ಪದ್ಯ ೧೬: ಸೈನಿಕರ ಹೋರಾಟ ಹೇಗಿತ್ತು?

ಒರಲೆ ಗಜ ದಾಡೆಗಳ ಕೈಗಳ
ಹರಿಯಹೊಯ್ದರು ಪಾರಕರು ಮು
ಕ್ಕುರಿಕಿದರೆ ಸಬಳಿಗರು ಕೋದೆತ್ತಿದರು ಕರಿಘಟೆಯ
ತರುಬಿದರೆ ಕಡಿನಾಲ್ಕ ತೋರಿಸಿ
ಮೆರೆದರುರೆ ರಾವುತರು ರಾವ್ತರ
ತರುಬಿದರು ತನಿಚೂಣಿ ಮಸಗಿತು ತಾರುಥಟ್ಟಿನಲಿ (ಶಲ್ಯ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆನೆಗಳ ದಾಡೆಗಳನ್ನೂ ಸೊಂಡಿಲನ್ನೂ ಮುರಿಯುವಂತೆ ಪಾರಕರು ಹೊಡೆದರು, ಮೇಲೆ ಬಿದ್ದರೆ ಭಲ್ಲೆಹದಿಂದ ಆನೆಯನ್ನು ಆಚೆಗೆ ದೂಕಿದರು. ತಮ್ಮ ಮೇಲೆ ಆಕ್ರಮಿಸಿದರೆ ರಾವುತರು ನಾಲ್ಕು ತುಂಡು ಮಾಡಿದರು. ರಾವುತರು ರಾವುತರನ್ನು ಕೊಂದರು. ಸಂಕುಲ ಸಮರದಲ್ಲಿ ಅತಿಶಯವಾದ ಸಾಹಸವನ್ನು ತೋರಿದರು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ಗಜ: ಆನೆ; ದಾಡೆ: ದವಡೆ, ಒಸಡು; ಕೈ: ಹಸ್ತ; ಹರಿ: ಸೀಳು; ಪಾರಕ: ದಾಟಿಸುವವನು, ಆಚೀಚೆ ಚಲಿಸುವವ; ಮುಕ್ಕುರು: ಮೇಲೆ ಬೀಳು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಎತ್ತು: ಮೇಲೇಳು; ಕರಿಘಟೆ: ಆನೆಯ ಗುಂಪು; ತರುಬು: ತಡೆ, ನಿಲ್ಲಿಸು; ಕಡಿ: ಸೀಳು; ತೋರಿಸು: ಗೋಚರಿಸು; ಮೆರೆ: ಪ್ರಕಾಶ; ಉರೆ: ಹೆಚ್ಚು; ರಾವುತ: ಕುದುರೆ ಸವಾರ, ಅಶ್ವಾರೋಹಿ; ತರುಬು: ತಡೆ, ನಿಲ್ಲಿಸು; ತನಿ: ಚೆನ್ನಾಗಿ ಬೆಳೆದುದು; ಚೂಣಿ:ಮುಂದಿನ ಸಾಲು; ಮಸಗು: ಹರಡು; ಕೆರಳು; ತಾರು: ಸೊರಗು, ಬಡಕಲಾಗು; ಥಟ್ಟು: ಗುಂಪು;

ಪದವಿಂಗಡಣೆ:
ಒರಲೆ +ಗಜ +ದಾಡೆಗಳ +ಕೈಗಳ
ಹರಿಯಹೊಯ್ದರು +ಪಾರಕರು +ಮು
ಕ್ಕುರಿಕಿದರೆ +ಸಬಳಿಗರು +ಕೋದೆತ್ತಿದರು +ಕರಿ+ಘಟೆಯ
ತರುಬಿದರೆ +ಕಡಿನಾಲ್ಕ +ತೋರಿಸಿ
ಮೆರೆದರ್+ಉರೆ +ರಾವುತರು +ರಾವ್ತರ
ತರುಬಿದರು +ತನಿಚೂಣಿ +ಮಸಗಿತು+ ತಾರು+ಥಟ್ಟಿನಲಿ

ಅಚ್ಚರಿ:
(೧) ಗಜ, ಕರಿ; ಘಟೆ, ಥಟ್ಟು – ಸಮಾನಾರ್ಥಕ ಪದ

ಪದ್ಯ ೧೫: ಯುದ್ಧದ ತೀವ್ರತೆ ಹೇಗಿತ್ತು?

