ಪದ್ಯ ೧೫: ದ್ರೌಪದಿಯ ದುಃಖಕ್ಕೆ ಕಾರಣವೇನು?

ಏನಿದೇನದುಭುತವೆನುತ ದು
ಮ್ಮಾನದಲಿ ಹರಿತಂದು ಹಿಡಿದನು
ಮಾನಿನಿಯ ಕೈಗಳನು ಕಂಬನಿದೊಡೆದು ಸೆರಗಿನಲಿ
ಹಾನಿಯೇನೆನೆ ಮಡಿದರೆನ್ನಯ
ಸೂನುಗಳು ತನ್ನನುಜರೆನೆ ಪವ
ಮಾನಸುತ ಕೇಳಿದನು ಕೋಳಾಹಳವ ಗುರುಸುತನ (ಗದಾ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧರ್ಮಜನು ಇದೇನಾಶ್ಚರ್ಯ ಎಂದು ಚಿಂತಿಸುತ್ತಾ ದುಃಖದಿಂದ ದ್ರೌಪದಿಯ ಕೈಗಳನ್ನು ಹಿಡಿದು ಸೆರಗಿನಿಂದ ಅವಳ ಕಣ್ಣೀರನ್ನೊರಸಿದನು. ಏನಾಯಿತು ಎಂದು ಕೇಳಲು, ದ್ರೌಪದಿಯು ದುಃಖದಿಂದ ನನ್ನ ಮಕ್ಕಳೂ, ಸಹೋದರರೂ ಮಡಿದರು ಎಂದು ನಡೆದ ಸಂಗತಿಯನ್ನು ಹೇಳಲು, ಭೀಮನು ಅಶ್ವತ್ಥಾಮನ ಈ ಹಾವಳಿಯನ್ನು ಕೇಳಿದನು.

ಅರ್ಥ:
ಅದುಭುತ: ಆಶ್ಚರ್ಯ; ದುಮ್ಮಾನ: ದುಃಖ; ಹರಿತಂದು: ವೇಗವಾಗಿ ಚಲಿಸುತ, ಆಗಮಿಸು; ಹಿಡಿ: ಗ್ರಹಿಸು; ಮಾನಿನಿ: ಹೆಣ್ಣು; ಕೈ: ಹಸ್ತ; ಕಂಬನಿ: ಕಣ್ಣೀರು; ಸೆರಗು: ಸೀರೆಯ ಅಂಚು; ಹಾನಿ: ನಾಶ; ಮಡಿ: ಸಾವು; ಸೂನು: ಮಕ್ಕಳು; ಅನುಜ: ತಮ್ಮ; ಪವಮಾನ: ವಾಯು; ಸುತ: ಮಗ; ಕೇಳು: ಆಲಿಸು; ಕೋಳಾಹಲ: ಗದ್ದಲ; ಗುರು: ಆಚಾರ್ಯ; ಗುರುಸುತ: ಅಶ್ವತ್ಥಾಮ;

ಪದವಿಂಗಡಣೆ:
ಏನಿದೇನ್+ಅದುಭುತವ್+ಎನುತ +ದು
ಮ್ಮಾನದಲಿ +ಹರಿತಂದು +ಹಿಡಿದನು
ಮಾನಿನಿಯ +ಕೈಗಳನು +ಕಂಬನಿದೊಡೆದು +ಸೆರಗಿನಲಿ
ಹಾನಿಯೇನ್+ಎನೆ +ಮಡಿದರ್+ಎನ್ನಯ
ಸೂನುಗಳು +ತನ್ನ್+ಅನುಜರ್+ಎನೆ +ಪವ
ಮಾನಸುತ+ ಕೇಳಿದನು+ ಕೋಳಾಹಳವ +ಗುರುಸುತನ

ಅಚ್ಚರಿ:
(೧) ಸುತ ಪದದ ಬಳಕೆ – ಪವಮಾನಸುತ, ಗುರುಸುತ
(೨) ಏನಿದೇನ್, ಎನುತ, ಎನೆ, ಎನ್ನಯ – ಪದಗಳ ಬಳಕೆ

ಪದ್ಯ ೬೭: ಭೀಮನು ಯಾರನ್ನು ಹುಡುಕುತ್ತಾ ಹೋದನು?

ಬಿಡದಲಾ ಕುರುಸೈನ್ಯ ಹಕ್ಕಲು
ಗಡಿಯ ಭಟರೊಗ್ಗಾಯ್ತಲಾ ದೊರೆ
ಮಡಿದನೋ ಬಳಲಿದನೊ ಮಿಗೆ ಪೂರಾಯಘಾಯದಲಿ
ಪಡೆಯ ಜಂಜಡ ನಿಲಲಿ ಕೌರವ
ರೊಡೆಯನಾವೆಡೆ ನೋಡು ನೋಡೆಂ
ದೊಡನೊಡನೆ ಪವಮಾನಸುತನರಸಿದನು ಕುರುಪತಿಯ (ಗದಾ ಪರ್ವ, ೧ ಸಂಧಿ, ೬೭ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ನಮ್ಮ ಮೇಲೆ ಬರುವುದನ್ನು ಬಿಡಲಿಲ್ಲ, ಕೊಯ್ಲಾದ ಮೇಲೆ ಹೊಲದಲ್ಲಿ ಅಲ್ಲಿ ಇಲ್ಲಿ ಬಿದ್ದ ತೆನೆಗಳಂತಿರುವ ಯೋಧರು ಒಟ್ಟಾದರು. ಅವರಿರಲಿ, ಕೌರವನು ಸತ್ತನೋ, ಗಾಯಗೊಂಡು ಬಳಲಿರುವನೋ ಎಲ್ಲಿಗೆ ಹೋದ ಎಲ್ಲಿದ್ದಾನೆ ಎಂದು ಭೀಮನು ದುರ್ಯೋಧನನನ್ನು ಹುಡುಕುತ್ತಾ ಹೋದನು.

