ಪದ್ಯ ೪೯: ಕೃಷ್ಣನು ಯಾರ ಆಯುಧಗಳನ್ನು ಬಿಸುಟನು?

ಆವ ಶರವಿದ್ದೇಗುವುದು ಮೈ
ಗಾವನಸುರಾಂತಕನಲೈ ತಾ
ನಾವ ವಹಿಲದೊಳುರಿಯೊಳೆಡೆಹಾಯ್ದನಿಲಜನ ತೆಗೆದ
ನಾವರಿಯೆವಾ ಪವನಜನ ಶ
ಸ್ತ್ರಾವಳಿಯನಾ ಫಲುಗುಣನ ಗಾಂ
ಡೀವವನು ಹರಿ ಸೆಳೆದುಕೊಂಡನು ಬಿಸುಟನವನಿಯಲಿ (ದ್ರೋಣ ಪರ್ವ, ೧೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕಾಪಾಡುವ ಶ್ರೀಕೃಷ್ಣನಿರುವಾಗ ಯಾವ ಅಸ್ತ್ರವಿದ್ದು ಏನು ಮಾಡೀತು? ಕೃಷ್ಣನು ಯಾವ ವೇಗದಿಂದ ಆ ಉರಿಯೊಳಗೆ ನುಗ್ಗಿ ಭೀಮನಿಗೆ ಬಂದ ಅಪಾಯವನ್ನು ನಿವಾರಿಸಿದನೋ ಅರಿಯೆ. ಭೀಮನ ಶಸ್ತ್ರಗಳನ್ನೂ ಅರ್ಜುನನು ಹಿಡಿದ ಗಾಂಡೀವವನ್ನು ಕಸಿದುಕೊಂಡು ಭೂಮಿಯ ಮೇಲೆ ಹಾಕಿದನು.

ಅರ್ಥ:
ಶರ: ಬಾಣ; ಏಗು: ಸಾಗಿಸು, ನಿಭಾಯಿಸು; ಕಾವು: ಬಿಸಿ, ಉಷ್ಣತೆ; ಅಸುರಾಂತಕ: ಕೃಷ್ಣ; ವಹಿಲ: ಬೇಗ, ತ್ವರೆ; ಉರಿ: ಬೆಂಕಿ; ಎಡೆಹಾಯ್ದು: ಅಡ್ಡ ಹೋಗಿ; ಅನಿಲಜ: ಭೀಮ; ತೆಗೆ: ಹೊರತರು; ಅರಿ: ತಿಳಿ; ಪವನಜ: ಭೀಮ; ಶಸ್ತ್ರ: ಆಯುಧ; ಆವಳಿ: ಗುಂಪು; ಸೆಳೆ: ಎಳೆದು; ಬಿಸುಟು: ಬಿಸಾಡು; ಅವನಿ: ಭೂಮಿ;

ಪದವಿಂಗಡಣೆ:
ಆವ+ ಶರವಿದ್+ಏಗುವುದು +ಮೈ+
ಕಾವನ್+ಅಸುರಾಂತಕನ್+ಅಲೈ +ತಾನ್
ಆವ +ವಹಿಲದೊಳ್+ಉರಿಯೊಳ್+ಎಡೆಹಾಯ್ದನ್+ಅನಿಲಜನ +ತೆಗೆದ
ನಾವರಿಯೆವ್+ಆ +ಪವನಜನ +ಶ
ಸ್ತ್ರಾವಳಿಯನ್+ಆ+ ಫಲುಗುಣನ +ಗಾಂ
ಡೀವವನು +ಹರಿ +ಸೆಳೆದುಕೊಂಡನು +ಬಿಸುಟನ್+ಅವನಿಯಲಿ

ಅಚ್ಚರಿ:
(೧) ಅನಿಲಜ, ಪವನಜ – ಭೀಮನನ್ನು ಕರೆದ ಪರಿ
(೨) ಹರಿ, ಅಸುರಾಂತಕ – ಕೃಷ್ಣನನ್ನು ಕರೆದ ಪರಿ

ಪದ್ಯ ೩೭: ದ್ರೋಣನು ಪಾಂಡವ ಸೈನ್ಯಕ್ಕೆ ಏನೆಂದು ಹೇಳಿದನು?

