ಪದ್ಯ ೨೫: ಬಲರಾಮನ ನಡಿಗೆ ಯಾರನ್ನು ಹೆದರಿಸಿತು?

ಎಂದು ನೇಗಿಲ ತುಡುಕಿಯೆಡಗೈ
ಯಿಂದ ನೆಗಹಿ ಮಹೋಗ್ರ ಮುಸಲವ
ನೊಂದು ಕಯ್ಯಲಿ ತಿರುಹಿ ಕೊಬ್ಬಿದ ಖತಿಯ ಭಾರದಲಿ
ಮುಂದೆ ನಡೆತರೆ ಸಕಲಸೇನಾ
ವೃಂದ ನಡುಗಿತು ಬಹಳ ಭೀತಿಯ
ಬಂದಿಯಲಿ ಜರುಗಿದವು ಜವಳಿಯ ಜಗದ ಜೋಡಿಗಳು (ಗದಾ ಪರ್ವ, ೮ ಸಂಧಿ, ೨೫ ಪದ್ಯ)

ತಾತ್ಪರ್ಯ:
ಹೀಗೆಂದು ಬಲರಾಮನು ನೇಗಿಲನ್ನು ಹಿಡಿದು, ಎಡಗೈಯಿಂದ ಉಗ್ರವಾದ ತನ್ನ ಒನಕೆಯ ಆಯುಧವನ್ನು ತಿರುವುತ್ತಾ, ಕೋಪಾಟೋಪದಿಂದ ಮುಂದುವರಿಯಲು, ಸಮಸ್ತ ಪಾಂಡವ ಸೇನೆಯೂ ನಡುಗಿತು. ಭೀತಿಯಿಂದ ಜಗತ್ತಿನ ಜೋಡಣೆಯೇ ತಪ್ಪಿತು.

ಅರ್ಥ:
ನೇಗಿಲು: ಹಲ; ತುಡುಕು: ಆಕ್ರಮಣ ಮಾಡು, ಎರಗು; ಎಡ: ವಾಮ; ಕೈ: ಹಸ್ತ; ನೆಗಹು: ಎಗರು; ಮಹೋಗ್ರ: ಹೆಚ್ಚಾದ ಕೋಪ, ಭಯಂಕರ; ಮುಸಲ: ಒನಕೆ; ಗದೆ; ತಿರುಹು: ತಿರುಗಿಸು; ಕೊಬ್ಬು: ಸೊಕ್ಕು, ಅಹಂಕಾರ; ಖತಿ: ರೇಗುವಿಕೆ, ಕೋಪ; ಭಾರ: ಹೊರೆ; ಮುಂದೆ: ಎದುರು; ನಡೆ: ಚಲಿಸು; ಸಕಲ: ಎಲ್ಲಾ; ಸೇನೆ: ಸೈನ್ಯ; ವೃಂದ: ಗುಂಪು; ನಡುಗು: ಹೆದರು; ಬಹಳ: ತುಂಬ; ಭೀತಿ: ಭಯ; ಬಂದಿ: ಕಟ್ಟು, ಬಂಧಿಸು; ಜರುಗು: ಪಕ್ಕಕ್ಕೆ ಸರಿ; ಜವಳಿ: ಬಟ್ಟೆ, ಜೋಡಣೆ; ಜಗ: ಜಗತ್ತು; ಜೋಡಿ: ಜೊತೆ;

ಪದವಿಂಗಡಣೆ:
ಎಂದು +ನೇಗಿಲ +ತುಡುಕಿ+ಎಡಗೈ
ಯಿಂದ +ನೆಗಹಿ +ಮಹೋಗ್ರ+ ಮುಸಲವನ್
ಒಂದು +ಕಯ್ಯಲಿ +ತಿರುಹಿ +ಕೊಬ್ಬಿದ +ಖತಿಯ +ಭಾರದಲಿ
ಮುಂದೆ +ನಡೆತರೆ+ ಸಕಲ+ಸೇನಾ
ವೃಂದ +ನಡುಗಿತು +ಬಹಳ +ಭೀತಿಯ
ಬಂದಿಯಲಿ +ಜರುಗಿದವು +ಜವಳಿಯ +ಜಗದ +ಜೋಡಿಗಳು

