ಪದ್ಯ ೨೩: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೪?

ಮುಳಿದಡಗ್ಗದ ಪರಶುರಾಮನ
ಗೆಲಿದನೊಬ್ಬನೆ ಭೀಷ್ಮ ಪಾಂಡವ
ಬಲದ ಸಕಲ ಮಹಾರಥರ ಸಂಹರಿಸಿದನು ದ್ರೋಣ
ದಳಪತಿಯ ಮಾಡಿದಡೆ ಪಾರ್ಥನ
ತಲೆಗೆ ತಂದನು ಕರ್ಣನೀಯ
ಗ್ಗಳೆಯರಗ್ಗಿತು ಕಡೆಯಲೊಬ್ಬನೆ ಕೆಟ್ಟೆ ನೀನೆಂದ (ಗದಾ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಪರಶುರಾಮನೇ ಕೋಪದಿಂದ ಬಂದರೂ, ಭೀಷ್ಮನೊಬ್ಬನೇ ಅವನನ್ನು ಸೋಲಿಸಿದನು. ಪಾಂಡವ ಬಲದ ಮಹಾರಥರನ್ನು ದ್ರೋಣನು ಸಂಹರಿಸಿದನು. ಸೇನಾಧಿಪತಿಯಾದ ಕರ್ಣನು ಅರ್ಜುನನ ತಲೆಗೆ ಅಪಾಯವನ್ನೊಡಿದ, ಈ ಮಹಾಸತ್ವಶಾಲಿಗಳು ಮಡಿದರು. ಕಡೆಯಲ್ಲಿ ನೀನೊಬ್ಬನೇ ಒಬ್ಬಂಟಿಯಾಗಿ ಉಳಿದು ಕೆಟ್ಟೆ ಎಂದು ಸಂಜಯನು ಹೇಳಿದನು.

ಅರ್ಥ:
ಮುಳಿ: ಕೋಪ; ಅಗ್ಗ: ಶ್ರೇಷ್ಠ; ಗೆಲಿ: ಜಯಿಸು; ಬಲ: ಸೈನ್ಯ; ಸಕಲ: ಎಲ್ಲಾ; ಮಹಾರಥ: ಪರಾಕ್ರಮಿ; ಸಂಹರ: ಸಾವು; ದಳಪತಿ: ಸೇನಾಧಿಪತಿ; ತಲೆ: ಶಿರ; ತಂದು: ತೆಗೆದುಕೊಂಡು ಬಂದು; ಕಡೆ: ಕೊನೆ; ಕೆಡು: ಹಾಳಾಗು; ಅಗ್ಗಿ: ಬೆಂಕಿ;

ಪದವಿಂಗಡಣೆ:
ಮುಳಿದಡ್+ಅಗ್ಗದ +ಪರಶುರಾಮನ
ಗೆಲಿದನ್+ಒಬ್ಬನೆ +ಭೀಷ್ಮ +ಪಾಂಡವ
ಬಲದ +ಸಕಲ +ಮಹಾರಥರ +ಸಂಹರಿಸಿದನು +ದ್ರೋಣ
ದಳಪತಿಯ +ಮಾಡಿದಡೆ +ಪಾರ್ಥನ
ತಲೆಗೆ +ತಂದನು +ಕರ್ಣನ್+ಈ+ಅ
ಗ್ಗಳೆಯರ್+ಅಗ್ಗಿತು +ಕಡೆಯಲೊಬ್ಬನೆ+ ಕೆಟ್ಟೆ +ನೀನೆಂದ

ಅಚ್ಚರಿ:
(೧) ಭೀಷ್ಮರ ಪರಾಕ್ರಮ – ಮುಳಿದಡಗ್ಗದ ಪರಶುರಾಮನಗೆಲಿದನೊಬ್ಬನೆ ಭೀಷ್ಮ
(೨) ದ್ರೋಣರ ಪರಾಕ್ರಮ – ಪಾಂಡವ ಬಲದ ಸಕಲ ಮಹಾರಥರ ಸಂಹರಿಸಿದನು ದ್ರೋಣ
(೩) ಕರ್ಣನ ಪರಾಕ್ರಮ – ದಳಪತಿಯ ಮಾಡಿದಡೆ ಪಾರ್ಥನ ತಲೆಗೆ ತಂದನು ಕರ್ಣ

ಪದ್ಯ ೩೮: ಧರ್ಮಜನ ಬಾಣವು ಶಲ್ಯನಿಗೇನು ಮಾಡಿತು?

