ಪದ್ಯ ೫: ಅಶ್ವತ್ಥಾಮ ಮತ್ತು ಅರ್ಜುನರ ಯುದ್ಧದ ತೀವ್ರತೆ ಹೇಗಿತ್ತು?

ಮೊಗೆದವಶ್ವತ್ಥಾಮನೆಚ್ಚಂ
ಬುಗಳನರ್ಜುನನಂಬು ಪಾರ್ಥನ
ಬಿಗಿದವಾ ನಿಮಿಷದಲಿ ಭಾರದ್ವಾಜ ಶರಜಾಲ
ತಗಡುಗಿಡಿಗಳ ಸೂಸುವುರಿಧಾ
ರೆಗಳ ಘೃತಲೇಪನದ ಬಂಧದ
ಹೊಗರುಗಣೆ ಹೂಳಿದವು ಗುರುಸುತನಂಬಿನಂಬುಧಿಯ (ಶಲ್ಯ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಅರ್ಜುನನ ಬಾಣಗಳನ್ನು ಕತ್ತರಿಸಿ ಬಿಟ್ಟ ಬಾಣಗಳನ್ನು ಅರ್ಜುನನು ಮೊಗೆದು ಹಾಕಿದನು. ಅಶ್ವತ್ಥಾಮನ ಬಾಣಗಳು ಅರ್ಜುನನನ್ನು ಬಂಧಿಸಿದವು. ಕಿಡಿಗಳನ್ನು ತಗಡಿನಂತೆ ಸೂಸುತ್ತಾ, ಉರಿಯ ಧಾರೆಗಳನ್ನುಗುಳುತ್ತಾ ಅರ್ಜುನನ ಘೃತಲೇಪನದ ಅಂಬುಗಳು ಅಶ್ವತ್ಥಾಮನ ಬಾಣಗಳನ್ನು ಮುಚ್ಚಿಹಾಕಿದನು.

ಅರ್ಥ:
ಮೊಗೆ: ನುಂಗು, ಕಬಳಿಸು; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಬಿಗಿ: ಬಂಧಿಸು; ಶರಜಾಲ: ಬಾಣಗಳ ಗುಂಪು; ತಗಡು: ದಟ್ಟಣೆ, ಸಾಂದ್ರತೆ; ಕಿಡಿ: ಬೆಂಕಿ; ಸೂಸು: ಹೊರಹೊಮ್ಮು; ಧಾರೆ: ಮಳೆ; ಘೃತ: ತುಪ್ಪ; ಲೇಪನ: ಬಳಿಯುವಿಕೆ, ಹಚ್ಚುವಿಕೆ; ಬಂಧ: ಕಟ್ಟು; ಹೊಗರು: ಕಾಂತಿ, ಪ್ರಕಾಶ; ಹೂಳು: ಮುಚ್ಚು; ಅಂಬುಧಿ: ಸಾಗರ;

ಪದವಿಂಗಡಣೆ:
ಮೊಗೆದವ್+ಅಶ್ವತ್ಥಾಮನ್+ಎಚ್ಚ್
ಅಂಬುಗಳನ್+ಅರ್ಜುನನ್+ಅಂಬು +ಪಾರ್ಥನ
ಬಿಗಿದವಾ +ನಿಮಿಷದಲಿ +ಭಾರದ್ವಾಜ +ಶರಜಾಲ
ತಗಡು+ಕಿಡಿಗಳ +ಸೂಸು+ಉರಿ+ಧಾ
ರೆಗಳ+ ಘೃತ+ಲೇಪನದ +ಬಂಧದ
ಹೊಗರುಗಣೆ +ಹೂಳಿದವು +ಗುರುಸುತನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಅಂಬು ಪದದ ಬಳಕೆ – ಗುರುಸುತನಂಬಿನಂಬುಧಿಯ
(೨) ಉಪಮಾನದ ಪ್ರಯೋಗ – ತಗಡುಗಿಡಿಗಳ ಸೂಸುವುರಿಧಾರೆಗಳ ಘೃತಲೇಪನದ ಬಂಧದ ಹೊಗರುಗಣೆ ಹೂಳಿದವು

ಪದ್ಯ ೩: ಪಾಂಡವ ಸೇನೆಯು ಹೇಗೆ ಹತವಾಯಿತು?

