ಪದ್ಯ ೨೯: ಧೃತರಾಷ್ಟ್ರನು ಸಂಜಯನನ್ನು ಯಾರ ಬಗ್ಗೆ ವಿಚಾರಿಸಿದನು?

ತಂದೆನಿಲ್ಲಿಗೆ ಸಕಲ ನಾರೀ
ವೃಂದವನು ಕುರುಪತಿಯ ನೇಮದ
ಲಿಂದಿನೀ ವೃತ್ತಾಂತ ಅರ್ತಿಸಿತಿಲ್ಲಿ ಪರಿಯಂತ
ಮುಂದೆ ಹೇಳುವುದೇನು ನೀ ಬೆಸ
ಸೆಂದಡವನೀಪತಿಯ ಹೊರೆಗೈ
ತಂದನೇ ಗುರುಸೂನು ಮೇಲಣ ಹದನ ಹೇಳೆಂದ (ಗದಾ ಪರ್ವ, ೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ದೊರೆಯ ಅಪ್ಪಣೆಯಂತೆ ಸ್ತ್ರೀವೃಂದವನ್ನು ಇಲ್ಲಿಗೆ ಕರೆತಂದೆನು. ಈ ವೃತ್ತಾಂತವಉ ಇಲ್ಲಿಯವರೆಗೆ ನಡೆಯಿತು. ಇನ್ನೇನು ಹೇಳಲಿ ಎಂದು ಹೇಳಲು, ಧೃತರಾಷ್ಟ್ರನು, ಅಶ್ವತ್ಥಾಮನು ಕೌರವನ ರಕ್ಷಣೆಗೆ ಹೋದನೇ, ಮುಂದೇನಾಯಿತು ಎಂದು ಕುತೂಹಲದಿಂದ ಕೇಳಿದನು.

ಅರ್ಥ:
ತಂದೆ: ಬಂದೆ, ಆಗಮಿಸು; ಸಕಲ: ಎಲ್ಲಾ; ನಾರಿ: ಹೆಂಗಸು; ವೃಂದ: ಗುಂಪು; ನೇಮ: ಅಪ್ಪಣೆ; ವೃತ್ತಾಂತ: ವಿವರಣೆ; ವರ್ತಿಸು: ನಡೆದುದು; ಪರಿ: ರೀತಿ, ಕ್ರಮ; ಹೇಳು: ತಿಳಿಸು; ಬೆಸಸು: ಹೇಳು, ಆಜ್ಞಾಪಿಸು; ಅವನೀಪತಿ: ರಾಜ; ಹೊರೆ: ರಕ್ಷಣೆ; ಐತಂದು: ಬಂದು ಸೇರು; ಸೂನು: ಮಗ; ಹದ: ಸ್ಥಿತಿ;

ಪದವಿಂಗಡಣೆ:
ತಂದೆನ್+ಇಲ್ಲಿಗೆ +ಸಕಲ+ ನಾರೀ
ವೃಂದವನು +ಕುರುಪತಿಯ +ನೇಮದಲ್
ಇಂದಿನೀ +ವೃತ್ತಾಂತ + ವರ್ತಿಸಿತಿಲ್ಲಿ +ಪರಿಯಂತ
ಮುಂದೆ +ಹೇಳುವುದೇನು +ನೀ +ಬೆಸ
ಸೆಂದಡ್+ಅವನೀಪತಿಯ+ ಹೊರೆಗ್
ಐತಂದನೇ +ಗುರುಸೂನು +ಮೇಲಣ+ ಹದನ+ ಹೇಳೆಂದ

ಅಚ್ಚರಿ:
(೧) ತಂದೆನಿಲ್ಲಿಗೆ, ಹೊರೆಗೈತಂದನೇ – ಪದಗಳ ಬಳಕೆ

ಪದ್ಯ ೪: ಪಾಂಡವರು ಯುದ್ಧಕ್ಕೆ ಹೇಗೆ ತಯಾರಾದರು?