ಅಚ್ಚರಿ:
(೧) ಜ ಕಾರದ ಸಾಲು ಪದಗಳು – ಜರುಗಿದವು ಜವಳಿಯ ಜಗದ ಜೋಡಿಗಳು
(೨) ಕೋಪದ ತೀವ್ರತೆಯನ್ನು ವಿವರಿಸುವ ಪರಿ – ಮಹೋಗ್ರ ಮುಸಲವನೊಂದು ಕಯ್ಯಲಿ ತಿರುಹಿ ಕೊಬ್ಬಿದ ಖತಿಯ ಭಾರದಲಿ ಮುಂದೆ ನಡೆತರೆ

ಪದ್ಯ ೩೪: ಭೀಮ ದುರ್ಯೋಧನರು ಹೇಗೆ ಹೋರಾಡಿದರು?

ಮತ್ತೆ ಹೊಕ್ಕರು ದಿಗ್ಗಜಕೆ ಮದ
ಮತ್ತ ದಿಗ್ಗಜ ಮಲೆತವೊಲು ಮಿಗೆ
ಹತ್ತಿದರು ಶತಮನ್ಯು ಜಂಭನ ಜೋಡಿಯಂದದಲಿ
ತತ್ತರಿಬ್ಬರು ಮೂಕದನುಜನ
ಕೃತ್ತಿವಾಸನವೋಲು ರಣಧೀ
ರೋತ್ತಮರು ಕಯ್ಯಿಕ್ಕಿದರು ಕೌರವ ವೃಕೋದರರು (ಗದಾ ಪರ್ವ, ೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ಯಾವ ರೀತಿ ದಿಗ್ಗಜವು ದಿಗ್ಗಜವನ್ನಿದಿರಿಸುವಂತೆ, ಇಂದ್ರ ಜಂಭಾಸುರನನ್ನು ಹೋರಾಡಿದಂತೆ, ಮೂಕಾಸುರನೂ ಶಿವನೂ ಹೋರಾಡಿದಂತೆ, ರಣಧೀರರಾದ ಭೀಮ ದುರ್ಯೋಧನರು ಎದುರಾದರು.

ಅರ್ಥ:
ಮತ್ತೆ: ಪುನಃ; ಹೊಕ್ಕು: ಸೇರು; ದಿಗ್ಗಜ: ಶೂರ, ಪರಾಕ್ರಮಿ; ಮದ: ಅಹಂಕಾರ, ಅಮಲು; ಮಲೆತ: ಗರ್ವಿಸಿದ, ಸೊಕ್ಕಿದ; ಮಿಗೆ: ಹೆಚ್ಚು; ಹತ್ತು: ಮೇಲೇರು; ಶತಮನ್ಯು: ಇಂದ್ರ; ಜೋಡಿ: ಜೊತೆ; ತತ್ತರಿ: ತುಂಡಾಗಿ ಮಾಡು; ಅನುಜ: ತಮ್ಮ; ಕೃತ್ತಿವಾಸ: ಜಿಂಕೆಯ ಚರ್ಮ ಹೊದ್ದವ-ಶಿವ; ರಣಧೀರ: ಪರಾಕ್ರಮಿ; ಕಯ್ಯಿಕ್ಕು: ಹೋರಾಡು;

ಪದವಿಂಗಡಣೆ:
ಮತ್ತೆ +ಹೊಕ್ಕರು+ ದಿಗ್ಗಜಕೆ+ ಮದ
ಮತ್ತ+ ದಿಗ್ಗಜ+ ಮಲೆತವೊಲು +ಮಿಗೆ
ಹತ್ತಿದರು +ಶತಮನ್ಯು+ ಜಂಭನ +ಜೋಡಿಯಂದದಲಿ
ತತ್ತರಿಬ್ಬರು+ ಮೂಕದ್+ಅನುಜನ
ಕೃತ್ತಿವಾಸನವೋಲು +ರಣಧೀ
ರೋತ್ತಮರು +ಕಯ್ಯಿಕ್ಕಿದರು +ಕೌರವ +ವೃಕೋದರರು

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ದಿಗ್ಗಜಕೆ ಮದಮತ್ತ ದಿಗ್ಗಜ ಮಲೆತವೊಲು, ಶತಮನ್ಯು ಜಂಭನ ಜೋಡಿಯಂದದಲಿ, ತತ್ತರಿಬ್ಬರು ಮೂಕದನುಜನಕೃತ್ತಿವಾಸನವೋಲು

ಪದ್ಯ ೩೨: ದುರ್ಯೋಧನನು ಯಾವ ಪ್ರಮಾಣವನ್ನು ಮಾಡಿದನು?

