ಪದ್ಯ ೩೪: ಭೀಮನು ಕೌರವನನ್ನು ಹೇಗೆ ಹಂಗಿಸಿದನು?

ಹೊಯ್ದು ತೋರಾ ಬಂಜೆ ನುಡಿಯಲಿ
ಬಯ್ದಡಧಿಕನೆ ಬಾಹುವಿಂ ಹೊರ
ಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ
ಕಯ್ದು ನಿನಗಿದೆ ಲಕ್ಷ್ಯ ಪಣ ನಮ
ಗೆಯ್ದುವಡೆ ಗುಪ್ತಪ್ರತಾಪವ
ನೆಯ್ದೆ ಪ್ರಕಟಿಸೆನುತ್ತ ತಿವಿದನು ಭೀಮ ಕುರುಪತಿಯ (ಗದಾ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಕೇವಲ ನಿಷ್ಪ್ರಯೋಜಕ ಮಾತುಗಳಿಂದ ಬೈದರೆ ನೀನೇನು ದೊಡ್ಡವನೇ? ಬಾಯಿಂದ ಗದಾಪ್ರಹಾರ ಮಾಡುವೆಯೋ ಅಥವ ಕೈಗಳಿಂದ ತೋರುವೆಯೋ? ನೀನು ಜಾತಿಯಿಂದ ಕ್ಷತ್ರಿಯನಲ್ಲವೇ? ನಿನ್ನ ಕೈಯಲ್ಲಿ ಆಯುಧವಿದೆ, ಗುರಿಯಾಗಿ ನಾನಿದ್ದೇನೆ, ನಿನ್ನಲ್ಲಡಗಿರುವ ಪರಾಕ್ರಮವನ್ನು ಪ್ರಕಟಿಸು ಎನ್ನುತ್ತಾ ಭಿಮನು ಕೌರವನನ್ನು ತಿವಿದನು.

ಅರ್ಥ:
ಹೊಯ್ದು: ಹೊಡೆ; ತೋರು: ಗೋಚರಿಸು; ಬಂಜೆ: ನಿಷ್ಫಲ; ನುಡಿ: ಮಾತು; ಬಯ್ದು: ಜರೆ, ಹಂಗಿಸು; ಅಧಿಕ: ಹೆಚ್ಚು; ಬಾಹು: ತೋಳು; ಮೇಣ್: ಅಥವ; ಮುಖ: ಆನನ; ಜಾತಿ: ಕುಲ; ಕಯ್ದು: ಆಯುಧ; ಪಣ: ಸ್ಪರ್ಧೆ, ಧನ; ಗುಪ್ತ: ಗುಟ್ಟು; ಪ್ರತಾಪ: ಶಕ್ತಿ, ಪರಾಕ್ರಮ; ಪ್ರಕಟಿಸು: ತೋರು; ತಿವಿ: ಚುಚ್ಚು;

ಪದವಿಂಗಡಣೆ:
ಹೊಯ್ದು +ತೋರಾ +ಬಂಜೆ +ನುಡಿಯಲಿ
ಬಯ್ದಡ್+ಅಧಿಕನೆ +ಬಾಹುವಿಂ +ಹೊರ
ಹೊಯ್ದವನೊ+ ಮೇಣ್ +ಮುಖದಲೋ +ನೀನಾರು +ಜಾತಿಯಲಿ
ಕಯ್ದು+ ನಿನಗಿದೆ +ಲಕ್ಷ್ಯ+ ಪಣ +ನಮಗ್
ಎಯ್ದುವಡೆ +ಗುಪ್ತ+ಪ್ರತಾಪವನ್
ಎಯ್ದೆ +ಪ್ರಕಟಿಸ್+ಎನುತ್ತ+ ತಿವಿದನು +ಭೀಮ +ಕುರುಪತಿಯ

ಅಚ್ಚರಿ:
(೧) ಕೌರವನನ್ನು ಹಂಗಿಸುವ ಪರಿ – ಬಂಜೆ ನುಡಿಯಲಿಬಯ್ದಡಧಿಕನೆ
(೨) ಕೌರವನನ್ನು ಕೆರಳಿಸುವ ಪರಿ – ಬಾಹುವಿಂ ಹೊರಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ

ಪದ್ಯ ೧೨: ವಿರಾಟನು ಕಂಕನಿಗೆ ಯಾವ ಅಪ್ಪಣೆಯನ್ನು ನೀಡಿದನು?

ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯ ಶ್ರವಣ ಸುಖಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು (ವಿರಾಟ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಪಾಂಡವರು ರಾಜ್ಯವನ್ನು ಪಣವಾಗಿ ಒಡ್ಡಿ ಸೋತು ಕೆಟ್ಟರು, ಆದರೆ ನಾನು ಪಣವನ್ನು ಇಡುತ್ತಿಲ್ಲ, ಏನೋ ಮಗನ ಏಳಿಗೆಯನ್ನು ಕಂಡು ಅತೀವ ಸಂತಸವಾಗಿದೆ, ಈ ಉತ್ಸವ ಕಾಲದಲ್ಲಿ ಪಗಡೆಯಾಡೋಣವೆಂಬ ಬಯಕೆಯಾಗಿದೆ, ಪಗಡೆಯ ಹಾಸನ್ನು ಹಾಕು, ಕಾಯಿಗಳನ್ನು ಹೂಡು ಎಂದು ವಿರಾಟನು ಹೇಳಲು, ಕಂಕನು ರಾಜನ ಆಜ್ಞೆಯನ್ನು ಪಾಲಿಸಲು ಕಾಯಿಗಳನ್ನು ಹೂಡಿ ದಾಳಗಳನ್ನು ಹಾಕಿದನು.

ಅರ್ಥ:
ರಾಜ್ಯ: ರಾಷ್ಟ್ರ; ಒಡ್ಡು: ನೀಡು; ಸೋಲು: ಪರಾಭವ; ಪಣ: ಜೂಜಿಗೆ ಒಡ್ಡಿದ ವಸ್ತು; ಬೇರೆ: ಅನ್ಯ; ಹರ್ಷ: ಸಂತಸ; ಕುಮಾರ: ಮಕ್ಕಳು; ಅಭ್ಯುದಯ: ಏಳಿಗೆ; ವಿಜಯ: ಗೆಲುವು; ಶ್ರವಣ: ಕಿವಿ, ಕೇಳುವಿಕೆ; ಸುಖ: ನೆಮ್ಮದಿ, ಸಂತಸ; ಮನ: ಮನಸ್ಸು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ನಿವಹ: ಗುಂಪು; ಹೂಡು: ಅಣಿಗೊಳಿಸು; ಅವನಿಪತಿ: ರಾಜ; ನಸುನಗು: ಮಂದಸ್ಮಿತ; ಹಾಸಂಗಿ: ಪಗಡೆಯ ಹಾಸು; ಹಾಯ್ಕು: ಇಡು, ಇರಿಸು;

ಪದವಿಂಗಡಣೆ:
ಅವರು +ರಾಜ್ಯವನೊಡ್ಡಿ +ಸೋತವೊಲ್
ಎವಗೆ +ಪಣ +ಬೇರಿಲ್ಲ +ಹರ್ಷೋ
ತ್ಸವ+ ಕುಮಾರ+ಅಭ್ಯುದಯ +ವಿಜಯ +ಶ್ರವಣ +ಸುಖಮಿಗಲು
ಎವಗೆ +ಮನವಾಯ್ತ್+ಒಡ್ಡು +ಸಾರಿಯ
ನಿವಹವನು +ಹೂಡೆನಲು +ಹೂಡಿದನ್
ಅವನಿಪತಿ +ನಸುನಗುತ +ಹಾಸಂಗಿಯನು +ಹಾಯ್ಕಿದನು

ಅಚ್ಚರಿ:
(೧) ಹೂಡೆನಲು ಹೂಡಿದನು, ಹಾಸಂಗಿಯ ಹಾಯ್ಕಿದನು – ಒಂದೇ ಅಕ್ಷರದ ಜೋಡಿ ಪದಗಳು

ಪದ್ಯ ೬೬: ಧರ್ಮರಾಯನು ಏನನ್ನು ಪಣಕ್ಕೆ ಇಟ್ಟನು?

