ಪದ್ಯ ೩: ಕೊಳದ ಬಳಿ ಯಾರು ಬಂದು ನಿಂತರು?

ಬಂದುದರಿಬಲ ಕೊಳನ ತೀರದ
ಲಂದು ವೇಢೈಸಿದರು ಸರಸಿಯ
ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ
ಅಂದಣದಲೈತಂದು ಧರ್ಮಜ
ನಿಂದನರ್ಜುನ ಭೀಮ ಯಮಳ ಮು
ಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ (ಗದಾ ಪರ್ವ, ೫ ಸಂಧಿ, ೩ ಪದ್ಯ)

ತಾತ್ಪರ್ಯ:
ಶತ್ರುಸೇನೆಯು ಬಂದು ಕೊಳದ ತೀರವನ್ನು ಮುತ್ತಿ ಸುತ್ತುವರಿದು ಭೂಮಿ ಬಿರಿಯುವಂತೆ ಬೊಬ್ಬೆಯನ್ನು ಹಾಕಿದರು. ಯುಧಿಷ್ಠಿರನು ಪಲ್ಲಕ್ಕಿಯಲ್ಲಿ ಬಂದಿಳಿದು ನಿಂತನು. ಅವನೊಡನೆ ಭೀಮಾರ್ಜುನನಕುಲಸಹದೇವರೂ, ಶ್ರೀಕೃಷ್ಣನೂ ಧೃಷ್ಟದ್ಯುಮ್ನ ಶಿಖಂಡಿ ಬಂದು ನಿಂತರು.

ಅರ್ಥ:
ಅರಿ: ವೈರಿ; ಬಲ: ಸೈನ್ಯ; ಕೊಳ: ಸರೋವರ; ತೀರ: ದಡ; ವೇಡೈಸು: ಸುತ್ತುವರಿ; ಸರಸಿ: ಸರೋವರ; ಬಂದಿಕಾರ: ಕಳ್ಳ, ಸೆರೆಹಿಡಿಯಲ್ಪಟ್ಟವ; ಬೊಬ್ಬಿರಿ: ಗರ್ಜಿಸು; ಅಬ್ಬರ: ಆರ್ಭಟ; ಧರೆ: ಭೂಮಿ; ಬಿರಿ: ಬಿರುಕು, ಸೀಳು; ಅಂದಣ: ಪಲ್ಲಕ್ಕಿ, ಮೇನೆ; ಐತಂದು: ಬಂದು ಸೇರು; ಸೂನು: ಮಗ; ಸಹಿತ: ಜೊತೆ; ನಿಂದು: ನಿಲ್ಲು; ಯಮಳ: ನಕುಲ ಸಹದೇವ;

ಪದವಿಂಗಡಣೆ:
ಬಂದುದ್+ಅರಿಬಲ+ ಕೊಳನ +ತೀರದಲ್
ಅಂದು +ವೇಢೈಸಿದರು+ ಸರಸಿಯ
ಬಂದಿಕಾರರು +ಬೊಬ್ಬಿರಿದರ್+ಅಬ್ಬರಕೆ +ಧರೆ +ಬಿರಿಯೆ
ಅಂದಣದಲ್+ಐತಂದು +ಧರ್ಮಜ
ನಿಂದನ್+ಅರ್ಜುನ +ಭೀಮ +ಯಮಳ +ಮು
ಕುಂದ +ಸಾತ್ಯಕಿ +ದ್ರುಪದ+ಸೂನು +ಶಿಖಂಡಿಗಳು+ ಸಹಿತ

ಅಚ್ಚರಿ:
(೧) ಕೊಳ, ಸರಸಿ – ಸಮಾನಾರ್ಥಕ ಪದ
(೨) ಶಬ್ದದ ತೀವ್ರತೆ – ಸರಸಿಯ ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ

ಪದ್ಯ ೧೯: ಸಮಸಪ್ತಕರು ಅರ್ಜುನನನ್ನು ಹೇಗೆ ಆಕ್ರಮಣ ಮಾಡಿದರು?

ಏರಿದರು ಸಮಸಪ್ತಕರು ಕೈ
ದೋರಿದರು ಫಲುಗುಣನ ಜೋಡಿನೊ
ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ
ನೂರು ಶರದಲಿ ಬಳಿ ವಿಶಿಖ ನಾ
ನೂರರಲಿ ಬಳಿಶರಕೆ ಬಳಿಶರ
ವಾರು ಸಾವಿರದಿಂದ ತರಿದನು ಪಾರ್ಥನರಿಬಲವ (ಗದಾ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸಮಸಪ್ತಕರು ನುಗ್ಗಿ ಬಾಣಗಳನ್ನು ಬಿಡಲು ಅರ್ಜುನನ ಕವಚದಲ್ಲಿ ಬಾಣಗಳು ನಟ್ಟವು. ರಥಾ ಕುದುರೆಗಳು ನೊಂದವು, ಅರ್ಜುನನು ನೂರು, ನಾನೂರು, ಆರುಸಾವಿರ ಬಾಣಗಳನ್ನು ಬಿಟ್ಟು ಶತ್ರು ಸೇನೆಯನ್ನು ಸಂಹರಿಸಿದನು.