ಸೈರಿಸಾದಡೆಯೆನುತ ಮುಳಿದು ಮ
ಹೀರಮಣ ಮದ್ರಾಧಿಪನನೆ
ಚ್ಚಾರಿದನು ಮಗುಳೆಚ್ಚು ಪುನರಪಿಯೆಚ್ಚು ಮಗುಳೆಸಲು
ಕೂರಲಗು ಸೀಸಕವ ಕವಚವ
ಹೋರುಗಳೆದವು ನೆತ್ತರಿನ ಬಾ
ಯ್ಧಾರೆಗಳ ತೋರಿದವು ದಳಪತಿಯಪರಭಾಗದಲಿ (ಶಲ್ಯ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಇದನ್ನು ಸಹಿಸಿಕೋ ಶಲ್ಯ ಎಂದು ಕೂಗಿ ಯುಧಿಷ್ಠಿರನು ಮೇಲಿಂದ ಮೇಲೆ ಬಾಣಗಳನ್ನು ಶಲ್ಯನ್ ಮೇಲೆ ಬಿಟ್ಟನು. ಮತ್ತೆ ಗರ್ಜಿಸಿ ಮತ್ತೆ ಬಾಣ ಪ್ರಯೋಗಿಸಿದನು. ಅವನ ಬಾಣಗಳು ಶಲ್ಯನ ಕವಚದಲ್ಲಿ ರಂಧ್ರ ಮಾಡಿ ಶಲ್ಯನ ಬೆನ್ನಿನಲ್ಲಿ ಮೊನೆಯನ್ನು ತೋರಿಸಿದವು.

ಅರ್ಥ:
ಸೈರಿಸು: ತಾಳು, ಸಹಿಸು; ಮುಳಿ: ಸಿಟ್ಟು, ಕೋಪ; ಮಹೀರಮಣ: ರಾಜ; ಮದ್ರಾಧಿಪ: ಮದ್ರ ದೇಶದ ರಾಜ(ಶಲ್ಯ); ಎಚ್ಚು: ಬಾಣ ಪ್ರಯೋಗ ಮಾಡು; ಮಗುಳು: ಪುನಃ, ಮತ್ತೆ; ಪುನರಪಿ: ಮತ್ತೆ; ಎಸು: ಬಾಣ ಪ್ರಯೋಗ ಮಾಡು, ಎಚ್ಚು; ಕೂರಲಗು: ಹರಿತವಾದ ಬಾಣ; ಸೀಸಕ: ಶಿರಸ್ತ್ರಾಣ; ಕವಚ: ಹೊದಿಕೆ, ಉಕ್ಕಿನ ಅಂಗಿ; ಹೋರು: ಸೆಣಸು, ಕಾದಾಡು; ನೆತ್ತರು: ರಕ್ತ; ಧಾರೆ: ಮಳೆ; ತೋರು: ಗೋಚರಿಸು; ದಳಪತಿ: ಸೇನಾಧಿಪತಿ; ಅಪರ: ಬೇರೆಯ;

ಪದವಿಂಗಡಣೆ:
ಸೈರಿಸ್+ಆದಡ್+ಎನುತ +ಮುಳಿದು +ಮ
ಹೀರಮಣ+ ಮದ್ರಾಧಿಪನನ್
ಎಚ್ಚಾರಿದನು +ಮಗುಳೆಚ್ಚು +ಪುನರಪಿ+ಎಚ್ಚು +ಮಗುಳೆಸಲು
ಕೂರಲಗು +ಸೀಸಕವ+ ಕವಚವ
ಹೋರುಗಳೆದವು +ನೆತ್ತರಿನ+ ಬಾ
ಯ್ಧಾರೆಗಳ+ ತೋರಿದವು+ ದಳಪತಿ+ಅಪರ+ಭಾಗದಲಿ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮುಳಿದು ಮಹೀರಮಣ ಮದ್ರಾಧಿಪನನೆಚ್ಚಾರಿದನು ಮಗುಳೆಚ್ಚು ಪುನರಪಿಯೆಚ್ಚು ಮಗುಳೆಸಲು
(೨) ರೂಪಕದ ಪ್ರಯೋಗ – ನೆತ್ತರಿನ ಬಾಯ್ಧಾರೆಗಳ ತೋರಿದವು

ಪದ್ಯ ೨೬: ಕುರುಸೇನೆಯು ಶಲ್ಯನನ್ನು ಹೇಗೆ ಕೊಂಡಾಡಿತು?

ದಳಪತಿಯ ಸುಮ್ಮಾನಮುಖ ಬೆಳ
ಬೆಳಗುತದೆ ಗಂಗಾಕುಮಾರನ
ಕಳಶಜನ ರಾಧಾತನೂಜನ ರಂಗಭೂಮಿಯಿದು
ಕಳನನಿದನಾಕ್ರಮಿಸುವಡೆ ವೆ
ಗ್ಗಳೆಯ ಮಾದ್ರಮಹೀಶನಲ್ಲದೆ
ಕೆಲರಿಗೇನಹುದೆನುತ ಕೊಂಡಾಡಿತ್ತು ಕುರುಸೇನೆ (ಶಲ್ಯ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕುರುಸೇನೆಯು ಸೈನಿಕರು ಶಲ್ಯನನ್ನು ನೋಡಿ ಉತ್ಸಾಹಭರಿತರಾದರು. ಸೇನಾಧಿಪತಿಯ ಮುಖ ತೇಜಸ್ಸಿನಿಂದ ಹೊಳೆ ಹೊಳೆಯುತ್ತಿದೆ. ಭೀಷ್ಮ ದ್ರೋಣ ಕರ್ಣರು ಕಾದಿದ ರಣರಂಗವನ್ನಾಕ್ರಮಿಸಲು ಶಲ್ಯನಿಗಲ್ಲದೆ ಇನ್ನಾರಿಗೆ ಸಾಧ್ಯ ಎಂದು ಶಲ್ಯನನ್ನು ಕೊಂಡಾಡಿತು.