ಮತ್ತೆ ಹೇಳುವುದೇನ ಸೋಲವ
ಬಿತ್ತಿ ಬೆಳೆದನು ಭೂಪನವರಿಗೆ
ತೆತ್ತನೈ ಸರ್ವಸ್ವಧನವನು ಸಕಲ ಸೈನಿಕರ
ಮತ್ತೆ ಪಣವೇನೆನಲು ಬಳಿಕರು
ವತ್ತು ಸಾವಿರ ಕರಿಕಳಭವೆಂ
ಬತ್ತು ಸಾವಿರ ತುರಗ ಶಿಶುಗಳನೊಡ್ಡಿದನು ಭೂಪ (ಸಭಾ ಪರ್ವ, ೧೪ ಸಂಧಿ, ೬೬ ಪದ್ಯ)

ತಾತ್ಪರ್ಯ:
ಜನಮೇಜಯ ಇನ್ನೇನು ಹೇಳಲಿ, ಸೋಲನ್ನು ಬಿತ್ತಿ ಧರ್ಮರಾಯನು ಸೋಲನ್ನೇ ಬೆಳಸಿದನು. ತನ್ನ ಹಣ ಸೈನ್ಯಗಳನ್ನೆಲ್ಲಾ ಕೌರವನಿಗೆ ತೆತ್ತನು. ಮತ್ತೆ ಏನು ಪಣವನ್ನೊಡ್ಡುವೆ ಎಂದು ಶಕುನಿಯು ಕೇಳಲು ಅರವತ್ತು ಸಾವಿರ ಆನೆಮರಿಗಳನ್ನು, ಎಂಬತ್ತು ಸಾವಿರ ಕುದುರೆ ಮರಿಗಳನ್ನು ಒಡ್ಡಿದನು.

ಅರ್ಥ:
ಮತ್ತೆ: ಪುನಃ; ಹೇಳು: ತಿಳಿಸು; ಸೋಲು: ಪರಾಭವ; ಬಿತ್ತಿ: ಉಂಟುಮಾಡು; ಬೆಳೆ: ಬೆಳೆಯುವಿಕೆ, ಅಭಿವೃದ್ಧಿ; ಭೂಪ: ರಾಜ; ತೆತ್ತ: ನೀಡಿದ; ಸರ್ವಸ್ವ: ಎಲ್ಲಾ; ಧನ: ಐಶ್ವರ್ಯ; ಸಕಲ: ಎಲ್ಲಾ; ಸೈನಿಕ: ಸೈನ್ಯ, ಪಡೆ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ಬಳಿಕ: ನಂತರ; ಸಾವಿರ: ಸಹಸ್ರ; ಕರಿ: ಆನೆ; ಕಳಭ: ಆನೆಮರಿ; ತುರಗ: ಕುದುರೆ; ಶಿಶು: ಮರಿ; ಒಡ್ಡು: ನೀಡು; ಭೂಪ: ರಾಜ;

ಪದವಿಂಗಡಣೆ:
ಮತ್ತೆ +ಹೇಳುವುದೇನ +ಸೋಲವ
ಬಿತ್ತಿ +ಬೆಳೆದನು+ ಭೂಪನ್+ಅವರಿಗೆ
ತೆತ್ತನೈ +ಸರ್ವಸ್ವ+ಧನವನು +ಸಕಲ +ಸೈನಿಕರ
ಮತ್ತೆ +ಪಣವೇನ್+ಎನಲು +ಬಳಿಕ್+ಅರು
ವತ್ತು +ಸಾವಿರ +ಕರಿಕಳಭವ್+ಎಂ
ಬತ್ತು +ಸಾವಿರ +ತುರಗ +ಶಿಶುಗಳನ್+ಒಡ್ಡಿದನು +ಭೂಪ

