ಪದ್ಯ ೧೦: ಸಾತ್ಯಕಿಯನ್ನು ಭೂರಿಶ್ರವನು ಹೇಗೆ ಹೊಡೆದನು?

ಬರಬರಲು ರಿಪುಭಟನ ಹೊಯ್ಗುಳ
ಧರಧುರಕೆ ಕಲಿ ಸಾತ್ಯಕಿಯ ತರ
ಹರಣೆ ತಗ್ಗಿತು ಮಹಿಮೆ ಮುಗ್ಗಿತು ಮುರಿದುದಗ್ಗಳಿಕೆ
ಉರವಣಿಸಿ ಭೂರಿಶ್ರವನು ರಿಪು
ವರನ ಖಡುಗವ ಮುರಿಯ ಹೊಯ್ದ
ಬ್ಬರಿಸಿ ಕಡೆಗಾಲಿಂದ ಹೊಯ್ದನು ಹಾಯ್ದು ಮುಂದಲೆಗೆ (ದ್ರೋಣ ಪರ್ವ, ೧೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಬರಬರುತ್ತಾ ಭೂರಿಶ್ರವನ ಹೊಯಿಲಿನ ತೀವ್ರತೆಗೆ ಸಾತ್ಯಕಿಯ ಸತ್ವ ತಗ್ಗಿತು, ಹಿರಿಮೆ ಇಳಿಯಿತು, ಹೆಚ್ಚಳ ಕುಗ್ಗಿತು, ಭೂರಿಶ್ರವನು ಮುಂದೆ ಬಿದ್ದು ಸಾತ್ಯಕಿಯ ಖಡ್ಗವನ್ನು ಮುರಿಯುವಂತೆ ಹೊಡೆದು ಅಬ್ಬರಿಸಿ ಮುಂದಲೆಯನ್ನು ಹಿಡಿದು ಕಾಲಿನಿಂದ ಝಾಡಿಸಿದನು.

ಅರ್ಥ:
ರಿಪು: ವೈರಿ; ಭಟ: ಸೈನಿಕ; ಹೊಯ್: ಹೊಡೆತ; ಧರಧುರ: ತೀವ್ರತೆ, ವೇಗ; ಕಲಿ: ಶೂರ; ತರಹರಿಸು: ಸೈರಿಸು; ತಗ್ಗು: ಬಾಗು; ಮಹಿಮೆ: ಶ್ರೇಷ್ಠತೆ; ಮುಗ್ಗು: ಬಾಗು, ಮಣಿ; ಮುರಿ: ಸೀಳು; ಅಗ್ಗಳಿಕೆ: ಶ್ರೇಷ್ಠತೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ರಿಪು: ವೈರಿ; ಖಡುಗ: ಕತ್ತಿ; ಮುರಿ: ಸೀಳು; ಹೊಯ್ದು: ಹೊಡೆ; ಅಬ್ಬರಿಸು: ಗರ್ಜಿಸು, ಆರ್ಭಟಿಸು; ಕಡೆಗಾಲು: ಕಾಲಿನ ಕೊನೆ; ಮುಂದಲೆ: ತಲೆಯ ಮುಂಭಾಗ;

ಪದವಿಂಗಡಣೆ:
ಬರಬರಲು+ ರಿಪುಭಟನ +ಹೊಯ್ಗುಳ
ಧರಧುರಕೆ +ಕಲಿ +ಸಾತ್ಯಕಿಯ +ತರ
ಹರಣೆ +ತಗ್ಗಿತು +ಮಹಿಮೆ +ಮುಗ್ಗಿತು +ಮುರಿದುದ್+ಅಗ್ಗಳಿಕೆ
ಉರವಣಿಸಿ +ಭೂರಿಶ್ರವನು +ರಿಪು
ವರನ+ ಖಡುಗವ +ಮುರಿಯ +ಹೊಯ್ದ್
ಅಬ್ಬರಿಸಿ +ಕಡೆಗಾಲಿಂದ +ಹೊಯ್ದನು +ಹಾಯ್ದು +ಮುಂದಲೆಗೆ

ಅಚ್ಚರಿ:
(೧) ತಗ್ಗಿತು, ಮುಗ್ಗಿತು, ಮುರಿ – ಸಾಮ್ಯಾರ್ಥ ಪದ
(೨) ಮ ಕಾರದ ತ್ರಿವಳಿ ಪದ – ಮಹಿಮೆ ಮುಗ್ಗಿತು ಮುರಿದುದಗ್ಗಳಿಕೆ

ಪದ್ಯ ೩೯: ದುರ್ಜಯನು ಭೀಮನನ್ನು ಹೇಗೆ ಎದುರಿಸಿದನು?

ಬಿಲುದುಡುಕಿ ರಿಪುಭಟನೊಡನೆ ಮುಂ
ಕೊಳಿಸಿದನು ದುರ್ಜಯನು ಹಿಮ್ಮೆ
ಟ್ಟೆಲವೊ ಪವನಜ ನಿಂದಡರಿವೆನು ನಿನ್ನೊಡಲನೆನುತ
ಒಲುಮೆಯೊಡಹುಟ್ಟಿದರ ಬಯಕೆಯ
ಸಲಿಸುವರೆ ನಾವಲ್ಲದೆ ಕುರು
ಕುಲ ಲಲಾಮರು ತಪ್ಪಿ ನುಡಿಯರೆನುತ್ತ ಮಂಡಿಸಿದ (ದ್ರೋಣ ಪರ್ವ, ೧೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ದುರ್ಜಯನು ಬಿಲ್ಲನ್ನು ಹಿಡಿದು ಭೀಮನನ್ನು ಇದಿರಿಸಿದನು. ಭೀಮಾ ಹಿಮ್ಮೆಟ್ಟು ನಿಂತರೆ ನಿನ್ನ ದೇಹವನ್ನು ತುಂಡು ಮಾಡುತ್ತೇನೆ. ಭೀಮನು ಪ್ರೀತಿಯ ತಮ್ಮಂದಿರ ಬಯಕೆಯನ್ನು ಸಲ್ಲಿಸುವವರೇ ನಾವು, ಕುರುಕುಲ ತಿಲಿಕರು ತಪ್ಪಿ ನುಡಿಯುವವರಲ್ಲ ಎನ್ನುತ್ತ ಮಂಡಿಹಚ್ಚಿ ಕುಳಿತನು.

