ಪದ್ಯ ೫೨: ಧರ್ಮಜನು ಶಲ್ಯನತ್ತ ಹೇಗೆ ಬಾಣಗಳನ್ನು ಬಿಟ್ಟನು?

ಬೊಬ್ಬಿರಿದುದಾ ಸೇನೆ ರಾಯನ
ಸರ್ಬದಳ ಜೋಡಿಸಿತು ಸೋಲದ
ಮಬ್ಬು ಹರೆದುದು ಜಯದ ಜಸವೇರಿದನು ನರನಾಥ
ಉಬ್ಬಿದನು ಸತ್ಕ್ಷೇತ್ರತೇಜದ
ಗರ್ಭ ಗಾಡಿಸಿತಾರಿ ಮಿಡಿದನು
ತೆಬ್ಬಿನಸ್ತ್ರವ ತೂಗಿ ತುಳುಕಿದನಂಬಿನಂಬುಧಿಯ (ಶಲ್ಯ ಪರ್ವ, ೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯೆಲ್ಲವೂ ಕೂಡಿ ಗರ್ಜಿಸಿತು. ಸೋಲಿನ ಮಬ್ಬು ಹಾರಿತು, ಧರ್ಮಜನು ಜಯದ ಉತ್ಸಾಹದಿಂದುಬ್ಬಿದನು. ಅವನಲ್ಲಿದ್ದ ಕ್ಷಾತ್ರತೇಜಸ್ಸು ಹೊರಹೊಮ್ಮಿತು. ಅವನು ಗರ್ಜಿಸಿ ಹೆದೆಯನ್ನು ನೇವರಿಸಿ ಬಾಣವನ್ನು ಹೂಡಿ ಅಸ್ತ್ರಗಳ ಸಮುದ್ರವನ್ನೇ ಶಲ್ಯನತ್ತ ತೂರಿದನು.

ಅರ್ಥ:
ಬೊಬ್ಬಿರಿ: ಗರ್ಜಿಸು; ಸೇನೆ: ಸೈನ್ಯ; ರಾಯ: ರಾಜ; ಸರ್ಬದಳ: ಎಲ್ಲಾ ಸೈನ್ಯ; ಜೋಡು: ಕೂಡಿಸು; ಸೋಲು: ಪರಾಭವ; ಮಬ್ಬು: ನಸುಗತ್ತಲೆ, ಮಸುಕು; ಹರೆ: ವ್ಯಾಪಿಸು; ಜಯ: ಗೆಲುವು; ಜಸ: ಯಶಸ್ಸು; ಏರು: ಮೇಲೇಳು; ನರನಾಥ: ರಾಜ; ಉಬ್ಬು: ಹಿಗ್ಗು, ಗರ್ವಿಸು; ಕ್ಷತ್ರ: ಕ್ಷತ್ರಿಯ; ತೇಜ: ಕಾಂತಿ; ಗರ್ಭ: ಹೊಟ್ಟೆ; ಗಾಢಿಸು: ತುಂಬಿಕೊಳ್ಳು; ಅರಿ: ವೈರಿ; ಮಿಡಿ: ತವಕಿಸು; ತೆಬ್ಬು: ಬಿಲ್ಲಿನ ತಿರುವು; ಅಸ್ತ್ರ: ಶಸ್ತ್ರ; ತೂಗು: ಅಲ್ಲಾಡು; ತುಳುಕು: ತುಂಬಿ ಹೊರಸೂಸು; ಅಂಬು: ಬಾಣ; ಅಂಬುಧಿ: ಸಾಗರ;

ಪದವಿಂಗಡಣೆ:
ಬೊಬ್ಬಿರಿದುದಾ +ಸೇನೆ +ರಾಯನ
ಸರ್ಬದಳ+ ಜೋಡಿಸಿತು +ಸೋಲದ
ಮಬ್ಬು +ಹರೆದುದು +ಜಯದ +ಜಸವೇರಿದನು +ನರನಾಥ
ಉಬ್ಬಿದನು +ಸತ್ಕ್ಷತ್ರ+ತೇಜದ
ಗರ್ಭ +ಗಾಡಿಸಿತ+ಅರಿ+ ಮಿಡಿದನು
ತೆಬ್ಬಿನಸ್ತ್ರವ +ತೂಗಿ +ತುಳುಕಿದನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಎಷ್ಟು ಬಾಣಗಳಿದ್ದವೆಂದು ವಿವರಿಸುವ ಪರಿ – ತುಳುಕಿದನಂಬಿನಂಬುಧಿಯ

ಪದ್ಯ ೫: ಅಶ್ವತ್ಥಾಮ ಮತ್ತು ಅರ್ಜುನರ ಯುದ್ಧದ ತೀವ್ರತೆ ಹೇಗಿತ್ತು?

