ಪದ್ಯ ೧೪: ಕೌರವನು ಯಾರಿಗೆ ಯುದ್ಧವನ್ನು ಚೆನ್ನಾಗಿ ನೋಡಿರೆಂದನು?

ಚಿತ್ತವಿಸು ಬಲರಾಮ ರಿಪುಗಳ
ತೆತ್ತಿಗನೆ ಲೇಸಾಗಿ ನೋದು ನೃ
ಪೋತ್ತಮರು ಪಾಂಚಾಲ ಸೃಂಜಯ ಸೋಮಕಾದಿಗಳು
ಇತ್ತಲಭಿಮುಖವಾಗಿ ರಥಿಕರು
ಮತ್ತ ಗಜದಾರೋಹಕರು ರಾ
ವುತ್ತರೀಕ್ಷಿಸಿ ನಮ್ಮ ಸಮರವನೆಂದನವನೀಶ (ಗದಾ ಪರ್ವ, ೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ದುರ್ಯೋಧನನು ಮಾತನಾಡುತ್ತಾ, ಬಲರಾಮ ಗಮನವಿಟ್ಟು ನೋದು, ಶತ್ರುಗಳ ಪೋಷಕನೇ ಆದ ಶ್ರೀಕೃಷ್ಣನೇ ಚೆನ್ನಾಗಿ ನೋಡು, ಪಾಂಚಾಲ, ಸೃಂಜಯ, ಸೋಮಕಾದಿ ರಾಜರೇ ನೋಡಿರಿ, ರಥಿಕರು, ಜೋದರು, ರಾವುತರು ನಮ್ಮ ಕಾಳಗದ ಕಣಕ್ಕೆ ಅಭಿಮುಖರಾಗಿ ನಮ್ಮ ಕಾಳಗವನ್ನು ನೋಡಿರಿ ಎಂದು ಹೇಳಿದನು.

ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ರಿಪು: ವೈರಿ; ತೆತ್ತು: ಕುಂದಣಿಸು; ಲೇಸು: ಒಳಿತು; ನೋಡು: ವೀಕ್ಷಿಸು; ನೃಪ: ರಾಜ; ಉತ್ತಮ: ಶ್ರೇಷ್ಠ; ಆದಿ: ಮುಂತಾದ; ಅಭಿಮುಖ: ಎದುರು; ರಥಿಕ: ರಥಿ; ಮತ್ತ: ಅಮಲು; ಗಜ: ಆನೆ; ಆರೋಹಕ: ಮೇಲೇರು; ರಾವುತ: ಕುದುರೆ ಸವಾರ; ಈಕ್ಷಿಸು: ನೋಡು; ಸಮರ: ಯುದ್ಧ; ಅವನೀಶ: ರಾಜ;

ಪದವಿಂಗಡಣೆ:
ಚಿತ್ತವಿಸು +ಬಲರಾಮ +ರಿಪುಗಳ
ತೆತ್ತಿಗನೆ+ ಲೇಸಾಗಿ +ನೋಡು+ ನೃ
ಪೋತ್ತಮರು +ಪಾಂಚಾಲ +ಸೃಂಜಯ +ಸೋಮಕಾದಿಗಳು
ಇತ್ತಲ್+ಅಭಿಮುಖವಾಗಿ +ರಥಿಕರು
ಮತ್ತ+ ಗಜದ್+ಆರೋಹಕರು +ರಾ
ವುತ್ತರ್+ಈಕ್ಷಿಸಿ+ ನಮ್ಮ+ ಸಮರವನೆಂದನ್+ಅವನೀಶ

ಅಚ್ಚರಿ:
(೧) ಕೃಷ್ಣನನ್ನು ರಿಪುಗಳ ತೆತ್ತಿಗನೆ ಎಂದು ಕರೆದಿರುವುದು

ಪದ್ಯ ೫೮: ಭೀಮನು ಆನೆಗಳ ಮೇಲೆ ಹೇಗೆ ಆಕ್ರಮಣ ಮಾಡಿದನು?

ಗುಳವನುಗಿದಾರೋಹಕರ ಮುಂ
ದಲೆಯ ಸೆಳೆದೊಡಮೆಟ್ಟಿದನು ಮಂ
ಡಳಿಸಿದೊಡ್ಡಿನ ಮೇಲೆ ಹಾಯ್ದನು ಹೊಯ್ದನುರವಣಿಸಿ
ಕಳಚಿದನು ದಾಡೆಗಳ ಭರಿಕೈ
ಗಳನು ತುಂಡಿಸಿ ವಾಲಧಿಯ ಬರ
ಸೆಳೆದು ಕೊಡಹಿದನಾನೆಗಳ ನಾನಾವಿಧಾನದಲಿ (ಗದಾ ಪರ್ವ, ೧ ಸಂಧಿ, ೫೮ ಪದ್ಯ)

ತಾತ್ಪರ್ಯ:
ಆನೆಯ ಕವಚಗಳನ್ನು ಕಿತ್ತು, ಜೋದರ ಮುಂದಲೆಗಳನ್ನು ಎಳೆದು ಅವರನ್ನು ಕಾಲಿನಿಂದ ಮೆಟ್ಟಿದನು. ಗುಂಪುಗುಂಪಾಗಿ ಬಂದ ಸೈನ್ಯದ ಮೇಲೆ ಹಾಯ್ದು ಹೊಯ್ದನು. ದಾಡೆಗಳನ್ನು ಕಿತ್ತು ಸೊಂಡಿಲುಗಳನ್ನು ಕಡಿದು, ಬಾಲವನ್ನು ಸೆಳೆದು ಆನೆಗಳನ್ನು ಕೊಡವಿ ಎಸೆದನು.

