ಪದ್ಯ ೪೧: ಪಾಂಡವರು ಯುದ್ಧಕ್ಕೆ ಹೇಗೆ ತಯಾರಾದರು?

ಹಿಂಗಿದುದು ಭಯ ಕಂಠದ ಸುಸ
ರ್ವಾಂಗದಲಿ ಪಸರಿಸಿತು ಕಾಳೆಗ
ದಂಘವಣೆ ಹೊಗರೇರಿದುದು ವಿಕ್ರಮ ಛಡಾಳಿಸಿತು
ಹೊಂಗಿದರು ಹೊಂಪುಳಿಯ ಪುಳಕದ
ಮುಂಗುಡಿಯ ರೊಮಾಂಚನದ ರಣ
ರಂಗ ಧೀರರು ತರುಬಿ ನಿಮ್ದರು ಮತ್ತೆ ಕಾಳೆಗವ (ದ್ರೋಣ ಪರ್ವ, ೧೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದ ಭೀತಿ ಮಾಯವಾಗಿ, ಯುದ್ಧಾತುರಕೆ ಸೈನ್ಯದ ಸರ್ವಾಂಗಗಳಲ್ಲೂ ಬಂದು ಸೇರಿತು. ಅವರ ಪರಾಕ್ರಮ ಅಧಿಕವಾಯಿತು. ಅವರೆಲ್ಲರೂ ಉತ್ಸಾಹಿಸಿದರು. ಅವರೆಲ್ಲರೂ ರೋಮಾಂಚನಗೊಂಡರು. ವಿರೋಧಿಗಳನ್ನು ತಡೆದು ನಿಲ್ಲಿಸಿ ಯುದ್ಧಕ್ಕಾರಂಭಿಸಿದರು.

ಅರ್ಥ:
ಹಿಂಗು: ಬತ್ತುಹೋಗು, ಕಡಿಮೆಯಾಗು; ಭಯ: ಅಂಜಿಕೆ; ಕಂಠ: ಕೊರಳು, ಧ್ವನಿ; ಸರ್ವಾಂಗ: ಎಲ್ಲಾ ಅಂಗಗಳು; ಪಸರಿಸು: ಹರಡು; ಕಾಳೆಗ: ಯುದ್ಧ; ಅಂಘವಣೆ: ರೀತಿ, ಬಯಕೆ; ಹೊಗರು: ಕಾಂತಿ, ಪ್ರಕಾಶ; ಏರು: ಹೆಚ್ಚಾಗು; ವಿಕ್ರಮ: ಪರಾಕ್ರಮ, ಶೌರ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಹೊಂಗು: ಉತ್ಸಾಹ, ಹುರುಪು; ಹೊಂಪುಳಿ: ಹೆಚ್ಚಳ, ಆಧಿಕ್ಯ; ಪುಳಕ: ರೋಮಾಂಚನ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ರಣರಂಗ: ಯುದ್ಧ; ಧೀರ: ಶೂರ; ತರುಬು: ತಡೆ, ನಿಲ್ಲಿಸು; ನಿಂದು: ನಿಲ್ಲು; ಕಾಳೆಗ: ಯುದ್ಧ;

ಪದವಿಂಗಡಣೆ:
ಹಿಂಗಿದುದು +ಭಯ +ಕಂಠದ+ ಸುಸ
ರ್ವಾಂಗದಲಿ +ಪಸರಿಸಿತು+ ಕಾಳೆಗದ್
ಅಂಘವಣೆ +ಹೊಗರ್+ಏರಿದುದು +ವಿಕ್ರಮ +ಛಡಾಳಿಸಿತು
ಹೊಂಗಿದರು +ಹೊಂಪುಳಿಯ +ಪುಳಕದ
ಮುಂಗುಡಿಯ +ರೋಮಾಂಚನದ +ರಣ
ರಂಗ +ಧೀರರು +ತರುಬಿ + ನಿಂದರು+ ಮತ್ತೆ +ಕಾಳೆಗವ

ಅಚ್ಚರಿ:
(೧) ಪುಳಕ, ರೋಮಾಂಚನ – ಸಮಾನಾರ್ಥಕ ಪದ
(೨) ಪಾಂಡವರ ಸಿದ್ಧತೆ – ಹಿಂಗಿದುದು ಭಯ ಕಂಠದ ಸುಸರ್ವಾಂಗದಲಿ ಪಸರಿಸಿತು

ಪದ್ಯ ೪೦: ಕೃಷ್ಣನ ಹಿರಿಮೆ ಎಂತಹುದು?