ಗಜಕೆ ಗುಳವನು ಬೀಸಿ ವಾಜಿ
ವ್ರಜವ ಹಲ್ಲಣಿಸಿದರು ಗಾಲಿಯ
ಗಜರು ಘೀಳಿಡೆ ನೊಗನ ಹೆಗಲಲಿ ಕುಣಿದವಶ್ವಚಯ
ಭುಜದ ಹೊಯ್ಲಿನ ಹರಿಗೆಗಳ ಗಜ
ಬಜದ ಬಿಲುಜೇವಡೆಯ ರವದ
ಕ್ಕಜದ ಕಾಲಾಳೊದಗಿತವನೀಪತಿಯ ಸನ್ನೆಯಲಿ (ಶಲ್ಯ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ಆನೆಗಳಿಗೆ ಕವಚವನ್ನು ಬೀಸಿ, ಕುದುರೆಗಳಿಗೆ ತಡಿಯನ್ನು ಹಾಕಿ, ರಥದ ಗಾಲಿಗಳು ಸದ್ದುಮಾಡಲು, ನೊಗವನ್ನು ಹೊತ್ತ ಕುದುರೆಗಳು ಕುಣಿದವು. ಭುಜವನ್ನು ತಟ್ಟಿ ಗುರಾಣಿಗಳ ಮರೆ ಹಿಡಿದು ಕೆಲಪದಾತಿಗಳು, ಬಿಲ್ಲನ್ನು ಜೀವಡೆಯುವ ಪದಾತಿ ಬಿಲ್ಲುಗಾರರು ಕೆಲವರು ದೊರೆಯ ಸನ್ನೆಯಂತೆ ಮುನ್ನುಗ್ಗಿದರು.

ಅರ್ಥ:
ಗಜ: ಆನೆ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಬೀಸು: ಬೀಸುವಿಕೆ, ತೂಗುವಿಕೆ; ಹಲ್ಲಣ: ಪಲ್ಲಣ, ಜೀನು, ತಡಿ; ಗಾಲಿ: ಚಕ್ರ; ಘೀಳಿಡು: ಅರಚು; ನೊಗ: ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ಹೆಗಲು: ಭುಜ; ಕುಣಿ: ನರ್ತಿಸು; ಅಶ್ವ: ಕುದುರೆ; ಚಯ: ಗುಂಪು; ಭುಜ: ಬಾಹು; ಹೊಯ್ಲು: ಏಟು, ಹೊಡೆತ; ಹರಿಗೆ: ಚಿಲುಮೆ; ಗಜಬಜ: ಗೊಂದಲ; ಜೇವಡೆ: ಬಿಲ್ಲಿಗೆ ಹೆದೆಯೇರಿಸಿ ಮಾಡುವ ಧ್ವನಿ, ಧನುಷ್ಟಂಕಾರ; ಬಿಲು: ಬಿಲ್ಲು, ಚಾಪ; ರವ: ಶಬ್ದ; ಕಾಲಾಳು: ಸೈನಿಕ; ಒದಗು: ಹೊಂದು; ಅವನೀಪತಿ: ರಾಜ; ಸನ್ನೆಯ: ಗುರುತು;

ಪದವಿಂಗಡಣೆ:
ಗಜಕೆ +ಗುಳವನು +ಬೀಸಿ +ವಾಜಿ
ವ್ರಜವ+ ಹಲ್ಲಣಿಸಿದರು +ಗಾಲಿಯ
ಗಜರು +ಘೀಳಿಡೆ +ನೊಗನ +ಹೆಗಲಲಿ +ಕುಣಿದವ್+ಅಶ್ವ+ಚಯ
ಭುಜದ +ಹೊಯ್ಲಿನ +ಹರಿಗೆಗಳ +ಗಜ
ಬಜದ +ಬಿಲು+ಜೇವಡೆಯ +ರವದಕ್ಕ್
ಗಜದ ಕಾಲಾಳೊದಗಿತ್+ಅವನೀಪತಿಯ+ ಸನ್ನೆಯಲಿ

ಅಚ್ಚರಿ:
ಗಜ, ಭುಜ, ವ್ರಜ, ಗಜಬಜ – ಪ್ರಾಸ ಪದಗಳು

ಪದ್ಯ ೭: ಎರಡನೇ ದಿನದ ಯುದ್ಧವನ್ನು ಯಾರು ಗೆದ್ದರು?