ಆಳು ಬಿದ್ದುದು ಬೇಹ ನಾಯಕ
ರೋಲಗಿಸಿತಮರಿಯರನೀ ರಣ
ದೂಳಿಗಕೆ ನಾನೊಬ್ಬನೆಂದೇ ನಿನಗೆ ತೋರಿತಲಾ
ಆಳ ಹಂಗನು ನಾಯಕರ ಬಿಲು
ಗೋಲ ಜೋಡಿನ ಬಲವ ಚಿತ್ತದೊ
ಳಾಳಿದೊಡೆ ಧೃತರಾಷ್ಟ್ರ ರಾಯನ ಕಂದನಲ್ಲೆಂದ (ಗದಾ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ದುರ್ಯೋಧನನು ಮಾತನಾಡುತ್ತಾ, ಸೈನಿಕರು ಸತ್ತರು, ಸೇನಾನಾಯಕರು ಅಪ್ಸರೆಯರನ್ನು ಓಲೈಸಿದರು, ಯುದ್ಧಮಾಡಲು ನಾನೊಬ್ಬನೇ ಆದೆ ಎಂದು ನಿನಗೆ ತೋರಿತಲ್ಲವೇ? ಆಳುಗಳ ಹಂಗನ್ನು ಸೇನಾನಾಯಕರ ಬಿಲ್ಲು ಕವಚಗಳ ಬಲವನ್ನೂ ಮನಸ್ಸಿನಲ್ಲಾದರೂ ಬಯಸಿದರೆ ನಾನು ಧೃತರಾಷ್ಟ್ರ ಮಗನೇ ಅಲ್ಲ.

ಅರ್ಥ:
ಆಳು: ಸೇವಕ; ಬಿದ್ದು: ಬೀಳು, ಕುಸಿ; ಬೇಹ: ಬೇಕಾದ; ನಾಯಕ: ಒಡೆಯ; ಓಲಗಿಸು: ಉಪಚರಿಸು; ಅಮರಿ: ಅಪ್ಸರೆ; ರಣ: ಯುದ್ಧ; ಊಳಿಗ: ಕೆಲಸ, ಕಾರ್ಯ; ತೋರು: ಗೋಚರಿಸು; ಹಂಗ: ದಾಕ್ಷಿಣ್ಯ, ಆಭಾರ; ಕೋಲ: ಬಾಣ; ಜೋಡು: ಜೊತೆ, ಜೋಡಿ; ಬಲ: ಶಕ್ತಿ, ಸೇನೆ; ಚಿತ್ತ: ಮನಸ್ಸು; ರಾಯ: ರಾಜ; ಕಂದ: ಮಗ;

ಪದವಿಂಗಡಣೆ:
ಆಳು +ಬಿದ್ದುದು +ಬೇಹ +ನಾಯಕರ್
ಓಲಗಿಸಿತ್+ಅಮರಿಯರನ್+ಈ+ ರಣ
ದೂಳಿಗಕೆ +ನಾನೊಬ್ಬನೆಂದೇ +ನಿನಗೆ +ತೋರಿತಲಾ
ಆಳ +ಹಂಗನು +ನಾಯಕರ+ ಬಿಲು
ಗೋಲ +ಜೋಡಿನ +ಬಲವ+ ಚಿತ್ತದೊಳ್
ಆಳಿದೊಡೆ +ಧೃತರಾಷ್ಟ್ರ +ರಾಯನ +ಕಂದನಲ್ಲೆಂದ

ಅಚ್ಚರಿ:
(೧) ನಾಯಕರು ಸತ್ತರು ಎಂದು ಹೇಳುವ ಪರಿ – ಬೇಹ ನಾಯಕರೋಲಗಿಸಿತಮರಿಯರನೀ

ಪದ್ಯ ೩: ಸಾತ್ಯಕಿಯು ಎಷ್ಟು ರಾವುತರನ್ನು ಸಂಹರಿಸಿದನು?

