ಪದ್ಯ ೨೯: ದುರ್ಯೋಧನನು ಭೀಮನ ಹೊಟ್ಟೆಯಿಂದ ಯಾರನ್ನು ತೆಗೆಯುತ್ತೇನೆಂದನು?

ಕದಡಿತಂತಃಕರಣ ವಿಕ್ರಮ
ದುದಧಿ ನೆಲೆಯಾಯಿತು ನಿರರ್ಥಕೆ
ಒದರಿದೆಡೆ ಫಲವೇನು ಸಂಜಯ ಹಿಂದನೆಣಿಸದಿರು
ಕದನದಲಿ ದುಶ್ಯಾಸನನ ತೇ
ಗಿದನಲಾ ಬಕವೈರಿ ತಮ್ಮನ
ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ (ಗದಾ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ನನ್ನ ಮನಸ್ಸು ಕದಡಿದೆ, ಆದರೆ ಪರಾಕ್ರಮದ ಕಡಲು ಬತ್ತಿಲ್ಲ, ನೆಲೆನಿಂತಿದೆ. ಅರ್ಥವಿಲ್ಲದೆ ಮಾತಾಡಿ ಏನು ಪ್ರಯೋಜನ? ಸಂಜಯ ಹಿಂದಾದುದನ್ನು ಲೆಕ್ಕಿಸಬೇಡ. ಯುದ್ಧದಲ್ಲಿ ಭೀಮನು ದುಶ್ಯಾಸನನನ್ನು ತಿಂದು ತೇಗಿದನಲ್ಲವೇ? ನನ್ನ ತಮ್ಮನನ್ನು ಭೀಮನ ಹೊಟ್ಟೆಯಿಂದ ತೆಗೆಯುತ್ತೇನೆ, ಆ ವಿಚಿತ್ರವನು ನೋಡು ಎಂದು ಹೇಳಿದನು.

ಅರ್ಥ:
ಕದಡು: ಬಗ್ಗಡ, ರಾಡಿ; ಅಂತಃಕರಣ: ಒಳ ಮನಸ್ಸು; ವಿಕ್ರಮ: ಪರಾಕ್ರಮಿ; ಉದಧಿ: ಸಾಗರ; ನೆಲೆ: ಸ್ಥಾನ; ನಿರರ್ಥಕ: ಪ್ರಯೋಜನವಿಲ್ಲದ; ಒದರು: ಹೇಳು, ಹೊರಹಾಕು; ಫಲ: ಪ್ರಯೋಜನ; ಹಿಂದನ: ಪೂರ್ವ, ನಡೆದ; ಎಣಿಸು: ಲೆಕ್ಕಿಸು; ಕದನ: ಯುದ್ಧ; ತೇಗು: ಢರಕೆ, ತಿಂದು ಮುಗಿಸು; ಬಕ: ಭೀಮಸೇನನಿಂದ ಹತನಾದ ಒಬ್ಬ ರಾಕ್ಷಸ; ಬಕವೈರಿ: ಭೀಮ; ತಮ್ಮ: ಸಹೋಅರ; ಉದರ: ಹೊಟ್ಟೆ; ತೆಗೆ: ಈಚೆಗೆ ತರು, ಹೊರತರು; ವಿಚಿತ್ರ: ಬೆರಗುಗೊಳಿಸುವಂತಹುದು; ನೋಡು: ವೀಕ್ಷಿಸು;

ಪದವಿಂಗಡಣೆ:
ಕದಡಿತ್+ಅಂತಃಕರಣ+ ವಿಕ್ರಮದ್
ಉದಧಿ +ನೆಲೆಯಾಯಿತು +ನಿರರ್ಥಕೆ
ಒದರಿದೆಡೆ +ಫಲವೇನು +ಸಂಜಯ +ಹಿಂದನ್+ಎಣಿಸದಿರು
ಕದನದಲಿ +ದುಶ್ಯಾಸನನ +ತೇ
ಗಿದನಲಾ +ಬಕವೈರಿ +ತಮ್ಮನನ್
ಉದರದಲಿ +ತೆಗೆವೆನು +ವಿಚಿತ್ರವ +ನೋಡು +ನೀನೆಂದ

ಅಚ್ಚರಿ:
(೧) ದುರ್ಯೋಧನನ ಶಕ್ತಿಯನ್ನು ವಿವರಿಸುವ ಪರಿ – ವಿಕ್ರಮದುದಧಿ ನೆಲೆಯಾಯಿತು
(೨) ಭೀಮನನ್ನು ಬಕವೈರಿ ಎಂದು ಕರೆದಿರುವುದು

ಪದ್ಯ ೬೭: ಶಲ್ಯನ ಅಂತ್ಯವು ಹೇಗಾಯಿತು?

