ಪದ್ಯ ೨೦: ಕೃಪಾಚಾರ್ಯರಲ್ಲಿ ಮಕ್ಕಳು ಯಾವ ವಿದ್ಯೆಯನ್ನು ಕಲೆತರು?

ಆ ಕೃಪಾಚಾರಿಯನ ದೆಸೆಯಿಂ
ದೀ ಕುಮಾರರು ನಿಖಿಳ ತರ್ಕ
ವ್ಯಾಕರಣ ಮೊದಲೆನೆ ಚತುರ್ದಶ ವಿದ್ಯೆಗಳನರಿದು
ಲೋಕ ವೈದಿಕ ಮುಖ್ಯ ಸಕಲಕ
ಲಾಕುಶಲರಾದರು ಧನುಃ ಪ್ರವಿ
ವೇಕ ವಿಪುಣರನರಸುತ್ತಿದ್ದನು ಮತ್ತೆ ಗಾಂಗೇಯ (ಆದಿ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೃಪಚಾರ್ಯರಲ್ಲಿ ಕೌರವ ಪಾಂಡವರು ಹದಿನಾಲ್ಕು ವಿದ್ಯೆಗಳನ್ನು (ನಾಲ್ಕು ವೇದ, ಆರು ವೇದಾಂತ, ಧರ್ಮಶಾಸ್ತ್ರ, ಪುರಾಣ, ಮೀಮಾಂಸ, ನ್ಯಾಯ, ತರ್ಕ) ಕಲಿತರು. ಲೌಕಿಕ ವೈದಿಕ ಕಲೆಗಳಲ್ಲಿ ನಿಪುಣರಾದರು. ಧರ್ನುವಿದ್ಯೆಯನ್ನು ಕಲಿಸಲು ಯಾರಾದರು ನಿಪುಣರಾದ ಗುರುಗಳನ್ನು ಭೀಷ್ಮನು ಹುಡುಕುತ್ತಿದ್ದನು.

ಅರ್ಥ:
ದೆಸೆ: ಕಾರಣ; ನಿಖಿಳ: ಎಲ್ಲಾ; ತರ್ಕ: ಆರು ದರ್ಶನಗಳಲ್ಲಿ ಒಂದು; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಮೊದಲು: ಮುಂತಾದ; ಚತುರ್ದಶ: ಹದಿನಾಲ್ಕು; ವಿದ್ಯೆ: ಜ್ಞಾನ; ಅರಿ: ತಿಳಿ; ಲೋಕ: ಜಗತ್ತು; ವೈದಿಕ: ವೇದಗಳಿಗೆ ಸಂಬಂಧಿಸಿದ; ಮುಖ್ಯ: ಪ್ರಮುಖ; ಸಕಲ: ಎಲ್ಲಾ; ಕಲೆ: ಲಲಿತವಿದ್ಯೆ, ಕುಶಲವಿದ್ಯೆ; ಕುಶಲ: ಪಾಂಡಿತ್ಯ; ಧನು: ಬಿಲ್ಲು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ನಿಪುಣ: ಪಾರಂಗತ; ಅರಸು: ಹುಡುಕು; ಮತ್ತೆ: ಪುನಃ; ಗಾಂಗೇಯ: ಭೀಷ್ಮ;

ಪದವಿಂಗಡಣೆ:
ಆ+ ಕೃಪಾಚಾರಿಯನ +ದೆಸೆಯಿಂದ್
ಈ+ ಕುಮಾರರು +ನಿಖಿಳ +ತರ್ಕ
ವ್ಯಾಕರಣ+ ಮೊದಲೆನೆ+ ಚತುರ್ದಶ+ ವಿದ್ಯೆಗಳನರಿದು
ಲೋಕ +ವೈದಿಕ +ಮುಖ್ಯ +ಸಕಲ+ಕ
ಲಾ+ಕುಶಲರಾದರು +ಧನುಃ +ಪ್ರವಿ
ವೇಕ +ವಿಪುಣರನ್+ಅರಸುತ್ತಿದ್ದನು +ಮತ್ತೆ+ ಗಾಂಗೇಯ

ಪದ್ಯ ೩೪: ವಿಚಿತ್ರವೀರ್ಯನೊಡನೆ ಯಾರು ವಿವಾಹವಾದರು?

ಆ ಕಮಲಲೋಚನೆಯರೊಳು ಮೊದ
ಲಾಕೆ ಭೀಷ್ಮನ ಗಂಡನೆಂದೇ
ನೂಕಿ ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ
ಆಕೆ ಮಾಣಲಿ ಮಿಕ್ಕವರು ಬರ
ಲೀ ಕುಮಾರಂಗೆಂದು ವೈದಿಕ
ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ (ಆದಿ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅಂಬೆ, ಅಂಬಿಕೆ, ಅಂಬಾಲಿಕೆ ಇವರಲ್ಲಿ ಮೊದಲನೆಯವಳಾದ ಅಂಬೆಯು ಭೀಷ್ಮನನ್ನೇ ಮದುವೆಯಾಗುವೆನೆಂದು ಭಾಷೆಯನ್ನು ಮಾಡಿ ವಿಚಿತ್ರವೀರ್ಯನೊಡನೆ ವಿವಾಹವಾಗಲು ನಿರಾಕರಿಸಿದಳು. ಆಗ ಭೀಶ್ಮನು ಅವಳು ಬರುವುದು ಬೇಡ, ಉಳಿದಿಬ್ಬರನ್ನು ಕರೆದು ತನ್ನಿರೆಂದು ಹೇಳಿ ಮಹಾಸಂಭ್ರಮದಿಂದ ವಿಚಿತ್ರವೀರ್ಯನೊಡನೆ ಮದುವೆಯನ್ನು ಮಾಡಿಸಿದನು.

