ಪದ್ಯ ೧೨: ಬಲರಾಮನೆಂದು ತೀರ್ಥಯಾತ್ರೆಗೆ ಹೊರಟನು?

ಅವನಿಪತಿ ಕೇಳ್ ಪುಷ್ಯದಲಿ ಸಂ
ಭವಿಸಿದುದು ನಿರ್ಗಮನ ಬಳಿಕಾ
ಶ್ರವನನಕ್ಷತ್ರದಲಿ ಕಂಡನು ಕೃಷ್ಣ ಪಾಂಡವರ
ಅವರು ನೋಟಕರಾದರೀ ಕೌ
ರವ ವೃಕೋದರರಂಕ ಮಸೆದು
ತ್ಸವದಿ ಕಳನೇರಿದರು ಹಾಯಿಕಿ ಹಿಡಿದು ನಿಜಗದೆಯ (ಗದಾ ಪರ್ವ, ೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಬಲರಾಮನು ಪುಷ್ಯನಕ್ಷತ್ರದಲ್ಲಿ ತೀರ್ಥಯಾತ್ರೆಗೆ ಹೊರಟನು. ಅವನು ಕೃಷ್ಣನನ್ನು ಪಾಂಡವರನ್ನು ನೋಡಿದ ದಿನ ಶ್ರವಣ ನಕ್ಷತ್ರವಿತ್ತು. ರಣರಮ್ಗದಲ್ಲಿದ್ದ ಎಲ್ಲರೂ ನೋಟಕರಾದರು. ಭೀಮ ದುರ್ಯೋಧನರು ತೋಳುತಟ್ಟಿ ತಮ್ಮ ಗದೆಗಲನ್ನು ಹಿಡಿದು ರಣರಂಗವನ್ನು ಪ್ರವೇಶಿಸಿದರು.

ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಸಂಭವಿಸು: ಹುಟ್ಟು; ನಿರ್ಗಮನ: ಹೊರಗೆ ಹೊಗು; ಬಳಿಕ: ನಂತರ; ನಕ್ಷತ್ರ: ತಾರೆ; ಕಂಡು: ನೋಡು; ನೋಟಕ: ನೋಡುವವ; ವೃಕೋದರ: ಭೀಮ; ಮಸೆ: ಹರಿತವಾದುದು; ಉತ್ಸವ: ಸಂಭ್ರಮ; ಕಳ: ರಣರಂಗ; ಹಾಯಿಕು: ಹಾಕು; ಹಿಡಿ: ಗ್ರಹಿಸು; ಗದೆ: ಮುದ್ಗರ;

ಪದವಿಂಗಡಣೆ:
ಅವನಿಪತಿ+ ಕೇಳ್ +ಪುಷ್ಯದಲಿ +ಸಂ
ಭವಿಸಿದುದು +ನಿರ್ಗಮನ +ಬಳಿಕಾ
ಶ್ರವಣ+ ನಕ್ಷತ್ರದಲಿ +ಕಂಡನು +ಕೃಷ್ಣ+ ಪಾಂಡವರ
ಅವರು +ನೋಟಕರಾದರ್+ಈ+ ಕೌ
ರವ +ವೃಕೋದರರ್+ಅಂಕ +ಮಸೆದ್
ಉತ್ಸವದಿ +ಕಳನೇರಿದರು +ಹಾಯಿಕಿ +ಹಿಡಿದು +ನಿಜಗದೆಯ

ಅಚ್ಚರಿ:
(೧) ನಕ್ಷತ್ರಗಳ ಹೆಸರು – ಪುಷ್ಯ, ಶ್ರವಣ;

ಪದ್ಯ ೫೦: ಧರ್ಮಜನನ್ನು ಶಲ್ಯನು ಹೇಗೆ ಹಂಗಿಸಿದನು?