ಅರ್ಥ:
ಬಿಡು: ತೊರೆ; ಹಕ್ಕಲು: ಬತ್ತ, ರಾಗಿ, ಜೋಳ ಮುಂತಾದುವನ್ನು ಕುಯ್ಯುವಾಗ ಭೂಮಿಗೆ ಬಿದ್ದ ತೆನೆ; ಗಡಿ: ಎಲ್ಲೆ; ಭಟ: ಸೈನ್ಯ; ಒಗ್ಗು: ಒಟ್ಟುಗೂಡು; ದೊರೆ: ರಾಜ; ಮಡಿ: ಸತ್ತ; ಬಳಲು: ಆಯಾಸ; ಮಿಗೆ: ಹೆಚ್ಚು; ಪೂರಾಯ: ಪರಿಪೂರ್ಣ; ಘಾಯ: ಪೆಟ್ಟು; ಪಡೆ: ಸೈನ್ಯ; ಜಂಜಡ: ತೊಂದರೆ, ಕ್ಲೇಶ; ನಿಲಲು: ನಿಲ್ಲು; ಒಡೆಯ: ನಾಯಕ; ನೋಡು: ವೀಕ್ಷಿಸು; ಒಡನೊಡನೆ: ಒಮ್ಮೆಲೆ; ಪವಮಾನಸುತ: ವಾಯುಪುತ್ರ (ಭೀಮ); ಅರಸು: ಹುಡುಕು;

ಪದವಿಂಗಡಣೆ:
ಬಿಡದಲಾ +ಕುರುಸೈನ್ಯ +ಹಕ್ಕಲು
ಗಡಿಯ +ಭಟರ್+ಒಗ್ಗಾಯ್ತಲಾ +ದೊರೆ
ಮಡಿದನೋ +ಬಳಲಿದನೊ+ ಮಿಗೆ +ಪೂರಾಯ+ಘಾಯದಲಿ
ಪಡೆಯ +ಜಂಜಡ +ನಿಲಲಿ +ಕೌರವರ್
ಒಡೆಯನಾವೆಡೆ +ನೋಡು +ನೋಡೆಂದ್
ಒಡನೊಡನೆ +ಪವಮಾನಸುತನ್+ಅರಸಿದನು +ಕುರುಪತಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಕ್ಕಲು ಗಡಿಯ ಭಟರೊಗ್ಗಾಯ್ತಲಾ

ಪದ್ಯ ೩೨: ಭೀಮನು ವಿಶೋಕನಿಗೆ ಯಾರ ಪರಾಕ್ರಮವನ್ನು ನೋಡಲು ಹೇಳಿದನು?

ಫಡ ತೊಲಗು ಪವಮಾನಸುತ ನಿ
ನ್ನೊಡಲನೀ ಶಾಕಿನಿಯ ಬಳಗಕೆ
ಬಡಿಸುವೆನು ಬದುಕುವರೆ ಹಿಮ್ಮೆಟ್ಟೆನುತ ಬಳಿಸಲಿಸೆ
ಕಡುನುಡಿಗೆ ಮೆಚ್ಚಿದನು ಹಿಂದಕೆ
ಮಿಡುಕುವವನೇ ಕರ್ಣನೀತನ
ಕಡುಹ ನೋಡು ವಿಶೋಕ ಎಂದನು ನಗುತ ಕಲಿಭೀಮ (ದ್ರೋಣ ಪರ್ವ, ೧೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕರ್ಣನು ಮಾತನಾಡುತ್ತಾ, ಭೀಮ ಸುಮ್ಮನೇ ತೊಲಗು, ನಿನ್ನ ದೇಹವನ್ನು ಶಾಕಿನಿಯರ ಬಳಗಕ್ಕೆ ತಿನ್ನಿಸುತ್ತೇನೆ. ಬದುಕಲು ಬಯಸಿದರೆ ಹಿಮ್ಮೆಟ್ಟು ಎನ್ನುತ್ತಾ ಭೀಮನ ಬಳಿಗೆ ಬರಲು, ಭೀಮನು ಮೆಚ್ಚಿ, ವಿಶೋಕ ಕರ್ಣನ ಪರಾಕ್ರಮವನ್ನು ನೋಡು ಎಂದು ನಗುತ್ತಾ ಹೇಳಿದನು.