ಮೊಗೆದವಶ್ವತ್ಥಾಮನೆಚ್ಚಂ
ಬುಗಳನರ್ಜುನನಂಬು ಪಾರ್ಥನ
ಬಿಗಿದವಾ ನಿಮಿಷದಲಿ ಭಾರದ್ವಾಜ ಶರಜಾಲ
ತಗಡುಗಿಡಿಗಳ ಸೂಸುವುರಿಧಾ
ರೆಗಳ ಘೃತಲೇಪನದ ಬಂಧದ
ಹೊಗರುಗಣೆ ಹೂಳಿದವು ಗುರುಸುತನಂಬಿನಂಬುಧಿಯ (ಶಲ್ಯ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಅರ್ಜುನನ ಬಾಣಗಳನ್ನು ಕತ್ತರಿಸಿ ಬಿಟ್ಟ ಬಾಣಗಳನ್ನು ಅರ್ಜುನನು ಮೊಗೆದು ಹಾಕಿದನು. ಅಶ್ವತ್ಥಾಮನ ಬಾಣಗಳು ಅರ್ಜುನನನ್ನು ಬಂಧಿಸಿದವು. ಕಿಡಿಗಳನ್ನು ತಗಡಿನಂತೆ ಸೂಸುತ್ತಾ, ಉರಿಯ ಧಾರೆಗಳನ್ನುಗುಳುತ್ತಾ ಅರ್ಜುನನ ಘೃತಲೇಪನದ ಅಂಬುಗಳು ಅಶ್ವತ್ಥಾಮನ ಬಾಣಗಳನ್ನು ಮುಚ್ಚಿಹಾಕಿದನು.

ಅರ್ಥ:
ಮೊಗೆ: ನುಂಗು, ಕಬಳಿಸು; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಬಿಗಿ: ಬಂಧಿಸು; ಶರಜಾಲ: ಬಾಣಗಳ ಗುಂಪು; ತಗಡು: ದಟ್ಟಣೆ, ಸಾಂದ್ರತೆ; ಕಿಡಿ: ಬೆಂಕಿ; ಸೂಸು: ಹೊರಹೊಮ್ಮು; ಧಾರೆ: ಮಳೆ; ಘೃತ: ತುಪ್ಪ; ಲೇಪನ: ಬಳಿಯುವಿಕೆ, ಹಚ್ಚುವಿಕೆ; ಬಂಧ: ಕಟ್ಟು; ಹೊಗರು: ಕಾಂತಿ, ಪ್ರಕಾಶ; ಹೂಳು: ಮುಚ್ಚು; ಅಂಬುಧಿ: ಸಾಗರ;

ಪದವಿಂಗಡಣೆ:
ಮೊಗೆದವ್+ಅಶ್ವತ್ಥಾಮನ್+ಎಚ್ಚ್
ಅಂಬುಗಳನ್+ಅರ್ಜುನನ್+ಅಂಬು +ಪಾರ್ಥನ
ಬಿಗಿದವಾ +ನಿಮಿಷದಲಿ +ಭಾರದ್ವಾಜ +ಶರಜಾಲ
ತಗಡು+ಕಿಡಿಗಳ +ಸೂಸು+ಉರಿ+ಧಾ
ರೆಗಳ+ ಘೃತ+ಲೇಪನದ +ಬಂಧದ
ಹೊಗರುಗಣೆ +ಹೂಳಿದವು +ಗುರುಸುತನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಅಂಬು ಪದದ ಬಳಕೆ – ಗುರುಸುತನಂಬಿನಂಬುಧಿಯ
(೨) ಉಪಮಾನದ ಪ್ರಯೋಗ – ತಗಡುಗಿಡಿಗಳ ಸೂಸುವುರಿಧಾರೆಗಳ ಘೃತಲೇಪನದ ಬಂಧದ ಹೊಗರುಗಣೆ ಹೂಳಿದವು

ಪದ್ಯ ೫೨: ಅರ್ಜುನನ ಬಾಣವನ್ನು ಎದುರಿಸಲು ಯಾರು ಬಂದರು?

ನೂಕಿದರು ಶಲ್ಯಂಗೆ ಪಡಿಬಲ
ದಾಕೆವಾಳರು ಗುರುಸುತಾದ್ಯರು
ತೋಕಿದರು ಶರಜಾಳವರ್ಜುನನಂಬಿನಂಬುಧಿಯ
ಬೀಕಲಿನ ಭಟರುಬ್ಬಿದರೆ ಸು
ವ್ಯಾಕುಲರು ತುಬ್ಬಿದರೆ ತಪ್ಪೇ
ನೀ ಕಳಂಬವ ಕಾಯುಕೊಳ್ಳೆನುತೆಚ್ಚನಾ ಪಾರ್ಥ (ಶಲ್ಯ ಪರ್ವ, ೨ ಸಂಧಿ, ೫೨ ಪದ್ಯ)

ತಾತ್ಪರ್ಯ:
ಶಲ್ಯನಿಗೆ ಸಹಾಯಮಾಡಲು ಅಶ್ವತ್ಥಾಮನೇ ಮೊದಲಾದ ವೀರರು ಅರ್ಜುನನ ಬಾಣಗಳ ಸಮುದ್ರವನ್ನು ತಮ್ಮ ಬಾಣಗಳಿಂದ ಇದಿರಿಸಿದರು. ದುರ್ಬಲ ಯೋಧರು ಉಬ್ಬಿದರೆ, ನೊಂದವರು ಉತ್ಸಾಹದಿಂದ ಮುಂದೆ ಬಂದರೆ, ತಪ್ಪೇನು? ಈ ಬಾಣದಿಂದ ನಿನ್ನನ್ನು ರಕ್ಷಿಸಿಕೋ ಎಂದು ಅರ್ಜುನನು ಹೊಡೆದನು.

