ಪದ್ಯ ೨೫: ಶ್ರೀಕೃಷ್ಣನು ಯಾವ ನಗರವನ್ನು ಮುತ್ತಿದನು?

ಅಳುಕಿ ಮುತ್ತಿಗೆದೆಗೆದು ಸಾಲ್ವನ
ದಳ ಮುರಿದು ನಿಜಪುರಕೆ ಹಾಯ್ದುದು
ಗೆಲುವು ಸಾತ್ಯಕಿ ರಾಮಕಾಮಾದಿಗಳ ವಶವಾಯ್ತು
ಬಳಿಕ ನಿಮ್ಮಯ ರಾಜಸೂಯಕೆ
ಕಳಶವಿಟ್ಟು ಮದೀಯ ನಗರಿಯ
ಕಳವಳವ ಸಂತೈಸಿ ನಡೆದೆವು ಸಾಲ್ವ ಪಟ್ಟಣಕೆ (ಅರಣ್ಯ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಾಲ್ವನು ಬಲರಾಮಾದಿಗಳ ಯುದ್ಧಕ್ಕೆ ಹೆದರಿದನು, ಅವನ ಸೈನ್ಯವು ಭಂಗಗೊಂಡಿತು, ಅವನು ಮತ್ತೆ ತನ್ನ ಊರಿಗೆ ಹಿಂದಿರುಗಿದನು. ಇತ್ತ ನಾನು ರಾಜಸೂಯ ಯಾಗವನ್ನು ಸಮಾಪ್ತಿಗೊಂಡ ಮೇಲೆ ದ್ವಾರಕೆಗೆ ಹಿಂದಿರುಗಿ ಸಾಲ್ವನ ಮುತ್ತಿಗೆಯ ವಿಷಯವನ್ನು ತಿಳಿದು, ಇದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕೆಂದು ನಿಶ್ಚಯಿಸಿ ಸಾಲ್ವನಗರವನ್ನು ಮುತ್ತಿದೆನು ಎಂದು ಶ್ರೀಕೃಷ್ಣನು ಹೇಳಿದನು.

ಅರ್ಥ:
ಅಳುಕು: ಹೆದರು; ಮುತ್ತಿಗೆ: ಆವರಿಸುವಿಕೆ; ದಳ: ಸೈನ್ಯ; ಮುರಿ: ಸೀಳು; ನಿಜಪುರ: ತನ್ನಯ ಊರು; ಹಾಯ್ದು: ಹೊರಡು; ಗೆಲುವು: ಜಯ; ವಶ: ಅಧೀನ; ಬಳಿಕ: ನಂತರ; ಕಳಶ: ಶ್ರೇಷ್ಠ; ಮದೀಯ: ನಮ್ಮ; ನಗರ: ಊರು; ಕಳವಳ: ಗೊಂದಲ; ಸಂತೈಸು: ಸಮಾಧಾನ ಪಡಿಸು; ಪಟ್ಟಣ: ನಗರ;

ಪದವಿಂಗಡಣೆ:
ಅಳುಕಿ +ಮುತ್ತಿಗೆದ್+ಎಗೆದು +ಸಾಲ್ವನ
ದಳ +ಮುರಿದು +ನಿಜಪುರಕೆ+ ಹಾಯ್ದುದು
ಗೆಲುವು +ಸಾತ್ಯಕಿ +ರಾಮಕಾಮಾದಿಗಳ+ ವಶವಾಯ್ತು
ಬಳಿಕ+ ನಿಮ್ಮಯ +ರಾಜಸೂಯಕೆ
ಕಳಶವಿಟ್ಟು +ಮದೀಯ +ನಗರಿಯ
ಕಳವಳವ +ಸಂತೈಸಿ +ನಡೆದೆವು +ಸಾಲ್ವ +ಪಟ್ಟಣಕೆ

ಅಚ್ಚರಿ:
(೧) ಕಳಶವಿಟ್ಟು, ಕಳವಳ – ಕಳ ಪದದ ಬಳಕೆ

ಪದ್ಯ ೬೭: ಪಾಂಡವರು ಏಕೆ ಸಂತೋಷಪಟ್ಟರು?

ಕಳೆದೆವೇ ಖಳರೊಡ್ಡಿದಿರುಬಿನ
ಕುಳಿಗಳನು ಕೈತಪ್ಪು ಮಾಡದೆ
ಸಲಹಿದೆವೆ ಸತ್ಯವನು ಸುಜನರ ಕಲೆಗೆ ಸಂದೆವಲೆ
ಕಳವಳದ ಕಡುಗಡಲೊಳಾಳದೆ
ಸುಳಿದೆವಿತ್ತಲು ಶಿವ ಶಿವಾ ಯದು
ತಿಲಕ ಗದುಗಿನ ವೀರನಾರಾಯಣನ ಕರುಣದಲಿ (ಸಭಾ ಪರ್ವ, ೧೬ ಸಂಧಿ, ೬೭ ಪದ್ಯ)

ತಾತ್ಪರ್ಯ:
ಪಾಂಡವರು, ದುಷ್ಟರಾದ ಕೌರವರು ತೋಡಿದ್ದ ಗುಂಡಿಗಳನ್ನು ತಪ್ಪಿಸಿಕೊಂಡೆವು. ಸತ್ಯವನ್ನು ತಪ್ಪದೆ ಪರಿಪಾಲಿಸಿದೆವು, ಸಜ್ಜನರ ಮಾರ್ಗದಲ್ಲಿ ನಡೆದೆವು, ಶಿವ ಶಿವಾ ಕಳವಳದ ಸಮುದ್ರದಲ್ಲಿ ಬೀಳದೆ, ಯದುಕುಲತಿಲಕನಾದ ವೀರ ನಾರಾಯಣ ಶ್ರೀಕೃಷ್ಣನ ಕರುಣೆಯಿಂದ ಹಿಂದಿರುಗಿದೆವು ಎಂದು ಸಂತೋಷಿಸಿದರು.

