ಪದ್ಯ ೪೩: ಅರ್ಜುನನು ಕೃಷ್ಣನಲ್ಲಿ ಏನೆಂದು ಬೇಡಿದನು?

ದೇವ ಬೆಸಸಿನ್ನನಿಲಸೂನು ಸ
ಜೀವನಹಿತನಿಬರ್ಹಣ ಪ್ರ
ಸ್ತಾವವನು ಕರುಣಿಸುವುದಾತನ ಧರ್ಮವಿಕೃತಿಗ
ನೀವು ಕಂಡಿರೆ ನಾಭಿ ಜಂಘೆಗೆ
ಡಾವರಿಸಿದನು ಹಲವು ಬಾರಿ ಜ
ಯಾವಲಂಬನವೆಂತು ಕೃಪೆಮಾಡೆಂದನಾ ಪಾರ್ಥ (ಗದಾ ಪರ್ವ,೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನ ಬಳಿಗೆ ಹೋಗಿ, ಭೀಮನು ಜೀವಿಸಿದ್ದಾನೆ, ಶತ್ರುವು ಹಲವು ಬಾರಿ ಅವನ ನಾಭಿ ಮತ್ತು ಜಂಘೆಗೂ ಹೊಡೆದಿದ್ದಾನೆ. ಶತ್ರುವಿನ ವಧೆ ಹೇಗಾಗಬೇಕೆಂದು ದಯವಿಟ್ಟು ತಿಳಿಸು ಎಂದು ಅರ್ಜುನನು ಬೇಡಿದನು.

ಅರ್ಥ:
ದೇವ: ಭಗವಂತ; ಬೆಸಸು: ಹೇಳು; ಅನಿಲಸೂನು: ಭೀಮ; ಸಜೀವ: ಪ್ರಾಣವಿರುವ; ಅಹಿತ: ವೈರಿ; ಪ್ರಸ್ತಾವ: ವಿಚಾರ ಹೇಳುವುದು; ಕರುಣಿಸು: ದಯೆ ತೋರು; ಧರ್ಮ: ಧಾರಣೆ ಮಾಡಿದುದು; ವಿಕೃತಿ: ಬದಲಾವಣೆ, ವ್ಯತ್ಯಾಸ, ಕುರೂಪ; ಕಂಡು: ನೋಡು; ನಾಭಿ: ಹೊಕ್ಕಳು; ಜಂಘೆ: ತೊಡೆ; ಡಾವರಿಸು: ಹೊಡೆ; ಹಲವು: ಬಹಳ; ಬಾರಿ: ಸಾರ್ತಿ; ಜಯ: ಗೆಲುವು; ಅವಲಂಬನ: ಆಶ್ರಯ, ಆಸರೆ; ಕೃಪೆ: ದಯೆ;

ಪದವಿಂಗಡಣೆ:
ದೇವ +ಬೆಸಸಿನ್ನ್+ಅನಿಲಸೂನು +ಸ
ಜೀವನ್+ಅಹಿತನಿಬರ್ಹಣ+ ಪ್ರ
ಸ್ತಾವವನು +ಕರುಣಿಸುವುದ್+ಆತನ +ಧರ್ಮ+ವಿಕೃತಿಗ
ನೀವು +ಕಂಡಿರೆ +ನಾಭಿ +ಜಂಘೆಗೆ
ಡಾವರಿಸಿದನು +ಹಲವು +ಬಾರಿ +ಜಯ
ಅವಲಂಬನವೆಂತು +ಕೃಪೆಮಾಡೆಂದನಾ +ಪಾರ್ಥ

ಅಚ್ಚರಿ:
(೧) ಕರುಣಿಸು, ಕೃಪಮಾಡು – ಸಾಮ್ಯಾರ್ಥ ಪದಗಳು

ಪದ್ಯ ೫: ಧರ್ಮಜನು ಕೃಷ್ಣನಲ್ಲಿ ಏನು ಬೇಡಿದನು?

ದೇವ ಕಂಡಿರೆ ಕುರುಪತಿಯ ಮಾ
ಯಾವಿಡಂಬನವಿದ್ಯೆಯನು ನಿ
ಷ್ಠೀವನಾವಿರ್ಭೂತ ಸಲಿಲಸ್ತಂಭ ಡಂಬರವ
ಆವುದಿಲ್ಲಿಯ ವಿಧಿಯ ಸಮರ
ವ್ಯಾವಹಾರಿಕ ವಿಷಯ ತಪ್ಪದೆ
ನೀವು ಬೆಸಸುವುದೆಂದನರಸನು ದೇವಕೀಸುತನ (ಗದಾ ಪರ್ವ, ೫ ಸಂಧಿ, ೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಶ್ರೀಕೃಷ್ಣನಿಗೆ, ದೇವ ಕೌರವನು ಜಲಸ್ತಂಭ ವಿದ್ಯೆಯನ್ನವಲಂಭಿಸಿ ಮಾಯೆಯಿಂದ ನೀರಿನಲ್ಲಿ ಮುಳುಗಿ ಅಲ್ಲಿಯೇ ಇದ್ದಾನೆ. ಈಗ ಯುದ್ಧದ ವ್ಯವಹಾರವನ್ನು ಹೇಗೆ ಮುಂದುವರಿಸೋಣ, ಅಪ್ಪಣೆಕೊಡು ಎಂದು ಬೇಡಿದನು.