ಅಚ್ಚರಿ:
(೧) ಆಗಿನ ಕಾಲದಲ್ಲಿ ಪ್ರಾಣಿಗಳನ್ನು ಪೋಷಿಸುವ ಬಗೆ – ಅರುವತ್ತು ಸಾವಿರ ಕರಿಕಳಭ, ಎಂಬತ್ತು ಸಾವಿರ ತುರಗ ಶಿಶು
(೨) ಬ ಕಾರದ ತ್ರಿವಳಿ ಪದ – ಬಿತ್ತಿ ಬೆಳೆದನು ಭೂಪನ
(೩) ಸೋಲನ್ನು ಅನುಭವಿಸಿದನು ಎನ್ನುವ ಪರಿ – ಸೋಲವ ಬಿತ್ತಿ ಬೆಳೆದನು

ಪದ್ಯ ೬೩: ಧರ್ಮಜನು ಪಣಕ್ಕೆ ಇಡಲು ಯಾವುದರ ಬಗ್ಗೆ ಚಿಂತಿಸಿದನು?

ಆಡಿದನು ನೃಪನಾಕ್ಷಣಕೆ ಹೋ
ಗಾಡಿದನು ಖೇಚರರ ಖಾಡಾ
ಖಾಡಿಯಲಿ ಝಾಡಿಸಿದ ಹಯವನು ಹತ್ತು ಸಾವಿರವ
ಹೂಡಿದನು ಸಾರಿಗಳ ಮರಳಿ
ನ್ನಾಡುವರೆ ಪಣವಾವುದೈ ಮಾ
ತಾಡಿಯೆನೆ ಮನದಲಿ ಮಹೀಪತಿ ಧನವ ಚಿಂತಿಸಿದ (ಸಭಾ ಪರ್ವ, ೧೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಆಡಿದನು, ಗಂಧರ್ವರ ಜೊತೆ ಯುದ್ಧಮಾಡಿ ಗಳಿಸಿದ ಹತ್ತು ಸಾವಿರ ಕುದುರೆಗಳನ್ನು ಸೋತನು. ಶಕುನಿಯು ಮತ್ತೆ ಕಾಯಿಗಳನ್ನು ಹೂಡಿ, ಆಡುವುದಕ್ಕೆ ಇನ್ನಾವ ಪಣವನ್ನಿಡುವೆ ಎನ್ನಲು ಧರ್ಮಜನು ತನ್ನಲ್ಲಿದ್ದ ಧನದ ಬಗ್ಗೆ ಚಿಂತಿಸಿದನು.

ಅರ್ಥ:
ಆಡು: ಕ್ರಿಡೆಯಲ್ಲಿ ಪಾಲ್ಗೊಳ್ಳು; ನೃಪ: ರಾಜ; ಹೋಗು: ತೆರಳು; ಖೇಚರ: ಗಂಧರ್ವ; ಖಾಡಾಖಾಡಿ: ಮಲ್ಲಯುದ್ಧ; ಝಾಡಿ: ಕಾಂತಿ; ಹಯ: ಕುದುರೆ; ಹೂಡು: ಇಡು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಮರಳಿ: ಮತ್ತೆ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ಮಾತಾಡು: ತಿಳಿಸು; ಮನ: ಮನಸ್ಸು; ಮಹೀಪತಿ: ರಾಜ; ಧನ: ವಿತ್ತ, ಐಶ್ವರ್ಯ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಆಡಿದನು +ನೃಪನ್+ಆ+ಕ್ಷಣಕೆ +ಹೋಗ್
ಆಡಿದನು +ಖೇಚರರ+ ಖಾಡಾ
ಖಾಡಿಯಲಿ +ಝಾಡಿಸಿದ+ ಹಯವನು +ಹತ್ತು +ಸಾವಿರವ
ಹೂಡಿದನು+ ಸಾರಿಗಳ+ ಮರಳ್
ಇನ್ನಾಡುವರೆ +ಪಣವ್+ಆವುದೈ +ಮಾ
ತಾಡಿಯೆನೆ +ಮನದಲಿ +ಮಹೀಪತಿ +ಧನವ +ಚಿಂತಿಸಿದ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮಾತಾಡಿಯೆನೆ ಮನದಲಿ ಮಹೀಪತಿ
(೨) ಆಡಿದನು, ಹೂಡಿದನು – ಪ್ರಾಸ ಪದಗಳು

ಪದ್ಯ ೫೭: ಯುಧಿಷ್ಠಿರನು ಯಾವುದನ್ನು ಪಣಕ್ಕೆ ಒಡ್ಡಿದನು?