ಧನುವನೆರಡಂಬಿನಲಿ ಮಗುಳೆ
ಚ್ಚನು ಮಹೀಶನ ಸಾರಥಿಯ ಮೈ
ನನೆಯೆ ನವ ರುಧಿರದಲಿ ಮಗುಳೆಚ್ಚನು ಯುಧಿಷ್ಥಿರನ
ಮನನ ಶಾಸ್ತ್ರಶ್ರವಣ ನಿಯಮಾ
ಸನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ (ಶಲ್ಯ ಪರ್ವ, ೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅವನ ಧನುಸ್ಸನ್ನು ಎರಡು ಬಾಣಗಳಲ್ಲಿ ಮುರಿದು, ಸಾರಥಿಯ ದೇಹವು ರಕ್ತದಲ್ಲಿ ತೋಯುವಂತೆ ಹೊಡೆದನು. ಮತ್ತೆ ಯುಧಿಷ್ಠಿರನನ್ನು ಬಾಣಗಳಿಂದ ನೋಯಿಸಿದನು. ಅರಸ, ನಿನಗೆ ಶರ್ವಣ, ಮನನ, ನಿಯಮ, ಆಸನ, ಧ್ಯಾನ, ಸಮಾಧಿ, ಉಪಾಸನೆಗಳೇ ಯೋಗ್ಯವಾದ ಕರ್ಮಗಳು, ನಿನಗೆ ಯುದ್ಧದ ತೊಂದರೆ ಏಕೆ ಎಂದು ಹಂಗಿಸಿದನು.

ಅರ್ಥ:
ಧನು: ಬಿಲ್ಲು; ಅಂಬು: ಬಾಣ; ಮಗುಳು: ಹಿಂತಿರುಗು, ಪುನಃ; ಎಚ್ಚು: ಬಾಣ ಪ್ರಯೋಗ ಮಾದು; ಮಹೀಶ: ರಾಜ; ಸಾರಥಿ: ಸೂತ; ಮೈ: ದೇಹ ನನೆ: ಮುಳುಗು, ತೋಯು; ನವ: ಹೊಸ; ರುಧಿರ: ರಕ್ತ; ಮನನ: ಜ್ಞಾಪಿಸಿಕೊಳ್ಳುವಿಕೆ; ಶಾಸ್ತ್ರ: ಧಾರ್ಮಿಕ ವಿಷಯ; ಶ್ರವಣ: ಕೇಳುವಿಕೆ; ನಿಯಮ:ಕಟ್ಟುಪಾಡು; ಆಸನ: ಕುಳಿತುಕೊಳ್ಳುವುದು; ಸಮಾಧಿ: ಏಕಾಗ್ರತೆ; ಧ್ಯಾನ: ಚಿಂತನೆ; ವಿದ್ಯ: ಜ್ಞಾನ; ವಿನಯ: ಒಳ್ಳೆಯತನ, ಸೌಜನ್ಯ; ರಣ: ಯುದ್ಧ; ಜಂಜಡ: ತೊಂದರೆ, ಕಷ್ಟ;

ಪದವಿಂಗಡಣೆ:
ಧನುವನ್+ಎರಡ್+ಅಂಬಿನಲಿ +ಮಗುಳ್
ಎಚ್ಚನು +ಮಹೀಶನ+ ಸಾರಥಿಯ+ ಮೈ
ನನೆಯೆ +ನವ +ರುಧಿರದಲಿ +ಮಗುಳ್+ಎಚ್ಚನು +ಯುಧಿಷ್ಥಿರನ
ಮನನ+ ಶಾಸ್ತ್ರ+ಶ್ರವಣ +ನಿಯಮಾ
ಸನ +ಸಮಾಧಿ +ಧ್ಯಾನ +ವಿದ್ಯಾ
ವಿನಯವಲ್ಲದೆ+ ರಣದ+ ಜಂಜಡವೇಕೆ+ ನಿಮಗೆಂದ

ಅಚ್ಚರಿ:
(೧) ಧರ್ಮಜನನ್ನು ಹಂಗಿಸುವ ಪರಿ – ಮನನ ಶಾಸ್ತ್ರಶ್ರವಣ ನಿಯಮಾಸನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ
(೨) ಮಗುಳೆಚ್ಚನು – ೨ ಬಾರಿ ಪ್ರಯೋಗ

ಪದ್ಯ ೪: ಧೃತರಾಷ್ಟನು ಹೇಗೆ ದುಃಖಿಸಿದನು?

