ಪದ್ಯ ೩೮: ಭೀಮನು ಕೋಪದ ನುಡಿಗಳು ಹೇಗಿದ್ದವು?

ತಿಂಬೆನೀತನ ಜೀವವನು ಪತಿ
ಯೆಂಬ ಗರಿವಿತನಿವನ ನೆತ್ತಿಯ
ತುಂಬು ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ
ಅಂಬುಜಾಕ್ಷಿಗೆ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ (ವಿರಾಟ ಪರ್ವ, ೧೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಕೋಪದಿಂದ, ವಿರಾತನ ಜೀವವನ್ನು ತಿನ್ನುತ್ತೇನೆ, ತಾನು ರಾಜನೆಂಬ ಗರ್ವ ಇವನ ನೆತ್ತಿಗೇರಿದೆ. ನೆತ್ತಿಯು ಮುರಿಯುವಂತೆ ಹೊಡೆದು, ಮತ್ಸ್ಯವಂಶವನ್ನು ಸಂಹರಿಸುತ್ತೇನೆ. ಕೀಚಕನಿಗೆ ದ್ರೌಪದಿಯ ಮೋಹ, ಇವನ ಈ ದುರ್ವರ್ತನೆಗಳು ಅಸಹನೀಯ, ಭೂತ ತೃಪ್ತಿಯನ್ನು ಮಾಡಿಸುತ್ತೇನೆ. ನನ್ನ ಉತ್ತರೀಯವನ್ನು ಬಿಡಿ, ತಡೆಯಬೇಡಿರಿ, ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ತಿಂಬೆ: ತಿನ್ನುತ್ತೇನೆ; ಜೀವ: ಪ್ರಾಣ; ಪತಿ: ಗಂಡ; ಗರ್ವ: ಅಹಂಕಾರ; ನೆತ್ತಿ: ತಲೆ; ಎರಗು: ಬಾಗು; ತರಿ: ಕಡಿ, ಕತ್ತರಿಸು, ಛೇದಿಸು; ಸಂತತಿ: ವಂಶ, ಪೀಳಿಗೆ; ಅಂಬುಜಾಕ್ಷಿ: ಕಮಲದಂತ ಕಣ್ಣು; ಬೇಳಂಬ: ವಿಡಂಬನೆ, ಅಣಕ; ಕೂಟ: ರಾಶಿ, ಸಮುದಾಯ; ತುಷ್ಟಿ: ತೃಪ್ತಿ, ಆನಂದ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬಿಡಿ: ತೊರೆ;

ಪದವಿಂಗಡಣೆ:
ತಿಂಬೆನ್+ಈತನ +ಜೀವವನು +ಪತಿ
ಯೆಂಬ +ಗರಿವಿತನ್+ಇವನ+ ನೆತ್ತಿಯ
ತುಂಬು +ಬಿಡಲ್+ಎರಗುವೆನು +ತರಿವೆನು +ಮತ್ಸ್ಯ+ಸಂತತಿಯ
ಅಂಬುಜಾಕ್ಷಿಗೆ +ಕೀಚಕನ+ ಬೇ
ಳಂಬವ್+ಈತನ +ಕೂಟ +ಭೂತ +ಕ
ದಂಬ +ತುಷ್ಟಿಯ +ಮಾಡಬೇಹುದು +ಸೆರಗ+ ಬಿಡಿಯೆಂದ

ಅಚ್ಚರಿ:
(೧) ಭೀಮನ ಕೋಪದ ನುಡಿ: ತಿಂಬೆನೀತನ ಜೀವವನು ಪತಿಯೆಂಬ ಗರಿವಿತನಿವನ ನೆತ್ತಿಯ
ತುಂಬು ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ

ಪದ್ಯ ೮೬: ಕೀಚಕನು ಏಕೆ ಗಾಬರಿಗೊಂಡನು?

ಎನಗೆ ಪುರುಷರು ಸೋಲದವರಿ
ಲ್ಲೆನಗೆ ಪಾಸಟಿ ನೀನು ನಿನಗಾ
ಮನವೊಲಿದೆ ನೀ ನೋಡು ತನ್ನಯ ಹೆಣ್ಣುತನದನುವ
ಎನಲು ಹರುಷದಲುಬ್ಬಿ ಕೀಚಕ
ನನಿಲಜನ ಮೈದಡವಿ ವೃತ್ತ
ಸ್ತನವ ಕಾಣದೆ ಹೆದರಿ ಬಳಿಕಿಂತೆಂದನವ ನಗುತ (ವಿರಾಟ ಪರ್ವ, ೩ ಸಂಧಿ, ೮೬ ಪದ್ಯ)

ತಾತ್ಪರ್ಯ:
ನನಗೆ ಸೋಲದ ಗಂಡಸರೇ ಇಲ್ಲ. ನನಗೆ ನೀನು ಸರಿಸಾಟಿ, ನಿನಗೆ ಮನಸಾರೆ ಒಲಿದಿದ್ದೇನೆ, ನನ್ನ ಹೆಣ್ಣುತನವನ್ನು ನೀನು ನೋಡು ಎಂದು ಭೀಮನು ಹೇಳಲು, ಕೀಚಕನು ಸಂತೋಷದಿಂದ ಉಬ್ಬಿ ಭೀಮನ ಮೈದಡವಿದನು. ಗುಂಡಾಕಾರದ ಸ್ತನಗಳನ್ನು ಕಾಣದೆ ಹೆದರಿ ಹೀಗೆಂದನು.