ಕ್ಷಿತಿಪ ಚಿತ್ತೈಸೀಚೆಯಲಿ ಗುರು
ಸುತ ಸುಶರ್ಮಕ ಶಲ್ಯ ನಿನ್ನಯ
ಸುತನು ಕೃತವರ್ಮನು ಕೃಪಾಚಾರ್ಯಾದಿಗಳು ಮಸಗಿ
ಘೃತಸಮುದ್ರದ ಸೆರಗ ಸೋಂಕಿದ
ಹುತವಹನ ಸೊಂಪಿನಲಿ ವೈರಿ
ಪ್ರತತಿಯನು ತರುಬಿದರು ತರಿದರು ಸರಳ ಸಾರದಲಿ (ಶಲ್ಯ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು, ಈಚೆಕಡೆಯಲ್ಲಿ ಅಶ್ವತ್ಥಾಮ, ಸುಧರ್ಮ, ದುರ್ಯೋಧನ ಕೃತವರ್ಮ, ಕೃಪನೇ ಮೊದಲಾದವರು ಮುನ್ನುಗ್ಗಿ ಹೊಡೆಯಲು, ಅವರ ಬಾಣಗಳ ಏಟಿಗೆ ಬಿಸಿಗೆ ತುಪ್ಪದ ಸಾಗರವು ಕರಗಿದಂತೆ ಪಾಂಡವ ಸೇನೆಯು ನಾಶವಾಯಿತು.

ಅರ್ಥ:
ಕ್ಷಿತಿಪ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಸುತ: ಮಗ; ಆದಿ: ಮುಂತಾದ; ಮಸಗು: ಕೆರಳು; ತಿಕ್ಕು; ಘೃತ: ತುಪ್ಪ; ಸಮುದ್ರ: ಸಾಗರ; ಸೆರಗು: ಅಂಚು, ತುದಿ; ಸೋಂಕು: ಮುಟ್ಟು, ತಾಗು; ಹುತವಹ: ಅಗ್ನಿ; ಸೊಂಪು: ಸೊಗಸು, ಚೆಲುವು; ವೈರಿ: ಅರಿ, ಶತ್ರು; ಪ್ರತತಿ: ಗುಂಪು; ತರುಬು: ತಡೆ, ನಿಲ್ಲಿಸು; ತರಿ: ಕಡಿ, ಕತ್ತರಿಸು; ಸರಳ: ಬಾಣ; ಸಾರ: ಸತ್ವ;

ಪದವಿಂಗಡಣೆ:
ಕ್ಷಿತಿಪ +ಚಿತ್ತೈಸ್+ಈಚೆಯಲಿ +ಗುರು
ಸುತ +ಸುಶರ್ಮಕ +ಶಲ್ಯ+ ನಿನ್ನಯ
ಸುತನು +ಕೃತವರ್ಮನು +ಕೃಪಾಚಾರ್ಯ+ಆದಿಗಳು+ ಮಸಗಿ
ಘೃತ+ಸಮುದ್ರದ +ಸೆರಗ+ ಸೋಂಕಿದ
ಹುತವಹನ+ ಸೊಂಪಿನಲಿ +ವೈರಿ
ಪ್ರತತಿಯನು +ತರುಬಿದರು +ತರಿದರು+ ಸರಳ+ ಸಾರದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಘೃತಸಮುದ್ರದ ಸೆರಗ ಸೋಂಕಿದ ಹುತವಹನ ಸೊಂಪಿನಲಿ ವೈರಿ ಪ್ರತತಿಯನು ತರುಬಿದರು
(೨) ಸುತ – ೨, ೩ ಸಾಲಿನ ಮೊದಲ ಪದ

ಪದ್ಯ ೬೩: ಭೀಮನನ್ನು ಕರ್ಣನು ಹೇಗೆ ಹಂಗಿಸಿದನು?

