ಪದ್ಯ ೩೫: ಧರ್ಮಜನ ರಕ್ಷಣೆಗೆ ಯಾವ ಸೈನ್ಯವು ಬಂದಿತು?

ಪೂತುರೇ ಪಾಂಚಾಲ ಬಲ ಬಂ
ದತುಕೊಂಡುದೆ ಧರ್ಮಪುತ್ರನ
ಘಾತಿಯನು ಘಟ್ಟಿಸಿದರೇ ತುಷ್ಟಿಸಿದನೇ ನೃಪತಿ
ಈತಗಳ ಕೊಳ್ಳೆನುತ ಶರಸಂ
ಘಾತವನು ಕವಿಸಿದನು ಮಾದ್ರೀ
ಜಾತರಡಹಾಯಿದರು ಶಲ್ಯನ ರಥದ ಸಮ್ಮುಖಕೆ (ಶಲ್ಯ ಪರ್ವ, ೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭಲೇ! ಪಾಂಚಾಲ ಸೈನ್ಯವು ಸಹಾಯಕ್ಕೆ ಬಂದೀತೇ? ಧರ್ಮಜನಿಗೆ ಆಗುವ ಅಪಾಯವನ್ನು ತಪ್ಪಿಸಿದಿರೇ? ಅರಸನಿಗೆ ವಿಶ್ರಾಮ್ತಿ ಸಿಕ್ಕೀತೇ? ಇವರನ್ನು ಬಿಡಬಾರದು ಎನ್ನುತ್ತಾ ಶಲ್ಯನು ಪಾಂಚಾಲ ಬಲವನ್ನು ಬಾಣಗಳಿಂದ ಘಾತಿಸಿದನು. ಆಗ ನಕುಲ ಸಹದೇವರು ಶಲ್ಯನ ಮುಂದೆ ರಥಗಳಲ್ಲಿ ಬಂದರು.

ಅರ್ಥ:
ಪೂತು: ಭಲೇ; ಬಲ: ಸೈನ್ಯ; ಬಂದು: ಆಗಮಿಸು; ಆತು: ಸರಿಯಾಗಿ ಹಿಡಿದು; ಪುತ್ರ: ಸುತ; ಘಾತ: ಹೊಡೆತ, ಪೆಟ್ಟು; ಘಟ್ಟಿಸು: ಹೊಡೆ, ಅಪ್ಪಳಿಸು; ತುಷ್ಟಿ: ತೃಪ್ತಿ, ಆನಂದ; ನೃಪ: ರಾಜ; ಶರ: ಬಾಣ; ಸಂಘಾತ: ಗುಂಪು, ಸಮೂಹ; ಕವಿ: ಆವರಿಸು; ಮಾದ್ರೀಜಾತ: ಮಾದ್ರಿಯಲ್ಲಿ ಜನಿಸಿದ (ನಕುಲ, ಸಹದೇವ); ಅಡಹಾಯಿ: ಅಡ್ಡ ಬಂದು; ರಥ: ಬಂಡಿ; ಸಮ್ಮುಖ: ಎದುರು;

ಪದವಿಂಗಡಣೆ:
ಪೂತುರೇ +ಪಾಂಚಾಲ +ಬಲ +ಬಂದ್
ಆತುಕೊಂಡುದೆ +ಧರ್ಮ+ಪುತ್ರನ
ಘಾತಿಯನು +ಘಟ್ಟಿಸಿದರೇ +ತುಷ್ಟಿಸಿದನೇ +ನೃಪತಿ
ಈತಗಳ+ ಕೊಳ್ಳೆನುತ +ಶರ+ಸಂ
ಘಾತವನು +ಕವಿಸಿದನು +ಮಾದ್ರೀ
ಜಾತರ್+ಅಡಹಾಯಿದರು +ಶಲ್ಯನ +ರಥದ +ಸಮ್ಮುಖಕೆ

ಅಚ್ಚರಿ:
(೧) ಘಾತಿಯನು ಘಟ್ಟಿಸಿದರೇ – ಘ ಕಾರದ ಜೋಡಿ ಪದ

ಪದ್ಯ ೩೪: ಶಲ್ಯನನ್ನು ಯಾರು ಆವರಿಸಿದರು?