ಅರ್ಥ:
ಪುರುಷ: ಗಂಡು; ಸೋಲು: ಪರಾಭವ; ಪಾಸಟಿ: ಸಮಾನ, ಹೋಲಿಕೆ; ಮನ: ಮನಸ್ಸು; ಒಲಿದು: ಬಯಸು, ಸಮ್ಮತಿಸು; ಹೆಣ್ಣು: ಸ್ತ್ರೀ; ಅನುವು: ಸೊಗಸು; ಹರುಷ: ಸಂತಸ; ಉಬ್ಬು: ಹೆಚ್ಚಾಗು; ಅನಿಲಜ: ವಾಯುಪುತ್ರ; ಮೈದಡವು: ದೇಹವನ್ನು ಅಲುಗಾಡಿಸು; ವೃತ್ತ: ಗುಂಡಾಕಾರ; ಸ್ತನ: ಮೊಲೆ; ಕಾಣು: ತೋರು; ಹೆದರು: ಅಂಜಿ; ಬಳಿಕ: ನಂತರ; ನಗುತ: ಸಂತಸ;

ಪದವಿಂಗಡಣೆ:
ಎನಗೆ +ಪುರುಷರು +ಸೋಲದ್+ಅವರಿಲ್
ಎನಗೆ +ಪಾಸಟಿ +ನೀನು +ನಿನಗಾ
ಮನವೊಲಿದೆ +ನೀ +ನೋಡು +ತನ್ನಯ +ಹೆಣ್ಣುತನದ್+ಅನುವ
ಎನಲು+ ಹರುಷದಲ್+ಉಬ್ಬಿ +ಕೀಚಕನ್
ಅನಿಲಜನ+ ಮೈದಡವಿ+ ವೃತ್ತ
ಸ್ತನವ +ಕಾಣದೆ +ಹೆದರಿ +ಬಳಿಕಿಂತೆಂದನ್+ಅವ+ ನಗುತ

ಅಚ್ಚರಿ:
(೧) ಕೀಚಕನು ಅಂಜಲು ಕಾರಣ – ವೃತ್ತ ಸ್ತನವ ಕಾಣದೆ ಹೆದರಿ

ಪದ್ಯ ೬೩: ಪಾಂಡವರಿಗಾವುದು ಬೇಡವೆಂದು ದ್ರೌಪದಿ ದುಃಖಿಸಿದಳು?

ಧರೆಯ ಭಂಡಾರವನು ರಥವನು
ಕರಿತುರಗರಥಪಾಯದಳವನು
ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ
ದುರುಳ ಕೀಚಕಗೆನ್ನ ಕೊಟ್ಟಿರಿ
ಪರಿಮಿತದಲಿರವಾಯ್ತು ನಿಮ್ಮೈ
ವರಿಗೆ ಲೇಸಾಯ್ತಕಟಯೆಂದಬುಜಾಕ್ಷಿ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಭೂಮಿ, ಕೋಶ, ಚತುರಂಗ ಸೈನ್ಯ, ಇವೆಲ್ಲವೂ ದುರ್ಯೋಧನನು ನಿಮ್ಮಿಂದ ಕಿತ್ತುಕೊಂಡು ಹೊರಯಟ್ಟಿದನು, ಉಳಿದವಳು ನಾನು, ನನ್ನನ್ನು ಈಗ ಕೀಚಕನಿಗೆ ಕೊಟ್ಟಿರಿ, ಐವರೇ ಇರಲು ನಿಮಗೆ ಅನುಕೂಲವಾಯ್ತು, ರಾಜ್ಯವಾಗಲೀ, ಹೆಂಡತಿಯಾಗಲೀ ನಿಮಗೆ ಭೂಷಣವಲ್ಲ ಅಯ್ಯೋ ಎಂದು ದ್ರೌಪದಿಯು ದುಃಖಿಸಿದಳು.

ಅರ್ಥ:
ಧರೆ: ಭೂಮಿ; ಭಂಡಾರ: ಬೊಕ್ಕಸ, ಖಜಾನೆ; ರಥ: ತೇರು; ಕರಿ: ಆನೆ; ತುರಗ: ಕುದುರೆ; ಪಾಯದಳ: ಸೈನಿಕರು; ಕುಲ: ವಂಶ; ಅಗ್ರಣಿ: ಶ್ರೇಷ್ಠ, ಮೊದಲಿಗ; ಸೆಳೆ: ವಶಪಡಿಸಿಕೊಳ್ಳು; ಹೊರವಡಿಸು: ದೂರವಿಟ್ಟನು; ದುರುಳ: ದುಷ್ಟ; ಕೊಟ್ಟು: ನೀಡು; ಪರಿಮಿತ: ಮಿತ, ಸ್ವಲ್ಪವಾದ; ಇರವು: ಜೀವಿಸು, ಇರು; ಲೇಸು: ಒಳಿತು; ಅಕಟ: ಅಯ್ಯೋ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಹಲುಬು: ದುಃಖಿಸು;