ಬೀಳಲವನೀಪತಿಗಳತಿ ಹೀ
ಹಾಳಿಯಲಿ ಸಾತ್ಯಕಿ ಮುಳಿದು ಬಲು
ಗೋಲಿನಲಿ ಗಂಗಾಕುಮಾರನ ಸಾರಥಿಯನೆಸಲು
ಮೇಲುಗಾಳೆಗವವರ ಸೇರಿತು
ಸೋಲು ಕುರುಪತಿಗಾಯ್ತು ಕಿರಣದ
ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ (ಭೀಷ್ಮ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ಹೀಗೆ ರಾಜರು ನೆಲಕ್ಕುರುಳಲು, ಸಾತ್ಯಕಿಯು ಕೋಪದಿಂದ ಭೀಷ್ಮನ ಸಾರಥಿಯನ್ನು ಕೊಂದನು. ಆ ದಿನ ಯುದ್ಧದಲ್ಲಿ ಪಾಂಡವರು ಗೆದ್ದರು; ದುರ್ಯೋಧನನಿಗೆ ಸೋಲಾಯಿತು, ಸೂರ್ಯಕಿರಣಗಳು ಪಶ್ಚಿಮ ಸಮುದ್ರಕ್ಕೆ ಗುಳೆ ಹೊರಟವು. ಆ ದಿನದ ಯುದ್ಧ ಮುಗಿಯಿತು.

ಅರ್ಥ:
ಬೀಳು: ಕುಗ್ಗು; ಅವನೀಪತಿ: ರಾಜ; ಹೀಹಾಳಿ: ತೆಗಳಿಕೆ, ಅವಹೇಳನ; ಮುಳಿ: ಸಿಟ್ಟು, ಕೋಪ; ಬಲು: ಬಹಳ; ಕೋಲು: ಬಾಣ; ಕುಮಾರ: ಮಗ; ಸಾರಥಿ: ಸೂತ; ಎಸು: ಬಾಣ ಪ್ರಯೋಗ ಮಾಡು; ಮೇಲು: ಎತ್ತರ; ಕಾಳೆಗ: ಯುದ್ಧ; ಸೇರು: ತಲುಪು, ಮುಟ್ಟು; ಸೋಲು: ಪರಾಭವ; ಕಿರಣ: ರಶ್ಮಿ, ಬೆಳಕಿನ ಕದಿರು;
ಗೂಳೆಯ: ಊರು ಬಿಟ್ಟು ವಲಸೆ ಹೋಗುವುದು; ಪಡುವಣ: ಪಶ್ಚಿಮ; ಸಮುದ್ರ: ಸಾಗರ; ತೆಗೆ: ಈಚೆಗೆ ತರು, ಹೊರತರು; ಇನ: ಸೂರ್ಯ; ಇಳಿ: ಕೆಳಕ್ಕೆ ಬರು;

ಪದವಿಂಗಡಣೆ:
ಬೀಳಲ್+ಅವನೀಪತಿಗಳ್+ಅತಿ+ ಹೀ
ಹಾಳಿಯಲಿ +ಸಾತ್ಯಕಿ +ಮುಳಿದು +ಬಲು
ಗೋಲಿನಲಿ +ಗಂಗಾಕುಮಾರನ+ ಸಾರಥಿಯನ್+ಎಸಲು
ಮೇಲುಗಾಳೆಗವ್+ಅವರ +ಸೇರಿತು
ಸೋಲು +ಕುರುಪತಿಗಾಯ್ತು +ಕಿರಣದ
ಗೂಳಯವು +ಪಡುವಣ+ ಸಮುದ್ರಕೆ +ತೆಗೆಯನ್+ಇನನ್+ಇಳಿದ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ಕಿರಣದ ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ

ಪದ್ಯ ೩೧: ಕಾಮುಕರು ಎಲ್ಲಿಗೆ ಓಡಿ ಹೋದರು?

ಚೆಲ್ಲಿದರು ಚಪಳೆಯರು ಮುನಿಜನ
ವೆಲ್ಲ ಪಾಂಡವರಾಶ್ರಮದ ಮೊದ
ಲಲ್ಲಿ ಮೊನೆಗಣೆ ಮೊರೆದು ಮುರಿದವು ಮೊನೆಯ ಮುಂಬಿಗರ
ಚಲ್ಲೆಗಂಗಳ ಯುವತಿಯರ ನಾ
ನಲ್ಲಿ ಕಾಣೆನು ಕಾಮುಕರು ನಿಂ
ದಲ್ಲಿ ನಿಲ್ಲದೆ ಹರಿದರವನೀಪತಿಯ ಪಾಳೆಯಕೆ (ಅರಣ್ಯ ಪರ್ವ, ೧೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ಯುವತಿಯರು ನಿಲ್ಲದ ಓಡಿ ಹೋದರು, ಯಾರೂ ಕಾಣಲಿಲ್ಲ, ಪಾಂಡವರ ಆಶ್ರಮದ ಮುಂದೆ ಮೊದಲ ಸಾಲಿನ ಸೈನಿಕರು ಶತ್ರುಗಳ ಹೊಡೆತಕ್ಕೆ ಬಲಿಯಾದರು. ಜಲಕ್ರೀಡೆಗೆ ಬಂದ ಕಾಮುಕರು ಕೌರವನ ಪಾಳೆಯಕ್ಕೆ ಓಡಿ ಹೋದರು.