ಅರ್ಥ:
ದಳಪತಿ: ಸೇನಾಧಿಪತಿ; ಸುಮ್ಮಾನ: ಸಂತೋಷ, ಹಿಗ್ಗು; ಮುಖ: ಆನನ; ಬೆಳಗು: ಹೊಳಪು, ಕಾಂತಿ; ಕುಮಾರ: ಮುಗ; ಕಳಶಜ: ದ್ರೋಣ; ರಾಧಾತನೂಜ: ರಾಧೆಯ ಮಗ (ಕರ್ಣ); ಭೂಮಿ: ಇಳೆ; ಕಳ: ರಣರಂಗ; ಆಕ್ರಮಿಸು: ಮೇಲೆ ಬೀಳುವುದು; ವೆಗ್ಗಳೆ: ಶ್ರೇಷ್ಠ; ಮಹೀಶ: ರಾಜ; ಕೊಂಡಾಡು: ಹೊಗಳು

ಪದವಿಂಗಡಣೆ:
ದಳಪತಿಯ +ಸುಮ್ಮಾನ+ಮುಖ +ಬೆಳ
ಬೆಳಗುತದೆ+ ಗಂಗಾಕುಮಾರನ
ಕಳಶಜನ +ರಾಧಾ+ತನೂಜನ +ರಂಗ+ಭೂಮಿಯಿದು
ಕಳನನಿದನ್+ಆಕ್ರಮಿಸುವಡೆ +ವೆ
ಗ್ಗಳೆಯ +ಮಾದ್ರ+ಮಹೀಶನಲ್ಲದೆ
ಕೆಲರಿಗ್+ಏನಹುದೆನುತ +ಕೊಂಡಾಡಿತ್ತು +ಕುರುಸೇನೆ

ಅಚ್ಚರಿ:
(೧) ದ್ರೋಣರನ್ನು ಕಳಶಜ, ಕರ್ಣನನ್ನು ರಾಧಾತನೂಜ, ಭೀಷ್ಮರನ್ನು ಗಂಗಾಕುಮಾರ ಎಂದು ಕರೆದಿರುವುದು
(೨) ಕಳ, ರಂಗಭೂಮಿ – ರಣರಂಗವನ್ನು ಸೂಚಿಸುವ ಪದ

ಪದ್ಯ ೬೩: ಧರ್ಮಜನ ಬಾಣಗಳು ಯಾರ ದೇಹವನ್ನು ನೆಟ್ಟವು?

ಏನ ಹೇಳುವೆನರಸ ಕುಂತೀ
ಸೂನುವೇ ಕಿರುಕುಳನೆ ಶಲ್ಯನ
ನೂನ ಶರಜಾಲದಲಿ ನೊಂದನು ಬಹಳ ಧೈರ್ಯದಲಿ
ಭಾನುವಿನ ತಮದೊದವಿದನುಸಂ
ಧಾನದಂತಿರೆಯಹಿತಭಟನ ಸ
ಘಾನತೆಯನೆತ್ತಿದವು ಕುತ್ತಿದವಂಬು ದಳಪತಿಯ (ಶಲ್ಯ ಪರ್ವ, ೨ ಸಂಧಿ, ೬೩ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ, ನಾನೇನೆಂದು ಹೇಳಲಿ, ಧರ್ಮಜನೇನು ಅಲ್ಪನೇ? ಶಲ್ಯನ ನಿರಂತರ ಬಾಣಾಘಾತದಿಂದ ನೊಂದರೂ, ಬೆಳಕು ಕತ್ತಲಿನ ಯುದ್ಧದಮ್ತೆ ಧರ್ಮಜನು ಬಿಟ್ಟ ಬಾಣಗಳು ಶಲ್ಯನ ಮೈಗೆ ನೆಟ್ಟವು.

ಅರ್ಥ:
ಅರಸ: ರಾಜ; ಸೂನು: ಮಗ; ಕಿರುಕುಳ: ತೊಂದರೆ, ಸಾಮಾನ್ಯ; ನೂನ: ಭಂಗ; ಶರಜಾಲ: ಬಾಣಗಳ ಗುಂಪು; ನೊಂದು: ನೋವು; ಬಹಳ: ತುಂಬ; ಧೈರ್ಯ: ಎದೆಗಾರಿಕೆ, ಕೆಚ್ಚು; ಭಾನು: ಸೂರ್ಯ; ತಮ: ಅಂಧಕಾರ; ಅನುಸಂಧಾನ: ಹೆದೆಗೆ ಬಾಣ ಹೂಡುವುದು, ಪ್ರಯೋಗ; ಅಹಿತಭಟ: ವೈರಿ ಸೈನಿಕ; ಸಘಾನ: ಘನತೆಯಿಂದ ಕೂಡಿ; ಎತ್ತು: ಮೇಲೇರು; ಕುತ್ತು: ತೊಂದರೆ, ಆಪತ್ತು; ಅಂಬು: ಬಾಣ; ದಳಪತಿ: ಸೇನಾಧಿಪತಿ; ಅವಿ: ಬಚ್ಚಿಟ್ಟುಕೊಳ್ಳು; ಒದವು: ಉಂಟಾಗು;