ಅರ್ಥ:
ನೂಕು: ತಳ್ಳು; ಪಡಿಬಲ: ವೈರಿಸೈನ್ಯ; ಆಕೆವಾಳ: ಪರಾಕ್ರಮಿ; ಸುತ: ಮಗ; ಆದಿ: ಮುಂತಾದ; ತೋಕು: ಎಸೆ, ಪ್ರಯೋಗಿಸು, ಚೆಲ್ಲು; ಶರ: ಬಾಣ; ಜಾಲ: ಗುಂಪು; ಅಂಬು: ಬಾಣ; ಅಂಬುಧಿ: ಸಾಗರ; ಬೀಕಲು: ಕೊನೆ, ಅಂತ್ಯ; ಭಟ: ಸೈನಿಕ; ಉಬ್ಬು: ಅತಿಶಯ, ಉತ್ಸಾಹ; ವ್ಯಾಕುಲ: ದುಃಖ, ವ್ಯಥೆ; ತುಬ್ಬು: ಪತ್ತೆ ಮಾಡು, ಶೋಧಿಸು; ಕಳಂಬ: ಬಾಣ, ಅಂಬು; ಕಾಯ್ದು: ಕಾಪಾಡು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ನೂಕಿದರು +ಶಲ್ಯಂಗೆ +ಪಡಿಬಲದ್
ಆಕೆವಾಳರು +ಗುರುಸುತಾದ್ಯರು
ತೋಕಿದರು +ಶರಜಾಳವ್+ಅರ್ಜುನನ್+ಅಂಬಿನ್+ಅಂಬುಧಿಯ
ಬೀಕಲಿನ+ ಭಟರ್+ಉಬ್ಬಿದರೆ+ ಸು
ವ್ಯಾಕುಲರು +ತುಬ್ಬಿದರೆ +ತಪ್ಪೇನ್
ಈ+ ಕಳಂಬವ+ ಕಾಯ್ದುಕೊಳ್ಳೆನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಶರಜಾಳವರ್ಜುನನಂಬಿನಂಬುಧಿಯ – ಅಂಬು ಪದದ ಬಳಕೆ
(೨) ಉಬ್ಬಿದರೆ, ತುಬ್ಬಿದರೆ – ಪ್ರಾಸ ಪದಗಳು
(೩) ಕಳಂಬ, ಅಂಬು, ಶರ – ಸಮಾನಾರ್ಥಕ ಪದ

ಪದ್ಯ ೧೮: ದ್ರೋಣನ ಬಾಣಗಳು ಪಾಂಡವರ ಸೈನ್ಯವನ್ನು ಹೇಗೆ ಸಂಹಾರ ಮಾಡಿತು?

ಮುಟ್ಟಿ ಬಂದುದು ಸೇನೆ ಕವಿದುದು
ಕಟ್ಟಳವಿಯಲಿ ಕಲಿಗಳೆದು ಬಳಿ
ಕಟ್ಟಿ ತಿಂಬ ಮಹಾಂತಕಂಗೌತಣವ ಹೇಳ್ವಂತೆ
ಕಟ್ಟೆಯೊಡೆದಂಬುಧಿಯೊ ಮೇಣ್ ಜಗ
ಜಟ್ಟಿ ಸುರಿದಂಬುಗಳೊ ನಿಮಿಷಕೆ
ಕೆಟ್ಟುದಾಚೆಯ ಬಲದ ತರಹರವರಸ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯವು ದ್ರೋಣನ ಹತ್ತಿರಕ್ಕೆ ಬಂದಿತು. ಯಮನಿಗೆ ಔತಣ ಆಹ್ವಾನ ಕೊಡುವಂತೆ ಮುತ್ತಿತು. ದ್ರೋಣನ ಬಾಣಗಳು ಕಟ್ಟೆಯೊಡೆದ ಸಮುದ್ರದಂತೆ ನುಗ್ಗಿ ನಿಮಿಷಮಾತ್ರದಲ್ಲಿ ಆ ಸೈನ್ಯವನ್ನು ಸಂಹರಿಸಿತು.

ಅರ್ಥ:
ಮುಟ್ಟು: ತಾಗು; ಸೇನೆ: ಸೈನ್ಯ; ಕವಿ: ಆವರಿಸು; ಅಳವಿ: ಶಕ್ತಿ; ಕಲಿ: ಶೂರ; ಕಳೆ: ಬೀಡು, ತೊರೆ; ಅಟ್ಟು: ಹಿಂಬಾಲಿಸು; ತಿಂಬ: ತಿನ್ನು; ಅಂತಕ: ಯಮ; ಔತಣ: ಊಟ; ಹೇಳು: ತಿಳಿಸು; ಕಟ್ಟೆ: ಜಗಲಿ; ಒಡೆ: ಸೀಳು; ಅಂಬುಧಿ: ಸಾಗರ; ಮೇಣ್: ಅಥವ; ಜಗಜಟ್ಟಿ: ಪರಾಕ್ರಮಿ; ಸುರಿ: ಹರಿಸು; ಅಂಬು: ಬಾಣ; ನಿಮಿಷ: ಕ್ಷಣ; ಕೆಟ್ಟು: ಕೆಡುಕು; ಆಚೆಯ: ಬೇರೆಯ; ಬಲ: ಶಕ್ತಿ, ಸೈನ್ಯ; ತರಹರ: ನಿಲ್ಲುವಿಕೆ, ಸೈರಣೆ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುಟ್ಟಿ+ ಬಂದುದು +ಸೇನೆ +ಕವಿದುದು
ಕಟ್ಟಳವಿಯಲಿ +ಕಲಿಗಳೆದು +ಬಳಿಕ್
ಅಟ್ಟಿ+ ತಿಂಬ +ಮಹಾಂತಕಂಗ್+ಔತಣವ +ಹೇಳ್ವಂತೆ
ಕಟ್ಟೆಯೊಡೆದ್+ಅಂಬುಧಿಯೊ +ಮೇಣ್ +ಜಗ
ಜಟ್ಟಿ +ಸುರಿದ್+ಅಂಬುಗಳೊ +ನಿಮಿಷಕೆ
ಕೆಟ್ಟುದ್+ಆಚೆಯ +ಬಲದ +ತರಹರವ್+ಅರಸ +ಕೇಳೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕವಿದುದು ಕಟ್ಟಳವಿಯಲಿ ಕಲಿಗಳೆದು
(೨) ರೂಪಕದ ಪ್ರಯೋಗ – ಬಳಿಕಟ್ಟಿ ತಿಂಬ ಮಹಾಂತಕಂಗೌತಣವ ಹೇಳ್ವಂತೆ; ಕಟ್ಟೆಯೊಡೆದಂಬುಧಿಯೊ