ಇದಿರೊಳೆಚ್ಚನು ಶಲ್ಯನಂಬಿನ
ಹೊದೆ ಸವೆಯೆ ಹರಿತಪ್ಪ ಶಕ್ತಿಯ
ತುದಿಗೆ ಕಬಳಗ್ರಾಸವಾದುದಲೈ ವಿಚಿತ್ರವಲಾ
ಹೊದರುಗಿಡಿಗಳ ಕೇಸುರಿಯ ಹಾ
ರದಲಿ ಹರಿತಂದಹಿತ ದಳಪತಿ
ಯೆದೆಯನೊದೆದುದು ನೆಲಕೆ ನಟ್ಟುದು ನಾಲ್ಕು ಮುಷ್ಟಿಯಲಿ (ಶಲ್ಯ ಪರ್ವ, ೩ ಸಂಧಿ, ೬೭ ಪದ್ಯ)

ತಾತ್ಪರ್ಯ:
ಶಲ್ಯನು ತನ್ನಲ್ಲಿದ್ದ ಬಾಣಗಳ ಹೊರೆಗಳು ಸವೆಯುವವರೆಗೂ ಆ ಶಕ್ತಿಯ ಮೇಲೆ ಬಿಟ್ಟನು. ಶಕ್ತಿಯು ಆ ಬಾಣಗಳನ್ನು ನುಂಗಿತು. ಕ್ಡಿಗಳ ಪೊದೆಯ ನಡುವೆ ಕೆಂಪನೆಯ ಉರಿಯ ಹಾರವನ್ನು ತೊಟ್ಟ ಶಕ್ತಿಯು ಶಲ್ಯ್ನ ಎದೆಗೆ ಹೊಡೆದು, ಭೇದಿಸಿ ಬೆನ್ನಿನಿಂದ ಹೊರಟು ನಾಲ್ಕು ಮುಷ್ಟಿಗಳಷ್ಟು ದೂರದಲ್ಲಿ ನೆಲಕ್ಕೆ ನೆಟ್ಟಿತು.

ಅರ್ಥ:
ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಹೊದೆ: ಬಾಣಗಳನ್ನಿಡುವ ಕೋಶ; ಸವೆ: ಶಕ್ತಿಗುಂದು, ತೀರು; ಹರಿ: ಸಾಧ್ಯವಾಗು; ಶಕ್ತಿ: ಬಲ; ತುದಿ: ಕೊನೆ; ಕಬಳಗ್ರಾಸ: ತುತ್ತು ಆಹಾರ; ವಿಚಿತ್ರ: ಆಶ್ಚರ್ಯಕರವಾದುದು; ಹೊದರು: ಗುಂಪು, ಸಮೂಹ; ಕಿಡಿ: ಬೆಂಕಿ; ಕೇಸುರಿ: ಕೆಂಪು ಉರಿ; ಹಾರ: ಮಾಲೆ; ಅಹಿತ: ವೈರ; ದಳಪತಿ: ಸೇನಾಧಿಪತಿ; ಎದೆ: ಉರು; ಒದೆ: ನೂಕು; ನೆಲ: ಭೂಮಿ; ನಟ್ಟು: ಒಳಹೋಗು; ಮುಷ್ಟಿ: ಮುಚ್ಚಿದ ಅಂಗೈ;

ಪದವಿಂಗಡಣೆ:
ಇದಿರೊಳ್+ಎಚ್ಚನು +ಶಲ್ಯನ್+ಅಂಬಿನ
ಹೊದೆ +ಸವೆಯೆ +ಹರಿತಪ್ಪ+ ಶಕ್ತಿಯ
ತುದಿಗೆ +ಕಬಳಗ್ರಾಸವಾದುದಲೈ +ವಿಚಿತ್ರವಲಾ
ಹೊದರು+ಕಿಡಿಗಳ +ಕೇಸುರಿಯ +ಹಾ
ರದಲಿ +ಹರಿತಂದ್+ಅಹಿತ +ದಳಪತಿ
ಎದೆಯನ್+ಒದೆದುದು +ನೆಲಕೆ +ನಟ್ಟುದು +ನಾಲ್ಕು +ಮುಷ್ಟಿಯಲಿ

ಅಚ್ಚರಿ:
(೧) ಧರ್ಮಜನ ಬಾಣದ ತೀವ್ರತೆ: ಹೊದರುಗಿಡಿಗಳ ಕೇಸುರಿಯ ಹಾರದಲಿ ಹರಿತಂದಹಿತ ದಳಪತಿ ಯೆದೆಯನೊದೆದುದು

ಪದ್ಯ ೭೩: ಅರ್ಜುನನ ಸ್ಥಿತಿಯನ್ನು ಏಕೆ ವರ್ಣಿಸಲಸಾಧ್ಯ?