ಪದವಿಂಗಡಣೆ:
ಧರೆಯ +ಭಂಡಾರವನು +ರಥವನು
ಕರಿ+ತುರಗ+ರಥ+ಪಾಯದಳವನು
ಕುರುಕುಲಾಗ್ರಣಿ +ಸೆಳೆದುಕೊಂಡನು +ನಿಮ್ಮ +ಹೊರವಡಿಸಿ
ದುರುಳ +ಕೀಚಕಗ್+ಎನ್ನ +ಕೊಟ್ಟಿರಿ
ಪರಿಮಿತದಲ್+ಇರವಾಯ್ತು +ನಿಮ್ಮೈ
ವರಿಗೆ +ಲೇಸಾಯ್ತ್+ಅಕಟ+ಎಂದ್+ಅಬುಜಾಕ್ಷಿ +ಹಲುಬಿದಳು

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ಪರಿಮಿತದಲಿರವಾಯ್ತು ನಿಮ್ಮೈವರಿಗೆ

ಪದ್ಯ ೫೦: ಭೀಮನ ಅಸಹಾಯಕತೆಯೇನು?

ಅಂದು ದುಶ್ಯಾಸನನ ಕರುಳನು
ತಿಂದಡಲ್ಲದೆ ತಣಿವು ದೊರೆಕೊಳ
ದೆಂದು ಹಾಯ್ದೊಡೆ ಹಲುಗಿರಿದು ಮಾಣಿಸಿದ ಯಮಸೂನು
ಇಂದು ಕೀಚಕನಾಯನೆರಗುವೆ
ನೆಂದು ಮರನನು ನೋದಿದರೆ ಬೇ
ಡೆಂದ ಹದನನು ಕಂಡೆ ನೀನೆನಗುಂಟೆಯಪರಾಧ (ವಿರಾಟ ಪರ್ವ, ೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅಂದು ವಸ್ತ್ರಾಪಹರಣದ ಸಮಯದಲ್ಲಿ ದುಶ್ಯಾಸನನ ಕರುಳನ್ನು ಕಿತ್ತು ತಿನ್ನದ ಹೊರತು ತೃಪ್ತಿದೊರಕುವುದಿಲ್ಲವೆಂದು ನುಗ್ಗಿದರೆ ಅಣ್ಣನು ಹಲ್ಲು ಕಿರಿದು ತಪ್ಪಿಸಿದ. ಈ ದಿನ ಸಭೆಯಲ್ಲಿ ಕೀಚಕ ನಾಯಿಯನ್ನು ಬಡಿಯಬೇಕೆಂದು ಮರವನ್ನು ನೋಡಿದರೆ ಅಣ್ಣನು ಬೇಡವೆಂದುದನ್ನು ನೀನೇ ಕಂಡಿರುವೆ. ಹೀರಿಗುವಾಗ ನನ್ನಲ್ಲೇನು ತಪ್ಪಿದೆ ನೀನೇ ಹೇಳು ಎಂದು ಭೀಮನು ನೊಂದು ನುಡಿದನು.

ಅರ್ಥ:
ಅಂದು: ಹಿಂದೆ; ಕರುಳು: ಪಚನಾಂಗ; ತಿಂದು: ಉಣ್ಣು; ತಣಿವು: ತೃಪ್ತಿ, ಸಮಾಧಾನ; ದೊರಕು: ಪಡೆ; ಹಾಯ್ದು: ಹೊಡೆ; ಹಾಯಿ: ಮೇಲೆಬೀಳು; ಹಲುಗಿರಿ: ನಗು; ಮಾಣು: ತಪ್ಪಿಸು, ನಿಲ್ಲಿಸು; ನಾಯಿ: ಕುನ್ನಿ; ಎರಗು: ಬೀಳಿಸು; ಮರ: ತರು; ನೋಡು: ವೀಕ್ಷಿಸು; ಬೇಡ: ತ್ಯಜಿಸು; ಹದ: ರೀತಿ; ಕಂಡು: ನೋಡು; ಅಪರಾಧ: ತಪ್ಪು;

ಪದವಿಂಗಡಣೆ:
ಅಂದು +ದುಶ್ಯಾಸನನ +ಕರುಳನು
ತಿಂದಡಲ್ಲದೆ +ತಣಿವು +ದೊರೆಕೊಳ
ದೆಂದು +ಹಾಯ್ದೊಡೆ +ಹಲುಗಿರಿದು+ ಮಾಣಿಸಿದ +ಯಮಸೂನು
ಇಂದು+ ಕೀಚಕ+ನಾಯನ್+ಎರಗುವೆನ್
ಎಂದು +ಮರನನು+ ನೋದಿದರೆ+ ಬೇ
ಡೆಂದ +ಹದನನು +ಕಂಡೆ +ನೀನ್+ಎನಗುಂಟೆ+ಅಪರಾಧ

ಅಚ್ಚರಿ:
(೧) ಅಂದು, ಇಂದು, ಎಂದು – ಪ್ರಾಸ ಪದಗಳು

ಪದ್ಯ ೪೮: ದ್ರೌಪದಿಯು ತನ್ನ ಪತಿಯರನ್ನು ಹೇಗೆ ಹಂಗಿಸಿದಳು?