ಪದ್ಯ ೩೫: ಪಾಂಡವ ಸೈನ್ಯವು ದ್ರೋಣನನ್ನು ಹೇಗೆ ಮುತ್ತಿತು?

ಅಡಸಿದರು ಚತುರಂಗ ಬಲವನು
ಕಡಿದು ಹರಹಿ ವಿರಾಟನನು ಜವ
ಗಿಡಿಸಿ ದ್ರುಪದನನೆಚ್ಚು ವಿರಥರ ಮಾಡಿ ಕೈಕೆಯರ
ನಡೆದು ಬರೆ ನಿಮಿಷದಲಿ ಬಲವವ
ಗಡಿಸಿ ಹೊಕ್ಕುದು ಮಸಗಿದಂಬುಧಿ
ವಡಬನನು ಮೊಗೆವಂತೆ ಮುತ್ತಿತು ಕಳಶಸಂಭವನ (ದ್ರೋಣ ಪರ್ವ, ೧೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ವಿರೋಧಿಗಳು ಚತುರಂಗ ಬಲವನ್ನು ಮುಂದೊಡ್ಡಲು, ದ್ರೋಣನು ಅದನ್ನು ಕಡಿದು ಹರಡಿದನು. ವಿರಾಟ ದ್ರುಪದರನ್ನು ಹೊಡೆದು ಕೈಕೆಯರನ್ನು ವಿರಥರನ್ನಾಗಿಸಿದನು. ಮುಂದೆ ಹೋಗುತ್ತಿರಲು ಪಾಂಡವ ಸೈನ್ಯವು ವಡಬನನ್ನು ಸಮುದ್ರವು ಮುತ್ತಿದಂತೆ ದ್ರೋಣನನ್ನು ಮುತ್ತಿತು.

ಅರ್ಥ:
ಅಡಸು: ಬಿಗಿಯಾಗಿ ಒತ್ತು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಕಡಿ: ಸೀಳು; ಹರಹು: ವಿಸ್ತಾರ, ವೈಶಾಲ್ಯ; ಜವ: ಯಮ; ಎಚ್ಚು: ಬಾಣ ಪ್ರಯೋಗ ಮಾಡು; ವಿರಥ: ರಥವಿಲ್ಲದ ಸ್ಥಿತಿ; ನಡೆ: ಚಲಿಸು; ನಿಮಿಷ: ಕ್ಷಣ; ಅವಗಡಿಸು: ಕಡೆಗಣಿಸು; ಹೊಕ್ಕು: ಸೇರು; ಮಸಗು: ಹರಡು; ಕೆರಳು; ಅಂಬುಧಿ: ಸಾಗರ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡಬಾಗ್ನಿ; ಮೊಗೆ: ನುಂಗು, ಕಬಳಿಸು; ಮುತ್ತು: ಆವರಿಸು; ಕಳಶ: ಕುಂಭ; ಸಂಭವ: ಹುಟ್ಟು, ಜನನ;

ಪದವಿಂಗಡಣೆ:
ಅಡಸಿದರು+ ಚತುರಂಗ +ಬಲವನು
ಕಡಿದು +ಹರಹಿ +ವಿರಾಟನನು +ಜವಗ್
ಇಡಿಸಿ +ದ್ರುಪದನನ್+ಎಚ್ಚು +ವಿರಥರ +ಮಾಡಿ +ಕೈಕೆಯರ
ನಡೆದು +ಬರೆ +ನಿಮಿಷದಲಿ +ಬಲವ್+
ಅವಗಡಿಸಿ +ಹೊಕ್ಕುದು +ಮಸಗಿದ್+ಅಂಬುಧಿ
ವಡಬನನು +ಮೊಗೆವಂತೆ +ಮುತ್ತಿತು +ಕಳಶಸಂಭವನ

ಅಚ್ಚರಿ:
(೧) ದ್ರೋಣನನ್ನು ಕಳಶಸಂಭವ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಬಲವವಗಡಿಸಿ ಹೊಕ್ಕುದು ಮಸಗಿದಂಬುಧಿವಡಬನನು ಮೊಗೆವಂತೆ ಮುತ್ತಿತು ಕಳಶಸಂಭವನ

ಪದ್ಯ ೩೩: ಎಲ್ಲರೂ ತಮಗೆ ಮಹಾನವಮಿ ಇಂದೇ ಎಂದೇಕೆ ಯೋಚಿಸಿದರು?