ಅರ್ಥ:
ದೇವ: ಭಗವಂತ; ಕಂಡು: ನೋಡು; ಮಾಯ: ಗಾರುಡಿ, ಇಂದ್ರಜಾಲ; ವಿಡಂಬ: ಅನುಸರಣೆ; ವಿದ್ಯೆ: ಜ್ಞಾನ; ನಿಷ್ಠೀವನ: ಹೊರಚೆಲ್ಲುವಿಕೆ; ಆವಿರ್ಭೂತ: ಹುಟ್ಟಿದ; ಸಲಿಲ: ಜಲ; ಸ್ತಂಭ: ಸ್ಥಿರವಾಗಿರುವಿಕೆ; ಡಂಬರ: ಆಡಂಬರ, ಜಂಭ; ವಿಧಿ: ನಿಯಮ; ಸಮರ: ಯುದ್ಧ; ವ್ಯಾವಹಾರ: ಕೆಲಸ, ಉದ್ಯೋಗ; ವಿಷಯ: ವಿಚಾರ, ಸಂಗತಿ; ಬೆಸಸು: ಹೇಳು, ಆಜ್ಞಾಪಿಸು; ಅರಸು: ರಾಜ; ಸುತ: ಮಗ;

ಪದವಿಂಗಡಣೆ:
ದೇವ +ಕಂಡಿರೆ +ಕುರುಪತಿಯ +ಮಾ
ಯಾ+ವಿಡಂಬನ+ವಿದ್ಯೆಯನು +ನಿ
ಷ್ಠೀವನ+ಆವಿರ್ಭೂತ +ಸಲಿಲ+ಸ್ತಂಭ +ಡಂಬರವ
ಆವುದಿಲ್ಲಿಯ +ವಿಧಿಯ +ಸಮರ
ವ್ಯಾವಹಾರಿಕ +ವಿಷಯ+ ತಪ್ಪದೆ
ನೀವು +ಬೆಸಸುವುದ್+ಎಂದನ್+ಅರಸನು +ದೇವಕೀ+ಸುತನ

ಅಚ್ಚರಿ:
(೧) ದೇವ, ದೇವಕೀಸುತ – ಕೃಷ್ಣನನ್ನು ಕರೆದ ಪರಿ

ಪದ್ಯ ೩೯: ಪಾಶುಪತಾಸ್ತ್ರದ ಪ್ರಭಾವ ಹೇಗಿತ್ತು?

ತೆಗೆಯೆ ಜಗ ಕಂಪಿಸಿತು ತಾರೆಗ
ಳೊಗಡಿಸಿತು ನಭ ಜಲಧಿ ರತ್ನಾ
ಳಿಗಳನೋಕರಿಸಿತು ಕುಲಾದ್ರಿಗಳೊಲೆದವೆಡಬಲಕೆ
ದಿಗಿಭತತಿ ನಡುನಡುಗೆ ತಳ ವಾ
ಸುಗಿ ಫಣಾಳಿಯ ಸೆಳೆಯ ಬಲುಸರ
ಳುಗಿದು ದಳ್ಳುರಿದಿರುಳ ಕಾರಿತು ಬೆಸಸು ಬೆಸಸೆನುತ (ದ್ರೋಣ ಪರ್ವ, ೧೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಪಾಶುಪತಾಸ್ತ್ರವನ್ನು ಅರ್ಜುನನು ಹೊರತೆಗೆಯಲು ಜಗತ್ತು ನಡುಗಿತು. ಆಕಾಶದಿಂದ ನಕ್ಷತ್ರಗಳುರುಳಿದವು. ಸಮುದ್ರ ರತ್ನಗಳನ್ನು ಹೊರಚೆಲ್ಲಿತು. ಕುಲಪರ್ವತಗಳು ಎಡಬಲಕ್ಕೆ ಅಲುಗಾಡಿದವು. ದಿಗ್ಗಜಗಳು ನಡ ನಡುಗಿದವು. ವಾಸುಕಿಯು ತನ್ನ ಹೆಡೆಗಳನ್ನು ಕುಗ್ಗಿಸಿಕೊಂಡಿತು ಪಾಶುಪತಾಸ್ತ್ರವು ದಳ್ಳುರಿಯನ್ನೂ ಹೊಗೆಯನ್ನೂ ಕಾರಿ ಅಪ್ಪಣೆಯನ್ನು ನೀಡಿ ಎಂದು ಬೇಡಿತು.

ಅರ್ಥ:
ತೆಗೆ: ಹೊರತರು; ಜಗ: ಪ್ರಪಂಚ; ಕಂಪಿಸು: ನಡುಗು; ತಾರೆ: ನಕ್ಷತ್ರ; ಒಗಡಿಸು: ಧಿಕ್ಕರಿಸು, ಹೇಸು; ನಭ: ಆಗಸ; ಜಲಧಿ: ಸಾಗರ; ರತ್ನಾಳಿ: ಸಮುದ್ರ; ಓಕರಿಸು: ಅಸಹ್ಯಪಡು; ಕುಲಾದ್ರಿ: ಬೆಟ್ಟ; ದಿಗಿಭ: ದಿಗ್ಗಜ; ತತಿ: ಗುಂಪು; ನಡುಗೆ: ಮಧ್ಯ; ತಳ: ಸಮತಟ್ಟಾದ ಪ್ರದೇಶ; ವಾಸುಕಿ: ಅಷ್ಟ ಫಣಿಗಳಲ್ಲಿ ಒಂದು; ಫಣ: ಹಾವು; ಆಳಿ: ಗುಂಪು; ಸೆಳೆ: ಆಕರ್ಷಣೆ; ಬಲುಸರಳು: ಮಹಾಬಾಣ; ದಳ್ಳುರಿ: ಬೆಂಕಿ; ಕಾರು: ಹೊರಹಾಕು; ಬೆಸಸು: ಕಾರ್ಯ; ಉಗಿ: ಹೊರಹಾಕು;