ಅರಸಿಯರ ಮೈಗಾಹುಗಳ ಕಿಂ
ಕರರು ಸಾವಿರವಿದರ ಪಣ ನಿ
ಮ್ಮರಸನಲಿ ಪಣವೇನೆನಲು ನೀವೇನನೊಡ್ಡಿದಿರಿ
ಮರಳಿ ಬೆಸಗೊಳಬೇಡ ನಮ್ಮಲಿ
ಬರಹವದು ಹಾಕೆನುತ ಸಾರಿಯ
ಬೆರಸಿ ತಿವಿದಾಡಿದನು ಹೆಕ್ಕಳವಿಕ್ಕಿದನು ಶಕುನಿ (ಸಭಾ ಪರ್ವ, ೧೪ ಸಂಧಿ, ೫೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ರಾಣಿಯರ ರಕ್ಷಣೆಗೆ ಸಾವಿರ ಮಂದಿಯಿರುವರು, ಅವರೆಲ್ಲರನ್ನೂ ಪಣಕ್ಕೆ ಇಡುತ್ತೇನೆ, ನಿಮ್ಮ ರಾಜನ ಪಣವೇನೆಂದು ಕೇಳಲು, ಶಕುನಿಯು, ನೀನು ಕೇಳುವ ಅವಶ್ಯಕವೇ ಇಲ್ಲ, ನೀನು ಏನನ್ನು ಪಣಕ್ಕೆ ಇಡುತ್ತೀಯೋ ಅದೇ ನಮ್ಮ ಪಣ ಕೂಡ ಎನ್ನುತ್ತಾ ಶಕುನಿಯು ಆಟವಾಡಿ ಮೇಲುಗೈ ಸಾಧಿಸಿದನು.

ಅರ್ಥ:
ಅರಸಿ: ರಾಣಿ; ಮೈಗಾಹು: ರಕ್ಷಣೆ; ಮೈ: ತನು; ಕಿಂಕರ: ಸೇವಕ; ಸಾವಿರ: ಸಹಸ್ರ; ಪಣ: ಜೂಜಿಗೆ ಒಡ್ಡಿದ ವಸ್ತು; ಅರಸ: ರಾಜ; ಮರಳಿ: ಮತ್ತೆ, ಪುನಃ; ಬೆಸ: ಕೇಳುವುದು, ಪ್ರಶ್ನಿಸು; ಹಾಯ್ಕು: ಹಾಕು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ತಿವಿ: ಚುಚ್ಚು; ಬೆರಸು: ಕೂಡಿಸು; ಹೆಕ್ಕಳ: ಗರ್ವ, ಜಂಭ, ಹೆಚ್ಚಳ;

ಪದವಿಂಗಡಣೆ:
ಅರಸಿಯರ +ಮೈಗಾಹುಗಳ+ ಕಿಂ
ಕರರು +ಸಾವಿರವ್+ಇದರ +ಪಣ +ನಿಮ್ಮ್
ಅರಸನಲಿ +ಪಣವೇನ್+ಎನಲು +ನೀವೇನನ್+ಒಡ್ಡಿದಿರಿ
ಮರಳಿ +ಬೆಸಗೊಳಬೇಡ +ನಮ್ಮಲಿ
ಬರಹವದು +ಹಾಕೆನುತ+ ಸಾರಿಯ
ಬೆರಸಿ+ ತಿವಿದಾಡಿದನು +ಹೆಕ್ಕಳವಿಕ್ಕಿದನು +ಶಕುನಿ

ಅಚ್ಚರಿ:
(೧) ಅರಸ, ಅರಸಿ – ಜೋಡಿ ಪದ
(೨) ರಕ್ಷಣೆಯ ಸೇವಕರನ್ನು ಮೈಗಾಹುಗ ಎಂಬ ಪದಪ್ರಯೋಗ

ಪದ್ಯ ೫೬: ಧರ್ಮರಾಯನು ಪಣದಲ್ಲಿ ಏನನ್ನು ಸೋತನು?