ರಾವುತರು ಸೆಲ್ಲಿಸಿದರಗ್ಗದ
ಮಾವುತರನಾನೆಗಳ ತುಡುಕಿ ಹ
ಯಾವಳಿಯ ಬೀಸಿದರು ರಥಿಕರು ಹಾಯ್ಸಿದರು ರಥವ
ಆ ವರೂಥವನೇಳನೆಂಟ ಗ
ಜಾವಳಿಗಳಿಟ್ಟವು ಗಜಸ್ಕಂ
ಧಾವಲಂಬವ ಸೆಕ್ಕಿದರು ಸುರಗಿಯಲಿ ಸಮರಥರು (ಶಲ್ಯ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ರಾವುತರು ಮಾವುತರನ್ನು ಈಟಿಗಳಿಂದಿರಿದರು. ರಥಿಕರು ರಥವನ್ನು ನಡೆಸಿ ರಾವುತರನ್ನು ಹೊಡೆದರು. ಆನೆಗಳು ಏಳೆಂಟು ರಥಗಳನ್ನು ಒಂದೇ ಬಾರಿಗೆ ಎತ್ತಿ ಅಪ್ಪಳಿಸಿದವು. ಸಮರಥರು ಖಡ್ಗಗಳಿಂದ ಆನೆಗಳ ಕತ್ತುಗಳ ಮೇಲೆರಗಿದರು.

ಅರ್ಥ:
ರಾವುತ: ಕುದುರೆ ಸವಾರ, ಅಶ್ವಾರೋಹಿ; ಸೆಲ್ಲಹ: ಈಟಿ, ಭರ್ಜಿ; ಅಗ್ಗ: ಶ್ರೇಷ್ಠ; ಮಾವುತ: ಆನೆಗಳನ್ನು ಪಳಗಿಸುವವ; ಆನೆ: ಗಜ; ತುಡುಕು: ಹೋರಾಡು, ಸೆಣಸು; ಹಯ: ಕುದುರೆ; ಆವಳಿ: ಗುಂಪು; ಬೀಸು: ಹರಡು; ರಥಿಕ: ಕುದುರೆ ಸವಾರ; ಹಾಯ್ಸು: ಹೊಡೆ; ರಥ: ಬಂಡಿ; ವರೂಥ: ತೇರು, ರಥ; ಗಜಾವಳಿ: ಆನೆಗಳ ಗುಂಪು; ಸ್ಕಂಧ: ಹೆಗಲು, ಭುಜಾಗ್ರ; ಅವಲಂಬ: ಆಸರೆ; ಸೆಕ್ಕು: ಒಳಸೇರಿಸು, ತುರುಕು; ಸುರಗಿ: ಸಣ್ಣ ಕತ್ತಿ, ಚೂರಿ; ಸಮರಥ: ಪರಾಕ್ರಮಿ;

ಪದವಿಂಗಡಣೆ:
ರಾವುತರು +ಸೆಲ್ಲಿಸಿದರ್+ಅಗ್ಗದ
ಮಾವುತರನ್+ಆನೆಗಳ+ ತುಡುಕಿ +ಹ
ಯಾವಳಿಯ +ಬೀಸಿದರು+ ರಥಿಕರು +ಹಾಯ್ಸಿದರು +ರಥವ
ಆ +ವರೂಥವನ್+ಏಳನೆಂಟ +ಗ
ಜಾವಳಿಗಳ್+ಇಟ್ಟವು +ಗಜ+ಸ್ಕಂ
ಧಾವಲಂಬವ +ಸೆಕ್ಕಿದರು+ ಸುರಗಿಯಲಿ +ಸಮರಥರು

ಅಚ್ಚರಿ:
(೧) ರಾವುತ, ಮಾವುತ; ಹಯಾವಳಿ, ಗಜಾವಳಿ – ಪದಗಳ ಬಳಕೆ
(೨) ಸೆಕ್ಕಿದರು ಸುರಗಿಯಲಿ ಸಮರಥರು – ಸ ಕಾರದ ತ್ರಿವಳಿ ಪದ

ಪದ್ಯ ೧೪: ಸೈನಿಕರ ನಡುವೆ ಯುದ್ಧವು ಹೇಗೆ ಮುಂದುವರೆಯಿತು?