ಪದವಿಂಗಡಣೆ:
ತೆಗೆಯೆ +ಜಗ +ಕಂಪಿಸಿತು +ತಾರೆಗಳ್
ಒಗಡಿಸಿತು +ನಭ +ಜಲಧಿ +ರತ್ನಾ
ಳಿಗಳನ್+ಓಕರಿಸಿತು +ಕುಲಾದ್ರಿಗಳ್+ಒಲೆದವ್+ಎಡಬಲಕೆ
ದಿಗ್+ಇಭ+ತತಿ +ನಡುನಡುಗೆ +ತಳ +ವಾ
ಸುಗಿ +ಫಣಾಳಿಯ +ಸೆಳೆಯ +ಬಲುಸರ
ಳುಗಿದು +ದಳ್ಳುರಿದ್+ಇರುಳ +ಕಾರಿತು +ಬೆಸಸು +ಬೆಸಸೆನುತ

ಅಚ್ಚರಿ:
(೧) ಪಾಶುಪತಾಸ್ತ್ರದ ಪ್ರಭಾವ – ಜಗ ಕಂಪಿಸಿತು ತಾರೆಗಳೊಗಡಿಸಿತು ನಭ ಜಲಧಿ ರತ್ನಾ
ಳಿಗಳನೋಕರಿಸಿತು ಕುಲಾದ್ರಿಗಳೊಲೆದವೆಡಬಲಕೆ

ಪದ್ಯ ೩೭: ಧರ್ಮಜನು ಭೀಮನಿಗೆ ಎಲ್ಲಿಗೆ ಹೋಗಲು ಹೇಳಿದ?

ಹಾ ನುಡಿಯದಿರು ನಿಲು ಪಿತಾಮಹ
ನೇನ ಬೆಸಸಿದುದಕೆ ಹಸಾದವು
ನೀನು ನಡೆ ಪಾಳಯಕೆ ಬಿಡುಗುರಿತನವ ಮಾಣೆಯಲ
ಮೌನಮುದ್ರೆಯ ಹಿಡಿಯೆನಲು ಪವ
ಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ ನೋಡಿ ಮೆಲ್ಲನೆ ಸರಿದನಲ್ಲಿಂದ (ಭೀಷ್ಮ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ಭೀಮನ ಮಾತನ್ನು ಕೇಳಿ ಧರ್ಮಜನು, ಸಾಕು, ಮಾತನಾಡಬೇಡ, ತಾತನು ಏನು ಹೇಳಿದರೂ ಅದೇ ನಮಗೆ ಪ್ರಸಾದ. ಛೇ ನೀನು ಉರಿತುಂಬಿದ ಮಾತಾಡುವುದನ್ನು ಬಿಡುವುದೇ ಇಲ್ಲವಲ್ಲ. ಸುಮ್ಮನೆ ಪಾಳೆಯಕ್ಕೆ ಹೋಗು, ಎನ್ನಲು ಭೀಮನು ಸಿಟ್ಟಿನಿಂದ ಅಣ್ಣನನ್ನು ನೋಡುತ್ತಾ ಅಲ್ಲಿಂದ ಹೊರಟು ಹೋದನು.

ಅರ್ಥ:
ನುಡಿ: ಮಾತು; ನಿಲು: ನಿಲ್ಲು, ತಾಳು; ಪಿತಾಮಹ: ತಾತ; ಬೆಸಸು: ಆಜ್ಞಾಪಿಸು, ಹೇಳು; ಹಸಾದ: ಪ್ರಸಾದ; ನಡೆ: ಹೋಗು; ಪಾಳಯ: ಸೀಮೆ; ಬಿಡು: ತೊರೆ, ಹೋಗು; ಉರಿ: ಬೆಂಕಿ; ಮಾಣು: ನಿಲ್ಲು, ಸ್ಥಗಿತಗೊಳ್ಳು; ಮೌನ: ಸುಮ್ಮನಿರುವಿಕೆ; ಮುದ್ರೆ: ಚಿಹ್ನೆ; ಹಿಡಿ: ಗ್ರಹಿಸು; ಪವಮಾನ: ವಾಯು; ನಂದನ: ಮಗ; ಖಾತಿ: ಕೋಪ; ಸೂನು: ಮಗ; ಬಿಡು: ತೊರೆ, ತ್ಯಜಿಸು; ನೋಡು: ತೋರು, ಗೋಚರಿಸು; ಮೆಲ್ಲನೆ: ನಿಧಾನವಾಗಿ; ಸರಿ: ಚಲಿಸು, ಗಮಿಸು;

ಪದವಿಂಗಡಣೆ:
ಹಾ +ನುಡಿಯದಿರು +ನಿಲು +ಪಿತಾಮಹನ್
ಏನ+ ಬೆಸಸಿದುದಕೆ+ ಹಸಾದವು
ನೀನು +ನಡೆ +ಪಾಳಯಕೆ +ಬಿಡುಗ್+ಉರಿತನವ +ಮಾಣೆಯಲ
ಮೌನಮುದ್ರೆಯ +ಹಿಡಿಯೆನಲು+ ಪವ
ಮಾನನಂದನ+ ಖಾತಿಯಲಿ +ಯಮ
ಸೂನುವನು+ ಬಿಡೆ +ನೋಡಿ +ಮೆಲ್ಲನೆ +ಸರಿದನಲ್ಲಿಂದ

ಅಚ್ಚರಿ:
(೧) ಸುಮ್ಮನಿರು ಎಂದು ಹೇಳುವ ಪರಿ – ಮೌನಮುದ್ರೆಯ ಹಿಡಿಯೆನಲು ಪವಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ

ಪದ್ಯ ೩೯: ಧರ್ಮಜನು ಪರಿಹಾರಕ್ಕೆ ಯಾರ ಕಡೆ ನೋಡಿದನು?