ಅರ್ಥ:
ಏರು: ಮೇಲೆ ಹತ್ತು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಕೈದೋರು: ಸನ್ನೆ ಮಾಡು; ಜೋಡು: ಜೊತೆ, ಕೂಡಿಸು; ತಳಿತ: ಚಿಗುರು; ನೊಂದು: ನೋವುಂದು; ಅಡಿಗಡಿ: ಹೆಜ್ಜೆ ಹೆಜ್ಜೆ;ಅಶ್ವಚಯ: ಕುದುರೆಗಳ ಗುಂಪು; ಶರ: ಬಾಣ; ಬಳಿ: ಹತ್ತಿರ; ವಿಶಿಖ: ಬಾಣ; ಸಾವಿರ: ಸಹಸ್ರ; ತರಿ: ಕಡಿ, ಕತ್ತರಿಸು; ಅರಿ: ವೈರಿ; ಬಲ: ಸೈನ್ಯ;

ಪದವಿಂಗಡಣೆ:
ಏರಿದರು +ಸಮಸಪ್ತಕರು+ ಕೈ
ದೋರಿದರು +ಫಲುಗುಣನ+ ಜೋಡಿನೊಳ್
ಏರು +ತಳಿತುದು +ನೊಂದವ್+ಅಡಿಗಡಿಗ್+ಆತನ್+ಅಶ್ವಚಯ
ನೂರು +ಶರದಲಿ +ಬಳಿ +ವಿಶಿಖ+ ನಾ
ನೂರರಲಿ +ಬಳಿಶರಕೆ +ಬಳಿಶರವ್
ಆರು +ಸಾವಿರದಿಂದ +ತರಿದನು +ಪಾರ್ಥನ್+ಅರಿಬಲವ

ಅಚ್ಚರಿ:
(೧) ನೂರು, ನಾನೂರು, ಆರು, ಏರು – ಪ್ರಾಸ ಪದಗಳು
(೨) ವಿಶಿಖ, ಶರ – ಸಮಾನಾರ್ಥಕ ಪದ

ಪದ್ಯ ೭: ಭೀಮನು ಹೇಗೆ ಯುದ್ಧವನ್ನು ಮಾಡುತ್ತಿದ್ದನು?

ರಾಯ ಹೊಕ್ಕನು ಭೀಮಸೇನನ
ದಾಯ ಬಲುಹೋ ಧರ್ಮಪುತ್ರನ
ದಾಯವಲ್ಲಿದು ನೂಕೆನುತ ಕೃತವರ್ಮ ಗೌತಮರ
ಸಾಯಕದ ಮಳೆಗರೆದು ಕೌರವ
ರಾಯನನು ಹಿಂದಿಕ್ಕಿ ವೇಢೆಯ
ವಾಯುಜನ ವಂಗಡವ ಮುರಿದರು ತರಿದರರಿಬಲವ (ಶಲ್ಯ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ಧರ್ಮಜನ ಯುದ್ಧದಂತಲ್ಲ, ಭೀಮನ ಲೆಕ್ಕಾಚಾರ ಉಗ್ರವಾದುದು. ದೊರೆಯು ಆವನೊಡನೆ ಕದನಕ್ಕೆ ಹೋಗಿದ್ದಾನೆ ಎಂದು ಕೃತವರ್ಮ ಕೃಪರು ಮುಂದೆ ಬಂದು ಬಾಣಗಳ ಮಳೆಗರೆದು, ಕೌರವನನ್ನು ಹಿಂದಿಟ್ಟು ದಾಳಿ ಮಾಡುತ್ತಿದ್ದ ಭೀಮನ ಗುಂಪನ್ನು ನುಗ್ಗಿ ಶತ್ರುಗಳನ್ನು ಸಂಹರಿಸಿದರು.

ಅರ್ಥ:
ರಾಯ: ರಾಜ; ಹೊಕ್ಕು: ಸೇರು; ಆಯ: ಪರಿಮಿತಿ, ರೀತಿ; ಬಲುಹು: ಶಕ್ತಿ; ನೂಕು: ತಳ್ಳು; ಸಾಯಕ: ಬಾಣ, ಶರ; ಮಳೆ: ವರ್ಷ; ಹಿಂದಿಕ್ಕು: ಹಿಂದೆ ತಳ್ಳು; ವೇಢೆಯ: ಹಯಮಂಡಲ; ವಾಯುಜ: ಭೀಮ; ವಂಗಡ: ಗುಂಪು; ಮುರಿ: ಸೀಳು; ತರಿ: ಕಡಿ, ಕತ್ತರಿಸು; ಅರಿ: ವೈರಿ; ಬಲ: ಸೈನ್ಯ;