ಆವನೊಬ್ಬನ ಮಧುರವಚನ ಕೃ
ಪಾವಲೋಕನದಿಂದ ಶತ ಜ
ನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು
ದೇವರೀತನ ಲಲಿತವಚನಸು
ಧಾವಸೇಚನದಿಂದ ಭಟರುರೆ
ಜೀವಿಸುವುದೇನರಿದೆ ಕೇಳ್ ಜನಮೇಜಯಕ್ಷಿತಿಪ (ದ್ರೋಣ ಪರ್ವ, ೧೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ಯಾರ ಮಧುರ ವಚನ, ಕೃಪಾದೃಷ್ಟಿಗಳಿಂದ ಅನೇಕ ಜನ್ಮಗಳಲ್ಲಿ ಗಳಿಸಿದ ಪಾಪದ ಭಯ ನಿವಾರಿತವಾಗುವುದೋ, ಅಮ್ತಹ ದೇವನ ಲಲಿತ ವಚನ ಸುಧೆಯ ಸಿಂಚನದಿಂದ ಯೋಧರು ಪುನರುಜ್ಜೀವಿಸುವುದೇನು ಆಶ್ಚರ್ಯ.

ಅರ್ಥ:
ಮಧುರ: ಸಿಹಿ; ವಚನ: ವಾಣಿ, ನುಡಿ; ಅವಲೋಕನ: ನೋಟ; ಕೃಪ: ದಯೆ; ಶತ: ನೂರು; ಜನ್ಮ: ಹುಟ್ಟು ಸಾವುಗಳ ಚಕ್ರ; ಆವಳಿ: ಗುಂಪು; ಘನ: ಶ್ರೇಷ್ಠ; ದುರಿತ: ಪಾಪ, ಪಾತಕ; ವಹ್ನಿ: ಬೆಂಕಿ; ಝಳ: ಪ್ರಕಾಶ; ಕಡೆ: ಕೊನೆ; ದೇವ: ಭಗವಮ್ತ; ಲಲಿತ: ಚೆಲುವು; ವಚನ: ಮಾತು; ಸುಧಾ: ಅಮೃತ; ಸೇಚನ: ಸಿಂಪಡಿಸು; ಭಟ: ಸೈನಿಅ; ಉರೆ: ಅತಿಶಯವಾಗಿ; ಅರಿ: ತಿಳಿ; ಕ್ಷಿತಿಪ: ರಾಜ;

ಪದವಿಂಗಡಣೆ:
ಆವನ್+ಒಬ್ಬನ +ಮಧುರವಚನ +ಕೃಪ
ಅವಲೋಕನದಿಂದ +ಶತ +ಜ
ನ್ಮಾವಳಿಯ +ಘನ +ದುರಿತ+ವಹ್ನಿಯ +ಝಳಕೆ +ಕಡೆಯಹುದು
ದೇವರ್+ಈತನ +ಲಲಿತ+ವಚನ+ಸು
ಧಾವ+ಸೇಚನದಿಂದ +ಭಟರ್+ಉರೆ
ಜೀವಿಸುವುದೇನ್+ಅರಿದೆ +ಕೇಳ್ +ಜನಮೇಜಯ+ಕ್ಷಿತಿಪ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಆವನೊಬ್ಬನ ಮಧುರವಚನ ಕೃಪಾವಲೋಕನದಿಂದ ಶತ ಜನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು

ಪದ್ಯ ೩೯: ಕೃಷ್ಣನು ಸೈನಿಕರಿಗೆ ಏನೆಂದು ಹೇಳಿದನು?

