ಪದ್ಯ ೨೫: ಧೃಷ್ಟದ್ಯುಮ್ನನು ಕೌರವ ಸೈನ್ಯವನ್ನು ಹೇಗೆ ಹಂಗಿಸಿದನು?

ಸೋತ ಬಲ ಸಂವರಿಸಿಕೊಂಡುದು
ಪೂತುರೇ ರಣವೆಂಬುದೆಮ್ಮಯ
ಧಾತು ಕಲಿ ಮೂದಲಿಸಿ ಕರೆದರೆ ರಾಜ್ಯಸಿರಿಯೇಕೆ
ಭೀತಿ ಮನದಲಿ ಪೌರುಷಾಂಗದ
ಮಾತು ಮುಖದಲಿ ಮುರಿವು ಕಾಲಲಿ
ಬೂತುಗಳು ಕುರುವೀರರೆನುತಿದಿರಾದುದರಿಸೇನೆ (ದ್ರೋಣ ಪರ್ವ, ೧೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದವರು ಅಬ್ಭಾ ಸೋತು ಹೋಗಿದ್ದ ಸೈನ್ಯ ಸುಧಾರಿಸಿಕೊಂಡು ಯುದ್ಧಕ್ಕೆ ಬಂದಿದೆ. ಯುದ್ಧವು ನಮ್ಮ ಸಹಜ ಶಕ್ತಿ. ಶತ್ರುವೀರರು ಮೂದಲಿಸಿದ ಮಾತ್ರಕ್ಕೆ ರಾಜ್ಯಶ್ರೀಯನ್ನು ಹೇಗೆ ಪಡೆಯಲು ಸಾಧ್ಯ? ಶತ್ರುಗಳ ಮನಸ್ಸಿನಲ್ಲಿ ಭಯ ತುಂಬಿದೆ. ಪೌರುಷ ಮಾತಿನಲ್ಲಿ ಉಕ್ಕುತ್ತಿದೆ. ಕಾಲುಗಳು ತಿರುಗಿ ಓಡುತ್ತಿವೆ. ಕೌರವ ವೀರರು ನಾಚಿಕೆಯಿಲ್ಲದ ಹೇಡಿಗಳು ಎಂದು ಧೃಷ್ಟದ್ಯುಮ್ನನು ಮೂದಲಿಸಿದನು.

ಅರ್ಥ:
ಸೋತು: ಪರಾಭವ; ಸಂವರಿಸು: ಸಮಾಧಾನಗೊಳಿಸು; ಪೂತು: ಭಲೇ; ರಣ: ಯುದ್ಧ; ಧಾತು: ತೇಜಸ್ಸು, ಮೂಲವಸ್ತು; ಕಲಿ: ಶೂರ; ಮೂದಲಿಸು: ಹಂಗಿಸು; ಕರೆ: ಬರೆಮಾಡು; ರಾಜ್ಯ: ರಾಷ್ಟ್ರ; ಸಿರಿ: ಸಂಪತ್ತು; ಭೀತಿ: ಭಯ; ಮನ: ಮನಸ್ಸು; ಪೌರುಷ: ಪರಾಕ್ರಮ; ಮಾತು: ನುಡಿ; ಮುಖ: ಆನನ; ಮುರಿ: ಸೀಳು; ಕಾಲು: ಪಾದ; ಬೂತು: ಕುಚೋದ್ಯ, ಕುಚೇಷ್ಟೆ; ಇದಿರು: ಎದುರು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಸೋತ +ಬಲ +ಸಂವರಿಸಿಕೊಂಡುದು
ಪೂತುರೇ +ರಣವೆಂಬುದ್+ಎಮ್ಮಯ
ಧಾತು +ಕಲಿ+ ಮೂದಲಿಸಿ +ಕರೆದರೆ+ ರಾಜ್ಯಸಿರಿಯೇಕೆ
ಭೀತಿ+ ಮನದಲಿ +ಪೌರುಷಾಂಗದ
ಮಾತು +ಮುಖದಲಿ+ ಮುರಿವು +ಕಾಲಲಿ
ಬೂತುಗಳು+ ಕುರುವೀರರೆನುತ್+ ಇದಿರಾದುದ್+ಅರಿಸೇನೆ

ಅಚ್ಚರಿ:
(೧) ಸೈನಿಕರನ್ನು ಹುರಿದುಂಬಿಸುವ ಪರಿ – ರಣವೆಂಬುದೆಮ್ಮಯ ಧಾತು ಕಲಿ ಮೂದಲಿಸಿ ಕರೆದರೆ ರಾಜ್ಯಸಿರಿಯೇಕೆ

ಪದ್ಯ ೨೪: ಧೃಷ್ಟದ್ಯುಮ್ನನು ಯಾರನ್ನು ಕರೆಸಿದನು?