ಕೇಣವಿಲ್ಲದೆ ಭಟರ ಹಾಣಾ
ಹಾಣಿ ಮಸಗಿತು ಖಣಿಖಟಿಲ ಹೊ
ಯ್ದಾಣೆಗಳ ಬಿರುಗಿಡಿಯ ಹಿರಿಯುಬ್ಬಣದ ಹೊಯ್ಲುಗಳ
ಹೂಣಿಕೆಯ ಸಬಳಿಗರೊಳಿಮ್ಮೈ
ಗಾಣಿಕೆಯ ಬಲುಸೂತರಥಿಕರ
ಜಾಣತಿಯ ಬಿಲ್ಲವರ ಧಾಳಾಧೂಳಿ ಬಲುಹಾಯ್ತು (ಶಲ್ಯ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭಟರೆಲ್ಲರೂ ಸಂಕೋಚವನ್ನು ಬಿಟ್ಟು ಶಕ್ತಿಮೀರಿ ಹಾಣಾಹಾಣಿ ಯುದ್ಧದಲ್ಲಿ ತೊಡಗಿದರು. ಆಯುಧಗಳು ತಾಕಿ ಖಣಿಖಟಿಲು ಸದ್ದು ಕೇಳಿ ಕಿಡಿಗಳುರುಳಿದವು. ಉಬ್ಬಣಗಳು ತಾಕಲಾಡಿದವು. ಭಲ್ಯ ಈಟಿಗಳಿಂದ ವೈರಿಗಳನ್ನು ಹಣಿದರು. ಬಿಲ್ಲಾಳುಗಳು, ಸೂತರು, ರಥಿಕರು ಸಮರೋದ್ಯೋಗದಲ್ಲಿ ನಿರತರಾದರು.

ಅರ್ಥ:
ಕೇಣ: ಹೊಟ್ಟೆಕಿಚ್ಚು; ಭಟ: ಸೈನಿಕ; ಹಾಣಾಹಾಣಿ: ಹಣೆ ಹಣೆಯ ಯುದ್ಧ; ಮಸಗು: ಹರಡು; ಕೆರಳು; ಖಣಿಖಟಿಲು: ಬಾಣದ ಶಬ್ದವನ್ನು ವಿವರಿಸುವ ಪದ; ಹೋಯ್ದ್: ಹೊಡೆ; ಬಿರು: ಬಿರುಸಾದುದು, ಗಟ್ಟಿಯಾದ;
ಕಿಡಿ: ಬೆಂಕಿ; ಹಿರಿ: ಹೆಚ್ಚು; ಉಬ್ಬಣ: ಚೂಪಾದ ಆಯುಧ; ಹೊಯ್ಲು: ಏಟು, ಹೊಡೆತ; ಹೂಣಿಕೆ: ಶಪಥ, ಪ್ರತಿಜ್ಞೆ; ಸಬಳ: ಈಟಿ, ಭರ್ಜಿ; ಸೂತ: ಸಾರಥಿ; ರಥಿಕ: ರಥದ ಮೇಲೆ ಕುಳಿತು ಯುದ್ಧ ಮಾಡುವವ; ಜಾಣತಿ: ಜಾನತನ; ಬಿಲ್ಲವರ: ಬಿಲ್ಲುಗಾರ; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಬಲುಹು: ಬಲ, ಶಕ್ತಿ;

ಪದವಿಂಗಡಣೆ:
ಕೇಣವಿಲ್ಲದೆ +ಭಟರ +ಹಾಣಾ
ಹಾಣಿ +ಮಸಗಿತು +ಖಣಿಖಟಿಲ+ ಹೊ
ಯ್ದಾಣೆಗಳ+ ಬಿರು+ಕಿಡಿಯ +ಹಿರಿ+ಉಬ್ಬಣದ+ ಹೊಯ್ಲುಗಳ
ಹೂಣಿಕೆಯ +ಸಬಳಿಗರೊಳ್+ಇಮ್ಮೈ
ಗಾಣಿಕೆಯ +ಬಲು+ಸೂತ+ರಥಿಕರ
ಜಾಣತಿಯ +ಬಿಲ್ಲವರ+ ಧಾಳಾಧೂಳಿ +ಬಲುಹಾಯ್ತು