ನೊಂದು ಮರಳದೆ ಮಸಗಿ ಸೂರ್ಯನ
ನಂದನನು ತಾಗಿದನು ಗುರುಸುತ
ಮುಂದುವರಿದನು ತಲೆ ಹರಿದರೆನ್ನಟ್ಟೆ ಕಲಿಯೆನುತ
ಇಂದಿನಲಿ ಮಹನವಮಿ ತಲೆಗಳಿ
ಗೆಂದು ಕವಿದರು ಸಕಲ ಭಟರರ
ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಮಿಮಾಂಬುಧಿಯ (ದ್ರೋಣ ಪರ್ವ, ೧೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳಿಂದ ನೊಂದ ಕರ್ಣನು ಹಿಂದಿರುಗದೆ ಸಿಟ್ಟಿನಿಂದ ಅರ್ಜುನನನ್ನು ಬಾಣಗಳಿಂದ ತಾಗಿದನು. ಅಶ್ವತ್ಥಾಮನು ಅರ್ಜುನನು ತನ್ನ ತಲೆಯನ್ನು ಹಾರಿಸಿದರೆ ನನ್ನ ದೇಹಕ್ಕೆ ಸಾಕಷ್ಟು ಪರಾಕ್ರಮವಿದೆ ಎಂದು ಮುಮ್ದುವರಿದನು. ಎಲ್ಲಾ ವೀರರೂ ಇಂದೆ ನಮ್ಮ ತಲೆಗಳಿಗೆ ಮಹಾನವಮಿ ಎಂದು ಅರ್ಜುನನನ್ನು ಮುತ್ತಿದರು. ಸೂರ್ಯನು ಮೆಲ್ಲಗೆ ಪಶ್ಚಿಮ ಸಮುದ್ರಕ್ಕೆ ಸಮೀಪನಾದನು.

ಅರ್ಥ:
ನೊಂದು: ನೋವನ್ನುಂಡು; ಮರಳು: ಹಿಂದಿರುಗು; ಮಸಗು: ಹರಡು; ಕೆರಳು; ಸೂರ್ಯ: ನೇಸರ; ನಂದನ: ಮಗ; ತಾಗು: ಮುಟ್ಟು; ಗುರುಸುತ: ಆಚಾರ್ಯರ ಪುತ್ರ (ಅಶ್ವತ್ಥಾಮ); ಮುಂದುವರಿ: ಮುಂದೆ ಚಲಿಸು; ತಲೆ: ಶಿರ; ಹರಿದು: ಸೀಳು; ಕಲಿ: ಶೂರ; ಇಂದು: ಇವತ್ತು; ಕವಿ: ಆವರಿಸು; ಸಕಲ: ಎಲ್ಲಾ; ಭಟ: ಸೈನಿಕ; ಅರವಿಂದ: ಕಮಲ; ಸಖ: ಮಿತ್ರ; ಹೊದ್ದು: ಸೇರು, ತಬ್ಬಿಕೊ; ಮೆಲ್ಲನೆ: ನಿಧಾನವಾಗಿ; ಪಶ್ಚಿಮ: ಪಡುವಣ; ಅಂಬುಧಿ: ಸಾಗರ;

ಪದವಿಂಗಡಣೆ:
ನೊಂದು +ಮರಳದೆ+ ಮಸಗಿ +ಸೂರ್ಯನ
ನಂದನನು +ತಾಗಿದನು +ಗುರುಸುತ
ಮುಂದುವರಿದನು +ತಲೆ +ಹರಿದರ್+ಎನ್ನಟ್ಟೆ +ಕಲಿಯೆನುತ
ಇಂದಿನಲಿ+ ಮಹನವಮಿ +ತಲೆಗಳಿ
ಗೆಂದು +ಕವಿದರು +ಸಕಲ +ಭಟರ್
ಅರವಿಂದಸಖ+ ಹೊದ್ದಿದನು +ಮೆಲ್ಲನೆ +ಪಶ್ಮಿಮ+ಅಂಬುಧಿಯ

ಅಚ್ಚರಿ:
(೧) ಸೂರ್ಯ, ಅರವಿಂದ ಸಖ – ಸಾಮ್ಯಾರ್ಥ ಪದಗಳು
(೨) ಅರ್ಜುನನ ಹಿರಿಮೆ – ಇಂದಿನಲಿ ಮಹನವಮಿ ತಲೆಗಳಿಗೆಂದು ಕವಿದರು ಸಕಲ ಭಟರರ
(೩) ಸಂಜೆಯಾಯಿತು ಎಂದು ಹೇಳಲು – ಅರವಿಂದಸಖ ಹೊದ್ದಿದನು ಮೆಲ್ಲನೆ ಪಶ್ಮಿಮಾಂಬುಧಿಯ

ಪದ್ಯ ೪೮: ಕೌರವನು ಯಾವ ಸಾಗರದಿಂದ ಅರ್ಜುನನನ್ನು ಆವರಿಸಿದನು?