ಹಿಂದೆ ಸೆಳೆದುದು ವೈರಿ ಬಲ ಭಟ
ವೃಂದ ನಿಲಲಿ ಕಿರೀಟಿ ಭೀಮರ
ಕುಂದುಗಾಬುದು ಲೋಕ ನಮ್ಮನು ತೆಗೆದು ಹಿಂಗಿದರೆ
ಬಂದ ಜಯವಕ್ಕುವುದು ರಜನಿಯ
ಕೊಂದೆವಾದರೆ ನಮಗೆ ಸರಿಯಿ
ಲ್ಲೆಂದು ಧೃಷ್ಟದ್ಯುಮ್ನ ಕರೆಸಿದನಖಿಳನಾಯಕರ (ದ್ರೋಣ ಪರ್ವ, ೧೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ನಮ್ಮಿಂದ ಹಿಂದೆ ಸರಿದಿದ್ದ ವೈರಿ ಸೈನ್ಯವು ಈ ರಾತ್ರಿ ಯುದ್ಧಕ್ಕೆ ಆಯುಧವನ್ನು ಸಜ್ಜುಮಾಡಿ ಕೊಂಡು ಬಂದಿದೆ. ನಮ್ಮನ್ನು ಅವರು ಸೋಲಿಸಿದರೆ ಭೀಮಾರ್ಜುನರ ಬಲಹೀನತೆಯಿಂದ ಸೋಲಾಯಿತು ಎಂದು ಲೋಕವು ನಮ್ಮನ್ನು ದೂರುತ್ತದೆ. ಈ ರಾತ್ರಿಯನ್ನು ಕಳೆದರೆ ನಾವು ಗೆದ್ದಂತೆ. ನಮಗೆ ಯಾರು ಸಮಾನರು ಎಂದುಕೊಂಡು ಧೃಷ್ಟದ್ಯುಮ್ನನು ಸೇನಾನಾಯಕರನ್ನು ಕರೆಸಿದನು.

ಅರ್ಥ:
ಹಿಂದೆ: ಭೂತಕಾಲ, ಆಗಿಹೋದ; ಸೆಳೆ: ಆಕರ್ಷಿಸು; ವೈರಿ: ಶತ್ರು; ಬಲ: ಸೈನ್ಯ; ಭಟ: ಪರಾಕ್ರಮಿ; ವೃಂದ: ಗುಂಪು; ನಿಲಲಿ: ನಿಂತುಕೊಳ್ಳು; ಕಿರೀಟಿ: ಅರ್ಜುನ; ಕುಂದು: ಕೊರತೆ, ನೂನ್ಯತೆ; ಲೋಕ: ಜಗತ್ತು; ತೆಗೆ: ಹೊರತರು; ಹಿಂಗು: ಕಡಮೆಯಾಗು; ಬಂದು: ಆಗಮಿಸು; ಜಯ: ಗೆಲುವು; ರಜನಿ: ರಾತ್ರಿ; ಕೊಂದು: ಸಾಯಿಸು, ತಳ್ಳು; ಸರಿ: ಸಮಾನ; ಕರೆಸು: ಬರೆಮಾಡು; ಅಖಿಳ: ಎಲ್ಲಾ; ನಾಯಕ: ಒಡೆಯ;

ಪದವಿಂಗಡಣೆ:
ಹಿಂದೆ +ಸೆಳೆದುದು +ವೈರಿ +ಬಲ +ಭಟ
ವೃಂದ +ನಿಲಲಿ +ಕಿರೀಟಿ +ಭೀಮರ
ಕುಂದುಗಾಬುದು +ಲೋಕ +ನಮ್ಮನು +ತೆಗೆದು +ಹಿಂಗಿದರೆ
ಬಂದ+ ಜಯವಕ್ಕುವುದು +ರಜನಿಯ
ಕೊಂದೆವಾದರೆ+ ನಮಗೆ +ಸರಿಯಿ
ಲ್ಲೆಂದು +ಧೃಷ್ಟದ್ಯುಮ್ನ +ಕರೆಸಿದನ್+ಅಖಿಳ+ನಾಯಕರ

ಅಚ್ಚರಿ:
(೧) ಈ ರಾತ್ರಿ ಕಳೆದರೆ ಎಂದು ಹೇಳುವ ಪರಿ – ರಜನಿಯ ಕೊಂದೆವಾದರೆ ನಮಗೆ ಸರಿಯಿಲ್ಲೆಂದು
(೨) ಜಗ ನಮ್ಮನ್ನು ಆಡಿಕೊಳ್ಳುತ್ತದೆ ಎಂದು ಹೇಳುವ ಪರಿ – ಲೋಕ ನಮ್ಮನು ತೆಗೆದು ಹಿಂಗಿದರೆ ಬಂದ ಜಯವಕ್ಕುವುದು

ಪದ್ಯ ೨೩: ಸೈನ್ಯವು ಹೇಗೆ ಸಿದ್ಧವಾಯಿತು?

ನರನ ಕರೆ ಕರೆ ಸಿಂಧುರಾಜನ
ಹರಿಬವೆಮ್ಮದು ತಮ್ಮದೆಂದ
ಬ್ಬರಿಸಿ ನೂಕಿತು ಕದನ ಲಂಪಟರಾಗಿ ಪಟುಭಟರು
ಸರಿಸದಲಿ ಲಟಕಟಿಸಿ ಮೋಹರ
ಮರಳಿ ನಿಂದುದು ರಣಕೆ ರಜನೀ
ಚರರ ಥಟ್ಟಣೆ ಧಾತುಗೆಡಿಸಿತು ದಿಟ್ಟರುಬ್ಬಟೆಯ (ದ್ರೋಣ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯುದ್ಧ ಲಂಪಟರಾದ ವೀರರು, ಸೈಂಧವನ ಸೇಡು ನಮ್ಮದು, ಅರ್ಜುನನನ್ನು ಕರೆಯಿರಿ ಎಂದು ಅಬ್ಬರಿಸಿ ನುಗ್ಗಿದರು. ಒಂದೇ ಸಾಲಿನಲ್ಲಿ ಉತ್ಸಾಹಿಸಿ ಸೈನ್ಯವು ರಾತ್ರಿಯಲ್ಲಿ ನಿಂತಿತು. ಅವರ ಉತ್ಸಾಹವು ಶತ್ರು ವೀರರ ಧೈರ್ಯವನ್ನು ಅಲುಗಾಡಿಸಿತು.