ಅರ್ಥ:
ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಉಗಿ: ಹೊರಹಾಕು; ಆರೋಹಕ: ಆನೆ, ಕುದುರೆ ಮೇಲೆ ಕೂತು ಹೋರಾಡುವ ಸೈನಿಕ; ಮುಂದಲೆ: ತಲೆಯ ಮುಂಭಾಗ; ಸೆಳೆ: ಜಗ್ಗು, ಎಳೆ; ಮೆಟ್ಟು: ತುಳಿ; ಒಡ್ಡು: ರಾಶಿ, ಸಮೂಹ; ಹಾಯ್ದು: ಹೊಡೆ, ಮೇಲೆಬೀಳು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕಳಚು: ಬೇರ್ಪಡಿಸು; ದಾಡೆ: ದಂತ; ಭರಿಕೈ: ಸೊಂಡಿಲು; ತುಂಡು: ಚೂರು; ವಾಲಧಿ: ಬಾಲ; ಬರ: ಹತ್ತಿರ; ಸೆಳೆ: ಹಿಡಿ; ಕೊಡಹು: ತಳ್ಳು; ಆನೆ: ಕರಿ; ವಿಧಾನ: ರೀತಿ;

ಪದವಿಂಗಡಣೆ:
ಗುಳವನ್+ಉಗಿದ್+ಆರೋಹಕರ+ ಮುಂ
ದಲೆಯ +ಸೆಳೆದೊಡ+ಮೆಟ್ಟಿದನು +ಮಂ
ಡಳಿಸಿದ್+ಒಡ್ಡಿನ +ಮೇಲೆ +ಹಾಯ್ದನು +ಹೊಯ್ದನ್+ಉರವಣಿಸಿ
ಕಳಚಿದನು +ದಾಡೆಗಳ +ಭರಿಕೈ
ಗಳನು +ತುಂಡಿಸಿ +ವಾಲಧಿಯ +ಬರ
ಸೆಳೆದು +ಕೊಡಹಿದನ್+ಆನೆಗಳ +ನಾನಾ+ವಿಧಾನದಲಿ

ಅಚ್ಚರಿ:
(೧) ಆನೆಯನ್ನು ಹೊರಹಾಕಿದ ಪರಿ – ಕಳಚಿದನು ದಾಡೆಗಳ ಭರಿಕೈಗಳನು ತುಂಡಿಸಿ ವಾಲಧಿಯ ಬರ
ಸೆಳೆದು ಕೊಡಹಿದನಾನೆಗಳ ನಾನಾವಿಧಾನದಲಿ

ಪದ್ಯ ೫೭: ಆನೆಗಳ ಸ್ಥಿತಿ ಹೇಗಾಯಿತು?

ಒರಲಿ ತಿವಿದನು ಕರಿಯ ಬರಿಯೆಲು
ಮುರಿಯಲೊದೆದನು ಸದೆದು ದಾಡೆಯ
ತಿರುಹಿ ಕಿತ್ತನು ಬಿತ್ತಿದನು ಬದುವಿನಲಿ ಬಲುಗದೆಯ
ಜರೆದನಾರೋಹಕರ ತಲೆಗಳ
ತರಿದು ಬಿಸುಟನು ಗಜಘಟೆಯ ಥ
ಟ್ಟೊರಗಿದವು ದಡಿಸಹಿತ ನವರುಧಿರಾಂಬುಪೂರದಲಿ (ಗದಾ ಪರ್ವ, ೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಗರ್ಜಿಸಿ ಆನೆಗಳನ್ನು ತಿವಿದು ಎಲುಬುಗಳು ಮುರಿಯುವಂತೆ ಒದೆದು, ನಾಶಮಾಡಿ ದಂತಗಳನ್ನು ಕಿತ್ತು, ಕುಂಭಸ್ಥಳದಲ್ಲಿ ಗದೆಯನ್ನೂರಿದನು. ಆರೋಹಕರನ್ನು ಜರೆದು ತಲೆಗಳನ್ನು ಕತ್ತರಿಸಿ ಎಸೆದನು. ಆನೆಗಳ ಹಿಂಡು ತಮ್ಮ ದಡಿಗಳೊಡನೆ ರಕ್ತದಲ್ಲಿ ಮುಳುಗಿದವು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ತಿವಿ: ಚುಚ್ಚು; ಕರಿ: ಆನೆ; ಬರಿ: ಪಕ್ಕ, ಬದಿ; ಎಲು: ಎಲುಬು, ಮೂಳೆ; ಮುರಿ: ಕತ್ತರಿಸು, ಸೀಳು; ಒದೆ: ನೂಕು; ಸದೆ: ನಾಶ, ಕುಟ್ಟು; ದಾಡೆ: ದಂತ; ತಿರುಹು: ತಿರುಗಿಸು; ಕಿತ್ತು: ಕೀಳು; ಬಿತ್ತು: ಉಂಟುಮಾಡು; ಬದುವು: ಹೊಲದ ಅಂಚು, ತೆವರು; ಬಲುಗದೆ: ದೊಡ್ಡ ಗದೆ; ಜರೆ: ಕಳಚಿಬೀಳು; ಆರೋಹಕ: ಸವಾರ, ಆನೆ, ರಥ ಕುದುರೆ ಮೇಲೆ ಕೂತು ಯುದ್ಧ ಮಾಡುವವ; ತಲೆ: ಶಿರ; ತರಿ: ಸೀಳು; ಬಿಸುಟು: ಹೊರಹಾಕು; ಗಜಘಟೆ: ಗುಂಪು; ಥಟ್ಟು: ಗುಂಪು; ಒರಗು: ಕೆಳಕ್ಕೆ ಬಾಗು; ದಡಿ: ಕೋಲು, ಬಡಿಗೆ; ಸಹಿತ: ಜೊತೆ; ನವ: ಹೊಸ; ರುಧಿರ: ರಕ್ತ, ನೆತ್ತರು; ಅಂಬು: ನೀರು; ಪೂರ: ತುಂಬು, ಪೂರ್ತಿ;