ಅಂದು ಕೌರವ ನಾಯಿ ಸಭೆಯಲಿ
ತಂದು ಸೀರೆಯ ಸುಲಿಸಿದನು ತಾ
ನಿಂದು ಕೀಚಕ ಕುನ್ನಿಯೊದೆದನು ವಾಮಪಾದದಲಿ
ಅಂದು ಮೇಲಿಂದಾದ ಭಂಗಕೆ
ಬಂದುದಾವುದು ನೀವು ಬಲ್ಲಿದ
ರೆಂದು ಹೊಕ್ಕರೆ ಹೆಣ್ಣಕೊಂದಿರಿಯೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ಹಿಂದೆ ದುರ್ಯೋಧನನು ನನ್ನನ್ನು ಸಭೆಗೆಳೆದು ಸೀರೆಯನ್ನು ಸುಲಿಸಿದನು. ಇಂದು ರಾಜಸಭೆಯ ಮುಂದೆ ನನ್ನನ್ನು ಕೀಚಕನೆಂಬ ನಾಯಿ ಎಡಗಾಲಿನಿಂದ ಒದೆದನು. ಅಂದು ಇಂದೂ ನನಗೊದಗಿದ ಭಂಗಕ್ಕೆ ನೀವು ಪ್ರತಿಯಾಗಿ ಏನು ಮಾಡಿದಿರಿ? ವೀರರೆಂದು ವರಿಸಿದರೆ ಹೆಣ್ಣನ್ನು ಕೊಂದಿರಿ ಎಂದು ದ್ರೌಪದಿಯು ಹಂಗಿಸಿದಳು.

ಅರ್ಥ:
ಅಂದು: ಹಿಂದೆ; ನಾಯಿ: ಶ್ವಾನ; ಸಭೆ: ದರ್ಬಾರು; ಸೀರೆ: ಬಟ್ಟೆ; ಸುಲಿ: ತೆಗೆ, ಕಳಚು; ಕುನ್ನಿ: ನಾಯಿ; ಒದೆ: ಕಾಲಿನಿಂದ ನೂಕು; ವಾಮ: ಎಡ; ಪಾದ: ಚರಣ; ಭಂಗ: ಮುರಿಯುವಿಕೆ; ಬಲ್ಲಿರಿ: ತಿಳಿದಿರುವಿರಿ; ಹೊಕ್ಕು: ಸೇರು; ಕೊಂದು: ಕೊಲ್ಲು, ಸಾಯಿಸು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಅಂದು+ ಕೌರವ+ ನಾಯಿ +ಸಭೆಯಲಿ
ತಂದು+ ಸೀರೆಯ+ ಸುಲಿಸಿದನು +ತಾನ್
ಇಂದು +ಕೀಚಕ+ ಕುನ್ನಿ+ಒದೆದನು +ವಾಮಪಾದದಲಿ
ಅಂದು +ಮೇಲಿಂದಾದ +ಭಂಗಕೆ
ಬಂದುದ್+ಆವುದು +ನೀವು +ಬಲ್ಲಿದ
ರೆಂದು +ಹೊಕ್ಕರೆ +ಹೆಣ್ಣ+ಕೊಂದಿರಿ+ಯೆಂದಳ್+ಇಂದುಮುಖಿ

ಅಚ್ಚರಿ:
(೧) ಅಂದು, ಇಂದು, ತಂದು, ಬಂದು, ಎಂದು – ಪ್ರಾಸ ಪದಗಳು
(೨) ಹಂಗಿಸುವ ಪರಿ – ನೀವು ಬಲ್ಲಿದರೆಂದು ಹೊಕ್ಕರೆ ಹೆಣ್ಣಕೊಂದಿರಿಯೆಂದಳಿಂದುಮುಖಿ
(೩) ನಾಯಿ, ಕುನ್ನಿ – ಸಮನಾರ್ಥಕ ಪದ

ಪದ್ಯ ೬: ಸೈರಂಧ್ರಿಯು ಯಾರ ಮನೆಗೆ ಬಂದಳು?

ಸುರಪ ಶಿಖಿ ಯಮ ನಿರುತಿ ವರುಣಾ
ದ್ಯರಿಗೆ ವಂದಿಸಿ ಕಣ್ಣೆವೆಯ ಬಗಿ
ದರಘಳಿಗೆ ನಿಂದಬುಜಮಿತ್ರನ ಭಜಿಸಿ ಕಣ್ದೆರೆಯೆ
ಮುರಿವ ದೈತ್ಯನ ಕಾಹಕೊಟ್ಟನು
ತರಣಿ ತರುಣಿಗೆ ಮಂದಮಂದೋ
ತ್ತರದ ಗಮನದಲಬಲೆ ಬಂದಳು ಕೀಚಕನ ಮನೆಗೆ (ವಿರಾಟ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ಕೀಚಕನ ಮನೆಗೆ ಹೋಗಲೇ ಬೇಕಾದ ಸ್ಥಿತಿ ಬಂದೊದಗಿದ ಸೈರಂಧ್ರಿಯು, ಇಂದ್ರ, ಅಗ್ನಿ, ಯಮ, ನಿರುತಿ, ವಾಯು ಮುಂತಾದ ದಿಕ್ಪಾಲಕರನ್ನು ಸ್ಮರಿಸಿದಳು, ಅರ್ಧಗಳಿಗೆ ನಿಂತು ಕಣ್ಮುಚ್ಚಿ ಸೂರ್ಯನನ್ನು ಪ್ರಾರ್ಥಿಸಿ ಕಣ್ದೆರೆದಳು. ಯಾರನ್ನು ಬೇಕಿದ್ದರೂ ಸೋಲಿಸಬಲ್ಲ ರಾಕ್ಷಸನೊಬ್ಬನನ್ನು ಸೂರ್ಯನು ದ್ರೌಪದಿಗೆ ಕಾವಲಾಗಿ ಕೊಟ್ಟನು ಎಂದು ತಿಳಿದು ಮೆಲ್ಲ ಮೆಲ್ಲನೆ ನಡೆಯುತ್ತಾ ಸೈರಂಧ್ರಿಯು ಕೀಚಕನ ಮನೆಗೆ ಬಂದಳು.