ಅರ್ಥ:
ಕಳೆ:ತೊರೆ; ಖಳ: ದುಷ್ಟ; ಒಡ್ಡು: ಈಡುಮಾಡು; ಇರುಬು: ಇಕ್ಕಟ್ಟು; ಕುಳಿ: ಗುಂಡಿ; ಕೈತಪ್ಪು: ನುಣುಚಿಕೊಳ್ಳು; ಸಲಹು: ಕಾಪಾಡು; ಸತ್ಯ: ದಿಟ; ಸುಜನ: ಸಜ್ಜನ; ಕಲೆ: ಗುರುತು, ಸೇರು; ಸಂದ: ಕಳೆದ, ಹಿಂದಿನ; ಕಳವಳ: ಗೊಂದಲ; ಕಡು: ವಿಶೇಷ, ಅಧಿಕ; ಕಡಲು: ಸಾಗರ, ಸಮುದ್ರ; ಸುಳಿ: ಕಾಣಿಸಿಕೊಳ್ಳು, ಆವರಿಸು; ಯದುತಿಲಕ: ಯದು ವಂಶದ ಶ್ರೇಷ್ಠವಾದ; ಕರುಣ: ದಯೆ;

ಪದವಿಂಗಡಣೆ:
ಕಳೆದೆವೇ +ಖಳರ್+ಒಡ್ಡಿದ್+ಇರುಬಿನ
ಕುಳಿಗಳನು +ಕೈತಪ್ಪು +ಮಾಡದೆ
ಸಲಹಿದೆವೆ+ ಸತ್ಯವನು +ಸುಜನರ+ ಕಲೆಗೆ+ ಸಂದೆವಲೆ
ಕಳವಳದ+ ಕಡುಗಡಲೊಳ್+ಆಳದೆ
ಸುಳಿದೆವ್+ಇತ್ತಲು ಶಿವ ಶಿವಾ+ ಯದು
ತಿಲಕ +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಳವಳದ ಕಡುಗಡಲೊಳಾಳದೆ ಸುಳಿದೆವಿತ್ತಲು

ಪದ್ಯ ೨೮: ಧೃತರಾಷ್ಟ್ರನು ದುರ್ಯೋಧನನನ್ನು ಹೇಗೆ ವಿಚಾರಿಸಿದನು?

ಈಸು ಕಳವಳವೇನು ಚಿತ್ತದ
ಬೈಸಿಕೆಗೆ ಡೊಳ್ಳಾಸವೇಕೆ ವಿ
ಳಾಸ ಕೂಣೆಯವೇನು ಹೇಳಾ ನೆನಹಿನಭಿರುಚಿಯ
ವಾಸಿಗಳ ಪೈಸರವನೆನ್ನಲಿ
ಸೂಸಬಾರದೆ ನಿನ್ನ ಹರುಷಕೆ
ಪೈಸರವದೇನೆಂದು ಬೆಸಗೊಂಡನು ಸುಯೋಧನನ (ಸಭಾ ಪರ್ವ, ೧೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು, ಮಗನೇ ನಿನಗೇಕೆ ಇಂತಹ ಗೊಂದಲ, ಹೇಳು. ನೀನು ನಿನ್ನ ಮನಸ್ಥಿತಿಯನ್ನು ಏಕೆ ಕದಡಿಕೊಂಡಿದ್ದೀಯ? ನಿನ್ನ ಸಂತೋಷಕ್ಕೆ ಏನು ಕೊರತೆ? ನೀನು ಏನನ್ನು ಬಯಸುವೆ ಹೇಳು ನಿನ್ನ ಹಿರಿಮೆಯು ಛಲವು ಪಂಥವು ಏಕೆ ಜಾರಿಹೋಗಿವೆ? ಅದನ್ನು ನನಗೆ ಹೇಳಬಾರದೆ ನಿನ್ನ ಸಂತೋಷವು ಜಾರಿಹೋಗಲು ಕಾರಣವಾದರು ಏನು ಎಂದು ತನ್ನ ಮಗನನ್ನು ಕೇಳಿದನು.

