ಪದ್ಯ ೩೭: ದೇವತೆಗಳು ಘಟೋತ್ಕಚನನ್ನು ಹೇಗೆ ಹೊಗಳಿದರು?

ತಾರಕನ ಕೈಟಭನ ಮಹಿಷನ
ವೀರ ಜಂಭನ ಕಾಲನೇಮಿಯ
ತಾರಕಾಕ್ಷನ ಕುಂಭಕರ್ಣನ ಮುರ ಗುಹಾಸುರನ
ಆರುಭಟೆ ರಣದುಬ್ಬಟೆಯ ಜ
ಜ್ಝಾರತನವಿವನೊಬ್ಬನಲಿ ಕೈ
ವಾರವೇ ನೆರೆ ಕಾಣಲಾಯ್ತೆಂದುದು ಸುರಸ್ತೋಮ (ದ್ರೋಣ ಪರ್ವ, ೧೬ ಸಂಧಿ, ೩೭ ಪದ್ಯ)

ತಾತ್ಪರ್ಯ:
ತಾರಕ, ಕೈಟಭ, ಮಹಿಷ, ಜಂಭ, ಕಾಲನೇಮಿ, ತಾರಕಾಕ್ಷ, ಕುಂಭಕರ್ಣ, ಮುರ, ಗುಹಾಸುರರ ಆರ್ಭಟವು ಇವನೊಬ್ಬನಲ್ಲೀ ಸೇರಿಕೊಂಡಿವೆ. ಇಲ್ಲಿಯೇ ಕಾಣುವಂತಾಯಿತು ಎಂದು ದೇವತೆಗಳು ಹೊಗಳಿದರು.

ಅರ್ಥ:
ವೀರ: ಪರಾಕ್ರಮಿ; ಆರುಭಟೆ: ಗರ್ಜನೆ; ರಣ: ಯುದ್ಧ; ಉಬ್ಬಟೆ: ಅಧಿಕ; ಜಜ್ಝಾರ: ಪರಾಕ್ರಮಿ, ಶೂರ; ಕೈವಾರ: ಕೊಂಡಾಟ; ನೆರೆ: ಗುಂಪು; ಕಾಣು: ತೋರು; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ತಾರಕನ +ಕೈಟಭನ +ಮಹಿಷನ
ವೀರ +ಜಂಭನ +ಕಾಲನೇಮಿಯ
ತಾರಕಾಕ್ಷನ+ ಕುಂಭಕರ್ಣನ +ಮುರ +ಗುಹಾಸುರನ
ಆರುಭಟೆ +ರಣದುಬ್ಬಟೆಯ+ ಜ
ಜ್ಝಾರತನವ್+ಇವನೊಬ್ಬನಲಿ +ಕೈ
ವಾರವೇ +ನೆರೆ +ಕಾಣಲಾಯ್ತೆಂದುದು +ಸುರಸ್ತೋಮ

ಅಚ್ಚರಿ:
(೧) ರಾಕ್ಷಸರ ಹೆಸರು – ತಾರಕ, ಕೈಟಭ, ಮಹಿಷ, ಜಂಭ, ಕಾಲನೇಮಿ, ತಾರಕಾಕ್ಷ, ಕುಂಭಕರ್ಣ, ಮುರ, ಗುಹಾಸುರ

ಪದ್ಯ ೧೮: ಯಾರ ಬೆನ್ನಲ್ಲಿ ಜಯವಿರುತ್ತದೆ?