ಅರ್ಥ:
ಸುರಪ: ಇಂದ್ರ; ಶಿಖಿ: ಅಗ್ನಿ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆ, ಪಶ್ಚಿಮ ದಿಕ್ಕಿನ ಒಡೆಯ; ಆದಿ: ಮುಂತಾದ; ವಂದಿಸು: ನಮಸ್ಕರಿಸು; ಕಣ್ಣೆವೆ: ಕಣ್ಣಿನ ರೆಪ್ಪೆ; ಬಿಗಿ: ಬಂಧಿಸು; ಘಳಿಗೆ: ಸಮಯ; ಅಬುಜಮಿತ್ರ: ಕಮಲದ ಸಖ (ಸೂರ್ಯ); ಭಜಿಸು: ಪ್ರಾರ್ಥಿಸು; ಕಣ್ಣು: ನಯನ; ತೆರೆ: ಬಿಚ್ಚು; ಮುರಿ: ಸೀಳು; ದೈತ್ಯ: ರಾಕ್ಷಸ; ಕಾಹು: ರಕ್ಷಿಸು; ತರಣಿ: ಸೂರ್ಯ; ತರುಣಿ: ಹೆಣ್ಣು; ಮಂದ: ಮೆಲ್ಲನೆ; ಗಮನ: ಚಲನೆ; ಅಬಲೆ: ಹೆಣ್ಣು; ಬಂದಳು: ಆಗಮಿಸು; ಮನೆ: ಆಲಯ;

ಪದವಿಂಗಡಣೆ:
ಸುರಪ +ಶಿಖಿ+ ಯಮ +ನಿರುತಿ +ವರುಣಾ
ದ್ಯರಿಗೆ+ ವಂದಿಸಿ +ಕಣ್ಣೆವೆಯ +ಬಗಿದ್
ಅರಘಳಿಗೆ+ ನಿಂದ್+ಅಬುಜಮಿತ್ರನ+ ಭಜಿಸಿ +ಕಣ್ದೆರೆಯೆ
ಮುರಿವ+ ದೈತ್ಯನ +ಕಾಹಕೊಟ್ಟನು
ತರಣಿ+ ತರುಣಿಗೆ+ ಮಂದ+ಮಂದ
ಉತ್ತರದ +ಗಮನದಲ್+ಅಬಲೆ +ಬಂದಳು +ಕೀಚಕನ+ ಮನೆಗೆ

ಅಚ್ಚರಿ:
(೧) ಯಾರು ರಕ್ಷಣೆ ನೀಡಿದರು – ಮುರಿವ ದೈತ್ಯನ ಕಾಹಕೊಟ್ಟನು ತರಣಿ ತರುಣಿಗೆ
(೨) ಅಬುಜಮಿತ್ರ, ತರಣಿ – ಸಮನಾರ್ಥಕ ಪದ

ಪದ್ಯ ೨೦: ಕೀಚಕನು ದ್ರೌಪದಿಗೆ ಏನು ಹೇಳಿದನು?

ಎಲೆಗೆ ಪಾತಕಿ ನಿನ್ನ ಕಣ್ಣೆಂ
ಬಲಗಿನಲಿ ತನ್ನೆದೆಯ ನೋಯಿಸಿ
ತೊಲಗಬಹುದೇ ಕರುಣವಿಲ್ಲವೆ ನಿನ್ನ ಮನದೊಳಗೆ
ಒಲಿದು ಬಂದೆನು ಕಾಮನೂಳಿಗ
ಬಲುಹು ಎನ್ನಯ ಭಯವ ತಗ್ಗಿಸಿ
ತಲೆಯ ಕಾಯಲು ಬೇಕೆನುತ ಕೀಚಕನು ಕೈಮುಗಿದ (ವಿರಾಟ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೀಚಕನು ದ್ರೌಪದಿಯನ್ನುದ್ದೇಶಿಸಿ, ಎಲೆ ಪಾಪಿ, ನಿನ್ನ ಕಣ್ಣೆಂಬ ಬಾಣದಿಂದ ನನ್ನನ್ನು ನೋಯಿಸಿ, ನೀನು ಹೀಗೆ ಹೋಗಿ ಬಿಡಬಹುದೆ? ನಿನ್ನ ಮನಸ್ಸಿನಲ್ಲಿ ಕರುಣೆಯೇ ಇಲ್ಲವೇ? ನಿನಗೆ ಒಲಿದು ಬಂದಿದ್ದೇನೆ, ಮನ್ಮಥನ ಕಾಟವು ಪ್ರಬಲವಾದದ್ದು, ಭಯಗೊಂಡ ನನ್ನನ್ನು ಸಂತೈಸಿ ಕಾಪಾಡು ಎಂದು ನಮಸ್ಕರಿಸಿದನು.

