ಪದ್ಯ ೬: ಧೃತರಾಷ್ಟ್ರ ದುಃಖದಿಂದ ವ್ಯಾಸರಲ್ಲಿ ಏನು ಹೇಳಿದ?

ಅಹುದು ನಿಮ್ಮ ಯುಧಿಷ್ಠಿರನು ಗುಣಿ
ಯಹನು ಭೀಮಾರ್ಜುನರು ಬಲ್ಲಿದ
ರಹರು ಕೃಷ್ಣನ ಕೂರ್ಮೆಯಲ್ಲಿ ಕಪರ್ದಿಯೊಲವಿನಲಿ
ಕುಹಕಿಯೆನ್ನವನ್ನವನೊಳಗೆ ನಿ
ಸ್ಪೃಹರು ವಿದುರಪ್ರಮುಖ ಸುಜನರು
ವಿಹಿತವೆನಗಿನ್ನಾವುದದ ನೀವ್ ಬೆಸಸಿ ಸಾಕೆಂದ (ಗದಾ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ಆಗ ಧೃತರಾಷ್ಟ್ರ, ಹೌದು ನಿಮ್ಮ ಯುಧಿಷ್ಠಿರನು ಗುಣಶಾಲಿ, ಭೀಮಾರ್ಜುನರು ಮಹಾ ಪರಾಕ್ರಮಿಗಳು. ಕೃಷ್ಣನ ಸ್ನೇಹ, ಶಿವನ ಪ್ರೀತಿ ಅವರ ಕಡೆಗೇ ಇದೆ. ನನ್ನ ಮಗನು ಕುಹಕಿ, ದುಷ್ಟ; ಅವನ ವಿಷಯದಲ್ಲಿ ವಿದುರನೇ ಮೊದಲಾದ ಸಜ್ಜನರು ನಿಸ್ಫೃಹರು. ಇದು ನಿಜ. ನಾನೀಗ ಮಾಡಬೇಕಾದುದೇನು? ನೀವು ಅಪ್ಪಣೆ ನೀಡಿ ಸಾಕು ಎಂದು ಹೇಳಿದನು.

ಅರ್ಥ:
ಗುಣಿ: ಗುಣಉಳ್ಳವ; ಬಲ್ಲಿದ: ಬಲಿಷ್ಠ; ಒಲವು: ಪ್ರೀತಿ; ಕುಹಕಿ: ದುಷ್ಟ; ನಿಸ್ಪೃಹ: ಆಸೆ ಇಲ್ಲದವ; ಪ್ರಮುಖ: ಮುಖ್ಯರಾದವರು; ಸುಜನ: ಒಳ್ಳೆಯವ; ವಿಹಿತ: ಯೋಗ್ಯ; ಬೆಸಸು: ಹೇಳು, ಆಜ್ಞಾಪಿಸು; ಸಾಕು: ನಿಲ್ಲು; ಕಪರ್ದಿ: ಶಿವ;

ಪದವಿಂಗಡಣೆ:
ಅಹುದು +ನಿಮ್ಮ +ಯುಧಿಷ್ಠಿರನು +ಗುಣಿ
ಯಹನು +ಭೀಮಾರ್ಜುನರು +ಬಲ್ಲಿದ
ರಹರು +ಕೃಷ್ಣನ+ ಕೂರ್ಮೆಯಲ್ಲಿ+ ಕಪರ್ದಿ+ಒಲವಿನಲಿ
ಕುಹಕಿ+ಎನ್ನವನ್ನ್+ಅವನೊಳಗೆ +ನಿ
ಸ್ಪೃಹರು +ವಿದುರ+ಪ್ರಮುಖ +ಸುಜನರು
ವಿಹಿತವೆನಗ್+ಇನ್ನಾವುದ್+ಅದ +ನೀವ್ +ಬೆಸಸಿ+ ಸಾಕೆಂದ

ಅಚ್ಚರಿ:
(೧) ದುರ್ಯೋಧನ ಬಗ್ಗೆ ಹೇಳಿದುದು – ಕುಹಕಿ
(೨) ಪಾಂಡವರ ಬಗ್ಗೆ ತಿಳಿಸಿದ ಪರಿ – ಯುಧಿಷ್ಠಿರನು ಗುಣಿಯಹನು, ಭೀಮಾರ್ಜುನರು ಬಲ್ಲಿದರಹರು

ಪದ್ಯ ೫: ಕೃಷ್ಣನೇಕೆ ಪಾಂಡವರ ಕಡೆ ನಿಂತನು?

ಅವರು ಸುಚರಿತರೆಂದಲೇ ಮಾ
ಧವನು ನೆರೆ ಮರುಳಾದನವರಿಗೆ
ಶಿವನು ಮೆಚ್ಚಿದು ಶರವನಿತ್ತನು ನರನ ಪತಿಕರಿಸಿ
ಭುವನವೆರಡಾದಲ್ಲಿ ಸಾಧುಗ
ಳವರ ದೆಸೆ ದುಸ್ಸಾಧುಗಳು ನಿ
ನ್ನವರ ದೆಸೆಯಾಯ್ತನರ್ಜುನನ ಸೂತಜನ ಸಮರದಲಿ (ಗದಾ ಪರ್ವ, ೧೧ ಸಂಧಿ, ೫ ಪದ್ಯ)

ತಾತ್ಪರ್ಯ:
ಅವರು ಸುಚರಿತರೆಂದೇ ಶ್ರೀಕೃಷ್ಣನು ಅವರಿಗೆ ಮರುಳಾದನು. ಶಿವನು ಅರ್ಜುನನಿಗೆ ಮೆಚ್ಚಿ ಪಾಶುಪತಾಸ್ತ್ರವನ್ನು ನೀಡಿದನು. ಕರ್ಣಾರ್ಜುನರ ಯುದ್ಧದಲ್ಲಿ ಲೋಕವು ಎರಡು ಪಕ್ಷವಾದಾಗ ಸಾಧುಗಳು ಪಾಂಡವರ ಕಡೆಗೂ, ದುಷ್ಟರು ನಿನ್ನ ಕಡೆಗೂ ಬೆಂಬಲಕ್ಕೆ ನಿಂತರಲ್ಲವೇ ಎಂದು ವೇದವ್ಯಾಸರು ಕೇಳಿದರು.