ಬಾಹುಬಲ ಬಲವಲ್ಲ ದೈವ
ದ್ರೋಹಿಗಳಿಗೆ ಸುಧರ್ಮನಿಷ್ಠರ
ಸಾಹಸವು ಇರದಾದಡೆಯು ಕೊಯ್ವರು ವಿರೋಧಿಗಳ
ಆ ಹರಾತ್ಮಜ ಹಸುಳೆ ತನದ
ವ್ಯೂಹದಲಿ ತಾರಕನನಿಕ್ಕನೆ
ಯಾಹವದ ಜಯಸಿರಿಯು ಧರ್ಮದ ಬೆನ್ನಲಿಹುದೆಂದ (ಅರಣ್ಯ ಪರ್ವ, ೧೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ದೈವದ್ರೋಹಿಗಳ ಬಾಹುಬಲವು ಬಲವಲ್ಲ. ಧರ್ಮನಿಷ್ಠರ ಬಲವು ಸ್ವಲ್ಪವಾದರೂ ವಿರೋಧಿಗಳನ್ನು ಸಂಹರಿಸುತ್ತಾರೆ. ಶಿವನ ಪುತ್ರನಾದ ಗುಹನು ಶಿಶುವಾಗಿದ್ದಾಗಲೇ ಮಹಾಬಲಶಾಲಿಯಾದ ತಾರಕನನ್ನು ಸಂಹರಿಸಲಿಲ್ಲವೇ? ಯುದ್ಧದಲ್ಲಿ ಧರ್ಮಕ್ಕೆ ಜಯವು ದೊರಕುತ್ತದೆ, ಧರ್ಮದ ಬೆನ್ನಲ್ಲಿ ಜಯ ಎಂದು ಮಾರ್ಕಂಡೆಯ ಮುನಿಗಳು ಹೇಳಿದರು.

ಅರ್ಥ:
ಬಾಹುಬಲ: ತೋಳ್ಬಲ; ಬಲ: ಶಕ್ತಿ; ದೈವ: ಭಗವಂತ; ದ್ರೋಹಿ: ವಂಚಕ; ಸುಧರ್ಮ: ಒಳ್ಳೆಯ ನಡತೆ; ನಿಷ್ಠ: ಶ್ರದ್ಧೆ; ಸಾಹಸ: ಪರಾಕ್ರಮ; ಕೊಯ್ವು: ಕೊಲ್ಲು; ವಿರೋಧಿ: ಶತ್ರು; ಹರಾತ್ಮಜ: ಶಿವನ ಮಗ (ಷಣ್ಮುಖ); ಹಸುಳೆ: ಚಿಕ್ಕ ಮಗು; ವ್ಯೂಹ: ತಂತ್ರ, ಕೈವಾಡ; ಇಕ್ಕು: ಇರಿ; ಆಹವ: ಯುದ್ಧ; ಜಯ: ಗೆಲುವು; ಸಿರಿ: ಐಶ್ವರ್ಯ; ಬೆನ್ನು: ಹಿಂಭಾಗ;

ಪದವಿಂಗಡಣೆ:
ಬಾಹುಬಲ+ ಬಲವಲ್ಲ +ದೈವ
ದ್ರೋಹಿಗಳಿಗೆ +ಸುಧರ್ಮನಿಷ್ಠರ
ಸಾಹಸವು +ಇರದಾದಡೆಯು +ಕೊಯ್ವರು +ವಿರೋಧಿಗಳ
ಆ +ಹರಾತ್ಮಜ+ ಹಸುಳೆತನದ
ವ್ಯೂಹದಲಿ +ತಾರಕನನ್+ಇಕ್ಕನೆ
ಆಹವದ+ ಜಯಸಿರಿಯು +ಧರ್ಮದ +ಬೆನ್ನಲಿಹುದೆಂದ

ಅಚ್ಚರಿ:
(೧) ಜಯಸಿರಿ ಯಾರನ್ನು ಹಿಂಬಾಲಿಸುತ್ತಾಳೆ – ಯಾಹವದ ಜಯಸಿರಿಯು ಧರ್ಮದ ಬೆನ್ನಲಿಹುದೆಂದ
(೨) ಸುಬ್ರಹ್ಮಣ್ಯನ ಸಾಹಸವನ್ನು ಹೇಳುವ ಪರಿ – ಆ ಹರಾತ್ಮಜ ಹಸುಳೆ ತನದ
ವ್ಯೂಹದಲಿ ತಾರಕನನಿಕ್ಕನೆ

ಪದ್ಯ ೫೫: ರಾಕ್ಷಸಗಣವು ಯಾರನ್ನು ಹೊಗಳಿತು?