ಅರ್ಥ:
ಪಾತಕಿ: ಪಾಪಿಲ್ ಕಣ್ಣು: ನಯನ; ಅಲಗು: ಬಾಣ; ಎದೆ: ಹೃದಯ; ನೋಯಿಸು: ಪೆಟ್ಟು; ತೊಲಗು: ಹೊರಡು; ಕರುಣೆ: ದಯೆ; ಮನ: ಮನಸ್ಸು; ಒಲಿ: ಪ್ರೀತಿಸು; ಬಂದೆ: ಆಗಮಿಸು; ಕಾಮ: ಮನ್ಮಥ; ಊಳಿಗ: ಸೇವೆ; ಬಲುಹು: ಬಲ, ಶಕ್ತಿ; ಭಯ: ಹೆದರು; ತಗ್ಗಿಸು: ಕಡಿಮೆ ಮಾಡು; ತಲೆ: ಶಿರ; ಕಾಯು: ರಕ್ಷಿಸು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಎಲೆಗೆ +ಪಾತಕಿ+ ನಿನ್ನ +ಕಣ್ಣೆಂಬ್
ಅಲಗಿನಲಿ +ತನ್ನೆದೆಯ +ನೋಯಿಸಿ
ತೊಲಗಬಹುದೇ +ಕರುಣವಿಲ್ಲವೆ +ನಿನ್ನ +ಮನದೊಳಗೆ
ಒಲಿದು +ಬಂದೆನು +ಕಾಮನೂಳಿಗ
ಬಲುಹು +ಎನ್ನಯ +ಭಯವ +ತಗ್ಗಿಸಿ
ತಲೆಯ +ಕಾಯಲು +ಬೇಕೆನುತ+ ಕೀಚಕನು+ ಕೈಮುಗಿದ

ಅಚ್ಚರಿ:
(೧) ದ್ರೌಪದಿಯನ್ನು ಬಯ್ಯುವ ಪರಿ – ನಿನ್ನ ಕಣ್ಣೆಂಬಲಗಿನಲಿ ತನ್ನೆದೆಯ ನೋಯಿಸಿ ತೊಲಗಬಹುದೇ

ಪದ್ಯ ೫: ಸುದೇಷ್ಣೆಯನ್ನು ನೋಡಲು ಯಾರು ಬಂದರು?

ಒಂದು ದಿವಸ ವಿರಾಟನರಸಿಯ
ಮಂದಿರಕ್ಕೋಲೈಸಲೆಂದೈ
ತಂದನಾಕೆಯ ತಮ್ಮ ಕೀಚಕನತುಳ ಭುಜಬಲನು
ಹಿಂದೆ ಮುಂದಿಕ್ಕೆಲದ ಸತಿಯರ
ಸಂದಣಿಯ ಮಧ್ಯದಲಿ ಮೆರೆವರ
ವಿಂದವದನೆಯ ಕಂಡು ಕಾಣಿಕೆಗೊಟ್ಟು ಪೊಡಮಟ್ಟ (ವಿರಾಟ ಪರ್ವ, ೨ ಸಂಧಿ, ೫ ಪದ್ಯ)

ತಾತ್ಪರ್ಯ:
ಒಂದು ದಿನ ಸುದೇಷ್ಣೆಯನ್ನು ನೋಡಲು ಅವಳ ತಮ್ಮನಾದ, ಮಹಾ ಪರಾಕ್ರಮಿಯಾದ ಕೀಚಕನು ಆಗಮಿಸಿದನು. ಸುದೇಷ್ಣೆಯು ತನ್ನ ಅಂತಃಪುರದಲ್ಲಿ ಸಖೀಜನದ ಸಮೂಹದ ನಡುವೆ ಕುಳಿತಿದ್ದಳು, ಅವಳ ಅರಮನೆಗೆ ಬಂದು ಆಕೆಗೆ ಕಾಣಿಕೆಯನ್ನು ನೀಡಿ ನಮಸ್ಕರಿಸಿದನು.

ಅರ್ಥ:
ದಿವಸ: ದಿನ, ವಾರ; ಅರಸಿ: ರಾಣಿ; ಮಂದಿರ: ಆಲಯ; ಓಲೈಸು: ಸೇವೆಮಾಡು, ಉಪಚರಿಸು; ಐಂತದು: ಬಂದು ಸೇರು; ತಮ್ಮ: ಸಹೋದರ; ಅತುಳ: ಬಹಳ; ಭುಜಬಲ: ಪರಾಕ್ರಮಿ; ಹಿಂದೆ ಮುಂದೆ: ಅಕ್ಕ ಪಕ್ಕ; ಇಕ್ಕೆಲ: ಎರಡೂ ಕಡೆ; ಸತಿ: ಹೆಣ್ಣು; ಸಂದಣಿ: ಗುಂಪು; ಮಧ್ಯ: ನಡುವೆ; ಮೆರೆ: ಹೊಳೆವ; ಅರವಿಂದ: ಕಮಲ; ವದನ: ಮುಖ; ಕಂಡು: ನೋಡು; ಕಾಣಿಕೆ: ಉಡುಗೊರೆ; ಪೊಡಮಟ್ಟು: ನೀಡು;