ಕೂಡೆ ಸಂಜಯನರಸಿದನು ನಡೆ
ಜೋಡಿನವು ನಾನೂರು ಕುದುರೆಯ
ಕೂಡಿ ಕೌರವನೃಪನ ಕಾಣದೆ ಕಳನ ಚೌಕದಲಿ
ನೋಡುತಿರೆ ಸಾತ್ಯಕಿ ಚತುರ್ಬಲ
ಗೂಡಿ ಕವಿದನು ಹಯಬಲವ ಹುಡಿ
ಮಾಡಿದನು ನಾನೂರ ಕೊಂದನು ಸರಳ ಸಾರದಲಿ (ಗದಾ ಪರ್ವ, ೨ ಸಂಧಿ, ೩ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಜೊತೆಗೆ ಬಂದು ನಾನೂರು ಕುದುರೆಗಳೊಡನೆ ಕೌರವನನ್ನು ಕಾಣದೆ ರಣರಂಗದಲ್ಲಿ ಬರುತ್ತಿರಲು, ಸಾತ್ಯಕಿಯು ಚತುರಂಗ ಬಲದೊಡನೆ ಆವರಿಸಿ, ನಾನೂರು ರಾವುತರನ್ನು ಬಾಣಗಳಿಂದ ಸಂಹರಿಸಿದನು.

ಅರ್ಥ:
ಕೂಡೆ: ಜೊತೆ; ಅರಸು: ಹುಡುಕು; ಜೋಡು: ಜೊತೆ; ಕುದುರೆ: ಅಶ್ವ; ನೃಪ: ರಾಜ; ಕಾಣು: ತೋರು; ಕಳ: ರಣರಂಗ; ಚೌಕ: ಅಂಗಳ; ನೋಡು: ವೀಕ್ಷಿಸು; ಚತುರ್ಬಲ: ಚದುರಂಗ ಸೈನ್ಯ; ಕವಿ: ಆವರಿಸು; ಹಯ: ಕುದುರೆ; ಬಲ: ಸೈನ್ಯ; ಹುಡಿ: ಪುಡಿ; ಕೊಂದು: ಸಾಯಿಸು; ಸರಳ: ಬಾಣ; ಸಾರ: ಸತ್ವ;

ಪದವಿಂಗಡಣೆ:
ಕೂಡೆ +ಸಂಜಯನ್+ಅರಸಿದನು +ನಡೆ
ಜೋಡಿನವು+ ನಾನೂರು +ಕುದುರೆಯ
ಕೂಡಿ +ಕೌರವ+ನೃಪನ +ಕಾಣದೆ +ಕಳನ +ಚೌಕದಲಿ
ನೋಡುತಿರೆ +ಸಾತ್ಯಕಿ +ಚತುರ್ಬಲ
ಕೂಡಿ+ ಕವಿದನು+ ಹಯಬಲವ +ಹುಡಿ
ಮಾಡಿದನು +ನಾನೂರ +ಕೊಂದನು +ಸರಳ +ಸಾರದಲಿ

ಅಚ್ಚರಿ:
(೧) ಕೂಡಿ, ಮಾಡಿ, ಜೋಡಿ – ಪ್ರಾಸ ಪದಗಳು
(೨) ನಾನೂರು – ೨, ೬ ಸಾಲಿನ ಎರಡನೇ ಪದ

ಪದ್ಯ ೨೮: ಎಷ್ಟು ಸೈನಿಕರು ಯುದ್ಧಕ್ಕೆ ಮುನ್ನುಗ್ಗಿದರು?