ಅರ್ಥ:
ಕಳವಳ: ಗೊಂದಲ, ತೊಂದರೆ; ಚಿತ್ತ: ಮನಸ್ಸು; ಬೈಸಿಕೆ: ಅಚಲತೆ, ದೃಢತೆ; ಡೊಳ್ಳಾಸ: ಮೋಸ, ಕಪಟ; ವಿಳಾಸ: ವಿಹಾರ, ಚೆಲುವು; ಕೂಣೆ: ಕೊರತೆ; ಹೇಳು: ತಿಳಿಸು; ನೆನಹು: ನೆನಪು; ಅಭಿರುಚಿ: ಆಸಕ್ತಿ, ಒಲವು, ಪ್ರೀತಿ; ವಾಸಿ:ಕೀರ್ತಿ; ಪೈಸರ: ವಿಸ್ತಾರ, ವ್ಯಾಪ್ತಿ, ಹರಹು; ಸೂಸು: ಎರಚುವಿಕೆ, ಚಲ್ಲುವಿಕೆ; ಹರುಷ: ಸಂತೋಷ; ಪೈಸರ: ಹಿಂದಕ್ಕೆ ಸರಿಯುವುದು, ಸೋಲು, ಭಂಗ; ಬೆಸ: ಕೇಳುವುದು;

ಪದವಿಂಗಡಣೆ:
ಈಸು +ಕಳವಳವೇನು +ಚಿತ್ತದ
ಬೈಸಿಕೆಗೆ+ ಡೊಳ್ಳಾಸವೇಕೆ+ ವಿ
ಳಾಸ+ ಕೂಣೆಯವೇನು+ ಹೇಳಾ+ ನೆನಹಿನ್+ಅಭಿರುಚಿಯ
ವಾಸಿಗಳ+ ಪೈಸರವನ್+ಎನ್ನಲಿ
ಸೂಸಬಾರದೆ+ ನಿನ್ನ +ಹರುಷಕೆ
ಪೈಸರವದೇನೆಂದು+ ಬೆಸಗೊಂಡನು+ ಸುಯೋಧನನ

ಅಚ್ಚರಿ:
(೧) ಹೇಳು ಎನ್ನಲು ಬಳಸಿದ ಪದಗಳು – ಸೂಸಬಾರದೆ, ಬೆಸಗೊಂಡು, ಹೇಳಾ

ಪದ್ಯ ೨೯: ಭೀಮನು ಶಿಶುಪಾಲನ ಮಾತಿಗೆ ಹೇಗೆ ಉತ್ತರ ನೀಡಿದನು?

ಬಿಡು ಬಿಡಕಟಾ ಭೀಷ್ಮ ದರ್ಪದಿ
ಕಡು ಜರೆದ ಕಳವಳದ ಕುನ್ನಿಗೆ
ಕುಡಿಸುವೆನು ದಿವ್ಯಾಸ್ತ್ರವಿಶಿಖ ವಿಶೇಷದೌಷಧಿಯ
ತಡೆದು ತನ್ನನು ರಾಜಕಾರ್ಯವ
ಕೆಡಿಸಿದೆಯಲಾ ದಕ್ಷಯಜ್ಞದ
ಮೃಡನ ಮುರುಕವ ಕಾಬೆನೆನುತೊಡೆಮುರುಚಿದನು ಭೀಮ (ಸಭಾ ಪರ್ವ, ೧೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಶಿಶುಪಾಲನ ಮಾತನ್ನು ಕೇಳಿ ಕುಪಿತಗೊಂಡ ಭೀಮನು, ನನ್ನನ್ನು ತಡೆಯಬೇಡಿ ಭೀಷ್ಮ, ದರ್ಪದಿಂದ ಶ್ರೀಕೃಷ್ಣನನ್ನು ನಿಂದಿಸಿದ ಈ ಶಿಶುಪಾಲ ನಾಯಿಗೆ ದಿವ್ಯಾಸ್ತ್ರಗಳ ಔಷಧಿಯನ್ನು ಕುಡಿಸುತ್ತೇನೆ, ನನ್ನನು ತಡೆದು ನೀವು ರಾಜ್ಯಕಾರ್ಯವನ್ನು ಕೆಡಿಸುತ್ತಿದ್ದೀರಿ, ದಕ್ಷಯಜ್ಞವನ್ನು ಮೀರಿಸುವ ರೀತಿ ಈ ಯಜ್ಞವನ್ನು ಹಾಳುಮಾಡುವೆ ಎಂದು ದರ್ಪದಿಂದ ಕೂಗುತ್ತಿರುವ ಶಿಶುಪಾಲನನನ್ನು ನಾನು ಒಮ್ಮೆ ನೋಡಿಕೊಳ್ಳುತ್ತೇನೆ ಎಂದು ಭೀಮನು ನಿಂತನು.

ಅರ್ಥ:
ಬಿಡು: ತೊರೆ; ಅಕಟ: ಅಯ್ಯೋ; ದರ್ಪ: ಅಹಂಕಾರ; ಕಡು: ಬಹಳ, ಹೆಚ್ಚು; ಜರೆ: ಬಯ್ಯು; ಕಳವಳ: ಗೊಂದಲ; ಕುನ್ನಿ: ನಾಯಿ; ಕುಡಿಸು: ಪಾನಮಾಡು; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧ; ವಿಶೇಷ: ಅತಿಶಯ, ವೈಶಿಷ್ಟ್ಯ; ವಿಶಿಖ: ಬಾಣ, ಅಂಬು; ಔಷಧಿ: ಮದ್ದು; ತಡೆ: ನಿಲ್ಲಿಸು; ರಾಜಕಾರ್ಯ: ರಾಜ್ಯದ ಕೆಲಸ; ಕೆಡಿಸು: ಹಾಳುಮಾಡು; ಮೃಡ: ಶಿವ; ಮುರುಕ:ಬಿಂಕ, ಬಿನ್ನಾಣ, ಸೊಕ್ಕು; ಕಾಬ: ನೋಡುವ;ಒಡೆ: ಹೊರಬರು, ಸೀಳು; ಮುರುಚು: ಹಿಂತಿರುಗಿಸು;