ಅರ್ಥ:
ನರ: ಅರ್ಜುನ; ಕರೆ: ಬರೆಮಾಡು; ರಾಜ: ಅರಸ; ಹರಿಬ: ಕೆಲಸ, ಕಾರ್ಯ; ಅಬ್ಬರಿಸು: ಗರ್ಜಿಸು; ನೂಕು: ತಳ್ಳು; ಕದನ: ಯುದ್ಧ; ಲಂಪಟ: ವಿಷಯಾಸಕ್ತ, ಕಾಮುಕ; ಪಟುಭಟ: ಪರಾಕ್ರಮಿ; ಸರಿಸ:ನೇರವಾಗಿ, ಸರಳವಾಗಿ; ಲಟಕಟ: ಉದ್ರೇಕ, ಚಕಿತನಾಗು; ಮೋಹರ: ಯುದ್ಧ; ಮರಳಿ: ಹಿಂದಿರುಗು ನಿಂದು: ನಿಲ್ಲು; ರಣ: ಯುದ್ಧ; ರಜನೀ: ರಾತ್ರಿ; ಚರರು: ಓಡಾಡುವ; ಥಟ್ಟಣೆ: ಗುಂಪು; ಧಾತು: ತೇಜಸ್ಸು, ಮೂಲವಸ್ತು; ಕೆಡಿಸು: ಹಾಳುಮಾಡು; ದಿಟ್ಟ: ವೀರ; ಉಬ್ಬಟೆ: ಅತಿಶಯ, ಹಿರಿಮೆ;

ಪದವಿಂಗಡಣೆ:
ನರನ +ಕರೆ +ಕರೆ +ಸಿಂಧುರಾಜನ
ಹರಿಬವ್+ಎಮ್ಮದು +ತಮ್ಮದೆಂದ್
ಅಬ್ಬರಿಸಿ +ನೂಕಿತು +ಕದನ +ಲಂಪಟರಾಗಿ +ಪಟುಭಟರು
ಸರಿಸದಲಿ +ಲಟಕಟಿಸಿ +ಮೋಹರ
ಮರಳಿ +ನಿಂದುದು +ರಣಕೆ +ರಜನೀ
ಚರರ +ಥಟ್ಟಣೆ +ಧಾತುಗೆಡಿಸಿತು +ದಿಟ್ಟರ್+ಉಬ್ಬಟೆಯ

ಅಚ್ಚರಿ:
(೧) ಶೂರರ ಉತ್ಸಾಹ – ಅಬ್ಬರಿಸಿ ನೂಕಿತು ಕದನ ಲಂಪಟರಾಗಿ ಪಟುಭಟರು
(೨) ಲಟಕಟಿಸಿ, ಲಂಪಟ – ಲ ಕಾರದ ಪದಗಳ ಬಳಕೆ

ಪದ್ಯ ೨೨: ರಣವಾದ್ಯಗಳ ಶಬ್ದವು ಹೇಗಿತ್ತು?

ಲಟಕಟಿಸಿತಾಹವಕೆ ರಾಯನ
ಕಟಕ ಸುಮ್ಮಾನದಲಿ ಪೊಳಗುವ
ಪಟಹ ಡಮರು ಮೃದಂಗ ಘನಗಂಭೀರ ಭೇರಿಗಳ
ಚಟುಳ ಕಹಳೆಯ ಗಜರು ಮಿಗಲು
ತ್ಕಟಿಸಿತಂಬುಜ ಭವನ ನಿರ್ಮಿತ
ಘಟ ಬಿರಿಯೆ ಬಿಗುಹಾಯ್ತು ದ್ರೋಣನ ಸಮರಸನ್ನಾಹ (ದ್ರೋಣ ಪರ್ವ, ೧೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕೌರವನ ಸೈನ್ಯವು ಯುದ್ಧಕ್ಕೆ ಅತಿ ಉತ್ಸಾಹದಿಂದ ಹೊರಟಿತು. ತಮ್ಮಟೆ, ಡಮರುಗ, ಮೃದಮ್ಗ, ಭೇರಿ, ಕಹಳೆಗಳು ಮೊಳಗುತ್ತಿದ್ದವು. ರಣವಾದ್ಯಗಳ ಶಬ್ದವು ಎಲ್ಲೆಡೆ ವ್ಯಾಪಿಸಲು, ಬ್ರಹ್ಮಾಂಡವು ಬಿರಿಯಿತು. ದ್ರೋಣನ ಸಮರಸನ್ನಾಹ ಪ್ರಬಲವಾಗಿತ್ತು.

ಅರ್ಥ:
ಲಟಕಟ: ಉದ್ರೇಕಗೊಳ್ಳು; ಆಹವ: ಯುದ್ಧ; ರಾಯ: ರಾಜ; ಕಟಕ: ಸೈನ್ಯ; ಸುಮ್ಮಾನ: ಸಂತೋಷ, ಹಿಗ್ಗು; ಪಟಹ: ನಗಾರಿ; ಡಮರು: ಒಂದು ಬಗೆಯ ಚರ್ಮವಾದ್ಯ; ಮೃದಂಗ: ಒಂದು ಬಗೆಯ ಚರ್ಮವಾದ್ಯ/ತಾಳವಾದ್ಯ; ಘನ: ಶ್ರೇಷ್ಠ; ಗಂಭೀರ: ಆಳವಾದುದು, ಗಾಂಭೀರ್ಯ; ಭೇರಿ: ಚರ್ಮವಾದ್ಯ; ಚಟುಳ: ಲವಲವಿಕೆ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಗಜರು: ಆರ್ಭಟಿಸು; ಮಿಗಲು: ಹೆಚ್ಚು; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಅಂಬುಜ: ತಾವರೆ; ಭವನ: ಮನೆ; ನಿರ್ಮಿತ: ಕಟ್ಟಿದ; ಘಟ: ಕೊಡ, ಗಡಿಗೆ; ಬಿರಿ: ತುಂಬು; ಬಿಗುಹು: ಗಟ್ಟಿ; ಸಮರ: ಯುದ್ಧ; ಸನ್ನಾಹ: ಗುಂಪು;