ಅರ್ಥ:
ಕಮಲಲೋಚನೆ: ಕಮಲದಂತ ಕಣ್ಣುಳ್ಳವಳು (ಸುಂದರಿ); ಗಂಡ: ಪತಿ; ನೂಕು: ತಳ್ಳು; ಛಲ: ದೃಢ ನಿಶ್ಚಯ; ಬಿಗು: ಗಟ್ಟಿ; ಮಾಣು: ನಿಲ್ಲು; ಮಿಕ್ಕ: ಉಳಿದ; ವೈದಿಕ: ವೇದಕ್ಕೆ ಸಂಬಂಧಿಸಿದ; ಲೌಕಿಕ: ಲೋಕಕ್ಕೆ ಸಂಬಂಧಿಸಿದುದು, ಪ್ರಾಪಂಚಿಕವಾದುದು; ಉತ್ಸವ: ಸಂಭ್ರಮ; ಮದುವೆ: ವಿವಾಹ;

ಪದವಿಂಗಡಣೆ:
ಆ +ಕಮಲಲೋಚನೆಯರೊಳು+ ಮೊದ
ಲಾಕೆ +ಭೀಷ್ಮನ+ ಗಂಡನೆಂದೇ
ನೂಕಿ +ಭಾಷೆಯ +ಮಾಡಿ +ನಿಂದಳು +ಛಲದ +ಬಿಗುಹಿನಲಿ
ಆಕೆ +ಮಾಣಲಿ +ಮಿಕ್ಕವರು+ ಬರ
ಲೀ +ಕುಮಾರಂಗೆಂದು +ವೈದಿಕ
ಲೌಕಿಕೋತ್ಸವದಿಂದ +ಮದುವೆಯ +ಮಾಡಿದನು +ಭೀಷ್ಮ

ಪದ್ಯ ೧೩: ಧೃತರಾಷ್ಟ್ರನಿಗೆ ವಿದುರನು ಯಾವ ಬುದ್ಧಿಮಾತನ್ನು ಹೇಳಿದನು?

ಕೇಳು ಮುನಿಭಾಷಿತವ ನೃಪ ನೀ
ನಾಲಿಸುವುದಾತ್ಮಜರನಿಲ್ಲಿಂ
ಮೇಲೆ ಸಲಿಲಾಂಜಲಿಗಳನು ವೈದಿಕವಿಧಾನದಲಿ
ಪಾಲಿಸುವುದಾ ಪಾಂಡುಸುತರ ಸ
ಮೇಳದಲಿ ಸೇರುವುದು ಚಿತ್ತಕೆ
ತಾಲದಿರು ರಾಜಸ ವಿಕಾರವನೆಂದನಾ ವಿದುರ (ಗದಾ ಪರ್ವ, ೧೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಆಗ ವಿದುರನು, ರಾಜ, ನೀನು ವ್ಯಾಸರ ನುಡಿಯನ್ನು ಕೇಳಿ, ವೈದಿಕ ವಿಧಾನದಂತೆ ನಿನ್ನ ಮಕ್ಕಳಿಗೆ ಜಲ ತರ್ಪಣವನ್ನು ನೀಡು, ಪಾಂಡವರೊಡನೆ ಸೇರಬೇಕು. ರಾಜಸ ವಿಕಾರವನ್ನು ಹೊಂದಬೇಡ ಎಂದು ನುಡಿದನು.

ಅರ್ಥ:
ಕೇಳು: ಆಲಿಸು; ಮುನಿ: ಋಷಿ; ಭಾಷಿತ: ನುಡಿದ; ನೃಪ: ರಾಜ; ಆಲಿಸು: ಕೇಳು; ಆತ್ಮಜ: ಮಕ್ಕಳು; ಸಲಿಲ: ನೀರು; ಅಂಜಲಿ: ಕೈಬೊಗಸೆ, ಜೋಡಿಸಿದ ಕೈಗಳು; ವೈದಿಕ: ವೇದಗಳನ್ನು ಬಲ್ಲವನು; ವಿಧಾನ: ರೀತಿ; ಪಾಲಿಸು: ರಕ್ಷಿಸು, ಕಾಪಾಡು; ಸುತ: ಮಗ; ಸಮೇಳ: ಗುಂಪು; ಸೇರು: ಜೊತೆಗೂಡು; ಚಿತ್ತ: ಮನಸ್ಸು; ತಾಳು: ಹೊಂದು, ಪಡೆ; ರಾಜ: ರಜೋಗುಣ; ವಿಕಾರ: ಬದಲಾವಣೆ, ಮಾರ್ಪಾಟು;

ಪದವಿಂಗಡಣೆ:
ಕೇಳು +ಮುನಿಭಾಷಿತವ +ನೃಪ +ನೀನ್
ಆಲಿಸುವುದ್+ಆತ್ಮಜರನ್+ಇಲ್ಲಿಂ
ಮೇಲೆ +ಸಲಿಲಾಂಜಲಿಗಳನು +ವೈದಿಕ+ವಿಧಾನದಲಿ
ಪಾಲಿಸುವುದ್+ಆ +ಪಾಂಡುಸುತರ +ಸ
ಮೇಳದಲಿ +ಸೇರುವುದು +ಚಿತ್ತಕೆ
ತಾಳದಿರು +ರಾಜಸ +ವಿಕಾರವನೆಂದನಾ +ವಿದುರ