ಅರ್ಥ:
ಸುಚರಿತ: ಒಳ್ಳೆಯ ಚರಿತ್ರೆ ಉಳ್ಳವರು; ಮಾಧವ: ಕೃಷ್ಣ; ನೆರೆ: ಗುಂಪು; ಮರುಳು: ಪ್ರೀತಿ, ಮೋಹ; ಶಿವ: ಶಂಕರ; ಮೆಚ್ಚು: ಒಲುಮೆ, ಪ್ರೀತಿ; ಶರ: ಬಾಣ; ನರ: ಮನುಷ್ಯ; ಪತಿಕರಿಸು: ಅನುಗ್ರಹಿಸು; ಭುವನ: ಭೂಮಿ; ಸಾಧು: ಶುದ್ಧವಾದುದು; ದೆಸೆ: ದಿಕ್ಕು; ದುಸ್ಸಾಧು: ಕೆಟ್ಟವರು, ದುಷ್ಟ; ಸೂತಜ: ಕರ್ಣ; ಸಮರ: ಯುದ್ಧ;

ಪದವಿಂಗಡಣೆ:
ಅವರು +ಸುಚರಿತರ್+ಎಂದಲೇ +ಮಾ
ಧವನು +ನೆರೆ +ಮರುಳಾದನ್+ಅವರಿಗೆ
ಶಿವನು +ಮೆಚ್ಚಿದು +ಶರವನಿತ್ತನು+ ನರನ +ಪತಿಕರಿಸಿ
ಭುವನವ್+ಎರಡಾದಲ್ಲಿ+ ಸಾಧುಗಳ್
ಅವರ +ದೆಸೆ +ದುಸ್ಸಾಧುಗಳು +ನಿ
ನ್ನವರ +ದೆಸೆಯಾಯ್ತನ್+ ಅರ್ಜುನನ +ಸೂತಜನ +ಸಮರದಲಿ

ಅಚ್ಚರಿ:
(೧) ಕೃಷ್ಣನು ಪಾಂಡವರ ಕಡೆಯಿದ್ದ ಕಾರಣ – ಅವರು ಸುಚರಿತರೆಂದಲೇ ಮಾಧವನು ನೆರೆ ಮರುಳಾದನವರಿಗೆ
(೨) ಕರ್ಣನನ್ನು ಸೂತಜ ಎಂದು ಕರೆದಿರುವುದು

ಪದ್ಯ ೪: ವ್ಯಾಸರು ಪಾಂಡವರಬಗ್ಗೆ ಏನು ಹೇಳಿದರು?

ಸೈರಿಸಿದರೇ ಪಾಂಡುಸುತರಂ
ಭೋರುಹಾಕ್ಷಿ ರಜಸ್ವಲೆಯ ಸುಲಿ
ಸೀರೆಯಲಿ ತತ್ಪೂರ್ವಕೃತ ಜತುಗೇಹದಾಹದಲಿ
ವೈರಬಂಧದ ವಿವಿಧ ವಿಷಮ ವಿ
ಕಾರದಲಿ ವಿರ್ಗ್ರಹಮುಖವ ವಿ
ಸ್ತಾರಿಸಿದರೇ ಪಾಂಡುಸುತರುತ್ತಮರೆ ಹೇಳೆಂದ (ಗದಾ ಪರ್ವ, ೧೧ ಸಂಧಿ, ೪ ಪದ್ಯ)

ತಾತ್ಪರ್ಯ:
ಅದನ್ನ್ ಪಾಂಡವರು ಸೈರಿಸಿದರೇ? ರಜಸ್ವದ ಅಲೆಯಾದ ದ್ರೌಪದಿಯ ಸೀರೆಯನ್ನು ಸುಲಿದಾಗ ಅದಕ್ಕೂ ಮೊದಲು ಅರಗಿನ ಮನೆಯನ್ನು ಸುಟ್ಟಾಗ, ವೈರವನ್ನು ವಿವಿಧ ರೀತಿಗಳಲ್ಲಿ ವ್ಯಕ್ತಪಡಿಸಿದಾಗ ಅವರು ಸೈರಿಸಲಿಲ್ಲವೇ? ಯುದ್ಧಕ್ಕೆ ಬಂದರೇ? ಪಾಂಡವರು ಉತ್ತಮರೇ? ಹೇಳು ಎಂದು ವ್ಯಾಸರು ಕೇಳಿದರು.

ಅರ್ಥ:
ಸೈರಿಸು: ತಾಳು, ಸಹಿಸು; ಸುತ: ಮಕ್ಕಳು; ಅಂಬೋರುಹ: ಕಮಲ; ಅಕ್ಷಿ: ಕಣ್ಣು; ರಜ: ಮೂರು ಗುಣಗಳಲ್ಲಿ ಒಂದು; ಅಲೆ: ತೆರೆ; ಸುಲಿ: ತೆಗೆ, ಕಳಚು; ಸೀರೆ: ಬಟ್ಟೆ; ಪೂರ್ವ: ಹಿಂದಿನ; ಕೃತ: ಕೆಲಸ; ಜತು: ಅರಗು, ಲಾಕ್ಷ; ಗೇಹ: ಮನೆ; ದಾಹ: ಉರಿ, ಕಿಚ್ಚು; ವೈರ: ಶತ್ರು; ಬಂಧ: ಕಟ್ಟು, ಬಂಧನ; ವಿವಿಧ: ಹಲವರು; ವಿಷಮ: ಸಮವಾಗಿಲ್ಲದಿರುವುದು, ಕಷ್ಟ ಪರಿಸ್ಥಿತಿ; ವಿಕಾರ: ಮಾರ್ಪಾಟು; ವಿಗ್ರಹ: ರೂಪ; ಯುದ್ಧ; ಮುಖ: ಆನನ; ವಿಸ್ತಾರಿಸು: ಹರಡು; ಸುತ: ಮಗ; ಉತ್ತಮ: ಶ್ರೇಷ್ಠ; ಹೇಳು: ತಿಳಿಸು;