ಅಕಟ ಫಡ ಕುನ್ನಿಗಳಿಗಸುರಾಂ
ತಕನ ಕಪಟದ ಮಂತ್ರವೇ ಬಾ
ಧಕವಿದಲ್ಲದೆ ನಿಮಗೆ ಸೋಲುವುದುಂಟೆ ಕುರುಸೇನೆ
ಸಕಲ ಸನ್ನಾಹದಲಿ ಯಾದವ
ನಿಕರ ಸಹಿತೀಯಿರುಳು ರಣದಲಿ
ಚಕಿತರಾಗದೆ ಜೋಡಿಸೆನುತಿದಿರಾದನಾ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೃಷ್ಣನ ಕಪಟಮಂತ್ರವೇ ನಮಗೆ ಬಾಧಕವಾಗಿ ಈ ಹಗಲು ನಾವು ಸೋತೆವು. ಅಯ್ಯೋ ಕುನ್ನಿಗಳೇ, ನೀವಲ್ಲ ಗೆದ್ದದ್ದು, ನಿಮಗೆ ಕುರುಸೇನೆ ಸೋತೀತೇ? ಸಮಸ್ತ ಸನ್ನಾಹದೊಡನೆ ಈ ರಾತ್ರಿ ನಾವು ಯಾದವರೊಡನೆ ಯುದ್ಧಕ್ಕೆ ಬಂದಿದ್ದೇವೆ, ವಿಸ್ಮಯ ಪಡದೆ ಯುದ್ಧಕ್ಕೆ ಬನ್ನಿ ಎಂದು ದ್ರೋಣನು ಕೂಗಿದನು.

ಅರ್ಥ:
ಅಕಟ: ಅಯ್ಯೋ; ಫಡ: ತಿರಸ್ಕಾರದ ಮಾತು; ಕುನ್ನಿ: ನಾಯಿ; ಅಸುರ: ರಾಕ್ಷಸ; ಅಂತಕ: ಸಾವು; ಅಸುರಾಂತಕ: ಕೃಷ್ಣ; ಕಪಟ: ಮೋಸ; ಮಂತ್ರ: ವಿಚಾರ, ಆಲೋಚನೆ; ಬಾಧಕ: ತೊಂದರೆ ಮಾಡುವವ; ಸೋಲು: ಪರಾಭವ; ಸಕಲ: ಎಲ್ಲಾ; ಸನ್ನಾಹ: ಸನ್ನೆ, ಸುಳಿವು; ನಿಕರ: ಗುಂಪು; ಸಹೀತ: ಜೊತೆ; ಇರುಳು: ರಾತ್ರಿ; ರಣ: ಯುದ್ಧ; ಚಕಿತ: ಬೆರಗುಗೊಂಡು; ಜೋಡಿಸು: ಸೇರಿಸು; ಇದಿರು: ಎದುರು;

ಪದವಿಂಗಡಣೆ:
ಅಕಟ+ ಫಡ +ಕುನ್ನಿಗಳಿಗ್+ಅಸುರಾಂ
ತಕನ +ಕಪಟದ +ಮಂತ್ರವೇ +ಬಾ
ಧಕವ್+ಇದಲ್ಲದೆ +ನಿಮಗೆ +ಸೋಲುವುದುಂಟೆ +ಕುರುಸೇನೆ
ಸಕಲ +ಸನ್ನಾಹದಲಿ +ಯಾದವ
ನಿಕರ+ ಸಹಿತ್+ಈ+ಇರುಳು +ರಣದಲಿ
ಚಕಿತರಾಗದೆ +ಜೋಡಿಸೆನುತ್+ಇದಿರಾದನಾ +ದ್ರೋಣ

ಅಚ್ಚರಿ:
(೧) ಕೌರವರಿಗೆ ತೊಂದರೆಯಾದದ್ದು – ಅಸುರಾಂತಕನ ಕಪಟದ ಮಂತ್ರವೇ ಬಾಧಕವ್
(೨) ಪಾಂಡವರನ್ನು ತೆಗಳುವ ಪರಿ – ಅಕಟ ಫಡ ಕುನ್ನಿಗಳ್

ಪದ್ಯ ೨೭: ಭೀಷ್ಮನು ಯಾರ ಎದುರು ರಥವನ್ನು ನಿಲ್ಲಿಸಲು ಹೇಳಿದನು?