ಅರ್ಥ:
ಚೆಲ್ಲು: ಹರಡು; ಚಪಳೆ: ಚಂಚಲ ಸ್ವಭಾವದವಳು; ಮುನಿ: ಋಷಿ; ಮೊನೆ: ಮುಂದೆ, ಅಗ್ರ; ಆಶ್ರಮ: ಕುಟೀರ; ಮೊರೆ: ಗೋಳಾಟ, ಹುಯ್ಯಲು; ಮುರಿ: ಸೀಳು; ಮುಂಬಿಗ: ಮೊದಲಿಗ; ಚಲ್ಲೆ: ಹರಡು; ಕಂಗಳು: ಕಣ್ಣು; ಯುವತಿ: ಹೆಣ್ಣು; ಕಾಣು: ತೋರು; ಕಾಮುಕ: ಲಂಪಟ; ನಿಂದು: ನಿಲ್ಲು; ಹರಿ: ಚಲಿಸು, ಸಾಗು; ಅವನೀಪತಿ: ರಾಜ; ಪಾಳೆಯ: ಬೀಡು, ಶಿಬಿರ;

ಪದವಿಂಗಡಣೆ:
ಚೆಲ್ಲಿದರು +ಚಪಳೆಯರು +ಮುನಿಜನ
ವೆಲ್ಲ +ಪಾಂಡವರ್+ಆಶ್ರಮದ +ಮೊದ
ಲಲ್ಲಿ +ಮೊನೆಗಣೆ+ ಮೊರೆದು+ ಮುರಿದವು +ಮೊನೆಯ +ಮುಂಬಿಗರ
ಚಲ್ಲೆಗಂಗಳ+ ಯುವತಿಯರ +ನಾ
ನಲ್ಲಿ +ಕಾಣೆನು +ಕಾಮುಕರು +ನಿಂ
ದಲ್ಲಿ +ನಿಲ್ಲದೆ +ಹರಿದರ್+ಅವನೀಪತಿಯ+ ಪಾಳೆಯಕೆ

ಅಚ್ಚರಿ:
(೧) ಮ ಕಾರದ ಸಾಲು ಪದ – ಮೊದಲಲ್ಲಿ ಮೊನೆಗಣೆ ಮೊರೆದು ಮುರಿದವು ಮೊನೆಯ ಮುಂಬಿಗರ

ಪದ್ಯ ೩೫: ಕರ್ಣನು ಮೆಲ್ಲನೆ ಯಾರ ಎದುರು ಯುದ್ಧಮಾಡಲು ಹೋದನು?

ಮತ್ತೆ ಜೋಡಿಸಿ ಕೌರವೇಂದ್ರನ
ನೊತ್ತಲಿಕ್ಕೆ ಮಹಾರಥರು ರಿಪು
ಮತ್ತದಂತಿಯ ಕೆಣಕಿದರು ಕೆದರಿದರು ಮಾರ್ಗಣವ
ಎತ್ತಲವನೀಪತಿಯ ಮೋಹರ
ವತ್ತ ಮೆಲ್ಲನೆ ರಥವ ಬಿಟ್ಟನು
ಮತ್ತೆ ಮೂದಲಿಸಿದನು ಯಮಸೂನುವನು ಕಲಿಕರ್ಣ (ಕರ್ಣ ಪರ್ವ, ೧೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಪುನಃ ಅವರೆಲ್ಲರೂ ಒಟ್ಟುಗೂಡಿ, ಕೌರವನನ್ನು ಅತ್ತನಿಲ್ಲಿಸಿ ಭೀಮನೆಂಬ ಮದದಾನೆಯನ್ನು ಬಾಣಗಳಿಂದ ಕೆಣಕಿದರು. ಕರ್ಣನು ಈ ಕೋಲಾಹಲದ ಮಧ್ಯೆ ನಿಧಾನವಾಗಿ ಮತ್ತೆ ಧರ್ಮಜನ ಎದುರು ಹೋಗಿ ಅವನನ್ನು ತಡೆದು ಮೂದಲಿಸಿದನು.