ಅಚ್ಚರಿ:
(೧) ಕೇಳು, ಆಲಿಸು – ಸಾಮ್ಯಾರ್ಥ ಪದ
(೨) ಪ, ಸ ಜೋಡಿ ಪದಗಳು – ಪಾಲಿಸುವುದಾ ಪಾಂಡುಸುತರ ಸಮೇಳದಲಿ ಸೇರುವುದು

ಪದ್ಯ ೨: ಧೃತರಾಷ್ಟ್ರನನ್ನು ನೋಡಲು ಯಾವ ಮುನಿಗಳು ಬಂದರು?

ಆ ಸಮಯದಲಿ ದೇವ ವೇದ
ವ್ಯಾಸಮುನಿ ಬಂದನು ಗತಾಕ್ಷಮ
ಹೀಶನನು ಚರಣದಲಿ ಹೊರಳಿದಡೆತ್ತಿದನು ಹಿಡಿದು
ಆ ಸತಿಯ ಕರಸಿದನು ರಾಣೀ
ವಾಸವೆಲ್ಲವ ಬರಿಸಿ ಧರ್ಮವಿ
ಲಾಸವನು ವಿಸ್ತರಿಸಿದನು ವೈದಿಕ ವಿಧಾನದಲಿ (ಗದಾ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಆ ಸಮಯಕ್ಕೆ ವೇದವ್ಯಾಸ ಮುನಿಗಳು ಆಗಮಿಸಿದರು. ಧೃತರಾಷ್ಟ್ರನು ಅವರ ಪಾದಕಮಲಗಳಿಗೆ ನಮಸ್ಕರಿಸಲು ಅವನನ್ನು ಮೇಲೆತ್ತಿ, ಗಾಂಧಾರಿಯನ್ನೂ ರಾಣೀವಾಸದ ಎಲ್ಲರನ್ನೂ ಕರೆಸಿದನು. ಮಾಡಬೇಕಾದ ವೈದಿಕ ವಿಧಿ ವಿಧಾನಗಳನ್ನು ವಿವರವಾಗಿ ತಿಳಿಸಿದರು.

ಅರ್ಥ:
ಸಮಯ: ಕಾಲ; ದೇವ: ಭಗವಂತ; ಮುನಿ: ಋಷಿ; ಬಂದನು: ಆಗಮಿಸು; ಗತಾಕ್ಷ: ಕಣ್ಣಿಲ್ಲದ; ಮಹೀಶ: ರಾಜ; ಚರಣ: ಪಾದ; ಹೊರಳು: ತಿರುವು, ಬಾಗು; ಎತ್ತು: ಮೇಲೇಳು; ಹಿಡಿ: ಗ್ರಹಿಸು; ಸತಿ: ಹೆಂಡತಿ; ಕರೆಸು: ಬರೆಮಾಡು; ರಾಣೀವಾಸ: ಅಂತಃಪುರ; ಬರಿಸಿ: ಕರೆಸು; ಧರ್ಮ: ಧಾರಣೆ ಮಾಡಿದುದು; ವಿಲಾಸ: ಅಂದ, ಸೊಬಗು; ವಿಸ್ತರಿಸು: ಹಬ್ಬು, ಹರಡು; ವೈದಿಕ: ವೇದದಲ್ಲಿ ಹೇಳಿರುವ, ವೇದೋಕ್ತ; ವಿಧಾನ: ರೀತಿ;

ಪದವಿಂಗಡಣೆ:
ಆ +ಸಮಯದಲಿ +ದೇವ +ವೇದ
ವ್ಯಾಸಮುನಿ +ಬಂದನು +ಗತಾಕ್ಷ+ಮ
ಹೀಶನನು +ಚರಣದಲಿ +ಹೊರಳಿದಡ್+ಎತ್ತಿದನು +ಹಿಡಿದು
ಆ +ಸತಿಯ +ಕರಸಿದನು +ರಾಣೀ
ವಾಸವೆಲ್ಲವ +ಬರಿಸಿ +ಧರ್ಮ+ವಿ
ಲಾಸವನು +ವಿಸ್ತರಿಸಿದನು +ವೈದಿಕ +ವಿಧಾನದಲಿ

ಅಚ್ಚರಿ:
(೧) ವ ಕಾರದ ಸಾಲು ಪದ – ವಿಲಾಸವನು ವಿಸ್ತರಿಸಿದನು ವೈದಿಕ ವಿಧಾನದಲಿ
(೨) ಗತಾಕ್ಷಮಹೀಶನ – ಧೃತರಾಷ್ಟ್ರನನ್ನು ಕರೆದ ಪರಿ
(೩) ಕರಸಿ, ಬರಿಸಿ, ಬಂದು – ಸಾಮ್ಯಾರ್ಥ ಪದ
(೪) ನಮಸ್ಕರಿಸಿದನು ಎಂದು ಹೇಳಲು – ಚರಣದಲಿ ಹೊರಳಿದಡ್ ಎಂಬ ಪದ ಪ್ರಯೋಗ
(೫) ದೇವ, ವೇದ – ಪದ ಪ್ರಯೋಗ

ಪದ್ಯ ೮: ವಿಷ್ಣುವು ಕಾಲನೇಮಿಯನ್ನು ಹೇಗೆ ಸಂಹರಿಸಿದನು?