ಅರ್ಥ:
ಫಡ: ತಿರಸ್ಕಾರದ ಮಾತು; ಪವಮಾನ: ವಾಯು; ಸುತ: ಪುತ್ರ; ಒಡಲು: ದೇಹ; ಶಾಕಿನಿ: ಒಂದು ಕ್ಷುದ್ರ ದೇವತೆ; ಬಳಗ: ಗುಂಪು; ಬಡಿಸು: ನೀಡು; ಬದುಕು: ಜೀವಿಸು; ಹಿಮ್ಮೆಟ್ಟು: ಹಿಂದೆ ಸರಿ; ಬಳಿ: ಹತ್ತಿರ; ಸಲಿಸು: ಪೂರೈಸು; ಕಡು: ಖಡು, ನಿರ್ಧಿಷ್ಟ; ನುಡಿ: ಮಾತು; ಮೆಚ್ಚು: ಒಲುಮೆ, ಪ್ರೀತಿ, ಇಷ್ಟ; ಹಿಂದಕೆ: ಹಿಂಭಾಗ; ಮಿಡುಕು: ಅಲುಗಾಟ, ಚಲನೆ; ಕಡುಹು: ಸಾಹಸ; ನೋಡು: ವೀಕ್ಷಿಸು; ನಗು: ಹರ್ಷಿಸು; ಕಲಿ: ಶೂರ;

ಪದವಿಂಗಡಣೆ:
ಫಡ +ತೊಲಗು +ಪವಮಾನಸುತ +ನಿ
ನ್ನೊಡಲನ್+ಈ+ ಶಾಕಿನಿಯ +ಬಳಗಕೆ
ಬಡಿಸುವೆನು +ಬದುಕುವರೆ +ಹಿಮ್ಮೆಟ್ಟೆನುತ +ಬಳಿಸಲಿಸೆ
ಕಡುನುಡಿಗೆ +ಮೆಚ್ಚಿದನು +ಹಿಂದಕೆ
ಮಿಡುಕುವವನೇ+ ಕರ್ಣನ್+ಈತನ
ಕಡುಹ +ನೋಡು +ವಿಶೋಕ +ಎಂದನು +ನಗುತ+ ಕಲಿಭೀಮ

ಅಚ್ಚರಿ:
(೧) ಭೀಮನನ್ನು ಬಯ್ಯುವ ಪರಿ – ಫಡ ತೊಲಗು ಪವಮಾನಸುತ ನಿನ್ನೊಡಲನೀ ಶಾಕಿನಿಯ ಬಳಗಕೆ
ಬಡಿಸುವೆನು

ಪದ್ಯ ೧೮: ಭೀಮನು ಯಾವ ವ್ಯೂಹವನ್ನು ಭೇದಿಸಿದನು?

ಇದು ನಿಮಗೆ ವಂದನೆಯೆನುತ ನಿಜ
ಗದೆಯಲಾತನ ರಥವ ಹುಡಿಗು
ಟ್ಟಿದನು ಸುರಗಿಯನುಗಿಯಲಪ್ಪಳಿಸಿದನು ಮೋಹರವ
ಇದಿರಲಿರಲಳವಡದೆ ಗುರು ಹಿಂ
ಗಿದನು ಶಕಟವ್ಯೂಹವನು ಮ
ಧ್ಯದೊಳು ಥಟ್ಟುಗಿದುರವಣಿಸಿ ಪವಮಾನಸುತ ನಡೆದ (ದ್ರೋಣ ಪರ್ವ, ೧೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಗುರುಗಳೇ ಇದೇ ನಿಮಗೆ ನಮಸ್ಕಾರ ಎಂದು ದ್ರೋಣನ ರಥಾನ್ನು ಗದೆಯಿಂದ ಪುಡಿಮಾಡಿದನು. ದ್ರೋಣನು ಕತ್ತಿಯನ್ನು ಸೆಳೆಯಲು, ಅವನ ಸೈನ್ಯವನ್ನು ಅಪ್ಪಳಿಸಿದನು. ಇವನ ಎದುರಿನಲ್ಲಿ ನಿಲ್ಲಲು ಸಾಧ್ಯವಾಗದೆ, ದ್ರೋಣನು ಮರಳಿದನು. ಭೀಮನು ಶಕಟವ್ಯೂಹದ ಮಧ್ಯದಲ್ಲಿ ಹೊಕ್ಕು ಸಿಕ್ಕವರನ್ನೆಲ್ಲಾ ಗುಂಪುಗುಂಪಾಗಿ ಕೊಂದು ವೇಗವಾಗಿ ಮುಂದುವರೆದನು.

ಅರ್ಥ:
ವಂದನೆ: ನಮಸ್ಕಾರ; ನಿಜ: ತನ್ನ; ಗದೆ: ಮುದ್ಗರ; ರಥ: ಬಂಡಿ; ಹುಡಿ: ಹಿಟ್ಟು, ಪುಡಿ; ಸುರಗಿ: ಸಣ್ಣ ಕತ್ತಿ, ಚೂರಿ; ಉಗಿ: ಹೊರಹಾಕು; ಅಪ್ಪಳಿಸು: ತಟ್ಟು, ತಾಗು; ಮೋಹರ: ಯುದ್ಧ; ಇದಿರು: ಎದುರು; ಅಳವಡು: ಹೊಂದು, ಸೇರು, ಕೂಡು; ಗುರು: ಆಚಾರ್ಯ; ಹಿಂಗು: ಹಿಮ್ಮೆಟ್ಟು; ಮಧ್ಯ: ನಡುವೆ; ಥಟ್ಟು: ಗುಂಪು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಪವಮಾನ: ವಾಯು; ಸುತ: ಪುತ್ರ; ನಡೆ: ಚಲಿಸು;