ಅಚ್ಚರಿ:
(೧) ಹಾಣಾಹಾಣಿ, ಖಣಿಖಟಿಲ, ಧಾಳಾಧೂಳಿ – ಪದಗಳ ಬಳಕೆ

ಪದ್ಯ ೧೩: ಎರಡು ಸೈನ್ಯವು ಹೇಗೆ ಹೋರಾಡಿದರು?

ಆಯತಿಕೆಯಲಿ ಬಂದು ಪಾಂಡವ
ರಾಯದಳ ಮೋಹರಿಸಿ ನೀಮ್ದುದು
ರಾಯರಿಬ್ಬರ ಬೀಸುಗೈಗಳ ಸನ್ನೆ ಸಮವಾಗೆ
ತಾಯಿಮಳಲನು ತರುಬಿದಬುಧಿಯ
ದಾಯಿಗರು ತಾವಿವರೆನಲು ಬಿಡೆ
ನೋಯಬೆರಸಿದುದುಭಯಬಲ ಬಲುಖತಿಯ ಬಿಂಕದಲಿ (ಶಲ್ಯ ಪರ್ವ, ೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯು ಸನ್ನದ್ಧವಾಗಿ ಬಂದು ನಿಂತಿತು. ರಾಜರಿಬ್ಬರೂ ಕೈಬೀಸಿ ಯುದ್ಧಾರಂಭಕ್ಕೆ ಏಕಕಾಲದಲ್ಲಿ ಅನುಮತಿಕೊಟ್ಟರು. ಸಮುದ್ರದೊಳಗಿರುವ ಮರಳು ಮೇಲೆದ್ದು ಅಲ್ಲೋಲ ಕಲ್ಲೋಲವಾದ ಸಮುದ್ರಗಳಿಗೆ ಇವರು ದಾಯಾದಿಗಳೆನ್ನುವಂತೆ ಮಹಾಕೋಪದಿಂದ ಒಬ್ಬರೊಡನೊಬ್ಬರು ಹೋರಾಡಿದರು.

ಅರ್ಥ:
ಆಯತಿ: ವಿಸ್ತಾರ; ಬಂದು: ಆಗಮಿಸು; ರಾಯ: ರಾಜ; ದಳ: ಸೈನ್ಯ; ಮೋಹರ: ಯುದ್ಧ; ನಿಂದು: ನಿಲ್ಲು; ಬೀಸು: ಅಲ್ಲಾಡಿಸು; ಕೈ: ಹಸ್ತ; ಸನ್ನೆ: ಗುರುತು; ಸಮ: ಸರಿಸಮಾನವಾದುದು; ತಾಯಿಮಳಲು: ಸಮುದ್ರದಡಿಯಲ್ಲಿರುವ ಮರಳು; ತರುಬು: ತಡೆ, ನಿಲ್ಲಿಸು; ಅಬುಧಿ: ಸಾಗರ; ದಾಯಿಗ: ದಾಯಾದಿ; ನೋಯ: ನೋವು; ಬೆರಸು: ಕಲಿಸು; ಉಭಯ: ಎರದು; ಬಲು: ಬಹಳ; ಖತಿ: ಕೋಪ; ಬಿಂಕ: ಗರ್ವ, ಜಂಬ, ಠೀವಿ;

ಪದವಿಂಗಡಣೆ:
ಆಯತಿಕೆಯಲಿ +ಬಂದು +ಪಾಂಡವ
ರಾಯದಳ +ಮೋಹರಿಸಿ+ ನಿಂದುದು
ರಾಯರಿಬ್ಬರ +ಬೀಸುಗೈಗಳ +ಸನ್ನೆ+ ಸಮವಾಗೆ
ತಾಯಿಮಳಲನು +ತರುಬಿದ್+ಅಬುಧಿಯ
ದಾಯಿಗರು+ ತಾವಿವರೆನಲು +ಬಿಡೆ
ನೋಯ+ಬೆರಸಿದುದ್+ಉಭಯಬಲ+ ಬಲು+ಖತಿಯ +ಬಿಂಕದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ತಾಯಿಮಳಲನು ತರುಬಿದಬುಧಿಯ ದಾಯಿಗರು ತಾವಿವರೆನಲು

ಪದ್ಯ ೧೨: ಪಾಂಡವರ ಗುಂಪಿನಲ್ಲಿದ್ದ ಪರಾಕ್ರಮಿಗಳಾರು?