ಪದವಿಂಗಡಣೆ:
ಒರಲಿ +ತಿವಿದನು +ಕರಿಯ +ಬರಿ+ಎಲು
ಮುರಿಯಲ್+ಒದೆದನು +ಸದೆದು +ದಾಡೆಯ
ತಿರುಹಿ+ ಕಿತ್ತನು +ಬಿತ್ತಿದನು +ಬದುವಿನಲಿ +ಬಲುಗದೆಯ
ಜರೆದನ್+ಆರೋಹಕರ +ತಲೆಗಳ
ತರಿದು+ ಬಿಸುಟನು +ಗಜಘಟೆಯ +ಥ
ಟ್ಟೊರಗಿದವು +ದಡಿಸಹಿತ +ನವರುಧಿರ+ಅಂಬುಪೂರದಲಿ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿತ್ತಿದನು ಬದುವಿನಲಿ ಬಲುಗದೆಯ

ಪದ್ಯ ೫೪: ಭೀಮನ ಆಕ್ರಮಣ ಹೇಗಿತ್ತು?

ಚೆಲ್ಲಿದವು ಗಜಯೂಥವಪ್ರತಿ
ಮಲ್ಲ ಭೀಮನ ಗದೆಯ ಘಾತಿಯ
ಘಲ್ಲಣೆಗೆ ಕಂಠಣಿಸಿದವು ಟೆಂಠಣಿಸುವಾನೆಗಳು
ಸೆಲ್ಲೆಹದ ಮಳೆಗರೆದು ಭೀಮನ
ಘಲ್ಲಿಸಿದರಾರೋಹಕರು ಬಲು
ಬಿಲ್ಲ ಜಂತ್ರದ ನಾಳಿಯಂಬಿನ ಸರಳ ಸಾರದಲಿ (ಗದಾ ಪರ್ವ, ೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಆನೆಗಳ ಸೇನೆಯು ಅಪ್ರತಿಮಲ್ಲ ಭೀಮನ ಗದೆಯ ಹೊಡೆತಕ್ಕೆ ಚದುರಿ ಓಡಿದವು. ಜೋದರು ಶಲ್ಯ, ನಾಳಿಯಂಬುಗಳನ್ನು ಬಿಟ್ಟು ಅವನನ್ನು ಪೀಡಿಸಿದರು.

ಅರ್ಥ:
ಚೆಲ್ಲು: ಹರಡು; ಗಜ: ಆನೆ; ಯೂಥ: ಗುಂಪು, ಹಿಂಡು; ಪ್ರತಿಮಲ್ಲ: ಎದುರಾಳಿ ವೀರ; ಗದೆ: ಮುದ್ಗರ; ಘಾತಿ: ಹೊಡೆತ; ಘಲ್ಲಣೆ: ಘಲ್ ಘಲ್ ಎಂಬ ಶಬ್ದ; ಕಂಟಿಸು: ಬಂಧಿಸು; ಟೆಂಠಣಿಸು: ನಡುಗು, ಕಂಪಿಸು; ಸೆಲ್ಲೆಹ: ಈಟಿ, ಭರ್ಜಿ; ಮಳೆ: ವರ್ಷ; ಘಲ್ಲಿಸು: ಪೀಡಿಸು; ಆರೋಹಕ: ಸವಾರ; ಜಂತ್ರ: ಯಂತ್ರ; ನಾಳಿ: ಒಂದು ಅಳತೆಯ ಪ್ರಮಾಣ; ಅಂಬು: ಬಾಣ; ಸರಳ: ಬಾಣ; ಸಾರ: ತಿರುಳು, ಗುಣ;

ಪದವಿಂಗಡಣೆ:
ಚೆಲ್ಲಿದವು +ಗಜಯೂಥವ್+ಅಪ್ರತಿ
ಮಲ್ಲ +ಭೀಮನ +ಗದೆಯ +ಘಾತಿಯ
ಘಲ್ಲಣೆಗೆ +ಕಂಠಣಿಸಿದವು +ಟೆಂಠಣಿಸುವ್+ಆನೆಗಳು
ಸೆಲ್ಲೆಹದ +ಮಳೆಗರೆದು +ಭೀಮನ
ಘಲ್ಲಿಸಿದರ್+ಆರೋಹಕರು +ಬಲು
ಬಿಲ್ಲ+ ಜಂತ್ರದ +ನಾಳಿ+ಅಂಬಿನ +ಸರಳ +ಸಾರದಲಿ