ಅರ್ಥ:
ಬಿಲು: ಬಿಲ್ಲು, ಧನು; ತುಡುಕು: ಹೋರಾಡು, ಸೆಣಸು; ರಿಪು: ವೈರಿ; ಭಟ: ಸೈನಿಕ; ಮುಂಕೊಳಿಸು: ಇದಿರು; ಹಿಮ್ಮೆಟ್ಟು: ಹಿಂದೆ ಸರಿ; ಪವನಜ: ಭೀಮ; ನಿಂದು: ನಿಲ್ಲು; ಅಡರು: ಆಸರೆ; ಒಡಲು: ದೇಹ; ಒಲುಮೆ: ಪ್ರೀತಿ; ಒಡಹುಟ್ಟಿ: ಜೊತೆಯಲ್ಲಿ ಜನಿಸಿದ, ಸಹೋದರ; ಬಯಕೆ: ಆಸೆ; ಸಲಿಸು: ಪೂರೈಸು, ಒಪ್ಪಿಸು; ಕುಲ: ವಂಶ; ಲಲಾಮ: ಶ್ರೇಷ್ಠ, ತಿಲಕ; ತಪ್ಪು: ಸರಿಯಿಲ್ಲದು; ನುಡಿ: ಮಾತು; ಮಂಡಿಸು: ಕೂಡು;

ಪದವಿಂಗಡಣೆ:
ಬಿಲು+ತುಡುಕಿ +ರಿಪುಭಟನೊಡನೆ +ಮುಂ
ಕೊಳಿಸಿದನು +ದುರ್ಜಯನು +ಹಿಮ್ಮೆಟ್ಟ್
ಎಲವೊ +ಪವನಜ +ನಿಂದಡ್+ಅರಿವೆನು +ನಿನ್ನೊಡಲನೆನುತ
ಒಲುಮೆ+ಒಡಹುಟ್ಟಿದರ+ ಬಯಕೆಯ
ಸಲಿಸುವರೆ +ನಾವಲ್ಲದೆ +ಕುರು
ಕುಲ +ಲಲಾಮರು +ತಪ್ಪಿ+ ನುಡಿಯರ್+ಎನುತ್ತ +ಮಂಡಿಸಿದ

ಅಚ್ಚರಿ:
(೧) ಭೀಮನೆದುರು ಗರ್ಜಿಸಿದ ಪರಿ – ಹಿಮ್ಮೆಟ್ಟೆಲವೊ ಪವನಜ ನಿಂದಡರಿವೆನು ನಿನ್ನೊಡಲನೆನುತ

ಪದ್ಯ ೧೭: ಸಾತ್ಯಕಿಯ ಮೇಲೆ ಯುದ್ಧವು ಹೇಗೆ ನಡೆಯಿತು?

ಅವರ ಬಲನೆಡವಂಕದಲಿ ಸೈಂ
ಧವನ ಮೊನೆಯವರೌಕಿದರು ಕೌ
ರವನ ಬಳಿಯಲಿ ಸಂದಣಿಸಿದರು ಕರ್ಣನಂದನರು
ಬವರವಸದಳವಾಯ್ತು ರಿಪುಭಟ
ನಿವಹ ಮಧ್ಯದೊಳೀತ ಸಿಲುಕಿದ
ನವಿರಳಾಸ್ತ್ರವ ಸುರಿದು ಕಾಣನು ಹಗೆಗೆ ಹರಿವುಗಳ (ದ್ರೋಣ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅವರ ಎಡಬಲದಲ್ಲಿ ಸೈಂಧವನ ಸೈನಿಕರು ನುಗ್ಗಿದರು. ಕರ್ಣನ ಮಕ್ಕಳು ಕೌರವನ ಸುತ್ತ ನಿಂತರು. ಸಾತ್ಯಕಿಗೆ ಯುದ್ಧವು ಅಸಾಧ್ಯವಾಯಿತು. ಮತ್ತೆ ಮತ್ತೆ ಬಾಣಗಳನ್ನು ಬಿಡುತ್ತಲ್ಲೇ ಇದ್ದರು. ಶತ್ರುಗಳು ಮಾತ್ರ ಸೋಲಲಿಲ್ಲ, ತೊಲಗಲಿಲ್ಲ, ಸಾಯಲಿಲ್ಲ.