ಪದವಿಂಗಡಣೆ:
ಇದು +ನಿಮಗೆ +ವಂದನೆ+ಎನುತ +ನಿಜ
ಗದೆಯಲ್+ಆತನ +ರಥವ +ಹುಡಿಗು
ಟ್ಟಿದನು +ಸುರಗಿಯನ್+ಉಗಿಯಲ್+ಅಪ್ಪಳಿಸಿದನು +ಮೋಹರವ
ಇದಿರಲ್+ಇರಲ್+ಅಳವಡದೆ+ ಗುರು+ ಹಿಂ
ಗಿದನು +ಶಕಟವ್ಯೂಹವನು +ಮ
ಧ್ಯದೊಳು +ಥಟ್ಟುಗಿದ್+ಉರವಣಿಸಿ +ಪವಮಾನಸುತ +ನಡೆದ

ಅಚ್ಚರಿ:
(೧) ಹಿಮ್ಮೆಟ್ಟು ಎಂದು ಹೇಳುವ ಪರಿ – ಇದಿರಲಿರಲಳವಡದೆ ಗುರು ಹಿಂಗಿದನು

ಪದ್ಯ ೭೮: ಭೀಮನನ್ನು ಯಾರು ತಡೆದರು?

ಕೊಂದನಿಬ್ಬರ ಸೌಬಲರ ನೃಪ
ನಂದನರ ಗಾಂಧಾರರೊಂದೆರ
ಡೆಂದು ಸಲುಗೆಗೆ ಸಲಿಸಿ ಬಂದೈನೂರ ಬರಿಕೈದು
ಬಂದ ದ್ರೋಣನ ಹಳಚಿ ಭಂಗಕೆ
ತಂದನಹಿತ ವ್ರಜವನಿತ್ತಲು
ಸಂದಣಿಸಿದರು ಕೌರವರು ಪವಮಾನಸುತನೊಡನೆ (ದ್ರೋಣ ಪರ್ವ, ೩ ಸಂಧಿ, ೭೮ ಪದ್ಯ)

ತಾತ್ಪರ್ಯ:
ಅರ್ಜುನನು ಇಬ್ಬರು ಸುಬಲ ಪುತ್ರರನ್ನು ಕೊಂದನು. ಐನೂರು ಮಂದಿ ಗಾಂಧಾರ ರಾಜರನ್ನು ಒಂದೆರಡೆಂದು ಎಣಿಸಿ ಕೊಂದನು. ದ್ರೋಣನು ಬರಲು ಅವನನ್ನು ಭಂಗಪದಿಸಿದನು. ಇತ್ತ ಕೌರವರು ಭೀಮನನ್ನು ತಡೆದರು.

ಅರ್ಥ:
ಕೊಂದು: ಸಾಯಿಸು; ಸೌಬಲ: ಸುಬಲನ ಮಕ್ಕಳು; ಸುಬಲ: ಸಿಂಧು ದೇಶದ ರಾಜ; ನೃಪ: ರಾಜ; ನಂದನ; ಮಕ್ಕಳು; ಸಲುಗೆ: ಸದರ; ಸಲಿಸು: ನೀಡು; ಕೈದು: ಆಯುಧ; ಬಂದು: ಆಗಮಿಸು; ಹಳಚು: ತಾಗುವಿಕೆ; ಭಂಗ: ಮುರಿಯುವಿಕೆ; ಅಹಿತ: ವೈರಿ; ವ್ರಜ: ಗುಂಪು; ಸಂದಣಿಸು: ಗುಂಪು; ಪವಮಾನ: ವಾಯು; ಸುತ: ಪುತ್ರ;

ಪದವಿಂಗಡಣೆ:
ಕೊಂದನ್+ಇಬ್ಬರ +ಸೌಬಲರ +ನೃಪ
ನಂದನರ +ಗಾಂಧಾರರೊಂದ್+ಎರ
ಡೆಂದು +ಸಲುಗೆಗೆ+ ಸಲಿಸಿ +ಬಂದ್+ಐನೂರ +ಬರಿಕೈದು
ಬಂದ +ದ್ರೋಣನ +ಹಳಚಿ +ಭಂಗಕೆ
ತಂದನ್+ಅಹಿತ +ವ್ರಜವನ್+ಇತ್ತಲು
ಸಂದಣಿಸಿದರು +ಕೌರವರು+ ಪವಮಾನಸುತನೊಡನೆ

ಅಚ್ಚರಿ:
(೧) ಸುತ, ನಂದನ – ಸಮಾನಾರ್ಥಕ ಪದ

ಪದ್ಯ ೭೬: ಭೀಮನನ್ನು ಯಾರು ಕೆಣಕಿದರು?