ಸಕಲ ದೆಸೆಯಲಿ ಮುರಿದು ಬಹ ನಾ
ಯಕರ ಕಂಡನು ಪಾರ್ಥನಸುರಾಂ
ತಕಗೆ ತೋರಿದನಕಟ ನೋಡಿದಿರೆಮ್ಮವರ ವಿಧಿಯ
ನಕುಲನಿಲ್ಲಾ ಭೀಮನೋ ಸಾ
ತ್ಯಕಿಯೊ ಸೇನಾಪತಿಯೊ ಕಟಕಟ
ವಿಕಳರೋಡಿದರೋಡಲಿದಿರಿಗೆ ರಥವ ಹರಿಸೆಂದ (ಭೀಷ್ಮ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲ್ಲಾ ದಿಕ್ಕುಗಳಿಂದಲೂ ಓಡಿ ಬರುತ್ತಿದ್ದ ತಮ್ಮ ಸೈನ್ಯವನ್ನು ಅರ್ಜುನನು ನೋಡಿ ಶ್ರೀಕೃಷ್ಣನಿಗೆ ತೋರಿಸೆ, ನಮ್ಮವರ ವಿಧಿಯನ್ನು ನೋಡಿದೆಯಾ? ನಕುಲ, ಭೀಮ, ಸಾತ್ಯಕಿ, ಧೃಷ್ಟದ್ಯುಮ್ನರು ಅಲ್ಲಿಲ್ಲವೇ ಅಥವಾ ಭ್ರಮೆಗೊಂಡು ಓಡಿ ಹೋದರೇ? ಕೃಷ್ಣಾ ಭೀಷ್ಮನೆದುರಿಗೆ ರಥವನ್ನು ನಿಲ್ಲಿಸು ಎಂದು ಹೇಳಿದನು.

ಅರ್ಥ:
ಸಕಲ: ಎಲ್ಲಾ; ದೆಸೆ: ದಿಕ್ಕು; ಮುರಿ: ಸೀಳು; ಬಹ: ಬಹಳ; ನಾಯಕ: ಒಡೆಯ; ಕಂಡು: ನೋಡು; ಅಸುರ: ರಾಕ್ಷಸ; ಅಂತಕ: ಯಮ; ತೋರು: ಗೋಚರಿಸು; ಅಕಟ: ಅಯ್ಯೋ; ನೋಡು: ವೀಕ್ಷಿಸು; ವಿಧಿ: ನಿಯಮ; ಕಟಕಟ: ಅಯ್ಯಯ್ಯೋ; ವಿಕಳ: ಭ್ರಮೆ, ಭ್ರಾಂತಿ; ಓಡು: ಧಾವಿಸು; ಇದಿರು: ಎದುರು; ರಥ: ಬಂಡಿ; ಹರಿಸು: ಚಲಿಸು;

ಪದವಿಂಗಡಣೆ:
ಸಕಲ+ ದೆಸೆಯಲಿ +ಮುರಿದು +ಬಹ +ನಾ
ಯಕರ +ಕಂಡನು +ಪಾರ್ಥನ್+ಅಸುರಾಂ
ತಕಗೆ +ತೋರಿದನ್+ಅಕಟ +ನೋಡಿದಿರ್+ಎಮ್ಮವರ +ವಿಧಿಯ
ನಕುಲನ್+ಇಲ್ಲಾ +ಭೀಮನೋ +ಸಾ
ತ್ಯಕಿಯೊ +ಸೇನಾಪತಿಯೊ +ಕಟಕಟ
ವಿಕಳರ್+ಓಡಿದರ್+ಓಡಲ್+ಇದಿರಿಗೆ +ರಥವ+ ಹರಿಸೆಂದ

ಅಚ್ಚರಿ:
(೧) ಅಕಟ, ಕಟಕಟ – ಪದಗಳ ಬಳಕೆ
(೨) ವಿಕಳರೋಡಿದರೋಡಲಿದಿರಿಗೆ – ಪದದ ಬಳಕೆ

ಪದ್ಯ ೧೪: ಕೌರವರಿಗೆ ಯಾರ ನೇತೃತ್ವ ಅಗತ್ಯವೆಂದು ದ್ರೋಣರು ಹೇಳಿದರು?