ದೊರೆಗೆ ಬಲುಹೋ ಸಮರ ಶಲ್ಯನ
ಶರವಳೆಗೆ ಹಿಡಿ ಕೊಡೆಯನೆನಲ
ಬ್ಬರದೊಳಗೆ ಗಬ್ಬರಿಸೆ ನೆಲ ಗಾಲಿಗಳ ಘಲ್ಲಣೆಗೆ
ಸರಳ ಹೊದೆಗಳ ತುಂಬಿ ರಥ ಸಾ
ವಿರದಲಾ ಪಾಂಚಾಲಬಲವು
ಪ್ಪರಗುಡಿಯ ಸಿಂಧದ ಸಘಾಡದಲೈದಿತರಿಭಟನ (ಶಲ್ಯ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರಸನಿಗೆ ಯುದ್ಧವು ಅಸಾಧ್ಯವಾಗುತ್ತಿದೆ, ಶಲ್ಯನ ಬಾಣಗಳ ಮಳೆಗೆ ಕೊಡೆಯನ್ನು ಹಿಡಿಯಿರಿ ಎಂದು ಕೂಗುತ್ತಾ ಪಾಂಚಾಲ ಸೇನೆಯು ಬಾಣಗಳನ್ನು ಸಾವಿರ ರಥಗಳಲ್ಲಿ ತುಂಬಿ, ಗಾಲಿಗಳು ಚೀತ್ಕರಿಸುತ್ತಿರಲು ಶಲ್ಯನನ್ನು ಮುತ್ತಿತು.

ಅರ್ಥ:
ದೊರೆ: ರಾಜ; ಬಲುಹು: ಪರಾಕ್ರಮ; ಸಮರ: ಯುದ್ಧ; ಶರವಳೆ: ಬಾಣಗಳ ಮಳೆ; ಹಿಡಿ: ಗ್ರಹಿಸು; ಕೊಡೆ: ಛತ್ರಿ; ಅಬ್ಬರ: ಗರ್ಜಿಸು; ಗಬ್ಬರಿಸು: ತೋಡು, ಬಿಗಿ; ನೆಲ: ಭೂಮಿ; ಗಾಲಿ: ಚಕ್ರ; ಘಲ್ಲಣೆ: ಘಲ್ ಘಲ್ ಎಂಬ ಶಬ್ದ; ಸರಳ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ತುಂಬ: ಭರ್ತಿ; ರಥ: ಬಂಡಿ; ಸಾವಿರ: ಸಹಸ್ರ; ಬಲ: ಸೈನ್ಯ; ಉಪ್ಪರ: ಅತಿಶಯ; ಸಿಂಧ: ಬಾವುಟ; ಸಘಾಡ:ರಭಸ, ವೇಗ; ಐದು: ಬಂದು ಸೇರು; ಅರಿ: ವೈರಿ; ಭಟ: ಸೈನಿಕ;

ಪದವಿಂಗಡಣೆ:
ದೊರೆಗೆ +ಬಲುಹೋ +ಸಮರ +ಶಲ್ಯನ
ಶರವಳೆಗೆ +ಹಿಡಿ+ ಕೊಡೆಯನ್+ಎನಲ್
ಅಬ್ಬರದೊಳಗೆ +ಗಬ್ಬರಿಸೆ +ನೆಲ +ಗಾಲಿಗಳ +ಘಲ್ಲಣೆಗೆ
ಸರಳ+ ಹೊದೆಗಳ +ತುಂಬಿ +ರಥ +ಸಾ
ವಿರದಲ್+ಆ+ ಪಾಂಚಾಲ+ಬಲವ್
ಉಪ್ಪರಗುಡಿಯ+ ಸಿಂಧದ +ಸಘಾಡದಲ್+ಐದಿತ್+ಅರಿ+ಭಟನ

ಅಚ್ಚರಿ:
(೧) ರಕ್ಷಿಸು ಎಂದು ಹೇಳಲು – ಶರವಳೆಗೆ ಹಿಡಿ ಕೊಡೆಯ
(೨) ಅಬ್ಬರ, ಗಬ್ಬರ – ಪ್ರಾಸ ಪದಗಳು

ಪದ್ಯ ೩೩: ಬಾಣಗಳು ಎಲ್ಲಿ ನಟ್ಟವು?