ಪದವಿಂಗಡಣೆ:
ಏನ +ಹೇಳುವೆನ್+ಅರಸ +ಕುಂತೀ
ಸೂನುವೇ+ ಕಿರುಕುಳನೆ+ ಶಲ್ಯನ
ನೂನ +ಶರಜಾಲದಲಿ +ನೊಂದನು+ ಬಹಳ +ಧೈರ್ಯದಲಿ
ಭಾನುವಿನ +ತಮದ್+ಒದವಿದ್+ಅನುಸಂ
ಧಾನದಂತಿರೆ+ಅಹಿತ+ಭಟನ+ ಸ
ಘಾನತೆಯನ್+ಎತ್ತಿದವು +ಕುತ್ತಿದವ್+ಅಂಬು +ದಳಪತಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಾನುವಿನ ತಮದೊದವಿದನುಸಂಧಾನದಂತಿರೆ

ಪದ್ಯ ೬೦: ಶಲ್ಯನ ಸುತ್ತ ಯಾರು ಬಂದು ಸೇರಿದರು?

ಸರ್ಬಲಗ್ಗೆಯಲರರೆ ಪಾಂಡವ
ಸರ್ಬದಳ ದಳಪತಿಯ ಝೊಂಪಿನ
ಲೊಬ್ಬನೊದಗಿದಡೇನಹುದು ಕವಿ ನೂಕು ನೂಕೆನುತ
ಬೊಬ್ಬಿಡಲು ಕುರುರಾಯ ನೀ ಬಲ
ದಬ್ಬರಣೆ ವಾರಿಜಭವಾಂಡವ
ಗಬ್ಬರಿಸೆ ಘಾಡಿಸಿತು ಶಲ್ಯನ ರಥದ ಬಳಸಿನಲಿ (ಶಲ್ಯ ಪರ್ವ, ೨ ಸಂಧಿ, ೬೦ ಪದ್ಯ)

ತಾತ್ಪರ್ಯ:
ಪಾಂಡವರ ಸಮಸ್ತ ಸೈನ್ಯವೂ ದಾಳಿ ಮಾಡುತ್ತಿದೆ. ಶಲ್ಯನೊಬ್ಬನಿಂದ ಏನಾದೀತು, ನುಗ್ಗು, ಮುತ್ತು ಎಂದು ಕೌರವನು ಅಬ್ಬರಿಸಿದನು. ಕುರುಸೇನೆಯೆಲ್ಲವೂ ಶಲ್ಯನ ರಥದ ಸುತ್ತಲೂ ಬಂದು ನಿಂತಿತು.

ಅರ್ಥ:
ಸರ್ಬ: ಸರ್ವ, ಎಲ್ಲಾ; ಲಗ್ಗೆ: ಮುತ್ತಿಗೆ, ಆಕ್ರಮಣ; ಅರರೆ: ಆಶ್ಚರ್ಯ ಸೂಚಕದ ಪದ; ದಳ: ಸೈನ್ಯ; ದಳಪತಿ: ಸೇನಾಧಿಪತಿ; ಝೊಂಪು: ನಿದ್ರೆ; ಒದಗು: ಲಭ್ಯ, ದೊರೆತುದು; ಕವಿ: ಆವರಿಸು; ನೂಕು: ತಳ್ಳು; ಬೊಬ್ಬಿಡು: ಗರ್ಜಿಸು; ಅಬ್ಬರಣೆ: ಆರ್ಭಟ; ವಾರಿಜಭವ: ಬ್ರಹ್ಮ; ವಾರಿಜಭವಾಂಡ: ಬ್ರಹ್ಮಾಂಡ; ಅಬ್ಬರ: ಆರ್ಭಟ; ಘಾಡಿಸು: ವ್ಯಾಪಿಸು; ಬಳಸು: ಆವರಿಸುವಿಕೆ;

ಪದವಿಂಗಡಣೆ:
ಸರ್ಬ+ಲಗ್ಗೆಯಲ್+ಅರರೆ +ಪಾಂಡವ
ಸರ್ಬದಳ +ದಳಪತಿಯ+ ಝೊಂಪಿನಲ್
ಒಬ್ಬನ್+ಒದಗಿದಡ್+ಏನಹುದು +ಕವಿ +ನೂಕು +ನೂಕೆನುತ
ಬೊಬ್ಬಿಡಲು +ಕುರುರಾಯ +ನೀ +ಬಲದ್
ಅಬ್ಬರಣೆ +ವಾರಿಜಭವಾಂಡವಗ್
ಅಬ್ಬರಿಸೆ +ಘಾಡಿಸಿತು +ಶಲ್ಯನ+ ರಥದ +ಬಳಸಿನಲಿ

ಅಚ್ಚರಿ:
(೧) ಸರ್ಬ – ೧,೨ ಸಾಲಿನ ಮೊದಲ ಪದ
(೨) ನೂಕು ನೂಕೆನುತ – ನೂಕು ಪದದ ಜೋಡಿ ಪದ

ಪದ್ಯ ೫೮: ಪಾಂಡವ ಸೇನೆಯು ಯಾವ ಮಾತುಗಳನ್ನಾಡುತ್ತಿತ್ತು?