ಏನನಾಡಿದಡೇನು ಫಲ ದೈ
ವಾನುರಾಗದ ಕುಣಿಕೆ ಬೇರಹು
ದಾ ನರೇಂದ್ರನ ಸಾರಿ ಸೋತದು ನಿಮಿಷಮಾತ್ರದಲಿ
ಆ ನಿರೂಢಿಯ ಹತ್ತು ಸಾವಿರ
ಮಾನಿನಿಯರನು ಮತ್ತೆ ಸೋತನು
ಮಾನನಿಧಿಯೇ ಮತ್ತೆ ಪಣವೇನೆಂದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಏನು ಹೇಳಿದರೇನು ಪ್ರಯೋಜನ, ದೈವದ ಒಲವೇ ಬೇರೆಯಾಗಿತ್ತು, ಧರ್ಮರಾಯನ ಕಾಯಿಗಳು ನಿಮಿಷದಲ್ಲಿ ಸೋತುಹೋದವು. ಮತ್ತೆ ಹತ್ತು ಸಾವಿರ ಸ್ತ್ರೀಯರನ್ನು ಒಡ್ಡಿ ಸೋತನು. ಶಕುನಿಯು ಹೇ ಸ್ವಾಭಿಮಾನನಿಧಿಯೇ ಮತ್ತೇನು ಪಣೆ ಎಂದು ಕೇಳಿದನು.

ಅರ್ಥ:
ಆಡು: ಮಾತಾಡು; ಫಲ: ಪ್ರಯೋಜನ; ದೈವಾನುರಾಗ: ಭಗವಂತನ ಕೃಪೆ; ಕುಣಿಕೆ: ಕೊನೆ, ತುದಿ; ಬೇರಹುದು: ಬೇರೆ, ಅನ್ಯ; ನರೇಂದ್ರ: ರಾಜ; ಸಾರಿ: ಬಾರಿ, ಸರರ್ತಿ; ಸೋತು: ಸೋಲು, ಪರಾಭವ; ನಿಮಿಷ: ಕ್ಷಣ; ನಿರೂಢಿ: ಸಾಮಾನ್ಯ; ಹತ್ತು: ದಶ; ಸಾವಿರ: ಸಹಸ್ರ; ಮಾನಿನಿ: ಹೆಣ್ಣು; ಮಾನನಿಧಿ: ಮಾನವನ್ನೇ ನಿಧಿಯಾಗಿಟ್ಟುಕೊಂಡಿರುವ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ;

ಪದವಿಂಗಡಣೆ:
ಏನನಾಡಿದಡ್+ಏನು +ಫಲ +ದೈ
ವಾನುರಾಗದ +ಕುಣಿಕೆ +ಬೇರಹುದ್
ಆ+ ನರೇಂದ್ರನ +ಸಾರಿ +ಸೋತದು +ನಿಮಿಷಮಾತ್ರದಲಿ
ಆ +ನಿರೂಢಿಯ +ಹತ್ತು +ಸಾವಿರ
ಮಾನಿನಿಯರನು+ ಮತ್ತೆ +ಸೋತನು
ಮಾನನಿಧಿಯೇ +ಮತ್ತೆ +ಪಣವ್+ಏನೆಂದನಾ +ಶಕುನಿ

ಅಚ್ಚರಿ:
(೧) ಧರ್ಮರಾಯನನ್ನು ಶಕುನಿ ಕರೆದ ಬಗೆ – ಮಾನನಿಧಿಯೇ
(೨) ಮಾನಿನಿ, ಮಾನನಿಧಿ – ಪದಗಳ ಬಳಕೆ
(೩) ದೈವದ ಅನುಗ್ರಹ ಮುಖ್ಯವೆಂದು ಹೇಳುವ ಸಾಲು – ದೈವಾನುರಾಗದ ಕುಣಿಕೆ ಬೇರಹುದು

ಪದ್ಯ ೫೧: ಮೊದಲನೇ ಹಲಗೆಯನು ಯಾರು ಗೆದ್ದರು?