ಪದವಿಂಗಡಣೆ:
ರಾಯ +ಹೊಕ್ಕನು +ಭೀಮಸೇನನದ್
ಆಯ +ಬಲುಹೋ +ಧರ್ಮಪುತ್ರನದ್
ಆಯವಲ್ಲಿದು+ ನೂಕೆನುತ+ ಕೃತವರ್ಮ +ಗೌತಮರ
ಸಾಯಕದ +ಮಳೆಗರೆದು +ಕೌರವ
ರಾಯನನು +ಹಿಂದಿಕ್ಕಿ +ವೇಢೆಯ
ವಾಯುಜನ+ ವಂಗಡವ+ ಮುರಿದರು+ ತರಿದರ್+ಅರಿಬಲವ

ಅಚ್ಚರಿ:
(೧) ವ ಕಾರದ ತ್ರಿವಳಿ ಪದ – ವೇಢೆಯ ವಾಯುಜನ ವಂಗಡವ
(೨) ಯುದ್ಧದ ತೀವ್ರತೆ – ಸಾಯಕದ ಮಳೆಗರೆದು ಕೌರವರಾಯನನು ಹಿಂದಿಕ್ಕಿ

ಪದ್ಯ ೧೦: ಅರ್ಜುನನು ಏನೆಂದು ಹೇಳಿ ಧೈರ್ಯ ತುಂಬಿದನು?

ನಾಯಿಗಳ ಹೊಯ್ ನೂಕು ರಣದಲಿ
ಸಾಯಬೇಡಾ ಕ್ಷತ್ರಿಯರು ತಾ
ವಾಯುಧಂಗಳ ಹಿಡಿದರೋ ಮೇಣೇಕದಂಡಿಗಳೊ
ಜೀಯ ಖಾತಿಯಿದೇಕೆ ಬೀಳಲಿ
ನಾಯಕರು ನಿನಗೇನು ಹರನಡ
ಹಾಯಲಿಂದರಿಬಲವನುರುಹುವೆನೆಂದನಾ ಪಾರ್ಥ (ದ್ರೋಣ ಪರ್ವ, ೧೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅಣ್ಣನಿಗೆ ಹರ್ಷವನ್ನುಂಟು ಮಾಡಲೆಂದು ಅರ್ಜುನನು ಓಡುವ ತನ್ನ ಸೈನಿಕರಿಗೆ ಬೆದರಿ ಓಡುವ ನಾಯಿಗಳನ್ನು ಹೊಯ್ದು ಆಚೆಗೆ ನೂಕಿರಿ. ಕ್ಷತ್ರಿಯರಾದ ಮೇಲೆ ಯುದ್ಧದಲ್ಲಿ ಸಾಯಲು ಹೆದರಲೇಕೆ? ಇವರೇನು ಆಯುಧವನ್ನು ಹಿಡಿದ ವೀರರೋ ಏಕದಂಡಿ ಸನ್ಯಾಸಿಗಳೋ, ಜೀಆ, ಸೇನಾನಾಯಕರು ಹೋದರೇನಂತೆ ಈ ದಿನ ಶಿವನೇ ಅಡ್ಡಬಂದರೂ ಶತ್ರು ಸೈನ್ಯವನ್ನು ಸುಡುತ್ತೇನೆ ಎಂದನು.

ಅರ್ಥ:
ನಾಯಿ: ಕುನ್ನಿ; ಹೊಯ್: ಹೊಡೆ; ನೂಕು: ತಳ್ಳು; ರಣ: ಯುದ್ಧ; ಸಾವು: ಮರಣ; ಆಯುಧ: ಶಸ್ತ್ರ; ಹಿಡಿ: ಗ್ರಹಿಸು; ಮೇಣ್: ಅಥವ; ಜೀಯ: ಒಡೆಯ; ಖಾತಿ: ಕೋಪ; ಬೀಳು: ಕುಸಿ; ನಾಯಕ: ಒಡೆಯ; ಹರ: ಶಿವ; ಅಡಹಾಯ್: ಅಡ್ಡ ಬಂದು; ಅರಿ: ವೈರಿ; ಬಲ: ಸೈನ್ಯ; ಉರುಹು: ಸುಡು, ತಾಪಗೊಳಿಸು;

ಪದವಿಂಗಡಣೆ:
ನಾಯಿಗಳ +ಹೊಯ್ +ನೂಕು +ರಣದಲಿ
ಸಾಯಬೇಡಾ +ಕ್ಷತ್ರಿಯರು +ತಾವ್
ಆಯುಧಂಗಳ +ಹಿಡಿದರೋ +ಮೇಣ್+ಏಕದಂಡಿಗಳೊ
ಜೀಯ +ಖಾತಿಯಿದೇಕೆ+ ಬೀಳಲಿ
ನಾಯಕರು +ನಿನಗೇನು +ಹರನ್+ಅಡ
ಹಾಯಲಿಂದ್+ಅರಿಬಲವನ್+ಉರುಹುವೆನ್+ಎಂದನಾ +ಪಾರ್ಥ

ಅಚ್ಚರಿ:
(೧) ಸನ್ಯಾಸಿ ಎಂದು ಕರೆಯಲು ಏಕದಂಡಿ ಪದದ ಪ್ರಯೋಗ

ಪದ್ಯ ೩೧: ದ್ರೋಣನು ತಲೆದೂಗಲು ಕಾರಣವೇನು?