ಅವರಿಗಸುರಾಂತಕ ಸಹಾಯನು
ನಿವಗೆ ಗಂಗಾಸುತನ ಬಲವಾ
ಹವವನೀತನ ನೇಮದಲಿ ನೆಗಳುವುದು ನೀತಿಯಿದು
ಅವರಿವರ ಮಾತಿನಲಿ ಫಲವಿ
ಲ್ಲವನಿಪತಿ ಕೇಳೆನಲು ಕಲಶೋ
ದ್ಭವನ ಮತದಲಿ ಬಳಿಕ ಮಣಿದನು ಕೌರವ ರಾಯ (ಭೀಷ್ಮ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಾಂದವರಿಗೆ ಶ್ರೀಕೃಷ್ಣನ ಸಹಾಯವಿದೆ, ನಿಮಗೆ ಭೀಷ್ಮನ ಬೆಂಬಲವಿದೆ, ಆದುದರಿಂದ ಭೀಷ್ಮನ ಅಪ್ಪಣೆಯಂತೆ ಯುದ್ಧವನ್ನು ಮಾಡಿರಿ, ಅವರಿವರ ಮಾತು ಕೇಳಿದರೆ ಯಾವ ಪ್ರಯೋಜನವೂ ಇಲ್ಲ ಎಂದು ದ್ರೋಣರು ಹೇಳಲು, ಸುಯೋಧನನು ದ್ರೋಣರ ಈ ಮಾತನ್ನು ಒಪ್ಪಿದನು.

ಅರ್ಥ:
ಅಸುರಾಂತಕ: ರಾಕ್ಷಸರ ಯಮ (ಕೃಷ್ಣ); ಸಹಾಯ: ನೆರವು; ಸುತ: ಪುತ್ರ; ಆಹವ: ಯುದ್ಧ; ಬಲ: ಶಕ್ತಿ; ನೇಮ: ನಿಯಮ; ನೆಗಳು: ಆಚರಿಸು; ಫಲ: ಪ್ರಯೋಜನ; ನೀತಿ: ಮಾರ್ಗ ದರ್ಶನ; ಮಾತು: ನುಡಿ; ಅವನಿಪತಿ: ರಾಜ; ಕಲಶೋದ್ಭವ: ಕಲಶದಿಂದ ಜನಿಸಿದ (ದ್ರೋಣ); ಮತ: ವಿಆರ; ಬಳಿಕ: ನಂತರ; ಮಣಿ: ಒಪ್ಪು; ರಾಯ: ರಾಜ;

ಪದವಿಂಗಡಣೆ:
ಅವರಿಗ್+ಅಸುರಾಂತಕ+ ಸಹಾಯನು
ನಿವಗೆ+ ಗಂಗಾಸುತನ +ಬಲವ್
ಆಹವವ್+ಈನೀತನ+ ನೇಮದಲಿ+ ನೆಗಳುವುದು +ನೀತಿಯಿದು
ಅವರಿವರ +ಮಾತಿನಲಿ+ ಫಲವಿಲ್ಲ್
ಅವನಿಪತಿ +ಕೇಳ್+ಎನಲು +ಕಲಶೋ
ದ್ಭವನ +ಮತದಲಿ +ಬಳಿಕ +ಮಣಿದನು +ಕೌರವರಾಯ

ಅಚ್ಚರಿ:
(೧) ಮಾತನ್ನು ಒಪ್ಪಿದನೆಂದು ಹೇಳುವ ಪರಿ – ಕಲಶೋದ್ಭವನ ಮತದಲಿ ಬಳಿಕ ಮಣಿದನು ಕೌರವರಾಯ
(೨) ರಾಯ, ಅವನಿಪತಿ – ಸಮನಾರ್ಥಕ ಪದ
(೩) ದ್ರೋಣರನ್ನು ಕಲಶೋದ್ಭವ, ಕೃಷ್ಣನನ್ನು ಅಸುರಾಂತಕ, ಭೀಷ್ಮರನ್ನು ಗಂಗಾಸುತ ಎಂದು ಕರೆದಿರುವುದು

ಪದ್ಯ ೨೮: ಬ್ರಹ್ಮನು ಯಾರ ಹೊಟ್ಟೆಯೊಳಗೆ ಇಳಿದನು?