ಲಲಿತ ವೈದಿಕ ಧರ್ಮಮಾರ್ಗವ
ನಳಿದು ಹೆಚ್ಚಿನ ಕಾಲನೇಮಿಯ
ತಲೆಯ ಕೊಂಡನು ಚಕ್ರದಲಿ ದೈತ್ಯಾರಿ ಪೂರ್ವದಲಿ
ಬಲನ ಜಂಭನ ವೃತ್ರನನು ಶೃಂ
ಖಳಿತ ಮಾಯರ ಮಾಯೆಯಿಂದವೆ
ಬಲವಿರೋಧಿ ವಿಭಾಡಿಸಿದನವನೀಶ ಕೇಳೆಂದ (ಗದಾ ಪರ್ವ, ೫ ಸಂಧಿ, ೮ ಪದ್ಯ)

ತಾತ್ಪರ್ಯ:
ಹಿಂದೆ ಕಾಲನೇಮಿಯು ಮೂರು ಲೋಕಗಳ ಒಡೆಯನಾಗಿರಲು, ವೇದ, ಧರ್ಮ, ಸತ್ಯ ಕ್ಷಮೆ ಲಕ್ಷ್ಮಿಯರು ಅವನ ಬಗೆಗೆ ಅಸಡ್ಡತಾಳಿದ್ದರು. ವಿಷ್ಣುವನ್ನು ಬಾಗಿಸದಿದ್ದರೆ ತಾನು ಕೀರ್ತಿವಂತನಾಗುವುದಿಲ್ಲವೆಂದು ಅವನು ತನ್ನ ನೂರು ತೋಳುಗಳಿಂದ ಗದೆಯನ್ನು ಹಿಡಿದು ವಿಷ್ಣುವನ್ನು ಬಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದನು. ವಿಷ್ಣುವು ಅವನನ್ನು ಚಕ್ರಾಯುಧದಿಂದ ಕೊಂದನು. ಬಲ, ಜಂಭ, ವೃತ್ರ ಮೊದಲಾದ ಮಾಯಾವಿಗಳನ್ನು ಇಂದ್ರನು ಮಾಯೆಯಿಂದಲೇ ಸಂಹರಿಸಿದನು.

ಅರ್ಥ:
ಲಲಿತ: ಚೆಲುವಾದ, ಸುಂದರವಾದ; ವೈದಿಕ: ವೇದಗಳನ್ನು ಬಲ್ಲವನು; ಧರ್ಮ: ಧಾರಣೆ ಮಾಡಿದುದು; ಮಾರ್ಗ: ದಾರಿ; ಅಳಿ: ನಾಶ; ಹೆಚ್ಚು: ಅಧಿಕ; ತಲೆ: ಶಿರ; ಕೊಂಡು: ಪಡೆದು; ಚಕ್ರ: ಗಾಲಿ; ದೈತ್ಯ: ರಾಕ್ಷಸ; ಅರಿ: ವೈರಿ; ಪುರ್ವ: ಹಿಂದೆ; ಬಲ: ಶಕ್ತಿ; ಮಾಯೆ: ಗಾರುಡಿ; ವಿರೋಧಿ: ವೈರಿ, ಶತ್ರು; ವಿಭಾಡಿಸು: ನಾಶಮಾಡು; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಲಲಿತ +ವೈದಿಕ +ಧರ್ಮ+ಮಾರ್ಗವನ್
ಅಳಿದು +ಹೆಚ್ಚಿನ +ಕಾಲನೇಮಿಯ
ತಲೆಯ+ ಕೊಂಡನು +ಚಕ್ರದಲಿ +ದೈತ್ಯ+ಅರಿ +ಪೂರ್ವದಲಿ
ಬಲನ +ಜಂಭನ +ವೃತ್ರನನು +ಶೃಂ
ಖಳಿತ +ಮಾಯರ +ಮಾಯೆಯಿಂದವೆ
ಬಲವಿರೋಧಿ +ವಿಭಾಡಿಸಿದನ್+ಅವನೀಶ +ಕೇಳೆಂದ

ಅಚ್ಚರಿ:
(೧) ಸಾಯಿಸಿದನು ಎಂದು ಹೇಳುವ ಪರಿ – ಕಾಲನೇಮಿಯ ತಲೆಯ ಕೊಂಡನು ಚಕ್ರದಲಿ ದೈತ್ಯಾರಿ ಪೂರ್ವದಲಿ

ಪದ್ಯ ೫೮: ಭಾರಧ್ವಾಜರು ದ್ರೋಣರಿಗೆ ಏನನ್ನು ಉಪದೇಶಿಸಿದರು?