ತಾರಕನ ಜಂಭನ ನಿಕುಂಭನ
ತಾರಕಾಕ್ಷನ ಕಾಲನೇಮಿಯ
ವೀರ ಮಹಿಷಾಸುರನ ಬಾಣಾಸುರನ ರಾವಣನ
ತೋರಹತ್ತರ ಬಾಹುಬಲವನು
ಸಾರಿಯಾ ಕರ್ಣಂಗೆ ಮಿಕ್ಕಿನ
ಸಾರಹೃದಯರು ನಿನಗೆ ಸರಿಯಿಲ್ಲೆಂದುದಸುರಗಣ (ಕರ್ಣ ಪರ್ವ, ೨೪ ಸಂಧಿ, ೫೫ ಪದ್ಯ)

ತಾತ್ಪರ್ಯ:
ತಾರಕ, ಜಂಭ, ನಿಕುಂಭ, ತಾರಕಾಕ್ಷ, ಕಾಲನೇಮಿ, ಮಹಿಷಾಸುರ, ಬಾಣಾಸುರ, ರಾವಣ ಮೊದಲಾದ ವೀರರ ಬಾಹುಬಲವು ಕರ್ಣನ ಬಾಹುಬಲಕ್ಕೆ ಅನುಸಾರಿ. ಉಳಿದವರಾರೂ ನಿನಗೆ ಸರಿಯಿಲ್ಲ ಎಂದು ರಾಕ್ಷಸಗಣವು ಕರ್ಣನನ್ನು ಹೊಗಳಿತು.

ಅರ್ಥ:
ವೀರ: ಶೂರ; ಅಸುರ: ರಾಕ್ಷಸ; ತೋರು: ಕಾಣಿಸು, ಪ್ರದರ್ಶಿಸು; ಬಾಹುಬಲ: ಪರಾಕ್ರಮಿ; ಸಾರಿ: ಸರಿಸಮಾನ; ಮಿಕ್ಕ: ಉಳಿದ; ಸಾರ: ಶೌರ್ಯ, ಪರಾಕ್ರಮ, ಶ್ರೇಷ್ಠ; ಹೃದಯ: ಎದೆ; ಗಣ: ಗುಂಪು;

ಪದವಿಂಗಡಣೆ:
ತಾರಕನ +ಜಂಭನ +ನಿಕುಂಭನ
ತಾರಕಾಕ್ಷನ+ ಕಾಲನೇಮಿಯ
ವೀರ +ಮಹಿಷಾಸುರನ +ಬಾಣಾಸುರನ +ರಾವಣನ
ತೋರಹತ್ತರ +ಬಾಹುಬಲವನು
ಸಾರಿ+ಆ+ ಕರ್ಣಂಗೆ +ಮಿಕ್ಕಿನ
ಸಾರ+ಹೃದಯರು +ನಿನಗೆ+ ಸರಿಯಿಲ್ಲೆಂದುದ್+ಅಸುರಗಣ

ಅಚ್ಚರಿ:
(೧) ಅಸುರರ ಹೋಲಿಕೆ – ತಾರಕ, ಜಂಭ, ನಿಕುಂಭ,,ತಾರಕಾಕ್ಷ, ಕಾಲನೇಮಿಯ, ಮಹಿಷಾಸುರ, ಬಾಣಾಸುರ, ರಾವಣ

ಪದ್ಯ ೯: ಯಾವ ರಾಜರು ಅರ್ಜುನನ ಕಡೆ ನಿಂತರು?

