ಪದ್ಯ ೪೬: ಶಾಕಿನಿಯರಿಗೇಕೆ ಸುಗ್ಗಿಯಾಯಿತು?

ಒಗ್ಗಿ ಕವಿತಹ ತುರಗ ಸೇನೆಯ
ಸಗ್ಗಡಲೊಳಿಕ್ಕಿದನು ಕರಿಗಳ
ಮೊಗ್ಗರವ ಮೆದೆಗೆಡಹಿದನು ಹುಡಿಮಾಡಿದನು ರಥವ
ಮುಗ್ಗಿ ಬೀಳುವ ಪಾಯದಳವನು
ನುಗ್ಗು ನುಸಿಮಾಡಿದನು ರಕುತದ
ಸುಗ್ಗಿಯಾದುದು ಶಾಕಿನಿಯರಿಗೆ ಕಳನ ಚೌಕದಲಿ (ಭೀಷ್ಮ ಪರ್ವ, ೮ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನನ್ನು ಮುತ್ತಲು ಬಂದ ಸೇನೆಯನ್ನು ಸುಲಭವಾಗಿ ನೀರು ಪಾಲು ಮಾಡಿದನು. ಆನೆಗಳನ್ನು ಕೊಂದು ಮೆದೆಯೊಟ್ಟಿದನು. ರಥಗಲನ್ನು ಪುಡಿಪುಡಿ ಮಾಡಿದನು. ಕಾಲಾಳುಗಳನ್ನು ಚೂರುಚೂರಾಗಿ ಕತ್ತರಿಸಿದನು. ರಣರಂಗದಲ್ಲಿ ಶಾಕಿನಿಯರಿಗೆ ಸುಗ್ಗಿಯಾಯಿತು.

ಅರ್ಥ:
ಒಗ್ಗು: ಗುಂಪು; ಕವಿ: ಆವರಿಸು; ತುರಗ: ಅಶ್ವ; ಸೇನೆ: ಸೈನ್ಯ; ಕಡಲು: ಸಾಗರ; ಇಕ್ಕು: ಸೇರಿಸು; ಕರಿ: ಆನೆ; ಮೊಗ್ಗರ: ಗುಂಪು, ಸೈನ್ಯ; ಮೆದೆ: ಗುಂಪು, ಒಡ್ಡು; ಕೆಡಹು: ನಾಶಮಾಡು; ಹುಡಿ:ಪುಡಿ, ಚೂರ್ಣ; ರಥ: ಬಂಡಿ; ಮುಗ್ಗು: ಬಾಗು, ಮಣಿ; ಬೀಳು: ಕಳಚು; ಪಾಯದಳ: ಸೈನಿಕ; ನುಗ್ಗು: ನೂಕಾಟ; ನುಸಿ:ಹುಡಿ, ಧೂಳು, ತಿರುಚು; ರಕುತ: ರಕ್ತ, ನೆತ್ತರು; ಸುಗ್ಗಿ: ಹಬ್ಬ, ಪರ್ವ; ಶಾಕಿನಿ: ರಾಕ್ಷಸಿ; ಕಳ:ರಣರಂಗ; ಚೌಕ: ಮೇರೆ, ಎಲ್ಲೆ;

ಪದವಿಂಗಡಣೆ:
ಒಗ್ಗಿ +ಕವಿತಹ +ತುರಗ +ಸೇನೆಯ
ಸಗ್ಗಡಲೊಳ್+ಇಕ್ಕಿದನು +ಕರಿಗಳ
ಮೊಗ್ಗರವ+ ಮೆದೆ+ಕೆಡಹಿದನು +ಹುಡಿಮಾಡಿದನು+ ರಥವ
ಮುಗ್ಗಿ +ಬೀಳುವ +ಪಾಯದಳವನು
ನುಗ್ಗು +ನುಸಿಮಾಡಿದನು +ರಕುತದ
ಸುಗ್ಗಿಯಾದುದು +ಶಾಕಿನಿಯರಿಗೆ +ಕಳನ +ಚೌಕದಲಿ