ಅರಿಬಲದ ಥಟ್ಟಣೆಯ ಬಿರುಬಿನ
ಬರವನೀಕ್ಷಿಸಿ ಪೂತು ಪಾಂಚಾ
ಲರ ಸಘಾಡಿಕೆ ಸಾಹಸಿಕರೈ ಹಾ ಮಹಾದೇವ
ದೊರೆಯಲೇ ಬಳಿಕೇನು ಪಾಂಡವ
ರರಸಿಯಯ್ಯನು ದ್ರುಪದನಲ್ಲಾ
ಹರಯೆನುತ ಗಹಗಹಿಸಿ ತಲೆದೂಗಿದನು ಕಲಿದ್ರೋಣ (ದ್ರೋಣ ಪರ್ವ, ೧೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶತ್ರು ಸೈನ್ಯದ ಆಗಮನದ ಬಿರುಸನ್ನು ನೋಡಿ, ದ್ರೋನನು ತಲೆದೂಗಿ ಗಹಗಹಿಸಿ ನಕ್ಕು, ಭಲೇ ಪಾಂಚಾಲರ ಜೋರನ್ನು ನೋಡು, ಶಿವ ಶಿವಾ ಇವರು ಮಹಾಸಾಹಸಿಗರು. ದ್ರುಪದನು ಎಷ್ಟೇ ಆಗಲಿ ದೊರೆ, ಮೇಲಾಗಿ ಪಾಂಡವರ ಮಾವ ಎಂದು ತಲೆದೂಗಿದನು.

ಅರ್ಥ:
ಅರಿ: ವೈರಿ; ಬಲ: ಸೈನ್ಯ; ಥಟ್ಟಣೆ: ಗುಂಪು; ಬಿರುಬು: ಆವೇಶ; ಬರವು: ಆಗಮನ; ಈಕ್ಷಿಸು: ನೋಡು; ಪೂತು: ಭಲೇ; ಸಘಾಡ: ರಭಸ; ಸಾಹಸ: ಪರಾಕ್ರಮ; ದೊರೆ: ರಾಜ; ಬಳಿಕ: ನಂತರ; ಅರಸಿ: ರಾಣಿ; ಅಯ್ಯ: ತಂದೆ; ಗಹಗಹಿಸು: ನಗು; ತೂಗು: ಅಲ್ಲಾಡಿಸು; ತಲೆದೂಗು: ಒಪ್ಪಿಗೆ ಸೂಚಿಸು; ಕಲಿ: ಶೂರ;

ಪದವಿಂಗಡಣೆ:
ಅರಿಬಲದ+ ಥಟ್ಟಣೆಯ +ಬಿರುಬಿನ
ಬರವನ್+ಈಕ್ಷಿಸಿ +ಪೂತು +ಪಾಂಚಾ
ಲರ +ಸಘಾಡಿಕೆ+ ಸಾಹಸಿಕರೈ +ಹಾ +ಮಹಾದೇವ
ದೊರೆ+ಅಲೇ +ಬಳಿಕೇನು+ ಪಾಂಡವರ್
ಅರಸಿ+ಅಯ್ಯನು +ದ್ರುಪದನಲ್ಲಾ
ಹರಯೆನುತ +ಗಹಗಹಿಸಿ+ ತಲೆದೂಗಿದನು +ಕಲಿದ್ರೋಣ

ಅಚ್ಚರಿ:
(೧) ಜೋಡಿ ಪದಗಳು – ಬಿರುಬಿನಬರವನೀಕ್ಷಿಸಿ; ಪೂತು ಪಾಂಚಾಲರ; ಸಘಾಡಿಕೆ ಸಾಹಸಿಕರೈ
(೨) ದ್ರುಪದನನ್ನು ಕರೆದ ಪರಿ – ಪಾಂಡವರರಸಿಯಯ್ಯನು

ಪದ್ಯ ೫೫: ಕೃಷ್ಣನು ಪಾಂಡವರನ್ನು ಹೇಗೆ ಸಂತೈಸಿದನು?

ಕುರುಬಲದ ಕಳಕಳದ ಹವಣ
ಲ್ಲರಿಬಲದ ಸಂತೋಷವಿದು ಮುರ
ಹರನ ಮಂತ್ರವು ಜೀಯ ಹರಿ ಸೂಳೈಸಿದನು ಭುಜವ
ಗರಳವಿಲ್ಲದ ಕುಪಿತಫಣಿ ಹಲು
ಮೊರೆದು ಮಾಡುವುದೇನು ಕರ್ಣನ
ನೊರಸಿದೆವು ಹೋಗೆಂದು ಸಂತೈಸಿದನು ಪಾಂಡವರ (ದ್ರೋಣ ಪರ್ವ, ೧೬ ಸಂಧಿ, ೫೫ ಪದ್ಯ)

ತಾತ್ಪರ್ಯ:
ಸಂಜಯನು ವಿವರಿಸುತ್ತಾ, ಎಲೈ ಧೃತರಾಷ್ಟ್ರ, ಘಟೋತ್ಕಚನ ಸಾವು ನಮ್ಮ ಸಂತೋಷಕ್ಕೆ ಕಾರಣವಲ್ಲ, ಇದು ಪಾಂಡವರಿಗೆ ಸಂತೋಷವನ್ನು ಕೊಡುವಂತಹದು. ಇದು ಶ್ರೀಕೃಷ್ಣನ ಉಪಾಯ. ಅವನು ತೋಳುತಟ್ಟಿ, ವಿಷವಿಲ್ಲದ ಹಾವು ಕಚ್ಚಿ ಮಾಡುವುದಾದರೂ ಏನು, ನಾವಿನ್ನು ಕರ್ಣನನ್ನು ಕೊಲ್ಲೋಣ ಎಂದು ಪಾಂಡವರನ್ನು ಸಂತೈಸಿದನು.