ಪದವಿಂಗಡಣೆ:
ಸೈರಿಸಿದರೇ+ ಪಾಂಡುಸುತರ್
ಅಂಭೋರುಹಾಕ್ಷಿ+ ರಜಸ್ವಲೆಯ+ ಸುಲಿ
ಸೀರೆಯಲಿ +ತತ್ಪೂರ್ವ+ಕೃತ +ಜತುಗೇಹ+ದಾಹದಲಿ
ವೈರಬಂಧದ +ವಿವಿಧ +ವಿಷಮ +ವಿ
ಕಾರದಲಿ +ವಿಗ್ರಹ+ಮುಖವ+ ವಿ
ಸ್ತಾರಿಸಿದರೇ+ ಪಾಂಡುಸುತರ್+ಉತ್ತಮರೆ +ಹೇಳೆಂದ

ಅಚ್ಚರಿ:
(೧) ದ್ರೌಪದಿಯನ್ನು ಅಂಭೋರುಹಾಕ್ಷಿ ಎಂದು ಕರೆದಿರುವುದು
(೨) ವ ಕಾರದ ಸಾಲು ಪದ – ವೈರಬಂಧದ ವಿವಿಧ ವಿಷಮ ವಿಕಾರದಲಿ ವಿರ್ಗ್ರಹಮುಖವ ವಿಸ್ತಾರಿಸಿದರೇ

ಪದ್ಯ ೩: ಸುಯೋಧನನು ಎಂತಹ ವ್ಯಕ್ತಿ ಎಂದು ವ್ಯಾಸರು ತಿಳಿಸಿದರು?

ನಿನ್ನ ಸುತನುದ್ದಂಡತನದಲಿ
ನಿನ್ನ ತಮ್ಮನ ತನುಜರನು ಪರಿ
ಖಿನ್ನರನು ಮಾಡಿದನು ಕಪಟದ್ಯೂತಕೇಳಿಯಲಿ
ನಿನ್ನ ಮತ ವಿದುರೋಕ್ತಿಗಳ ಮೇಣ್
ಮನ್ನಿಸಿದನೇ ಜಗವರಿಯೆ ಸಂ
ಪನ್ನ ಶಠನಹನೈ ಸುಯೊಧನನೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ನಿನ್ನ ಮಗನು ದರ್ಪ ಅಹಮ್ಕಾರಗಳಿಂದ ಪಾಂಡವರನ್ನು ಕಪಟ ದ್ಯೂತದಲ್ಲಿ ನೋಯಿಸಿದನು. ನಿನ್ನ ಅಥವ ವಿದುರನ ನುಡಿಗಳನ್ನು ಕೇಳಿದನೇ? ಅದನ್ನು ಒಪ್ಪಿಕೊಂಡನೇ? ನಿನ್ನ ಮಗನು ಸಂಪೂರ್ಣವಾಗಿ ದುಷ್ಟನು, ಧೂರ್ತ ಎಂದು ವೇದವ್ಯಾಸ ಮುನಿಗಳು ಧೃತರಾಷ್ಟ್ರನಿಗೆ ಹೇಳಿದರು.

ಅರ್ಥ:
ಸುತ: ಮಗ; ಉದ್ದಂಡ: ದರ್ಪ, ಗರ್ವ; ತಮ್ಮ: ಅನುಜ; ತನುಜ: ಮಕ್ಕಳು; ಖಿನ್ನ: ಖೇದ, ವಿಷಾದ; ಕಪಟ: ಮೋಸ; ದ್ಯೂತ: ಜೂಜು; ಕೇಳಿ: ಆಟ, ಕ್ರೀಡೆ; ಮತ: ವಿಚಾರ, ಅಭಿಪ್ರಾಯ; ಉಕ್ತಿ: ಮಾತು, ಹೇಳಿಕೆ; ಮೇಣ್: ಅಥವಾ; ಮನ್ನಿಸು: ಗೌರವಿಸು; ಜಗ: ಪ್ರಪಂಚ; ಅರಿ: ತಿಳಿ; ಸಂಪನ್ನ: ಪರಿಪೂರ್ಣ; ಶಠ: ದುಷ್ಟ, ಧೂರ್ತ; ಮುನಿ: ಋಷಿ;

ಪದವಿಂಗಡಣೆ:
ನಿನ್ನ +ಸುತನ್+ಉದ್ದಂಡತನದಲಿ
ನಿನ್ನ+ ತಮ್ಮನ +ತನುಜರನು +ಪರಿ
ಖಿನ್ನರನು +ಮಾಡಿದನು +ಕಪಟದ್ಯೂತ+ಕೇಳಿಯಲಿ
ನಿನ್ನ+ ಮತ +ವಿದುರೋಕ್ತಿಗಳ+ ಮೇಣ್
ಮನ್ನಿಸಿದನೇ +ಜಗವ್+ಅರಿಯೆ +ಸಂ
ಪನ್ನ+ ಶಠನಹನೈ +ಸುಯೊಧನನ್+ಎಂದನಾ +ಮುನಿಪ

ಅಚ್ಚರಿ:
(೧) ಮತ, ಉಕ್ತಿ – ಸಾಮ್ಯಾರ್ಥ ಪದ
(೨) ನಿನ್ನ, ಖಿನ್ನ, ಸಂಪನ್ನ – ಪ್ರಾಸ ಪದಗಳು
(೩) ಸುಯೋಧನನನ್ನು ವಿವರಿಸುವ ಪರಿ – ಸಂಪನ್ನ ಶಠ

ಪದ್ಯ ೨: ಧೃತರಾಷ್ಟ್ರನನ್ನು ನೋಡಲು ಯಾವ ಮುನಿಗಳು ಬಂದರು?