ಅಚ್ಚರಿ:
(೧) ಒಗ್ಗಿ, ಮುಗ್ಗಿ, ಸುಗ್ಗಿ – ಪ್ರಾಸ ಪದಗಳು
(೨) ಘೋರ ದೃಶ್ಯವನ್ನು ಹಬ್ಬದ ದೃಶ್ಯವನ್ನಾಗಿಸುವ ಪರಿ – ರಕುತದ ಸುಗ್ಗಿಯಾದುದು ಶಾಕಿನಿಯರಿಗೆ

ಪದ್ಯ ೪೫: ಕೌರವನಾಯಕರ ನಡತೆಗೆ ಅರ್ಜುನನು ಏನೆಂದು ಯೋಚಿಸಿದನು?

ಹರಿಬದಾಹವವೆಂಬರಾವೆಡೆ
ಹರೆದರೇ ರಣಗೇಡಿಗಳು ನುಡಿ
ಯುರಿಯ ಹೊರುವುದು ಘಾಯವತಿಶೀತಳ ಮಹಾದೇವ
ಅರಮನೆಯ ಕಾಲಾಳು ಕರಿ ರಥ
ತುರಗವಳಿದರೆ ತಮಗೆ ನಷ್ಟಿಯೆ
ಗರುವನೈ ಗುರುತನುಜನೆನುತೈದಿದನು ಕಲಿ ಪಾರ್ಥ (ಭೀಷ್ಮ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸೇಡನ್ನು ತೀರಿಸಿಕೊಳ್ಳುವ ಯುದ್ಧವೆಂದು ಬಂದವರು ಹಿಂದಕ್ಕೆ ಸರಿದು ಬಿಟ್ಟರೇ! ಈ ಯುದ್ದಗೇಡಿಗಳ ಮಾತು ಉರಿಯನ್ನುಗುಳುತ್ತದೆ. ಅವರ ಹೊಡೆತ ತಣ್ಣಗಿರುತ್ತದೆ, ಸೈನ್ಯ ಚತುರಂಗ ಸತ್ತರೆ ತನಗೇನು ನಷ್ಟವೆಂದು ಅಶ್ವತ್ಥಾಮನು ಸುಮ್ಮನಾದನೇ ಎಂದು ಅರ್ಜುನನು ಮುಂದುವರೆದನು.

ಅರ್ಥ:
ಹರಿಬ: ಕೆಲಸ, ಕಾರ್ಯ; ಆಹವ: ಯುದ್ಧ; ಹರಿ: ಸರಿ, ನಿವಾರಿಸು; ರಣ: ರಣರಂಗ; ಹೇಡಿ: ಹೆದರುಪುಕ್ಕ, ಅಂಜು; ನುಡಿ: ಮಾತು; ಉರಿ: ಜ್ವಾಲೆ; ಘಾಯ: ಪೆಟ್ಟು; ಶೀತಳ: ತಣ್ಣಗಿರುವ; ಅರಮನೆ: ರಾಜರ ಆಲಯ; ಕಾಲಾಳು: ಸೈನಿಕ; ಕರಿ: ಆನೆ; ರಥ: ಬಂಡಿ; ತುರಗ: ಅಶ್ವ; ಅಳಿ: ನಾಶ; ನಷ್ಟ: ಹಾನಿ, ಕೆಡುಕು; ಗರುವ: ಹಿರಿಯ, ಶ್ರೇಷ್ಠ; ಗುರು: ಆಚಾರ್ಯ; ತನುಜ: ಮಗ; ಐದು: ಬಂದು ಸೇರು; ಕಲಿ: ಶೂರ;

ಪದವಿಂಗಡಣೆ:
ಹರಿಬದ್+ಆಹವವ್+ಎಂಬರ್+ಆವೆಡೆ
ಹರೆದರೇ +ರಣಗೇಡಿಗಳು+ ನುಡಿ
ಯುರಿಯ +ಹೊರುವುದು +ಘಾಯವ್+ಅತಿಶೀತಳ +ಮಹಾದೇವ
ಅರಮನೆಯ +ಕಾಲಾಳು +ಕರಿ +ರಥ
ತುರಗವ್+ಅಳಿದರೆ +ತಮಗೆ +ನಷ್ಟಿಯೆ
ಗರುವನೈ +ಗುರುತನುಜನೆನುತ್+ಐದಿದನು +ಕಲಿ +ಪಾರ್ಥ