ಆದುದೇ ನಿನ್ನುದರದಲಿ ಜಗ
ವಾದೊಡೀಕ್ಷಿಪೆನೆನುತಲೀ ಕಮ
ಲೋದರನು ಕಮಲಜನ ಜಠರವ ಹೊಕ್ಕು ಹೊರವಂಟು
ಭೇದಿಸಿದೆ ನಾನೆನ್ನ ಜಠರದೊ
ಳಾದ ಲೋಕವನೆಣಿಸಿ ಬಾಯೆನ
ಲಾ ದುರಾಗ್ರಹಿಯಿಳಿದನಸುರಾಂತಕನ ಜಠರದಲಿ (ಅರಣ್ಯ ಪರ್ವ, ೧೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ನಿನ್ನ ಹೊಟ್ಟೆಯಲ್ಲಿ ಜಗತ್ತು ಇರುವುದೇ? ಹಾಗಾದರೆ ಅದನ್ನು ನೋಡುತ್ತೇನೆ ಎಂದು ಶ್ರೀಹರಿಯು ಬ್ರಹ್ಮನ ಜಠರವನ್ನು ಹೊಕ್ಕು ಹೊರಬಂದು, ನಿನ್ನ ಜಠರದಲ್ಲಿರುವ ಲೋಕವನ್ನು ಪರೀಕ್ಷಿಸಿದೆ, ನನ್ನ ಜಠರದಲ್ಲಿ ಎಷ್ಟು ಲೋಕಗಳಿವೆಯೋ ಎಣಿಸಿಕೊಂಡು ಬಾ ಎಂದನು, ಆಗ ಬ್ರಹ್ಮನು ದುರಾಗ್ರಹದಿಂದ ವಿಷ್ಣುವಿನ ಹೊಟ್ಟೆಯೊಳಕ್ಕೆ ಇಳಿದನು.

ಅರ್ಥ:
ಉದರ: ಹೊಟ್ಟೆ; ಜಗ: ಜಗತ್ತು; ಈಕ್ಷಿಪೆ: ನೋಡುವೆ; ಕಮಲೋದರ: ವಿಷ್ಣು; ಕಮಲಜ: ಬ್ರಹ್ಮ; ಕಮಲ: ತಾವರೆ; ಉದರ: ಹೊಟ್ಟೆ; ಜಠರ: ಹೊಟ್ಟೆ; ಹೊಕ್ಕು: ಸೇರು; ಹೊರವಂಟು: ಹೊರಬಂದು; ಭೇದಿಸು: ಸೀಲು; ಲೋಕ: ಜಗತ್ತು; ಎಣಿಸು: ಲೆಕ್ಕ ಮಾಡು; ಬಾ: ಆಗಮಿಸು; ದುರಾಗ್ರಹ: ಮೊಂಡ; ಅಸುರಾಂತಕ: ಕೃಷ್ಣ;

ಪದವಿಂಗಡಣೆ:
ಆದುದೇ +ನಿನ್+ಉದರದಲಿ+ ಜಗವ್
ಆದೊಡ್+ಈಕ್ಷಿಪೆನ್+ಎನುತಲ್+ಈ+ ಕಮ
ಲೋದರನು +ಕಮಲಜನ +ಜಠರವ+ ಹೊಕ್ಕು +ಹೊರವಂಟು
ಭೇದಿಸಿದೆ +ನಾನ್+ಎನ್ನ +ಜಠರದೊ
ಳಾದ +ಲೋಕವನ್+ಎಣಿಸಿ+ ಬಾ+ಎನಲ್
ಆ+ ದುರಾಗ್ರಹಿ+ಇಳಿದನ್+ಅಸುರಾಂತಕನ+ ಜಠರದಲಿ

ಅಚ್ಚರಿ:
(೧) ಜಠರ, ಉದರ – ಸಮನಾರ್ಥಕ ಪದ
(೨) ಕಮಲೋದರ, ಕಮಲಜ – ಕಮಲ ಪದಗಳ ಬಳಕೆ
(೩) ಅಸುರಾಂತಕ, ಕಮಲೋದರ – ವಿಷ್ಣುವನ್ನು ಕರೆದ ಪರಿ

ಪದ್ಯ ೨೬: ಕೃಷ್ಣನು ಸಭೆಗೆ ಯಾವಾಗ ವಿಶ್ವರೂಪ ದರ್ಶನವನ್ನಿಟ್ಟನು?