ಈತನಳಿಯದೆ ಮತ್ಪ್ರತಿಜ್ಞಾ
ಖ್ಯಾತಿ ಮಸುಳದೆ ತಿದ್ದುವನುವನು
ಭೂತಳಾಧಿಪ ನೀವು ಬೆಸಸುವುದೆನಲು ಮುನಿಜನವ
ಆತನೋಡಿದ ನಾವುದಿದಕನು
ನೀತಿಯೆನೆ ಧೌಮ್ಯಾದಿ ಸುಜನ
ವ್ರಾತ ನಿಶ್ಚೈಸಿದರು ಮನದಲಿ ಧರ್ಮನಿರ್ಣಯವ (ಅರಣ್ಯ ಪರ್ವ, ೨೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಭೀಮನು, ನನ್ನ ಪ್ರತಿಜ್ಞಾಭಂಗವೂ ಆಗಬಾರದು, ಇವನೂ ಬದುಕಬೇಕು, ನೀವು ನಮಗೆ ರಾಜರು, ಇದಕ್ಕೇನು ಮಾದಬೇಕೋ ನೀವೇ ತಿಳಿಸಿ ಎಂದು ಭೀಮನು ಹೇಳಲ್, ಧರ್ಮಜನು ಧೌಮ್ಯನೇ ಮೊದಲಾದ ಋಷಿಗಳನ್ನು ನೋಡಿದನು, ಅವರು ಇದಕ್ಕೆ ಪರಿಹಾರವನ್ನು ಮನಸ್ಸಿನಲ್ಲೇ ನಿಶ್ಚಯಿಸಿದರು.

ಅರ್ಥ:
ಅಳಿ: ಸಾವು; ಪ್ರತಿಜ್ಞೆ: ಶಪಥ; ಅಖ್ಯಾತಿ: ಅಪ್ರಸಿದ್ಧ; ಮಸುಳು: ಮಂಕಾಗು; ತಿದ್ದು: ಸರಿಪಡಿಸು; ಭೂತಳ: ಭೂಮಿ; ಅಧಿಪ: ರಾಜ; ಬೆಸಸು: ಹೇಳು, ಆಜ್ಞಾಪಿಸು; ಮುನಿ: ಋಷಿ; ನೋಡು: ವೀಕ್ಷಿಸು; ನೀತಿ: ಒಳ್ಳೆಯ ನಡತೆ; ಸುಜನ: ಸಜ್ಜನ; ವ್ರಾತ: ಗುಂಪು; ನಿಶ್ಚೈಸು: ನಿರ್ಧರಿಸು; ಮನ: ಮನಸ್ಸು; ನಿರ್ಣಯ: ತೀರ್ಮಾನ; ಅನುವು: ರೀತಿ;

ಪದವಿಂಗಡಣೆ:
ಈತನ್+ಅಳಿಯದೆ +ಮತ್+ಪ್ರತಿಜ್ಞ
ಅಖ್ಯಾತಿ +ಮಸುಳದೆ +ತಿದ್ದುವ್+ಅನುವನು
ಭೂತಳ+ಅಧಿಪ +ನೀವು +ಬೆಸಸುವುದ್+ಎನಲು +ಮುನಿಜನವ
ಆತ+ನೋಡಿದನ್+ ಆವ್+ಉದಿದಕ್+ಅನು
ನೀತಿಯೆನೆ +ಧೌಮ್ಯಾದಿ +ಸುಜನ
ವ್ರಾತ +ನಿಶ್ಚೈಸಿದರು+ ಮನದಲಿ+ ಧರ್ಮ+ನಿರ್ಣಯವ

ಅಚ್ಚರಿ:
(೧) ಅಳಿಯದೆ, ಮಸುಳದೆ – ಪದಗಳ ಬಳಕೆ

ಪದ್ಯ ೪೧: ಕೌರವನು ಭೀಷ್ಮಾದಿಗಳಿಗೆ ಏನು ಹೇಳಿದ?

ಈಸುದಿನ ಸಾಮ್ರಾಜ್ಯ ಸೌಖ್ಯವಿ
ಲಾಸದಲಿ ಬಳಸಿದೆನು ಸಾಕಿ
ನ್ನೀ ಶರೀರವ ನೂಕಿ ನಿಲುವೆನು ಮುಕ್ತಿರಾಜ್ಯದಲಿ
ಆಶೆಯವನಿಯೊಳಿಲ್ಲ ವಿಷಯಾ
ಭ್ಯಾಸಿಗೊಮ್ಮೆ ವಿರಕ್ತಿ ದೆಸೆಯಹು
ದೈಸಲೇ ಗುರು ನೀವು ಬೆಸಸುವುದೆಂದನಾ ಭೂಪ (ಅರಣ್ಯ ಪರ್ವ, ೨೨ ಸಂಧಿ, ೪೧ ಪದ್ಯ)