ವರವಿಕರ್ಣ ಸುಲೋಚನನು ದು
ರ್ಮರುಷಣನು ದುಶ್ಯಾಸನನು ಸಂ
ಗರವ ಕೆಣಕಿದರನಿಲಸುತನೊಳು ನೃಪನ ಹರಿಬದಲಿ
ನೆರೆದ ನುಸಿಗಳು ಗಿರಿಯ ಕಾಡುವ
ಸರಿಯ ನೋಡೈ ಪೂತುರೆನುತು
ಬ್ಬರಿಸಿ ಕೈದೋರಿದನು ಕಲಿ ಪವಮಾನಸುತ ನಗುತ (ದ್ರೋಣ ಪರ್ವ, ೨ ಸಂಧಿ, ೭೬ ಪದ್ಯ)

ತಾತ್ಪರ್ಯ:
ವಿಕರ್ಣ, ಸುಲೋಚನ, ದುರ್ಮರ್ಷಣ ದುಶ್ಯಾಸನರು ಭೀಮನನ್ನು ಕೆಣಕಿ ಯುದ್ಧಾರಂಭಮಾಡಿದರು. ನುಸಿಗಳು ಒಟ್ಟಾಗಿ ಬೆಟ್ಟವನ್ನು ಕಾದುತ್ತಿವೆ, ನೋಡಿರಿ ಭಲೇ ಎಂದು ಗರ್ಜಿಸಿ ಭೀಮನೂ ನಗುತ್ತಾ ಮುಂದೆ ಬಂದನು.

ಅರ್ಥ:
ವರ: ಶ್ರೇಷ್ಠ; ಸಂಗರ: ಯುದ್ಧ; ಕೆಣಕು: ರೇಗಿಸು; ಅನಿಲ: ವಾಯು; ಸುತ: ಮಗ; ನೃಪ: ರಾಜ; ಹರಿಬ: ಕೆಲಸ, ಕಾರ್ಯ; ನೆರೆ: ಗುಂಪು; ನುಸಿ: ಹುಡಿ, ಸಣ್ಣಪುಟ್ಟ, ನೊರಜು; ಗಿರಿ: ಬೆಟ್ಟ; ಕಾಡು: ಹಿಂಸಿಸು, ಪೀಡಿಸು; ಸರಿ: ಸಮಾನ, ಸದೃಶ; ನೋಡು: ವೀಕ್ಷಿಸು; ಪೂತ: ಪವಿತ್ರ; ಉಬ್ಬರಿಸು: ಗರ್ಜಿಸು; ಕೈದೋರು: ಶಕ್ತಿ ಪ್ರದರ್ಶನ ಮಾಡು; ಕಲಿ: ಶೂರ; ಪವಮಾನ: ಗಾಳಿ, ವಾಯು; ಸುತ: ಮಗ; ನಗು: ಹರ್ಷಿಸು;

ಪದವಿಂಗಡಣೆ:
ವರ+ವಿಕರ್ಣ +ಸುಲೋಚನನು +ದು
ರ್ಮರುಷಣನು +ದುಶ್ಯಾಸನನು +ಸಂ
ಗರವ+ ಕೆಣಕಿದರ್+ಅನಿಲಸುತನೊಳು +ನೃಪನ +ಹರಿಬದಲಿ
ನೆರೆದ +ನುಸಿಗಳು +ಗಿರಿಯ +ಕಾಡುವ
ಸರಿಯ +ನೋಡೈ +ಪೂತುರೆನುತ್
ಉಬ್ಬರಿಸಿ +ಕೈದೋರಿದನು +ಕಲಿ +ಪವಮಾನಸುತ +ನಗುತ

ಅಚ್ಚರಿ:
(೧) ಅನಿಲಸುತ, ಪವಮಾನಸುತ – ಭೀಮನನ್ನು ಕರೆದ ಪರಿ
(೨) ಉಪಮಾನದ ಪ್ರಯೋಗ – ನೆರೆದ ನುಸಿಗಳು ಗಿರಿಯ ಕಾಡುವಸರಿಯ ನೋಡೈ

ಪದ್ಯ ೫೨: ಭೀಮನು ಯಕ್ಷರನ್ನು ಹೇಗೆ ಸದೆಬಡೆದನು?

ತಾಗಿದೆಳೆಮುಳ್ಳಿನಲಿ ಮದಗಜ
ಸೀಗುರಿಸುವುದೆ ಭಟರ ಕೈದುಗ
ಳೇಗುವವು ಪವಮಾನಸುತ ಕೈದೋರೆ ಖಾತಿಯಲಿ
ತಾಗಿದವದಿರನಿಕ್ಕಿದನು ರಣ
ದಾಗಡಿಗರನು ಸೆಕ್ಕಿದನು ಕೈ
ದಾಗಿಸಿದನನಿಬರಲಿ ಗಂಡುಗತನದ ಗಾಡಿಯಲಿ (ಅರಣ್ಯ ಪರ್ವ, ೧೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ಎಳೆಯ ಮುಳ್ಳು ತಾಗಿದರೆ ಮದ್ದಾನೆಯು ಆಚೀಚೆ ಓಲಾಡುವುದೇ? ಯಕ್ಷರ ಆಯುಧಗಳು, ಭೀಮನು ಕೋಪದಿಂದ ಯುದ್ಧ ಮಾಡುವಾಗ ಅವನನ್ನೇನು ಮಾಡಿಯಾವು? ಎದುರಿಗೆ ಬಂದವರನ್ನು ಹೊಡೆದುರುಳಿಸಿದನು, ರಣವೀರರನ್ನು ಮೆಟ್ಟಿದನು, ಎದುರಾದ ಎಲ್ಲರನ್ನು ಪೌರುಷದಿಂದ ಭಂಗಿಸಿದನು.