ಆ ಸಮಯದಲಿ ದೇವ ವೇದ
ವ್ಯಾಸಮುನಿ ಬಂದನು ಗತಾಕ್ಷಮ
ಹೀಶನನು ಚರಣದಲಿ ಹೊರಳಿದಡೆತ್ತಿದನು ಹಿಡಿದು
ಆ ಸತಿಯ ಕರಸಿದನು ರಾಣೀ
ವಾಸವೆಲ್ಲವ ಬರಿಸಿ ಧರ್ಮವಿ
ಲಾಸವನು ವಿಸ್ತರಿಸಿದನು ವೈದಿಕ ವಿಧಾನದಲಿ (ಗದಾ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಆ ಸಮಯಕ್ಕೆ ವೇದವ್ಯಾಸ ಮುನಿಗಳು ಆಗಮಿಸಿದರು. ಧೃತರಾಷ್ಟ್ರನು ಅವರ ಪಾದಕಮಲಗಳಿಗೆ ನಮಸ್ಕರಿಸಲು ಅವನನ್ನು ಮೇಲೆತ್ತಿ, ಗಾಂಧಾರಿಯನ್ನೂ ರಾಣೀವಾಸದ ಎಲ್ಲರನ್ನೂ ಕರೆಸಿದನು. ಮಾಡಬೇಕಾದ ವೈದಿಕ ವಿಧಿ ವಿಧಾನಗಳನ್ನು ವಿವರವಾಗಿ ತಿಳಿಸಿದರು.

ಅರ್ಥ:
ಸಮಯ: ಕಾಲ; ದೇವ: ಭಗವಂತ; ಮುನಿ: ಋಷಿ; ಬಂದನು: ಆಗಮಿಸು; ಗತಾಕ್ಷ: ಕಣ್ಣಿಲ್ಲದ; ಮಹೀಶ: ರಾಜ; ಚರಣ: ಪಾದ; ಹೊರಳು: ತಿರುವು, ಬಾಗು; ಎತ್ತು: ಮೇಲೇಳು; ಹಿಡಿ: ಗ್ರಹಿಸು; ಸತಿ: ಹೆಂಡತಿ; ಕರೆಸು: ಬರೆಮಾಡು; ರಾಣೀವಾಸ: ಅಂತಃಪುರ; ಬರಿಸಿ: ಕರೆಸು; ಧರ್ಮ: ಧಾರಣೆ ಮಾಡಿದುದು; ವಿಲಾಸ: ಅಂದ, ಸೊಬಗು; ವಿಸ್ತರಿಸು: ಹಬ್ಬು, ಹರಡು; ವೈದಿಕ: ವೇದದಲ್ಲಿ ಹೇಳಿರುವ, ವೇದೋಕ್ತ; ವಿಧಾನ: ರೀತಿ;

ಪದವಿಂಗಡಣೆ:
ಆ +ಸಮಯದಲಿ +ದೇವ +ವೇದ
ವ್ಯಾಸಮುನಿ +ಬಂದನು +ಗತಾಕ್ಷ+ಮ
ಹೀಶನನು +ಚರಣದಲಿ +ಹೊರಳಿದಡ್+ಎತ್ತಿದನು +ಹಿಡಿದು
ಆ +ಸತಿಯ +ಕರಸಿದನು +ರಾಣೀ
ವಾಸವೆಲ್ಲವ +ಬರಿಸಿ +ಧರ್ಮ+ವಿ
ಲಾಸವನು +ವಿಸ್ತರಿಸಿದನು +ವೈದಿಕ +ವಿಧಾನದಲಿ

ಅಚ್ಚರಿ:
(೧) ವ ಕಾರದ ಸಾಲು ಪದ – ವಿಲಾಸವನು ವಿಸ್ತರಿಸಿದನು ವೈದಿಕ ವಿಧಾನದಲಿ
(೨) ಗತಾಕ್ಷಮಹೀಶನ – ಧೃತರಾಷ್ಟ್ರನನ್ನು ಕರೆದ ಪರಿ
(೩) ಕರಸಿ, ಬರಿಸಿ, ಬಂದು – ಸಾಮ್ಯಾರ್ಥ ಪದ
(೪) ನಮಸ್ಕರಿಸಿದನು ಎಂದು ಹೇಳಲು – ಚರಣದಲಿ ಹೊರಳಿದಡ್ ಎಂಬ ಪದ ಪ್ರಯೋಗ
(೫) ದೇವ, ವೇದ – ಪದ ಪ್ರಯೋಗ

ಪದ್ಯ ೧: ಹಸ್ತಿನಾಪುರದ ಜನರ ಮುಖವೇಕೆ ಕಳಾಹೀನವಾಗಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ವಿಳಯವಾರ್ತಾ
ವ್ಯಾಳವಿಷ ವೇಢೈಸಿದುದು ಗಜಪುರದ ಜನಮನವ
ಹೂಳಿದುಬ್ಬಿನ ಹುದಿದ ಮೋನದ
ಸೂಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ (ಗದಾ ಪರ್ವ, ೧೧ ಸಂಧಿ, ೧ ಪದ್ಯ)