ಅರಸನೆಡವಂಕದಲಿ ಸಾತ್ಯಕಿ
ನರ ನಕುಲ ಸಹದೇವ ಸೋಮಕ
ವರ ಯುಧಾಮನ್ಯುತ್ತಮೌಜಸ ಸೃಂಜಯಾದಿಗಳು
ನೆರೆದುದಾ ಬಲವಂಕದಲಿ ತನು
ಜರು ವೃಕೋದರ ದ್ರುಪದಸುತ ದು
ರ್ಧರ ಶಿಖಂಡಿ ಪ್ರಮುಖ ಘನಪಾಂಚಾಲ ಪರಿವಾರ (ಶಲ್ಯ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಧರ್ಮಜನ ಎಡದಲ್ಲಿ ಸಾತ್ಯಕಿ ಅರ್ಜುನ, ನಕುಲ, ಸಹದೇವ ಸೋಮಕ, ಯುಧಾಮನ್ಯು, ಉತ್ತಮೌಜಸ, ಸೃಂಜಯರೇ ಮೊದಲಾದವರಿದ್ದರು. ಬಲಭಾಗದಲ್ಲಿ ಉಪಪಾಂಡವರು, ಭೀಮ ಧೃಷ್ಟದ್ಯುಮ್ನ, ಶಿಖಂಡಿ ಮತ್ತು ಉಳಿದ ಪಾಂಚಾಲರು ಇದ್ದರು.

ಅರ್ಥ:
ಅರಸ: ರಾಜ; ವಂಕ: ಬದಿ, ಮಗ್ಗುಲು; ನರ: ಅರ್ಜುನ; ಆದಿ: ಮುಂತಾದ; ನೆರೆ: ಗುಂಪು; ಬಲ: ದಕ್ಷಿಣ; ಎಡ: ವಾಮ; ತನುಜ: ಮಕ್ಕಳು; ಸುತ: ಮಗ; ಘನ: ಶ್ರೇಷ್ಠ; ಪರಿವಾರ: ಪರಿಜನ;

ಪದವಿಂಗಡಣೆ:
ಅರಸನ್+ಎಡವಂಕದಲಿ +ಸಾತ್ಯಕಿ
ನರ +ನಕುಲ +ಸಹದೇವ +ಸೋಮಕ
ವರ+ ಯುಧಾಮನ್ಯ+ಉತ್ತಮೌಜಸ+ ಸೃಂಜ+ಆದಿಗಳು
ನೆರೆದುದಾ +ಬಲವಂಕದಲಿ +ತನು
ಜರು +ವೃಕೋದರ +ದ್ರುಪದ+ಸುತ +ದು
ರ್ಧರ +ಶಿಖಂಡಿ +ಪ್ರಮುಖ +ಘನ+ಪಾಂಚಾಲ +ಪರಿವಾರ

ಅಚ್ಚರಿ:
(೧) ಎಡವಂಕ, ಬಲವಂಕ – ವಿರುದ್ಧ ಪದ
(೨) ಜೋಡಿ ಅಕ್ಷರದ ಪದ – ನರ, ನಕುಲ; ಸಹದೇವ ಸೋಮಕ

ಪದ್ಯ ೧೧: ಸೈನ್ಯವು ಹೇಗೆ ಯುದ್ಧಕ್ಕೆ ಬಂತು?