ಪದವಿಂಗಡಣೆ:
ಲಟಕಟಿಸಿತ್+ಆಹವಕೆ +ರಾಯನ
ಕಟಕ +ಸುಮ್ಮಾನದಲಿ +ಪೊಳಗುವ
ಪಟಹ +ಡಮರು +ಮೃದಂಗ +ಘನಗಂಭೀರ +ಭೇರಿಗಳ
ಚಟುಳ +ಕಹಳೆಯ +ಗಜರು +ಮಿಗಲ್
ಉತ್ಕಟಿಸಿತ್+ಅಂಬುಜ +ಭವನ +ನಿರ್ಮಿತ
ಘಟ +ಬಿರಿಯೆ +ಬಿಗುಹಾಯ್ತು +ದ್ರೋಣನ +ಸಮರ+ಸನ್ನಾಹ

ಅಚ್ಚರಿ:
(೧) ರಣವಾದ್ಯಗಳ ಪರಿಚಯ – ಪಟಹ, ಡಮರು, ಮೃದಂಗ, ಭೇರಿ, ಕಹಳೆ
(೨) ಬ್ರಹ್ಮಾಂಡ ಎಂದು ಹೇಳುವ ಪರಿ – ಮಿಗಲುತ್ಕಟಿಸಿತಂಬುಜ ಭವನ ನಿರ್ಮಿತ ಘಟ ಬಿರಿಯೆ ಬಿಗುಹಾಯ್ತು

ಪದ್ಯ ೨೧: ದ್ರೋಣನು ಸೈನಿಕರಿಗೆ ಏನೆಂದು ಬೋಧಿಸಿದನು?

ಉರವಣಿಸುವುದು ಕೊಂಡ ಹಜ್ಜೆಗೆ
ಮುರಿಯಲಾಗದು ಶಸ್ತ್ರ ಧಾರಾ
ಪರಮತೀರ್ಥಸ್ನಾನ ತೊಳೆವುದು ಭವದ ಕಲ್ಬಿಷವ
ಹರಣದಲಿ ಕಕ್ಕುಲಿತೆ ಬೇಡು
ದ್ಧರಿಸುವುದು ಸತ್ಕುಲತೆಯನು ಸಂ
ವರಿಸುವುದು ಸದ್ಗತಿಯನೆಂದನು ದ್ರೋಣ ನಿಜಬಲಕೆ (ದ್ರೋಣ ಪರ್ವ, ೧೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ದ್ರೋಣನು ತನ್ನ ಸೈನ್ಯಕ್ಕೆ ವೇಗದಿಂದ ಯುದ್ಧಕ್ಕೆ ಮುಂದುವರಿದು ಇಟ್ಟ ಹೆಜ್ಜೆಯನ್ನು ಹಿಂದೆಗೆಯಬೇಡಿರಿ. ಆಯುಧಧಾರೆಯ ತೀರ್ಥಸ್ನಾನವು ಸಂಸಾರದ ಪಾಪವನ್ನು ತೊಳೆದು ಹಾಕುತ್ತದೆ. ಪ್ರಾಣದ ಮೇಲೆ ಅತಿಮೋಹವನ್ನು ಬಿಟ್ಟು, ನಿಮ್ಮ ಸತ್ಕುಲವನ್ನು ಉದ್ಧಾರ ಮಾಡಿರಿ, ಸದ್ಗತಿಯನ್ನು ಪಡೆಯಿರಿ ಎಂದು ಬೋಧಿಸಿದನು.

ಅರ್ಥ:
ಉರವಣಿಸು: ಉತ್ಸಾಹದಿಂದಿರು, ಆತುರಿಸು; ಹಜ್ಜೆ: ಹೆಜ್ಜೆ, ಪಾದ; ಮುರಿ: ಸೀಳು; ಶಸ್ತ್ರ: ಆಯುಧ; ಧಾರೆ: ಪ್ರವಾಹ; ಪರಮ: ಶ್ರೇಷ್ಠ; ತೀರ್ಥ: ಪವಿತ್ರವಾದ ನೀರು; ಸ್ನಾನ: ಮಜ್ಜನ; ತೊಳೆ: ಸ್ವಚ್ಛಮಾಡು, ಶುದ್ಧಗೊಳಿಸು; ಭವ: ಇರುವಿಕೆ, ಅಸ್ತಿತ್ವ; ಕಿಲ್ಬಿಷ: ಪಾಪ; ಹರಣ: ಜೀವ, ಪ್ರಾಣ; ಕಕ್ಕುಲತೆ: ಆಸಕ್ತಿ, ಪ್ರೀತಿ; ಉದ್ಧರಿಸು: ಏಳಿಗೆ; ಕುಲ: ವಂಶ; ಸಂವರಿಸು: ಸಮಾಧಾನಗೊಳಿಸು, ಕಾಪಾಡು; ಸದ್ಗತಿ: ಮೋಕ್ಷ; ಬಲ: ಸೈನ್ಯ;