ಎಲ್ಲಿ ಷಡುರಸಮಯದ ಭೋಜನ
ವೆಲ್ಲಿ ಮಧುರ ಫಲೌಘದುಬ್ಬರ
ವೆಲ್ಲಿ ನಾನಾಭಕ್ಷ್ಯಗಿರಿಗಳು ಘೃತದ ಕಡಲುಗಳು
ಅಲ್ಲಿ ನಿನ್ನುರವಣೆಗಳೊಪ್ಪುವ
ದಲ್ಲದೀ ಸಂಗ್ರಾಮ ಮುಖದಲಿ
ಬಿಲ್ಲಹಬ್ಬದ ತುಷ್ಟಿ ನಿನಗೇಕೆಂದನಾ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಎಲವೋ ಭೀಮ, ಎಲ್ಲಿ ಷಡ್ರಸ ಭರಿತವಾದ ಊಟವಿದೆಯೋ, ಎಲ್ಲಿ ಸಿಹಿ ಹಣ್ಣುಗಳು ಹೇರಳವಾಗಿವೆಯೋ, ಎಲ್ಲಿ ಭಕ್ಷ್ಯದ ಬೆಟ್ಟಗಳು, ತುಪ್ಪದ ಸಾಗರಗಳಿವೆಯೋ, ಅಲ್ಲಿ ನಿನ್ನ ಪರಾಕ್ರಮವು ಸಾರ್ಥಕವೆನ್ನಿಸುವುದೇ ಹೊರತು, ಯುದ್ಧರಂಗದಲ್ಲಿ ಬಿಲ್ಲಹಬ್ಬದಿಂದ ನಿನಗೆ ತೃಪ್ತಿಯಾಗಲು ಸಾಧ್ಯವೇ ಎಂದು ಕರ್ಣನು ಭೀಮನನ್ನು ಮೂದಲಿಸಿದನು.

ಅರ್ಥ:
ಷಡುರಸ: ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ಭೋಜನ: ಊಟ; ಮಧುರ: ಸಿಹಿ; ಫಲ: ಹಣ್ಣು; ಔಘ: ಗುಂಪು, ಸಮೂಹ; ಉಬ್ಬರ: ಅತಿಶಯ; ನಾನಾ: ಹಲವಾರು; ಭಕ್ಷ್ಯ: ಊಟ; ಗಿರಿ: ಬೆಟ್ಟ; ಘೃತ: ತುಪ್ಪ; ಕಡಲು: ಸಾಗರ; ಉರವಣೆ: ಆತುರ, ಅವಸರ, ಅಬ್ಬರ; ಸಂಗ್ರಾಮ: ಯುದ್ಧ; ಮುಖ: ಆನನ; ಬಿಲ್ಲ: ಚಾಪ; ಹಬ್ಬ: ಸಡಗರ; ತುಷ್ಟಿ: ತೃಪ್ತಿ, ಆನಂದ;

ಪದವಿಂಗಡಣೆ:
ಎಲ್ಲಿ +ಷಡುರಸಮಯದ +ಭೋಜನವ್
ಎಲ್ಲಿ +ಮಧುರ +ಫಲೌಘದ್+ಉಬ್ಬರವ್
ಎಲ್ಲಿ +ನಾನಾ+ಭಕ್ಷ್ಯ+ಗಿರಿಗಳು +ಘೃತದ +ಕಡಲುಗಳು
ಅಲ್ಲಿ+ ನಿನ್ನ್+ಉರವಣೆಗಳ್+ಒಪ್ಪುವದ್
ಅಲ್ಲದ್+ಈ+ ಸಂಗ್ರಾಮ +ಮುಖದಲಿ
ಬಿಲ್ಲ+ಹಬ್ಬದ+ ತುಷ್ಟಿ+ ನಿನಗೇಕೆಂದನಾ +ಕರ್ಣ

ಅಚ್ಚರಿ:
(೧) ರೂಪಕಗಳನ್ನು ಬಳಸುವ ಪರಿ – ನಾನಾಭಕ್ಷ್ಯಗಿರಿಗಳು ಘೃತದ ಕಡಲುಗಳು

ಪದ್ಯ ೬೧: ಅಭಿಮನ್ಯುವಿನ ಬಾಣಗಳು ಶತ್ರುಸೈನ್ಯವನ್ನು ಹೇಗೆ ನಾಶಮಾಡಿದವು?