ಗೆಲಿದನೋ ಮಾದ್ರೇಶನವನಿಪ
ತಿಲಕನನು ಫಡ ಧರ್ಮಸುತನೀ
ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
ಅಳುಕಿದನು ನೃಪನೀ ಬಲಾಧಿಪ
ನುಲುಕನಂಜಿದನೆಂಬ ಲಗ್ಗೆಯ
ಲಳಿ ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ (ಶಲ್ಯ ಪರ್ವ, ೨ ಸಂಧಿ, ೫೮ ಪದ್ಯ)

ತಾತ್ಪರ್ಯ:
ಶಲ್ಯನು ಧರ್ಮಜನನ್ನು ಗೆದ್ದ, ಛೇ, ಇಲ್ಲ ಅವನು ನಮ್ಮ ದಳಪತಿಯನ್ನು ಸೋಲಿಸಿದನು, ಧರ್ಮಜನು ಹೆದರಿದ, ಅಜೇಯನಾದ ಶಲ್ಯನು ಹೆದರಿದನು, ಎಂಬ ತರತರದ ಮಾತುಗಳನ್ನು ಪಾಂಡವ ಸೇನೆಯು ಆಡುತ್ತಿತ್ತು.

ಅರ್ಥ:
ಗೆಲಿ: ಜಯಿಸು; ಅವನಿಪ: ರಾಜ; ತಿಲಕ: ಶ್ರೇಷ್ಠ; ಫಡ: ತಿರಸ್ಕಾರದ ಮಾತು; ಸುತ: ಮಗ; ದಳಪತಿ: ಸೇನಾಧಿಪತಿ; ಅದ್ದು: ತೋಯಿಸು, ಮುಳುಗು; ಪರಿಭವ: ಅನಾದರ, ತಿರಸ್ಕಾರ; ಸಮುದ್ರ: ಸಾಗರ; ಅಳುಕು: ಹೆದರು; ನೃಪ: ರಾಜ; ಬಲಾಧಿಪ: ಪರಾಕ್ರಮಿ; ಉಲುಕು: ಅಲ್ಲಾಡು, ನಡುಗು; ಅಂಜು: ಹೆದರು; ಲಗ್ಗೆ: ಆಕ್ರಮಣ; ಅಳಿ: ನಾಶ; ಮಸಗು: ಹರಡು; ಕೆರಳು; ಮೈದೋರು: ಎದುರು ನಿಲ್ಲು; ಆಚೆ: ಹೊರಗಡೆ; ಸಂದಣಿ: ಗುಂಪು;

ಪದವಿಂಗಡಣೆ:
ಗೆಲಿದನೋ +ಮಾದ್ರೇಶನ್+ಅವನಿಪ
ತಿಲಕನನು +ಫಡ +ಧರ್ಮಸುತನ್+ಈ
ದಳಪತಿಯನ್+ಅದ್ದಿದನು +ಪರಿಭವಮಯ +ಸಮುದ್ರದಲಿ
ಅಳುಕಿದನು +ನೃಪನ್+ಈ+ ಬಲಾಧಿಪನ್
ಅಲುಕನ್+ಅಂಜಿದನೆಂಬ +ಲಗ್ಗೆಯಲ್
ಅಳಿ +ಮಸಗಿ +ಮೈದೋರಿತ್+ಆಚೆಯ +ಸೇನೆ +ಸಂದಣಿಸಿ

ಅಚ್ಚರಿ:
(೧) ರೂಪಕದ ಪ್ರಯೋಗ – ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
(೨) ಜೋಡಿ ಪದಗಳ ಬಳಕೆ – ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ

ಪದ್ಯ ೫೧: ಕೌರವನು ಹೇಗೆ ಗರ್ಜಿಸಿದನು?

ದಳವ ಕರೆ ದಳಪತಿಗೆ ಕಾಳೆಗ
ಬಲುಹು ಪಾರ್ಥನ ಕೂಡೆ ಗುರುಸುತ
ನಳವಿಗೊಡಲಿ ಸುಶರ್ಮ ತಾಗಲಿ ಭೋಜ ಗೌತಮರು
ನಿಲಲಿ ಸುಭಟರು ಜೋಡಿಯಲಿ ಪರ
ಬಲಕೆ ಜಾರುವ ಜಯಸಿರಿಯ ಮುಂ
ದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು ಕುರುರಾಯ (ಶಲ್ಯ ಪರ್ವ, ೨ ಸಂಧಿ, ೫೧ ಪದ್ಯ)

ತಾತ್ಪರ್ಯ:
ಸೈನ್ಯವನ್ನು ಕರೆದು ಯುದ್ಧಕ್ಕೆ ಬಿಡಿರಿ. ಸೇನಾಧಿಪತಿಯು ಅರ್ಜುನನೊಡನೆ ಮಾಡುತ್ತಿರುವ ಕಾಳಗ ಅತಿಶಯವಾಯಿತು. ಅಶ್ವತ್ಥಾಮ ಸುಶರ್ಮರು ಕಾಳಗಕೊಡಲಿ, ಶತ್ರುಗಳತ್ತ ಜಾರುತ್ತಿರುವ ಜಯಲಕ್ಷ್ಮಿಯ ಮುಂದಲೆಯನ್ನು ಹಿಡಿದು ನಮ್ಮತ್ತ ಕರೆತನ್ನಿ ಎಂದು ಕೌರವನು ಗರ್ಜಿಸಿದನು.