ಅರ್ಥ:
ಬಲ: ಸೈನ್ಯ; ಕಳಕಳ: ಗೊಂದಲ; ಹವಣ: ಮಿತಿ, ಅಳತೆ, ಉಪಾಯ; ಅರಿ: ವೈರಿ; ಸಂತೋಷ: ಹರ್ಷ; ಮುರಹರ: ಕೃಷ್ಣ; ಮಂತ್ರ: ಉಪಾಯ; ಜೀಯ: ಒಡೆಯ; ಸೂಳೈಸು: ಧ್ವನಿಮಾಡು, ಹೊಡೆ; ಭುಜ: ಬಾಹು; ಗರಳ: ವಿಷ; ಕುಪಿತ: ಕೋಪ; ಫಣಿ: ಹಾವು; ಹಲು: ದಂತ; ಮೊರೆ: ಗುಡುಗು ಹಾಕು; ಒರಸು: ಸಾಯಿಸು; ಹೋಗು: ತೆರಲು; ಸಂತೈಸು: ಸಾಂತ್ವನಗೊಳಿಸು;

ಪದವಿಂಗಡಣೆ:
ಕುರುಬಲದ +ಕಳಕಳದ +ಹವಣಲ್ಲ್
ಅರಿಬಲದ +ಸಂತೋಷವಿದು+ ಮುರ
ಹರನ +ಮಂತ್ರವು +ಜೀಯ +ಹರಿ+ ಸೂಳೈಸಿದನು+ ಭುಜವ
ಗರಳವಿಲ್ಲದ+ ಕುಪಿತ+ಫಣಿ +ಹಲು
ಮೊರೆದು +ಮಾಡುವುದೇನು +ಕರ್ಣನನ್
ಒರಸಿದೆವು +ಹೋಗೆಂದು +ಸಂತೈಸಿದನು +ಪಾಂಡವರ

ಅಚ್ಚರಿ:
(೧) ಲೋಕೋಕ್ತಿ – ಗರಳವಿಲ್ಲದ ಕುಪಿತಫಣಿ ಹಲುಮೊರೆದು ಮಾಡುವುದೇನು
(೨) ಕುರುಬಲ, ಅರಿಬಲ – ಪ್ರಾಸ ಪದಗಳು

ಪದ್ಯ ೩೮: ಘಟೋತ್ಕಚನ ಮುಂದೆ ಯಾರು ನಿಲ್ಲಬಲ್ಲರು?

ನಿಲುವಡಸುರನ ಮುಂದೆ ಕರ್ಣನೆ
ನಿಲಲು ಬೇಹುದು ಕರ್ಣನುರುಬೆಗೆ
ನಿಲುವಡೀಯಮರಾರಿಗೊಪ್ಪುವುದೈ ಮಹಾದೇವ
ಉಳಿದ ಭೂರಿಯ ಬಣಗುಗಳು ವೆ
ಗ್ಗಳೆಯವೆರಸರಿಗೆ ನೋಂತರೇ ಕುರು
ಬಲದೊಳರಿಬಲದೊಳಗೆ ಸರಿಯಿನ್ನಿವರಿಗಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಘಟೋತ್ಕಚನ ಮುಂದೆ ನಿಂತರೆ ಕರ್ಣನೇ ನಿಲ್ಲಬೇಕು. ಶಿವ ಶಿವಾ, ಕರ್ಣನ ದಾಳಿಯನ್ನು ಸೈರಿಸಿ ನಿಲ್ಲಲು ಘಟೋತ್ಕಚನಿಗೆ ಮಾತ್ರ ಸಾಧ್ಯ, ಉಳಿದ ಮಹಾವೀರರೆನ್ನಿಸಿಕೊಳ್ಳುವವರು ಕೇವಲ ಶಕ್ತಿದರಿದ್ರರು, ವೀರರೆನ್ನಿಸಿಕೊಳ್ಳುವುದಕ್ಕೆ ಅನರ್ಹರು. ಇವರಿಗೆ ಸರಿಯಾದವರು ಉಭಯ ಸೈನ್ಯಗಳಲ್ಲೂ ಇಲ್ಲ.