ಪದವಿಂಗಡಣೆ:
ಬಿಡು +ಬಿಡ್+ಅಕಟಾ +ಭೀಷ್ಮ +ದರ್ಪದಿ
ಕಡು +ಜರೆದ +ಕಳವಳದ+ ಕುನ್ನಿಗೆ
ಕುಡಿಸುವೆನು+ ದಿವ್ಯಾಸ್ತ್ರ+ವಿಶಿಖ+ ವಿಶೇಷದ್+ಔಷಧಿಯ
ತಡೆದು+ ತನ್ನನು +ರಾಜಕಾರ್ಯವ
ಕೆಡಿಸಿದೆಯಲಾ+ ದಕ್ಷ+ಯಜ್ಞದ
ಮೃಡನ+ ಮುರುಕವ+ ಕಾಬೆನೆನುತ್+ ಒಡೆ+ಮುರುಚಿದನು ಭೀಮ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿಡು ಬಿಡಕಟಾ ಭೀಷ್ಮ
(೨) ಕ ಕಾರದ ಸಾಲು ಪದ – ಕಡು ಜರೆದ ಕಳವಳದ ಕುನ್ನಿಗೆ ಕುಡಿಸುವೆನು
(೩) ಶಿಶುಪಾಲನನ್ನು ಬಯ್ಯುವ ಪರಿ – ಕಳವಳದ ಕುನ್ನಿ

ಪದ್ಯ ೪೮: ಶಲ್ಯನು ಯಾರ ನೆರವಿಗೆ ರಥವನ್ನು ತಿರುಗಿಸಿದನು?

ಕೇಳಿದನು ಕಳವಳವ ಕಿವಿಗೊ
ಟ್ಟಾಲಿಸಿದನೆಲೆ ಕರ್ಣ ಕರ್ಣ ಛ
ಡಾಳ ರವವೇನದು ಸುಯೋಧನ ಸೈನ್ಯಮಧ್ಯದಲಿ
ಖೂಳ ಬಡಿಸಾ ಭೀಮಸೇನನ
ತೋಳುವಲೆಯಲಿ ಸಿಕ್ಕಿದನು ಭೂ
ಪಾಲನಕಟಕಟೆನುತ ತೇಜಿಯ ತಿರುಹಿದನು ಶಲ್ಯ (ಕರ್ಣ ಪರ್ವ, ೧೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ಶಲ್ಯನು ಯುದ್ಧರಂಗದ ಮಧ್ಯೆ ಗೊಂದಲದ ಶಬ್ದವನ್ನು ಕೇಳಿ, ಎಲೈ ಕರ್ಣ ನೀನು ಕಿವಿಗೊಟ್ಟಾಲಿಸು, ಯುದ್ಧ ಮಧ್ಯದಲ್ಲಿ ಕರ್ಣ ಭೇದಕವಾದ ಹುಯಿಲು ಕೇಳುತ್ತಿದೆಯಲ್ಲಾ ಏನದು ಎನ್ನಲು, ದುರ್ಯೋಧನನು ಭೀಮನ ತೋಳಿನ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ, ಎಲೋ ಖೂಳ ಅವನನ್ನು ಬಿಡಿಸು ಎಂದು ಕರ್ಣನ ರಥದ ಕುದುರೆಗಳನ್ನು ಅತ್ತ ತಿರುಗಿಸಿದನು.

ಅರ್ಥ:
ಕೇಳು: ಆಲಿಸು; ಕಳವಳ: ಚಿಂತೆ; ಕಿವಿ: ಶ್ರವಣಸಾಧನವಾದ ಅವಯವ; ಆಲಿಸು: ಕೇಳು; ಛಡಾಳ: ಹೆಚ್ಚಳ, ಆಧಿಕ್ಯ; ರವ: ಶಬ್ದ; ಸೈನ್ಯ: ದಳ; ಮಧ್ಯ: ನಡುವೆ; ಖೂಳ: ದುಷ್ಟ; ಬಿಡಿಸು: ಬಂಧಮುಕ್ತ; ತೋಳು: ಬಾಹು; ವಲೆ: ಬಲೆ, ಬಂಧನ; ಸಿಕ್ಕು: ಬಂಧನಕ್ಕೊಳಗಾಗು, ಸೆರೆಯಾಗು; ಭೂಪಾಲ: ರಾಜ; ಅಕಟಕಟ: ಅಯ್ಯೋ; ತೇಜಿ: ಕುದುರೆ; ತಿರುಹು: ದಿಕ್ಕನ್ನು ಬದಲಿಸು;

ಪದವಿಂಗಡಣೆ:
ಕೇಳಿದನು +ಕಳವಳವ+ ಕಿವಿಗೊಟ್
ಆಲಿಸಿದನ್+ಎಲೆ +ಕರ್ಣ +ಕರ್ಣ +ಛ
ಡಾಳ +ರವವೇನದು +ಸುಯೋಧನ +ಸೈನ್ಯ+ಮಧ್ಯದಲಿ
ಖೂಳ +ಬಡಿಸಾ +ಭೀಮಸೇನನ
ತೋಳುವಲೆಯಲಿ +ಸಿಕ್ಕಿದನು +ಭೂ
ಪಾಲನ್+ಅಕಟಕಟ್+ಎನುತ +ತೇಜಿಯ +ತಿರುಹಿದನು +ಶಲ್ಯ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕೇಳಿದನು ಕಳವಳವ ಕಿವಿಗೊಟ್ಟಾಲಿಸಿದನೆಲೆ ಕರ್ಣ ಕರ್ಣ

ಪದ್ಯ ೨೩: ಕರ್ಣನನ್ನು ಯಾರು ಅಡ್ಡಗಟ್ಟಿದರು?