ತಾತ್ಪರ್ಯ:
ದುರ್ಯೋಧನನ ಮರಣ ವಾರ್ತೆಯ ವಿಷವು ಹಸ್ತಿನಾಪುರದ ಜನರ ಮನಸ್ಸುಗಳನ್ನು ಆವರಿಸಿತು. ಜನತೆಯ ಉತ್ಸಾಹ ಹೂಳಿಹೋಯಿತು. ಮೌನವು ಎಲ್ಲೆಡೆ ಆವರಿಸಿತು. ಚಿಂತೆಯು ಮತ್ತೆ ಮತ್ತೆ ಮನಸ್ಸನ್ನು ಮುತ್ತುತ್ತಿತ್ತು. ಭಯ ದುಃಖಗಳು ಎಲ್ಲರ ಮುಖಗಳಲ್ಲೂ ಕಾಣಿಸಿತು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ವಿಳಯ: ಅಳಿವು, ಮರಣ; ವಾರ್ತೆ: ವಿಷಯ, ವಿಚಾರ; ವ್ಯಾಳ: ಸರ್ಪ; ವಿಷ: ಗರಳ; ವೇಡೈಸು: ಸುತ್ತುವರಿ, ಮುತ್ತು; ಗಜಪುರ: ಹಸ್ತಿನಾಪುರ; ಜನ: ಮನುಷ್ಯ; ಮನ: ಮನಸ್ಸು; ಹೂಳು: ಅಡಗು, ಹೂತು ಹಾಕು, ಹುದುಗು; ಹುದಿ: ಒಳಸೇರು, ಒಳಗೊಂಡಿರು; ಉಬ್ಬು: ಹಿಗ್ಗು; ಮೋನ: ಮಾತನಾಡದಿರುವಿಕೆ, ಮೌನ; ಸೂಳು: ಆವೃತ್ತಿ, ಬಾರಿ; ಚಿಂತೆ: ಯೋಚನೆ; ಬಲಿ: ಗಟ್ಟಿಯಾಗು; ಭೀತಿ: ಭಯ; ಮೇಲು: ಹೆಚ್ಚು; ದುಗುಡ: ದುಃಖ; ದಡಿ: ದಂಡೆ, ತೀರ,ಅಂಚು; ವದನ: ಮುಖ; ಅಖಿಳ: ಎಲ್ಲಾ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುರುಪತಿ +ವಿಳಯ+ವಾರ್ತಾ
ವ್ಯಾಳವಿಷ +ವೇಢೈಸಿದುದು +ಗಜಪುರದ +ಜನ+ಮನವ
ಹೂಳಿದ್+ಉಬ್ಬಿನ +ಹುದಿದ +ಮೋನದ
ಸೂಳುಚಿಂತೆಯ+ ಬಲಿದ +ಭೀತಿಯ
ಮೇಲು+ದುಗುಡದ +ದಡಿಯ +ವದನದಲಿದ್ದುದ್+ಅಖಿಳ+ಜನ

ಅಚ್ಚರಿ:
(೧) ರೂಪಕದ ಪ್ರಯೋಗ – ವಿಳಯವಾರ್ತಾ ವ್ಯಾಳವಿಷ
(೨) ವ ಕಾರದ ತ್ರಿವಳಿ ಪದ – ವಿಳಯವಾರ್ತಾ ವ್ಯಾಳವಿಷ ವೇಢೈಸಿದುದು
(೩) ದುಃಖವನ್ನು ವಿವರಿಸುವ ಪರಿ – ಹೂಳಿದುಬ್ಬಿನ ಹುದಿದ ಮೋನದಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ

ನುಡಿಮುತ್ತುಗಳು: ಗದಾ ಪರ್ವ ೧೧ ಸಂಧಿ

  • ಹೂಳಿದುಬ್ಬಿನ ಹುದಿದ ಮೋನದ ಸೂಳುಚಿಂತೆಯ ಬಲಿದ ಭೀತಿಯ ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ – ಪದ್ಯ ೧
  • ಅವರು ಸುಚರಿತರೆಂದಲೇ ಮಾಧವನು ನೆರೆ ಮರುಳಾದನವರಿಗೆ – ಪದ್ಯ ೫
  • ಧರ್ಮವೆಲ್ಲಿಹುದಲ್ಲಿ ಜಯ, ಸತ್ಕರ್ಮವೆಲ್ಲಿಹುದಲ್ಲಿ ಸಿರಿ – ಪದ್ಯ ೭
  • ಮುನಿವಚನಶರ ಮರುಮೊನೆಗೆ ಬಂದುದು ಬಹಳ ಮೂರ್ಛಾಪಾರವಶ್ಯದಲಿ – ಪದ್ಯ ೮
  • ಶೋಕಪನ್ನಗ ಘೋರವಿಷ ಮುನಿವರನ ಹೃದಯವ ಗೋರಿತೇನೆಂಬೆನು ಲತಾಂಗಿಯರಳಲ ಕಳವಳವ – ಪದ್ಯ 
  • ಸಂಸಾರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ – ಪದ್ಯ ೧೧
  • ಅಹಿತರೇ ಜನಿಸಿದಡೆ ಸುತರೆನಬಹುದೆ – ಪದ್ಯ ೧೨
  • ವಿಪತ್ತಿನ ಶರಕೆ ಜೋಡೆಂದಿಹುದಲಾ ಸುವಿವೇಕಗತಿ – ಪದ್ಯ ೧೨
  • ಕುಮಾರರ ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ – ಪದ್ಯ ೧೪
  • ಕರದಬಸುರಿನ ಹೊಯ್ಲ ಕಜ್ಜಳ ಪರಿಲುಳಿತ ನಯನಾಂಬುಗಳ ಕಾತರಿಪ ಕಮಲಾಕ್ಷಿಯರು – ಪದ್ಯ ೧೫
  • ಹಿಣಿಲ ಕಬರಿಯ ಹೊಳೆವ ಮುಂದಲೆ ವಣಿಯ ಮುಕುರ ಮುಖಾಂಬುಜದ ಪದ ಝಣಝಣತ್ಕೃತಿ ಜಡಿಯೆ ನಡೆದುದು ಬೀದಿಬೀದಿಯಲಿ – ಪದ್ಯ ೧೬
  • ಎಸಳುಗಂಗಳ ಬೆಳಗನಶ್ರು ಪ್ರಸರ ತಡೆದುದು, ಶೋಕಮಯಶಿಖಿ ಮುಸುಡ ಕಾಂತಿಯ ಕುಡಿದು – ಪದ್ಯ ೧೭
  • ತಮ್ಮೊಳೇಕತ್ವದ ಸಖಿತ್ವದ ಸೊಮ್ಮಿನಲಿ ಶ್ರುತಿಯಶ್ರುಜಲವನು ನಿರ್ಮಿಸಿದವೆನೆ ಕರ್ಣಪೂರದ ಮುತ್ತು ಸೂಸಿದವು – ಪದ್ಯ ೧೮
  • ಬಿಡುಮುಡಿಯ ಕಡುತಿಮಿರ ಕಾರಿದು ದುಡುಗಣವನೆನೆ ಸೂಸಕದ ಮುತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ – ಪದ್ಯ ೧೯
  • ಗಾಳಿಯರಿಯದು ಮುನ್ನ ರವಿಕಿರಣಾಳಿ ಸೋಂಕದಪೂರ್ವರೂಪಿನ ಮೇಲೆ ಬೀಳುವವೆಂಬವೊಲು – ಪದ್ಯ ೨೦
  • ಉರಿಯ ಜಠರದ ಬಿಸಿಲ ಝಳದಲಿ ಹುರಿದ ಕದಪುಗಳೆರಡು ಕಡೆಯಲಿ ಸುರಿವ ನಯನಾಂಬುಗಳ ರಾಜನಿತಂಬೀನೀನಿಕರ – ಪದ್ಯ ೨೬
  • ನೃಪರರಸಿಯರು ದ್ರೌಪದಿಯ ರೋದನ ಸರದ ಗಾನದ ಜಠರತಾಡನ ತಾಳಮೇಳದಲಿ – ಪದ್ಯ ೨೮
  • ವಿವಿಧವಿಕೃತವಿಳಾಸನಯನೋದ್ಭವಪಯಸ್ತಿ – ಪದ್ಯ ೨೯
  • ಒದೆದು ನೂಕಿದ ಹದನ ಮಕುಟಾಗ್ರದಲಿ ಧರಿಸುವೆ – ಪದ್ಯ ೩೨
  • ಲೇಸನಾಡಿದೆ ಮಗನೆ ಧರ್ಮದ ಮೀಸಲಲ್ಲಾ ಮತಿ – ಪದ್ಯ ೩೩
  • ಧರ್ಮವೆ ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳೆಂದ – ಪದ್ಯ ೩೪
  • ಕಾಹುರರು ಕಲ್ಮಷರು ಬಂಧು ದ್ರೋಹಿಗಳು ಗತವಾಯ್ತು – ಪದ್ಯ ೩೫
  • ಖಳನ ಹೃದಯದ ಕಾಳಕೂಟದಗುಳಿಗೆಗಳನಿವರೆತ್ತ ಬಲ್ಲರು – ಪದ್ಯ ೩೬
  • ನೃಪತಿಗೆ ವಿನಯದಲಿ ಮೆಯ್ಯಿಕ್ಕಿದನು ಭಕ್ತಿಯಲಿ – ಪದ್ಯ ೩೭
  • ನಿಮ್ಮಧಿಕರೋಷದ ಹಗರಣದ ಹಗೆ ಹೋಯಿತೆಂದನು ನಗುತ ಮುರವೈರಿ – ಪದ್ಯ ೪೦
  • ಚಿರಂತನ ಭವದ ಕಿಲ್ಬಿಷ ಕರ್ಮಪಾಕ ಪ್ರವರ ದುರಿಯೋಧನನ ಸವ್ಯಪದೇಶ – ಪದ್ಯ ೪೪
  • ನಯನೋದಕದ ಪರಿವಾಹದಲಿ ನನೆದಳು – ಪದ್ಯ ೪೬
  • ಅಗಡುಮಕ್ಕಳ ತಾಯ್ಗೆ ತಪ್ಪದು ಬೆಗಡುಬೇಗೆ – ಪದ್ಯ ೪೭
  • ಅಳಿದವರಿಗಳಲುವುದು ಸಲ್ಲದು – ಪದ್ಯ ೪೯
  • ಕರಣವೃತ್ತಿಗೆ ತುಂಬುವುದು ತನಿಹರುಷವನು ಸೌಹಾರ್ದಶೋಭೆಯಲಿ – ಪದ್ಯ ೫೦
  • ಪ್ರಜ್ಞಾಯತಾಕ್ಷನ ತಿಳಿಹಿ ಬಂದಿರೆ – ಪದ್ಯ ೫೧
  • ನಿಮ್ಮಾಳಿಕೆಯೊಳೇ ನಿಮ್ಮ ಹಂತಿಯ ಕೂಳಿನಲಿ ಬೆಂದೊಡಲ ಹೊರೆವವರೆಂದಳಿಂದುಮುಖಿ – ಪದ್ಯ ೫೪
  • ತಾಯೆ ನೀವಿನ್ನೆಮಗೆ ಕುಂತಿಯ ತಾಯಿತನವಂತಿರಲಿ ಕರುಣಿಸಿ ಕಾಯಬೇಕೆಂದರಸ – ಪದ್ಯ ೫೫
  • ನಿರ್ಮಳರು ನೀವೈವರಾಹವ ಧರ್ಮಕುಶಲರು – ಪದ್ಯ ೫೬
  • ತನ್ನ ಮಕ್ಕಳು ದುರ್ಮತಿಗಳನ್ಯಾಯಶೀಲರಸಾಧುಸಂಗತರು – ಪದ್ಯ ೫೬
  • ನಿರ್ಮಳಾಂತಃಕರಣಕೃತಪರಿಕರ್ಮವಿಳಸಿತೆ – ಪದ್ಯ ೫೭
  • ಏಳು ತಮ್ಮ ವೃಥಾ ವಿಡಂಬನದಾಳಿಯಾಟವಿದೇಕೆ – ಪದ್ಯ ೫೮
  • ಅಳಿಕುಳಾಳಿಕೆಯುಟ್ಟ ಸೀರೆಯನೂರುಮಧ್ಯದಲಿ ಸುಲಿಸಿದರು – ಪದ್ಯ ೬೨
  • ಧರ್ಮದ ವಿಡಂಬದ ಧರ್ಮಪುತ್ರನ ಹದನ ಕೇಳುವೆ – ಪದ್ಯ ೬೩
  • ರಾಜಸದ ಸಂಜನಿತ ತಾಮಸಬೀಜಶೇಷದ ವನಜಮುಖಿ – ಪದ್ಯ ೬೬
  • ಮೆಯ್ಯಿಕ್ಕಿದರು ನಿಜ ಮಾತೆಯಂಘ್ರಿಯಲಿ- ಪದ್ಯ ೭೦
  • ಪುತ್ರಶೋಕವ್ಯಾಳವಿಷಮೂರ್ಛಿತೆಯಲಾ ಪಾಂಚಾಲಸುತೆ – ಪದ್ಯ ೭೧
  • ಕುಮಾರ ವರ್ಗದ ಮರಣ ಸೊಸೆಯತ್ತೆಯರಿಗೊಂದೇ ಪರಿ – ಪದ್ಯ ೭೨

ಪದ್ಯ ೨೭: ಭೀಮಾರ್ಜುನರು ಭಾಷೆಯನ್ನು ಹೇಗೆ ನೆರವೇರಿಸಿದರು?