ಅರ್ಥ:
ತಾಗು: ಚುಚ್ಚು; ಎಳೆ: ಚಿಕ್ಕ; ಮುಳ್ಳು: ಮೊನಚಾದುದು; ಮದ: ಸೊಕ್ಕು; ಗಜ: ಆನೆ; ಸೀಗುರಿ: ಚಾಮರ; ಸೀಗುರಿಸು: ಅಲ್ಲಾಡು; ಭಟ: ಸೈನಿಕ; ಕೈದು: ಕತ್ತಿ; ಏಗು: ಸಾಗಿಸು, ನಿಭಾಯಿಸು; ಪವಮಾನ: ವಾಯು; ಸುತ: ಮಗ; ಖಾತಿ: ಕೋಪ, ಕ್ರೋಧ; ಅವದಿರು: ಅಷ್ಟು ಜನ, ಅವರು;ಇಕ್ಕು: ಇರಿಸು, ಕೆಡಹು; ರಣ: ಯುದ್ಧ; ಸೆಕ್ಕು: ಒಳಸೇರಿಸು, ತುರುಕು; ಗಂಡುಗತನ: ಬಲಶಾಲಿ, ಪರಾಕ್ರಮಿ; ಗಾಡಿ: ಸೊಬಗು, ಅಂದ;

ಪದವಿಂಗಡಣೆ:
ತಾಗಿದ್+ಎಳೆ+ಮುಳ್ಳಿನಲಿ +ಮದಗಜ
ಸೀಗುರಿಸುವುದೆ +ಭಟರ+ ಕೈದುಗಳ್
ಏಗುವವು +ಪವಮಾನಸುತ +ಕೈದೋರೆ +ಖಾತಿಯಲಿ
ತಾಗಿದ್+ಅವದಿರನ್+ಇಕ್ಕಿದನು +ರಣ
ದಾಗಡಿಗರನು +ಸೆಕ್ಕಿದನು +ಕೈ
ದಾಗಿಸಿದನ್+ಅನಿಬರಲಿ +ಗಂಡುಗತನದ +ಗಾಡಿಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಾಗಿದೆಳೆಮುಳ್ಳಿನಲಿ ಮದಗಜ ಸೀಗುರಿಸುವುದೆ
(೨) ಭೀಮನ ಪೌರುಷವನ್ನು ಹೇಳುವ ಪರಿ – ತಾಗಿದವದಿರನಿಕ್ಕಿದನು ರಣದಾಗಡಿಗರನು ಸೆಕ್ಕಿದನು ಕೈದಾಗಿಸಿದನನಿಬರಲಿ ಗಂಡುಗತನದ ಗಾಡಿಯಲಿ

ಪದ್ಯ ೧೩: ಭೀಮನ ಆಶ್ಚರ್ಯಕ್ಕೆ ಕಾರಣವೇನು?

ಎಂದನೀ ಪವಮಾನಸುತನು ಮು
ಕುಂದನನು ಬೆಸನೇನು ಮುನಿ ಕ್ಷಣ
ವೆಂದೆನಲು ಶೋಕಿಸಿದ ಕಾರಣವೇನು ಧರ್ಮಜಗೆ
ಬಂದ ವಿವರವ ವಿಸ್ತರಿಸೆ ನೆರೆ
ಸಂದ ಕಣ್ಣೀರ್ಸುರಿದುದಿಮ್ಮಡಿ
ಬಂದಪುವಿದೇನು ನಯನಾಂಬುಗಳು ಹದನೆಂದ (ಅರಣ್ಯ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಹೀಗೆ ಆಶ್ಚರ್ಯಪಟ್ಟ ಭೀಮನು ಕೃಷ್ಣನನ್ನು ಕೇಳಲು ಮುಂದಾದನು, ಹೇ ಕೃಷ್ಣ ಆಮಂತ್ರಣವನ್ನು ಸ್ವೀಕರಿಸು ಎಂದು ಹೇಳಲು ಮುನಿವರ್ಯರೇಕೆ ಅತ್ತರು? ಆ ವಿವರವನ್ನು ಕೇಳಿ ನಿಮ್ಮ ಹಾಗು ಧರ್ಮಜನ ಕಣ್ಣಗಳಲ್ಲಿ ನೀರು ತುಂಬಲು ಕಾರಣವೇನು ಎಂದು ಕೇಳಿದನು.

ಅರ್ಥ:
ಪವಮಾನ: ವಾಯು; ಸುತ: ಪುತ್ರ; ಬೆಸ: ಅಪ್ಪಣೆ, ಆದೇಶ; ಮುನಿ: ಋಷಿ; ಕ್ಷಣ: ಆಮಂತ್ರಣ, ಸಮಯ; ಶೋಕ: ದುಃಖ; ಕಾರಣ: ನಿಮಿತ್ತ, ಹೇತು; ಬಂದ: ಆಗಮಿಸು; ವಿವರ: ವಿಸ್ತಾರ, ಸಂದು; ವಿಸ್ತರಿಸು: ಹಬ್ಬುಗೆ; ನೆರೆ: ಜೊತೆಗೂಡು; ಸಂದ: ಕಳೆದ, ಹಿಂದಿನ; ಕಣ್ಣೀರು: ದೃಗಜಲ; ಇಮ್ಮಡಿ: ಎರಡು ಪಟ್ಟು; ನಯನಾಂಬು: ಕಣ್ಣಿರು; ಹದ: ರೀತಿ;