ಭಟ ಛಡಾಳಿಸಿದನು ಘೃತಾಹುತಿ
ಘಟಿಸಿದಗ್ನಿಯವೋಲು ರಣ ಚೌ
ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹನಾದದಲಿ
ನಿಟಿಲನೇತ್ರನ ಕೋಪಶಿಖಿ ಲಟ
ಕಟಿಸುವಂತಿರೆ ಹೆಚ್ಚಿದರಿಬಲ
ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ (ದ್ರೋಣ ಪರ್ವ, ೫ ಸಂಧಿ, ೬೧ ಪದ್ಯ)

ತಾತ್ಪರ್ಯ:
ತುಪ್ಪದ ಆಹುತಿಯಿಮ್ದ ಹೆಚ್ಚುವ ಹೋಮಾಗ್ನಿಯಂತೆ ಅಭಿಮನ್ಯುವಿನ ಪರಾಕ್ರಮ ವರ್ಧಿಸಿತು. ಶಿವನ ಹಣೆಯ ನೇತ್ರದ ಅಗ್ನಿ ಛಟಛಟಿಸುವಂತೆ, ಶತ್ರು ಸೈನ್ಯವೆಂಬ ಕಾಡನ್ನು ಅಭಿಮನ್ಯುವಿನ ಬಾಣಗಳು ನಾಶಮಾಡಿದವು.

ಅರ್ಥ:
ಭಟ: ಸೈನಿಕ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಘೃತ: ತುಪ್ಪ, ಆಜ್ಯ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಘಟಿಸು: ಸಂಭವಿಸು; ಅಗ್ನಿ: ಬೆಂಕಿ; ರಣ: ಯುದ್ಧ; ಚೌಪಟ: ನಾಲ್ಕು ಪಟ್ಟು; ಚತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಹೊಕ್ಕು: ಸೇರು; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ; ನಿಟಿಲ: ಹಣೆ, ಫಾಲ; ನೇತ್ರ: ಕಣ್ಣು; ಕೋಪ: ಕ್ರೋಧ; ಶಿಖಿ: ಬೆಂಕಿ; ಲಟಕಟ: ಉದ್ರೇಕಗೊಳ್ಳು; ಹೆಚ್ಚು: ಅಧಿಕ; ಅಟವಿ: ಕಾಡು; ಸವರಿಸು: ನಾಶಮಾದು; ಕುಮಾರ: ಮಗ; ಶರ: ಬಾಣ; ಜಾಲ: ಸಮೂಹ;

ಪದವಿಂಗಡಣೆ:
ಭಟ +ಛಡಾಳಿಸಿದನು +ಘೃತ+ಆಹುತಿ
ಘಟಿಸಿದ್+ಅಗ್ನಿಯವೋಲು +ರಣ +ಚೌ
ಪಟ +ಚತುರ್ಬಲದೊಳಗೆ +ಹೊಕ್ಕನು +ಸಿಂಹನಾದದಲಿ
ನಿಟಿಲನೇತ್ರನ +ಕೋಪ+ಶಿಖಿ +ಲಟ
ಕಟಿಸುವಂತಿರೆ+ ಹೆಚ್ಚಿದ್+ಅರಿ+ಬಲದ್
ಅಟವಿಯನು +ಸವರಿದುದು +ಪಾರ್ಥಕುಮಾರ +ಶರಜಾಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಟ ಛಡಾಳಿಸಿದನು ಘೃತಾಹುತಿ ಘಟಿಸಿದಗ್ನಿಯವೋಲು; ನಿಟಿಲನೇತ್ರನ ಕೋಪಶಿಖಿ ಲಟಕಟಿಸುವಂತಿರೆ

ಪದ್ಯ ೧೦: ಯಾಗಶಾಲೆಯಲ್ಲಿ ಯಾವ ಜನರನ್ನು ಕಾಣಬಹುದು?