ತಾತ್ಪರ್ಯ:
ಇಷ್ಟು ದಿನ ಸಾಮ್ರಾಜ್ಯ ವಿಲಾಸದ ಸೌಖ್ಯವನ್ನನುಭವಿಸಿದೆ. ಅದು ಸಾಕಾಯಿತು. ಈ ಶರೀರವನ್ನು ಬಿಟ್ಟು ಮುಕ್ತಿರಾಜ್ಯದಲ್ಲಿ ನಿಲ್ಲುತ್ತೇನೆ. ನನಗೆ ಭೂಮಿಯ ಮೇಲಿನ ಆಶೆಯಿಲ್ಲ. ನಾನು ವಿಷಯಸುಖದಲ್ಲೇ ಮಗ್ನನಾಗಿದ್ದವನು. ಅಂತಹವನಿಗೂ ಒಮ್ಮೆ ವಿರಕ್ತಿ ಬರುತ್ತದೆ, ಆದುದರಿಂದ ನೀವು ಅಪ್ಪಣೆ ನೀಡಬೇಕು ಎಂದು ಗುರುಗಳ ಸ್ಥಾನದಲ್ಲಿದ್ದ ಭೀಷ್ಮಾದಿಗಳನ್ನುದ್ದೇಶಿಸಿ ಹೇಳಿದನು.

ಅರ್ಥ:
ಈಸು: ಇಷ್ಟು; ದಿನ: ದಿವಸ; ಸಾಮ್ರಾಜ್ಯ: ರಾಜ್ಯ, ರಾಷ್ಟ್ರ; ಸೌಖ್ಯ: ಸುಖ; ವಿಲಾಸ: ವಿಹಾರ; ಬಳಸು: ಆವರಿಸುವಿಕೆ; ಸಾಕು: ತಡೆ; ಶರೀರ: ತನು; ನೂಕು: ತಳ್ಳು; ನಿಲುವೆ: ನಿಲ್ಲು; ಮುಕ್ತಿ: ಬಿಡುಗಡೆ, ವಿಮೋಚನೆ; ಆಶೆ: ಆಸೆ, ಬಯಕೆ; ಅವನಿ: ಭೂಮಿ; ವಿಷಯ: ಇಂದ್ರಿಯ ಗೋಚರವಾಗುವ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆಂಬ ಜ್ಞಾನೇಂದ್ರಿಯಗಳು; ಅಭ್ಯಾಸಿ: ರೂಢಿ ಮಾಡಿಕೊಂಡಿರುವವ; ವಿರಕ್ತಿ: ವೈರಾಗ್ಯ; ದೆಸೆ: ದೆಶೆ, ಅವಸ್ಥೆ; ಐಸಲೇ: ಅಲ್ಲವೇ; ಗುರು: ಆಚಾರ್ಯ; ಬೆಸಸು: ಹೇಳು, ಆಜ್ಞಾಪಿಸು; ಭೂಪ: ರಾಜ;

ಪದವಿಂಗಡಣೆ:
ಈಸುದಿನ+ ಸಾಮ್ರಾಜ್ಯ +ಸೌಖ್ಯ+ವಿ
ಲಾಸದಲಿ +ಬಳಸಿದೆನು+ ಸಾಕಿನ್
ಈ+ ಶರೀರವ +ನೂಕಿ +ನಿಲುವೆನು +ಮುಕ್ತಿ+ರಾಜ್ಯದಲಿ
ಆಶೆ+ಅವನಿಯೊಳಿಲ್ಲ+ ವಿಷಯ
ಅಭ್ಯಾಸಿಗೊಮ್ಮೆ +ವಿರಕ್ತಿ+ ದೆಸೆ+ಅಹುದ್
ಐಸಲೇ +ಗುರು +ನೀವು +ಬೆಸಸುವುದೆಂದನಾ+ ಭೂಪ

ಅಚ್ಚರಿ:
(೧) ಸಾಯುತ್ತೇನೆ ಎಂದು ಹೇಳುವ ಪರಿ – ಈ ಶರೀರವ ನೂಕಿ ನಿಲುವೆನು ಮುಕ್ತಿರಾಜ್ಯದಲಿ

ಪದ್ಯ ೮೫: ವಿದುರನು ಪಾಂಡವರಿಗೆ ಏನು ಹೇಳಿದನು?

ಧರಣಿಪತಿ ಬೆಸಸಿದನು ನೀವೈ
ವರು ಕುಮಾರರು ರಾಜಸೂಯಾ
ಧ್ವರ ಮಹಾವ್ರತದೇಕ ಭುಕ್ತಾದಿಯಲಿ ಬಳಲಿದಿರಿ
ವರಸಭೆಯ ರಚಿಸಿದರು ಹಸ್ತಿನ
ಪುರಿಗೆ ಬಿಜಯಂಗೈದು ವಿಭವೋ
ತ್ಕರದ ವಿಮಳದ್ಯೂತದಲಿ ರಮಿಸುವುದು ನೀವೆಂದ (ಸಭಾ ಪರ್ವ, ೧೩ ಸಂಧಿ, ೮೫ ಪದ್ಯ)