ನೂಕಿತೊಂದೇ ವಾಘೆಯಲಿ ಹಯ
ನಾಕು ಸಾವಿರ ರಥದ ಜೋಡಿಯ
ಜೋಕೆ ಕವಿದುದು ಮೂರು ಸಾವಿರ ರಾಜಪುತ್ರರಲಿ
ತೋಕುವಂಬಿನ ಜೋದರೊಗ್ಗಿನೊ
ಳೌಕಿದವು ಸಾವಿರ ಮದೇಭಾ
ನೀಕ ಬೊಬ್ಬೆಯ ಲಳಿಯಲೌಕಿತು ಲಕ್ಕ ಪಾಯದಳ (ಗದಾ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಒಂದೇ ಬಾರಿಗೆ ನಾಲ್ಕು ಸಾವಿರ ರಥಗಳು ಮೂಮ್ದಾದವು, ಮೂರುಸಾವಿರ ರಾಜಪುತ್ರರು ಮುತ್ತಿಗೆ ಹಾಕಿದರು. ಒಂದು ಸಾವಿರ ಜೋದರು ಬಾಣಗಳನ್ನು ಬಿಡುತ್ತಾ ಮುನ್ನುಗ್ಗಿದರು. ಒಂದು ಸಾವಿರ ಮತ್ತ ಆನೆಗಳು ಬೊಬ್ಬೆಯಿಡುತ್ತಾ ರಭಸದಿಂದ ಮುನ್ನುಗ್ಗಿತು. ಒಂದು ಲಕ್ಷ ಕಾಲಾಳುಗಳು ಯುದ್ಧಕ್ಕೆ ಮುಗಿಬಿದ್ದರು.

ಅರ್ಥ:
ನೂಕು: ತಳ್ಳು; ವಾಘೆ: ಲಗಾಮು; ಹಯ: ಕುದುರೆ; ಸಾವಿರ: ಸಹಸ್ರ; ರಥ: ಬಂಡಿ; ಜೋಡಿ: ಜೊತೆ; ಜೋಕೆ: ಎಚ್ಚರಿಕೆ, ಜಾಗರೂಕತೆ; ಕವಿ: ಆವರಿಸು; ಪುತ್ರ: ಕುಮಾರ; ತೋಕು: ಎಸೆ, ಬಾಣವನ್ನು ಪ್ರಯೋಗಿಸು; ಅಂಬು: ಬಾಣ; ಜೋದರು: ಆನೆ ಮೇಲೆ ಕೂತು ಹೋರಾಟ ಮಾಡುವವ; ಒಗ್ಗು: ಗುಂಪು, ಸಮೂಹ; ಔಕು: ಒತ್ತು, ಹಿಚುಕು; ಮದ: ಮತ್ತು, ಅಮಲು; ಇಭ: ಆನೆ; ಅನೀಕ: ಗುಂಪು; ಬೊಬ್ಬೆ: ಗರ್ಜಿಸು; ಲಳಿ: ರಭಸ, ಆವೇಶ; ಲಕ್ಕ: ಲಕ್ಷ; ಪಾಯದಳ: ಸೈನಿಕ;

ಪದವಿಂಗಡಣೆ:
ನೂಕಿತ್+ಒಂದೇ +ವಾಘೆಯಲಿ +ಹಯ
ನಾಕು +ಸಾವಿರ +ರಥದ +ಜೋಡಿಯ
ಜೋಕೆ +ಕವಿದುದು +ಮೂರು+ ಸಾವಿರ+ ರಾಜ+ಪುತ್ರರಲಿ
ತೋಕುವಂಬಿನ +ಜೋದರ್+ಒಗ್ಗಿನೊಳ್
ಔಕಿದವು +ಸಾವಿರ +ಮದ+ಇಭಾ
ನೀಕ +ಬೊಬ್ಬೆಯ +ಲಳಿಯಲ್+ಔಕಿತು +ಲಕ್ಕ+ ಪಾಯದಳ

ಪದ್ಯ ೩೭: ಅರ್ಜುನನ ಗಾಂಡಿವ ಮಿಡಿತವು ಯಾವ ಪ್ರಭಾವ ಭೀರಿತು?