ಆದುದವಿವೇಕದಲಿ ಸತ್ಪಥ
ವೈದಿಕಾತಿಕ್ರಮಣವಿನ್ನು ಗ
ತೋದಕದಲುರೆ ಸೇತುಸಂಬಂಧದಲಿ ಫಲವೇನು
ಈ ದುರಾಗ್ರಹ ನಿಲಲಿ ಹಾಯಿಕು
ಕೈದುವನು ಸುಸಮಾಧಿ ಯೋಗದ
ಲೈದು ನಿಜವನು ದೇಹ ನಿಸ್ಪೃಹನಾಗು ನೀನೆಂದ (ದ್ರೋಣ ಪರ್ವ, ೧೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅವಿವೇಕದಿಂದ ವೇದವು ವಿಧಿಸಿರುವ ಸನ್ಮಾರ್ಗವನ್ನು ಮೀರಿ ನಡೆದಿರುವೆ, ನೀರೆಲ್ಲಾ ಹರಿದು ಹೋದ ಮೇಲೆ ಕಟ್ಟೆಯನ್ನು ಕಟ್ಟಿದರೇನು ಫಲ. ಇದುವರೆಗೆ ಆದದ್ದೆಲ್ಲಾ ಆಯಿತು, ಇನ್ನಾದರೂ ಈ ದುರಾಗ್ರಹವನ್ನು ಬಿಡು, ಆಯುಧಗಳನ್ನೆಸೆದು, ಸಮಾಧಿಯೋಗದಿಮ್ದ ನಿನ್ನ ನಿಜವನ್ನು ನೀನು ಸಾಧಿಸು, ದೇಹವನ್ನು ಬಯಸಬೇಡ ಎಂದು ಭಾರಧ್ವಾಜರು ಉಪದೇಶಿಸಿದರು.

ಅರ್ಥ:
ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಪಥ: ಮಾರ್ಗ; ವೈದಿಕ: ವೇದಗಳನ್ನು ಬಲ್ಲವನು; ಅತಿಕ್ರಮಣ: ಕ್ರಮವನ್ನು ಉಲ್ಲಂಘಿಸುವುದು; ಗತ: ಕಳೆದ, ಆಗಿ ಹೋದ; ಉದಕ: ನೀರು; ಉರೆ: ಅತಿಶಯವಾಗಿ; ಸೇತು: ಸೇತುವೆ, ಸಂಕ; ಸಂಬಂಧ: ಸಂಪರ್ಕ, ಸಹವಾಸ; ಫಲ: ಪ್ರಯೋಜನ; ದುರಾಗ್ರಹ: ಹಟಮಾರಿತನ; ನಿಲಲಿ: ನಿಲ್ಲು, ತಡೆ; ಹಾಯಿಕು: ಕಳಚು, ತೆಗೆ; ಕೈದು: ಆಯುಧ; ಸಮಾಧಿ: ಏಕಾಗ್ರತೆ, ತನ್ಮಯತೆ; ಯೋಗ: ರೀತಿ, ವಿಧಾನ; ನಿಜ: ದಿಟ; ದೇಹ: ಶರೀರ; ನಿಸ್ಪೃಹ: ಆಸೆ ಇಲ್ಲದವ;

ಪದವಿಂಗಡಣೆ:
ಆದುದ್+ಅವಿವೇಕದಲಿ +ಸತ್ಪಥ
ವೈದಿಕ+ಅತಿಕ್ರಮಣವ್+ಇನ್ನು +ಗತ
ಉದಕದಲ್+ಉರೆ +ಸೇತು+ಸಂಬಂಧದಲಿ +ಫಲವೇನು
ಈ +ದುರಾಗ್ರಹ +ನಿಲಲಿ +ಹಾಯಿಕು
ಕೈದುವನು +ಸುಸಮಾಧಿ +ಯೋಗದಲ್
ಐದು +ನಿಜವನು +ದೇಹ +ನಿಸ್ಪೃಹನಾಗು +ನೀನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗತೋದಕದಲುರೆ ಸೇತುಸಂಬಂಧದಲಿ ಫಲವೇನು

ಪದ್ಯ ೫೬: ಮುನಿವರ್ಯರು ದ್ರೋಣರಿಗೆ ಏನೆಂದು ಹೇಳಿದರು?

ಲೋಕವೆಂಬುದು ವರ್ಣಧರ್ಮವ
ನೌಕಿ ನಡೆವುದು ವೈದಿಕಕೆ ನಾ
ವಾಕೆವಾಳರು ತಪ್ಪಿ ನಡೆದರೆ ಭ್ರಮಿಸುವರು ಬುಧರು
ಲೋಕ ನಮ್ಮನುದಾಹರಿಸುವುದು
ಕಾಕನೇ ಬಳಸುವುದು ದುರ್ಯಶ
ವೇಕೆ ನಿಮಗಿದು ವಿಹಿತಕರ್ಮಶ್ರುತಿ ಪರಿತ್ಯಾಗ (ದ್ರೋಣ ಪರ್ವ, ೧೮ ಸಂಧಿ, ೫೬ ಪದ್ಯ)

ತಾತ್ಪರ್ಯ:
ವರ್ಣ ಧರ್ಮವನ್ನು ಮೀರಿ ನಡೆಯುವುದೇ ಲೋಕದ ರೀತಿ. ವೇದೋಕ್ತ ಮಾರ್ಗಕ್ಕೆ ತಿಳಿದ ನಾವು ತಪ್ಪಿದರೆ ವಿದ್ವಾಂಸರೂ ಭ್ರಮಿಸುತ್ತಾರೆ. ತಮ್ಮ ತಪ್ಪು ಮಾರ್ಗಕ್ಕೆ ನಾವೇ ಕಾರಣರೆಂದು ಉದಾಹರಣೆ ಕೊಡುತ್ತಾರೆ. ಕೆಟ್ಟ ಮಾರ್ಗದಲ್ಲೇ ನಡೆಯುತ್ತಾರೆ. ವೇದವು ವಿಹಿತವೆಂದು ಹೇಳಿರುವ ಕರ್ಮಗಳನ್ನು ನೀನೇಕೆ ಬಿಡಬೇಕು ಎಂದು ಮುನಿವರ್ಯರು ಕೇಳಿದರು.