ನರ ಸುರಾಸುರರಿದನು ಭೇದಿಸ
ಲರಿದು ಕೈಕೊಳ್ಳೆಂದು ಮಂತ್ರಿಸಿ
ಬರಿಗೆ ಕವಚವ ಕಟ್ಟಿದನು ಕೌರವ ಮಹೀಪತಿಗೆ
ಗುರುವಿನಂಘ್ರಿಯೊಳೆರಗಿ ಮರಳಿದು
ಧುರವ ಹೊಕ್ಕನು ಶಕ್ರತನುಜನ
ಕರೆದು ಮೂದಲಿಸಿದನು ತುಳುಕಿದನಂಬಿನಂಬುಧಿಯ (ದ್ರೋಣ ಪರ್ವ, ೧೦ ಸಂಧಿ, ೪೮ ಪದ್ಯ)

ತಾತ್ಪರ್ಯ:
ಮನುಷ್ಯರು, ದೇವತೆಗಳು, ಅಸುರರು ಇದನ್ನು ಭೇದಿಸಲಾರರು. ಇದನ್ನು ತೆಗೆದುಕೋ, ಎಂದು ದ್ರೋನನು ದುರ್ಯೋಧನನಿಗೆ ಕವಚವನ್ನು ಕಟ್ಟಿದನು. ದುರ್ಯೋಧನನು ಗುರುವಿಗೆ ವಂದಿಸಿ, ಅರ್ಜುನನನ್ನು ಕರೆದು ಮೂದಲಿಸಿ ಬಾಣಗಳ ಸಾಗರವನ್ನು ಅರ್ಜುನನ ಎದುರು ನಿರ್ಮಿಸಿದನು.

ಅರ್ಥ:
ನರ: ಅರ್ಜುನ; ಸುರಾಸುರ: ದೇವತೆಗಳು ಮತ್ತು ರಾಕ್ಷಸ; ಭೇಧಿಸು: ಒಡೆಯುವುದು; ಅರಿ: ತಿಳಿ; ಕೊಳ್ಳು: ಹಿಡಿ; ಮಂತ್ರ: ದೇವತಾರ್ಚನೆಯ ಪದಗಳು; ಕವಚ: ಹೊದಿಕೆ, ಉಕ್ಕಿನ ಅಂಗಿ; ಕಟ್ಟು: ಬಂಧಿಸು; ಮಹೀಪತಿ: ರಾಜ; ಗುರು: ಆಚಾರ್ಯ; ಅಂಘ್ರಿ: ಪಾದ; ಎರಗು: ನಮಸ್ಕರಿಸು; ಮರಳು: ಹಿಂದಿರುಗು; ಧುರ: ಯುದ್ಧ, ಕಾಳಗ; ಹೊಕ್ಕು: ಸೇರು; ಶಕ್ರ: ಇಂದ್ರ; ತನುಜ: ಮಗ; ಕರೆ: ಬರೆಮಾಡು; ಮೂದಲಿಸು: ಹಂಗಿಸು; ತುಳುಕು: ತುಂಬಿ ಹೊರಸೂಸು; ಅಂಬು: ಬಾಣ; ಅಂಬುಧಿ: ಸಾಗರ;

ಪದವಿಂಗಡಣೆ:
ನರ +ಸುರ+ಅಸುರರ್+ಇದನು +ಭೇದಿಸಲ್
ಅರಿದು +ಕೈಕೊಳ್ಳೆಂದು +ಮಂತ್ರಿಸಿ
ಬರಿಗೆ +ಕವಚವ +ಕಟ್ಟಿದನು +ಕೌರವ +ಮಹೀಪತಿಗೆ
ಗುರುವಿನ್+ಅಂಘ್ರಿಯೊಳ್+ಎರಗಿ +ಮರಳಿದು
ಧುರವ+ ಹೊಕ್ಕನು +ಶಕ್ರ+ತನುಜನ
ಕರೆದು +ಮೂದಲಿಸಿದನು +ತುಳುಕಿದನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಬಾಣಗಳ ಸಾಗರ ಎಂದು ಕರೆದ ಪರಿ – ತುಳುಕಿದನಂಬಿನಂಬುಧಿಯ
(೨) ಅರ್ಜುನನನ್ನು ಶಕ್ರತನುಜ ಎಂದು ಕರೆದ ಪರಿ

ಪದ್ಯ ೨೯: ಕೌರವ ಸೈನ್ಯವು ಅರ್ಜುನನನ್ನು ಹೇಗೆ ಮುತ್ತಿತು?

ನೋಡಿ ನರನುದ್ದಂಡತನವನು
ತೋಡುತೈದನೆ ತುರಗ ಲೀಲೆಗೆ
ಖೇಡಕುಳಿಯನು ಶೌರ್ಯಗರ್ವಿತನೈ ಶಿವಾ ಎನುತ
ಕೂಡೆ ಮಸಗಿತು ರಿಪುಚತುರ್ಬಲ
ಜೋಡು ಮಾಡಿತು ಕಡಹದಮರರು
ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ (ದ್ರೋಣ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅರ್ಜುನನ ದರ್ಪ ಅಹಂಕಾರಗಳನ್ನಿಷ್ಟು ನೋಡಿ, ಕುದುರೆಗಳಿಗಾಗಿ ಗುಳಿಯನ್ನು ತೋಡುತ್ತಿದ್ದಾನೆ. ಶೌರ್ಯದ ಗರ್ವ ಎಷ್ಟಿದ್ದೀತು, ಶಿವ ಶಿವಾ ಎನ್ನುತ್ತಾ ಕೌರವ ಸೈನ್ಯವು ಒಟ್ಟಾಗಿ, ದೇವತೆಗಳು ಕಡೆಯುತ್ತಿದ್ದ ಮಂದರ ಗಿರಿಯನ್ನು ಅಲೆಗಳು ಮುತ್ತಿದಂತೆ ಅರ್ಜುನನನ್ನು ಮುತ್ತಿತು.