ಅರ್ಥ:
ಮತ್ತೆ: ಪುನಃ; ಜೋಡಿಸು: ಸೇರಿಸು; ಒತ್ತು: ಆಕ್ರಮಿಸು, ಮುತ್ತು; ಮಹಾರಥ: ಪರಾಕ್ರಮಿ; ರಿಪು: ವೈರಿ; ಮತ್ತದಂತಿ: ಮದದಾನೆ; ಕೆಣಕು: ರೇಗಿಸು; ಕೆದರು: ಹರಡು; ಮಾರ್ಗಣ:ಬಾಣ, ಅಂಬು; ಅವನೀಪತಿ: ರಾಜ; ಮೋಹರ: ಯುದ್ಧ; ಮೆಲ್ಲನೆ: ನಿಧಾನ; ರಥ: ಬಂಡಿ; ಬಿಟ್ಟನು: ತೆಗೆದನು; ಮೂದಲಿಸು: ಹಂಗಿಸು; ಯಮಸೂನು: ಯಮನ ಮಗ (ಧರ್ಮರಾಯ); ಕಲಿ: ಶೂರ;

ಪದವಿಂಗಡಣೆ:
ಮತ್ತೆ +ಜೋಡಿಸಿ +ಕೌರವೇಂದ್ರನನ್
ಒತ್ತಲಿಕ್ಕೆ +ಮಹಾರಥರು +ರಿಪು
ಮತ್ತದಂತಿಯ +ಕೆಣಕಿದರು +ಕೆದರಿದರು +ಮಾರ್ಗಣವ
ಎತ್ತಲ್+ಅವನೀಪತಿಯ+ ಮೋಹರವ್
ಅತ್ತ +ಮೆಲ್ಲನೆ +ರಥವ +ಬಿಟ್ಟನು
ಮತ್ತೆ +ಮೂದಲಿಸಿದನು+ ಯಮಸೂನುವನು+ ಕಲಿ+ಕರ್ಣ

ಅಚ್ಚರಿ:
(೧) ಭೀಮನನ್ನು ಮತ್ತದಂತಿ ಎಂದು ಕರೆದಿರುವುದು
(೨) ಮತ್ತೆ – ೧, ೬ ಸಾಲಿನ ಮೊದಲ ಪದ
(೩) ಮತ್ತ, ಅತ್ತ, ಎತ್ತ – ಪ್ರಾಸ ಪದಗಳು

ಪದ್ಯ ೨೯: ಕರ್ಣನು ಯುಧಿಷ್ಥಿರನ ಮೇಲೆ ಹೇಗೆ ದಾಳಿ ಮಾಡಿದನು?

ಎಚ್ಚನರಸನ ಭುಜವ ಕೆಲಸಾ
ರ್ದೆಚ್ಚನಾತನ ಸಾರಥಿಯ ರಥ
ದಚ್ಚನಾತನ ಹಯವನವನೀಪತಿಯ ಟೆಕ್ಕೆಯವ
ಎಚ್ಚು ಮೂದಲಿಸಿದನು ಪುನರಪಿ
ಯೆಚ್ಚು ಭಂಗಿಸಿ ನೃಪನ ಮರ್ಮವ
ಚುಚ್ಚಿ ನುಡಿದನು ಘಾಸಿ ಮಾಡಿದನಾ ನೃಪಾಲಕನ (ಕರ್ಣ ಪರ್ವ, ೧೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕರ್ಣನು ಯುಧಿಷ್ಠಿರನೆದುರು ಯುದ್ಧಕ್ಕೆ ನಿಂದು ಅವನ ಭುಜಕ್ಕೆ ತನ್ನ ಬಾಣಗಳನ್ನು ಹೊಡೆದನು, ಪಕ್ಕಕ್ಕೆ ಸರಿದು ಸಾರಥಿಯ ಮೇಲೆ ಬಾಣ ಪ್ರಯೋಗದಿಂದ ನೋವನ್ನುಂಟು ಮಾಡಿ, ರಥದ ಅಚ್ಚನ್ನೂ, ಧ್ವಜವನ್ನೂ ಬಾಣದಿಂದ ಹೊಡೆದು ಅವನನ್ನು ಮೂದಲಿಸಿದನು. ಮತ್ತೆ ಹೊಡೆದು ಮರ್ಮಾಘಾತವಾಗುವಂತೆ ಚುಚ್ಚು ಮಾತುಗಳನ್ನಾಡಿ ಯುಧಿಷ್ಠಿರನಿಗೆ ಘಾಸಿಮಾಡಿದನು.