ಅರ್ಥ:
ದಳ: ಸೈನ್ಯ; ಕರೆ: ಬರೆಮಾಡು; ದಳಪತಿ: ಸೇನಾಧಿಪತಿ; ಕಾಳೆಗ: ಯುದ್ಧ; ಬಲುಹು: ಬಲ, ಶಕ್ತಿ; ಕೂಡೆ: ಜೊತೆ; ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ಅಳವಿ: ಯುದ್ಧ; ನಿಲು: ತಡೆ; ಜೋಡಿ: ಜೊತೆ; ಪರಬಲ: ವೈರಿ ಸೈನ್ಯ; ಜಾರು: ಬೀಳು; ಜಯಸಿರಿ: ವಿಜಯ, ಗೆಲುವು; ಮುಂದಲೆ: ತಲೆಯ ಮುಂಭಾಗ; ಹಿಡಿ: ಗ್ರಹಿಸು; ಹೆಕ್ಕಳಿಸು: ಅಧಿಕವಾಗು, ಹೆಚ್ಚಾಗು;

ಪದವಿಂಗಡಣೆ:
ದಳವ +ಕರೆ +ದಳಪತಿಗೆ+ ಕಾಳೆಗ
ಬಲುಹು +ಪಾರ್ಥನ +ಕೂಡೆ +ಗುರುಸುತನ್
ಅಳವಿಗೊಡಲಿ +ಸುಶರ್ಮ +ತಾಗಲಿ +ಭೋಜ +ಗೌತಮರು
ನಿಲಲಿ +ಸುಭಟರು +ಜೋಡಿಯಲಿ +ಪರ
ಬಲಕೆ +ಜಾರುವ +ಜಯಸಿರಿಯ+ ಮುಂ
ದಲೆಯ +ಹಿಡಿಹಿಡಿಯೆನುತ+ ಹೆಕ್ಕಳಿಸಿದನು +ಕುರುರಾಯ

ಅಚ್ಚರಿ:
(೧) ಕಾಳೆಗ, ಅಳವಿ – ಸಮಾನಾರ್ಥಕ ಪದ
(೨) ಗೆಲುವಿನತ್ತ ಸಾಗಿ ಎಂದು ಹೇಳುವ ಪರಿ – ಪರಬಲಕೆ ಜಾರುವ ಜಯಸಿರಿಯ ಮುಂದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು

ಪದ್ಯ ೪೦: ಶಲ್ಯನ ಬೆಂಬಲಕ್ಕೆ ಯಾರು ಬಂದರು?

ಎಲೆಲೆ ಹನುಮನ ಹಳವಿಗೆಯ ರಥ
ಹೊಳೆಯುತದೆ ದಳಪತಿಗೆ ಕಾಳೆಗ
ಬಲುಹು ಬರ ಹೇಳುವುದು ಗೌತಮ ಗುರುಸುತಾದಿಗಳ
ಬಲವ ಕರೆ ಸಮಸಪ್ತಕರನಿ
ಟ್ಟಿಳಿಸಿ ನೂಕಲಿ ಕರ್ಣಸುತನೆಂ
ದುಲಿದು ಹೊಕ್ಕನು ನಿನ್ನ ಮಗನೈನೂರು ರಥಸಹಿತ (ಶಲ್ಯ ಪರ್ವ, ೨ ಸಂಧಿ, ೪೦ ಪದ್ಯ)

ತಾತ್ಪರ್ಯ:
ಹನುಮ ಧ್ವಜದ ರಥ (ಅರ್ಜುನನ) ಬಂದಿದೆ. ಸೇನಾಪತಿಗೆ ಯುದ್ಧ ಬಲವತ್ತರವಾಯಿತು. ಕೃಪಾಶ್ವತ್ಥಾಮರನ್ನೂ, ಸಂಶಪ್ತಕರನ್ನೂ ಬರಹೇಳು. ಕರ್ಣಪುತ್ರನು ವೇಗವಾಗಿ ಬರಲಿ, ಎಂದಾಜ್ಞೆಕೊಟ್ಟು, ಎಲೈ ರಾಜ, ನಿನ್ನ ಮಗನಾದ ದುರ್ಯೋಧನನು ಐನೂರು ರಥಗಳೊಡನೆ ಶಲ್ಯನಿಗೆ ಬೆಂಬಲವಾಗಿ ಬಂದನು.