ತೋಡಿ ನೆಟ್ಟವು ಸೀಸಕವನೊಡೆ
ದೋಡಿದವು ಕವಚದಲಿ ಕುದುರೆಯ
ಜೋಡು ಹಕ್ಕರಿಕೆಯಲಿ ತಳಿತವು ಹಿಳುಕು ಹರಹಿನಲಿ
ಕೂಡೆ ರಥದಲಿ ಸಿಂಧದಲಿ ಮೈ
ಗೂಡಿ ಗಾಲಿಗಳಲಿ ವರೂಥದ
ಲೀಡಿರಿದವಂಬುಗಳು ಕಲಿಮಾದ್ರೇಶನೆಸುಗೆಯಲಿ (ಶಲ್ಯ ಪರ್ವ, ೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಧರ್ಮಜನ ಶಿರಸ್ತ್ರಾನದಲ್ಲಿ ಶಲ್ಯನ ಬಾಣಗಳು ನಟ್ಟವು. ಕವಚವನ್ನು ಛಿದ್ರಮಾಡಿದವು. ರಥದ ಕುದುರೆಗಳ ರಕ್ಷಾಕವಚದಲ್ಲಿ ಹೇರಳವಾಗಿ ನಟ್ಟವು. ರಥದಲ್ಲಿ ಧ್ವಜದಲ್ಲಿ ರಥದ ಗಾಲಿಗಳಲ್ಲಿ ಹೇರಳವಾಗಿ ನಟ್ಟವು.

ಅರ್ಥ:
ತೋಡು: ಅಗೆ, ಹಳ್ಳ ಮಾಡು; ನೆಟ್ಟು: ನೆಡು, ಕೂಡಿಸು; ಸೀಸಕ: ಶಿರಸ್ತ್ರಾಣ; ಒಡೆ: ಸೀಳು; ಓಡು: ಧಾವಿಸು; ಕವಚ: ಹೊದಿಕೆ; ಕುದುರೆ: ಅಶ್ವ; ಜೋಡು: ಜೊತೆ; ಹಕ್ಕರಿ: ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ತಳಿತ: ಚಿಗುರಿದ; ಹಿಳುಕು: ಬಾಣದ ಗರಿ; ಹರಹು: ವಿಸ್ತಾರ, ವೈಶಾಲ್ಯ; ಕೂಡೆ: ಜೊತೆ; ರಥ: ಬಂಡಿ; ಸಿಂಧ: ಬಾವುಟ; ಮೈಗೂಡು: ದೃಢವಾಗು, ದೇಹವನ್ನು ಅರ್ಪಿಸು; ಗಾಲಿ: ಚಕ್ರ; ವರೂಥ: ತೇರು, ರಥ; ಅಂಬು: ಬಾಣ; ಕಲಿ: ಶೂರ; ಎಸು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ತೋಡಿ +ನೆಟ್ಟವು +ಸೀಸಕವನ್+ಒಡೆದ್
ಓಡಿದವು +ಕವಚದಲಿ +ಕುದುರೆಯ
ಜೋಡು +ಹಕ್ಕರಿಕೆಯಲಿ +ತಳಿತವು +ಹಿಳುಕು +ಹರಹಿನಲಿ
ಕೂಡೆ+ ರಥದಲಿ+ ಸಿಂಧದಲಿ +ಮೈ
ಗೂಡಿ +ಗಾಲಿಗಳಲಿ +ವರೂಥದಲ್
ಈಡಿರಿದವ್+ಅಂಬುಗಳು +ಕಲಿ+ಮಾದ್ರೇಶನ್+ಎಸುಗೆಯಲಿ

ಅಚ್ಚರಿ:
(೧) ಬಾಣಗಳು ನೆಟ್ಟ ಸ್ಥಳ – ಸೀಸಕ, ಕವಚ, ಹಕ್ಕರಿಕೆ; ರಥ, ಸಿಂಧ, ಗಾಲಿ;

ಪದ್ಯ ೩೨: ಶಲ್ಯನ ಬಾಣಗಳು ಧರ್ಮಜನನ್ನು ಹೇಗೆ ತಾಕಿದವು?

