ಪದ್ಯ ೫೪: ಭೀಮನ ಆಕ್ರಮಣ ಹೇಗಿತ್ತು?

ಚೆಲ್ಲಿದವು ಗಜಯೂಥವಪ್ರತಿ
ಮಲ್ಲ ಭೀಮನ ಗದೆಯ ಘಾತಿಯ
ಘಲ್ಲಣೆಗೆ ಕಂಠಣಿಸಿದವು ಟೆಂಠಣಿಸುವಾನೆಗಳು
ಸೆಲ್ಲೆಹದ ಮಳೆಗರೆದು ಭೀಮನ
ಘಲ್ಲಿಸಿದರಾರೋಹಕರು ಬಲು
ಬಿಲ್ಲ ಜಂತ್ರದ ನಾಳಿಯಂಬಿನ ಸರಳ ಸಾರದಲಿ (ಗದಾ ಪರ್ವ, ೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಆನೆಗಳ ಸೇನೆಯು ಅಪ್ರತಿಮಲ್ಲ ಭೀಮನ ಗದೆಯ ಹೊಡೆತಕ್ಕೆ ಚದುರಿ ಓಡಿದವು. ಜೋದರು ಶಲ್ಯ, ನಾಳಿಯಂಬುಗಳನ್ನು ಬಿಟ್ಟು ಅವನನ್ನು ಪೀಡಿಸಿದರು.

ಅರ್ಥ:
ಚೆಲ್ಲು: ಹರಡು; ಗಜ: ಆನೆ; ಯೂಥ: ಗುಂಪು, ಹಿಂಡು; ಪ್ರತಿಮಲ್ಲ: ಎದುರಾಳಿ ವೀರ; ಗದೆ: ಮುದ್ಗರ; ಘಾತಿ: ಹೊಡೆತ; ಘಲ್ಲಣೆ: ಘಲ್ ಘಲ್ ಎಂಬ ಶಬ್ದ; ಕಂಟಿಸು: ಬಂಧಿಸು; ಟೆಂಠಣಿಸು: ನಡುಗು, ಕಂಪಿಸು; ಸೆಲ್ಲೆಹ: ಈಟಿ, ಭರ್ಜಿ; ಮಳೆ: ವರ್ಷ; ಘಲ್ಲಿಸು: ಪೀಡಿಸು; ಆರೋಹಕ: ಸವಾರ; ಜಂತ್ರ: ಯಂತ್ರ; ನಾಳಿ: ಒಂದು ಅಳತೆಯ ಪ್ರಮಾಣ; ಅಂಬು: ಬಾಣ; ಸರಳ: ಬಾಣ; ಸಾರ: ತಿರುಳು, ಗುಣ;

ಪದವಿಂಗಡಣೆ:
ಚೆಲ್ಲಿದವು +ಗಜಯೂಥವ್+ಅಪ್ರತಿ
ಮಲ್ಲ +ಭೀಮನ +ಗದೆಯ +ಘಾತಿಯ
ಘಲ್ಲಣೆಗೆ +ಕಂಠಣಿಸಿದವು +ಟೆಂಠಣಿಸುವ್+ಆನೆಗಳು
ಸೆಲ್ಲೆಹದ +ಮಳೆಗರೆದು +ಭೀಮನ
ಘಲ್ಲಿಸಿದರ್+ಆರೋಹಕರು +ಬಲು
ಬಿಲ್ಲ+ ಜಂತ್ರದ +ನಾಳಿ+ಅಂಬಿನ +ಸರಳ +ಸಾರದಲಿ

ಅಚ್ಚರಿ:
(೧) ಭೀಮನ ಮೇಲಿನ ಆಕ್ರಮಣ – ಸೆಲ್ಲೆಹದ ಮಳೆಗರೆದು ಭೀಮನ ಘಲ್ಲಿಸಿದರಾರೋಹಕರು
(೨) ಗ ಕಾರದ ತ್ರಿವಳಿ ಪದ – ಗದೆಯ ಘಾತಿಯ ಘಲ್ಲಣೆಗೆ

ಪದ್ಯ ೬೦: ಘಟೋತ್ಕಚನು ಕೌರವರ ಸೈನ್ಯದ ಬಗ್ಗೆ ಏನು ಹೇಳಿದನು?