ಅರ್ಥ:
ಎಚ್ಚು: ಸವರು, ಬಾಣಬಿಡು; ಅರಸ: ರಾಜ; ಭುಜ: ತೋಲು; ಸಾರು: ಬಳಿ, ಲೇಪಿಸು; ಕೆಲ: ಸ್ವಲ್ಪ; ಸಾರಥಿ: ಸೂತ, ರಥವನ್ನು ಓಡಿಸುವ; ರಥ: ಬಂಡಿ; ಅಚ್ಚು: ನಡುಗೂಟ, ಕೀಲು, ಚಕ್ರ; ಹಯ: ಕುದುರೆ; ಅವನೀಪತಿ: ರಾಜ; ಟೆಕ್ಕೆ: ಧ್ವಜ; ಮೂದಲಿಸು: ಹಂಗಿಸು; ಪುನರಪಿ: ಪುನಃ, ಮತ್ತೆ; ಭಂಗ: ತುಂಡು, ಚೂರು; ನೃಪ: ರಾಜ; ಮರ್ಮ: ದೇಹದ ಆಯಕಟ್ಟಿನ ಸ್ಥಳ; ಚುಚ್ಚು: ಇರಿ; ನುಡಿ: ಮಾತಾಡು; ಘಾಸಿ: ಹಿಂಸೆ, ಕಷ್ಟ; ನೃಪಾಲಕ: ರಾಜ;

ಪದವಿಂಗಡಣೆ:
ಎಚ್ಚನ್+ಅರಸನ+ ಭುಜವ +ಕೆಲ+ಸಾರ್ದ್
ಎಚ್ಚನ್+ಆತನ +ಸಾರಥಿಯ +ರಥದ್
ಅಚ್ಚನ್+ಆತನ +ಹಯವನ್+ಅವನೀಪತಿಯ +ಟೆಕ್ಕೆಯವ
ಎಚ್ಚು +ಮೂದಲಿಸಿದನು +ಪುನರಪಿ
ಯೆಚ್ಚು+ ಭಂಗಿಸಿ+ ನೃಪನ+ ಮರ್ಮವ
ಚುಚ್ಚಿ+ ನುಡಿದನು +ಘಾಸಿ +ಮಾಡಿದನಾ +ನೃಪಾಲಕನ

ಅಚ್ಚರಿ:
(೧) ಅರಸ, ನೃಪಾಲಕ, ಅವನೀಪತಿ – ಸಮನಾರ್ಥಕ ಪದಗಳು
(೨) ಮೂದಲಿಸು, ಘಾಸಿ ಮಾಡು, ಚುಚ್ಚು ನುಡಿ – ನೋವನ್ನುಂಟು ಮಾಡಿದ ಎಂದು ಹೇಳುವ ಪದಗಳು

ಪದ್ಯ ೪: ಧೃತರಾಷ್ಟ್ರನ ಸ್ಮರಣೆಯಿಂದ ಯಾರು ಆಗಮಿಸಿದರು?

ನೆನೆಯಲೊಡನೆ ಸನತ್ಸುಜಾತನು
ಮನೆಗೆ ಬರಲಿದಿರೆದ್ದು ಕೌರವ
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು
ಮುನಿಪ ನೀ ಕೃಪೆ ಮಾಡಬೇಕೆನ
ಲನುನಯದೊಳವನೀಪತಿಗೆ ಜನ
ಜನಿತವೆನಲರುಹಿದನಲೈ ಪರಲೋಕ ಸಾಧನವ (ಉದ್ಯೋಗ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮನಸ್ಸಿನಲ್ಲಿ ಸ್ಮರಿಸಿದೊಡೆ ಸನತ್ಸುಜಾತನು ಅವನಿದ್ದಲ್ಲಿಗೆ ಆಗಮಿಸಿದನು. ಧೃತರಾಷ್ಟ್ರನು ಅವನಿಗೆ ನಮಸ್ಕರಿಸಿ “ಮುನಿವರ್ಯರೇ, ನನಗೆ ಬ್ರಹ್ಮೋಪದೇಶವನ್ನು ಕೃಪೆಯಿಂದ ಮಾಡಿ, ಎಂದು ಕೇಳಲು ಮುನಿಶ್ರೇಷ್ಠರಾದ ಸನತ್ಸುಜಾತರು ಬ್ರಹ್ಮವಿದ್ಯೆಯನ್ನು ಕುರಿತು ಹೇಳಿದರು.