ಬಂದುದಾ ಮೋಹರ ಬಲೌಘದ
ಮುಂದೆ ಪಾಠಕರವರ ಕಾಹಿಗೆ
ಹಿಂದೆ ಬಿಲ್ಲಾಳವರ ಸುಯ್ದಾನದಲಿ ಸಬಳಿಗರು
ಹಿಂದೆ ತುರಗ ಸಮೂಹವಲ್ಲಿಂ
ಹಿಂದೆ
ಗಜಘಟೆ ಗಜದ ಬಳಿಯಲಿ
ಸಂದಣಿಸಿದುದು ರಾಯದಳ ಮಣಿರಥ ನಿಕಾಯದಲಿ (ಶಲ್ಯ ಪರ್ವ, ೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅವರ ಸೈನ್ಯವು ಹೋರಾಡಲು ಮುಂದೆ ಬಂತು. ಸೈನ್ಯದ ಮೂಂದೆ ವಂದಿಮಾಗಹರು, ಅವರನ್ನು ಕಾಪಾಡಲು ಹಿಮ್ದೆ ಬಿಲ್ಲಾಳುಗಳು, ಅವರ ಹಿಂದೆ ಸಬಳಗಳನ್ನು ಹಿಡಿದವರು, ಅವರ ಹಿಂದೆ ರಾವುತರು, ಅವರ ಹಿಂದೆ ಆನೆಗಳು ಮಣಿರಥಗಳನ್ನೇರಿದ ರಥಿಕರು ಗುಂಪಾಗಿ ಬಂದರು.

ಅರ್ಥ:
ಮೋಹರ: ಯುದ್ಧ; ಬಲ: ಶಕ್ತಿ; ಔಘ: ಗುಂಪು, ಸಮೂಹ; ಮುಂದೆ: ಎದುರು; ಪಾಠಕ: ಭಟ್ಟಂಗಿ, ಹೊಗಳುಭಟ್ಟ; ಕಾಹು: ಸಂರಕ್ಷಣೆ; ಬಿಲ್ಲಾಳ: ಬಿಲ್ಲುಗಾರ; ಸುಯ್ದಾನ: ರಕ್ಷಣೆ, ಕಾಪು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಹಿಂದೆ: ಹಿಂಭಾಗ; ತುರಗ: ಅಶ್ವ; ಸಮೂಹ: ಗುಂಪು; ಗಜಘಟೆ: ಆನೆಗಳ ಗುಂಪು; ಗಜ: ಆನೆ; ಬಳಿ: ಹತ್ತಿರ; ಸಂದಣೆ: ಗುಂಪು; ರಾಯ: ರಾಜ; ದಳ: ಸೈನ್ಯ; ಮಣಿರಥ: ರತ್ನದಿಂದ ಕೂಡಿದ ಬಂಡಿ; ನಿಕಾಯ: ಗುಂಪು;

ಪದವಿಂಗಡಣೆ:
ಬಂದುದ್+ಆ+ ಮೋಹರ +ಬಲೌಘದ
ಮುಂದೆ +ಪಾಠಕರ್+ಅವರ+ ಕಾಹಿಗೆ
ಹಿಂದೆ +ಬಿಲ್ಲಾಳ್+ಅವರ+ ಸುಯ್ದಾನದಲಿ +ಸಬಳಿಗರು
ಹಿಂದೆ +ತುರಗ +ಸಮೂಹವ್+ಅಲ್ಲಿಂ
ಹಿಂದೆ+ ಗಜಘಟೆ+ ಗಜದ +ಬಳಿಯಲಿ
ಸಂದಣಿಸಿದುದು +ರಾಯದಳ+ ಮಣಿರಥ +ನಿಕಾಯದಲಿ

ಅಚ್ಚರಿ:
(೧) ಔಘ, ನಿಕಾಯ, ಸಮೂಹ, ಘಟೆ, ಸಂದಣೆ – ಸಮಾನಾರ್ಥಕ ಪದ
(೨) ಪಾಠಕ, ಬಿಲ್ಲಾಳು, ಸಬಳಿಗ, ತುರಗ ಸಮೂಹ, ಗಜಘಟೆ, ರಾಯದಳ – ಸೈನ್ಯದಲ್ಲಿದ್ದ ಗುಂಪುಗಳು
(೩) ಹಿಂದೆ, ಮುಂದೆ – ವಿರುದ್ಧ ಪದ

ಪದ್ಯ ೧೦: ಯಾವ ಅಪಶಕುನವು ಕೌರವ ಸೇನೆಯಲ್ಲಿ ಕಂಡಿತು?