ಅಚ್ಚರಿ:
(೧) ಭೀಮನ ಮೇಲಿನ ಆಕ್ರಮಣ – ಸೆಲ್ಲೆಹದ ಮಳೆಗರೆದು ಭೀಮನ ಘಲ್ಲಿಸಿದರಾರೋಹಕರು
(೨) ಗ ಕಾರದ ತ್ರಿವಳಿ ಪದ – ಗದೆಯ ಘಾತಿಯ ಘಲ್ಲಣೆಗೆ

ಪದ್ಯ ೨೪: ಕುರು ಸೇನೆಯ ರಾಜರು ಹೇಗೆ ಯುದ್ಧಕ್ಕೆ ಹಿಂದಿರುಗಿದರು?

ಕರೆದರೊಬ್ಬರನೊಬ್ಬರುರೆ ಧಿ
ಕ್ಕರಿಸಿದರು ತಮ್ಮೊಬ್ಬರೊಬ್ಬರ
ಬಿರುದ ಹಿಡಿದರು ಬಯ್ದರಪಮಾನಾನುತಾಪದಲಿ
ತಿರುಗಹೇಳೋ ರಾವುತರ ರಥಿ
ಕರ ಗಜಾರೋಹಕರನೆಂದ
ಬ್ಬರಿಸಿ ಚೌರಿಯ ಬೀಸಿ ಮರಳಿತು ಭೂಪತಿವ್ರಾತ (ಗದಾ ಪರ್ವ, ೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕುರುಸೇನೆಯ ರಾಜರು ಒಬ್ಬರನ್ನೊಬ್ಬರು ಕರೆದು, ಬೈದು ಅವರ ಬಿರುದುಗಳನ್ನು ನೆನಪಿಗೆ ತಂದು ಹೇಳಿ, ಅಪಮಾನದಿಂದ ಕುದಿದು ಬೈದರು. ರಾವುತರನ್ನು ತಿರುಗಿ ಬರಲು ಹೇಳು, ಜೋದರನ್ನು ಬರ ಹೇಳು ಎಂದು ಚೌರಿಯನ್ನು ಬೀಸಿ ಯುದ್ಧಕ್ಕೆ ಹಿಂದಿರುಗಿದರು.

ಅರ್ಥ:
ಕರೆ: ಬರೆಮಾಡು; ಉರೆ: ಅಧಿಕ, ಹೆಚ್ಚಳ; ಧಿಕ್ಕರಿಸು: ಕಡೆಗಣಿಸು; ಬಿರುದು: ಗೌರವ ಸೂಚಕ ಪದ; ಹಿಡಿ: ಗ್ರಹಿಸು; ಬಯ್ದ: ಜರೆ; ಅಪಮಾನ: ಅಗೌರವ, ತಿರಸ್ಕಾರ; ಅನುತಾಪ: ಪಶ್ಚಾತ್ತಾಪ; ತಿರುಗು: ಮತ್ತೆ; ಹೇಳು: ತಿಳಿಸು; ರಾವುತ: ಕುದುರೆಸವಾರ; ರಥಿಕ: ರಥಿ; ಗಜ: ಆನೆ; ಆರೋಹಕ: ಮೇಲೇಳುವ; ಅಬ್ಬರಿಸು: ಗರ್ಜಿಸು; ಚೌರಿ: ಚೌರಿಯ ಕೂದಲು; ಬೀಸು: ತೂಗು; ಮರಳು: ಹಿಂದಿರುಗು; ಭೂಪತಿ: ರಾಜ; ವ್ರಾತ: ಗುಂಪು;

ಪದವಿಂಗಡಣೆ:
ಕರೆದರ್+ಒಬ್ಬರನ್+ಒಬ್ಬರ್+ಉರೆ +ಧಿ
ಕ್ಕರಿಸಿದರು +ತಮ್ಮೊಬ್ಬರ್+ಒಬ್ಬರ
ಬಿರುದ +ಹಿಡಿದರು +ಬಯ್ದರ್+ಅಪಮಾನ+ಅನುತಾಪದಲಿ
ತಿರುಗ+ಹೇಳೋ +ರಾವುತರ +ರಥಿ
ಕರ+ ಗಜ+ಆರೋಹಕರನೆಂದ್
ಅಬ್ಬರಿಸಿ+ ಚೌರಿಯ +ಬೀಸಿ +ಮರಳಿತು +ಭೂಪತಿ+ವ್ರಾತ

ಅಚ್ಚರಿ:
(೧) ಒಬ್ಬರೊಬ್ಬ – ಪದದ ಬಳಕೆ
(೨) ಪದದ ರಚನೆ – ಬಯ್ದರಪಮಾನಾನುತಾಪದಲಿ

ಪದ್ಯ ೧೬: ವೈರಿಪಡೆಯವರು ಹೇಗೆ ಹಿಂದಿರುಗಿದರು?