ಕಾಲಯಮನೋ ಕರ್ಣನೋ ಭೂ
ಪಾಲಕನ ಬೆಂಬತ್ತಿದನು ಪಾಂ
ಚಾಲೆಯೋಲೆಯ ಕಾವರಿಲ್ಲಾ ಎನುತ ಬಲನೊದರೆ
ಕೇಳಿದನು ಕಳವಳವನೀ ರಿಪು
ಜಾಲವನು ಜರೆದಡ್ಡಹಾಯ್ದನು
ಗಾಳಿಗುದಿಸಿದ ವೀರನದ್ಭುತ ಸಿಂಹನಾದದಲಿ (ಕರ್ಣ ಪರ್ವ, ೧೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣನು ಬರುವ ಬಗೆಯನ್ನು ಕಂಡ ಪಾಂಡವರ ಸೈನ್ಯವು ಇವನು ಕರ್ಣನೋ, ಪ್ರಳಯಕಾಲದ ಯಮನೋ? ಧರ್ಮಜನನ್ನು ಬೆನ್ನು ಹತ್ತಿದ್ದಾನೆ. ಅರಸನನ್ನು ಕಾಪಾದುವವರೇ ಇಲ್ಲ ಎಂದು ಹೆದರಿಕೂಗಿಕೂಳ್ಳಲು ಭೀಮನು ಈ ಸದ್ದನ್ನು ಕೇಳಿ ಶತ್ರುಗಳನ್ನು ಜರೆದು ಅದ್ಭುತವಾದ ಸಿಂಹನಾದವನ್ನು ಮಾಡುತ್ತಾ ಕರ್ಣನನ್ನು ಅಡ್ಡಗಟ್ಟಿದನು.

ಅರ್ಥ:
ಕಾಲ: ಪ್ರಳಯಕಾಲ, ಅಂತ್ಯದ ಸಮಯ; ಯಮ: ಮೃತ್ಯುದೇವತೆ; ಭೂಪಾಲಕ: ರಾಜ, ನೃಪ; ಬೆಂಬತ್ತಿ: ಹಿಂದೆ; ಪಾಂಚಾಲೆ: ದ್ರೌಪದಿ; ಓಲೆ: ಕಿವಿಯ ಆಭರಣ; ಕಾವ: ರಕ್ಷಿಸುವ; ಬಲ: ಸೈನ್ಯ; ಒದರು: ಹೇಳು, ಅರಚು; ಕೇಳು: ಆಲಿಸು; ಕಳವಳ: ಆತಂಕ; ರಿಪು: ವೈರಿ; ಜಾಲ:ಬಲೆ; ಜರೆ: ಬಯ್ಯು, ಹೀಯಾಳಿಸು; ಅಡ್ಡಹಾಕು: ತಡೆ; ಹಾಯ್ದು: ಬಂದು; ಗಾಳಿ: ವಾಯು; ಉದಿಸು: ಹುಟ್ಟು; ವೀರ: ಶೂರ, ಪರಾಕ್ರಮಿ; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ;

ಪದವಿಂಗಡಣೆ:
ಕಾಲಯಮನೋ +ಕರ್ಣನೋ +ಭೂ
ಪಾಲಕನ+ ಬೆಂಬತ್ತಿದನು +ಪಾಂ
ಚಾಲೆ+ಓಲೆಯ +ಕಾವರಿಲ್ಲಾ+ ಎನುತ+ ಬಲನ್+ಒದರೆ
ಕೇಳಿದನು +ಕಳವಳವನ್+ಈ+ ರಿಪು
ಜಾಲವನು+ ಜರೆದ್+ಅಡ್ಡ+ಹಾಯ್ದನು
ಗಾಳಿಗ್+ಉದಿಸಿದ +ವೀರನ್+ಅದ್ಭುತ +ಸಿಂಹನಾದದಲಿ

ಅಚ್ಚರಿ:
(೧) ಭೀಮನನ್ನು ಗಾಳಿಗುದಿಸಿದ ಎಂದು ಕರೆದಿರುವುದು
(೨) ಧರ್ಮರಾಯನಿಗೆ ರಕ್ಷಣೆಕೊಡುವವರಿಲ್ಲ ಎಂದು ಹೇಳಲು – ಪಾಂಚಾಲೆಯೋಲೆಯ ಕಾವರಿಲ್ಲಾ ಎಂದು ಕರೆದಿರುವುದು

ಪದ್ಯ ೪೦: ಕೌರವ ಸೇನೆಯಲ್ಲಿ ಯಾವ ಗೊಂದಲವಾಯಿತು?