ಇದಿರಲೌಕಿತು ಗಾಳಿ ಪಟ್ಟದ
ಮದಗಜಾವಳಿ ಮುಗ್ಗಿದವು ಧ್ವಜ
ವದಿರಿದವು ಹೊಡೆಗೆಡೆದು ಹೊಳೆದುದು ತೇರು ದಳಪತಿಯ
ಬಿದಿರಿದವು ತಡಿಸಹಿತ ಥಟ್ಟಿನ
ಕುದುರೆ ಮೈಗಳಲಾಯುಧದ ಕಿಡಿ
ಯುದುರಿದವು ಕುರುಬಲದಲದ್ಭುತವಾಯ್ತು ನಿಮಿಷದಲಿ (ಶಲ್ಯ ಪರ್ವ, ೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಈ ಕ್ಷಣದಲ್ಲಿ ಇದಿರಿನಿಂದ ಬಿರುಗಾಳಿ ಬೀಸಿತು ಪಟ್ಟದಾನೆಗಳು ಎಡವಿಬಿದ್ದವು. ಧ್ವಜಗಳು ಅಲುಗಾಡಿದವು. ಶಲ್ಯನ ತೇರು ಉರುಳಿತು. ಕುದುರೆಗಳು ತಡಿಸಹಿತ ನಡುಗಿ ಬಿದ್ದವು. ಕತ್ತಿಗಳಲ್ಲಿ ಕಿಡಿಗಳುದುರಿದವು. ನಿಮಿಷ ಮಾತ್ರದಲ್ಲಿ ಉತ್ಪಾತಗಳು ತೋರಿದವು.

ಅರ್ಥ:
ಇದಿರು: ಎದುರು; ಔಕು: ಒತ್ತು, ಹಿಚುಕು; ಗಾಳಿ: ವಾಯು; ಪಟ್ಟ: ಅಧಿಕಾರ ಸೂಚಕವಾದ ಚಿನ್ನದ ಪಟ್ಟಿ, ಹಣೆಗಟ್ಟು; ಮದಗಜ: ಮತ್ತಿನಿಂದ ಕೂಡಿದ ಆನೆ; ಆವಳಿ: ಗುಂಪು; ಮುಗ್ಗು: ಬೀಳು; ಧ್ವಜ: ಬಾವುಟ; ಅದಿರು: ಅಲುಗಾಡು; ಹೊಡೆ: ಬೀಳು; ತೇರು: ಬಂಡಿ; ದಳಪತಿ: ಸೇನಾಧಿಪತಿ; ಬಿದಿರು: ಕೆದರು, ಚೆದರು; ತಡಿ: ಕುದುರೆಯ ಜೀನು; ಥಟ್ಟು: ಗುಂಪು; ಕುದುರೆ: ಅಶ್ವ; ಮೈ: ದೇಹ; ಆಯುಧ: ಶಸ್ತ್ರ; ಕಿಡಿ: ಬೆಂಕಿ; ಉದುರು: ಹೊರಹೊಮ್ಮು; ಅದ್ಭುತ: ಆಶ್ಚರ್ಯ; ನಿಮಿಷ: ಕ್ಷಣಮಾತ್ರ;

ಪದವಿಂಗಡಣೆ:
ಇದಿರಲ್+ಔಕಿತು +ಗಾಳಿ +ಪಟ್ಟದ
ಮದಗಜಾವಳಿ+ ಮುಗ್ಗಿದವು +ಧ್ವಜವ್
ಅದಿರಿದವು +ಹೊಡೆ+ಕೆಡೆದು +ಹೊಳೆದುದು +ತೇರು+ ದಳಪತಿಯ
ಬಿದಿರಿದವು+ ತಡಿಸಹಿತ+ ಥಟ್ಟಿನ
ಕುದುರೆ +ಮೈಗಳಲ್+ಆಯುಧದ +ಕಿಡಿ
ಉದುರಿದವು +ಕುರುಬಲದಲ್+ಅದ್ಭುತವಾಯ್ತು +ನಿಮಿಷದಲಿ

ಅಚ್ಚರಿ:
(೧) ಬಿರುಗಾಳಿ ಎಂದು ಹೇಳಲು – ಔಕಿತು ಗಾಳಿ;
(೨) ಗಾಳಿ ಆವಳಿ – ಪ್ರಾಸ ಪದ

ಪದ್ಯ ೯: ಕೌರವ ಸೇನೆಯು ಯಾವ ಆದೇಶದ ಮೇಲೆ ಸಿದ್ಧಗೊಂಡಿತು?