ಭರತ ನಳ ನಹುಷಾದಿ ಭೂಮೀ
ಶ್ವರರು ಪಾರ್ಥನ ದೆಸೆಗೆ ಮಹಿಷಾ
ಸುರ ದಶಾನನ ತಾರಕಾದಿಗಳಾದುದೀಚೆಯಲಿ
ಸುರಮುನಿಗಳಿಂದ್ರಾನಲಾಂತಕ
ವರುಣ ವಾಯು ಮಹೇಶ ವಿದ್ಯಾ
ಧರರು ಪಾರ್ಥನ ದೆಸೆಯಲೈದಿತು ಭೂಪ ಕೇಳೆಂದ (ಕರ್ಣ ಪರ್ವ, ೨೨ ಸಂಧಿ, ೯ ಪದ್ಯ)

ತಾತ್ಪರ್ಯ:
ಭರತ, ನಳ, ನಹುಷ ಮೊದಲಾದ ಚಕ್ರವರ್ತಿಗಳು ಅರ್ಜುನನ ಪರ, ಮಹಿಷಾಸುರ, ರಾವಣ, ತಾರಕನೇ ಮೊದಲಾದವರು ಕರ್ಣನ ಪರ ನಿಂತರು. ದೇವರ್ಷಿಗಳು, ಇಂದ್ರ, ಅಗ್ನಿ, ಯಮ, ವರುಣ, ವಾಯು ಮಹೇಶ, ವಿದ್ಯಾಧರರು ಪಾರ್ಥನ ಕಡೆ ನಿಂತರು ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಭೂಮೀಶ್ವರ: ರಾಜ; ದೆಸೆ: ಪಕ್ಕ; ದಶ: ಹತ್ತು; ಆನನ: ಮುಖ; ದಶಾನನ: ರಾವಣ; ಆದಿ: ಮುಂತಾದ; ಸುರ: ದೇವತೆ; ಮುನಿ: ಋಷಿ; ಅನಲ: ಬೆಂಕಿ, ಅಗ್ನಿ; ಅಂತಕ: ಯಮ; ವರುಣ: ನೀರಿನ ಅಧಿದೇವತೆ; ಮಹೇಶ: ಶಿವ; ಭೂಪ: ರಾಜ; ಕೇಳು: ಆಲಿಸು; ಐದು: ಹೋಗಿಸೇರು;

ಪದವಿಂಗಡಣೆ:
ಭರತ +ನಳ +ನಹುಷಾದಿ +ಭೂಮೀ
ಶ್ವರರು +ಪಾರ್ಥನ +ದೆಸೆಗೆ +ಮಹಿಷಾ
ಸುರ +ದಶಾನನ+ ತಾರಕಾದಿಗಳ್+ಆದುದ್+ಈಚೆಯಲಿ
ಸುರಮುನಿಗಳ್+ಇಂದ್ರ+ಅನಲ+ಅಂತಕ
ವರುಣ +ವಾಯು +ಮಹೇಶ +ವಿದ್ಯಾ
ಧರರು +ಪಾರ್ಥನ +ದೆಸೆಯಲೈದಿತು+ ಭೂಪ +ಕೇಳೆಂದ

ಅಚ್ಚರಿ:
(೧) ಭೂಮೀಶ್ವರ, ಭೂಪ – ಸಮನಾರ್ಥಕ ಪದ
(೨) ಪಾರ್ಥನ ದೆಸೆ – ೨, ೬ ಸಾಲಿನ ೨ನೇ ಪದ

ಪದ್ಯ ೧೩: ಕರ್ಣನು ವೈರಿಸೈನ್ಯವನ್ನು ಹೇಗೆ ನಾಶಮಾಡಿದನು?