ಅರ್ಥ:
ನೋಡು: ವೀಕ್ಷಿಸು; ನರ: ಅರ್ಜುನ; ಉದ್ದಂಡ: ದರ್ಪ, ಗರ್ವ; ತೋಡು: ಅಗೆದಿರುವ ಸ್ಥಳ, ಹಳ್ಳ; ಐದು: ಬಂದು ಸೇರು; ತುರಗ: ಅಶ್ವ; ಲೀಲೆ: ಆನಂದ, ಸಂತೋಷ; ಖೇಡ: ಹಳ್ಳಿ, ಗ್ರಾಮ; ಕುಳಿ: ಗುಂಡಿ, ಗುಣಿ, ಹಳ್ಳ; ಶೌರ್ಯ: ಪರಾಕ್ರಮ; ಗರ್ವ: ಅಹಂಕಾರ; ಮಸಗು: ಹರಡು; ಕೆರಳು; ತಿಕ್ಕು; ರಿಪು: ವೈರಿ; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಜೋಡು: ಜೊತೆ; ಅಮರ: ದೇವತೆ; ಹೂಡು: ರಚಿಸು, ನಿರ್ಮಿಸು; ಅದ್ರಿ: ಬೆಟ್ಟ; ಅಂಬುಧಿ: ಸಾಗರ; ತೆರೆ: ತೆಗೆ, ಬಿಚ್ಚು; ಕವಿ: ಆವರಿಸು;

ಪದವಿಂಗಡಣೆ:
ನೋಡಿ +ನರನ್+ಉದ್ದಂಡತನವನು
ತೋಡುತ್+ಐದನೆ+ ತುರಗ +ಲೀಲೆಗೆ
ಖೇಡ+ಕುಳಿಯನು +ಶೌರ್ಯಗರ್ವಿತನೈ+ ಶಿವಾ +ಎನುತ
ಕೂಡೆ+ ಮಸಗಿತು +ರಿಪು+ಚತುರ್ಬಲ
ಜೋಡು +ಮಾಡಿತು +ಕಡಹದ್+ಅಮರರು
ಹೂಡಿದ್+ಅದ್ರಿಯನ್+ಅಂಬುಧಿಯ +ತೆರೆಮಾಲೆ +ಕವಿದಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಹದಮರರು ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ

ಪದ್ಯ ೧೨: ಅರ್ಜುನನನ್ನು ಎದುರಿಸಲು ಯಾರು ಮುಂದೆ ಬಂದರು?

ಮುರಿವಡೆದು ಚತುರಂಗವರ್ಜುನ
ನುರುಬೆಗಾರದೆ ನಿಲೆ ಶ್ರುತಾಯುಧ
ನಿರಿಯಲುತ್ಸಾಹಿಸಿದನಿದಿರಾದನು ಧನಂಜಯನ
ಮುರಿಯೆಸುತ ಮುಂಕೊಂಡು ಪಾರ್ಥನ
ತರುಬಿದನು ಬಳಿಕೀತನಾತನ
ನೆರೆವಣಿಗೆ ಲೇಸೆನುತ ತುಳುಕಿದನಂಬಿನಂಬುಧಿಯ (ದ್ರೋಣ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಚತುರಂಗ ಸೈನ್ಯವು ಅರ್ಜುನನ ದಾಳಿಯನ್ನು ಸಹಿಸಲಾರದೆ ಹೋಗಲು, ಶ್ರುತಾಯುಧನು ಯುದ್ಧೋತ್ಸಾಹದಿಂದ ಅರ್ಜುನನಿಗಿದಿರಾದನು. ಬಾಣಗಳನ್ನು ಬಿಡುತ್ತಾ ಅರ್ಜುನನನ್ನು ತಡೆದು ನಿಲ್ಲಿಸಿದನು. ಅವನ ಶಸ್ತ್ರ ಪ್ರಯೋಗ ಉತ್ತಮವಾಗಿದೆಯೆಂದು ಅರ್ಜುನನು ಬಾಣಗಳ ಸಮುದ್ರವನ್ನೇ ಅವನ ಮೇಲೆ ಬಿಟ್ಟನು.

ಅರ್ಥ:
ಮುರಿ: ಸೀಳು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಉರು: ಅತಿಶಯವಾದ ವೇಗ; ನಿಲೆ: ನಿಲ್ಲು; ಇರಿ: ಚುಚ್ಚು; ಉತ್ಸಾಹ: ಶಕ್ತಿ, ಬಲ, ಹುರುಪು; ಇದಿರು: ಎದುರು; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ತರುಬು: ತಡೆ, ನಿಲ್ಲಿಸು; ಬಳಿಕ: ನಂತರ; ಎರವು: ದೂರವಾಗುವಿಕೆ; ಲೇಸು: ಒಳಿತು; ತುಳುಕು: ಹೊರಸೂಸುವಿಕೆ; ಅಂಬು: ಬಾಣ; ಅಂಬುಧಿ: ಸಾಗರ;