ಅರ್ಥ:
ಬಲ: ಶಕ್ತಿ; ಎಡವಂಕ: ವಾಮಭಾಗ; ಮೊನೆ: ತುದಿ; ಔಕು: ತಳ್ಳು; ಬಳಿ: ಹತ್ತಿರ; ಸಂದಣಿ: ಗುಂಪು; ನಂದನ: ಮಗ; ಬವರ: ಯುದ್ಧ; ಅಸದಳ: ಅಸಾಧ್ಯ, ಅತಿಶಯ; ರಿಪು: ವೈರಿ; ಭಟ: ಸೈನಿಕ; ನಿವಹ: ಗುಂಪು; ಮಧ್ಯ: ನದುವೆ; ಸಿಲುಕು: ಬಂಧಿಸು; ಅವಿರಳ: ದಟ್ಟವಾದ; ಅಸ್ತ್ರ: ಶಸ್ತ್ರ; ಸುರಿ: ವರ್ಷಿಸು; ಕಾಣು: ತೋರು; ಹಗೆ: ವೈರಿ; ಹರಿ: ಪ್ರವಹಿಸುವಿಕೆ;

ಪದವಿಂಗಡಣೆ:
ಅವರ+ ಬಲನ್+ಎಡವಂಕದಲಿ +ಸೈಂ
ಧವನ +ಮೊನೆಯವರ್+ಔಕಿದರು +ಕೌ
ರವನ +ಬಳಿಯಲಿ +ಸಂದಣಿಸಿದರು +ಕರ್ಣ+ನಂದನರು
ಬವರವ್+ಅಸದಳವಾಯ್ತು +ರಿಪುಭಟ
ನಿವಹ +ಮಧ್ಯದೊಳ್+ಈತ +ಸಿಲುಕಿದನ್
ಅವಿರಳಾಸ್ತ್ರವ +ಸುರಿದು +ಕಾಣನು +ಹಗೆಗೆ +ಹರಿವುಗಳ

ಅಚ್ಚರಿ:
(೧) ಅಸದಳ, ಅವಿರಳ – ಪದಗಳ ಬಳಕೆ

ಪದ್ಯ ೩೧: ಅರ್ಜುನನು ಯೋಧರನ್ನು ಹೇಗೆ ಕೊಂದನು?

ಆಲಿಕಲುಗಳ ಕಡಿವಡುಕ್ಕಿನ
ಚೀಲಣದ ಹಂಗೇಕೆ ನಿಮ್ಮಡಿ
ಮೇಲುನೋಟವ ನೋಡೆ ರಥ ಪರಿಯಂತ ಕಾಳೆಗವೆ
ಹೋಳುಗಳೆವೆನು ಹುಗ್ಗಿಗರನೆನು
ತಾಳೊಳಗೆ ಬೆರಸಿದನು ಬರಿಗಾ
ಲಾಳುತನದಲಿ ಕಾದಿ ಕೊಂದನು ಕೋಟಿ ರಿಪುಭಟರ (ದ್ರೋಣ ಪರ್ವ, ೧೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನು ಆಲಿಕಲ್ಲುಗಳನ್ನು ತುಂಡು ಮಾಡಲು ಉಕ್ಕಿನ ಉಳಿಯೇಕೆ? ನಿಮ್ಮ ಕೃಪಾದೃಷ್ಟಿ ನನ್ನ ಮೇಲಿರಲು ಯುದ್ಧಕ್ಕೆ ರಥವೇಕೆ ಬೇಕು ಎಂದು ಹೇಳಿ, ಹುಗ್ಗಿಯನ್ನು ತಿನ್ನಲು ಮಾತ್ರ ಯೋಗ್ರರಾದ ಇವರನ್ನು ಸೀಳಿ ಹಾಕುತ್ತೇನೆ ಎನ್ನುತ್ತಾ ಕಾಲಳಾಗಿ ಯುದ್ಧಮಾಡಿ ಲೆಕ್ಕವಿಲ್ಲದಷ್ಟು ಯೋಧರನ್ನು ಕೊಂದನು.

ಅರ್ಥ:
ಆಲಿಕಲು: ಮಂಜಿನ ಗುಡ್ಡೆ; ಕಡಿ: ಸೀಳು; ಉಕ್ಕು: ಕಬ್ಬಿಅಣ; ಚೀಲಣ: ಉಳಿ, ಉಕ್ಕನ್ನು ಕತ್ತರಿಸುವ ಸಾಧನ; ಹಂಗು: ದಾಕ್ಷಿಣ್ಯ, ಆಭಾರ; ಅಡಿ: ಪಾದ; ನೋಟ: ಅವಲೋಕನ; ರಥ: ಬಂಡಿ; ಪರಿಯಂತ: ವರೆಗೆ, ತನಕ; ಕಾಳೆಗ: ಯುದ್ಧ; ಹೋಳು: ಚೂರು, ತುಂಡು; ಹುಗ್ಗಿಗ: ಶ್ರೇಷ್ಠ, ಕೂಳುಬಾಕ; ಬೆರಸು: ಸೇರಿಸು; ಬರಿ: ಕೇವಲ; ಕಾಲಾಳು: ಸೈನಿಕ; ಕಾದು: ಹೋರಾಡು; ಕೊಂದು: ಸಾಯಿಸು; ಕೋಟಿ: ಅಸಂಖ್ಯಾತ; ರಿಪು: ವೈರಿ; ಭಟ: ಸೈನಿಕ;

ಪದವಿಂಗಡಣೆ:
ಆಲಿಕಲುಗಳ+ ಕಡಿವಡ್+ಉಕ್ಕಿನ
ಚೀಲಣದ +ಹಂಗೇಕೆ+ ನಿಮ್ಮಡಿ
ಮೇಲುನೋಟವ +ನೋಡೆ +ರಥ +ಪರಿಯಂತ +ಕಾಳೆಗವೆ
ಹೋಳು+ಕಳೆವೆನು +ಹುಗ್ಗಿಗರನ್+ಎನುತ್
ಆಳೊಳಗೆ +ಬೆರಸಿದನು +ಬರಿಗ್
ಆಳುತನದಲಿ +ಕಾದಿ +ಕೊಂದನು +ಕೋಟಿ +ರಿಪುಭಟರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆಲಿಕಲುಗಳ ಕಡಿವಡುಕ್ಕಿನ ಚೀಲಣದ ಹಂಗೇಕೆ

ಪದ್ಯ ೨೦: ಆರು ರಥಿಕರ ಸ್ಥಿತಿ ಹೇಗಾಯಿತು?