ಶಕುನಿ ಮೋಹರಿಸಿದನು ಸಮಸ
ಪ್ತಕರು ಬೇರೊಡ್ಡಿದರು ಕೃತವ
ರ್ಮಕ ಕೃಪಾಶ್ವತ್ಥಾಮರೊದಗಿದರೊಂದು ಬಾಹೆಯಲಿ
ಸಕಲ ಬಲ ಮಾದ್ರೇಶ್ವರನ ಹೇ
ಳಿಕೆಯಲೊಯ್ಯಾರಿಸಿತು ಕುರುಬಲ
ನಿಕರ ತಳಿತುದು ತರವಿಡಿದು ಕಳನೊಂದು ಮೂಲೆಯಲಿ (ಶಲ್ಯ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ರಣರಂಗದ ಒಂದು ಕಡೆ ಶಕುನಿಯು ಸೈನ್ಯದೊಡನೆ ನಿಂತನು. ಸಂಶಪ್ತಕರ ಬಲ ಇನ್ನೊಂದು ಕಡೆ ನಿಂತಿತು. ಕೃಪ, ಕೃತವರ್ಮ, ಅಶ್ವತ್ಥಾಮರು ಒಂದು ಪಕ್ಕದಲ್ಲಿ ನಿಂತರು. ನಮ್ಮ ಸೇನೆಯೆಲ್ಲವೂ ಶಲ್ಯನ ಹೇಳಿಕೆಯಂತೆ ಸಿದ್ಧವಾಗಿ ನಿಂತಿತು.

ಅರ್ಥ:
ಮೋಹರ: ಯುದ್ಧ; ಸಮಸಪ್ತಕ: ಯುದ್ಧದಲ್ಲಿ ಶಪಥ ಮಾಡಿ ಹೋರಾಡುವವರು; ಒದಗು: ಲಭ್ಯ; ಬಾಹೆ: ಪಕ್ಕ, ಪಾರ್ಶ್ವ; ಸಕಲ: ಎಲ್ಲಾ; ಬಲ: ಶಕ್ತಿ; ಹೇಳಿಕೆ: ಮಾತು; ಒಯ್ಯಾರ: ಚೆಲುವು; ನಿಕರ: ಗುಂಪು; ತಳಿತ: ಚಿಗುರಿದ; ತರ: ಓಳಿ, ಕ್ರಮ, ಗುಂಪು; ಕಳ:ರಣರಂಗ; ಮೂಲೆ: ಕೊನೆ, ತುದಿ;

ಪದವಿಂಗಡಣೆ:
ಶಕುನಿ+ ಮೋಹರಿಸಿದನು +ಸಮಸ
ಪ್ತಕರು +ಬೇರೊಡ್ಡಿದರು ಕೃತವ
ರ್ಮಕ ಕೃಪ+ಅಶ್ವತ್ಥಾಮರ್+ಒದಗಿದರೊಂದು +ಬಾಹೆಯಲಿ
ಸಕಲ+ ಬಲ +ಮಾದ್ರೇಶ್ವರನ +ಹೇ
ಳಿಕೆಯಲ್+ಒಯ್ಯಾರಿಸಿತು +ಕುರುಬಲ
ನಿಕರ +ತಳಿತುದು +ತರವಿಡಿದು +ಕಳನೊಂದು +ಮೂಲೆಯಲಿ

ಅಚ್ಚರಿ:
(೧) ಬಾಹೆಯಲಿ, ಮೂಲೆಯಲಿ – ಪ್ರಾಸ ಪದ
(೨) ತ ಕಾರದ ಜೋಡಿ ಪದ – ತಳಿತುದು ತರವಿಡಿದು