ಅರ್ಥ:
ನೆನೆ: ಜ್ಞಾಪಿಸು; ಮನೆ: ಆಲಯ; ಬರಲು: ಆಗಮಿಸು; ಜನಕ: ತಂದೆ; ಮೈಯಿಕ್ಕಿದನು: ನಮಸ್ಕರಿಸಿದನು; ಉಪದೇಶ: ಬೋಧಿಸುವುದು; ಮುನಿ: ಋಷಿ; ಕೃಪೆ: ಕರುಣೆ; ಅನುನಯ:ನಯವಾದ ಮಾತುಗಳಿಂದ ಮನವೊಲಿಸುವುದು; ಅವನೀಪತಿ: ರಾಜ; ಜನಜನಿತ: ಜನರಲ್ಲಿ ಹಬ್ಬಿರುವ ವಿಷಯ; ಅರುಹು: ತಿಳಿವಳಿಕೆ; ಪರಲೋಕ: ಬೇರೆ ಜಗತ್ತು; ಸಾಧನ: ಅಭ್ಯಾಸ; ಇದಿರು: ಎದುರು;

ಪದವಿಂಗಡಣೆ:
ನೆನೆಯಲ್+ಒಡನೆ +ಸನತ್ಸುಜಾತನು
ಮನೆಗೆ +ಬರಲ್+ಇದಿರ್+ಎದ್ದು +ಕೌರವ
ಜನಕ +ಮೈಯಿಕ್ಕಿದನ್+ಎನಗೆ +ಬ್ರಹ್ಮೋಪದೇಶವನು
ಮುನಿಪ+ ನೀ +ಕೃಪೆ +ಮಾಡಬೇಕೆನಲ್
ಅನುನಯದೊಳ್+ಅವನೀಪತಿಗೆ+ ಜನ
ಜನಿತವೆನಲ್+ಅರುಹಿದನಲೈ +ಪರಲೋಕ +ಸಾಧನವ

ಅಚ್ಚರಿ:
(೧) ಕೌರವಜನಕ, ಅವನೀಪತಿ – ಧೃತರಾಷ್ಟ್ರನನ್ನು ಕರೆಯಲು ಬಳಸಿದ ಪದಗಳು
(೨) ನಮಸ್ಕರಿಸಿದನು ಎಂದು ಹೇಳಲು ಮೈಯಿಕ್ಕಿದನು ಪದದ ಬಳಕೆ

ಪದ್ಯ ೪: ಪಾಂಡವರು ಪಾಂಚಾಲ ನಗರದಲ್ಲಿ ಏನನ್ನು ನೋಡಿದರು?

ಚತುರ ಉದಧೀ ವಲಯದವನೀ
ಪತಿಗಳೇಕಾಮಿಷ ವಿರೋಧ
ಸ್ಥಿತಿಯ ನೋಡದೆ ನೂಕಿ ನಡೆದರು ದ್ರುಪದ ಪುರಿಗಾಗಿ
ಅತಿಬಲರು ಬಹು ರಾಜಬಲ ಪ
ದ್ಧತಿಗಳನು ನೋಡುತ್ತ ಬಂದರು
ಕೃತಕ ವಿಪ್ರೋತ್ತಮರು ಭಿಕ್ಷಾವಿಹಿತ ವೃತ್ತಿಯಲಿ (ಆದಿ ಪರ್ವ, ೧೨ ಸಂಧಿ, ೪ ಪದ್ಯ)

ತಾತ್ಪರ್ಯ:
ನಾಲ್ಕು ಸಮುದ್ರಗಳವರೆಗಿನ ರಾಜರೆಲ್ಲರು ಒಂದು ವಸ್ತುವಿನ ಸಲುವಾಗಿ (ದ್ರೌಪದಿ), ಅದು ಈ ಎಲರಿಗೂ ಸಿಗಲು ಸಾಧ್ಯವೇ ಎಂದು ಮರೆತೇಬಿಟ್ಟರೇನೋ ಎಂಬಂತೆ ದ್ರುಪದನ ರಾಜಧಾನಿಗೆ ಬಂದು ಸೇರಿದರು. ಅತಿಬಲರಾದ ಪಾಂಡವರು ಅನೇಕ ದೇಶಗಳಿಂದ ಬಂದಿದ್ದ ರಾಜರನೆಲ್ಲಾ ನೋಡುತ್ತ, ವಿಪ್ರರವೇಷದಲ್ಲಿ ಭಿಕ್ಷಾಟನೆಯ ವೃತ್ತಿಯಲ್ಲಿ ಪಾಂಚಾಲ ನಗರವನ್ನು ಹೊಕ್ಕರು.