ಪದವಿಂಗಡಣೆ:
ಎಂದನೀ +ಪವಮಾನಸುತನು +ಮು
ಕುಂದನನು +ಬೆಸನ್+ಏನು +ಮುನಿ +ಕ್ಷಣವ್
ಎಂದೆನಲು +ಶೋಕಿಸಿದ+ ಕಾರಣವೇನು +ಧರ್ಮಜಗೆ
ಬಂದ +ವಿವರವ +ವಿಸ್ತರಿಸೆ +ನೆರೆ
ಸಂದ +ಕಣ್ಣೀರ್+ಸುರಿದುದ್+ಇಮ್ಮಡಿ
ಬಂದಪುವ್+ಇದೇನು +ನಯನಾಂಬುಗಳು +ಹದನೆಂದ

ಅಚ್ಚರಿ:
(೧) ಕಣ್ಣೀರು, ನಯನಾಂಬು – ಸಮನಾರ್ಥಕ ಪದ

ಪದ್ಯ ೩೭: ಕರ್ಣನ ಪುತ್ರರು ಭೀಮನಿಗೆ ಹೇಗೆ ಉತ್ತರಿಸಿದರು?

ಮರುಳಲಾ ಪವಮಾನಸುತ ನಿ
ನ್ನೊರೆಗೆ ಪಡಿಯೊರೆ ತೂಕ ತೂಕಕೆ
ಸರಿಸರಾವಿರೆ ಕನಕಗಿರಿಪರಿಯಂತ ಮಾತೇಕೆ
ತರಣಿಬಿಂಬದ ತತ್ತಿಗಳನು
ತ್ತರಿಸಿ ತೋರುವ ತಿಮಿರವುಂಟೇ
ತರಹರಿಸಿ ತೋರಾ ಎನುತ ಕವಿದೆಚ್ಚರನಿಲಜನ (ಕರ್ಣ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ಭೀಮನ ಕಜ್ಜಾಯದ ನುಡಿಗಳನ್ನು ಕೇಳಿದ ಕರ್ಣಪುತ್ರರು, ಭೀಮ ನಿನ್ನ ಒರೆಗೆ ನಾವು ಪ್ರತಿಯಾದ ಅದೇ ಒರೆಯುಳ್ಳವರು. ನಿನ್ನ ತೂಕಕ್ಕೆ ಸರಿತೂಕವುಳ್ಳ ನಾವಿರಲು ಮೇರು ಪರ್ವತದ (ಕರ್ಣನ) ಮಾತೇಕೆ. ಸೂರ್ಯ ಬಿಂಬದ ಕಿರಣಗಳನ್ನು ಮೀರಿಸುವ ಕತ್ತಲಿದಿಯೇ? ನಮ್ಮ ಏಟನ್ನು ಸಹಿಸಿಕೋ ಎಂದು ಭೀಮನ ಮೇಲೆ ಬಾಣಪ್ರಯೋಗವನ್ನು ಮಾಡಿದರು.

ಅರ್ಥ:
ಮರುಳು: ಮೂಢ, ಬುದ್ಧಿಭ್ರಮೆ; ಪವಮಾನ: ವಾಯು; ಸುತ: ಮಗ; ಒರೆ: ಸಾಮ್ಯತೆ; ಪಡಿ:ಸಮಾನವಾದುದು, ಎಣೆ; ತೂಕ: ಭಾರ; ಸರಿಸ: ಸಮಾನವಾದ; ಕನಕಗಿರಿ: ಮೇರು ಪರ್ವತ; ಮಾತು: ನುಡಿ; ತರಣಿ: ಸೂರ್ಯ; ಬಿಂಬ: ಕಿರಣ; ತತ್ತಿ: ಕಾಂತಿ; ಉತ್ತರ: ಮರುನುಡಿ; ತೋರು: ಗೋಚರಿಸು; ತಿಮಿರ: ಕತ್ತಲು; ತರಹರಿಸು: ಕಳವಳಿಸು; ಕವಿ: ಆವರಿಸು; ಎಚ್ಚು: ಬಾಣಪ್ರಯೋಗ ಮಾಡು; ಅನಿಲಜ: ವಾಯುಪುತ್ರ (ಭೀಮ);

ಪದವಿಂಗಡಣೆ:
ಮರುಳಲಾ +ಪವಮಾನಸುತ+ ನಿ
ನ್ನೊರೆಗೆ +ಪಡಿಯೊರೆ +ತೂಕ +ತೂಕಕೆ
ಸರಿಸರ್+ಆವಿರೆ +ಕನಕಗಿರಿ+ಪರಿಯಂತ +ಮಾತೇಕೆ
ತರಣಿಬಿಂಬದ+ ತತ್ತಿಗಳನ್
ಉತ್ತರಿಸಿ+ ತೋರುವ +ತಿಮಿರವುಂಟೇ
ತರಹರಿಸಿ+ ತೋರಾ +ಎನುತ +ಕವಿದೆಚ್ಚರನಿಲಜನ