ದೇಶ ದೇಶಾಂತರದ ವಿದ್ಯಾ
ಭ್ಯಾಸಿಗಳು ಮೊದಲಾಗಿ ವರ್ಣನಿ
ವಾಸಿಗಳು ಫಲ ಮೂಲದಧಿ ಘೃತ ದುಗ್ಧ ಭಾರದಲಿ
ಆ ಸಮಸ್ತ ಮಹೀತಳದ ಧನ
ರಾಶಿ ಜನಸಂತತಿಯನೇಕನಿ
ವಾಸದಲಿ ನೆರೆ ಕಾಣಲಾಯಿತು ನೃಪತಿ ಕೇಳೆಂದ (ಸಭಾ ಪರ್ವ, ೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ಯಾಗ ಮಂಟಪಕ್ಕೆ ದೇಶ ದೇಶದ ಜನರು, ವಿದ್ಯಾರ್ಥಿಗಳು, ಎಲ್ಲಾ ವರ್ಣದವರು, ಹಣ್ಣು, ಗೆಡ್ಡೆಗೆಣಸ್, ತುಪ್ಪ, ಹಾಲು ಸಾಮಗ್ರಿಗಳನ್ನು ತಂದವರನ್ನೂ, ಭೂಮಂಡಲದ ಎಲ್ಲಾ ದೇಶ ನಿವಾಸಿಗಳನ್ನೂ, ಐಶ್ವರ್ಯವನ್ನೂ ಒಂದೇ ಕಡೆ ಕಾಣಬಹುದಾಗಿತ್ತು.

ಅರ್ಥ:
ದೇಶ: ರಾಷ್ಟ್ರ; ದೇಶಾಂತರ: ಬೇರೆ ದೇಶ; ವಿದ್ಯಾಭ್ಯಾಸಿ: ಛಾತ್ರ; ಮೊದಲಾಗಿ: ಮುಂತಾದ; ವರ್ಣ: ಪಂಗಡ; ನಿವಾಸಿ: ವಾಸಿಸುವ; ಫಲ: ಹಣ್ಣು; ದಧಿ: ಮೊಸರು; ಘೃತ: ತುಪ್ಪ; ದುಗ್ಧ:ಹಾಲು; ಭಾರ: ಹೊರೆ; ಸಮಸ್ತ: ಎಲ್ಲಾ; ಮಹೀತಳ: ರಾಜ; ಧನ: ಐಶ್ವರ್ಯ; ರಾಶಿ: ಗುಂಪು; ಸಂತತಿ:ವಂಶ; ನೆರೆ: ಗುಂಪು; ಕಾಣಲು: ನೋಡಲು; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ದೇಶ +ದೇಶಾಂತರದ+ ವಿದ್ಯಾ
ಭ್ಯಾಸಿಗಳು +ಮೊದಲಾಗಿ +ವರ್ಣ+ನಿ
ವಾಸಿಗಳು +ಫಲ +ಮೂಲ+ದಧಿ +ಘೃತ +ದುಗ್ಧ+ ಭಾರದಲಿ
ಆ +ಸಮಸ್ತ +ಮಹೀತಳದ+ ಧನ
ರಾಶಿ +ಜನ+ಸಂತತಿ+ಅನೇಕ+ನಿ
ವಾಸದಲಿ +ನೆರೆ +ಕಾಣಲಾಯಿತು +ನೃಪತಿ +ಕೇಳೆಂದ

ಅಚ್ಚರಿ:
(೧) ನಿವಾಸ, ನಿವಾಸಿ – ೩, ೬ ಸಾಲಿನ ಮೊದಲ ಪದಗಳು
(೨) ಭ್ಯಾಸಿ, ವಾಸಿ – ಪ್ರಾಸ ಪದ

ಪದ್ಯ ೧೬: ಯಾಗಕ್ಕೆ ಬೇಕಾದ ಸಾಮಗ್ರಿಗಳನ್ನು ಎಲ್ಲಿ ಸೇರಿಸಿದ್ದರು?

ಬಳಿದ ಸೊದೆಗಳ ಬಾವಿನೂರರ
ವಳಯ ತುಂಬಿತು ತೈಲ ಘೃತ ಮಧು
ಗಳಲಿ ವರ ಗುಡ ಶರ್ಕರಾದಿಯ ಕಣಜಕೋಟಿಗಳು
ಕಳವೆಯಕ್ಕಿಯ ಗೋಧಿ ಕಡಲೆಯ
ವಿಳಸರಾಶಿಯದೇಸು ಯೋಜನ
ದಳತೆಯೆಂದಾರರಿವರೆಂದನು ಮುನಿ ನೃಪಾಲಂಗೆ (ಸಭಾ ಪರ್ವ, ೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ನೂರು ಬಾವಿಗಳಲ್ಲಿ ಹಾಲು, ಅದರಂತೆಯೇ ಎಣ್ಣೆ, ತುಪ್ಪ, ಜೇನುತುಪ್ಪದ ಬಾವಿಗಳು, ಬೆಲ್ಲ, ಸಕ್ಕರೆಗಳ ಅಸಂಖ್ಯಾತ ಕಣಜಗಳು, ಅಕ್ಕಿ, ಗೋಧಿ, ಕಡಲೆ ಮೊದಲಾದವುಗಳ ರಾಶಿ ಅದೆಷ್ಟು ಯೋಜನ ವಿಸ್ತಾರವಾಗಿತ್ತೋ ಯಾರು ಬಲ್ಲರು? ಎಂದು ವೈಶಂಪಾಯನರು ಜನಮೇಜಯ ರಾಜನಿಗೆ ಹೇಳಿದರು.