ಅರ್ಥ:
ನಿಲುವು: ನಿಲ್ಲು; ಅಡ್: ಅಡ್ಡ, ನಡುವೆ; ಅಸುರ: ರಾಕ್ಷಸ; ಮುಂದೆ: ಎದುರು; ಬೇಹುದು: ಬೇಕು; ಉರುಬೆ: ಅಬ್ಬರ; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ಒಪ್ಪು: ಒಪ್ಪಿಗೆ, ಸಮ್ಮತಿ; ಉಳಿದ: ಮಿಕ್ಕ; ಭೂರಿ: ಹೆಚ್ಚಾದ, ಅಧಿಕವಾದ; ಬಣಗು: ಅಲ್ಪವ್ಯಕ್ತಿ, ತಿಳಿಗೇಡಿ; ವೆಗ್ಗಳೆ: ಶ್ರೇಷ್ಠ; ಬಲ: ಸೈನ್ಯ; ಅರಿ: ವೈರಿ;

ಪದವಿಂಗಡಣೆ:
ನಿಲುವಡ್+ಅಸುರನ +ಮುಂದೆ +ಕರ್ಣನೆ
ನಿಲಲು +ಬೇಹುದು +ಕರ್ಣನ್+ಉರುಬೆಗೆ
ನಿಲುವಡ್+ಈ+ ಅಮರಾರಿಗ್+ಒಪ್ಪುವುದೈ +ಮಹಾದೇವ
ಉಳಿದ +ಭೂರಿಯ+ ಬಣಗುಗಳು+ ವೆ
ಗ್ಗಳೆಯವೆರಸರಿಗೆ +ನೋಂತರೇ+ ಕುರು
ಬಲದೊಳ್+ಅರಿಬಲದೊಳಗೆ +ಸರಿಯಿನ್ನಿವರಿಗಿಲ್ಲೆಂದ

ಅಚ್ಚರಿ:
(೧) ಕುರುಬಲ, ಅರಿಬಲ – ಬಲ ಪದದ ಬಳಕೆ
(೨) ನಿಲುವಡ್, ನಿಲಲು – ೧-೩ ಸಾಲಿನ ಮೊದಲ ಪದಗಳು

ಪದ್ಯ ೨: ರಾವುತರು ಹೇಗೆ ನುಗ್ಗಿದರು?

ಚೆಲ್ಲಿತರಿಬಲಜಲಧಿ ಭಟರ
ಲ್ಲಲ್ಲಿ ಮುಕ್ಕುರುಕಿದರು ಸಬಳದ
ಸೆಲ್ಲೆಹದ ತೋಮರದ ಚಕ್ರದ ಸರಿಯ ಸೈಗರೆದು
ಘಲ್ಲಿಸಿದವಾನೆಗಳು ತೇರಿನ
ಬಿಲ್ಲವರು ತುಡುಕಿದರು ಕಂಬುಗೆ
ಯಲ್ಲಿ ಖುರ ಕುಣಿದಾಡೆ ಹೊಕ್ಕರು ರಾಯರಾವುತರು (ದ್ರೋಣ ಪರ್ವ, ೧೬ ಸಂಧಿ, ೨ ಪದ್ಯ)

ತಾತ್ಪರ್ಯ:
ಕೌರವನ ಸೈನ್ಯವು ಚೆಲ್ಲಾಪಿಲ್ಲಿಯಾಯಿತು. ಅಲ್ಲಲ್ಲಿ ಸೈನಿಕರು ಶತ್ರುವಿನ ಸುತ್ತಲೂ ಕವಿದರು. ಸಬಳ, ತೋಮರ, ಸಲ್ಲೆಹ, ಚಕ್ರ ಮೊದಲಾದ ಆಯುಧಗಲ ಮಳೆಗರೆದರು. ಆನೆಗಳು ನುಗ್ಗಿದವು. ರಥಿಕರು ಬಾಣಗಳನ್ನು ಬಿಟ್ಟರು. ತೇರಿನ ಆಯುಧ ತುಂಬುವ ಕಂಬುಗೆಯಲ್ಲಿ ಕುದುರೆಗಳ ಗೊರಸು ಕುಣಿಯುವಂತೆ ರಾವುತರು ನುಗ್ಗಿದರು.

ಅರ್ಥ:
ಚೆಲ್ಲು: ಹರಡು; ಬಲ: ಸೈನ್ಯ; ಜಲಧಿ: ಸಾಗರ; ಭಟ: ಸೈನಿಕ; ಮುಕ್ಕುರು: ಕವಿ, ಮುತ್ತು, ಆವರಿಸು; ಸಬಳ: ಈಟಿ; ಸೆಲ್ಲೆಹ: ಈಟಿ, ಭರ್ಜಿ; ತೋಮರ: ಈಟಿಯಂತಹ ಒಂದು ಬಗೆಯ ಆಯುಧ; ಚಕ್ರ: ತಿರುಗುವಂತಹ ಆಯುಧ; ಘಲ್ಲಿಸು: ಶಬ್ದಮಾಡು; ಆನೆ: ಗಜ; ತೇರು: ಬಂಡಿ; ಬಿಲ್ಲು: ಚಾಪ; ತುಡುಕು: ಹೋರಾಡು, ಸೆಣಸು; ಕಂಬುಗೆ: ಆಯುಧಗಳನ್ನು ತುಂಬುವ ರಥದ ಒಂದು ಭಾಗ; ಖುರ: ಕುದುರೆ ದನಕರು ಗಳ ಕಾಲಿನ ಗೊರಸು, ಕೊಳಗು; ಕುಣಿ: ನರ್ತಿಸು; ಹೊಕ್ಕು: ಸೇರು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ;