ತಾರಕನ ಥಟ್ಟಿನಲಿ ಹರನ ಕು
ಮಾರ ಹೊಕ್ಕಂದದಲಿ ವೃತ್ರನ
ತಾರಕಾಕ್ಷನ ಜೋಡಿಯನು ಜಂಭಾರಿ ತರಿವಂತೆ
ಆರಿದೆಚ್ಚನು ಶಿವಶಿವಾ ಕಾ
ಮಾರಿಯೋ ಪಾಂಡವ ಬಲದ ಹೆ
ಮ್ಮಾರಿಯೋ ನಿನ್ನಾನೆ ಸವರಿತು ವೈರಿಭಟವನವ (ಕರ್ಣ ಪರ್ವ, ೧೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ತಾರಕಾಸುರನ ಸೈನ್ಯದಲ್ಲಿ ಶಿವನ ಮಗನಾದ ಷಣ್ಮುಖನು ಒಳಹೊಕ್ಕಂತೆ, ವೃತ ತಾರಕಾಕ್ಷರ ಜೋಡಿಯನ್ನು ಇಂದ್ರನು ಮುರಿವಂತೆ, ಕರ್ಣನು ಆರ್ಭಟಿಸಿ, ಪಾಂಡವ ಸೈನ್ಯದ ಮೇಲೆ ಬಾಣಗಳನ್ನು ಬಿಟ್ಟು, ಇವನೇನು ಸಂಹಾರಕರ್ತನಾದ ಶಿವನೋ, ಪಾಂಡವ ಬಲಕ್ಕೆ ಹೆಮ್ಮಾರಿಯೋ ಎಂಬಂತೆ ವೈರಿ ಸೈನ್ಯವನ್ನು ನಾಶಮಾಡಿದನು.

ಅರ್ಥ:
ತಾರಕ: ಅಸುರನ ಹೆಸರು; ಥಟ್ಟು: ಪಕ್ಕ, ಕಡೆ, ಸೈನ್ಯ; ಹರ: ಶಿವ; ಕುಮಾರ: ಮಗ; ಶಿವಕುಮಾರ: ಶಿವನ ಮಗ (ಸುಬ್ರಹ್ಮಣ್ಯ); ಹೊಕ್ಕು: ನುಗ್ಗು, ಒಳಸೇರು; ಜೋಡಿ: ಜೊತೆ; ಜಂಭಾರಿ: ಇಂದ್ರ; ಅರಿ: ವೈರಿ; ತರಿ:ಕಡಿ, ಕತ್ತರಿಸು; ಎಚ್ಚು: ಬಾಣಬಿಡು; ಕಾಮಾರಿ: ಶಿವ; ಹೆಮ್ಮಾರಿ: ಕ್ಷುದ್ರದೇವತೆ; ಆನೆ: ಬಲವಂತ; ಸವರು: ಕತ್ತರಿಸು, ನಾಶಮಾಡು; ವೈರಿ: ಶತ್ರು; ಭಟ: ಸೈನಿಕ;

ಪದವಿಂಗಡಣೆ:
ತಾರಕನ+ ಥಟ್ಟಿನಲಿ +ಹರನ +ಕು
ಮಾರ +ಹೊಕ್ಕಂದದಲಿ +ವೃತ್ರನ
ತಾರಕಾಕ್ಷನ +ಜೋಡಿಯನು +ಜಂಭಾರಿ +ತರಿವಂತೆ
ಆರಿದ್+ಎಚ್ಚನು +ಶಿವಶಿವಾ+ ಕಾ
ಮಾರಿಯೋ +ಪಾಂಡವ +ಬಲದ+ ಹೆ
ಮ್ಮಾರಿಯೋ +ನಿನ್ನಾನೆ +ಸವರಿತು +ವೈರಿಭಟವನವ

ಅಚ್ಚರಿ:
(೧) ಕರ್ಣನನ್ನು – ಹೆಮ್ಮಾರಿ, ನಿನ್ನಾನೆ ಎಂದು ಕರೆದಿರುವುದು
(೨) ಶಿವ, ಕಾಮಾರಿ, ಹರ – ಸಮನಾರ್ಥಕ ಪದ
(೩) ಕಾಮಾರಿಯೋ, ಹೆಮ್ಮಾರಿಯೋ – ಪ್ರಾಸ ಪದ
(೪) ಉಪಮಾನದ ಪ್ರಯೋಗ – ತಾರಕನ ಥಟ್ಟಿನಲಿ ಹರನ ಕುಮಾರ ಹೊಕ್ಕಂದದಲಿ; ವೃತ್ರನ
ತಾಕಕಾಕ್ಷನ ಜೋಡಿಯನು ಜಂಭಾರಿ ತರಿವಂತೆ