ಪದವಿಂಗಡಣೆ:
ಒಂದು +ದಿವಸ +ವಿರಾಟನ್+ಅರಸಿಯ
ಮಂದಿರಲ್+ಓಲೈಸಲೆಂದ್+ಐ
ತಂದನ್+ಆಕೆಯ +ತಮ್ಮ +ಕೀಚಕನ್+ಅತುಳ +ಭುಜಬಲನು
ಹಿಂದೆ +ಮುಂದಿಕ್ಕೆಲದ+ ಸತಿಯರ
ಸಂದಣಿಯ+ ಮಧ್ಯದಲಿ+ ಮೆರೆವ್
ಅರವಿಂದ+ವದನೆಯ +ಕಂಡು +ಕಾಣಿಕೆಗೊಟ್ಟು +ಪೊಡಮಟ್ಟ

ಅಚ್ಚರಿ:
(೧) ಅರವಿಂದ ವದನೆ, ವಿರಾಟನರಸಿ – ಸುದೇಷ್ಣೆಯನ್ನು ಕರೆದ ಪರಿ
(೨) ಸುದೇಷ್ಣೆಯು ಕುಳಿತಿದ್ದ ಪರಿ – ಹಿಂದೆ ಮುಂದಿಕ್ಕೆಲದ ಸತಿಯರಸಂದಣಿಯ ಮಧ್ಯದಲಿ ಮೆರೆವರ
ವಿಂದವದನೆಯ ಕಂಡು

ಪದ್ಯ ೪: ಕೀಚಕನ ಮೇಲೆ ಯಾರು ಬಾಣಗಳನ್ನು ತೂರಿದರು?

ಎಲವೊ ಕೀಚಕ ಹೋಗದಿರು ನಿ
ಲ್ಲೆಲವೊ ಹುಲು ಮಂಡಳಿಕ ನಿನ್ನಯ
ಬಲುಗಡಿಯ ತೋರುವುದು ನಿನ್ನಂತರದ ರಾಯರಲಿ
ತೊಲಗು ಸೈರಿಸೆನುತ್ತಲುರೆ ಬಿಲು
ಬಲುಸರಳ ಸರಿವಳೆಯ ಸುರಿಯ
ಲ್ಕಲಘು ವಿಕ್ರಮ ಕೀಚಕನು ಸವರಿದನು ಶರತತಿಯ (ಅರಣ್ಯ ಪರ್ವ, ೨೪ ಸಂಧಿ, ೪ ಪದ್ಯ)

ತಾತ್ಪರ್ಯ:
ಕೌರವ ವೀರರು, ಎಲವೋ ಕೀಚಕ ಹೋಗ ಬೇಡ, ನೀನು ಹುಲು ಮಂಡಲಿಕ. ನಿನ್ನ ಪರಾಕ್ರಮವನ್ನು ನಿನ್ನ ಸಮಾನ ರಾಜರೊಡನೆ ತೋರಿಸು, ಎಂದು ಕೌರವ ವೀರರು ಹೇಳಿ ಬಾಣಗಳ ಮಳೆಯನ್ನು ಸುರಿಸಲು, ಪರಾಕ್ರಮಿಯಾದ ಕೀಚಕನು ಆ ಬಾಣಗಳನ್ನು ಕಡಿದೆಸೆದನು.

ಅರ್ಥ:
ಹೋಗು: ತೆರಳು; ನಿಲ್ಲು: ತಡೆ; ಹುಲು: ಕ್ಷುಲ್ಲಕ; ಮಂಡಳಿಕ: ಒಂದು ಪ್ರಾಂತ್ಯದ ಅಧಿಪತಿ; ಬಲುಗಡಿ: ಮಹಾಪರಾಕ್ರಮ; ತೋರು: ಪ್ರದರ್ಶಿಸು; ರಾಯ: ರಾಜ; ತೊಲಗು: ತೆರಳು; ಸೈರಿಸು: ತಾಳು; ಬಿಲು: ಬಿಲ್ಲು; ಉರು: ವಿಶೇಷವಾದ; ಸರಳು: ಬಾಣ; ಸರಿವಳೆ: ಒಂದೇ ಸಮನಾಗಿ ಸುರಿವ ಮಳೆ; ಸುರಿ: ವರ್ಷಿಸು; ವಿಕ್ರಮ: ಪರಾಕ್ರಮಿ; ಸವರು: ನಾಶಗೊಳಿಸು; ಶರ: ಬಾಣ; ತತಿ: ಗುಂಪು; ಅಲಘು: ಭಾರವಾದ;

ಪದವಿಂಗಡಣೆ:
ಎಲವೊ +ಕೀಚಕ +ಹೋಗದಿರು +ನಿಲ್
ಎಲವೊ +ಹುಲು +ಮಂಡಳಿಕ +ನಿನ್ನಯ
ಬಲುಗಡಿಯ +ತೋರುವುದು +ನಿನ್ನಂತರದ+ ರಾಯರಲಿ
ತೊಲಗು +ಸೈರಿಸೆನುತ್ತಲ್+ಉರೆ +ಬಿಲು
ಬಲುಸರಳ+ ಸರಿವಳೆಯ+ ಸುರಿಯಲ್ಕ್
ಅಲಘು ವಿಕ್ರಮ +ಕೀಚಕನು +ಸವರಿದನು +ಶರತತಿಯ

ಅಚ್ಚರಿ:
(೧) ಕೀಚಕನನ್ನು ಹಂಗಿಸುವ ಪರಿ – ಎಲವೊ ಹುಲು ಮಂಡಳಿಕ
(೨) ಕೀಚಕನ ಪರಾಕ್ರಮ – ಅಲಘು ವಿಕ್ರಮ ಕೀಚಕನು ಸವರಿದನು ಶರತತಿಯ

ಪದ್ಯ ೫೨: ಕೌರವರು ವಿರಾಟನ ಸೈನ್ಯವನ್ನು ಹೇಗೆ ಅಣಕಿಸಿದರು?