ಶಿವಶಿವಾ ಭೀಷ್ಮಾವಸಾನ
ಶ್ರವಣ ವಿಷವಿದೆ ಮತ್ತೆ ಕಳಶೋ
ದ್ಭವನ ದೇಹವ್ಯಥೆಯ ಕೇಳ್ದೆನೆ ಪೂತು ವಿಧಿಯೆನುತ
ಅವನಿಪತಿ ದುಗುಡದಲಿ ಮೋರೆಯ
ಲವುಚಿದನು ಕರತಳವ ಚಿತ್ತದ
ಬವಣಿಗೆಯ ಭಾರಣೆಯ ಕಡುಶೋಕದಲಿ ಮೈಮರೆದ (ದ್ರೋಣ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಸಂಜಯನ ಮಾತನ್ನು ಕೇಳಿ, ಶಿವ ಶಿವಾ ಭೀಷ್ಮನ ಮರಣ ವಾರ್ತೆಯ ವಿಷವು ಕಿವಿಯಲ್ಲಿರುವಾಗಲೇ ದ್ರೋಣನ ನಿಧನವನ್ನು ಕೇಳಿದೆನೇ? ಭಲೇ ವಿಧಿಯೆ! ಎನ್ನುತ್ತಾ ಕೈಗಳಿಂದ ಮುಖವನ್ನು ಮುಚ್ಚಿ, ಮನಸ್ಸಿನಲ್ಲಿ ಹೆಚ್ಚಿದ ಶೋಕದಿಂದ ಮೈಮರೆದನು.

ಅರ್ಥ:
ಅವಸಾನ: ಸತ್ತಮೇಲೆ; ಶ್ರವಣ: ಕೇಳು; ವಿಷ: ನಂಜು; ಕಳಶ: ಕುಂಭ; ಉದ್ಭವ: ಹುಟ್ಟು; ಕಳಶೋದ್ಭವ: ದ್ರೋಣ; ದೇಹ: ತನು, ಕಾಯ; ವ್ಯಥೆ: ದುಃಖ; ಕೇಳು: ಆಲಿಸು; ಪೂತು: ಭಲೇ; ವಿಧಿ: ನಿಯಮ; ಅವನಿಪತಿ: ರಾಜ; ದುಗುಡ: ದುಃಖ; ಮೋರೆ: ಮುಖ; ಅವುಚು: ಹಿಚುಕು; ಕರತಳ: ಹಸ್ತ; ಚಿತ್ತ: ಮನಸ್ಸು; ಬವಣೆ: ಕಷ್ಟ, ತೊಂದರೆ; ಭಾರಣೆ: ಮಹಿಮೆ, ಗೌರವ; ಕಡು: ತುಂಬ; ಶೋಕ: ನೋವು, ದುಃಖ; ಮೈಮರೆ: ಪ್ರಜ್ಞೆಯನ್ನು ಕಳೆದುಕೊಳ್ಳು;

ಪದವಿಂಗಡಣೆ:
ಶಿವಶಿವಾ+ ಭೀಷ್ಮ+ಅವಸಾನ
ಶ್ರವಣ+ ವಿಷವಿದೆ+ ಮತ್ತೆ+ ಕಳಶೋ
ದ್ಭವನ+ ದೇಹ+ವ್ಯಥೆಯ +ಕೇಳ್ದೆನೆ +ಪೂತು +ವಿಧಿಯೆನುತ
ಅವನಿಪತಿ +ದುಗುಡದಲಿ +ಮೋರೆಯಲ್
ಅವುಚಿದನು +ಕರತಳವ +ಚಿತ್ತದ
ಬವಣಿಗೆಯ +ಭಾರಣೆಯ +ಕಡು+ಶೋಕದಲಿ +ಮೈಮರೆದ

ಅಚ್ಚರಿ:
(೧) ಧೃತರಾಷ್ಟ್ರನ ದುಃಖದ ಚಿತ್ರಣ – ಅವನಿಪತಿ ದುಗುಡದಲಿ ಮೋರೆಯಲವುಚಿದನು ಕರತಳವ ಚಿತ್ತದ
ಬವಣಿಗೆಯ ಭಾರಣೆಯ ಕಡುಶೋಕದಲಿ ಮೈಮರೆದ

ಪದ್ಯ ೧೨: ವಿರಾಟನು ಕಂಕನಿಗೆ ಯಾವ ಅಪ್ಪಣೆಯನ್ನು ನೀಡಿದನು?

ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯ ಶ್ರವಣ ಸುಖಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು (ವಿರಾಟ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಪಾಂಡವರು ರಾಜ್ಯವನ್ನು ಪಣವಾಗಿ ಒಡ್ಡಿ ಸೋತು ಕೆಟ್ಟರು, ಆದರೆ ನಾನು ಪಣವನ್ನು ಇಡುತ್ತಿಲ್ಲ, ಏನೋ ಮಗನ ಏಳಿಗೆಯನ್ನು ಕಂಡು ಅತೀವ ಸಂತಸವಾಗಿದೆ, ಈ ಉತ್ಸವ ಕಾಲದಲ್ಲಿ ಪಗಡೆಯಾಡೋಣವೆಂಬ ಬಯಕೆಯಾಗಿದೆ, ಪಗಡೆಯ ಹಾಸನ್ನು ಹಾಕು, ಕಾಯಿಗಳನ್ನು ಹೂಡು ಎಂದು ವಿರಾಟನು ಹೇಳಲು, ಕಂಕನು ರಾಜನ ಆಜ್ಞೆಯನ್ನು ಪಾಲಿಸಲು ಕಾಯಿಗಳನ್ನು ಹೂಡಿ ದಾಳಗಳನ್ನು ಹಾಕಿದನು.

ಅರ್ಥ:
ರಾಜ್ಯ: ರಾಷ್ಟ್ರ; ಒಡ್ಡು: ನೀಡು; ಸೋಲು: ಪರಾಭವ; ಪಣ: ಜೂಜಿಗೆ ಒಡ್ಡಿದ ವಸ್ತು; ಬೇರೆ: ಅನ್ಯ; ಹರ್ಷ: ಸಂತಸ; ಕುಮಾರ: ಮಕ್ಕಳು; ಅಭ್ಯುದಯ: ಏಳಿಗೆ; ವಿಜಯ: ಗೆಲುವು; ಶ್ರವಣ: ಕಿವಿ, ಕೇಳುವಿಕೆ; ಸುಖ: ನೆಮ್ಮದಿ, ಸಂತಸ; ಮನ: ಮನಸ್ಸು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ನಿವಹ: ಗುಂಪು; ಹೂಡು: ಅಣಿಗೊಳಿಸು; ಅವನಿಪತಿ: ರಾಜ; ನಸುನಗು: ಮಂದಸ್ಮಿತ; ಹಾಸಂಗಿ: ಪಗಡೆಯ ಹಾಸು; ಹಾಯ್ಕು: ಇಡು, ಇರಿಸು;

ಪದವಿಂಗಡಣೆ:
ಅವರು +ರಾಜ್ಯವನೊಡ್ಡಿ +ಸೋತವೊಲ್
ಎವಗೆ +ಪಣ +ಬೇರಿಲ್ಲ +ಹರ್ಷೋ
ತ್ಸವ+ ಕುಮಾರ+ಅಭ್ಯುದಯ +ವಿಜಯ +ಶ್ರವಣ +ಸುಖಮಿಗಲು
ಎವಗೆ +ಮನವಾಯ್ತ್+ಒಡ್ಡು +ಸಾರಿಯ
ನಿವಹವನು +ಹೂಡೆನಲು +ಹೂಡಿದನ್
ಅವನಿಪತಿ +ನಸುನಗುತ +ಹಾಸಂಗಿಯನು +ಹಾಯ್ಕಿದನು

ಅಚ್ಚರಿ:
(೧) ಹೂಡೆನಲು ಹೂಡಿದನು, ಹಾಸಂಗಿಯ ಹಾಯ್ಕಿದನು – ಒಂದೇ ಅಕ್ಷರದ ಜೋಡಿ ಪದಗಳು

ಪದ್ಯ ೨: ಪರ್ವತ ಪ್ರದೇಶದಲ್ಲಿ ಯಾವ ಗಾಳಿಯು ಬೀಸಿತು?

ಪರಮ ಧರ್ಮಶ್ರವಣ ಸೌಖ್ಯದೊ
ಳರಸನಿರೆ ಬದರಿಯಲಿ ಪೂರ್ವೋ
ತ್ತರದ ದೆಸೆವಿಡಿದೆಸೆಗಿತತಿಶಯ ಗಂಧ ಬಂಧುರದ
ಭರಣಿ ಮನ್ಮಥ ಪೋತವಣಿಜನ
ತರಣಿ ತರುಣ ಭ್ರಮರ ಸೇವಾ
ಸರಣಿಯೆನೆ ಸುಳಿದುದು ಸಮಿರಣನಾಮಹಾದ್ರಿಯಲಿ (ಅರಣ್ಯ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಬದರಿಕಾಶ್ರಮದಲ್ಲಿ ಯುಧಿಷ್ಠಿರನು ಧರ್ಮಶಾಸ್ತ್ರವನ್ನು ಶ್ರವಣ ಮಾಡುತ್ತಾ ಸುಖದಿಂದಿರಲು ಈಶಾನ್ಯ ದಿಕ್ಕಿನಿಂದ ಅತಿಶಯ ಸುಗಂಧ ದ್ರವ್ಯದ ಭರಣಿಯೋ, ಮರಿಮನ್ಮಥನೆಂಬ ವ್ಯಾಪಾರಿಯ ಸರಕುತುಂಬಿದ ದೋಣಿಯೋ ಮರಿದುಂಬಿಗಳ ಹಿಂಡಿನ ಸರಣಿಯೋ ಎನ್ನುವಂತಹ ಸುಗಂಧವಾಯುವು ಆ ಪರ್ವತ ಪ್ರದೇಶದಲ್ಲಿ ಬೀಸಿತು.