ನಿಲ್ಲಿ ಭಯ ಬೇಡಾವ ರನವಿದು
ತಲ್ಲಣಕೆ ತರುವಾಯೆ ದೀವಿಗೆ
ಪಲ್ಲವಿಸಿದರೆ ತಳಿತುದೇ ಭುಜಶೌರ್ಯ ಕುರುಬಲಕೆ
ಖುಲ್ಲರಾರೋ ಬಲವ ರಿತುಹಿದ
ರಿಲ್ಲಿ ನಿಲಲಂಜಿದರೆನುತ ಕರ
ಪಲ್ಲವವ ನೆಗಹಿದನು ಲಕ್ಷ್ಮೀಕಾಂತ ಕರುಣದಲಿ (ದ್ರೋಣ ಪರ್ವ, ೧೫ ಸಂಧಿ, ೩೯ ಪದ್ಯ)

ತಾತ್ಪರ್ಯ:
ಭಯಪಡಬೇಡಿರಿ, ಇದ್ದಲ್ಲೇ ನಿಲ್ಲಿರಿ, ತಲ್ಲಣಗೊಂಡ ಮೇಲೆ ಎಂತಹ ಯುದ್ಧ? ಕೌರವರ ಸೈನ್ಯದಲ್ಲಿ ದೀಪಗಳುರಿದರೆ ಅದರ ಭುಜಬಲ ಹೆಚ್ಚಾಯಿತೇ? ಯಾರೋ ಅಯೋಗ್ಯರು ನಿಲ್ಲಲು ಹೆದರಿ ಸೈನ್ಯದೊಡನೆ ಓಡಿ ಹೋದರೇನಂತೆ ಎಂದು ಕೈಯನ್ನೆತ್ತಿ ಕೃಷ್ಣನು ಅಭಯವನ್ನಿತ್ತನು.

ಅರ್ಥ:
ನಿಲ್ಲು: ತಡೆ; ಭಯ: ಅಂಜಿಕೆ; ಬೇಡ: ಸಲ್ಲದು, ಕೂಡದು; ರಣ: ಯುದ್ಧ; ತಲ್ಲಣ: ಅಂಜಿಕೆ, ಭಯ, ಭೀತಿ; ತರುವಾಯ: ಸೊಗಸು; ದೀವಿಗೆ: ಸೊಡರು, ದೀಪಿಕೆ; ಪಲ್ಲವಿಸು: ಚಿಗುರು; ತಳಿತ: ಚಿಗುರಿದ; ಭುಜ: ಬಾಹು; ಶೌರ್ಯ: ಬಲ, ಪರಾಕ್ರಮ; ಖುಲ್ಲ: ಅಲ್ಪತನ, ಕ್ಷುದ್ರತೆ; ಬಲ: ಬಿಗಿ, ಗಟ್ಟಿ; ತಿರುಹು: ತಿಗುಹಿಸು; ಅಂಜು: ಹೆದರು; ನೆಗಹು: ಮೇಲೆತ್ತು; ಕರುಣ: ದಯೆ; ಕರ: ಹಸ್ತ; ಪಲ್ಲವ: ಚಿಗುರು;

ಪದವಿಂಗಡಣೆ:
ನಿಲ್ಲಿ +ಭಯ +ಬೇಡಾವ +ರಣವಿದು
ತಲ್ಲಣಕೆ +ತರುವಾಯೆ +ದೀವಿಗೆ
ಪಲ್ಲವಿಸಿದರೆ +ತಳಿತುದೇ +ಭುಜ+ಶೌರ್ಯ +ಕುರುಬಲಕೆ
ಖುಲ್ಲರಾರೋ +ಬಲವ +ತಿರುಹಿದರ್
ಇಲ್ಲಿ +ನಿಲಲ್+ಅಂಜಿದರೆನುತ +ಕರ
ಪಲ್ಲವವ +ನೆಗಹಿದನು +ಲಕ್ಷ್ಮೀಕಾಂತ +ಕರುಣದಲಿ

ಅಚ್ಚರಿ:
(೧) ಅಭಯ ಎಂದು ಹೇಳಲು – ಕರ ಪಲ್ಲವವ ನೆಗಹಿದನು

ಪದ್ಯ ೩೮: ಕೃಷ್ಣನು ಏಕೆ ನಗುತ್ತಿದ್ದನು?