ಮರಳಿ ವಾಘೆಯ ಕೊಂಡು ರಾವ್ತರು
ತಿರುಗಿದರು ಹಮ್ಮುಗೆಯ ನೇಣ್ಗಳ
ಹರಿದು ಹಕ್ಕರಿಕೆಗಳ ಬಿಸುಟರು ಹಾಯ್ಕಿ ಖಂಡೆಯವ
ಬಿರುದ ಸಂಭಾಳಿಸುವ ಭಟ್ಟರ
ನಿರಿದರಾರೋಹಕರು ಕರಿಗಳ
ತಿರುಹಿ ಗುಳ ರೆಂಚೆಗಳ ಕೊಯ್ದೀಡಾಡಿದರು ನೆಲಕೆ (ಗದಾ ಪರ್ವ, ೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕುದುರೆಗಳ ಮೇಲಿದ್ದ ರಾವುತರು ಹಿಂದಕ್ಕೆ ಹೋದರು. ಹಗ್ಗಗಳನ್ನು ಕತ್ತರಿಸಿ ಕುದುರೆಯ ಕವಚಗಳನ್ನು ಕತ್ತಿಯೀಮ್ದ ಹರಿದು ಹಾಕಿದರು. ಜೋದರು ತಮ್ಮ ಬಿರುದನ್ನು ಹೊಗಳುವ ವಂದಿಗಳನ್ನಿರಿದರು. ಆನೆಗಳನ್ನು ಹಿಂದಕ್ಕೆ ತಿರುಗಿಸಿ ಅದಕ್ಕೆ ಹೊದ್ದಿಸಿದ ಗುಳ ರೆಂಚೆಗಳನ್ನು ಕೊಯ್ದೆಸೆದರು.

ಅರ್ಥ:
ಮರಳು: ಮತ್ತೆ, ಹಿಂದಿರುಗು; ವಾಘೆ: ಲಗಾಮು; ಕೊಂಡು: ಪಡೆದು; ರಾವುತ: ಕುದುರೆ ಸವಾರ, ಅಶ್ವಾರೋಹಿ; ತಿರುಗು: ಸುತ್ತು; ಹಮ್ಮುಗೆ: ಹಗ್ಗ, ಪಾಶ; ನೇಣು: ಹಗ್ಗ, ಹುರಿ; ಹರಿ: ಸೀಳು; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಬಿಸುಟು: ಹೊರಹಾಕು; ಹಾಯ್ಕು: ಬೀಸು, ಕೆಡೆಯಿಸು; ಖಂಡೆಯ: ಕತ್ತಿ, ಖಡ್ಗ; ಬಿರುದು: ಗೌರವ ಸೂಚಕ ಹೆಸರು; ಸಂಭಾಳಿಸು: ಸರಿದೂಗಿಸು; ಭಟ್ಟ: ಸೈನಿಕ; ಇರಿ: ಸೀಳು; ಆರೋಹಕ: ಮೇಲೇರುವವ; ಕರಿ: ಆನೆ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಕೊಯ್ದು: ಸೀಳು; ಈಡಾಡು: ಹರಡು; ನೆಲ: ಭೂಮಿ;

ಪದವಿಂಗಡಣೆ:
ಮರಳಿ +ವಾಘೆಯ +ಕೊಂಡು +ರಾವ್ತರು
ತಿರುಗಿದರು +ಹಮ್ಮುಗೆಯ +ನೇಣ್ಗಳ
ಹರಿದು +ಹಕ್ಕರಿಕೆಗಳ +ಬಿಸುಟರು +ಹಾಯ್ಕಿ +ಖಂಡೆಯವ
ಬಿರುದ +ಸಂಭಾಳಿಸುವ +ಭಟ್ಟರನ್
ಇರಿದರ್+ಆರೋಹಕರು +ಕರಿಗಳ
ತಿರುಹಿ +ಗುಳ +ರೆಂಚೆಗಳ +ಕೊಯ್ದ್+ಈಡಾಡಿದರು +ನೆಲಕೆ

ಅಚ್ಚರಿ:
(೧) ಪರಾಕ್ರಮಿ ಎಂದು ಹೇಳುವ ಪರಿ – ಬಿರುದ ಸಂಭಾಳಿಸುವ ಭಟ್ಟ

ಪದ್ಯ ೧೩: ಅರ್ಜುನನ ಬಾಣಗಳು ಯಾವ ಪರಿಣಾಮ ಬೀರಿತು?

ಒದೆದು ರಥವನು ಸೂತರಿಳಿದೋ
ಡಿದರು ಚಾಪವನಿಳುಹಿ ಸಮರಥ
ರೆದೆಯ ನೀವಿತು ದೂರದಲಿ ಕರಿಕಂಧರವನಿಳಿದು
ಕೆದರಿತಾರೋಹಕರು ವಿಕ್ರಮ
ವಿದಿತ ವಿಪುಳ ಪದಸ್ಥಭೂಪರು
ಹುದುಗಿತಲ್ಲಿಯದಲ್ಲಿ ಪಾರ್ಥನ ಸರಳ ಘಾತಿಯಲಿ (ಗದಾ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳ ಹೊಡೆತಕ್ಕೆ ಸೂತರು ರಥವನ್ನು ಬಿಟ್ಟೋಡಿದರು. ಸಮರಥರು ಬಿಲ್ಲುಗಳನ್ನು ಕೆಳಗಿಟ್ಟು ದೂರಕ್ಕೆ ಹೋಗಿ ಎದೆಯನ್ನು ನೀವಿಕೊಂಡರು. ಜೋದರು ಆನೆಗಳನ್ನಿಳಿದು ಓಡಿಹೋದರು. ಪರಾಕ್ರಮಿಗಳಾದ ರಾಜರು ಅಲ್ಲಲ್ಲೇ ಅವಿತುಕೊಂಡರು.