ಅರ್ಥ:
ಹನುಮ: ಆಂಜನೇಯ; ಹಳವಿ: ಧ್ವಜ ; ರಥ: ಬಂಡಿ; ಹೊಳೆ: ಪ್ರಕಾಶ; ದಳಪತಿ: ಸೇನಾಧಿಪತಿ; ಕಾಳೆಗ: ಯುದ್ಧ; ಬಲುಹು: ಬಲ, ಶಕ್ತಿ; ಬರಹೇಳು: ಆಗಮಿಸು; ಸುತ: ಮಗ; ಆದಿ: ಮುಂತಾದ; ಬಲ: ಸೈನ್ಯ; ಕರೆ: ಬರೆಮಾಡು; ಸಮಸಪ್ತಕ: ಯುದ್ಧದಲ್ಲಿ ಶಪಥ ಮಾಡಿ ಹೋರಾಡುವರು; ನೂಕು: ತಳ್ಲು; ಉಲಿ: ಧ್ವನಿ; ಹೊಕ್ಕು: ಸೇರು; ಮಗ: ಸುತ; ರಥ: ಬಂಡಿ; ಸಹಿತ: ಜೊತೆ;

ಪದವಿಂಗಡಣೆ:
ಎಲೆಲೆ +ಹನುಮನ +ಹಳವಿಗೆಯ +ರಥ
ಹೊಳೆಯುತದೆ +ದಳಪತಿಗೆ+ ಕಾಳೆಗ
ಬಲುಹು +ಬರ ಹೇಳುವುದು +ಗೌತಮ+ ಗುರುಸುತಾದಿಗಳ
ಬಲವ +ಕರೆ +ಸಮಸಪ್ತಕರನ್
ಇಟ್ಟಿಳಿಸಿ +ನೂಕಲಿ +ಕರ್ಣಸುತನೆಂದ್
ಉಲಿದು +ಹೊಕ್ಕನು +ನಿನ್ನ +ಮಗನ್+ಐನೂರು +ರಥ+ಸಹಿತ

ಅಚ್ಚರಿ:
(೧) ಅರ್ಜುನನು ಬಂದ ಎಂದು ಹೇಳುವ ಪರಿ – ಹನುಮನ ಹಳವಿಗೆಯ ರಥಹೊಳೆಯುತದೆ

ಪದ್ಯ ೩೭: ಶಲ್ಯನ ದಾಳಿಯು ಹೇಗಿತ್ತು?

ದಳಪತಿಯ ದುವ್ವಾಳಿ ಪಾಂಡವ
ಬಲವ ಕೆದರಿತು ಕಲ್ಪಮೇಘದ
ಹೊಲಿಗೆ ಹರಿದವೊಲಾಯ್ತು ಮಾದ್ರೇಶ್ವರನ ಶರಜಾಲ
ಅಳುಕದಿರಿ ಬದ್ದರದ ಬಂಡಿಯ
ನಿಲಿಸಿ ಹರಿಗೆಯ ಪಾಠಕರು ಕೈ
ಕೊಳಲಿ ಮುಂದಣ ನೆಲನನೆನುತುಬ್ಬರಿಸಿತರಿಸೇನೆ (ದ್ರೋಣ ಪರ್ವ, ೨ ಸಂಧಿ ೩೭ ಪದ್ಯ)

ತಾತ್ಪರ್ಯ:
ಶಲ್ಯನ ದಾಳಿಯಿಂದ ಪಾಂಡವ ಸೇನೆ ಚದುರಿತು. ಕಲ್ಪಾಂತದ ಮೋಡದ ಹೊಲಿಗೆ ಹರಿದು ಬೀಳುವ ಮಳೆಯಂತೆ ಶಲ್ಯನ ಬಾಣಗಳು ಸುರಿದವು. ವೈರಿಸೇನೆಯು ಹೆದರ ಬೇಡಿ ಬದ್ದರದ ಬಂಡಿಗಳನ್ನು ನಡುವೆ ನಿಲ್ಲಿಸಿ, ಗುರಾಣಿಯನ್ನು ಹಿಡಿದವರು, ಪಾಠಕರು ದಳಪತಿಯ ಮುಂದೆ ನಿಲ್ಲಲಿ ಎಂದು ವೈರಿಸೇನೆ ಸಂಭ್ರಮಿಸಿತು.

ಅರ್ಥ:
ದಳಪತಿ: ಸೇನಾಧಿಪತಿ; ದುವ್ವಾಳಿ: ತೀವ್ರಗತಿ, ವೇಗವಾದ ನಡೆ; ಬಲ: ಸೈನ್ಯ; ಕೆದರು: ಹರಡು; ಕಲ್ಪ: ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಮೇಘ: ಮೋಡ; ಹೊಲಿಗೆ: ಸಂಬಂಧ, ಹೊಂದಾಣಿಕೆ, ಹೊಲಿಯುವಿಕೆ; ಹರಿ: ಚೆದರು; ಶರ: ಬಾಣ; ಜಾಲ: ಗುಂಪು; ಅಳುಕು: ಹೆದರು; ಬದ್ಧರ: ಆತ್ಮರಕ್ಷಣಾರ್ಥವಾಗಿ ಬಳಸುತ್ತಿದ್ದ ಒಂದು ಬಗೆಯ ಉಪಕರಣ; ಬಂಡಿ: ರಥ; ನಿಲಿಸು: ತಡೆ; ಹರಿಗೆ: ತಲೆಪೆರಿಗೆ; ಪಾಠಕ: ಹೊಗಳುಭಟ್ಟ; ಮುಂದಣ: ಮುಂಚೆ; ನೆಲ: ಭೂಮಿ; ಉಬ್ಬು: ಅತಿಶಯ; ಅರಿ: ವೈರಿ;