ಹೂಸಕದ ಶೌರಿಯದ ಬಾಳಿಕೆ
ಯೇಸು ದಿನವೈ ಕರ್ಣ ಕೃಪ ದು
ಶ್ಯಾಸನರ ಕೊಂಬನೆ ಕುಮಾರಕ ಸುರರಿಗಲಗಣಸು
ಘಾಸಿಯಾದರು ಘಾಯವಡೆದು ವಿ
ಳಾಸವಳಿದುದು ರಿಪುಭಟನ ಗೆಲು
ವಾಸೆ ಬೀತುದು ಧಾತುಗೆಟ್ಟುದು ಸರಳ ಸಾರದಲಿ (ದ್ರೋಣ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮೇಲೆ ಮಾತ್ರ ಲೇಪಿಸಿದ ಶೌರ್ಯ ಎಷ್ಟು ದಿನ ನಡೆದೀತು? ಅಭಿಮನ್ಯುವು ಕರ್ಣ, ದುಶ್ಯಾಸನರನ್ನು ಲೆಕ್ಕಿಸುವವನೇ? ದೇವತೆಗಳ ಬಾಯೊಳಗೂ ಬಾಣ ಬಿಟ್ಟಾನು, ಆರು ರಥಿಕರು ಗಾಯಗೊಂಡು ಆಯಾಸ ಪಟ್ಟರು, ಅವರ ಚೆಲುವು ಆಡಂಬರಗಳು ಮಾಯವಾದವು. ಶತ್ರುವನ್ನು ಗೆಲ್ಲುವ ಆಶೆ ಬಿಟ್ಟುಹೋಯಿತು, ಅಭಿಮನ್ಯುವಿನ ಬಾಣಗಳಿಂದ ಅವರ ಶರೀರ ಜರ್ಝರಿತವಾಯಿತು.

ಅರ್ಥ:
ಹೂಸಕ: ಸುಳ್ಳು, ಹುಸಿ; ಶೌರ್ಯ: ಶಕ್ತಿ; ಬಾಳಿಕೆ: ಬದುಕು; ಏಸು: ಎಷ್ಟು; ದಿನ: ವಾರ; ಕೊಂಬು: ಗರ್ವ, ಅಹಂಕಾರ; ಸುರ: ದೇವತೆ; ಕುಮಾರಕ: ಮಗು, ಚಿಕ್ಕವ; ಅಲಗು: ಆಯುಧದ ಮೊನೆ, ಕತ್ತಿ; ಘಾಸಿ: ಆಯಾಸ, ದಣಿವು; ಘಾಯ: ಪೆಟ್ಟು; ವಿಳಾಸ: ಸುಂದರ, ಚೆಲುವು; ಅಳಿ: ನಾಶ; ರಿಪು: ವೈರಿ; ಭಟ: ಸೈನಿಕ; ಗೆಲುವು: ಜಯ; ಆಸೆ: ಇಚ್ಛೆ; ಬೀತು: ಬತ್ತು; ಧಾತು: ತೇಜಸ್ಸು, ವಾಯು; ಕೆಟ್ಟು: ನಾಶ; ಸರಳ: ಬಾಣ; ಸಾರ: ತಿರುಳು, ಗುಣ;

ಪದವಿಂಗಡಣೆ:
ಹೂಸಕದ +ಶೌರಿಯದ +ಬಾಳಿಕೆ
ಯೇಸು +ದಿನವೈ +ಕರ್ಣ +ಕೃಪ +ದು
ಶ್ಯಾಸನರ+ ಕೊಂಬನೆ +ಕುಮಾರಕ +ಸುರರಿಗ್+ಅಲಗಣಸು
ಘಾಸಿಯಾದರು +ಘಾಯವಡೆದು +ವಿ
ಳಾಸವ್+ಅಳಿದುದು +ರಿಪುಭಟನ +ಗೆಲು
ವಾಸೆ +ಬೀತುದು +ಧಾತುಗೆಟ್ಟುದು +ಸರಳ +ಸಾರದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಹೂಸಕದ ಶೌರಿಯದ ಬಾಳಿಕೆಯೇಸು ದಿನವೈ

ಪದ್ಯ ೪೦: ಅಭಿಮನ್ಯುವನ್ನು ಸೈನ್ಯವು ಹೇಗೆ ಮುತ್ತಿತು?