ಮುಂದಣಂಬಿನ ಮೊನೆಯನೊದೆದವು
ಹಿಂದಣಂಬುಗಳವರ ಮೊನೆಗಳ
ಹಿಂದಣಂಬಿನ ಹಿಳುಕು ಹೊಕ್ಕವು ಮುಂಚಿದಂಬುಗಳ
ಹಿಂದಣವು ಹಿಂದಿಕ್ಕಿದವು ಮಿಗೆ
ಹಿಂದಣಂಬುಗಳೆಂಜಲಿಸಿ ಬಳಿ
ಸಂದವುಳಿದಂಬುಗಳೆನಲು ಕವಿದೆಚ್ಚನವನಿಪನ (ಶಲ್ಯ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಲ್ಯನು ಮೊದಲು ಬಿಟ್ಟಬಾಣದ ತುದಿಯನ್ನು ಹಿಂದಿನ ಬಾಣಗಳು ಒದೆದು ಮುಂದಾದವು. ಮುಂದಾದ ಬಾಣಗಳನ್ನು ಹಿಂದಿನ ಬಾಣಗಳು ಚುಚ್ಚಿದವು. ಹಿಂದೆ ಬಿಟ್ಟ ಬಾಣಗಳನ್ನು ಅದರ ಹಿಂದಿನ ಬಾಣಗಳು ಮುಂಚಿದವು. ಹೀಗೆ ಶಲ್ಯನ ಬಾಣಗಳು ಧರ್ಮಜನನ್ನು ತಾಕಿದವು.

ಅರ್ಥ:
ಮುಂದಣ: ಮುಂಚೆ; ಮೊನೆ: ತುದಿ, ಕೊನೆ, ಹರಿತವಾದ; ಒದೆ: ನೂಕು; ಹಿಂದಣ: ಹಿಂದೆ; ಅಂಬು: ಬಾಣ; ಹಿಳುಕು: ಬಾಣದ ಗರಿ; ಹೊಕ್ಕು: ಸೇರು; ಮುಂಚೆ: ಮುಂದೆ; ಹಿಂದಣ: ಹಿಂಭಾಗ; ಮಿಗೆ: ಮತ್ತು, ಅಧಿಕವಾಗಿ; ಎಂಜಲಿಸು: ಮುಟ್ಟು; ಬಳಿ: ಹತ್ತಿಅ; ಸಂದು: ಸಹವಾಸ; ಉಳಿದ: ಮಿಕ್ಕ; ಕವಿ: ಆವರಿಸು; ಎಚ್ಚು: ಬಾಣ ಪ್ರಯೋಗ ಮಾಡು; ಅವನಿಪ: ರಾಜ;

ಪದವಿಂಗಡಣೆ:
ಮುಂದಣ್+ಅಂಬಿನ +ಮೊನೆಯನ್+ಒದೆದವು
ಹಿಂದಣ್+ಅಂಬುಗಳ್+ಅವರ+ ಮೊನೆಗಳ
ಹಿಂದಣ್+ಅಂಬಿನ +ಹಿಳುಕು +ಹೊಕ್ಕವು +ಮುಂಚಿದ್+ಅಂಬುಗಳ
ಹಿಂದಣವು +ಹಿಂದಿಕ್ಕಿದವು +ಮಿಗೆ
ಹಿಂದಣ್+ಅಂಬುಗಳ್+ಎಂಜಲಿಸಿ +ಬಳಿ
ಸಂದ+ಉಳಿದ+ಅಂಬುಗಳ್+ಎನಲು +ಕವಿದೆಚ್ಚನ್+ಅವನಿಪನ

ಅಚ್ಚರಿ:
(೧) ಮುಂದಣ, ಹಿಂದಣ – ವಿರುದ್ಧ ಪದಗಳ ಬಳಕೆ
(೨) ಹಿಂದಣ – ೨-೫ ಸಾಲಿನ ಮೊದಲ ಪದ

ಪದ್ಯ ೩೧: ಶಲ್ಯನ ಕೋಪದ ತೀವ್ರತೆ ಹೇಗಿತ್ತು?