ಅರ್ಥ:
ಬಳಿ: ಪ್ರದೇಶ; ಸೊದೆ: ಹಾಲು, ಕ್ಷೀರ; ಬಾವಿ: ಕೂಪ; ನೂರು: ಶತ; ವಳಯ:ವರ್ತುಲ, ಪರಿಧಿ; ತುಂಬು: ಭರ್ತಿಯಾಗು; ತೈಲ: ಎಣ್ಣೆ; ಘೃತ: ತುಪ್ಪ; ಮಧು: ಜೇನು; ವರ: ಶ್ರೇಷ್ಠ; ಗುಡ: ಬೆಲ್ಲ; ಶರ್ಕರ: ಸಕ್ಕರೆ; ಆದಿ: ಮುಂತಾದ; ಕಣಜ:ಭತ್ತ, ರಾಗಿ ಮುಂತಾದ ಧಾನ್ಯಗಳನ್ನು ಕೂಡಿಡಲು ಮಾಡಿರುವ ಜಾಗಕ್ಕೆ ಕಣಜ ಎನ್ನುತ್ತಾರೆ; ಕಳವೆ: ಬತ್ತ; ಅಕ್ಕಿ:ಬತ್ತದ ಹೊಟ್ಟು ತೆಗೆದ ಮೇಲೆ ಉಳಿಯುವ ಕಾಳು; ರಾಶಿ: ಗುಪ್ಪೆ, ಬಟ್ಟಲು; ಯೋಜನ: ಅಳತೆಯ ಪ್ರಮಾಣ; ಅರಿ: ತಿಳಿ; ಮುನಿ:ಋಷಿ; ನೃಪ: ರಾಜ;

ಪದವಿಂಗಡಣೆ:
ಬಳಿದ +ಸೊದೆಗಳ +ಬಾವಿ+ನೂರರ
ವಳಯ +ತುಂಬಿತು +ತೈಲ +ಘೃತ +ಮಧು
ಗಳಲಿ+ ವರ+ ಗುಡ+ ಶರ್ಕರಾದಿಯ +ಕಣಜ+ಕೋಟಿಗಳು
ಕಳವೆ+ಅಕ್ಕಿಯ +ಗೋಧಿ +ಕಡಲೆಯ
ವಿಳಸ+ರಾಶಿಯದ್+ಏಸು +ಯೋಜನದ್
ಅಳತೆಯೆಂದ್+ಆರ್+ಅರಿವರ್+ಎಂದನು +ಮುನಿ +ನೃಪಾಲಂಗೆ

ಪದ್ಯ ೪೫: ವೇದವ್ಯಾಸರು ಚೆಲ್ಲಿದ ಮಾಂಸದ ತುಂಡುಗಳನ್ನು ನೋಡಿ ಏನು ಮಾಡಿದರು?