ಅರ್ಥ:
ಒದೆ: ನೂಕು; ರಥ: ಬಂಡಿ; ಸೂತ: ಸಾರಥಿ; ಇಳಿ: ಕೆಳಗೆ ಬಾ; ಓಡು: ಧಾವಿಸು; ಚಾಪ: ಬಿಲ್ಲು; ಇಳುಹು: ಇಳಿಸು; ಸಮರಥ: ಪರಾಕ್ರಮ; ಎದೆ: ಉರು; ದೂರ: ದೀರ್ಘವಾದ; ಕರಿ: ಆನೆ; ಕಂಧರ: ಕಂಠ, ಕೊರಳು; ಕೆದರು: ಹರಡು; ಆರೋಹಕ: ಹತ್ತುವವ; ವಿಕ್ರಮ: ಪರಾಕ್ರಮಿ; ವಿಪುಳ: ವಿಸ್ತಾರ; ಪದಸ್ಥ:ಪ್ರವೇಶಿಸಿದ; ಭೂಪ: ರಾಜ; ಹುದುಗು: ಹೊಂದಿಕೆ, ಸಾಮರಸ್ಯ; ಸರಳ: ಬಾಣ; ಘಾತಿ: ಹೊಡೆತ; ನೀವು: ಮೃದುವಾಗಿ ಸವರು;

ಪದವಿಂಗಡಣೆ:
ಒದೆದು +ರಥವನು +ಸೂತರ್+ಇಳಿದ್
ಓಡಿದರು +ಚಾಪವನ್+ಇಳುಹಿ +ಸಮರಥರ್
ಎದೆಯ +ನೀವಿತು +ದೂರದಲಿ +ಕರಿ+ಕಂಧರವನ್+ಇಳಿದು
ಕೆದರಿತ್+ಆರೋಹಕರು+ ವಿಕ್ರಮ
ವಿದಿತ+ ವಿಪುಳ +ಪದಸ್ಥ+ಭೂಪರು
ಹುದುಗಿತ್+ಅಲ್ಲಿಯದಲ್ಲಿ +ಪಾರ್ಥನ +ಸರಳ +ಘಾತಿಯಲಿ

ಅಚ್ಚರಿ:
(೧) ವ ಕಾರದ ತ್ರಿವಳಿ ಪದ – ವಿಕ್ರಮ ವಿದಿತ ವಿಪುಳ
(೨) ಕ ಕಾರದ ತ್ರಿವಳಿ ಪದ – ಕರಿಕಂಧರವನಿಳಿದು ಕೆದರಿತಾರೋಹಕರು

ಪದ್ಯ ೭: ಕುರುಸೇನೆಯು ಅರ್ಜುನನೆದುರು ಹೇಗೆ ಬಂದರು?

ರಣಪರಚ್ಛೇದಿಗಳು ಮಿಗೆ ಸಂ
ದಣಿಸಿತೋ ಕುರುಸೇನೆ ವಾದ್ಯದ
ರಣಿತವದ್ರಿಯನೊದೆದುದದುಭತ ಬೊಬ್ಬೆಗಳ ಲಳಿಯ
ಕುಣಿದವರ್ಜುನನುರುರಥದ ಮುಂ
ಕಣಿಯಲಾರೋಹಕರು ರಥ ಹಯ
ಹೆಣಗಿದವು ಹಯದೊಡನೆ ಕಂದದ ಖುರದ ಹೊಯ್ಲಿನಲಿ (ಗದಾ ಪರ್ವ, ೧ ಸಂಧಿ, ೭ ಪದ್ಯ)

ತಾತ್ಪರ್ಯ:
ಯುದ್ಧ ವಿಶಾರದರಾದ ಕುರುಸೇನೆಯ ವೀರರು, ರಣವಾದ್ಯಗಳ ರಭಸದೊಡನೆ ಬೆಟ್ಟವನ್ನೇ ಅಲುಗಿಸುವ ಅದ್ಭುತವಾದ ಶಬ್ದವನ್ನು ಮಾಡುತ್ತಾ ಅರ್ಜುನನ ರಥವನ್ನು ತರುಬಿದರು. ರಾವುತರು ಬರಲು ಅವರ ಕುದುರೆಗಳ ಗೊರಸುಗಳು ಅರ್ಜುನನ ರಥದ ಕುದುರೆಗಳಗೊರಸುಗಳನ್ನು ಘಟ್ಟಿಸಿದವು.

ಅರ್ಥ:
ರಣ: ಯುದ್ಧ; ಪರಿಚ್ಛೇದಿ: ಒಂದು ವಿಷಯದ ಬಗ್ಗೆ ಚೆನ್ನಾಗಿ ತಿಳಿದವ, ವಿದ್ವಾಂಸ; ಮಿಗೆ: ಅಧಿಕ; ಸಂದಣಿಸು: ಗುಂಪುಗೂಡು; ವಾದ್ಯ: ಸಂಗೀತದ ಸಾಧನ; ಅಣಿ: ಸಿದ್ಧವಾಗು; ಅದ್ರಿ: ಬೆಟ್ಟ; ಒದೆ: ನೂಕು; ಅದುಭುತ: ಆಶ್ಚರ್ಯ; ಬೊಬ್ಬೆ: ಕೂಗು; ಲಳಿ: ರಭಸ; ಕುಣಿ: ನರ್ತಿಸು; ಉರು: ಹೆಚ್ಚಾದ, ಶ್ರೇಷ್ಠ; ರಥ: ಬಂಡಿ; ಹಯ: ಕುದುರೆ; ಹೆಣಗು: ಹೋರಾಡು; ಹಯ: ಕುದುರೆ; ಕಂದ: ಕುತ್ತಿಗೆ, ಭುಜಾಗ್ರ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಹೊಯ್ಲು: ಏಟು, ಹೊಡೆತ; ಆರೋಹ: ಹತ್ತುವವ;