ತಳಿತುದೆಡಬಲವಂಕದಲಿ ಹೆ
ಬ್ಬಲ ಛಡಾಳಿಸಿ ಮೊರೆವ ಭೇರಿಯ
ಘುಳುಘುಳು ಧ್ವನಿ ಕೂಡೆ ಜಡಿದುದು ಕಮಲಜಾಂಡಘಟ
ಹಳವಿಗೆಯ ಸೀಗುರಿಯ ಚಮರಾ
ವಳಿಯ ವಿಮಳಚ್ಛತ್ರ ಪಙ್ತೆಯ
ವಳಯದಲಿ ನಭ ಮುಳುಗೆ ಮುತ್ತಿತು ಸೇನೆ ರಿಪುಭಟನ (ದ್ರೋಣ ಪರ್ವ, ೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ದುಶ್ಯಾಸನ ಎಡಬಲಗಳಲ್ಲಿ ದೊಡ್ಡಸೈನ್ಯ ಸೇರಿತು. ಭೇರಿಯ ಧ್ವನಿಯಿಂದ ಬ್ರಹ್ಮಾಂಡವು ತುಂಬಿತು. ಧ್ವಜ, ಛತ್ರ, ಚಾಮರಗಳಿಂದ ಆಕಾಶವೇ ತುಂಬಿತು. ಸೈನ್ಯವು ಶತ್ರು ವೀರರನ್ನು ಮುತ್ತಿತು.

ಅರ್ಥ:
ತಳಿತ: ಚಿಗುರಿದ; ಎಡಬಲ: ಅಕ್ಕಪಕ್ಕ; ಅಂಕ: ಕಾಳಗ; ಹೆಬ್ಬಲ: ದೊಡ್ಡದಾದ ಶಕ್ತಿ, ಬಲ; ಛಡಾಳಿಸು: ಹೆಚ್ಚಾಗು; ಮೊರೆ: ಧ್ವನಿ ಮಾಡು, ಝೇಂಕರಿಸು; ಭೇರಿ: ನಗಾರಿ, ದುಂದುಭಿ; ಧ್ವನಿ: ಶಬ್ದ; ಕೂಡೆ: ಜೊತೆಯಾಗು; ಜಡಿ: ಬೆದರಿಕೆ, ಹೆದರಿಕೆ; ಕಮಲಜಾಂಡ: ಬ್ರಹ್ಮಾಂಡ; ಘಟ: ಸೇರಿಕೆ, ಕೂಡಿಕೆ; ಹಳವಿಗೆ: ಬಾವುಟ; ಸೀಗುರಿ: ಚಾಮರ; ಆವಳಿ: ಸಾಲು; ವಿಮಳ: ನಿರ್ಮಲ; ಛತ್ರ: ಕೊಡೆ; ಪಙ್ತಿ: ಸಾಲು; ವಳಯ: ಅಂಗಳ, ಆವರಣ; ನಭ: ಆಗಸ; ಮುಳುಗು: ನೀರಿನಲ್ಲಿ ಮೀಯು; ಮುತ್ತು: ಆವರಿಸು; ರಿಪು: ವೈರಿ; ಭಟ: ಸೈನಿಕ;

ಪದವಿಂಗಡಣೆ:
ತಳಿತುದ್+ಎಡಬಲವ್+ಅಂಕದಲಿ +ಹೆ
ಬ್ಬಲ +ಛಡಾಳಿಸಿ +ಮೊರೆವ +ಭೇರಿಯ
ಘುಳುಘುಳು +ಧ್ವನಿ +ಕೂಡೆ+ ಜಡಿದುದು +ಕಮಲಜಾಂಡಘಟ
ಹಳವಿಗೆಯ +ಸೀಗುರಿಯ +ಚಮರಾ
ವಳಿಯ +ವಿಮಳಚ್ಛತ್ರ +ಪಙ್ತೆಯ
ವಳಯದಲಿ+ ನಭ+ ಮುಳುಗೆ +ಮುತ್ತಿತು +ಸೇನೆ +ರಿಪುಭಟನ

ಅಚ್ಚರಿ:
(೧) ಆಕಾಶವು ಕಾಣದ ಕಾರಣ – ಹಳವಿಗೆಯ ಸೀಗುರಿಯ ಚಮರಾವಳಿಯ ವಿಮಳಚ್ಛತ್ರ ಪಙ್ತೆಯ
ವಳಯದಲಿ ನಭ ಮುಳುಗೆ

ಪದ್ಯ ೫೭: ಅಭಿಮನ್ಯುವಿನ ಧನುಷ್ಟಂಕಾರವು ಹೇಗಿತ್ತು?

ಬಾಲನೆನ್ನದಿರೆನುತ ರಿಪುಭಟ
ಭಾಳಲೋಚನನೆನಿಸುವರ್ಜುನ
ಬಾಳುಗೆನುತುದ್ದಂಡ ಕೋದಂಡವನು ಜೇವೊಡೆಯೆ
ಮೇಲು ಜಗವಲ್ಲಾಡಿದವು ಕೊರ
ಳೋಳಿ ಕೆದರಿತು ಕುಸಿದನಹಿ ಪಾ
ತಾಳ ಗೂಳೆಯ ತೆಗೆಯಲಳ್ಳಿರಿಯಿತ್ತು ಬಿಲು ರಭಸ (ದ್ರೋಣ ಪರ್ವ, ೪ ಸಂಧಿ, ೫೭ ಪದ್ಯ)

ತಾತ್ಪರ್ಯ:
ನನ್ನನ್ನು ಇವನು ಬಾಲಕ ಎಂದು ತಾತ್ಸಾರ ಮಾಡಬೇಡ ಎನ್ನುತ್ತಾ ವೈರಿಗಳಗೆ ಶಿವನರೂಪನಾದ ಅಭಿಮನ್ಯುವು ಅರ್ಜುನಂ ಬಾಳ್ಗೆ ಎನ್ನುತ್ತಾ ಧನುಸ್ಸನ್ನು ಹಿಡಿದು ಧನುಷ್ಟಾಂಕಾರ ಮಾಡಿದನು. ಆ ಸದ್ದಿಗೆ ಊರ್ಧ್ವಲೋಕಗಳು ಅಲ್ಲಾಡಿದವು. ಹೆಡೆಗಳು ಕೆದರಿ ಆದಿಶೇಷನು ಕುಸಿದನು. ಪಾತಾಳದವರು ಅಪಾಯ ಬಂದಿತೆಂದು ಗುಳೆ ಹೊರಟರು.