ರಾಯ ಸೋತನು ಶಕುನಿ ಬೇಡಿದ
ದಾಯ ತಹ ಹಮ್ಮಿಗೆಯಲೊದಗಿದ
ವಾಯತದ ಕೃತ್ರಿಮವಲೇ ಕೌರವರ ಸಂಕೇತ
ಆಯಿತೀ ಹಲಗೆಯನು ಕೌರವ
ರಾಯ ಗೆಲಿದನು ಮತ್ತೆ ಪಣವೇ
ನಾಯಿತೆಂದನು ಶಕುನಿ ಯಮನಂದನನನೀಕ್ಷಿಸುತ (ಸಭಾ ಪರ್ವ, ೧೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಧರ್ಮಜನು ಸೋತನು, ಶಕುನಿಯು ಬೇಡಿದ್ದ ಗರವು ಅವನ ಕೃತ್ರಿಮದ ಕಟ್ಟಿಗೆ ಸಿಲುಕಿ ದಾಳಗಳು ಕೊಡುತ್ತಿದ್ದವು. ಈ ಹಲಗೆಯನ್ನು ಕೌರವ ಗೆದ್ದನು, ಇನ್ನೇನು ಪಣವನ್ನು ಕಟ್ಟಿತ್ತೀಯ ಎಂದು ಶಕುನಿಯು ಯುಧಿಷ್ಠಿರನನ್ನು ನೋಡುತ್ತಾ ಕೇಳಿದನು.

ಅರ್ಥ:
ರಾಯ: ದೊರೆ, ಒಡೆಯ; ಸೋಲು: ಪರಾಭವ; ದಾಯ: ಪಗಡೆಯಾಟದಲ್ಲಿ ಬೀಳುವ ಗರ; ತಹ: ಒಪ್ಪಂದ; ಹಮ್ಮು: ಯೋಜಿಸು; ಒದಗು: ಲಭ್ಯ, ದೊರೆತುದು; ಆಯ: ಗುಟ್ಟು, ಉದ್ದೇಶ; ಕೃತ್ರಿಮ: ಕಪಟ, ಮೋಸ; ಸಂಕೇತ: ಚಿಹ್ನೆ; ಆಯಿತು: ಮುಗಿಯಿತು; ಹಲಗೆ: ಪಲಗೆ, ಮರ, ಲೋಹಗಳ ಅಗಲವಾದ ಹಾಗೂ ತೆಳುವಾದ ಸೀಳು, ಪಗಡೆದಲ್ಲಿ ಒಂದು ಪಂದ್ಯ; ಗೆಲುವು: ಜಯ; ಮತ್ತೆ: ಪುನಃ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ನಂದನ: ಮಗ; ಈಕ್ಷಿಸು: ನೋಡು;

ಪದವಿಂಗಡಣೆ:
ರಾಯ+ ಸೋತನು +ಶಕುನಿ +ಬೇಡಿದ
ದಾಯ+ ತಹ +ಹಮ್ಮಿಗೆಯಲ್+ಒದಗಿದವ್
ಆಯತದ +ಕೃತ್ರಿಮವಲೇ +ಕೌರವರ +ಸಂಕೇತ
ಆಯಿತೀ +ಹಲಗೆಯನು +ಕೌರವ
ರಾಯ +ಗೆಲಿದನು +ಮತ್ತೆ +ಪಣವೇ
ನಾಯಿತೆಂದನು +ಶಕುನಿ +ಯಮನಂದನನನ್+ಈಕ್ಷಿಸುತ

ಅಚ್ಚರಿ:
(೧) ರಾಯ, ದಾಯ, ಆಯ – ಪ್ರಾಸ ಪದಗಳು
(೨) ಕೌರವರ ಸಂಕೇತ – ಆಯತದ ಕೃತ್ರಿಮವಲೇ ಕೌರವರ ಸಂಕೇತ