ಪದವಿಂಗಡಣೆ:
ರಣ+ಪರಚ್ಛೇದಿಗಳು +ಮಿಗೆ +ಸಂ
ದಣಿಸಿತೋ +ಕುರುಸೇನೆ+ ವಾದ್ಯದ
ರಣಿತವ್+ಅದ್ರಿಯನ್+ಒದೆದುದ್+ಅದುಭತ +ಬೊಬ್ಬೆಗಳ +ಲಳಿಯ
ಕುಣಿದವ್+ಅರ್ಜುನನ್+ಉರು+ರಥದ +ಮುಂ
ಕಣಿಯಲ್+ಆರೋಹಕರು +ರಥ +ಹಯ
ಹೆಣಗಿದವು +ಹಯದೊಡನೆ +ಕಂದದ +ಖುರದ +ಹೊಯ್ಲಿನಲಿ

ಅಚ್ಚರಿ:
(೧) ರಣಪರಿಚ್ಛೇದಿ – ಪದದ ಬಳಕೆ
(೨) ಕುಣಿ ಪದದ ಬಳಕೆ – ಕುಣಿದವರ್ಜುನನುರುರಥದ ಮುಂಕಣಿಯಲಾರೋಹಕರು
(೩) ಪದದ ರಚನೆ – ವಾದ್ಯದರಣಿತವದ್ರಿಯನೊದೆದುದದುಭತ
(೪) ರೂಪಕದ ಪ್ರಯೋಗ – ಕುರುಸೇನೆ ವಾದ್ಯದರಣಿತವದ್ರಿಯನೊದೆದುದದುಭತ ಬೊಬ್ಬೆಗಳ ಲಳಿಯ

ಪದ್ಯ ೪೩: ಶಲ್ಯನ ಮೇಲೆ ಯಾರು ನುಗ್ಗಿದರು?

ತರಹರಿಸಿದುದು ಪಾಯದಳ ತಲೆ
ವರಿಗೆಯಲಿ ಮೊಗದಡ್ಡವರಿಗೆಯ
ಲರರೆ ರಾವುತೆನುತ್ತ ನೂಕಿತು ಬಿಟ್ಟ ಸೂಠಿಯಲಿ
ತುರಗದಳ ಮೊಗರಂಬದಲಿ ಮೊಗ
ವರಿಗೆಗಲಲಾರೋಹಕರು ಚ
ಪ್ಪರಿಸಿ ಚಾಚಿದರಾನೆಗಲನಾ ಶಲ್ಯನಿದಿರಿನಲಿ (ಶಲ್ಯ ಪರ್ವ, ೨ ಸಂಧಿ, ೪೩ ಪದ್ಯ)

ತಾತ್ಪರ್ಯ:
ತಲೆಗೆ ಗುರಾಣಿಯನ್ನು ಹಿಡಿದ ಕಾಲುದಳದವರೂ, ಮುಖಕ್ಕೆ ಅಡ್ಡಹಿಡಿದ ರಾವುತರೂ, ಪರಸ್ಪರ ಪ್ರೋತ್ಸಾಹಿಸುತ್ತಾ, ಅತಿವೇಗದಿಂದ ಮುಂದುವರೆದರು. ಮೊಗರಂಬ (ಮುಖದ ಅಲಂಕಾರ) ಹೊತ್ತ ಕುದುರೆಗಲು, ಆನೆಗಳು, ತಮ್ಮ ಸವಾರರು ಅಪ್ಪರಿಸಲು ಶಲ್ಯನ ಮೇಲೆ ನುಗ್ಗಿದವು.

ಅರ್ಥ:
ತರಹರಿಸು:ತಡಮಾಡು; ಕಳವಳಿಸು; ಪಾಯದಳ: ಸೈನಿಕ; ತಲೆವರಿಗೆ: ಗುರಾಣಿ; ಮೊಗ: ಮುಖ; ಅಡ್ಡ: ನಡುವೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ನೂಕು: ತಳ್ಳು; ಸೂಠಿ: ವೇಗ; ತುರಗದಳ: ಕುದುರೆಯ ಸೈನ್ಯ; ಅಂಬು: ಬಾಣ; ಆರೋಹ: ಸವಾರ, ಹತ್ತುವವ; ಚಪ್ಪರಿಸು: ಸವಿ, ರುಚಿನೋಡು; ಚಾಚು: ಹರಡು; ಆನೆ: ಕರಿ; ಇದಿರು: ಎದುರು;

