ್+ಒದೆದನು
ತಿರುಹಿ +ಗಾಲಿಯ +ತೆಗೆದು +ಮುಂಗೈಗೊಂಡು +ನಡೆನಡೆದು
ಅರಿಬಲವನಿಡೆ +ಮುಗ್ಗಿ +ಕೆಡೆದುದು
ತುರಗವ+ಜಿಗಿಜಿಯಾದುದ್+ಇಭ +ತತಿ
ಉರುಳಿದವು +ಹೊರಳಿದವು +ಹೂಣಿಗರಟ್ಟೆ+ ಸಮರದಲಿ

ಅಚ್ಚರಿ:
(೧) ಅಭಿಮನ್ಯುವಿನ ಶೌರ್ಯದ ಪರಾಕಾಷ್ಟೆ – ರಥದಚ್ಚುಗಳನೊದೆದನು ತಿರುಹಿ ಗಾಲಿಯ ತೆಗೆದು ಮುಂಗೈಗೊಂಡು ನಡೆನಡೆದು
(೨) ಉರುಳಿದವು, ಹೊರಳಿದವು – ಪ್ರಾಸ ಪದಗಳು

ಪದ್ಯ ೩೮: ಅಶ್ವತ್ಥಾಮನು ಸೈನಿಕರಿಗೆ ಏನು ಹೇಳಿದ?

ತ್ರಾಣ ಕೋಮಲವಾಯ್ತು ತೆಗೆಯಲಿ
ದ್ರೋಣನಾವೆಡೆ ಪಾಯದಳ ಬಿಡು
ಹೂಣಿಗರ ಬರಹೇಳು ಬಾಣದ ಬಂಡಿ ಸಾವಿರವ
ಶೋಣಿತದ ಸಾಗರದಿನವನಿಯ
ಕಾಣೆ ಹೂಳಲಿ ಪಾದರಜದಲಿ
ಕೇಣಿಗೊಂಡನು ವೈರಿಸೇನೆಯನಮಮ ಕಲಿ ಪಾರ್ಥ (ಭೀಷ್ಮ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ದ್ರೋಣನು ಆಯಾಸಗೊಂಡಿರಲು, ಅಶ್ವತ್ಥಾಮನು ತಂದೆಯು ತ್ರಾನಗುಂದಿದ್ದಾನೆ, ಅವನನ್ನು ತೆಗೀಸಿ, ಕಾಲಾಳುಗಳನ್ನು ಮುಂದೆ ಬಿಡಿ, ಸಾವಿರ ಬಾಣದ ಬಂಡಿಗಳನ್ನೂ, ವೀರರನ್ನೂ ಬರಹೇಳಿ, ರಕ್ತ ಸಾಗರದಲ್ಲಿ ಭೂಮಿಯೇ ಕಾಣುತ್ತಿಲ್ಲ, ನಮ್ಮ ಸೈನ್ಯದ ಕಾಲು ತುಳಿತದಿಂದೆದ್ದ ಧೂಳು ಆ ರಕ್ತವನ್ನು ಕುಡಿಯಲಿ, ಅಬ್ಬ, ಅರ್ಜುನನು ಸಂಹಾರ ಮಾಡಲು ಶತ್ರು ಸೈನ್ಯದ ಗೆಳೆಯರನ್ನು ತೆಗೆದುಕೊಂಡಿದ್ದಾನೆ ಎಂದು ನುಡಿದನು.

ಅರ್ಥ:
ತ್ರಾಣ: ಕಾಪು, ರಕ್ಷಣೆ; ಕೋಮಲ: ಮೃದು; ತೆಗೆ: ಹೊರತರು; ಪಾಯದಳ: ಸೈನಿಕ; ಬಿಡು: ತೊರೆ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಬರಹೇಳು: ಆಗಮಿಸು; ಬಾಣ: ಅಂಬು; ಬಂಡಿ: ರಥ; ಸಾವಿರ: ಸಹಸ್ರ; ಶೋಣಿತ: ರಕ್ತ; ಸಾಗರ: ಸಮುದ್ರ; ಅವನಿ: ಭೂಮಿ; ಕಾಣೆ: ತೋರದು; ಹೂಳು: ಮುಚ್ಚು; ಪಾದ: ಚರಣ; ರಜ: ಧೂಳು; ಕೇಣಿ: ಮೈತ್ರಿ, ಗೆಳೆತನ; ವೈರಿ: ಶತ್ರು; ಸೇನೆ: ಸೈನ್ಯ; ಅಮಮ: ಅಬ್ಬಬ್ಬ; ಕಲಿ: ಶೂರ;

ಪದವಿಂಗಡಣೆ:
ತ್ರಾಣ +ಕೋಮಲವಾಯ್ತು +ತೆಗೆಯಲಿ
ದ್ರೋಣನ್+ಆವೆಡೆ +ಪಾಯದಳ +ಬಿಡು
ಹೂಣಿಗರ +ಬರಹೇಳು +ಬಾಣದ +ಬಂಡಿ +ಸಾವಿರವ
ಶೋಣಿತದ +ಸಾಗರದಿನ್+ಅವನಿಯ
ಕಾಣೆ +ಹೂಳಲಿ +ಪಾದ+ರಜದಲಿ
ಕೇಣಿ+ಕೊಂಡನು +ವೈರಿ+ಸೇನೆಯನ್+ಅಮಮ +ಕಲಿ +ಪಾರ್ಥ

ಅಚ್ಚರಿ:
(೧) ಯುದ್ಧದ ತೀವ್ರತೆ – ಶೋಣಿತದ ಸಾಗರದಿನವನಿಯ ಕಾಣೆ

ಪದ್ಯ ೧೫: ಸೈನಿಕರಿಗೆ ಯಾವುದು ಅಡ್ಡಿಯೊಡ್ಡಿತು?