ಮಗುಳೆ ಗಜಬಜವಾಯ್ತು ಭೀಷ್ಮಾ
ದಿಗಳ ನುಡಿಗಳು ಬಳಲಿದವು ತಾ
ಳಿಗೆಗೆ ನೀರಸವಾಗೆ ಬೆಂಡೆದ್ದೊದರಿದನು ಭೂಪ
ಬಗೆದು ತಮತಮಗೆದ್ದು ನೃಪನೋ
ಲಗದೊಳಸುರಾಂತಕನ ಕೈಗಳ
ಬಿಗಿಯಲಂದನುವಾಗೆ ಹಿಡಿದನು ವಿಶ್ವರೂಪವನು (ಉದ್ಯೋಗ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ತನ್ನ ವಿಶ್ವರೂಪವನ್ನು ತೋರಿದ ಬಳಿಕ ಸಭೆಯಲ್ಲಿ ಕೋಲಹಲವಾಯಿತು. ಅವನನ್ನು ಬಂಧಿಸಲು ಕೌರವಾದಿಗಳು ಮುಂದಾದರು, ಭೀಷ್ಮ ಮತ್ತಿತರರು ಬೇಡ ಬೇಡವೆಂದು ಹೇಳಿದರು ಅದು ಯಾರ ಕಿವಿಗೂ ಬೀಳದೆ ಅವರ ನುಡಿಗಳು ಬರಿದಾದವು, ಅಂಗಳು ಒಣಗಲು ಧೃತರಾಷ್ಟ್ರನು ಬೇಡವೆಂದು ಹೇಳಿದನು, ಇವನ ಮಾತನ್ನು ಲಕ್ಷಿಸದೇ ಕೌರವಾದಿಗಳು ಕೃಷ್ಣನ್ ಕೈಗಳನ್ನು ಕಟ್ಟಲು ಹವಣಿಸುತ್ತಿರಲು ಶ್ರೀಕೃಷ್ಣನು ತನ್ನ ವಿಶ್ವರೂಪವನ್ನು ತೋರಿದನು.

ಅರ್ಥ:
ಮಗುಳೆ: ಮತ್ತೆ; ಗಜಬಜ: ಗಲಾಟೆ, ಕೋಲಾಹಲ; ಆದಿ: ಮೊದಲಾದ; ನುಡಿ: ಮಾತು; ಬಳಲು: ಆಯಾಸ; ನೀರಸ: ಒಣಗಿದುದು; ಬೆಂಡು: ತಿರುಳಿಲ್ಲದುದು, ಪೊಳ್ಳು; ಒದರು: ಹೇಳು; ಭೂಪ: ರಾಜ; ಬಗೆ: ತಿಳಿದು; ಎದ್ದು: ನಿಂತು; ನೃಪ: ರಾಜ; ಓಲಗ: ದರ್ಬಾರು; ಅಸುರಾಂತಕ: ರಾಕ್ಷಸರಿಗೆ ಸಾವನ್ನು ಕೊಡುವವ (ಕೃಷ್ಣ); ಅಂತಕ: ಕೊನೆಗೊಳಿಸುವ; ಕೈ: ಹಸ್ತ; ಬಿಗಿ: ಬಂಧಿಸು; ಅನುವಾಗು: ಸಿದ್ಧವಾಗು; ಹಿಡಿ: ಬಂಧಿಸು; ವಿಶ್ವರೂಪ: ಎಲ್ಲ ಕಡೆಗೂ ವ್ಯಾಪಿಸಿದ (ಕೃಷ್ಣನ) ರೂಪ; ತಾಳಿಗೆ: ಗಂಟಲು;

ಪದವಿಂಗಡಣೆ:
ಮಗುಳೆ +ಗಜಬಜವಾಯ್ತು +ಭೀಷ್ಮಾ
ದಿಗಳ +ನುಡಿಗಳು +ಬಳಲಿದವು +ತಾ
ಳಿಗೆಗೆ +ನೀರಸವಾಗೆ +ಬೆಂಡೆದ್+ ಒದರಿದನು+ ಭೂಪ
ಬಗೆದು +ತಮತಮಗೆದ್ದು+ ನೃಪನ್+ಓ
ಲಗದೊಳ್+ಅಸುರಾಂತಕನ+ ಕೈಗಳ
ಬಿಗಿಯಲಂದ್+ಅನುವಾಗೆ+ ಹಿಡಿದನು +ವಿಶ್ವರೂಪವನು

ಅಚ್ಚರಿ:
(೧) ಗಜಬಜ – ಆಡು ಪದದ ಬಳಕೆ
(೨) ಬಳಲು, ನೀರಸವಾಗಿ ಬೆಂಡೆದ್ದು – ಪ್ರಯೋಜನವಿಲ್ಲದೆ ಎಂದು ಹೇಳುವ ಪದಗಳು