ಕೆಣಕಿದರಲಾ ರಣವ ರಕ್ಕಸ
ಬಣಗುಗಳು ಮಝ ಪೂತು ಸಮರಾಂ
ಗನದೊಳಗೆ ನಾವಾದ ಸದರವೊ ನೊಡಿರೈ ಭಟರು
ಸೆಣಸು ಗಡ ನಮ್ಮೊಡನೆ ಸಲೆ ಟೆಂ
ಠಣಿಸುವರು ಗಡ ಬವರಕೋಸುಗ
ಹೊಣಕೆಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ (ದ್ರೋಣ ಪರ್ವ, ೧೫ ಸಂಧಿ, ೬೦ ಪದ್ಯ)

ತಾತ್ಪರ್ಯ:
ಘಟೋತ್ಕಚನು ಸಾರಥಿಯ ಕೈಯನ್ನು ತಟ್ಟಿ, ಕೆಲಸಕ್ಕೆ ಬಾರದ ದುರ್ಬಲ ರಾಕ್ಷಸರು ನಮ್ಮೊಡನೆ ಯುದ್ಧಕ್ಕೆ ಬಂದರು, ಭಲೇ, ಯುದ್ಧರಂಗದಲ್ಲಿ ನಾವು ಸದರವೆಂದುಕೊಂಡು ಬಿಟ್ಟರು. ನಮ್ಮೊಡನೆ ಕಾಳಗ!! ಯುದ್ಧಮಾಡಲು ಉತ್ಸುಕರಾಗಿ ಬರುತ್ತಿದ್ದಾರೆ, ನನ್ನ ಮೇಲೆ ಜಿದ್ದು, ಅಷ್ಟಲ್ಲದೇ ಏನೆ ಎಂದನು.

ಅರ್ಥ:
ಕೆಣಕು: ರೇಗಿಸು; ರಣ: ಯುದ್ಧ; ರಕ್ಕಸ: ರಾಕ್ಷಸ; ಬನ: ಗುಂಪು; ಮಝ: ಭಲೇ; ಪೂತು: ಹೊಗಳುವ ಮಾತು; ಸಮರ: ಯುದ್ಧ; ಸದರ: ಸುಲಭ, ಸರಾಗ; ನೋಡು: ವೀಕ್ಷಿಸು; ಭಟ: ಸೈನಿಕ; ಸೆಣಸು: ಹೋರಾಡು; ಗಡ: ಅಲ್ಲವೆ; ಟೆಂಠಣಿಸು: ನಡುಗು; ಬವರ: ಯುದ್ಧ; ಹೊಣಕೆ: ಜೊತೆ, ಜೋಡಿ; ಸಾರಥಿ: ಸೂತ; ಕೈವೊಯ್: ಕೈಹೊಡೆ,ಚಪ್ಪಾಳೆ;

ಪದವಿಂಗಡಣೆ:
ಕೆಣಕಿದರಲಾ ರಣವ ರಕ್ಕಸ
ಬಣಗುಗಳು ಮಝ ಪೂತು ಸಮರಾಂ
ಗಣದೊಳಗೆ ನಾವಾದ ಸದರವೊ ನೊಡಿರೈ ಭಟರು
ಸೆಣಸು ಗಡ ನಮ್ಮೊಡನೆ ಸಲೆ ಟೆಂ
ಠಣಿಸುವರು ಗಡ ಬವರಕೋಸುಗ
ಹೊಣಕೆಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ

ಅಚ್ಚರಿ:
(೧) ರಣ, ಬವರ – ಸಮಾನಾರ್ಥಕ ಪದ