ಅರ್ಥ:
ಬಾಲ: ಚಿಕ್ಕವ, ಕುಮಾರ; ರಿಪು: ವೈರಿ; ಭಟ: ಸೈನಿಕ; ಭಾಳ: ಹಣೆ; ಲೋಚನ: ಕಣ್ಣು; ಭಾಳಲೋಚನ: ಶಿವ; ಬಾಳು: ಬದುಕು, ಜೀವನ; ಉದ್ದಂಡ: ದರ್ಪ, ಗರ್ವ; ಕೋದಂಡ: ಬಿಲ್ಲು, ಧನಸ್ಸು; ಜೇವೊಡೆ: ಧನುಷ್ಟಂಕಾರ ಮಾಡು; ಜಗ: ಪ್ರಪಂಚ; ಅಲ್ಲಾಡು: ಕದಡು; ಕೊರಳು: ಗಂಟಲು; ಕೆದರು: ಹರಡು; ಕುಸಿ: ಜರಿಯುವಿಕೆ, ಕುಸಿತ; ಅಹಿ: ಹಾವು; ಪಾತಾಳ: ಅಧೋಲೋಕ; ಗೂಳೆ: ಆವರಣ; ತೆಗೆ: ಹೊರತರು; ಅಳ್ಳಿರಿ: ನಡುಗಿಸು; ಬಿಲು: ಬಿಲ್ಲು; ರಭಸ: ವೇಗ;

ಪದವಿಂಗಡಣೆ:
ಬಾಲನ್+ಎನ್ನದಿರ್+ಎನುತ +ರಿಪುಭಟ
ಭಾಳಲೋಚನನ್+ಎನಿಸುವ್+ಅರ್ಜುನ
ಬಾಳುಗ್+ಎನುತ್+ಉದ್ದಂಡ +ಕೋದಂಡವನು +ಜೇವೊಡೆಯೆ
ಮೇಲು +ಜಗವಲ್ಲಾಡಿದವು +ಕೊರ
ಳೋಳಿ +ಕೆದರಿತು +ಕುಸಿದನ್+ಅಹಿ +ಪಾ
ತಾಳ +ಗೂಳೆಯ +ತೆಗೆಯಲ್+ಅಳ್ಳಿರಿಯಿತ್ತು +ಬಿಲು +ರಭಸ

ಅಚ್ಚರಿ:
(೧) ಅಭಿಮನ್ಯುವನ್ನು ಕರೆದ ಪರಿ – ರಿಪುಭಟಭಾಳಲೋಚನನೆನಿಸುವ

ಪದ್ಯ ೧೮: ಕರ್ಣನು ಹೇಗೆ ಯುದ್ಧ ಮಾಡುವೆನೆಂದು ಹೇಳಿದನು?

ಕಾದುವೆನು ರಿಪುಭಟರ ಜೀವವ
ಸೇದುವೆನು ಸಮರಂಗ ಭೂಮಿಯ
ನಾದುವೆನು ನೆಣಗೊಬ್ಬಿನಹಿತರ ಗೋಣ ರಕುತದಲಿ
ಹೋದ ದಿವಸಂಗಳಲಿ ಕಾಳೆಗ
ಮಾದುದಂದಿನ ಭೀಷ್ಮರೊಡನೆ ವಿ
ವಾದ ಕಾರಣ ಬೇಡಿಕೊಳಬೇಹುದು ನದೀಸುತನ (ದ್ರೋಣ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ನಾನು ಯುದ್ಧಮಾಡಿ ಶತ್ರುವೀರರ ಪ್ರಾಣಗಳನ್ನು ಸೇದುತ್ತೇನೆ, ಕೊಬ್ಬಿದ ಶತ್ರುಗಳ ಕುತ್ತಿಗೆಗಳನ್ನು ಕತ್ತರಿಸಿ, ರಕ್ತದಿಂದ ರಣಭೂಮಿಯನ್ನು ತೋಯಿಸುತ್ತೇನೆ, ಭೀಷ್ಮರೊಡನೆ ಆದ ವಿವಾದದಿಂದ ಇಷ್ಟುದಿನ ನಾನು ಯುದ್ಧಮಾಡುವುದು ತಪ್ಪಿತು, ಈಗ ಹೋಗಿ ಭೀಷ್ಮರನ್ನು ಬೇಡಿಕೊಳ್ಳುತ್ತೇನೆ ಎಂದು ಕರ್ಣನು ನುಡಿದನು.