ಅರ್ಥ:
ಲೋಕ: ಜಗತ್ತು; ವರ್ಣ: ಬಣ, ಪಂಗಡ; ಧರ್ಮ: ಧಾರಣೆ ಮಾಡಿದುದು; ಔಕು: ಒತ್ತು; ನಡೆ: ಚಲಿಸು; ವೈದಿಕ: ವೇದಗಳನ್ನು ಬಲ್ಲವನು; ಆಕೆವಾಳ: ವೀರ, ಪರಾಕ್ರಮಿ; ತಪ್ಪು: ಸರಿಯಿಲ್ಲದ್ದು; ಭ್ರಮಿಸು: ಭ್ರಾಂತಿ, ಹುಚ್ಚು; ಬುಧ: ವಿದ್ವಾಂಸ; ಉದಾಹರಣೆ: ದೃಷ್ಟಾಂತ; ಕಾಕ: ಕಾಗೆ, ನೀಚ; ಬಳಸು: ಉಪಯೋಗಿಸು; ದುರ್ಯಶ: ಅಪಯಶಸ್ಸು; ವಿಹಿತ: ಸರಿಯಾದ; ಕರ್ಮ: ಕಾರ್ಯ; ಶೃತಿ: ವೇದ; ತ್ಯಾಗ: ತೊರೆ;

ಪದವಿಂಗಡಣೆ:
ಲೋಕವೆಂಬುದು +ವರ್ಣ+ಧರ್ಮವನ್
ಔಕಿ +ನಡೆವುದು +ವೈದಿಕಕೆ +ನಾವ್
ಆಕೆವಾಳರು +ತಪ್ಪಿ+ ನಡೆದರೆ +ಭ್ರಮಿಸುವರು +ಬುಧರು
ಲೋಕ +ನಮ್ಮನ್+ಉದಾಹರಿಸುವುದು
ಕಾಕನೇ +ಬಳಸುವುದು +ದುರ್ಯಶವ್
ಏಕೆ +ನಿಮಗಿದು +ವಿಹಿತ+ಕರ್ಮ+ಶ್ರುತಿ +ಪರಿತ್ಯಾಗ

ಅಚ್ಚರಿ:
(೧) ಲೋಕದ ನೀತಿ – ಲೋಕವೆಂಬುದು ವರ್ಣಧರ್ಮವ ನೌಕಿ ನಡೆವುದು
(೨) ಮುನಿವರ್ಯರು ತಮ್ಮನ್ನು ಪರಿಚಯಿಸಿದ ಪರಿ – ವೈದಿಕಕೆ ನಾವಾಕೆವಾಳರು

ಪದ್ಯ ೩೦: ಯಾರು ಅರಮನೆಯನ್ನು ಹೊಕ್ಕರು?

ಗುರುತನುಜ ರವಿಸೂನು ಮಾದ್ರೇ
ಶ್ವರ ಕೃಪ ದ್ರೋಣಾದಿಗಳು ಬಂ
ದರಮನೆಯ ಹೊಕ್ಕರು ನದೀ ನಂದನನ ಬಳಿವಿಡಿದು
ನೆರೆದರವನೀ ನಿರ್ಜರರು ಕೇ
ಸರಿಯ ಪೀಠವ ರಚಿಸಿ ವೈದಿಕ
ಪರಿಣತರ ಮತದಿಂದ ವಿಸ್ತರಿಸಿದರು ಮಂಗಳವ (ಭೀಷ್ಮ ಪರ್ವ, ೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಭೀಷ್ಮನನ್ನು ಅನುಸರಿಸಿ ಅಶ್ವತ್ಥಾಮ, ಕರ್ಣ, ಶಲ್ಯ, ಕೃಪ ದ್ರೋಣರು ಅರಮನೆಗೆ ಬಂದರು. ಬ್ರಾಹ್ಮಣರು ಬಂದು ಸಿಂಹಾಸನವನ್ನು ರಚಿಸಿ, ವೇದೋಖ್ತವಾಗಿ ಮಂಗಳ ಕಾರ್ಯವನ್ನಾರಂಭಿಸಿದರು.

ಅರ್ಥ:
ಗುರು: ಆಚಾರ್ಯ; ತನುಜ: ಮಗ; ರವಿ: ಸೂರ್ಯ; ಸೂನು: ಪುತ್ರ; ಮಾದ್ರೇಶ್ವರ: ಶಲ್ಯ; ಬಂದರು: ಆಗಮಿಸು; ಅರಮನೆ: ರಾಜರ ಆಲಯ; ಹೊಕ್ಕು: ಸೇರು; ನದೀನಂದನ: ಗಂಗಾಪುತ್ರ; ಬಳಿ: ಅನುಸರಿಸು, ದಾರಿಹಿಡಿ; ನೆರೆ: ಸೇರು; ಅವನೀ: ಭೂಮಿ; ನಿರ್ಜರ: ದೇವತೆ; ಅವನೀನಿರ್ಜರ: ಬ್ರಾಹ್ಮಣ; ಕೇಸರಿಯಪೀಠ: ಸಿಂಹಾಸನ; ರಚಿಸು: ನಿರ್ಮಿಸು; ವೈದಿಕ: ವೇದದಲ್ಲಿ ಹೇಳಿರುವ, ವೇದೋಕ್ತ; ಮತ: ವಿಚಾರ; ವಿಸ್ತರಿಸು: ಹರಡು; ಮಂಗಳ: ಶುಭ;