ಪದವಿಂಗಡಣೆ:
ಉರವಣಿಸುವುದು +ಕೊಂಡ +ಹಜ್ಜೆಗೆ
ಮುರಿಯಲಾಗದು +ಶಸ್ತ್ರ +ಧಾರಾ
ಪರಮತೀರ್ಥಸ್ನಾನ +ತೊಳೆವುದು +ಭವದ+ ಕಲ್ಬಿಷವ
ಹರಣದಲಿ +ಕಕ್ಕುಲಿತೆ +ಬೇಡ್
ಉದ್ಧರಿಸುವುದು +ಸತ್ಕುಲತೆಯನು +ಸಂ
ವರಿಸುವುದು +ಸದ್ಗತಿಯನೆಂದನು +ದ್ರೋಣ +ನಿಜಬಲಕೆ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸತ್ಕುಲತೆಯನು ಸಂವರಿಸುವುದು ಸದ್ಗತಿಯನೆಂದನು
(೨) ದ್ರೋಣರ ಹಿತನುಡಿ – ಶಸ್ತ್ರ ಧಾರಾ ಪರಮತೀರ್ಥಸ್ನಾನ ತೊಳೆವುದು ಭವದ ಕಲ್ಬಿಷವ

ಪದ್ಯ ೨೦: ದ್ರೋಣರು ಯಾರನ್ನು ಸನ್ಮಾನಿಸಿದರು?

ಕರೆಕರೆದು ರಥಿಕರಿಗೆ ಮಾವಂ
ತರಿಗೆ ಕಾಲಾಳಿಂಗೆ ರಾವು
ತ್ತರಿಗೆ ಕೊಡಿಸಿದನವರವರಿಗವರಂಗದಾಯುಧವ
ತರಿಸಿ ಸಾದು ಜವಾದಿಯನು ಕ
ರ್ಪುರದ ವೀಳೆಯವುಡೆಗೊರೆಗಳಲಿ
ಹಿರಿದು ಪತಿಕರಿಸಿದನು ಪರಿವಾರದವನು ಕಲಿ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಥಿಕರು, ಮಾವುತರು, ಕಾಲಾಳುಗಳು, ರಾವುತರನ್ನು ಕರೆಕರೆದು ಕೈದುಗಳನ್ನು ಕೊಡಿಸಿದನು. ಸಾದು, ಜವಾಗಿ, ಕರ್ಪೂರ, ವೀಳೆಯ, ಉಡುಗೊರೆಗಳನ್ನು ಕೊಟ್ಟು ದ್ರೋಣನು ಸೈನಿಕರನ್ನು ಸನ್ಮಾನಿಸಿದನು.

ಅರ್ಥ:
ಕರೆ: ಬರೆಮಾಡು; ರಥಿಕ: ರಥದಲ್ಲಿ ಕುಳಿತು ಯುದ್ಧಮಾಡುವವ; ಮಾವುತ: ಆನೆಯನ್ನು ಪಳಗಿಸುವ; ಕಾಲಾಳು: ಸೈನಿಕ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕೊಡಿಸು: ಪಡೆ; ಆಯುಧ: ಶಸ್ತ್ರ; ತರಿಸು: ಬರೆಮಾದು; ಸಾದು: ಸಿಂಧೂರ; ಜವಾಜಿ: ಸುವಾಸನ ದ್ರವ್ಯ; ಕರ್ಪುರ: ಸುಗಂಧ ದ್ರವ್ಯ; ವೀಳೆ: ತಾಂಬೂಲ; ಉಡುಗೊರೆ: ಕಾಣಿಕೆ, ಬಳುವಳಿ; ಹಿರಿದು: ಹೆಚ್ಚಿನ; ಪತಿಕರಿಸು: ಅನುಗ್ರಹಿಸು; ಪರಿವಾರ: ಸಂಬಂಧಿಕರು; ಕಲಿ: ಶೂರ;

ಪದವಿಂಗಡಣೆ:
ಕರೆಕರೆದು +ರಥಿಕರಿಗೆ +ಮಾವಂ
ತರಿಗೆ+ ಕಾಲಾಳಿಂಗೆ +ರಾವು
ತ್ತರಿಗೆ +ಕೊಡಿಸಿದನ್+ಅವರ್+ಅವರಿಗ್+ಅವರಂಗದ್+ಆಯುಧವ
ತರಿಸಿ +ಸಾದು +ಜವಾದಿಯನು +ಕ
ರ್ಪುರದ +ವೀಳೆಯವ್+ಉಡೆಗೊರೆಗಳಲಿ
ಹಿರಿದು +ಪತಿಕರಿಸಿದನು +ಪರಿವಾರದವನು +ಕಲಿ +ದ್ರೋಣ

ಅಚ್ಚರಿ:
(೧) ರಥಿಕ, ಮಾವುತ, ಕಾಲಾಳು, ರಾವುತ – ಸೈನ್ಯದವರನ್ನು ಕರೆಯಲು ಬಳಸುವ ಪದಗಳು
(೨) ಕೊಡಿಸಿದನವರವರಿಗವರಂಗದಾಯುಧವ – ಪದದ ರಚನೆ

ಪದ್ಯ ೧೯: ದ್ರೋಣರ ಎದುರಿನಲ್ಲಿ ಏನನ್ನು ಸೇರಿಸಲಾಯಿತು?