ತಾತ್ಪರ್ಯ:
ನೀವೈವರು ರಾಜಸೂಯ ಮಹಾಯಾಗದ ಕಾಲದಲ್ಲಿ ದಿನಕ್ಕೊಂದು ಊಟ ಮುಂತಾದ ಕಠಿಣ ಕ್ರಮಗಳನ್ನು ಆಚರಿಸಿ ದಣಿದಿದ್ದೀರಿ, ಕೌರವರು ಹೊಸದೊಂದು ಸಭಾಸ್ಥಾನವನ್ನು ಕಟ್ಟಿಸಿದ್ದಾರೆ, ನೀವು ಹಸ್ತಿನಾಪುರಕ್ಕೆ ಬಂದು, ವೈಭವದಿಂದ ಸುಖದ್ಯೂತದಲ್ಲಿ ಆನಂದಿಸಿರಿ ಎಂದು ಧೃತರಾಷ್ಟ್ರ ಭೂಪತಿ ಹೇಳಿಕಳಿಸಿದ್ದಾನೆ.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಪತಿ: ಒಡೆಯ; ಬೆಸಸು: ಕೇಳು; ಕುಮಾರ: ಮಕ್ಕಳು; ಅಧ್ವರ: ಯಾಗ; ವ್ರತ: ನಿಯಮ; ಮಹಾ: ಶ್ರೇಷ್ಠ; ಭುಕ್ತ: ಅನುಭವಿಸಿದ; ಆದಿ: ಮುಂತಾದ; ಬಳಲು: ಆಯಾಸ; ವರ: ಶ್ರೇಷ್ಠ; ಸಭೆ: ಓಲಗ; ರಚಿಸಿ: ನಿರ್ಮಿಸಿ; ಬಿಜಯಂಗೈದು: ಬಂದು; ವಿಭವ: ಸಿರಿ, ಸಂಪತ್ತು; ಉತ್ಕರ: ಸಮೂಹ; ವಿಮಳ: ನಿರ್ಮಲ; ದ್ಯೂತ: ಪಗಡೆ, ಜೂಜು; ರಮಿಸು: ಆನಂದಿಸು;

ಪದವಿಂಗಡಣೆ:
ಧರಣಿಪತಿ +ಬೆಸಸಿದನು +ನೀವೈ
ವರು+ ಕುಮಾರರು+ ರಾಜಸೂಯ
ಅಧ್ವರ +ಮಹಾವ್ರತದ್+ಏಕ ಭುಕ್ತ +ಆದಿಯಲಿ +ಬಳಲಿದಿರಿ
ವರಸಭೆಯ +ರಚಿಸಿದರು +ಹಸ್ತಿನ
ಪುರಿಗೆ+ ಬಿಜಯಂಗೈದು +ವಿಭವ
ಉತ್ಕರದ +ವಿಮಳ+ದ್ಯೂತದಲಿ +ರಮಿಸುವುದು +ನೀವೆಂದ

ಅಚ್ಚರಿ:
(೧) ಒಂದು ಹೊತ್ತು ಊಟ ಎಂದು ಹೇಳಲು – ಏಕಭುಕ್ತ ಪದ ಪ್ರಯೋಗ

ಪದ್ಯ ೬೧: ಧೃತರಾಷ್ಟ್ರ ಯಾರ ಜೊತೆ ಉಪಾಯವನ್ನು ವಿಮರ್ಶಿಸುವುದು ಒಳಿತೆಂದನು?

ಅಹುದು ತಪ್ಪೇನಿದುವೆ ಸಾಧನ
ವಹುದು ವಿದುರನ ಬುದ್ಧಿಗಭಿಮತ
ವಹಡೆ ಕರೆಸುವೆವೈಸಲೇ ಬೆಸಸುವೆನು ವಿದುರಂಗೆ
ಕುಹಕವಾತನಲಿಲ್ಲ ನೋಡುವ
ನಿಹಪರತ್ರದ ಹಿತವನಿದ ನಿ
ರ್ವಹಿಸಿ ಕೊಡುವರೆ ಮಂತ್ರವೆಂದನು ಮಗಗೆ ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ತನ್ನ ಮಗನ ವಿಚಾರವನ್ನು ಕೇಳಿ, ಹೌದು ನೀನು ಹೇಳುತ್ತಿರುವುದು ಸರಿಯಾಗಿದೆ, ಇದರಲ್ಲೇನು ತಪ್ಪಿಲ್ಲ. ಸರಿಯಾದ ಮಾರ್ಗವೇನೋ ಹೌದು, ವಿದುರನನ್ನು ಕರೆಸಿ ಕೇಳುತ್ತೇನೆ, ವಿದುರನು ಇಹಪರಗಳಿಗೆ ಹಿತವಾವುದು ಎಂದು ಬಲ್ಲವನು. ಆತ ಕುಹಕಿಯಲ್ಲ, ಅವನು ಇದಕ್ಕೆ ಒಪ್ಪಿದರೆ ಇದೇ ಸರಿಯಾದ ಆಲೋಚನೆ ಎಂದನು.