ಅರ್ಥ:
ಪರಮ: ಶ್ರೇಷ್ಠ; ಧರ್ಮ: ಧಾರಣೆ ಮಾಡಿದುದು; ಶ್ರವಣ: ಕೇಳು; ಸೌಖ್ಯ: ನೆಮ್ಮದಿ; ಅರಸ: ರಾಜ; ಪೂರ್ವೋತ್ತರ: ಈಶಾನ್ಯ; ದೆಸೆ: ದಿಕ್ಕು; ಎಸೆ: ತೋರು; ಅತಿಶಯ: ಹೆಚ್ಚು; ಗಂಧ: ಸುವಾಸನೆ; ಬಂಧುರ: ಚೆಲುವಾದ, ಸುಂದರವಾದ; ಭರಣಿ: ಕರಂಡಕ; ಮನ್ಮಥ: ಕಾಮ; ಪೋತ: ಮರಿ, ದೋಣಿ, ನಾವೆ; ತರಣಿ: ಸೂರ್ಯ,ದೋಣಿ, ಹರಿಗೋಲು; ತರುಣ: ಯೌವ್ವನ, ಚಿಕ್ಕವಯಸ್ಸಿನ; ಭ್ರಮರ: ದುಂಬಿ; ಸೇವೆ: ಚಾಕರಿ; ಸರಣಿ: ದಾರಿ, ಹಾದಿ; ಸುಳಿ: ಬೀಸು, ತೀಡು; ಸಮೀರ: ವಾಯು; ಅದ್ರಿ: ಬೆಟ್ಟ; ಮಹಾ: ದೊಡ್ಡ, ಶ್ರೇಷ್ಠ;

ಪದವಿಂಗಡಣೆ:
ಪರಮ+ ಧರ್ಮ+ಶ್ರವಣ +ಸೌಖ್ಯದೊಳ್
ಅರಸನಿರೆ+ ಬದರಿಯಲಿ +ಪೂರ್ವೋ
ತ್ತರದ +ದೆಸೆವಿಡಿದ್+ಎಸೆಗಿತ್+ಅತಿಶಯ +ಗಂಧ +ಬಂಧುರದ
ಭರಣಿ +ಮನ್ಮಥ +ಪೋತವಣಿಜನ
ತರಣಿ+ ತರುಣ+ ಭ್ರಮರ +ಸೇವಾ
ಸರಣಿಯೆನೆ +ಸುಳಿದುದು +ಸಮಿರಣನ್+ಆ+ಮಹ+ಅದ್ರಿಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭರಣಿ ಮನ್ಮಥ ಪೋತವಣಿಜನ ತರಣಿ ತರುಣ ಭ್ರಮರ ಸೇವಾ
ಸರಣಿಯೆನೆ ಸುಳಿದುದು ಸಮಿರಣನಾಮಹಾದ್ರಿಯಲಿ

ಪದ್ಯ ೭೧: ಏತಕ್ಕಾಗಿ ಆಟವನ್ನು ನಿಲ್ಲಿಸೆಂದು ವಿದುರನು ಹೇಳಿದನು?