ಫಡ ವಿರಾಟನ ಚುಕ್ಕಿಗಳಿರವ
ಗಡಿಸದಿರಿ ಸಾಯದಿರಿ ಬಿರುದರ
ಹೆಡತಲೆಯ ಹಾವಾದ ಕೀಚಕನಳಿದನಿನ್ನೇನು
ಮಿಡುಕಿ ಕಟಕವ ಹೊಕ್ಕು ನರಿ ಹಲು
ಬಿಡುವವೊಲು ವೈರಾಟಕೆಟ್ಟನು
ಕಡೆಗೆನುತ ಕೈವೊಯ್ದು ನಕ್ಕುದು ಕೂಡೆ ಕುರುಸೇನೆ (ವಿರಾಟ ಪರ್ವ, ೫ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೌರವರ ಸೈನ್ಯವು ವಿರಾಟನ ಸೈನ್ಯವನ್ನು ನೋಡಿ ಚಪ್ಪಾಳೆ ತಟ್ಟಿ ನಗುತ್ತಾ, “ನೀಚ ವಿರಾಟರಾಜನ ಸೈನಿಕರೇ, ನಿಮ್ಮ ಕೀಚಕನು ವೀರಾಛಿವೀರರಿಗೆ ಹೆಡತಲೆಯ ಹಾವಿನಂತಿದ್ದವನು, ಅವನು ಸತ್ತು ಹೋದ. ಇನ್ನು ನಿಮ್ಮನ್ನು ಕೇಳುವವರಾರು. ನರಿಯು ದಂಡನ್ನು ಹೊಕ್ಕು ಹಲ್ಲು ಹಲ್ಲು ಬಿಡುವ ಹಾಗೆ, ಈಗ ವಿರಾಟನು ಕೆಟ್ಟು ಹೋದ” ಎಂದು ಅಣಕಿಸಿದರು.

ಅರ್ಥ:
ಫಡ:ಬೆಳೆದು ನಿಂತ ಜೋಳ, ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು, ಎತ್ತರವಾದ ಬೆಳೆ; ಚುಕ್ಕಿ: ಬಿಂದು; ಗಡಸು: ಗಟ್ಟಿ; ಸಾಯು: ಸಾವು; ಗಡಿ: ಎಲ್ಲೆ; ಬಿರು: ಕಠೋರವಾದ; ಹೆಡತಲೆ: ಹಿಂದಲೆ; ಅಳಿ: ಸಾವು; ಮಿಡುಕು: ಅಲುಗಾಟ, ಚಲನೆ; ಕಟಕ:ಕಡಗ,ರಾಜಧಾನಿ, ಗುಂಪು; ಹೊಕ್ಕು: ಸೇರು; ಹಲು: ಹಲ್ಲು, ದಂತ; ಬಿಡುವ: ತೋರುವ; ವೈರಿ: ಶತ್ರು; ಕಡೆಗೆ: ಕೊನೆ; ಕೈ: ಕರ, ಹಸ್ತ; ವೊಯ್ದು: ಹಾರಾಡು; ನಕ್ಕು: ನಗು; ಸೇನೆ: ಸೈನ್ಯ; ಇರವು: ಇರುವಿಕೆ; ಹಾವು: ಉರಗ;

ಪದವಿಂಗಡಣೆ:
ಫಡ+ ವಿರಾಟನ +ಚುಕ್ಕಿಗಳ್+ಇರವ
ಗಡಿಸದಿರಿ+ ಸಾಯದಿರಿ +ಬಿರುದರ
ಹೆಡತಲೆಯ +ಹಾವಾದ +ಕೀಚಕನ್+ಅಳಿದನ್+ಇನ್ನೇನು
ಮಿಡುಕಿ +ಕಟಕವ +ಹೊಕ್ಕು +ನರಿ +ಹಲು
ಬಿಡುವವೊಲು +ವೈರಾಟ+ಕೆಟ್ಟನು
ಕಡೆಗೆನುತ +ಕೈವೊಯ್ದು +ನಕ್ಕುದು +ಕೂಡೆ+ ಕುರುಸೇನೆ

ಅಚ್ಚರಿ:
(೧) ಹೇಗೆ ನಕ್ಕರು ಎಂದು ಹೇಳಲು – ಕೈವೊಯ್ದು ನಕ್ಕರು
(೨) ವಿರಾಟನ ಸೈನ್ಯವನ್ನು ಹೋಲಿಸುವ ಬಗೆ – ಮಿಡಿಕಿ ಕಟಕವ ಹೊಕ್ಕು ನರಿ ಹಲು ಬಿಡುವವೊಲು