ಅರ್ಥ:
ಅಹುದು: ಹೌದು; ತಪ್ಪು: ಸರಿಯಿಲ್ಲದ; ಸಾಧನ: ಸಾಧಿಸುವಿಕೆ, ಗುರಿಮುಟ್ಟುವಿಕೆ; ಬುದ್ಧಿ: ಚಿತ್ತ, ಅಭಿಮತ: ಅಭಿಪ್ರಾಯ; ಕರೆಸು: ಬರೆಮಾಡು; ಐಸಲೇ: ಅಲ್ಲವೇ; ಬೆಸಸು: ಹೇಳು, ಆಜ್ಞಾಪಿಸು; ಕುಹಕ: ಮೋಸ, ವಂಚನೆ; ನೋಡು: ವೀಕ್ಷಿಸು; ಇಹಪರ: ಈ ಲೋಕ ಮತ್ತು ಪರಲೋಕ; ಹಿತ: ಒಳಿತು; ನಿರ್ವಹಿಸು: ಮಾಡು, ಪೂರೈಸು; ಕೊಡು: ನೀಡು; ಮಂತ್ರ: ವಿಚಾರ, ಆಲೋಚನೆ; ಮಗ: ಪುತ್ರ;

ಪದವಿಂಗಡಣೆ:
ಅಹುದು +ತಪ್ಪೇನ್+ಇದುವೆ +ಸಾಧನ
ವಹುದು +ವಿದುರನ +ಬುದ್ಧಿಗ್+ಅಭಿಮತ
ವಹಡೆ +ಕರೆಸುವೆವ್+ಐಸಲೇ +ಬೆಸಸುವೆನು+ ವಿದುರಂಗೆ
ಕುಹಕವ್+ಆತನಲ್+ಇಲ್ಲ +ನೋಡುವನ್
ಇಹಪರತ್ರದ+ ಹಿತವನ್+ಇದ +ನಿ
ರ್ವಹಿಸಿ +ಕೊಡುವರೆ +ಮಂತ್ರವೆಂದನು+ ಮಗಗೆ+ ಧೃತರಾಷ್ಟ್ರ

ಅಚ್ಚರಿ:
(೧) ವಿದುರನ ಗುಣ – ಕುಹಕವಾತನಲಿಲ್ಲ, ನೋಡುವನಿಹಪರತ್ರದ ಹಿತವನ್

ಪದ್ಯ ೩೭: ಅರ್ಜುನನು ಏಕೆ ಕರ್ಣನನು ಕೊಲ್ಲುವುದಿಲ್ಲವೆಂದ -೨?

ಬಿಸುಟು ಹೋದನು ರಥವ ಸಾರಥಿ
ವಸುಧೆಯಲಿ ರಥವೆದ್ದು ಕೆಡೆದುದು
ನಿಶಿತಮಾರ್ಗಣವಿಲ್ಲ ಕಯ್ಯಲಿ ದಿವ್ಯದನುವಿಲ್ಲ
ಎಸುವಡೆಂತೇಳುವುವು ಕಯ್ ನೀ
ಬೆಸಸುವಡೆ ಮನವೆಂತು ಬಂದುದು
ಬಸುರ ಶಿಖಿ ಬಲುಹಾಯ್ತು ಕರ್ಣನ ಕೊಲುವನಲ್ಲೆಂದ (ಕರ್ಣ ಪರ್ವ, ೨೬ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕರ್ಣನ ಸ್ಥಿತಿಯನ್ನು ನೋಡಿ ಅರ್ಜುನ, ಕೃಷ್ಣ, ಇವನ ಸಾರಥಿಯು ಇವನ ರಥವನ್ನು ತೊರೆದು ಹೋಗಿದ್ದಾನೆ, ರಥವು ನೆಲದಲ್ಲಿ ಹೂತು ಹೋಗಿದೆ, ಕೈಯಲ್ಲಿ ಬಿಲ್ಲಿಲ್ಲ, ಬಾಣವಿಲ್ಲ, ಇವನ ಮೇಲೆ ಬಾಣ ಬಿಡಲು ನನ್ನ ಕೈಯಾದರೂ ಹೇಗೆ ಮೇಲೇಳುತ್ತದೆ? ನೀನಗೆ ಅಪ್ಪಣೆ ಕೊಡಲು ಮನಸ್ಸಾದರೂ ಹೇಗೆ ಬರುತ್ತದೆ? ಹೊಟ್ಟೆಯಲ್ಲಿ ಬೆಂಕಿ ಬಿದ್ದಿದೆ, ಬಹಳ ನೋವಾಗಿದೆ, ನಾನು ಕರ್ಣನನ್ನು ಕೊಲ್ಲುವುದಿಲ್ಲ ಎಂದು ಅರ್ಜುನನು ಕೃಷ್ಣನಿಗೆ ಹೇಳಿದನು.

ಅರ್ಥ:
ಬಿಸುಟು: ಹೊರಹಾಕು, ತೊರೆದು; ಹೋಗು: ತೆರಳು; ರಥ: ಬಂಡಿ; ಸಾರಥಿ: ಸೂತ, ರಥವನ್ನು ಓಡಿಸುವವ; ವಸುಧೆ: ಭೂಮಿ; ಕೆಡೆ: ಬೀಳು, ಕುಸಿ; ನಿಶಿತ: ಹರಿತ; ಮಾರ್ಗಣ: ಬಾಣ; ಕಯ್ಯ್: ಹಸ್ತ; ದಿವ್ಯ: ಶ್ರೇಷ್ಠ; ಧನು: ಬಿಲ್ಲು; ಎಸು: ಬಾಣ ಬಿಡು; ಏಳು: ಮೇಲೇರಿಸು; ಬೆಸಸು: ಆಜ್ಞಾಪಿಸು, ಹೇಳು; ಮನ: ಮನಸ್ಸು; ಬಸುರ: ಗರ್ಭ; ಶಿಖಿ: ಬೆಂಕಿ; ಬಲುಹು: ಬಹಳ; ಕೊಲು: ಸಾಯಿಸು;