ಗೆಲಿದೆ ಧನ ದಕ್ಕುವುದೆ ಸೋತವ
ರಳುಕಿದವರೇ ಪಾಂಡುಪುತ್ರರ
ಬಲುಹ ಬೆಸಗೊಳ್ಳಾ ತದೀಯ ಶ್ರವಣ ದೃಷ್ಟಿಗಳ
ಎಲೆ ಸುಯೋಧನ ವಿಷದ ಮಧುರವು
ಕೊಲುವುದೋ ಮನ್ನಿಸುವುದೋ ಕ
ಕ್ಕುಲಿತೆಗಿದು ಕಡೆಹಾರವಗಲಿ ಸಾಕು ತೆಗೆಯೆಂದ (ಸಭಾ ಪರ್ವ, ೧೪ ಸಂಧಿ, ೭೧ ಪದ್ಯ)

ತಾತ್ಪರ್ಯ:
ಕೋಪದಲ್ಲಿದ್ದ ವಿದುರನು, ಪಾಂಡವರಿನಿಂದ ನೀನು ಗೆದ್ದ ಐಶ್ವರ್ಯವು ನಿನಗೆ ದಕ್ಕುವುದೆಂದು ಕೊಂಡಿರುವೆಯಾ? ಸೋತಿರುವ ಪಾಂಡವರು ಅಳುಕಿರುವರೆಂದುಕೊಂಡೆಯಾ? ಅವರ ನೋಟವನ್ನು ನೋಡು, ನಿನ್ನ ನನ್ನ ಮಾತುಗಳನ್ನು ಕೇಳುವಾಗ ಅವರಿರುವ ರೀತಿಯನ್ನು ನೋಡು, ಎಲೆ ದುರ್ಯೋಧನ, ಸಿಹಿಯಲ್ಲಿ ಬೆರಸಿರುವ ವಿಷವು ಕೊಲ್ಲುವುದೋ, ಉಳಿಸುವುದೋ ವಿಚಾರಮಾಡಿ ನೋಡು. ಗೆಲುವಿನ ಮೇಲಿಟ್ಟ ನಿನ್ನ ಮೋಹಕ್ಕೆ ಇದೇ ಕಡೆಯ ಆಹಾರವಾಗಲಿ, ಈ ಜೂಜನ್ನು ಇಲ್ಲಿಗೇ ನಿಲ್ಲಿಸು ಎಂದು ವಿದುರನು ಹೇಳಿದನು.

ಅರ್ಥ:
ಗೆಲುವು: ಜಯ; ಧನ: ಐಶ್ವರ್ಯ, ದುಡ್ಡು; ದಕ್ಕು: ಸಿಗುವ, ಪಡೆಯುವ; ಸೋತ: ಪರಾಭವ; ಅಳುಕು: ಹೆದರು; ಪುತ್ರ: ಮಗ; ಬಲುಹು: ಬಲ, ಶಕ್ತಿ; ಬೆಸ: ಕೆಲಸ, ಕಾರ್ಯ, ಅಪ್ಪಣೆ; ತದೀಯ: ಈಗಲೇ; ಶ್ರವಣ: ಕೇಳು; ದೃಷ್ಟಿ: ನೋಟ; ವಿಷ: ನಂಜು; ಮಧುರ: ಸಿಹಿ; ಕೊಲು: ಸಾವು; ಮನ್ನಿಸು: ಅಂಗೀಕರಿಸು, ದಯಪಾಲಿಸು; ಕಕ್ಕುಲಿತೆ: ಪ್ರೀತಿ, ಹಂಬಲ; ಕಡೆ: ಕೊನೆ; ಆಹಾರ: ಊಟ; ಸಾಕು: ನಿಲ್ಲಿಸು, ತಡೆ; ತೆಗೆ: ಹೊರತರು;

ಪದವಿಂಗಡಣೆ:
ಗೆಲಿದೆ +ಧನ +ದಕ್ಕುವುದೆ +ಸೋತವರ್
ಅಳುಕಿದವರೇ +ಪಾಂಡುಪುತ್ರರ
ಬಲುಹ+ ಬೆಸಗೊಳ್ಳಾ+ ತದೀಯ +ಶ್ರವಣ+ ದೃಷ್ಟಿಗಳ
ಎಲೆ +ಸುಯೋಧನ +ವಿಷದ +ಮಧುರವು
ಕೊಲುವುದೋ +ಮನ್ನಿಸುವುದೋ+ ಕ
ಕ್ಕುಲಿತೆಗ್+ಇದು +ಕಡೆಹಾರವಗಲಿ+ ಸಾಕು +ತೆಗೆಯೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ವಿಷದ ಮಧುರವು ಕೊಲುವುದೋ ಮನ್ನಿಸುವುದೋ

ಪದ್ಯ ೫೧: ಮನುಷ್ಯರಲ್ಲಿ ಉತ್ತಮನಾದವನ ಲಕ್ಷಣಗಳೇನು?