ತವಕ ತಗ್ಗಿತು ಭಟರ ತಾಳಿಗೆ
ಜವಳಿದೆಗೆದುದು ಮನಕೆ ಭೀತಿಯ
ಗವಸಣಿಗೆ ಘಾಡಿಸಿತು ಜಾಳಿಸಿತದಟರಪಸರಣ
ಸವೆದ ಶೌರ್ಯದ ಘಾಯ ಘಲ್ಲಿಸಿ
ತವಯವದ ಮಡಮುರಿವ ಮೋಹರ
ದವನಿಪತಿಗಳ ನಿಲವ ನೋಡಿದನಸುರರಿಪು ನಗುತ (ದ್ರೋಣ ಪರ್ವ, ೧೫ ಸಂಧಿ, ೩೮ ಪದ್ಯ)

ತಾತ್ಪರ್ಯ:
ಪಾಂಡವ ಯೋದರ ಯುದ್ಧಮಾಡುವ ತವಕ ತಗ್ಗಿತು; ಅಂಗಳುಗಳು ಒಣಗಿದವು, ಮನಸ್ಸಿಗೆ ಭೀತಿಯ ತೆರೆ ಆವರಿಸಿತು. ವೀರರು ಹಿಮ್ಮೆಟ್ಟಿದರು. ಹಗಲು ರಾತ್ರಿ ಶೌರ್ಯದಿಂದ ಹೋರಾಡಿದ ಗಾಯಗಳ ನೋವು ಹೆಚ್ಚಿತು. ಯುದ್ಧಕ್ಕೆ ಬೇಸರಿಸಿದ ರಾಜರು ಬಾಹುಗಳನ್ನು ಇಳಿಬಿಟ್ಟರು. ಇವರೆಲ್ಲರ ಸ್ಥಿತಿಯನ್ನು ಶ್ರೀಕೃಷ್ಣನು ನಗುತ್ತಾ ನೋಡಿದನು.

ಅರ್ಥ:
ತವಕ: ಬಯಕೆ, ಆತುರ; ತಗ್ಗು: ಕಡಿಮೆಯಾಗು; ಭಟ: ಸೈನ್ಯ; ತಾಳು: ಹೊಂದು, ಪಡೆ; ಜವಳಿ: ಬಟ್ಟೆ, ಸೀರೆ, ಪಂಚೆ; ತೆಗೆ: ಹೊರತರು; ಮನ: ಮನಸ್ಸು: ಭೀತಿ: ಭಯ; ಗವಸಣಿಗೆ: ಮುಸುಕು, ಮರೆ; ಘಾಡಿಸು: ವ್ಯಾಪಿಸು; ಜಾಳಿಸು: ಚಲಿಸು, ನಡೆ; ಅದಟ: ಶೂರ, ಪರಾಕ್ರಮಿ; ಪಸರಣ: ಹರಡುವಿಕೆ; ಸವೆ: ಕಡಿಮೆಯಾಗು; ಶೌರ್ಯ: ಪರಾಕ್ರಮ; ಘಾಯ: ಪೆಟ್ಟು; ಘಲ್ಲಿಸು: ಪೀಡಿಸು; ಅವಯವ: ದೇಹ; ಮಡ: ಪಾದದ ಹಿಂಭಾಗ; ಮುರಿ: ಸೀಳು; ಮೋಹರ: ಯುದ್ಧ; ಅವನಿಪತಿ: ರಾಜ; ನಿಲವ: ಸ್ಥಿತಿ; ನೋಡು: ವೀಕ್ಷಿಸು; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ನಗು: ಹರ್ಷ;

ಪದವಿಂಗಡಣೆ:
ತವಕ +ತಗ್ಗಿತು +ಭಟರ +ತಾಳಿಗೆ
ಜವಳಿ+ತೆಗೆದುದು +ಮನಕೆ +ಭೀತಿಯ
ಗವಸಣಿಗೆ +ಘಾಡಿಸಿತು +ಜಾಳಿಸಿತ್+ಅದಟರ+ಪಸರಣ
ಸವೆದ +ಶೌರ್ಯದ +ಘಾಯ +ಘಲ್ಲಿಸಿತ್
ಅವಯವದ +ಮಡಮುರಿವ+ ಮೋಹರದ್
ಅವನಿಪತಿಗಳ +ನಿಲವ +ನೋಡಿದನ್+ಅಸುರರಿಪು +ನಗುತ

ಅಚ್ಚರಿ:
(೧) ರೂಪಕದ ಪ್ರಯೋಗ – ಜವಳಿದೆಗೆದುದು ಮನಕೆ ಭೀತಿಯ

ಪದ್ಯ ೩೭: ದ್ರೋಣನು ಪಾಂಡವ ಸೈನ್ಯಕ್ಕೆ ಏನೆಂದು ಹೇಳಿದನು?