ಪದವಿಂಗಡಣೆ:
ದಳಪತಿಯ+ ದುವ್ವಾಳಿ +ಪಾಂಡವ
ಬಲವ +ಕೆದರಿತು +ಕಲ್ಪ+ಮೇಘದ
ಹೊಲಿಗೆ +ಹರಿದವೊಲಾಯ್ತು +ಮಾದ್ರೇಶ್ವರನ+ ಶರಜಾಲ
ಅಳುಕದಿರಿ +ಬದ್ದರದ +ಬಂಡಿಯ
ನಿಲಿಸಿ +ಹರಿಗೆಯ +ಪಾಠಕರು +ಕೈ
ಕೊಳಲಿ +ಮುಂದಣ +ನೆಲನನ್+ಎನುತ್+ಉಬ್ಬರಿಸಿತ್+ಅರಿಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪಾಂಡವ ಬಲವ ಕೆದರಿತು ಕಲ್ಪಮೇಘದ ಹೊಲಿಗೆ ಹರಿದವೊಲಾಯ್ತು

ಪದ್ಯ ೩೦: ಶಲ್ಯನು ಧರ್ಮಜನ ಮೇಲೆ ಬಿಟ್ಟ ಬಾಣಗಳು ಏನಾದವು?

ಹಳಚಿದನು ದಳಪತಿಯನವನಿಪ
ತಿಲಕನೆಚ್ಚನು ನೂರು ಶರದಲಿ
ಕಳಚಿ ಕಯ್ಯೊಡನೆಚ್ಚು ಬೇಗಡೆಗಳೆದನವನಿಪನ
ಅಳುಕಲರಿವುದೆ ಸಿಡಿಲ ಹೊಯ್ಲಲಿ
ಕುಲಕುಧರವೀ ಧರ್ಮಸುತನ
ಗ್ಗಳಿಕೆಗುಪ್ಪಾರತಿಗಳಾದುವು ಶಲ್ಯನಂಬುಗಳು (ಶಲ್ಯ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನು ಶಲ್ಯನ ಮೇಲೆ ನೂರು ಬಾಣಗಳನನ್ನು ಬಿಡಲು, ಶಲ್ಯನು ಅವನ್ನು ಕತ್ತರಿಸಿ ಅರಸನ ಮೇಲೆ ಬಾಣಗಳನ್ನು ಬಿಟ್ಟನು. ಸಿಡಿಲಿಗೆ ಕುಲಪರ್ವತವು ಅಳುಕುವುದೇ ಧರ್ಮಜನ ಪರಾಕ್ರಮಕ್ಕೆ ಎತ್ತಿದ ಉಪ್ಪಾರತಿಗಳಂತೆ ಶಲ್ಯನ ಬಾಣಗಳು ನಿಷ್ಫಲವಾದವು.

ಅರ್ಥ:
ಹಳಚು: ತಾಗು, ಬಡಿ; ದಳಪತಿ: ಸೇನಾಧಿಪತಿ; ಅವನಿಪ: ರಾಜ; ತಿಲಕ: ಶ್ರೇಷ್ಠ; ಎಚ್ಚು: ಬಾಣ ಪ್ರಯೋಗ ಮಾಡು; ನೂರು: ಶತ; ಶರ: ಬಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಕೈ: ಹಸ್ತ; ಒಡ್ಡು: ನೀಡು; ಬೇಗಡೆ: ಹೊಳಪಿನ ತಗಡು; ಅಳುಕು: ಹೆದರು; ಅರಿ: ತಿಳಿ; ಸಿಡಿಲು: ಅಶನಿ; ಹೊಯ್ಲು: ಹೊಡೆ; ಕುಲಕುಧರ: ಕುಲಪರ್ವತ; ಸುತ: ಮಗ; ಅಗ್ಗಳಿಕೆ: ಶ್ರೇಷ್ಠ; ಉಪ್ಪಾರತಿ: ಉಪ್ಪನ್ನು ನಿವಾಳಿಸಿ ದೃಷ್ಟಿ ತೆಗೆಯುವುದು; ಅಂಬು: ಬಾಣ;

ಪದವಿಂಗಡಣೆ:
ಹಳಚಿದನು +ದಳಪತಿಯನ್+ಅವನಿಪ
ತಿಲಕನ್+ಎಚ್ಚನು +ನೂರು +ಶರದಲಿ
ಕಳಚಿ +ಕಯ್ಯೊಡನ್+ಎಚ್ಚು +ಬೇಗಡೆಗಳೆದನ್+ಅವನಿಪನ
ಅಳುಕಲ್+ಅರಿವುದೆ +ಸಿಡಿಲ +ಹೊಯ್ಲಲಿ
ಕುಲಕುಧರವೀ +ಧರ್ಮಸುತನ್
ಅಗ್ಗಳಿಕೆಗ್+ಉಪ್ಪಾರತಿಗಳಾದುವು +ಶಲ್ಯನ್+ಅಂಬುಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ -ಅಳುಕಲರಿವುದೆ ಸಿಡಿಲ ಹೊಯ್ಲಲಿ ಕುಲಕುಧರವೀ
(೨) ಅವನಿಪತಿಲಕ, ಧರ್ಮಸುತ – ಯುಧಿಷ್ಠಿರನನ್ನು ಕರೆದ ಪರಿ