ಶಿವ ಶಿವಾ ಕರ್ಣಾತ್ಮಜನೆ ಮಡಿ
ದವನು ದಳಪತಿ ಮಡಿದನೋ ಕೌ
ರವನ ಕೇಡೋ ಹಾಯೆನುತ ಕುರುಸೇನೆ ಕಳವಳಿಸೆ
ಕವಿದರಶ್ವತ್ಥಾಮ ಕೃಪ ಕೌ
ರವ ಶಕುನಿ ದುಶ್ಯಾಸನಾದಿಗ
ಳವಗಡಿಸಲನಿಬರನು ತೊಲಗಿಸಿ ಕರ್ಣನಿದಿರಾದ (ಕರ್ಣ ಪರ್ವ, ೧೦ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೌರವಸೇನೆಯು ಶಿವ ಶಿವಾ ಕರ್ಣನ ಮಗನು ಸತ್ತನೋ ಅಥವ ಕರ್ಣನೇ ಮಡಿದನೋ? ದುರ್ಯೋಧನನಿಗೆ ಏನೋ ಕೇಡುಂಟಾಗಿದೆ ಎಂದು ಕಳವಳಿಸಿತು. ಆಗ ಅಶ್ವತ್ಥಾಮ, ಕೃಪ, ಕೌರವ, ಶಕುನಿ, ದುಶ್ಯಾಸನಾದಿಗಳು ಭೀಮನನ್ನು ಮುತ್ತಿ ಮುನ್ನುಗಲು, ಕರ್ಣನು ಅವರನ್ನು ಆಚೆಗೆ ತಳ್ಳಿ ತಾನೇ ಭೀಮನ ಎದುರು ನಿಂತನು.

ಅರ್ಥ:
ಆತ್ಮಜ: ಮಗ; ಮಡಿ: ಸಾವು, ಮರಣ; ದಳಪತಿ: ಸೇನಾಧಿಪತಿ; ಕೇಡು: ಕೆಟ್ಟದ್ದು; ಸೇನೆ: ಸೈನ್ಯ; ಕಳವಳ: ಗೊಂದಲ; ಕವಿ: ಆವರಿಸು; ಆದಿ: ಮುಂತಾದ; ಅವಗಡಿಸು: ಅವಸರಗೊಳ್ಳು; ಇನಿಬರು: ಇಷ್ಟುಜನ; ತೊಲಗು: ಹೊರಹಾಕು; ಇದಿರು: ಎದುರು;

ಪದವಿಂಗಡಣೆ:
ಶಿವ +ಶಿವಾ +ಕರ್ಣಾತ್ಮಜನೆ+ ಮಡಿ
ದವನು+ ದಳಪತಿ+ ಮಡಿದನೋ +ಕೌ
ರವನ +ಕೇಡೋ +ಹಾ+ಎನುತ+ ಕುರುಸೇನೆ +ಕಳವಳಿಸೆ
ಕವಿದರ್+ಅಶ್ವತ್ಥಾಮ +ಕೃಪ +ಕೌ
ರವ +ಶಕುನಿ +ದುಶ್ಯಾಸನಾದಿಗಳ್
ಅವಗಡಿಸಲ್+ಅನಿಬರನು +ತೊಲಗಿಸಿ +ಕರ್ಣನ್+ಇದಿರಾದ

ಅಚ್ಚರಿ:
(೧) ಕಳವಳವನ್ನು ಸೂಚಿಸುವ ಪದ – ಶಿವ ಶಿವಾ

ಪದ್ಯ ೩: ಯಾರಿಗೆ ನಿದ್ರೆ ಬರುವುದಿಲ್ಲ?

ಬಲವಿಹೀನನು ಬಲ್ಲಿದನ ಕೂ
ಡೊಲಿದು ತೊಡಕಲವಂಗೆ ಕಾಮದ
ಕಳವಳದೊಳಿರ್ದಂಗೆ ಧನದಳಲಿನೊಳು ಮರುಗುವಗೆ
ಕಳವಿನೊಳು ಕುದಿವಂಗೆ ದೈವದ
ನೆಲೆಯನರಿಯದವಂಗೆ ದಿಟವಿದು
ತಿಳಿಯೆ ಬಾರದು ನಿದ್ರೆಯೆಂದನು ಭೂಪತಿಗೆ ವಿದುರ (ಉದ್ಯೋಗ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ವಿದುರನು ಧೃತರಾಷ್ಟ್ರನನ್ನು ಸಂತೈಸುತ್ತಾ, ಬಲವಂತನೊಡನೆ ವಿರೋಧವನ್ನು ಕಟ್ಟಿಕೊಂಡ ದುರ್ಬಲನಿಗೆ, ಕಾಮದಿಂದ ಕಳವಳಿಸುವವನಿಗೆ, ಹಣವನ್ನು ಕಳೆದುಕೊಂಡು ದುಃಖಿಸುವವನಿಗೆ, ಕಳ್ಳತನ ಮಾಡಲು ಹವಣಿಸುತ್ತಿರುವವನಿಗೆ, ದೈವದ ಸ್ವರೂಪವನ್ನರಿಯದವನಿಗೆ – ಇವರಾರಿಗೂ ನಿದ್ರೆ ಬರುವುದಿಲ್ಲ.