ತಲೆಯ ಕೊಂಬವಗಡದ ಭಾಷೆಯ
ಸಲಿಸಲೆಂದಾ ದ್ರೋಣತನುಜನ
ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ
ಗೆಲಿದು ತಿರುಗಿದರಿದರು ಸಾಹಸ
ವಳುಕಿಸದೆ ಮೂಜಗದ ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ತಲೆಯನ್ನುರುಳಿಸುವೆವೆಂದು ಮಾಡಿದ ಭಾಷೆಯನ್ನುಳಿಸಿಕೊಳ್ಳಲು ಭೀಮಾರ್ಜುನರು ಅಶ್ವತ್ಥಾಮನ ಕಿರೀಟದ ಮಾಣಿಕ್ಯವನ್ನು ತೆಗೆದುಕೊಂಡು ಹೋದರು. ಪಾಂಡವರು ವಿಜಯಶಾಲಿಗಳಾದರು. ಯದುಕುಲ ತಿಲಕನಾದ ವೀರನಾರಾಯಣನ ಕರುಣೆಯಿರಲು ಅವರ ಪರಾಕ್ರಮಕ್ಕೆ ಮೂರು ಲೋಕಗಳೂ ಅಳುಕದಿರುವುದೇ?

ಅರ್ಥ:
ತಲೆ: ಶಿರ; ಕೊಂಬು: ತೆಗೆದುಕೋ; ಅವಗಡ: ಅಸಡ್ಡೆ; ಭಾಷೆ: ನುಡಿ; ಸಲಿಸು: ದೊರಕಿಸಿ ಕೊಡು, ಪೂರೈಸು; ತನುಜ: ಮಗ; ಹೊಳೆ: ಪ್ರಕಾಶಿಸು; ಮಕುಟ: ಕಿರೀಟ; ಮಾಣಿಕ: ಮಾಣಿಕ್ಯ; ಕೊಂಡು: ಪಡೆದು; ಗೆಲಿದು: ಜಯಶಾಲಿ; ತಿರುಗು: ಸುತ್ತು, ಸಂಚರಿಸು; ಸಾಹಸ: ಪರಾಕ್ರಮ, ಶೌರ್ಯ; ಅಳುಕು: ಹೆದರು; ಮೂಜಗ: ತ್ರಿಜಗತ್ತು; ತಿಲಕ: ಶ್ರೇಷ್ಥ; ಕರುಣ: ದಯೆ; ಉತ್ತರಾಯ: ಜವಾಬುದಾರಿ;

ಪದವಿಂಗಡಣೆ:
ತಲೆಯ +ಕೊಂಬ್+ಅವಗಡದ +ಭಾಷೆಯ
ಸಲಿಸಲೆಂದ್+ಆ+ ದ್ರೋಣ+ತನುಜನ
ಹೊಳೆವ +ಮಕುಟದ +ಮಾಣಿಕವ +ಕೊಂಡ್+ಉತ್ತರಾಯದಲಿ
ಗೆಲಿದು +ತಿರುಗಿದ್+ಅರಿದರು+ ಸಾಹಸವ್
ಅಳುಕಿಸದೆ +ಮೂಜಗದ +ಯದುಕುಲ
ತಿಲಕ +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಭಾಷೆಯನ್ನು ತೀರಿಸಿದ ಪರಿ – ದ್ರೋಣತನುಜನ ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ

ಪದ್ಯ ೨೬: ದ್ರೌಪದಿಯು ಭೀಮಾರ್ಜುನರನ್ನು ಏಕೆ ತಡೆದಳು?

ಬಂದಳಾ ದ್ರೌಪದಿಯಹಹ ಗುರು
ನಂದನ ಕೊಲಬಾರದಕಟೀ
ನಂದನರ ಮರಣದ ಮಹಾ ವ್ಯಥೆಯೀತನಳಿವಿನಲಿ
ಕೊಂದು ಕೂಗದೆ ಕೃಪೆಯಸಬಲಾ
ವೃಂದ ಸಮಸುಖದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ (ಗದಾ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನನ್ನು ಕೊಲ್ಲಲು ಸಜ್ಜಾಗಿದ್ದ ಭೀಮಾರ್ಜುನರನ್ನು ದ್ರೌಪದಿಯು ಮುಂದೆ ಬಂದು ತಡೆದಳು. ಅಹಹಾ ಗುರುಪುತ್ರನನ್ನು ಕೊಲ್ಲಬಾರದು. ಹಾಗೆ ಮಾಡಿದರೆ ಪುತ್ರಶೋಕವು ಕೃಪೆಯನ್ನು ಘಾತಿಸುವುದಿಲ್ಲವೇ? ಹೆಣ್ಣು ಮಕ್ಕಳು ಸುಖ ದುಃಖದಲ್ಲಿ ಸಮಾನರು. ಬೇಡ, ಗುರುಪುತ್ರನನ್ನು ಬಿಡಿ ಎಂದು ಭೀಮಾರ್ಜುನರನ್ನು ನಿಲ್ಲಿಸಿದಳು.