ಅರಸ ಕೇಳೈ ಮುಳಿದ ಮಾದ್ರೇ
ಶ್ವರನ ಖತಿಯೋ ಕುಪಿತ ಯಮನು
ಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ
ಉರಿದನಗ್ಗದ ರೋಷದಲಿ ಹೊಗೆ
ಹೊರಳಿಗಟ್ಟಿತು ಸುಯ್ಲಿನಲಿ ಸಂ
ವರಿಸಿಕೊಳು ಕೌಂತೇಯ ಎನುತೆಚ್ಚನು ಮಹೀಪತಿಯ (ಶಲ್ಯ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು, ಕಾಲಯಮನ ಕೋಪವೋ, ಕಾಲರುದ್ರನ ಹಣೆಗಣ್ಣಿನ ದೊಡ್ಡ ಕಿಡಿಯೋ ಎಂಬಂತೆ ರೋಷವುಕ್ಕಲು ಶಲ್ಯನ ಉಸಿರಿನಲ್ಲಿ ಹೊಗೆ ಮಸಗಿತು. ಕೌಂತೇಯ ಸುಧಾರಿಸಿಕೋ ಎಂದು ಬಾಣವನ್ನು ಬಿಟ್ಟನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮುಳಿ: ಕೋಪ; ಮಾದ್ರೇಶ್ವರ: ಶಲ್ಯ; ಖತಿ: ರೇಗು, ಕೋಪ; ಕುಪಿತ: ಕೋಪಗೊಳ್ಳು; ಯಮ: ಜವ; ಉಬ್ಬರ: ಅತಿಶಯ; ಕೋಪ: ಖತಿ; ಕಾಲರುದ್ರ: ಪ್ರಳಯಕಾಲದ ಶಿವನ ರೂಪ; ಹಣೆ: ಲಲಾಟ; ಹೆಗ್ಗಿಡಿ: ದೊಡ್ಡ ಕಿಡಿ; ಉರಿ: ಬೆಂಕಿ; ಅಗ್ಗ: ಶ್ರೇಷ್ಠ; ರೋಷ: ಕೋಪ; ಹೊಗೆ: ಧೂಮ; ಹೊರಳು: ತಿರುವು; ಸುಯ್ಲು: ನಿಟ್ಟುಸಿರು; ಸಂವರಿಸು: ಸಮಾಧಾನಗೊಳಿಸು, ಸರಿಪಡಿಸು; ಕೌಂತೇಯ: ಕುಂತಿಯ ಮಗ; ಎಚ್ಚು: ಬಾಣ ಪ್ರಯೋಗ ಮಾಡು; ಮಹೀಪತಿ: ರಾಜ;

ಪದವಿಂಗಡಣೆ:
ಅರಸ +ಕೇಳೈ +ಮುಳಿದ +ಮಾದ್ರೇ
ಶ್ವರನ +ಖತಿಯೋ +ಕುಪಿತ +ಯಮನ್
ಉಬ್ಬರದ +ಕೋಪವೊ +ಕಾಲರುದ್ರನ +ಹಣೆಯ +ಹೆಗ್ಗಿಡಿಯೊ
ಉರಿದನ್+ಅಗ್ಗದ +ರೋಷದಲಿ+ ಹೊಗೆ
ಹೊರಳಿ+ಕಟ್ಟಿತು +ಸುಯ್ಲಿನಲಿ +ಸಂ
ವರಿಸಿಕೊಳು+ ಕೌಂತೇಯ +ಎನುತ್+ಎಚ್ಚನು +ಮಹೀಪತಿಯ

ಅಚ್ಚರಿ:
(೧) ಮುಳಿ, ಖತಿ, ಕೋಪ, ರೋಷ – ಸಾಮ್ಯಾರ್ಥ ಪದಗಳು
(೨) ಉಪಮಾನದ ಪ್ರಯೋಗ – ಕುಪಿತ ಯಮನುಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ

ಪದ್ಯ ೩೦: ಶಲ್ಯನು ಧರ್ಮಜನ ಮೇಲೆ ಬಿಟ್ಟ ಬಾಣಗಳು ಏನಾದವು?