ಅರ್ಥ:
ಚತುರ: ನಾಲ್ಕು; ಉದ: ಜಲ, ನೀರು; ಉದಧಿ: ಸಮುದ್ರ; ವಲಯ: ಕ್ಷೇತ್ರ, ಚೌಕಟ್ಟು; ಅವನೀಪತಿ: ರಾಜ, ನೃಪ; ಆಮಿಷ: ಆಸೆ; ವಿರೋಧ: ತಡೆ, ಅಡ್ಡಿ,ಪ್ರತಿಯಾದ; ಸ್ಥಿತಿ: ಅಸ್ತಿತ್ವ, ದೆಸೆ; ನೋಡದೆ: ಗೋಚರಿಸದೆ; ನೂಕಿ: ತಳ್ಳು; ಪುರಿ: ಊರು; ಬಲ:ಶೌರ್ಯ, ಶಕ್ತಿ; ಅತಿ: ವಿಶೇಷ; ಬಹು: ತುಂಬ; ರಾಜಬಲ: ಸೈನ್ಯ; ಪದ್ಧತಿ: ಕ್ರಮ, ರೀತಿ; ಬಂದರು: ಆಗಮಿಸು; ಕೃತಕ: ನೈಜವಲ್ಲದ; ವಿಪ್ರ: ಬ್ರಾಹ್ಮಣ; ಉತ್ತಮ: ಶ್ರೇಷ್ಠ; ಭಿಕ್ಷ:ಬೇಡು, ಅಂಗಲಾಚು; ವಿಹಿತ: ಇರಿಸಿದ, ಯೋಗ್ಯವಾದ; ವೃತ್ತಿ: ಕೆಲಸ;

ಪದವಿಂಗಡನೆ:
ಚತುರ +ಉದಧೀ +ವಲಯದ್+ಅವನೀ
ಪತಿಗಳ್+ಏಕ+ಆಮಿಷ+ ವಿರೋಧ
ಸ್ಥಿತಿಯ +ನೋಡದೆ +ನೂಕಿ +ನಡೆದರು+ ದ್ರುಪದ+ ಪುರಿಗಾಗಿ
ಅತಿಬಲರು+ ಬಹು+ ರಾಜಬಲ+ ಪ
ದ್ಧತಿಗಳನು +ನೋಡುತ್ತ +ಬಂದರು
ಕೃತಕ+ ವಿಪ್ರೋತ್ತಮರು+ ಭಿಕ್ಷಾವಿಹಿತ+ ವೃತ್ತಿಯಲಿ

ಅಚ್ಚರಿ:
(೧) ಅವನೀಪತಿ, ರಾಜ – ಸಮಾನಾರ್ಥಕ ಪದ
(೨) ಬಲ ಪದದ ಪ್ರಯೋಗ – ಅತಿಬಲ, ರಾಜಬಲ
(೩) ನೋಡದೆ, ನೋಡುತ್ತ – ಪದಗಳ ಬಳಕೆ, ಎಲ್ಲ ರಾಜರು ಒಬ್ಬಳಾದ ದ್ರೌಪದಿ ಎಲ್ಲರಿಗೂ ಸಿಗಲು ಸಾಧ್ಯವೇ ಎನ್ನುವುದನ್ನು ನೋಡದೆ ಬಂದರೆ, ಪಾಂಡವರು ಎಲ್ಲಾ ರಾಜರಬಲವನ್ನು ನೋಡುತ್ತಾ ಬಂದರು ಎಂದು ವರ್ಣಿಸಿದೆ.
(೪)ರಾಜರೆಲ್ಲರು ಬಂದ ರೀತಿ – ನೂಕಿ ನಡೆದರು (ಆತುರ); ಪಾಂಡವರು ಬಂದ ರೀತಿ – ಪದ್ಧತಿಗಳನ್ನು ನೋಡುತ್ತಾ ಬಂದರು (ಸಾವಕಾಶವಾಗಿ)