ಅಚ್ಚರಿ:
(೧) ತ ಕಾರದ ಸಾಲು ಪದಗಳು – ತರಣಿಬಿಂಬದ ತತ್ತಿಗಳನುತ್ತರಿಸಿ ತೋರುವ ತಿಮಿರವುಂಟೇ
ತರಹರಿಸಿ ತೋರಾ
(೨) ಉಪಮಾನದ ಪ್ರಯೋಗ – ತರಣಿಬಿಂಬದ ತತ್ತಿಗಳನುತ್ತರಿಸಿ ತೋರುವ ತಿಮಿರವುಂಟೇ;
(೩) ಕರ್ಣನನ್ನು ಕನಕಗಿರಿಗೆ ಹೋಲಿಸುವ ನುಡಿ – ಪವಮಾನಸುತ ನಿನ್ನೊರೆಗೆ ಪಡಿಯೊರೆ ತೂಕ ತೂಕಕೆ ಸರಿಸರಾವಿರೆ ಕನಕಗಿರಿಪರಿಯಂತ ಮಾತೇಕೆ
(೪) ಭೀಮನನ್ನು ಪವಮಾನಸುತ, ಅನಿಲಜ ಎಂದು ಕರೆದಿರುವುದು

ಪದ್ಯ ೯: ಭೀಮನು ಕೃಷ್ಣನಿಗೆ ಯಾವ ಉತ್ತರವನಿತ್ತನು?

ಅರಸನಭಿಮತವಿಂದು ಸಂಧಿಗೆ
ಮರಳಿತೆಲೆ ಪವಮಾನಸುತ ನಿ
ನ್ನರಿತವಾವುದು ಮನವ ವಂಚಿಸಬೇಡ ಹೇಳೆನಲು
ಧರಣಿಪತಿ ತಪ್ಪುವನೆ ಕರ್ಕಶ
ಭರದ ಕದನದಲೇನು ಫಲ ಸೋ
ದರರ ವಧೆಗೊಡಬಡುವನಲ್ಲಸುರಾರಿ ಕೇಳೆಂದ (ಉದ್ಯೋಗ ಪರ್ವ, ೬ ಸಂಧಿ, ೯ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಅಭಿಮತವು ಸಂಧಿಯ ಕಡೆಗೆ ತಿರುಗಿದೆ, ನಿನ್ನ ಮನಸ್ಸಿನಲ್ಲೇನಿದೆ ಎಂದು ನೀನು ಮುಚ್ಚುಮರೆಯಿಲ್ಲದಲೆ ತಿಳಿಸು ಭೀಮ ಎಂದು ಕೃಷ್ಣನು ಕೇಳಿದನು. ಅದಕ್ಕೆ ಭೀಮನು, ಕೃಷ್ಣಾ ಅಣ್ಣನು ತಪ್ಪು ಮಾಡುವುದಿಲ್ಲ, ಭಯಂಕರವಾದ ಯುದ್ಧವು ನನಗೂ ಇಷ್ಟವಿಲ್ಲ ಸಹೋದರರ ವಧೆಗೆ ನಾನು ಒಪ್ಪುವುದಿಲ್ಲ ಎಂದನು.

ಅರ್ಥ:
ಅರಸ: ರಾಜ; ಅಭಿಮತ: ಅಭಿಪ್ರಾಯ; ಸಂಧಿ: ಸಂಧಾನ, ಒಡಂಬಡಿಕೆ; ಮರಳಿ: ಮತ್ತೆ, ತಿರುಗು; ಪವಮಾನ: ವಾಯು; ಸುತ: ಮಗ; ಅರಿ: ತಿಳಿ; ಮನ: ಮನಸ್ಸು; ವಂಚಿಸು: ಮೋಸಮಾಡು; ಹೇಳು: ತಿಳಿಸು; ಧರಣಿಪತಿ: ರಾಜ; ಧರಣಿ: ಭೂಮಿ; ತಪ್ಪು: ಸುಳ್ಳಾಗು; ಕರ್ಕಶ: ಗಟ್ಟಿಯಾದ, ಕಠಿಣ; ಭರ: ತುಂಬ, ಹೆಚ್ಚು; ಕದನ: ಯುದ್ಧ; ಫಲ: ಪ್ರಯೋಜನ; ಸೋದರ: ಅಣ್ಣ ತಮ್ಮಂದಿರು; ವಧೆ: ಸಾವು; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಅರಸನ್+ಅಭಿಮತವ್+ಇಂದು +ಸಂಧಿಗೆ
ಮರಳಿತ್+ಎಲೆ +ಪವಮಾನಸುತ+ ನಿ
ನ್ನರಿತವ್+ಆವುದು +ಮನವ +ವಂಚಿಸಬೇಡ +ಹೇಳ್+ಎನಲು
ಧರಣಿಪತಿ+ ತಪ್ಪುವನೆ +ಕರ್ಕಶ
ಭರದ +ಕದನದಲ್+ಏನು +ಫಲ +ಸೋ
ದರರ+ ವಧೆಗೊಡಬಡುವನಲ್+ಅಸುರಾರಿ+ ಕೇಳೆಂದ

ಅಚ್ಚರಿ:
(೧)ಭೀಮನನು ಪವಮಾನಸುತ ಎಂದು ಕರೆದಿರುವುದು
(೨) ಧರಣಿಪತಿ, ಅರಸ – ಸಮನಾರ್ಥಕ ಪದ
(೩) ಯುದ್ಧಕ್ಕೆ ಗುಣವಾಚಕ ಪದ – ಕರ್ಕಶಭರದ ಕದನ