ಹಳಚಿದನು ದಳಪತಿಯನವನಿಪ
ತಿಲಕನೆಚ್ಚನು ನೂರು ಶರದಲಿ
ಕಳಚಿ ಕಯ್ಯೊಡನೆಚ್ಚು ಬೇಗಡೆಗಳೆದನವನಿಪನ
ಅಳುಕಲರಿವುದೆ ಸಿಡಿಲ ಹೊಯ್ಲಲಿ
ಕುಲಕುಧರವೀ ಧರ್ಮಸುತನ
ಗ್ಗಳಿಕೆಗುಪ್ಪಾರತಿಗಳಾದುವು ಶಲ್ಯನಂಬುಗಳು (ಶಲ್ಯ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನು ಶಲ್ಯನ ಮೇಲೆ ನೂರು ಬಾಣಗಳನನ್ನು ಬಿಡಲು, ಶಲ್ಯನು ಅವನ್ನು ಕತ್ತರಿಸಿ ಅರಸನ ಮೇಲೆ ಬಾಣಗಳನ್ನು ಬಿಟ್ಟನು. ಸಿಡಿಲಿಗೆ ಕುಲಪರ್ವತವು ಅಳುಕುವುದೇ ಧರ್ಮಜನ ಪರಾಕ್ರಮಕ್ಕೆ ಎತ್ತಿದ ಉಪ್ಪಾರತಿಗಳಂತೆ ಶಲ್ಯನ ಬಾಣಗಳು ನಿಷ್ಫಲವಾದವು.

ಅರ್ಥ:
ಹಳಚು: ತಾಗು, ಬಡಿ; ದಳಪತಿ: ಸೇನಾಧಿಪತಿ; ಅವನಿಪ: ರಾಜ; ತಿಲಕ: ಶ್ರೇಷ್ಠ; ಎಚ್ಚು: ಬಾಣ ಪ್ರಯೋಗ ಮಾಡು; ನೂರು: ಶತ; ಶರ: ಬಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಕೈ: ಹಸ್ತ; ಒಡ್ಡು: ನೀಡು; ಬೇಗಡೆ: ಹೊಳಪಿನ ತಗಡು; ಅಳುಕು: ಹೆದರು; ಅರಿ: ತಿಳಿ; ಸಿಡಿಲು: ಅಶನಿ; ಹೊಯ್ಲು: ಹೊಡೆ; ಕುಲಕುಧರ: ಕುಲಪರ್ವತ; ಸುತ: ಮಗ; ಅಗ್ಗಳಿಕೆ: ಶ್ರೇಷ್ಠ; ಉಪ್ಪಾರತಿ: ಉಪ್ಪನ್ನು ನಿವಾಳಿಸಿ ದೃಷ್ಟಿ ತೆಗೆಯುವುದು; ಅಂಬು: ಬಾಣ;

ಪದವಿಂಗಡಣೆ:
ಹಳಚಿದನು +ದಳಪತಿಯನ್+ಅವನಿಪ
ತಿಲಕನ್+ಎಚ್ಚನು +ನೂರು +ಶರದಲಿ
ಕಳಚಿ +ಕಯ್ಯೊಡನ್+ಎಚ್ಚು +ಬೇಗಡೆಗಳೆದನ್+ಅವನಿಪನ
ಅಳುಕಲ್+ಅರಿವುದೆ +ಸಿಡಿಲ +ಹೊಯ್ಲಲಿ
ಕುಲಕುಧರವೀ +ಧರ್ಮಸುತನ್
ಅಗ್ಗಳಿಕೆಗ್+ಉಪ್ಪಾರತಿಗಳಾದುವು +ಶಲ್ಯನ್+ಅಂಬುಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ -ಅಳುಕಲರಿವುದೆ ಸಿಡಿಲ ಹೊಯ್ಲಲಿ ಕುಲಕುಧರವೀ
(೨) ಅವನಿಪತಿಲಕ, ಧರ್ಮಸುತ – ಯುಧಿಷ್ಠಿರನನ್ನು ಕರೆದ ಪರಿ