ಮರುಳು ಹೆಂಗಸಲಾ ಮಹಾತ್ಮರ
ಪರಿಯ ನೀನೆಂತರಿವೆ ಗರ್ಭೋ
ತ್ಕರವ ಕೆಡಿಸಿದೆ ಪಾಪಿ ನೀ ಸಾರೆನುತ ಮುನಿ ಮುಳಿದು
ತರಿಸಿದನು ಘೃತಪೂರಿತದ ಕೊ
ಪ್ಪರಿಗೆಗಳನೊಂದೊಂದನೊಂದರೊ
ಳಿರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ (ಆದಿ ಪರ್ವ, ೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಗಾಂಧಾರಿ ಕೋಪದಿಂದ ತನ್ನ ಗರ್ಭವನ್ನು ಛಿದ್ರಮಾಡಿ ಮಾಂಸದ ತುಂಡುಗಳು ನೆಲೆದ ಮೇಲೆ ಚೆಲ್ಲಿರುವುದನ್ನು ನೋಡಿದ ವ್ಯಾಸರು, ಹುಚ್ಚು ಹೆಂಗಸೇ, ನಿನಗೆ ಮಹಾತ್ಮರ ರೀತಿ ನೀತಿಗಳು ಹೇಗೆ ತಿಳಿದಾವು? ನೀನು ಗರ್ಭವನ್ನು ಕೆಡಿಸಿದೆ, ಪಾಪಿಯೇ ನೀನು ಹೋಗು ಎಂದು ವ್ಯಾಸರು ಸಿಟ್ಟಾಗಿ ಹೇಳಿ, ನೂರೊಂದು ಕೊಪ್ಪರಿಗೆಗಳಲ್ಲಿ ತುಪ್ಪವನ್ನು ತುಂಬಿಸಿ ಒಂದೊಂದರಲ್ಲಿ ಒಂದು ಮಾಂಸದ ಗಟ್ಟಿಯನ್ನಿಟ್ಟು ನೀರನ್ನು ಅಭಿಮಂತ್ರಿಸಿ ಪ್ರೋಕ್ಷಣೆ ಮಾಡಿ ಅವಲ್ಲಕ್ಕೂ ರಕ್ಷೆಯನ್ನು ಕೊಟ್ಟರು.

ಅರ್ಥ:
ಮರುಳು: ಹುಚ್ಚು; ಹೆಂಗಸು: ಸ್ತ್ರೀ; ಮಹಾತ್ಮ: ಶ್ರೇಷ್ಠ; ಪರಿ:ರೀತಿ ಅರಿ: ತಿಳಿ; ಗರ್ಭ: ಉದರ; ಉತ್ಕರ: ಸಮೂಹ; ಕೆಡಿಸು: ಹಾಳುಮಾಡು; ಪಾಪಿ: ಅಪರಾಧಿ, ಪುಣ್ಯವಲ್ಲದ ಕಾರ್ಯ ಮಾಡುವವ; ಸಾರು:ಬಳಿ ಸೇರು; ಮುನಿ:ಋಷಿ; ಮುಳಿ:ಸಿಟ್ಟು, ಕೋಪ; ತರಿಸು: ಬರೆಮಾಡು; ಘೃತ: ತುಪ್ಪ; ಪೂರ: ತುಂಬಿದ; ಕೊಪ್ಪರಿಗೆ:ಬಾಣಲಿ; ಇರಿಸು: ಇಟ್ಟು; ಮಂತ್ರಿಸು: ಮಂತ್ರಾನುಷ್ಠಾನ ಮಾಡು; ನೀರು: ಜಲ; ರಕ್ಷೆ: ಕಾಪು, ರಕ್ಷಣೆ

ಪದವಿಂಗಡಣೆ:
ಮರುಳು +ಹೆಂಗಸಲಾ +ಮಹಾತ್ಮರ
ಪರಿಯ +ನೀನ್+ಎಂತ್+ಅರಿವೆ +ಗರ್ಭೋ
ತ್ಕರವ+ ಕೆಡಿಸಿದೆ +ಪಾಪಿ +ನೀ +ಸಾರೆನುತ +ಮುನಿ +ಮುಳಿದು
ತರಿಸಿದನು+ ಘೃತ+ಪೂರಿತದ+ ಕೊ
ಪ್ಪರಿಗೆಗಳನ್+ಒಂದ್+ಒಂದನ್+ಒಂದರೊಳ್
ಇರಿಸಿ+ ಮಂತ್ರಿಸಿ +ನೀರ +ತಳಿದನು +ರಕ್ಷೆಗಳ +ರಚಿಸಿ

ಅಚ್ಚರಿ:
(೧) ಈಗಿನ ಕಾಲದ ಪ್ರನಾಳ ಶಿಶುವಿನ ಪರಿಕಲ್ಪನೆ
(೨) ಜೋಡಿ ಪದಗಳು – “ಮು” ಮುನಿ ಮುಳಿದ; “ರ” – ರಕ್ಷೆಗಳ ರಚಿಸಿ