ಪದವಿಂಗಡಣೆ:
ಚೆಲ್ಲಿತ್+ಅರಿಬಲ+ಜಲಧಿ +ಭಟರ್
ಅಲ್ಲಲ್ಲಿ +ಮುಕ್ಕುರುಕಿದರು+ ಸಬಳದ
ಸೆಲ್ಲೆಹದ +ತೋಮರದ +ಚಕ್ರದ +ಸರಿಯ +ಸೈಗರೆದು
ಘಲ್ಲಿಸಿದವ್+ಆನೆಗಳು +ತೇರಿನ
ಬಿಲ್ಲವರು +ತುಡುಕಿದರು +ಕಂಬುಗೆ
ಯಲ್ಲಿ +ಖುರ +ಕುಣಿದಾಡೆ +ಹೊಕ್ಕರು +ರಾಯ+ರಾವುತರು

ಅಚ್ಚರಿ:
(೧) ಆಯುಧಗಳ ಹೆಸರು – ಸಬಳ, ಸೆಲ್ಲೆಹ, ತೋಮರ, ಚಕ್ರ

ಪದ್ಯ ೩: ಅರ್ಜುನನ ಬಾಣದ ಪ್ರಭಾವ ಹೇಗಿತ್ತು?

ಕುಸುರಿದರಿದವು ಜೋಡು ವಜ್ರದ
ರಸುಮೆಗಳು ಹಾರಿದವು ರಿಪುಗಳ
ಯೆಸೆವ ಸೀಸಕ ಕವಚವನು ಸೀಳಿದನು ತೋಲಿನಲಿ
ನೊಸಲ ಸೀಸಕ ನುಗ್ಗು ನುಸಿ ಬಂ
ಧಿಸಿದ ಸರಪಣಿ ಹಿಳಿದವರಿಬಲ
ದೆಸಕ ನಿಂದುದು ಪಾರ್ಥನೆಚ್ಚನು ವೈರಿಮೋಹರವ (ದ್ರೋಣ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವ ವೀರರ ಜೋಡು, ಸೀಸಕ, ಬಾಹುರಕ್ಷೆ, ಶಿರಸ್ತ್ರಾಣಗಳು ಅರ್ಜುನನು ಬಾಣಗಳಿಂದ ಸೀಳಿ ನುಗ್ಗು ನುಸಿಯಾದವು. ಕಿರೀಟಗಳಲ್ಲಿದ್ದ ವಜ್ರಗಳು ಹೊಳೆಯುತ್ತಾ ಹಾರಿದವು. ಅವಗಳನ್ನು ದೇಹಕ್ಕೆ ಬಂಧಿಸಿದ್ದ ಸರಪಣಿಗಳು ತುಂಡಾದವು.

ಅರ್ಥ:
ಕುಸುರಿ: ಸಣ್ಣ ತುಂಡು, ಚೂರು; ಅರಿ: ಕತ್ತರಿಸು; ಜೋಡು: ಜೊತೆ; ವಜ್ರ:ಗಟ್ಟಿಯಾದ; ರಸುಮೆ: ರಶ್ಮಿ, ಕಿರಣ; ಹಾರು: ಚಲಿಸು, ಉಡ್ಡಾಣ ಮಾಡು; ರಿಪು: ವೈರಿ; ಎಸೆ: ಬಾಣ ಪ್ರಯೋಗ ಮಾದು; ಸೀಸಕ: ಟೊಪ್ಪಿಗೆ, ಶಿರಸ್ತ್ರಾಣ; ಕವಚ: ಹೊದಿಕೆ; ಸೀಳು: ಚೂರು, ತುಂಡು; ತೋಳು: ಬಾಹು; ನೊಸಲ: ಹಣೆ; ನುಗ್ಗು: ನೂಕಾಟ, ನೂಕುನುಗ್ಗಲು; ನುಸಿ: ಹುಡಿ, ಧೂಳು; ಬಂಧ: ಕಟ್ಟು, ಬಂಧನ; ಸರಪಣಿ: ಸಂಕೋಲೆ, ಶೃಂಖಲೆ; ಹಿಳಿ: ಹಿಂಡು ; ಅರಿ: ವೈರಿ; ಬಲ: ಸೈನ್ಯ; ಎಸಕ: ಕಾಂತಿ; ವೈರಿ: ರಿಪು; ಮೋಹರ: ಯುದ್ಧ;