ಅರ್ಥ:
ಕಾದು: ಹೋರಾಡು; ರಿಪು: ವೈರಿ; ಭಟ: ಸೈನಿಕ, ಪರಾಕ್ರಮಿ; ಜೀವ: ಪ್ರಾಣ; ಸೇದು: ಮುದುಡು, ದೋಚು; ಸಮರಂಗ: ಯುದ್ಧಭೂಮಿ; ಭೂಮಿ: ಇಳೆ: ಸಮರಂಗಭೂಮಿ: ಯುದ್ಧಭೂಮಿ; ನಾದು: ಕಲಸು, ನೆನಸು; ನೆಣಗೊಬ್ಬು: ಅಹಂಕಾರ; ಅಹಿತ: ವೈರಿ; ಗೋಣು: ಕುತ್ತಿಗೆ; ರಕುತ: ನೆತ್ತರು; ಹೋದ: ಕಳೆದ; ದಿವ: ದಿನ; ಕಾಳೆಗ: ಯುದ್ಧ; ಮಾದುದು: ನಿಂತುಹೋಯಿತು; ವಿವಾದ: ಚರ್ಚೆ, ಕಲಹ; ಕಾರಣ: ನಿಮಿತ್ತ, ಹೇತು, ಮೂಲ ಕಾರಣ; ಬೇಡು: ಕೇಳು; ನದೀಸುತ: ಭೀಷ್ಮ;

ಪದವಿಂಗಡಣೆ:
ಕಾದುವೆನು +ರಿಪುಭಟರ +ಜೀವವ
ಸೇದುವೆನು +ಸಮರಂಗ +ಭೂಮಿಯ
ನಾದುವೆನು +ನೆಣಗೊಬ್ಬಿನ್+ಅಹಿತರ+ ಗೋಣ +ರಕುತದಲಿ
ಹೋದ +ದಿವಸಂಗಳಲಿ +ಕಾಳೆಗ
ಮಾದುದ್+ಅಂದಿನ +ಭೀಷ್ಮರೊಡನೆ +ವಿ
ವಾದ +ಕಾರಣ +ಬೇಡಿಕೊಳಬೇಹುದು +ನದೀಸುತನ

ಅಚ್ಚರಿ:
(೧) ಕಾದು, ಸೇದು, ನಾದು, ಮಾದು – ಪ್ರಾಸ ಪದಗಳು
(೨) ರಿಪುಭಟ, ಅಹಿತ; ಸಮರ, ಕಾಳೆಗ – ಸಮಾನಾರ್ಥ ಪದಗಳು

ಪದ್ಯ ೧೦: ಪಾಂಡವರ ಸೈನಿಕರನ್ನು ಧರ್ಮಜನು ಹೇಗೆ ವರ್ಣಿಸಿದ?

ರಣರಹಸ್ಯಜ್ಞಾನಿಗಳು ಮಿಗೆ
ಮಣಿದರಿಂದ್ರಿಯವಶಕೆ ರಿಪುಭಟ
ಗಣವಿದಾರಣ ತರ್ಕವಿದ್ಯಾವೀತರಾಗಿಗಳು
ಸೆಣಸಿನಲಿ ಸಮದರ್ಶಿಗಳು ಧಾ
ರುಣಿಯ ಪತಿಗಳು ರಾಜಸೇವಾ
ಪ್ರಣಯಮೀಮಾಂಸಾದಿ ಮೂಢರು ನಮ್ಮ ಭಟರೆಂದ (ಭೀಷ್ಮ ಪರ್ವ, ೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಾಂಡವರ ಸೈನಿಕರನ್ನು ಕೃಷ್ಣನಿಗೆ ವಿವರಿಸುತ್ತಾ, ನಮ್ಮ ಸೈನಿಕರು, ಯುದ್ಧ ರಹಸ್ಯವನ್ನರಿತ ಜ್ಞಾನಿಗಳು ಇಂದ್ರಿಯವಶರಾಗಿ ಪೆಟ್ಟುತಿಂದು ತಲೆ ತಗ್ಗಿಸಿದರು. ಶತ್ರು ಭಟರನ್ನು ಬಡಿದು ಸೋಲಿಸಬಲ್ಲ ತರ್ಕವನ್ನು ಬಲ್ಲವರು ಗೆಲುವಿನ ಆಶೆಯನ್ನೇ ಬಿಟ್ಟು ಬಿಟ್ಟರು, ರಾಜರಾದರೋ ಯುದ್ಧದಲ್ಲಿ ಶತ್ರು ಮಿತ್ರ, ಸೋಲು ಗೆಲುವು ಎಲ್ಲವೂ ಒಂದೇ ಎಂದುಕೊಂಡು ಸುಮ್ಮನಾದರು. ರಾಜಸೇವೆಯಲ್ಲಿ ಪ್ರೀತಿಯನ್ನಿಡಬೇಕೆಂಬ ಮೀಮಾಂಸೆ ಯನ್ನು ಸೈನಿಕರು ಮೂಢರಾಗಿ ಕೈಬಿಟ್ಟರು ಎಂದು ಹೇಳಿದನು.

ಅರ್ಥ:
ರಣ: ಯುದ್ಧ; ರಹಸ್ಯ: ಗುಟ್ಟು; ಜ್ಞಾನಿ: ತಿಳಿದವ, ಪಂಡಿತ; ಮಿಗೆ: ಅಧಿಕವಾಗಿ; ಮಣಿ: ಬಾಗು, ಬಗ್ಗು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ವಶ: ಅಧೀನ; ರಿಪುಭಟ: ವೈರಿ ಸೈನಿಕ; ಗಣ: ಗುಂಪು; ತರ್ಕ: ವಿಚಾರ, ಪರ್ಯಾಲೋಚನೆ; ವಿದ್ಯ: ಜ್ಞಾನ; ವೀತ: ಕಳೆದ, ಬಿಟ್ಟ; ರಾಗಿ: ಭೋಗಭಾಗ್ಯಗಳಲ್ಲಿ ಅನುರಾಗವುಳ್ಳ; ಸೆಣಸು: ಹೋರಾಡು; ಸಮದರ್ಶಿ:ಸಮಾನವಾದ ದೃಷ್ಟಿಯುಳ್ಳವನು, ನಿಷ್ಪಕ್ಷಪಾತವಾಗಿರುವವನು; ಧಾರುಣಿ: ಭೂಮಿ; ಪತಿ: ಒಡೆಯ ಪ್ರಣಯ: ಪ್ರೀತಿ; ಮೀಮಾಂಸ: ಆರು ಬಗೆಯ ದರ್ಶನದಲ್ಲಿ ಒಂದು; ಆದಿ: ಮುಂತಾದ; ಮೂಢ: ದಡ್ಡ; ಭಟ: ಸೈನಿಕ;