ಎಣಿಸಲರಿಯೆನು ಬಂಡಿಗಳು ಸಂ
ದಣಿಸಿದವು ಹಕ್ಕರಿಕೆಗಳ ಹ
ಲ್ಲಣದ ಕವಚದ ಸೀಸಕದ ಜೋಡುಗಳ ರೆಂಚೆಗಳ
ಮಣಿಮಯದ ಮೋಹಳದ ಹಿರಿಯು
ಬ್ಬಣದ ಸಬಲದ ಶೂಲ ಸುರಗಿಯ
ಕಣೆಯ ಹೊರೆ ಚಾಚಿದವು ಕಟಕಾಚಾರ್ಯನಿದಿರಿನಲಿ (ದ್ರೋಣ ಪರ್ವ, ೧೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಷ್ಟು ಬಂಡಿಗಳು ಸೇರಿದವು, ಹಕ್ಕರಿಕೆ, ಹಲ್ಲಣ, ಕವಚ, ಶಿರಸ್ತ್ರಾನ, ಜೋಡುಗಳು, ಆನೆಯ ರಕ್ಷಾಕವಚಗಳು, ಹಿಡಿಕೆಯಿರುವ ಲಾಳವಿಂಡಿಗೆಗಳು, ಸಬಳ, ಶೂಲ, ಸುರಗಿ, ಬಾಣಗಳನ್ನು ಹೊರೆಕಟ್ಟಿ ಬಂಡಿಗಳಲ್ಲಿಟ್ಟರು ಎಂಬ ಎಣಿಕೆಯೇ ಸಿಗಲಿಲ್ಲ, ಇವೆಲ್ಲವೂ ದ್ರೋಣರ ಎದುರಿನಲ್ಲಿ ಸೇರಿಸಲಾಯಿತು.

ಅರ್ಥ:
ಎಣಿಸು: ಲೆಕ್ಕ ಹಾಕು; ಅರಿ: ತಿಳಿ; ಬಂಡಿ: ರಥ; ಸಂದಣಿಸು: ಗುಂಪುಗೂಡು; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಹಲ್ಲಣ: ಪಲ್ಲಣ, ಜೀನು, ತಡಿ; ಕವಚ: ಉಕ್ಕಿನ ಅಂಗಿ; ಸೀಸಕ: ಶಿರಸ್ತ್ರಾಣ; ಜೋಡು: ಜೊತೆ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಮಣಿ: ಬೆಲೆಬಾಳುವ ರತ್ನ; ಮೋಹಳ: ಆಕರ್ಷಕ; ಹಿರಿ: ದೊಡ್ಡ; ಉಬ್ಬಣ: ಚೂಪಾದ ಆಯುಧ; ಸಬಳ: ಈಟಿ; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ತ್ರಿಶೂಲ; ಸುರಗಿ: ಸಣ್ಣ ಕತ್ತಿ, ಚೂರಿ; ಕಣೆ: ಬಾಣ; ಹೊರೆ: ಭಾರ; ಚಾಚು: ಹರಡು; ಕಟಕ: ಸೈನ್ಯ ; ಆಚಾರ್ಯ: ಗುರು; ಇದಿರು: ಎದುರು;

ಪದವಿಂಗಡಣೆ:
ಎಣಿಸಲ್+ಅರಿಯೆನು +ಬಂಡಿಗಳು +ಸಂ
ದಣಿಸಿದವು +ಹಕ್ಕರಿಕೆಗಳ+ ಹ
ಲ್ಲಣದ +ಕವಚದ +ಸೀಸಕದ +ಜೋಡುಗಳ +ರೆಂಚೆಗಳ
ಮಣಿಮಯದ +ಮೋಹಳದ +ಹಿರಿಯು
ಬ್ಬಣದ+ ಸಬಳದ +ಶೂಲ +ಸುರಗಿಯ
ಕಣೆಯ +ಹೊರೆ +ಚಾಚಿದವು +ಕಟಕಾಚಾರ್ಯನ್+ಇದಿರಿನಲಿ

ಅಚ್ಚರಿ:
(೧) ಯುದ್ಧದ ಸಾಮಗ್ರಿಗಳನ್ನು ವಿವರಿಸುವ ಪದಗಳು – ಬಂಡಿ, ಹಕ್ಕರಿಕೆ, ಕವಚ, ಸೀಸಕ, ಸಬಳ, ಶೂಲ, ಸುರಗಿ

ಪದ್ಯ ೧೮: ರಾತ್ರಿ ಕಾಳಗಕ್ಕೆ ಯಾರನ್ನು ದ್ರೋಣನು ಕಳುಹಿಸಿದನು?

ಜರಿದ ಜೋಡನು ನೆರೆ ಹರಿದ ಹ
ಕ್ಕರಿಕೆಗಳ ನುಗ್ಗಾದ ಗುಳವನು
ಬಿರಿದ ಸೀಸಕ ಬಾಹುರಕ್ಕೆಯ ಮುರಿದ ಬಲ್ಲೆಹದ
ಅರೆಗಡಿದ ಬಿಲ್ಲುಗಳ ನೆಗ್ಗಿದ
ಹರಿಗೆಯನು ಮುಕ್ಕಾದ ಕೈದುವ
ತರಿಸಿ ಕಳುಹಿಸುತಿರ್ದನತಿರಭಸದಲಿ ಕಲಿ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಹರಿದ ಕವಚಗಳು, ಆನೆ ಕುದುರೆಗಳ ಹರಿದು ಹೋದ ಕವಚಗಳನ್ನು, ನುಗ್ಗಾಗಿದ್ದ ಆನೆಯ ಕವಚಗಲನ್ನು ಸೀಳಿದ್ದ ಶಿರಸ್ತ್ರಾಣಗಳನ್ನು, ಬಾಹುರಕ್ಷೆಗಳನ್ನು, ಮುರಿದ ಭಲ್ಯಗಳನ್ನು, ಅರೆತುಂಡಾದ ಬಿಲ್ಲುಗಳನ್ನು, ನೆಗ್ಗಿದ್ದ ಗುರಾಣಿಗಲನ್ನು, ಮುಕ್ಕಾದ ಆಯುಧಗಲನ್ನು ತರಿಸಿ ದ್ರೋಣನು ಅತಿವೇಗದಿಂದ ರಾತ್ರಿಕಾಳಗಕ್ಕೆ ಕಳಿಸಿದನು.