ಮೇಳ ಗಡ ನಮಗೀತನಲಿ ಭೂ
ಪಾಲಕರು ಗಡ ನಾವು ಸಾರಥಿ
ಯಾಳು ಗಡ ಹರಿ ನಾವು ವೀರರು ಗಡ ವಿಚಿತ್ರವಲ
ಮೇಲುಗಾಣದ ಪಾರ್ಥನೆಂಬೀ
ಕಾಳುಮೂಳನ ವಿಧಿಯನೇಪರಿ
ವೇಳುವೆನು ಹರಯೆನುತ ಕಂಗಳನೆವೆಗಳಲಿ ಬಿಗಿದ (ಭೀಷ್ಮ ಪರ್ವ, ೩ ಸಂಧಿ, ೭೩ ಪದ್ಯ)

ತಾತ್ಪರ್ಯ:
ಇವನು ಸ್ನೇಹಿತನಲ್ಲವೇ, ನಾವು ರಾಜರು, ಇವನು ನಮ್ಮ ಆಳು, ಸಾರಥಿ, ನಾನು ಪರಮವೀರ, ಇದೆಂತಹ ವಿಚಿತ್ರ, ಶಿವ ಶಿವಾ ಮುಂದುಗಾಣದ ಅರ್ಜುನನೆಂಬ ಪರಮ ಮೂಢನ ಸ್ಥಿತಿಯನ್ನು ಹೇಗೆ ತಾನೇ ವರ್ಣಿಸಲು ಸಾಧ್ಯ ಎಂದು ಯೋಚಿಸುತ್ತಾ ಅರ್ಜುನನು ಕಣ್ಣನ್ನು ಮುಚ್ಚಿದ.

ಅರ್ಥ:
ಮೇಳ: ಗುಂಪು, ಜೊತೆ, ಸಹವಾಸ; ಗಡ: ಅಲ್ಲವೆ; ಭೂಪಾಲಕ: ರಾಜ; ಸಾರಥಿ: ಸೂತ; ಆಳು: ಸೇವಕ; ಹರಿ: ವಿಷ್ಣು; ವೀರ: ಪರಾಕ್ರಮಿ; ವಿಚಿತ್ರ: ಆಶ್ಚರ್ಯ; ಮೇಲುಕಾಣು: ಮುಂದೆ ಕಾಣದೆ; ಕಾಳುಮೂಳ: ನೀಚ, ದುಷ್ಟ; ವಿಧಿ: ನಿಯಮ, ಬ್ರಹ್ಮ; ಹರ: ಶಿವ; ಕಂಗಳು: ಕಣ್ಣು; ಎವೆ: ಕಣ್ಣಿನ ರೆಪ್ಪೆ; ಬಿಗಿ: ಬಂಧಿಸು;

ಪದವಿಂಗಡಣೆ:
ಮೇಳ +ಗಡ+ ನಮಗೀತನಲಿ+ ಭೂ
ಪಾಲಕರು+ ಗಡ +ನಾವು +ಸಾರಥಿ
ಯಾಳು +ಗಡ+ ಹರಿ+ ನಾವು+ ವೀರರು+ ಗಡ+ ವಿಚಿತ್ರವಲ
ಮೇಲುಗಾಣದ +ಪಾರ್ಥನೆಂಬ್+ಈ
ಕಾಳುಮೂಳನ+ ವಿಧಿಯನ್+ಈ+ಪರಿ
ವೇಳುವೆನು +ಹರಯೆನುತ +ಕಂಗಳನ್+ಎವೆಗಳಲಿ +ಬಿಗಿದ

ಅಚ್ಚರಿ:
(೧) ಕಣ್ಣು ಮುಚ್ಚಿದ ಎಂದು ಹೇಳುವ ಪರಿ – ಕಂಗಳನೆವೆಗಳಲಿ ಬಿಗಿದ