ದೇವದತ್ತವ ಮೊಳಗಿದನು ಗಾಂ
ಡೀವಿ ಚಾಪವ ಮಿಡಿದ ನಿಷ್ಠುರ
ರಾವ ತಿವಿದುದು ಜರಿದವಡಕಿಲು ಜಗದ ಜೋಡಿಗಳ
ರಾವು ಫಲುಗುಣಯೆನುತ ಪಾರ್ಥನ
ಭಾವ ಕುಡಿ ಚಮ್ಮಟಿಗೆಯಲಿ ತುರ
ಗಾವಳಿಯನದುಹಿದನು ಸುಳಿಸಿದನಾಹವಕೆ ರಥವ (ದ್ರೋಣ ಪರ್ವ, ೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಅರ್ಜುನನು ದೇವದತ್ತ ಶಂಖವನ್ನೂದಿದನು, ಗಾಂಡೀವದ ಹೆದೆಯನ್ನು ಮಿಡಿಯಲು ಅವಉಗಳ ನಿಷ್ಠುರ ಶಬ್ದಕ್ಕೆ ಹದಿನಾಲ್ಕು ಲೋಕಗಳ ಅಡಕಿಲು ಸಡಿಲಿತು. ಶ್ರೀಕೃಷ್ಣನು ಭಲೇ ಅರ್ಜುನ, ಎನ್ನುತ್ತಾ ಚಮ್ಮಟಿಗೆಯಿಂದ ಕುದುರೆಗಳನ್ನು ತಿವಿದು ರಥವನ್ನು ಯುದ್ಧಕ್ಕೆ ಸುಳಿಸಿದನು.

ಅರ್ಥ:
ಮೊಳಗು: ಹೊರಹೊಮ್ಮು; ಚಾಪ: ಬಿಲ್ಲು; ಮಿಡಿ: ನುಡಿಸು, ಸ್ಪಂದಿಸುವಂತೆ ಮಾಡು; ನಿಷ್ಠುರ: ಕಠಿಣವಾದುದು; ರವ: ಶಬ್ದ; ತಿವಿ: ಚುಚ್ಚು; ಜರಿ: ಅಳುಕು; ಅಡಕಿಲು: ತುಂಬು, ಒಳಸೇರಿಸು; ಜಗ: ಪ್ರಪಂಚ; ಜೋಡು: ಜೊತೆ, ಜೋಡಿ; ರಾವು: ಒಂದು ಕೊಂಡಾಟದ ನುಡಿ, ಭಲೇ; ಭಾವ: ಗಂಡನ ಅಣ್ಣ; ಕುಡಿ: ತುದಿ, ಕೊನೆ; ಚಮ್ಮಟಿಗೆ: ಚಾವಟಿ, ಬಾರುಕೋಲು; ತುರಗ: ಕುದುರೆ, ಅಶ್ವ; ಆವಳಿ: ಸಾಲು; ಅದುಹು: ಚುಚ್ಚು; ಸುಳಿಸು: ಸುತ್ತುವಂತೆ ಮಾಡು, ತಿರುಗಿಸು; ಆಹವ: ಯುದ್ಧ; ರಥ: ಬಂಡಿ;

ಪದವಿಂಗಡಣೆ:
ದೇವದತ್ತವ +ಮೊಳಗಿದನು +ಗಾಂ
ಡೀವಿ +ಚಾಪವ +ಮಿಡಿದ +ನಿಷ್ಠುರ
ರಾವ +ತಿವಿದುದು +ಜರಿದವ್+ಅಡಕಿಲು +ಜಗದ +ಜೋಡಿಗಳ
ರಾವು +ಫಲುಗುಣ+ಎನುತ +ಪಾರ್ಥನ
ಭಾವ +ಕುಡಿ +ಚಮ್ಮಟಿಗೆಯಲಿ +ತುರ
ಗಾವಳಿಯನ್+ಅದುಹಿದನು +ಸುಳಿಸಿದನ್+ಆಹವಕೆ +ರಥವ

ಅಚ್ಚರಿ:
(೧) ಕೃಷ್ಣನನ್ನು ಪಾರ್ಥನ ಭಾವ ಎಂದು ಕರೆದಿರುವುದು

ಪದ್ಯ ೩೬: ಸೈನ್ಯ ಸಾಗರವು ಯಾವ ಪರಿ ಹೊರಟಿತು?