ಅರ್ಥ:
ಜರಿ: ತಿರಸ್ಕರಿಸು; ಜೋಡು: ಜೊತೆ, ಜೋಡಿ; ನೆರೆ: ಗುಂಪು ಸೇರು; ಹರಿ: ಸೀಳು; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ನುಗ್ಗು: ಚೂರು, ನುಚ್ಚು; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಬಿರಿ: ಸೀಳು; ಸೀಸಕ: ಶಿರಸ್ತ್ರಾಣ; ಬಾಹುರಕ್ಕೆ: ಬಾಹುರಕ್ಷೆ; ಮುರಿ: ಸೀಳು; ಬಲ್ಲೆ: ಈಟಿ; ಅರೆ: ಅರ್ಧ; ಕಡಿ: ಸೀಳು; ಬಿಲ್ಲು: ಚಾಪ; ನೆಗ್ಗು: ಕುಗ್ಗು, ಕುಸಿ; ಹರಿಗೆ: ತಲೆಪೆರಿಗೆ; ಮುಕ್ಕು: ಭಾಗಶಃ ಮುರಿದುಹೋದ ವಸ್ತು; ಕೈದು: ಆಯುಧ, ಶಸ್ತ್ರ, ಕತ್ತಿ; ಕಳುಹಿಸು: ತೆರಳು; ರಭಸ: ವೇಗ; ಕಲಿ: ಶೂರ;

ಪದವಿಂಗಡಣೆ:
ಜರಿದ +ಜೋಡನು +ನೆರೆ +ಹರಿದ +ಹ
ಕ್ಕರಿಕೆಗಳ +ನುಗ್ಗಾದ +ಗುಳವನು
ಬಿರಿದ+ ಸೀಸಕ +ಬಾಹುರಕ್ಕೆಯ +ಮುರಿದ +ಬಲ್ಲೆಹದ
ಅರೆ+ಕಡಿದ+ ಬಿಲ್ಲುಗಳ +ನೆಗ್ಗಿದ
ಹರಿಗೆಯನು +ಮುಕ್ಕಾದ +ಕೈದುವ
ತರಿಸಿ +ಕಳುಹಿಸುತಿರ್ದನ್+ಅತಿ+ರಭಸದಲಿ +ಕಲಿ +ದ್ರೋಣ

ಅಚ್ಚರಿ:
(೧) ಜರಿ, ಹರಿ, ನುಗ್ಗು, ಬಿರಿ, ಮುರಿ, ಅರೆಕಡ್, ನೆಗ್ಗು, ಮುಕ್ಕು – ಪದಗಳ ಬಳಕೆ

ಪದ್ಯ ೧೭: ದ್ರೋಣನು ಎಂಥಹವರನ್ನು ಯುದ್ಧಕ್ಕೆ ಕಳುಹಿಸಿದನು?

ಘಾಯವಡೆದಾನೆಗಳ ಕೈ ಮೈ
ನೋಯೆ ಕಾದಿದ ರಾಜಪುತ್ರರ
ನಾಯುಧದ ಮಳೆಗಳಲಿ ನನೆದ ಜವಾಯ್ಲ ತೇಜಿಗಳ
ಹಾಯಿದುರೆ ಸೊಪ್ಪಾದ ಶಕಟ ನಿ
ಕಾಯವನು ಪೂರಾಯದೇರಿನ
ನಾಯಕರ ಕರೆಕರೆದು ಬವರಕೆ ಕಳುಹಿದನು ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೀಗೆ ಕುರವನಿಗೆ ಹೇಳಿ, ದ್ರೋಣನು ಗಾಯಗೊಂಡ ಆನೆಗಳು, ಕೈ ಮೈ ನೋವಾದ ರಾಜಪುತ್ರರು, ಆಯುಧದ ಮಳೆಯಲ್ಲಿ ನೆನೆದ ವೇಗದ ಕುದುರೆಗಳು, ಹಗಲೆಲ್ಲಾ ಚಲಿಸಿ ಆಯಾಸಗೊಂಡ ರಥಗಳನ್ನು ಪೂರ್ತಿಗಾಯಗೊಂಡ ಸೇನಾ ನಾಯಕರನ್ನು ಕರೆಕರೆದು ಯುದ್ಧಕ್ಕೆ ಕಳುಹಿಸಿದನು.

ಅರ್ಥ:
ಘಾಯ: ಪೆಟ್ಟು; ಆನೆ: ಗಜ; ಕೈ: ಹಸ್ತ; ಮೈ: ತನು; ನೋವು: ಬೇನೆ, ಶೂಲೆ; ಕಾದು: ಹೋರಾಡು; ಪುತ್ರ: ಮಕ್ಕಳು; ಆಯುಧ: ಶಸ್ತ್ರ; ಮಳೆ: ವರ್ಷ; ನನೆ: ತೋಯು; ಜವಾಯ್ಲ: ವೇಗ; ತೇಜಿ: ಕುದುರೆ; ಹಾಯಿಸು: ಸೇರಿಸು, ಓಡಿಸು; ಸೊಪ್ಪಾದ: ಸೊರಗು; ಶಕಟ: ರಥ, ಬಂಡಿ; ನಿಕಾಯ: ಗುಂಪು; ಪೂರಾಯ: ಪರಿಪೂರ್ಣ; ತೇರು: ಬಂಡಿ; ನಾಯಕ: ಒಡೆಯ; ಕರೆ: ಬರೆಮಾಡು; ಬವರ: ಯುದ್ಧ; ಕಳುಹಿಸು: ತೆರಳು;