ದಿನವ ಬಂಜೆಯ ಮಾಡದಾವಗ
ವಿನಯಪರನಹ ದೈವ ಗುರು ಪೂ
ಜನೆಯ ಬುಧಸೇವನೆಯ ಕಾಲೋಚಿತದಿ ವಿವರಿಸುವ
ಮನನದಿಂದಾ ಶ್ರವಣ ನಿಧಿ ಧ್ಯಾ
ಸನದೆ ದಿನವನು ಕಳೆಯುವಾತನು
ಮನುರರೊಳಗುತ್ತಮನಲೈ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ಮನುಷ್ಯರಲ್ಲಿ ಶ್ರೇಷ್ಠನಾದವನ ಲಕ್ಷಣಗಳನ್ನು ವಿದುರ ಇಲ್ಲಿ ವಿವರಿಸುತ್ತಾನೆ. ದಿನವನ್ನು ನಿಷ್ಪ್ರಯೋಜವಾಗಿ ಕಳೆಯದೆ, ವಿನಯ ಸಂಪನ್ನನು, ದೇವರ ಗುರುಗಳ ಆರಾಧನೆಯನ್ನು ಮಾಡುವ, ವಿದ್ವಾಂಸರ ಗೋಷ್ಠಿಗಳನ್ನು ಉಚಿತ ಕಾಲದಲ್ಲಿ ಮಾಡುತ್ತಾ, ಆತ್ಮ ವಿಚಾರದ ಶ್ರವಣ, ಮನನ, ಅದರ ಮೇಲೆ ಏಕಾಗ್ರಚಿತ್ತನಾಗಿ ಆಲೋಚಿಸುವವನು ಹೀಗೆ ಉಪಯುಕ್ತವಾಗಿ ದಿನವನ್ನು ಕಳೆಯುವವನು ಮನುಷ್ಯರಲ್ಲಿ ಉತ್ತಮನಾದವನು ಎಂದು ವಿದುರ ನುಡಿದ.

ಅರ್ಥ:
ದಿನ: ವಾರ; ಬಂಜೆ:ನಿಷ್ಫಲ; ವಿನಯ: ಒಳ್ಳೆಯತನ, ಸೌಜನ್ಯ; ದೈವ: ದೇವರು; ಗುರು: ಆಚಾರ್ಯ; ಪೂಜನೆ: ಆರಾಧನೆ, ಪೂಜೆ; ಬುಧ: ವಿದ್ವಾಂಸ; ಸೇವನೆ: ಉಪಚಾರ, ಶುಶ್ರೂಷೆ; ಕಾಲ: ಸಮಯ; ಉಚಿತ: ಸರಿಯಾದ; ವಿವರ: ವಿಸ್ತಾರ; ಮನನ: ಅಂತರಂಗದಲ್ಲಿ ಆಲೋಚಿಸುವುದು; ಶ್ರವಣ: ಕೇಳುವುದು; ನಿಧಿಧ್ಯಾಸನ: ಏಕಾಗ್ರತೆ; ಕಳೆಯುವ: ವ್ಯಯಿಸುವ; ಮನುಜ: ಮನುಷ್ಯ; ಉತ್ತಮ: ಶ್ರೇಷ್ಠ;

ಪದವಿಂಗಡಣೆ:
ದಿನವ +ಬಂಜೆಯ +ಮಾಡದ್+ಆವಗ
ವಿನಯಪರನಹ +ದೈವ +ಗುರು +ಪೂ
ಜನೆಯ +ಬುಧ+ಸೇವನೆಯ +ಕಾಲ+ಉಚಿತದಿ +ವಿವರಿಸುವ
ಮನನದಿಂದಾ +ಶ್ರವಣ +ನಿಧಿ ಧ್ಯಾ
ಸನದೆ +ದಿನವನು +ಕಳೆಯುವ್+ಆತನು
ಮನುರರೊಳಗ್+ಉತ್ತಮನಲೈ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ವ್ಯರ್ಥವಾಗಿ ಕಳೆಯಬಾರದು ಎಂದು ಹೇಳಲು ಬಂಜೆಯ ಮಾಡದ ಪದದ ಪ್ರಯೋಗ
(೨) ಶ್ರವಣ, ಮನನ, ನಿಧಿಧ್ಯಾಸನ – ಪದಗಳ ಪ್ರಯೋಗ
(೩) ದಿನವ – ೨ ಬಾರಿ ಪ್ರಯೋಗ