ಪದವಿಂಗಡಣೆ:
ಮುರಿವಡೆದು +ಚತುರಂಗವ್+ಅರ್ಜುನನ್
ಉರುಬೆಗಾರದೆ +ನಿಲೆ +ಶ್ರುತಾಯುಧನ್
ಇರಿಯಲ್+ಉತ್ಸಾಹಿಸಿದನ್+ಇದಿರಾದನು +ಧನಂಜಯನ
ಮುರಿಯೆಸುತ+ ಮುಂಕೊಂಡು +ಪಾರ್ಥನ
ತರುಬಿದನು +ಬಳಿಕೀತನ್+ಆತನನ್
ಎರೆವಣಿಗೆ +ಲೇಸೆನುತ +ತುಳುಕಿದನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಬಾಣಗಳ ಸಾಗರ ಎಂದು ಕರೆದ ಪರಿ – ತುಳುಕಿದನಂಬಿನಂಬುಧಿಯ

ಪದ್ಯ ೩೭: ಧರ್ಮಜನು ಪದ್ಮವ್ಯೂಹದ ಬಗ್ಗೆ ಏನು ಹೇಳಿದನು?

ಸುಳಿಯಬಹುದಂಬುಧಿಯ ನಡುವಣ
ಸುಳಿಯೊಳಗೆ ಸಂವರ್ತಕನ ಕೊರ
ಳೊಳಗೆ ಕುಣಿಯಲುಬಹುದು ಮೃತ್ಯುವಿನಣಲ ಹೊಳಲೊಳಗೆ
ಹೊಳಕಬಹುದಹಿಪನ ಫಣಾ ಮಂ
ಡಳದೊಳಾಡಲುಬಹುದು ಕಾಣೆನು
ಗೆಲುವ ಹದನನು ಮಗನೆ ಪದ್ಮವ್ಯೂಹದೊಡ್ಡಣೆಯ (ದ್ರೋಣ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸಮುದ್ರ ಮಧ್ಯದ ಸುಳಿಯೊಳಗೆ ಹೋಗಿ ಬರಬಹುದು, ಕಾಲನ ಕೊರಳಲ್ಲಿ ಕುಣಿಯಬಹುದು, ಮೃತ್ಯುವಿನ ಅಂಗುಳಲ್ಲಿ ನುಗ್ಗಿ ಬರಬಹುದು, ಆದಿಶೃಷನ ಹೆಡೆಗಳ ನಡುವೆ ಆಡಬಹುದು. ಆದರೆ ಮಗನೇ,ಒಡ್ಡಿದ ಪದ್ಮವ್ಯೂಹದಲ್ಲಿ ಗೆಲ್ಲುವ ರೀತಿಯನ್ನು ನಾನು ಕಾಣೆ ಎಂದು ಧರ್ಮಜನು ನುಡಿದನು.

ಅರ್ಥ:
ಸುಳಿ: ಸುತ್ತು, ಆವರ್ತ; ಅಂಬುಧಿ: ಸಾಗರ; ನದುವಣ: ಮಧ್ಯೆ; ಸುಳಿ: ಜಲಾವರ್ತ; ಸಂವರ್ತಕ: ಯಮ; ಕೊರಳು: ಗಂಟಲು; ಕುಣಿ: ನರ್ತಿಸು; ಮೃತ್ಯು: ಸಾವು; ಹೊಳಕು: ಪ್ರಕಾಶ, ಹೊಳಪು; ಅಹಿಪ: ಸರ್ಪರಾಜ; ಫಣ: ಹಾವು; ಮಂಡಳ: ಸೀಮೆ, ನಾಡಿನ ಒಂದು ಭಾಗ; ಆಡು: ಕ್ರೀಡೆ; ಗೆಲುವು: ಜಯ; ಕಾಣೆ: ತೋರು; ಹದ: ಸ್ಥಿತಿ; ಮಗ: ಪುತ್ರ; ಒಡ್ಡಣ: ಪಡೆ, ಸೈನ್ಯ;

ಪದವಿಂಗಡಣೆ:
ಸುಳಿಯಬಹುದ್+ಅಂಬುಧಿಯ +ನಡುವಣ
ಸುಳಿಯೊಳಗೆ +ಸಂವರ್ತಕನ +ಕೊರ
ಳೊಳಗೆ +ಕುಣಿಯಲುಬಹುದು+ ಮೃತ್ಯುವಿನಣಲ +ಹೊಳಲೊಳಗೆ
ಹೊಳಕಬಹುದ್+ಅಹಿಪನ +ಫಣಾ +ಮಂ
ಡಳದೊಳ್+ಆಡಲುಬಹುದು+ ಕಾಣೆನು
ಗೆಲುವ +ಹದನನು +ಮಗನೆ +ಪದ್ಮವ್ಯೂಹದ್+ಒಡ್ಡಣೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸುಳಿಯಬಹುದಂಬುಧಿಯ ನಡುವಣ ಸುಳಿಯೊಳಗೆ; ಸಂವರ್ತಕನ ಕೊರ
ಳೊಳಗೆ ಕುಣಿಯಲುಬಹುದು; ಮೃತ್ಯುವಿನಣಲ ಹೊಳಲೊಳಗೆ ಹೊಳಕಬಹುದ್; ಅಹಿಪನ ಫಣಾ ಮಂ
ಡಳದೊಳಾಡಲುಬಹುದು