ಪದವಿಂಗಡಣೆ:
ಘಾಯವಡೆದ್+ಆನೆಗಳ +ಕೈ +ಮೈ
ನೋಯೆ +ಕಾದಿದ +ರಾಜಪುತ್ರರನ್
ಆಯುಧದ +ಮಳೆಗಳಲಿ +ನನೆದ +ಜವಾಯ್ಲ +ತೇಜಿಗಳ
ಹಾಯಿದುರೆ +ಸೊಪ್ಪಾದ +ಶಕಟ +ನಿ
ಕಾಯವನು +ಪೂರಾಯ+ತೇರಿನ
ನಾಯಕರ+ ಕರೆಕರೆದು +ಬವರಕೆ +ಕಳುಹಿದನು +ದ್ರೋಣ

ಅಚ್ಚರಿ:
(೧) ಶಕ್ತಿಯಿಲ್ಲದವರು ಎಂದು ಬಣ್ಣಿಸಲು – ಘಾಯವಡೆದ, ಕೈ ಮೈ ನೋಯೆ, ಆಯುಧದ ಮಳೆಗಳಲಿ ನನೆದ, ಸೊಪ್ಪಾದ

ಪದ್ಯ ೧೬: ಯಾವುದನ್ನು ಅಣಿ ಮಾಡಲು ದ್ರೋಣರು ಸೂಚಿಸಿದರು?

ಅರಸ ಮರುಳೈ ನೀನು ಸುರರನು
ಸರಕುಮಾಡನು ಸಕಲ ದೈವದ
ದೊರೆಯಲೇ ಹರನಾತನಸ್ತ್ರವನಾರು ತರುಬುವರು
ಹರನ ಶರವಿಲ್ಲಿನ್ನು ಹಗೆಗಳ
ನಿರುಳು ರಣದಲಿ ಹಿಂಡುವೆನು ಸಂ
ವರಿಸು ಕೈದೀವಿಗೆಯನೆಂದನು ದ್ರೋಣನುಬ್ಬಿನಲಿ (ದ್ರೋಣ ಪರ್ವ, ೧೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೋಣನು ತನ್ನ ಮಾತನ್ನು ಮುಂದುವರೆಸುತ್ತಾ, ರಾಜ ನಿನಗೇನು ಹುಚ್ಚೇ! ಎಲ್ಲ ದೈವಗಳ ದೊರೆಯಾದ ಶಿವನು ದೇವತೆಗಳನ್ನು ಲೆಕ್ಕಿಸುವುದಿಲ್ಲ. ಅರ್ಜುನನ ಬಳಿ ಇನ್ನು ಪಾಶುಪತಾಸ್ತ್ರವಿಲ್ಲ. ಈಗ ರಾತ್ರಿಯುದ್ಧದಲ್ಲಿ ವೈರಿಗಳನ್ನು ಹಿಂಡುತ್ತೇನೆ ಕೈದೀವಿಗೆಗಳನ್ನು ಸಿದ್ಧಗೊಳಿಸು ಎಂದು ದ್ರೋಣರು ಹೇಳಿದರು.

ಅರ್ಥ:
ಅರಸ: ರಾಜ; ಮರುಳೆ: ಮೂಢ; ಸುರ: ದೇವತೆ; ಸರಕು: ಸಾಮಾನು, ಸಾಮಗ್ರಿ; ಸಕಲ: ಎಲ್ಲಾ; ದೈವ: ಭಗವಂತ; ದೊರೆ: ಒಡೆಯ; ಹರ: ಶಿವ; ಅಸ್ತ್ರ: ಶಸ್ತ್ರ, ಆಯುಧ; ತರುಬು: ತಡೆ, ನಿಲ್ಲಿಸು; ಶರ: ಬಾಣ; ಹಗೆ: ವೈರಿ; ಇರುಳು: ರಾತ್ರಿ; ರಣ: ಯುದ್ಧ; ಹಿಂಡು: ಹಿಸುಕು, ಅದುಮು; ಸಂವರಿಸು: ಸಮಾಧಾನಗೊಳಿಸು, ಸಜ್ಜು ಮಾಡು; ಕೈದೀವಿಗೆ: ಪಂಜು; ಉಬ್ಬು: ಹಿಗ್ಗು;

ಪದವಿಂಗಡಣೆ:
ಅರಸ +ಮರುಳೈ +ನೀನು +ಸುರರನು
ಸರಕು+ಮಾಡನು +ಸಕಲ +ದೈವದ
ದೊರೆಯಲೇ +ಹರನ್+ಆತನ್+ಅಸ್ತ್ರವನ್+ಆರು +ತರುಬುವರು
ಹರನ +ಶರವಿಲ್ಲ್+ಇನ್ನು +ಹಗೆಗಳನ್
ಇರುಳು +ರಣದಲಿ +ಹಿಂಡುವೆನು +ಸಂ
ವರಿಸು +ಕೈದೀವಿಗೆಯನ್+ಎಂದನು +ದ್ರೋಣನ್+ಉಬ್ಬಿನಲಿ

ಅಚ್ಚರಿ:
(೧) ಶಿವನ ಹಿರಿಮೆ – ಸುರರನು ಸರಕುಮಾಡನು ಸಕಲ ದೈವದ ದೊರೆ
(೨) ದ್ರೋಣನ ಉಪಾಯ – ಹಗೆಗಳನಿರುಳು ರಣದಲಿ ಹಿಂಡುವೆನು