ಅರ್ಥ:
ಬಂದಳು: ಆಗಮಿಸು; ಗುರು: ಆಚಾರ್ಯ; ನಂದನ: ಮಗ; ಕೊಲು: ಸಾಯಿಸು; ಅಕಟ: ಅಯ್ಯೋ; ಮರಣ: ಸವು; ವ್ಯಥೆ: ದುಃಖ; ಅಳಿವು: ನಾಶ; ಕೂಗು: ಕಿರುಚು, ಆರ್ಭಟಿಸು; ವೃಂದ: ಗುಮ್ಫು; ಅಬಲ: ಹೆಣ್ಣು; ಸಮ: ಸರಿಸಾಟಿ; ಸುಖ: ಸಂತಸ; ದುಃಖ: ನೋವು; ಸಾರು: ತಳ್ಳು; ತೆಗೆ: ಈಚೆಗೆ ತರು, ಹೊರತರು; ಬಳಿಕ: ನಂತರ;

ಪದವಿಂಗಡಣೆ:
ಬಂದಳಾ +ದ್ರೌಪದಿ+ಅಹಹ +ಗುರು
ನಂದನ +ಕೊಲಬಾರದ್+ಅಕಟೀ
ನಂದನರ +ಮರಣದ +ಮಹಾ +ವ್ಯಥೆ+ಈತನ್+ಅಳಿವಿನಲಿ
ಕೊಂದು +ಕೂಗದೆ +ಕೃಪೆಯಸ್+ಅಬಲಾ
ವೃಂದ +ಸಮಸುಖದುಃಖಿಗಳು +ಸಾ
ರೆಂದು +ಭೀಮಾರ್ಜುನರ+ ತೆಗೆದಳು +ಬಳಿಕ +ಪಾಂಚಾಲಿ

ಅಚ್ಚರಿ:
(೧) ದ್ರೌಪದಿಯ ಮೇರು ಚಿಂತನೆ – ಕೊಂದು ಕೂಗದೆ ಕೃಪೆಯಸಬಲಾವೃಂದ ಸಮಸುಖದುಃಖಿಗಳು
(೨) ಕೊಂದು, ಕೊಲು, ಮರನ, ಅಳಿವು – ಸಾಮ್ಯಾರ್ಥ ಪದಗಳು

ಪದ್ಯ ೨೫: ಅಶ್ವತ್ಥಾಮನನ್ನು ಯಾರು ಹಿಡಿದರು?

ತೀರಿತೈ ಕುಶಿಕಾಸ್ತ್ರಘಾತಿ ಮು
ರಾರಿ ಗುರುಸುತರೊಬ್ಬರೊಬ್ಬರ
ವೀರಪಣವಾಸಿಯಲಿ ಶಪಿಸಿದರಧಿಕರೋಷದಲಿ
ನಾರಿಯಂತಸ್ತಾಪವಹ್ನಿ ನಿ
ವಾರಣಕೆ ಜಲವೀತನೆಂದಾ
ಚಾರಿಯನ ನಂದನನ ಹಿಡಿದರು ಭೀಮಫಲುಗುಣರು (ಗದಾ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅಶ್ವತ್ಥಾನ ಕುಶಿಕಾಸ್ತ್ರವು ವಿಫಲವಾಯಿತು. ಶ್ರೀಕೃಷ್ಣನೂ ಮತ್ತು ಅಶ್ವತ್ಥಾಮ ಇಬ್ಬರೂ ಒಬ್ಬೊರನ್ನೊಬ್ಬರು ರೋಷಾತಿರೇಕದಿಂದ ಶಪಿಸಿದರು. ದ್ರೌಪದಿಯ ಅಂತರಂಗವನ್ನು ಸುಡುವ ಬೆಂಕಿಯನ್ನು ಇವನ ತಲೆಯೆಮ್ಬ ನೀರಿನಿಂದ ಆರಿಸಬೇಕೆಂದು ಭೀಮಾರ್ಜುನರು ಅಶ್ವತ್ಥಾಮನನ್ನು ಹಿಡಿದರು.

ಅರ್ಥ:
ತೀರು: ಅಂತ್ಯ, ಮುಕ್ತಾಯ; ಕುಶಿಕ: ಕುಡ, ಗುಳ, ವಿಶ್ವಾಮಿತ್ರನ ತಂದೆ; ಘಾತಿ: ಪೆಟ್ಟ; ಮುರಾರಿ: ಕೃಷ್ಣ; ಸುತ: ಪುತ್ರ; ವೀರ: ಶೂರ; ಪಣ: ಪ್ರತಿಜ್ಞೆ, ಶಪಥ, ಪಂದ್ಯ; ಶಪಿಸು: ನಿಂದಿಸು; ನಾರಿ: ಹೆಣ್ಣು; ಅಂತಸ್ತಾಪ: ಒಳಮನಸ್ಸಿನ ನೋವು; ವಹ್ನಿ: ಬೆಂಕಿ; ನಿವಾರಣ: ಹೋಗಲಾಡಿಸು; ಜಲ: ನಿರು; ಆಚಾರಿ: ಗುರು; ನಂದನ: ಮಗ; ಹಿಡಿ: ಬಂಧಿಸು;

ಪದವಿಂಗಡಣೆ:
ತೀರಿತೈ +ಕುಶಿಕಾಸ್ತ್ರ+ಘಾತಿ +ಮು
ರಾರಿ +ಗುರುಸುತರ್+ಒಬ್ಬರೊಬ್ಬರ
ವೀರಪಣವಾಸಿಯಲಿ +ಶಪಿಸಿದರ್+ಅಧಿಕ+ರೋಷದಲಿ
ನಾರಿ+ಅಂತಸ್ತಾಪ+ವಹ್ನಿ+ ನಿ
ವಾರಣಕೆ +ಜಲವ್+ಈತನೆಂದ್+
ಆಚಾರಿಯನ +ನಂದನನ +ಹಿಡಿದರು +ಭೀಮ+ಫಲುಗುಣರು

ಅಚ್ಚರಿ:
(೧) ದ್ರೌಪದಿಯ ನೋವನ್ನು ಹೋಗಲಾಡಿಸುವ ಪರಿ – ನಾರಿಯಂತಸ್ತಾಪವಹ್ನಿ ನಿವಾರಣಕೆ ಜಲವೀತನೆಂದಾಚಾರಿಯನ ನಂದನನ ಹಿಡಿದರು
(೨) ಅಶ್ವತ್ಥಾಮನನ್ನು ಕರೆದ ಪರಿ – ಗುರುಸುತ, ಆಚಾರಿಯನ ನಂದನ