ಅಕಟ ಫಡ ಕುನ್ನಿಗಳಿಗಸುರಾಂ
ತಕನ ಕಪಟದ ಮಂತ್ರವೇ ಬಾ
ಧಕವಿದಲ್ಲದೆ ನಿಮಗೆ ಸೋಲುವುದುಂಟೆ ಕುರುಸೇನೆ
ಸಕಲ ಸನ್ನಾಹದಲಿ ಯಾದವ
ನಿಕರ ಸಹಿತೀಯಿರುಳು ರಣದಲಿ
ಚಕಿತರಾಗದೆ ಜೋಡಿಸೆನುತಿದಿರಾದನಾ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೃಷ್ಣನ ಕಪಟಮಂತ್ರವೇ ನಮಗೆ ಬಾಧಕವಾಗಿ ಈ ಹಗಲು ನಾವು ಸೋತೆವು. ಅಯ್ಯೋ ಕುನ್ನಿಗಳೇ, ನೀವಲ್ಲ ಗೆದ್ದದ್ದು, ನಿಮಗೆ ಕುರುಸೇನೆ ಸೋತೀತೇ? ಸಮಸ್ತ ಸನ್ನಾಹದೊಡನೆ ಈ ರಾತ್ರಿ ನಾವು ಯಾದವರೊಡನೆ ಯುದ್ಧಕ್ಕೆ ಬಂದಿದ್ದೇವೆ, ವಿಸ್ಮಯ ಪಡದೆ ಯುದ್ಧಕ್ಕೆ ಬನ್ನಿ ಎಂದು ದ್ರೋಣನು ಕೂಗಿದನು.

ಅರ್ಥ:
ಅಕಟ: ಅಯ್ಯೋ; ಫಡ: ತಿರಸ್ಕಾರದ ಮಾತು; ಕುನ್ನಿ: ನಾಯಿ; ಅಸುರ: ರಾಕ್ಷಸ; ಅಂತಕ: ಸಾವು; ಅಸುರಾಂತಕ: ಕೃಷ್ಣ; ಕಪಟ: ಮೋಸ; ಮಂತ್ರ: ವಿಚಾರ, ಆಲೋಚನೆ; ಬಾಧಕ: ತೊಂದರೆ ಮಾಡುವವ; ಸೋಲು: ಪರಾಭವ; ಸಕಲ: ಎಲ್ಲಾ; ಸನ್ನಾಹ: ಸನ್ನೆ, ಸುಳಿವು; ನಿಕರ: ಗುಂಪು; ಸಹೀತ: ಜೊತೆ; ಇರುಳು: ರಾತ್ರಿ; ರಣ: ಯುದ್ಧ; ಚಕಿತ: ಬೆರಗುಗೊಂಡು; ಜೋಡಿಸು: ಸೇರಿಸು; ಇದಿರು: ಎದುರು;

ಪದವಿಂಗಡಣೆ:
ಅಕಟ+ ಫಡ +ಕುನ್ನಿಗಳಿಗ್+ಅಸುರಾಂ
ತಕನ +ಕಪಟದ +ಮಂತ್ರವೇ +ಬಾ
ಧಕವ್+ಇದಲ್ಲದೆ +ನಿಮಗೆ +ಸೋಲುವುದುಂಟೆ +ಕುರುಸೇನೆ
ಸಕಲ +ಸನ್ನಾಹದಲಿ +ಯಾದವ
ನಿಕರ+ ಸಹಿತ್+ಈ+ಇರುಳು +ರಣದಲಿ
ಚಕಿತರಾಗದೆ +ಜೋಡಿಸೆನುತ್+ಇದಿರಾದನಾ +ದ್ರೋಣ

ಅಚ್ಚರಿ:
(೧) ಕೌರವರಿಗೆ ತೊಂದರೆಯಾದದ್ದು – ಅಸುರಾಂತಕನ ಕಪಟದ ಮಂತ್ರವೇ ಬಾಧಕವ್
(೨) ಪಾಂಡವರನ್ನು ತೆಗಳುವ ಪರಿ – ಅಕಟ ಫಡ ಕುನ್ನಿಗಳ್

ಪದ್ಯ ೩೬: ಪಾಂಡವರ ಮೇಲೆ ಕೌರವರ ಆಕ್ರಮಣ ಹೇಗಿತ್ತು?