ಚೂಣಿ ತಲೆಯೊತ್ತಿದುದು ಹರಣದ
ವಾಣಿ ಕೇಣಿಯ ಕುಹಕವಿಲ್ಲದೆ
ಗೋಣುಮಾರಿಗಳೋಲಗದ ಹಣರುಣವ ನೀಗಿದರು
ಹೂಣಿಗರು ಹುರಿಬಲಿದು ಹಾಣಾ
ಹಾಣಿಯಲಿ ಹೊಯ್ಯಾಡಿದರು ಘನ
ಶೋಣ ಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ (ಭೀಷ್ಮ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮುಂದಿದ್ದ ಸೈನ್ಯದ ತುಕಡಿಗಳು ತಲೆಗೆ ತಲೆಯೊಡ್ಡಿ ಯಾವ ಮಿತಿಯೂ ಇಲ್ಲದ ರಭಸದಿಂದ ತಮ್ಮ ಕತ್ತುಗಳನ್ನು ಮಾರಿ ಒಡೆಯನ ಋಣವನ್ನು ಕಳೆದುಕೊಂಡರು. ಶಪಥ ಮಾಡಿ ಯುದ್ಧಕ್ಕಿಳಿದರು, ಹುರಿಯ ಮೂರು ಭಾಗಗಳು ಹೊಂದಿದಂತೆ ಯುದ್ಧದಲ್ಲಿ ಶತ್ರುಗಳೊಡನೆ ಹಾಣಾಹಾಣಿ ಕಾಳಗವನ್ನು ಮಾಡಿದರು. ಆ ಸಮರದಲ್ಲಿ ಹರಿದ ರಕ್ತ ಪ್ರವಾಹವು ಯುದ್ಧಕ್ಕೆ ಬರುವವರಿಗೆ ಅಡ್ಡಿಯಾಯಿತು.

ಅರ್ಥ:
ಚೂಣಿ: ಮುಂದಿನ ಸಾಲು, ಮುಂಭಾಗ; ತಲೆ: ಶಿರ; ಒತ್ತು: ಆಕ್ರಮಿಸು, ಮುತ್ತು, ಒತ್ತಡ; ಹರಣ: ಜೀವ, ಪ್ರಾಣ, ಅಪಹರಿಸು; ವಾಣಿ: ಮಾತು; ಕೇಣಿ: ಗುತ್ತಿಗೆ, ಗೇಣಿ; ಕುಹಕ: ಮೋಸ, ವಂಚನೆ; ಗೋಣು: ಕಂಠ, ಕುತ್ತಿಗೆ; ಮಾರಿ:ಅಳಿವು, ನಾಶ, ಮೃತ್ಯು; ಓಲಗ: ಅಗ್ರಪೂಜೆಗಾಗಿ ಕೂಡಿದ, ಸೇವೆ; ಉಣು: ತಿನ್ನು; ನೀಗು:ನಿವಾರಿಸಿಕೊಳ್ಳು; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಹುರಿ: ಕಾಯಿಸು, ತಪ್ತಗೊಳಿಸು; ಬಲಿ: ಗಟ್ಟಿ, ದೃಢ; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಘನ:ಶ್ರೇಷ್ಠ; ಶೋಣ:ಕೆಂಪು ಬಣ್ಣ; ಸಲಿಲ: ನೀರು; ಶೋಣ ಸಲಿಲ: ರಕ್ತ; ಹೊನಲು: ತೊರೆ, ಹೊಳೆ; ಹೊಯ್ದು: ಹೊಡೆದು; ಹೊಗು: ಪ್ರವೇಶಿಸು; ಬವರಿ: ತಿರುಗುವುದು;

ಪದವಿಂಗಡಣೆ:
ಚೂಣಿ +ತಲೆ+ಒತ್ತಿದುದು +ಹರಣದ
ವಾಣಿ +ಕೇಣಿಯ +ಕುಹಕವಿಲ್ಲದೆ
ಗೋಣು+ಮಾರಿಗಳ್+ಓಲಗದ +ಹಣರ್+ಉಣವ +ನೀಗಿದರು
ಹೂಣಿಗರು+ ಹುರಿಬಲಿದು +ಹಾಣಾ
ಹಾಣಿಯಲಿ +ಹೊಯ್ಯಾಡಿದರು +ಘನ
ಶೋಣ +ಸಲಿಲದ +ಹೊನಲು +ಹೊಯ್ದುದು +ಹೊಗುವ +ಬವರಿಗರ

ಅಚ್ಚರಿ:
(೧) ಯುದ್ಧದ ಘೋರತೆಯ ದೃಶ್ಯ, ರಕ್ತವು ನದಿಯಾಗಿ ಹರಿಯಿತು ಎಂದ್ ಹೇಳುವ ಪರಿ – ಘನ
ಶೋಣ ಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ
(೨) ಹ ಕಾರದ ಸಾಲು ಪದಗಳು – ಹೂಣಿಗರು ಹುರಿಬಲಿದು ಹಾಣಾಹಾಣಿಯಲಿ ಹೊಯ್ಯಾಡಿದರು; ಹೊನಲು ಹೊಯ್ದುದು ಹೊಗುವ ಬವರಿಗರ