ಅರ್ಥ:
ಬಲ: ಶಕ್ತಿ; ಬಲವಿಹೀನ: ದುರ್ಬಲ; ಬಲ್ಲಿದ: ಬಲಿಷ್ಠನಾದವನು; ಕೂಡ:ಜೊತೆ; ಒಲಿ: ಒಪ್ಪು; ತೊಡಕು:ಅಡಚಣೆ, ಅಡ್ಡಿ; ಕಳವಳ:ಗೊಂದಲ; ಕಾಮ: ಆಸೆ; ಧನ: ಐಶ್ವರ್ಯ; ಮರುಗು:ತಳಮಳ, ಸಂಕಟ; ಅಳಲು: ವ್ಯಥೆ; ಕುದಿ: ಸಂಕಟ, ಸಂತಾಪ, ಕೆರಳು; ದೈವ: ದೇವತೆ;ನೆಲೆ: ಸ್ಥಾನ; ಅರಿ: ತಿಳಿ; ದಿಟ: ಸತ್ಯ;

ಪದವಿಂಗಡಣೆ:
ಬಲವಿಹೀನನು +ಬಲ್ಲಿದನ +ಕೂ
ಡೊಲಿದು +ತೊಡಕಲವಂಗೆ+ ಕಾಮದ
ಕಳವಳದೊಳಿರ್ದಂಗೆ +ಧನದಳಲಿನೊಳು +ಮರುಗುವಗೆ
ಕಳವಿನೊಳು+ ಕುದಿವಂಗೆ+ ದೈವದ
ನೆಲೆಯನ್+ಅರಿಯದವಂಗೆ +ದಿಟವಿದು
ತಿಳಿಯೆ +ಬಾರದು +ನಿದ್ರೆಯೆಂದನು +ಭೂಪತಿಗೆ +ವಿದುರ

ಅಚ್ಚರಿ:
(೧) ಮರುಗು, ಕಳವಳ – ಸಮನಾರ್ಥಕ ಪದ
(೨) ೫ ರೀತಿಯ ಜನರಿಗೆ ನಿದ್ರೆ ಕಷ್ಟ ಎಂದು ವಿದುರ ಹೇಳಿರುವುದು
(೩) ಕಳವಿನೊಳು ಕುದಿವಂಗೆ, ಬಲವಿಹೀನನು ಬಲ್ಲಿದನ – ಜೋಡಿ ಪದಗಳು

ಪದ್ಯ ೨೩: ಭೀಮನು ರಾಜಧಾನಿಗೆ ಹೇಗೆ ಮರುಳಿದನು?

ಬಳಿಕ ಕರದಲಿ ರೋಮವಿಲ್ಲದೆ
ಕಳವಳಿಸುತತಿವೇಗದಲಿ ವೆ
ಗ್ಗಳಿಸಿ ಬರುತಿರಲವನಿಪನ ರಾಜ್ಯವ ನಿರೀಕ್ಷಿಸುತ
ಅಳುಕದಾಗಲೆ ಪೊಕ್ಕು ನಗರಾ
ವಳಿಯ ಗ್ರಾಮಂಗಳ ನಿರೀಕ್ಷಿಸಿ
ಬಳಿಕ ದೇವನ ಚರಣಯುಗಳವ ನೆನೆಯುತೈತಂದ (ಸಭಾ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಹೀಗೆ ಹಲವಾರು ಬಾರಿ ತನ್ನ ಬಳಿಯಿದ್ದ ರೋಮವನ್ನು ಪ್ರಯೋಗಿಸಿದ ಬಳಿಕ ಆವನ ಬಳಿ ರೋಮವೆಲ್ಲವು ಮುಗಿದಿದ್ದವು. ಕಳವಳಗೊಂಡು ಅತಿವೇಗದಿಂದ ಬರುತ್ತಾ ಧರ್ಮರಾಯನ ರಾಜ್ಯವನ್ನು ಕಂಡನು. ಅದನ್ನು ಹೊಕ್ಕು ಅನೇಕ ನಗರಗಳನ್ನೂ ಗ್ರಾಮಗಳನ್ನೂ ನೋಡುತ್ತಾ ಪರಮಾತ್ಮನ ಪಾದಗಳನ್ನು ನೆನೆಯುತ್ತಾ ಭೀಮನು ಬಂದನು.

ಅರ್ಥ:
ಬಳಿಕ: ನಂತರ; ಕರ: ಹಸ್ತ; ರೋಮ: ಕೂದಲು; ಕಳವಳ: ತಳಮಳ; ಅತಿ: ತುಂಬ; ವೇಗ: ಜೋರು; ವೆಗ್ಗಳಿಸು: ಅಧಿಕವಾಗು; ಬರುತಿರಲು: ಆಗಮಿಸಲು; ಅವನಿಪ: ರಾಜ; ರಾಜ್ಯ: ದೇಶ; ನಿರೀಕ್ಷಿಸು: ನೋಡುವುದು; ಅಳುಕು: ಹೆದರಿಕೆ; ಪೊಕ್ಕು: ಹೊಕ್ಕು; ನಗರ: ಪಟ್ಟಣ; ಆವಳಿ: ಸಾಲು; ಗ್ರಾಮ: ಹಳ್ಳಿ; ಬಳಿಕ: ನಂತರ; ಚರಣ: ಪಾದ; ಯುಗಳ: ಎರಡು; ನೆನೆ: ಜ್ಞಾಪಿಸು; ದೇವ: ಭಗವಂತ;

ಪದವಿಂಗಡಣೆ:
ಬಳಿಕ +ಕರದಲಿ+ ರೋಮ+ವಿಲ್ಲದೆ
ಕಳವಳಿಸುತ+ಅತಿವೇಗದಲಿ+ ವೆ
ಗ್ಗಳಿಸಿ +ಬರುತಿರಲ್+ಅವನಿಪನ+ ರಾಜ್ಯವ +ನಿರೀಕ್ಷಿಸುತ
ಅಳುಕದಾಗಲೆ+ ಪೊಕ್ಕು+ ನಗರಾ
ವಳಿಯ+ ಗ್ರಾಮಂಗಳ +ನಿರೀಕ್ಷಿಸಿ
ಬಳಿಕ+ ದೇವನ+ ಚರಣಯುಗಳವ+ ನೆನೆಯುತ್+ಐತಂದ