ರೂಢಿಸಿದ ಸುಮುಹೂರ್ತದೊಳು ಹೊರ
ಬೀಡ ಬಿಟ್ಟರು ರಣಕೆ ಪಯಣವ
ಮಾಡಲೋಸುಗ ಸಾರಿದರು ನೃಪಪಾಳೆಯಂಗಳೊಳು
ಕೂಡಿತಾಹವ ಸೈನ್ಯಸಾಗರ
ವೀಡಿರಿದು ನಡೆಗೊಂಡುದುದಧಿಯ
ನೋಡಿಸುವ ಜೋಡಿಗಳ ಜೋಕೆಯ ಘನರವಂಗಳೊಳು (ಉದ್ಯೋಗ ಪರ್ವ, ೧೨ ಸಂಧಿ, ೩೬ ಪದ್ಯ)

ತಾತ್ಪರ್ಯ:
ಒಂದು ಒಳ್ಳೆಯ ಗಳಿಗೆಯಲ್ಲಿ ಪಾಂಡವರ ಸೈನ್ಯವು ಹೊರಬೀಡು ಬಿಟ್ಟಿತು. ಯುದ್ಧಕ್ಕೆ ಹೊರಡಬೇಕೆಂದು ರಾಜರು ತಮ್ಮ ಪಾಳೆಯಗಳಲ್ಲಿ ಸಾರಿದರು. ಸೈನ್ಯ ಸಾಗರವು ಸಮುದ್ರದ ಮೊರೆತವನ್ನು ಮೀರಿಸುವ ಸದ್ದುಮಾಡುತ್ತಾ ಪ್ರಯಾಣ ಬೆಳೆಸಿತು.

ಅರ್ಥ:
ರೂಢಿಸು: ನೆಲಸು, ಇರು; ಸುಮುಹೂರ್ತ: ಒಳ್ಳೆಯ ಗಳಿಗೆ; ಹೊರ: ಆಚೆ; ಬೀಡು: ಗುಂಪು; ಬೀಡಬಿಟ್ಟರು: ಸೇರಿದರು; ರಣ: ಯುದ್ಧ; ಪಯಣ: ಪ್ರಯಾಣ; ಓಸುಗ: ಕಾರಣ, ಓಸ್ಕರ; ಸಾರು: ಹರಡು; ನೃಪ: ರಾಜ; ಪಾಳೆಯ: ಗುಂಪು; ಕೂಡು: ಸೇರು; ಆಹವ: ಯುದ್ಧ; ಸೈನ್ಯ: ಸೇನೆ, ಬಲ; ಸಾಗರ: ಸಮುದ್ರ; ನಡೆಗೊಂಡು: ಚಲಿಸುತ್ತ; ಉದಧಿ: ಸಾಗರ; ಓಡಿಸು: ಹೊರದೂಡು; ಜೋಡಿ: ಗುಂಪು; ಜೋಕೆ:ಎಚ್ಚರಿಕೆ, ಜಾಗರೂಕತೆ, ಸೊಗಸು; ಘನ: ಶ್ರೇಷ್ಠ; ರವ: ಧ್ವನಿ, ಶಬ್ದ;ಅಂಗಳ: ಆವರಣ;

ಪದವಿಂಗಡಣೆ:
ರೂಢಿಸಿದ +ಸುಮುಹೂರ್ತದೊಳು +ಹೊರ
ಬೀಡ +ಬಿಟ್ಟರು +ರಣಕೆ +ಪಯಣವ
ಮಾಡಲೋಸುಗ+ ಸಾರಿದರು +ನೃಪ+ಪಾಳೆ+ ಅಂಗಳೊಳು
ಕೂಡಿತ್+ಆಹವ +ಸೈನ್ಯ+ಸಾಗರ
ವೀಡಿರಿದು +ನಡೆಗೊಂಡುದ್+ಉದಧಿಯನ್
ಓಡಿಸುವ +ಜೋಡಿಗಳ+ ಜೋಕೆಯ +ಘನ+ರವಂಗಳೊಳು

ಅಚ್ಚರಿ:
(೧) ಪಾಳೆಯಂಗಳೊಳು, ರವಂಗಳೊಳು – ಪ್ರಾಸ ಪದ
(೨) ಉದಧಿ, ಸಾಗರ- ಸಮನಾರ್ಥಕ ಪದ ,೪,೫ ಸಾಲಿನ ಕೊನೆ ಪದ
(೩) ‘ಜ’ ಕಾರದ ಜೋಡಿ ಪದ – ಜೋಡಿಗಳ ಜೋಕೆಯ