ಪದವಿಂಗಡಣೆ:
ಗುರುತನುಜ+ ರವಿಸೂನು +ಮಾದ್ರೇ
ಶ್ವರ +ಕೃಪ+ ದ್ರೋಣಾದಿಗಳು +ಬಂ
ದರ್+ಅರಮನೆಯ +ಹೊಕ್ಕರು +ನದೀ +ನಂದನನ +ಬಳಿವಿಡಿದು
ನೆರೆದರ್+ಅವನೀ +ನಿರ್ಜರರು +ಕೇ
ಸರಿಯ +ಪೀಠವ +ರಚಿಸಿ +ವೈದಿಕ
ಪರಿಣತರ +ಮತದಿಂದ +ವಿಸ್ತರಿಸಿದರು +ಮಂಗಳವ

ಅಚ್ಚರಿ:
(೧) ಬ್ರಾಹ್ಮಣರನ್ನು ಅವನೀನಿರ್ಜರರು; ಸಿಂಹಾಸನವನ್ನು ಕೇಶರಿಯ ಪೀಠ ಎಂದು ಕರೆದಿರುವುದು

ಪದ್ಯ ೭೭: ಅಭಿಮನ್ಯುವಿನ ಮದುವೆ ಹೇಗೆ ನಡೆಯಿತು?

ವರಮುಹೂರ್ತದ ಗಳಿಗೆವಟ್ಟಲ
ಭರಿತದೊಳು ಪುಣ್ಯಾಹ ರವ ವಿ
ಸ್ತರದೊಳಕ್ಷತೆ ತಳಿದು ತಂದರು ವಿಮಳ ಮಂಟಪಕೆ
ಪರಮ ಋಷಿಗಳ ಹೋಮದಲಿ ಶಿಖಿ
ವರನ ಬಲಗೊಂಡರು ಕುಮಾರಿಯ
ವರಿಸೆ ವೈದಿಕದಿಂದ ಬಂದಳು ವರನ ವಾಮದಲಿ (ವಿರಾಟ ಪರ್ವ, ೧೧ ಸಂಧಿ, ೭೭ ಪದ್ಯ)

ತಾತ್ಪರ್ಯ:
ಮುಹೂರ್ತವನ್ನು ಕಂಡುಹಿಡಿಯಲು ಗಳಿಗೆ ಬಟ್ಟಲನ್ನು ತುಂಬಿದರು. ಪುಣ್ಯಾಹವಾಚನದ ಮಂಗಳ ಶಬ್ದ ಸುತ್ತಲೂ ಹರಡಿತು. ವಧೂವರರನ್ನು ಮಂಟಪಕ್ಕೆ ಕರೆತಂದು ಅಕ್ಷತಾರೋಪಣ ಮಾಡಿದರು. ಅಗ್ನಿಯನ್ನು ಪ್ರದಕ್ಷಿಣೆ ಮಾಡಿ ಅಭಿಮನ್ಯುವು ಉತ್ತರೆಯನ್ನು ವರಿಸಿದನು. ಅವಳು ಹಸೆಮಣೆಯ ಮೇಲೆ ಅಭಿಮನ್ಯುವಿನ ಎಡಭಾಗದಲ್ಲಿ ಕುಳಿತಳು.

ಅರ್ಥ:
ವರ: ಶ್ರೇಷ್ಠ; ಮುಹೂರ್ತ: ಸಮಯ; ಗಳಿಗೆ: ಸಮಯ; ಭರಿತ: ತುಂಬಿದ; ಪುಣ್ಯ: ಸದಾಚಾರ; ರವ: ಶಬ್ದ; ವಿಸ್ತರ: ವ್ಯಾಪ್ಯ, ಹಬ್ಬುಗೆ, ವಿಸ್ತಾರ; ಅಕ್ಷತೆ: ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ತಳಿ: ಚಿಮುಕಿಸು; ತಂದು: ಬರೆಮಾಡು; ವಿಮಳ: ನಿರ್ಮಲ; ಮಂಟಪ: ಸಭಾಸ್ಥಾನ, ಓಲಗಶಾಲೆ; ಪರಮ: ಶ್ರೇಷ್ಠ; ಋಷಿ: ಮುನಿ; ಹೋಮ: ಕ್ರತು, ಯಜ್ಞ; ಶಿಖಿ: ಅಗ್ನಿ; ಬಲ: ಬಿಗಿ, ಗಟ್ಟಿ; ಕುಮಾರಿ: ಕನ್ಯೆ; ವರಿಸು: ವಿವಾಹವಾಗು; ವೈದಿಕ: ವೇದೋಕ್ತ; ಬಂದಳು: ಆಗಮಿಸು; ವರ: ಮದುವೆಯ ಗಂಡು; ವಾಮ: ಎಡಭಾಗ; ವಟ್ಟಲು: ಬಟ್ಟಲು;