ಪದವಿಂಗಡಣೆ:
ತರಹರಿಸಿದುದು +ಪಾಯದಳ +ತಲೆ
ವರಿಗೆಯಲಿ +ಮೊಗದ್+ಅಡ್ಡವರಿಗೆಯಲ್
ಅರರೆ +ರಾವುತ್+ಎನುತ್ತ+ ನೂಕಿತು +ಬಿಟ್ಟ +ಸೂಠಿಯಲಿ
ತುರಗದಳ +ಮೊಗರ್+ಅಂಬದಲಿ +ಮೊಗ
ವರಿಗೆಗಲಲ್+ಆರೋಹಕರು +ಚ
ಪ್ಪರಿಸಿ +ಚಾಚಿದರ್+ಆನೆಗಳನ್+ಆ +ಶಲ್ಯನ್+ಇದಿರಿನಲಿ

ಅಚ್ಚರಿ:
(೧) ತಲೆವರಿಗೆ, ಮೊಗವರಿಗೆ – ಪದಗಳ ಬಳಕೆ

ಪದ್ಯ ೧೮: ನಾರಾಯಣಾಸ್ತ್ರದ ಪ್ರಖರತೆ ಹೇಗಿತ್ತು?

ಗುಳವ ಕೊಯ್ದಿಳುಹಿದರು ಕರಿಸಂ
ಕುಳದಲಾರೋಹಕರು ಜೋಡನು
ಕಳಚಿ ಬಿಸುಟರು ರಾವುತರು ಹಕ್ಕರಿಕೆಗಳು ಸಹಿತ
ಝಳದ ಝಾಡಿಗೆ ಬೆವರಿ ವಸನಾಂ
ಚಲದ ಗಾಳಿಗೆ ಮೊಗವನೆತ್ತಿದ
ರಳುಕಿ ಕಣ್ ಕೋರೈಸಿ ಮಮ್ಮಲ ಮರುಗಿತುಭಯಬಲ (ದ್ರೋಣ ಪರ್ವ, ೧೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ಎರಡೂ ಸೈನ್ಯಗಳಲ್ಲಿ ಕಾದುಹೋಗಿದ್ದ ಆನೆಗಳ ಕವಚವನ್ನು ಜೋದರು ಕೊಯ್ದೆಸೆದರು. ರಾವುತರು ಕುದುರೆಗಳ ಕವಚ ತಡಿಗಳನ್ನು ಕಳಚಿ ಎಸೆದರು. ಝಳವನ್ನು ತಡೆಯಲಾರದೆ ಉತ್ತರೀಯದ ತುದಿಗಳಿಂದ ಗಾಳಿಯನ್ನು ಯೋಧರು ಹಾಕಿಕೊಂಡರು. ಎರಡೂ ಸೇನೆಗಳು ಒದಗಿದ ದುರ್ಗತಿಗೆ ಮರುಗಿದವು. ಅಸ್ತ್ರದ ಕಾಂತಿಯಿಂದ ಅವರ ಕಣ್ಣುಗಳು ಕುಕ್ಕಿದಂತಾದವು.

ಅರ್ಥ:
ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಕೊಯ್: ಸೀಳು; ಇಳುಹಿ: ಕೆಳಕ್ಕೆ ಇಳಿಸು; ಕರಿ: ಆನೆ; ಸಂಕುಳ: ಗುಂಪು; ಆರೋಹಕ: ಜೋದರು, ಮಾವುತ; ಜೋಡು: ಜೊತೆ, ಜೋಡಿ; ಕಳಚು: ಬಿಚ್ಚು; ಬಿಸುಟು: ಹೊರಹಾಕು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಹಕ್ಕರಿಕೆ: ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಸಹಿತ: ಜೊತೆ; ಝಳ: ಪ್ರಕಾಶ; ಝಾಡಿ: ಕಾಂತಿ; ಬೆವರು: ಸ್ವೇದಗೊಳ್ಳು, ಭಯಗೊಳ್ಳು; ವಸನ: ಬಟ್ಟೆ, ವಸ್ತ್ರ; ಅಂಚಲ: ಸೀರೆಯ ಸೆರಗು; ಗಾಳಿ: ವಾಯು; ಮೊಗ: ಮುಖ; ಎತ್ತು: ಮೇಲೇರು; ಅಳುಕು: ಭಯ; ಕಣ್: ನಯನ; ಕೋರೈಸು: ಕಣ್ಣು ಕುಕ್ಕು; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು:ತಳಮಳ, ಸಂಕಟ, ಕಷ್ಟಪಡು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಗುಳವ +ಕೊಯ್ದ್+ಇಳುಹಿದರು +ಕರಿ+ಸಂ
ಕುಳದಲ್+ಆರೋಹಕರು +ಜೋಡನು
ಕಳಚಿ +ಬಿಸುಟರು +ರಾವುತರು +ಹಕ್ಕರಿಕೆಗಳು +ಸಹಿತ
ಝಳದ +ಝಾಡಿಗೆ+ ಬೆವರಿ+ ವಸನಾಂ
ಚಲದ +ಗಾಳಿಗೆ +ಮೊಗವನ್+ಎತ್ತಿದರ್
ಅಳುಕಿ +ಕಣ್ +ಕೋರೈಸಿ +ಮಮ್ಮಲ +ಮರುಗಿತ್+ಉಭಯಬಲ

ಅಚ್ಚರಿ:
(೧) ಗುಳ, ಸಂಕುಳ, ಝಳ – ಪ್ರಾಸ ಪದಗಳು
(೨) ಝ ಕಾರದ ಜೋಡಿ ಪದ – ಝಳದ ಝಾಡಿಗೆ