ಪದವಿಂಗಡಣೆ:
ಕುಸುರಿದ್+ಅರಿದವು +ಜೋಡು +ವಜ್ರದ
ರಸುಮೆಗಳು +ಹಾರಿದವು+ ರಿಪುಗಳ
ಎಸೆವ+ ಸೀಸಕ +ಕವಚವನು +ಸೀಳಿದನು +ತೋಳಿನಲಿ
ನೊಸಲ+ ಸೀಸಕ +ನುಗ್ಗು +ನುಸಿ +ಬಂ
ಧಿಸಿದ +ಸರಪಣಿ +ಹಿಳಿದವ್+ಅರಿಬಲ
ದೆಸಕ+ ನಿಂದುದು +ಪಾರ್ಥನ್+ಎಚ್ಚನು +ವೈರಿ+ಮೋಹರವ

ಅಚ್ಚರಿ:
(೧) ವೈರಿ, ರಿಪು, ಅರಿ – ಸಮಾನಾರ್ಥಕ ಪದಗಳು
(೨) ಸೀಸಕ – ೩, ೪ ಸಾಲಿನ ಎರಡನೇ ಪದ

ಪದ್ಯ ೩೩: ಅರ್ಜುನನ ಬಾಣ ಪ್ರಯೋಗ ಹೇಗಿತ್ತು?

ಭಾವಿಸಲು ಪ್ರತಿ ಬಿಂಬದಲಿ ಬೇ
ರಾವುದತಿಶಯವುಂಟು ನೀವೆನ
ಗಾವ ಪರಿಯಲಿ ಕಲಿಸಿದಿರಿ ನಿಮಗೊಪ್ಪಿಸುವೆನದನು
ನೀವು ನೋಡುವುದೆನುತ ನರನೆಸ
ಲಾವುದಂಬರವಾವುದವನಿಯ
ದಾವುದರಿಬಲವೆನಲು ಹಬ್ಬಿತು ಪಾರ್ಥ ಶರಜಾಲ (ವಿರಾಟ ಪರ್ವ, ೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಬಿಂಬದಂತೆ ಪ್ರತಿಬಿಂಬ, ಅದರಲ್ಲೇನೂ ಹೆಚ್ಚಿಲ್ಲ, ನೀವು ನನಗೆ ಕಲಿಸಿದ ರೀತಿಯಲ್ಲೇ ನಾನು ನಿಮಗೆ ಪಾಠವನ್ನೊಪ್ಪಿಸುತ್ತೇನೆ, ಎನ್ನುತ್ತಾ ಅರ್ಜುನನು ಬಾಣಗಳನ್ನು ಬಿಡಲು ಯಾವುದು ಭೂಮಿ, ಯಾವುದು ಆಗಸ, ಶತ್ರು ಸೈನ್ಯವಾವುದು ಎನ್ನುವುದು ತಿಳಿಯದಂತೆ ಅರ್ಜುನನ ಬಾಣಗಳು ಹಬ್ಬಿದವು.

ಅರ್ಥ:
ಭಾವಿಸು: ತಿಳಿ; ಪ್ರತಿಬಿಂಬ: ಪ್ರತಿ ಚ್ಛಾಯೆ, ಮೂಲಕ್ಕೆ ಸದೃಶವಾದುದು; ಬೇರೆ: ಅನ್ಯ; ಅತಿಶಯ: ಹೆಚ್ಚು; ಪರಿ: ರೀತಿ; ಕಲಿಸು: ಹೇಳು; ಒಪ್ಪಿಸು: ನೀಡು; ನೋಡು: ವೀಕ್ಷಿಸು; ನರ: ಅರ್ಜುನ; ಎಸು: ಬಾಣ ಪ್ರಯೋಗ ಮಾಡು; ಅಂಬರ: ಆಗಸ; ಅವನಿ: ಭೂಮಿ; ಅರಿಬಲ: ವೈರಿಯ ಸೈನ್ಯ; ಹಬ್ಬು: ಹರಡು; ಶರಜಾಲ: ಬಾಣಗಳ ಬಲೆ;

ಪದವಿಂಗಡಣೆ:
ಭಾವಿಸಲು +ಪ್ರತಿ +ಬಿಂಬದಲಿ +ಬೇ
ರಾವುದ್+ಅತಿಶಯವುಂಟು +ನೀವ್+ಎನಗ್
ಆವ+ ಪರಿಯಲಿ +ಕಲಿಸಿದಿರಿ +ನಿಮಗ್+ಒಪ್ಪಿಸುವೆನದನು
ನೀವು +ನೋಡುವುದ್+ಎನುತ +ನರನ್+ಎಸಲ್
ಆವುದ್+ಅಂಬರವ್+ಆವುದ್+ಅವನಿಯದ್
ಆವುದ್+ಅರಿಬಲವ್+ಎನಲು +ಹಬ್ಬಿತು +ಪಾರ್ಥ +ಶರಜಾಲ

ಅಚ್ಚರಿ:
(೧) ತನ್ನನ್ನು ದ್ರೋಣನ ಪ್ರತಿಬಿಂಬ ಎಂದು ಹೇಳುವ ಪರಿ – ಭಾವಿಸಲು ಪ್ರತಿ ಬಿಂಬದಲಿ ಬೇರಾವುದತಿಶಯವುಂಟು
(೨) ಅ ಕಾರದ ಪದಗಳು – ಅಂಬರ, ಅವನಿ, ಅರಿಬಲ