ಪದವಿಂಗಡಣೆ:
ಬಿಸುಟು +ಹೋದನು +ರಥವ +ಸಾರಥಿ
ವಸುಧೆಯಲಿ +ರಥವ್+ಇದ್ದು +ಕೆಡೆದುದು
ನಿಶಿತಮಾರ್ಗಣವಿಲ್ಲ+ ಕಯ್ಯಲಿ +ದಿವ್ಯದನುವಿಲ್ಲ
ಎಸುವಡ್+ಎಂತ್+ಏಳುವುವು +ಕಯ್ +ನೀ
ಬೆಸಸುವಡೆ +ಮನವೆಂತು +ಬಂದುದು
ಬಸುರ +ಶಿಖಿ +ಬಲುಹಾಯ್ತು +ಕರ್ಣನ +ಕೊಲುವನಲ್ಲೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಸುರ ಶಿಖಿ ಬಲುಹಾಯ್ತು

ಪದ್ಯ ೧೧ : ಸರ್ಪಾಸ್ತ್ರದ ತಾಪ ಹೇಗಿತ್ತು?

ಉರಿಯ ಜೀರ್ಕೊಳವಿಗಳವೊಲು ಪೂ
ತ್ಕರಿಸಿದವು ಫಣಿ ವದನದಲಿ ದ
ಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
ಹೊರಳಿಗಿಡಿಗಳ ಕರ್ಬೊಗೆಯ ಕಾ
ಹುರದ ಸುಯ್ಲಿನ ಝಳವ ಗರಳಾ
ಕ್ಷರದ ಜಿಗಿಯಲಿ ಮಾತು ತೋರಿತು ಬೆಸಸು ಬೆಸಸೆನುತ (ಕರ್ಣ ಪರ್ವ, ೨೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರದ ಹೆಡೆಯಿಂದ ಉರಿಯ ಜೀರ್ಕೊಳವೆಗಳು ಬಂದವು. ದಳ್ಳುರಿಯು ಸಿಮಿಸಿಮಿ ಸದ್ದು ಮಾಡಿತು. ಕಿಡಿಯ ತುಂತುರುಗಳು, ಕಿಡಿಗಳ ತೆಕ್ಕೆ ಉಸಿರಾಟದಿಂದ ಬಂದ ಝಳ, ಕಪ್ಪುಹೊಗೆಯ ಹೊರಳಿಗಳು ಹಬ್ಬುತ್ತಿರಲು ಸರ್ಪವು ನನಗೆ ಅಪ್ಪಣೆಯೇನು ಎಂದು ಬೇಡಿತು.

ಅರ್ಥ:
ಉರಿ: ಬೆಂಕಿಯ ಕಿಡಿ; ಜೀರ್ಕೊಳವಿ: ಪಿಚಕಾರಿ; ಪೂತ್ಕರಿಸು: ಹೊರಹಾಕು; ಫಣಿ: ಹಾವು; ವದನ: ಮುಖ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಸಿಮಿಸಿಮಿ: ಉರಿಯ ಶಬ್ದದ ವರ್ಣನೆ; ತುಷಾರ: ಹಿಮ, ಇಬ್ಬನಿ; ತುಂತುರು: ಸಣ್ಣ ಸಣ್ಣ ಹನಿ; ಕಿಡಿ: ಬೆಂಕಿ; ಹೊರಳು: ತಿರುಗು, ಬಾಗು; ಕಿಡಿ: ಬೆಂಕಿ; ಕರ್ಬೊಗೆ: ಕಪ್ಪಾದ ಹೊಗೆ; ಕಾಹುರ: ಆವೇಶ, ಸೊಕ್ಕು, ಕೋಪ; ಸುಯ್ಲು: ನಿಟ್ಟುಸಿರು; ಝಳ: ಪ್ರಕಾಶ, ಕಾಂತಿ; ಗರಳ:ವಿಷ; ಜಿಗಿ: ಹಾರು; ಮಾತು: ವಾಣಿ; ತೋರು: ಗೋಚರಿಸು; ಬೆಸಸು: ಹೇಳು, ಆಜ್ಞಾಪಿಸು;

ಪದವಿಂಗಡಣೆ:
ಉರಿಯ+ ಜೀರ್ಕೊಳವಿಗಳವೊಲು +ಪೂ
ತ್ಕರಿಸಿದವು +ಫಣಿ +ವದನದಲಿ+ ದ
ಳ್ಳುರಿಯ +ಸಿಮಿಸಿಮಿಗಳ+ ತುಷಾರದ+ ಕಿಡಿಯ +ತುಂತುರಿನ
ಹೊರಳಿ+ಕಿಡಿಗಳ +ಕರ್ಬೊಗೆಯ +ಕಾ
ಹುರದ +ಸುಯ್ಲಿನ +ಝಳವ +ಗರಳಾ
ಕ್ಷರದ +ಜಿಗಿಯಲಿ +ಮಾತು +ತೋರಿತು +ಬೆಸಸು +ಬೆಸಸೆನುತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಜೀರ್ಕೊಳವಿಗಳವೊಲು ಪೂತ್ಕರಿಸಿದವು ಫಣಿ
(೨) ಸರ್ಪಾಸ್ತ್ರದ ವರ್ಣನೆ – ಫಣಿ ವದನದಲಿ ದಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
(೩) ಬೆಂಕಿಯನ್ನು ಶಬ್ದದಲ್ಲಿ ಹಿಡಿಯುವ ಪರಿ – ಸಿಮಿಸಿಮಿ
(೪) ದಳ್ಳುರಿಯನ್ನು ತಂಪಾದ ತುಂತುರು ಎಂದು ಹೇಳುವ ಕವಿಯ ಕಲ್ಪನೆ