ಪದವಿಂಗಡಣೆ:
ವರ+ಮುಹೂರ್ತದ +ಗಳಿಗೆ+ವಟ್ಟಲ
ಭರಿತದೊಳು+ ಪುಣ್ಯಾಹ +ರವ +ವಿ
ಸ್ತರದೊಳ್+ಅಕ್ಷತೆ +ತಳಿದು +ತಂದರು +ವಿಮಳ+ ಮಂಟಪಕೆ
ಪರಮ +ಋಷಿಗಳ+ ಹೋಮದಲಿ+ ಶಿಖಿ
ವರನ+ ಬಲಗೊಂಡರು+ ಕುಮಾರಿಯ
ವರಿಸೆ+ ವೈದಿಕದಿಂದ +ಬಂದಳು +ವರನ+ ವಾಮದಲಿ

ಅಚ್ಚರಿ:
(೧) ವರ, ಶಿಖಿವರ – ಪದಗಳ ಬಳಕೆ
(೨) ವರ, ಪರಮ – ಸಮನಾರ್ಥಕ ಪದ

ಪದ್ಯ ೭೬: ಮದುವೆಯು ಹೇಗೆ ನಡೆಯಿತು?

ಒಸಗೆಯಲಿ ನಿಸ್ಸಾಳತತಿ ಗ
ರ್ಜಿಸಿದವಖಿಳ ಜನಂಗಳುತ್ಸಾ
ಹಿಸಿತು ಕನ್ಯಾವರಣವಾಯಿತು ವೈದಿಕೋಕ್ತಿಯಲಿ
ಎಸೆಯಲಭಿಮನ್ಯುವನು ಸಿಂಗಾ
ರಿಸಿತು ಯದು ಪಾಂಚಾಲ ಪುತ್ರೀ
ಪ್ರಸರದಲಿ ಮೆಟ್ಟಕ್ಕಿ ಜೀರಿಗೆ ಬೆಲ್ಲವನುವಾಯ್ತು (ವಿರಾಟ ಪರ್ವ, ೧೧ ಸಂಧಿ, ೭೬ ಪದ್ಯ)

ತಾತ್ಪರ್ಯ:
ಈ ಶುಭಮುಹೂರ್ತದ ಶುಭವಾರ್ತೆಯ ಸಮಯದಲ್ಲಿ ಅನೇಕ ಕಹಳೆಗಳು ಮೊಳಗಿದವು. ಸರ್ವರೂ ಉತ್ಸಾಹಭರಿತರಾದರು. ವೈದಿಕವಿಧಾನದಂತೆ ಕನ್ಯಾವರಣವಾಯಿತು. ಯದು, ಪಾಂಚಾಲ ತರುಣಿಯರು ಸಂತೋಷಿಸಿದರು. ಮೆಟ್ಟಕ್ಕಿ ಜೀರಿಗೆ ಬೆಲ್ಲಗಲು ಸಿದ್ಧವಾದವು.

ಅರ್ಥ:
ಒಸಗೆ: ಶುಭ, ಮಂಗಳಕಾರ್ಯ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತತಿ: ಗುಂಪು, ಸಾಲು; ಗರ್ಜಿಸು: ಜೋರಾಗಿ ಕೂಗು; ಅಖಿಳ: ಎಲ್ಲಾ; ಜನ: ಮನುಷ್ಯ; ಉತ್ಸಾಹ: ಸಂಭ್ರಮ; ಕನ್ಯಾವರಣ: ಹೆಣ್ಣನ್ನು ವರಿಸುವುದು; ವೈದಿಕ: ವೇದದಲ್ಲಿ ಹೇಳಿರುವ, ವೇದೋಕ್ತ; ಉಕ್ತಿ: ಮಾತು, ಹೇಳಿಕೆ; ಎಸೆ: ತೋರು; ಸಿಂಗಾರ: ಅಲಂಕಾರ; ಪುತ್ರಿ: ಮಗಳು; ಪ್ರಸರ: ಹರಡುವುದು; ಮೆಟ್ಟಕ್ಕಿ: ಮದುವೆಯಲ್ಲಿ ವಧೂವರರು ಮೆಟ್ಟಿ ನಿಲ್ಲಲು ಬಿದಿರಿನ ತಟ್ಟೆಯಲ್ಲಿರಿಸಿದ ಅಕ್ಕಿ; ಬೆಲ್ಲು: ಗುಡ; ಅನುವು: ಅನುಕೂಲ, ಆಸ್ಪದ;

ಪದವಿಂಗಡಣೆ:
ಒಸಗೆಯಲಿ +ನಿಸ್ಸಾಳ+ತತಿ+ ಗ
ರ್ಜಿಸಿದವ್+ಅಖಿಳ +ಜನಂಗಳ್+ಉತ್ಸಾ
ಹಿಸಿತು +ಕನ್ಯಾವರಣವಾಯಿತು +ವೈದಿಕ+ಉಕ್ತಿಯಲಿ
ಎಸೆಯಲ್+ಅಭಿಮನ್ಯುವನು +ಸಿಂಗಾ
ರಿಸಿತು+ ಯದು +ಪಾಂಚಾಲ +ಪುತ್ರೀ
ಪ್ರಸರದಲಿ +ಮೆಟ್ಟಕ್ಕಿ +ಜೀರಿಗೆ +ಬೆಲ್ಲವ್+ಅನುವಾಯ್ತು