ಮತ್ತೆ ಹೊಕ್ಕುದು ಭಟರಮಮ ದಿಗು
ಭಿತ್ತಿ ಬಿರಿಯಲು ಮೊರೆವ ಭೇರಿಯ
ಕಿತ್ತು ನೆಲ ಹೊಡೆಮರಳೆ ಮೊಳಗುವ ಪಟಹ ಡಿಂಡಿಮದ
ಹತ್ತು ಸಾವಿರ ನೃಪರು ರಿಪುಗಳ
ಮುತ್ತಿದರು ಮುಸುಕಿದರು ಮೆಯ್ಯಲಿ
ಮೆತ್ತಿದರು ಮೊನೆಗಣೆಗಳನು ಪಾಂಡವರ ಬಲದೊಳಗೆ (ದ್ರೋಣ ಪರ್ವ, ೧೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವ ಭಟರು ಮತ್ತೆ ನುಗ್ಗಿದರು. ಭೇರಿಯ ಬಡಿತಕ್ಕೆ ದಿಕ್ಪಟಗಳು ಬಿರಿದವು. ನೆಲ ಮಗ್ಗುಲಾಗಿ ಬೀಳುವಂತೆ ಡಿಂಡಿಮ ಪಟಹಗಳನ್ನು ಬಡಿದರು. ಹತ್ತು ಸಾವಿರ ರಾಜರು ಮುತ್ತಿ ಬಾಣಗಳಿಂದ ಪಾಂಡವರ ಸೈನ್ಯದ ಯೋಧರ ಮೈಗಳನ್ನು ಮೆತ್ತಿದರು.

ಅರ್ಥ:
ಹೊಕ್ಕು: ಸೇರು; ಭಟ: ಸೈನಿಕ; ದಿಗು: ದಿಕ್ಕು; ಭಿತ್ತಿ: ಗೋಡೆ; ಬಿರಿ: ಬಿರುಕು, ಸೀಳು; ಮೊರೆ: ಧ್ವನಿ ಮಾಡು, ಝೇಂಕರಿಸು; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ; ಕಿತ್ತು: ಕಳಚು; ನೆಲ: ಭೂಮಿ; ಹೊಡೆಮರಳು: ಹಿಂದಕ್ಕೆ ತಿರುಗಿಸು; ಮೊಳಗು: ಧ್ವನಿ, ಸದ್ದು; ಪಟಹ: ನಗಾರಿ; ಡಿಂಡಿಮ: ಒಂದು ಬಗೆಯ ಚರ್ಮವಾದ್ಯ; ಸಾವಿರ: ಸಹಸ್ರ; ನೃಪ: ರಾಜ; ರಿಪು: ವೈರಿ; ಮುತ್ತು: ಆವರಿಸು; ಮುಸುಕು: ಹೊದಿಕೆ; ಯೋನಿ; ಮೆಯ್ಯಲಿ: ತನುವಿನಲ್ಲಿ; ಮೆತ್ತು: ಬಳಿ, ಲೇಪಿಸು; ಮೊನೆ: ತುದಿ, ಕೊನೆ; ಕಣೆ: ಬಾಣ; ಬಲ: ಸೈನ್ಯ;

ಪದವಿಂಗಡಣೆ:
ಮತ್ತೆ +ಹೊಕ್ಕುದು +ಭಟರ್+ಅಮಮ +ದಿಗು
ಭಿತ್ತಿ+ ಬಿರಿಯಲು +ಮೊರೆವ +ಭೇರಿಯ
ಕಿತ್ತು +ನೆಲ +ಹೊಡೆಮರಳೆ+ ಮೊಳಗುವ +ಪಟಹ +ಡಿಂಡಿಮದ
ಹತ್ತು +ಸಾವಿರ +ನೃಪರು +ರಿಪುಗಳ
ಮುತ್ತಿದರು +ಮುಸುಕಿದರು +ಮೆಯ್ಯಲಿ
ಮೆತ್ತಿದರು +ಮೊನೆಗಣೆಗಳನು +ಪಾಂಡವರ +ಬಲದೊಳಗೆ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮುತ್ತಿದರು ಮುಸುಕಿದರು ಮೆಯ್ಯಲಿ ಮೆತ್ತಿದರು ಮೊನೆಗಣೆಗಳನು