ಅಚ್ಚರಿ:
(೧) ನಿರೀಕ್ಷಿಸು – ೩, ೫ ಸಾಲಿನ ಕೊನೆ ಪದ
(೨) ಕಳವಳ, ಅಳುಕು – ಸಾಮ್ಯಾರ್ಥ ಕೊಡುವ ಪದ

ಪದ್ಯ ೩: ಅಭಿಮನ್ಯುವಿನ ಪರಾಕ್ರಮ ಹೇಗಿತ್ತು?

ಕಲಿತನಕೆ ನೆಲೆಯಾಯ್ತು ಭುಜದ
ಗ್ಗಳಿಕೆಗಾಸ್ಪದವಾಯ್ತು ನಿಜ ಚಾ
ಪಳವ ಬಿಸುಟಳು ವೀರಸಿರಿ ವಿಕ್ರಮದ ಸಿರಿಸಹಿತ
ಹಳಿವು ಕಳವಳ ಭೀತಿ ಭಂಗ
ಸ್ಖಲನ ಕಂಪನವೆಂಬವಾತನ
ನೆಳಲ ಸೀಮೆಯ ಸೋಕಲಮ್ಮವು ಭೂಪ ಕೇಳೆಂದ (ಆದಿ ಪರ್ವ, ೨೦ ಸಂಧಿ, ೩ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಅಭಿಮನ್ಯನು ವೀರತನಕ್ಕೆ, ಪರಾಕ್ರಮಕ್ಕೆ, ಭುಜಬಲಕ್ಕೆ ನೆಲೆಯಾದನು, ಇದನ್ನು ನೋಡಿದ ವೀರಸಿರಿ, ವಿಕ್ರಮಸಿರಿಯರು ಅವರ ಚಪಲತೆಯನ್ನು ಬಿಟ್ಟು ಅವನಲ್ಲೇ ನೆಲೆಸಿದರು. ತೊಂದರೆ, ಆತಂಕ, ಭಯ, ಸೋಲು, ನಡುಕ, ಪತನಗಳು ಅವನ ನೆರಳಿನ ಹತ್ತಿರವೂ ಬರುತ್ತಿರಲಿಲ್ಲ.

ಅರ್ಥ:
ಕಲಿ: ವೀರ; ನೆಲೆ: ನಿವಾಸ; ಭುಜ: ಬಾಹು; ಅಗ್ಗಳಿಕೆ: ಶ್ರೇಷ್ಠತೆ, ಹೆಚ್ಚುಗಾರಿಕೆ; ಆಸ್ಪದ: ನೆಲೆ, ಅಶ್ರಯ; ನಿಜ: ಸಹಜ, ಹುಟ್ಟುಗುಣ, ನೈಜ; ಚಾಪಳ: ಚಪಲ, ಚಂಚಲ ಸ್ವಭಾವ; ಬಿಸುಟು: ಎಸೆ, ಬಿಸಾಕು; ವೀರ: ಪರಾಕ್ರಮಿ; ಸಿರಿ: ಐಶ್ವರ್ಯ, ಶ್ರೇಷ್ಠ; ವಿಕ್ರಮ: ಪರಾಕ್ರಮಿ; ಸಹಿತ: ಜೊತೆ; ಹಳಿವು: ತೊಂದರೆ, ಕೇಡು; ಕಳವಳ: ತಳಮಳ, ಗೊಂದಲ; ಭೀತಿ: ಹೆದರಿಕೆ; ಭಂಗ: ತೊಂದರೆ; ಸ್ಖಲನ:ಕಳಚಿಬೀಳುವಿಕೆ; ಕಂಪನ: ನಡುಕ; ನೆಳಲ: ನೆರಳು; ಸೀಮೆ: ಚೌಕಟ್ಟು; ಸೋಂಕು: ಸ್ಪರ್ಶ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕಲಿತನಕೆ +ನೆಲೆಯಾಯ್ತು+ ಭುಜದ
ಅಗ್ಗಳಿಕೆಗ್+ಆಸ್ಪದವಾಯ್ತು +ನಿಜ+ ಚಾ
ಪಳವ +ಬಿಸುಟಳು +ವೀರಸಿರಿ +ವಿಕ್ರಮದ +ಸಿರಿಸಹಿತ
ಹಳಿವು+ ಕಳವಳ+ ಭೀತಿ+ ಭಂಗ
ಸ್ಖಲನ+ ಕಂಪನ+ವೆಂಬವ್+ಆತನ
ನೆಳಲ +ಸೀಮೆಯ +ಸೋಕಲಮ್ಮವು+ ಭೂಪ +ಕೇಳೆಂದ

ಅಚ್ಚರಿ:
(೧) ವೀರಸಿರಿ, ವಿಕ್ರಮದ ಸಿರಿಸಹಿತ – ಸಿರಿ ಪದದ ಬಳಕೆ
(೨) ನಕಾರಾತ್ಮಕ ಪದಗಳು – ಹಳಿವು, ಕಳವಳ, ಭೀತಿ, ಭಂಗಸ್ಖಲನ, ಕಂಪನ