ಪದವಿಂಗಡಣೆ:
ರಣರಹಸ್ಯ+ಜ್ಞಾನಿಗಳು+ ಮಿಗೆ
ಮಣಿದರ್+ಇಂದ್ರಿಯವಶಕೆ+ ರಿಪುಭಟ
ಗಣವಿದಾರಣ+ ತರ್ಕ+ವಿದ್ಯಾ+ವೀತ+ರಾಗಿಗಳು
ಸೆಣಸಿನಲಿ +ಸಮದರ್ಶಿಗಳು +ಧಾ
ರುಣಿಯ +ಪತಿಗಳು +ರಾಜಸೇವಾ
ಪ್ರಣಯ+ಮೀಮಾಂಸಾದಿ +ಮೂಢರು+ ನಮ್ಮ+ ಭಟರೆಂದ

ಅಚ್ಚರಿ:
(೧) ರಾಜ ಎಂದು ಕರೆಯಲು ಧಾರುಣಿಯ ಪತಿ ಎಂಬ ಪದ ಪ್ರಯೋಗ

ಪದ್ಯ ೨೨: ದೇವತೆಗಳೇಕೆ ಗೊಂದಲಕ್ಕೀಡಾದರು?

ಸುರರಿಗತ್ತಣ ಗಜಬಜವ ಪರಿ
ಹರಿಸಲರಿಯದೆ ವೀರ ಭೀಷ್ಮನ
ಧುರವನೀಕ್ಷಿಸಲಿತ್ತಲಳವಡದೇನನುಸುರುವೆನು
ಅರರೆ ಅಂಬರಸರಸಿ ರಿಪುಭಟ
ವರರ ಮುಖಪಂಕರುಹವನ ವಿ
ಸ್ತರಣವಾದುದೆನಲ್ಕೆ ಗಂಗಾಸೂನು ಕೈಕೊಂಡ (ಭೀಷ್ಮ ಪರ್ವ, ೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ದೇವತೆಗಳೂ ಸಂದಿಗ್ಧರಾದರು, ಅಮರಾವತಿಯಲ್ಲಿ ಆಗುತ್ತಿದ್ದ ಗಲಭೆಯನ್ನು ನಿಲ್ಲಿಸುವುದೋ, ಇತ್ತ ಭೀಷ್ಮನ ಯುದ್ಧವನ್ನು ನೋಡುವುದೋ! ಆಕಾಶ ಸರೋವರದಲ್ಲಿ ಭೀಷ್ಮನ ವಿರೋಧಿಗಳ ಮುಖಕಮಲ ವನಗಳು ಬೆಳೆಯುತ್ತಾ ಹೋದವು ಎಂಬಂತೆ ಭೀಷ್ಮನು ಯುದ್ಧಮಾಡಿದನು.

ಅರ್ಥ:
ಸುರರು: ದೇವತೆ; ಗಜಬಜ: ಗಲಾಟೆ, ಕೋಲಾಹಲ; ಪರಿಹರಿಸು: ನಿವಾರಿಸು; ಅರಿ: ತಿಳಿ; ವೀರ: ಶೂರ; ಧುರ: ಯುದ್ಧ; ಈಕ್ಷಿಸು: ನೋಡು; ಉಸುರು: ಮಾತನಾಡು; ಅರರೆ: ಆಶ್ಚರ್ಯ ಸೂಚಕ ಪದ; ಅಂಬರ: ಆಗಸ; ಸರಸಿ: ಸರೋವರ; ರಿಪು: ವೈರಿ; ಭಟ: ಸೈನಿಕ; ವರ: ಶ್ರೇಷ್ಠ; ಮುಖ: ಆನನ; ಪಂಕರುಹ: ತಾವರೆ;
ವನ: ಕಾಡು; ವಿಸ್ತರಣ: ವಿಸ್ತಾರ; ಕೈಕೊಳ್ಳು: ಸ್ವೀಕರಿಸು, ಧರಿಸು;

ಪದವಿಂಗಡಣೆ:
ಸುರರಿಗ್+ಅತ್ತಣ +ಗಜಬಜವ +ಪರಿ
ಹರಿಸಲ್+ಅರಿಯದೆ +ವೀರ +ಭೀಷ್ಮನ
ಧುರವನ್+ಈಕ್ಷಿಸಲ್+ಇತ್ತಲ್+ಅಳವಡದೇನನ್+ಉಸುರುವೆನು
ಅರರೆ +ಅಂಬರ+ಸರಸಿ+ ರಿಪುಭಟ
ವರರ +ಮುಖ+ಪಂಕರುಹ+ವನ+ ವಿ
ಸ್ತರಣವಾದುದ್+ಎನಲ್ಕೆ +ಗಂಗಾಸೂನು +ಕೈಕೊಂಡ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಂಬರಸರಸಿ ರಿಪುಭಟವರರ ಮುಖಪಂಕರುಹವನ ವಿಸ್ತರಣವಾದುದೆನಲ್ಕೆ