ಅಚ್ಚರಿ:
(೧) ರಣಹೇಡಿಗಳ ಗುಣ – ರಣಗೇಡಿಗಳು ನುಡಿಯುರಿಯ ಹೊರುವುದು ಘಾಯವತಿಶೀತಳ ಮಹಾದೇವ

ಪದ್ಯ ೪೪: ಅರ್ಜುನನ ಮುಂದೆ ಯಾವ ಸೈನ್ಯವನ್ನು ನಿಲ್ಲಿಸಿದರು?

ಕೋಲ ಕೋಳಾಹಳಕೆ ಸೈರಿಸ
ದಾಳ ನಾಯಕವಾಡಿ ಹರಿಗೆಯ
ಹೇಳಿದರು ಚಾಚಿದರು ಬಲುಬದ್ಧರದ ಬಂಡಿಗಳ
ಹೂಳೆ ಬೀಸಿದ ಗುಳದ ಕರಿಗಳ
ಹೇಳಿದರು ಬಲ ಮುರಿದಡಾಚೆಗೆ
ಮೇಲೆ ನಾವಿಹೆವೆಂದು ನಿಂದರು ಗುರುಸುತಾದಿಗಳು (ಭೀಷ್ಮ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅರ್ಜುನನ ಹೊಡೆತವನ್ನು ತಡೆದುಕೊಳ್ಳಲಾರದೆ ರಕ್ಷಣೆಗಾಗಿ ಆನೆಯ ಬಂಡಿಗಳನ್ನು ಅರ್ಜುನನ ಮುಂದೆ ನಿಲ್ಲಿಸಿದರು. ಈ ಸೈನ್ಯವನ್ನು ಅರ್ಜುನನು ಸೋಲಿಸಿದರೆ ಅದರ ಹಿಂದೆ ನಾವಿರುತ್ತೇವೆ ಎಂದು ಕೌರವನಾಯಕರು ಹೇಳಿದರು.

ಅರ್ಥ:
ಕೋಲ: ಬಾಣ; ಕೋಲಾಹಲ: ಅವಾಂತರ; ಸೈರಿಸು: ತಾಳು, ಸಹಿಸು; ಆಳು: ಸೈನಿಕ; ನಾಯಕ: ಒಡೆಯ; ಹರಿಗೆ: ಚಿಲುಮೆ; ಹೇಳು: ತಿಳಿಸು; ಚಾಚು: ಹರಡು; ಬಲು: ಬಹಳ; ಬದ್ಧರ: ಆನೆ; ಬಂಡಿ: ರಥ; ಹೂಳು: ಹೂತು ಹಾಕು, ಆವರಿಸು, ಮುಳುಗು; ಬೀಸು: ತೂಗು; ಗುಳ:ಕುಂಟೆ, ಆನೆ ಕುದುರೆಗಳ ಪಕ್ಷರಕ್ಷೆ; ಕರಿ: ಆನೆ; ಬಲ: ಶಕ್ತಿ; ಮುರಿ: ಸೀಳು, ಕತ್ತರಿಸು; ಆಚೆ: ಹೊರಗೆ; ಇಹೆವು: ಇರುವೆವು; ನಿಂದರು: ನಿಲ್ಲು ಸುತ: ಮಗ; ಆದಿ: ಮುಂತಾದವರು;

ಪದವಿಂಗಡಣೆ:
ಕೋಲ+ ಕೋಳಾಹಳಕೆ+ ಸೈರಿಸದ್
ಆಳ +ನಾಯಕವಾಡಿ+ ಹರಿಗೆಯ
ಹೇಳಿದರು+ ಚಾಚಿದರು+ ಬಲು+ಬದ್ಧರದ +ಬಂಡಿಗಳ
ಹೂಳೆ +ಬೀಸಿದ+ ಗುಳದ+ ಕರಿಗಳ
ಹೇಳಿದರು +ಬಲ +ಮುರಿದಡ್+ಆಚೆಗೆ
ಮೇಲೆ +ನಾವಿಹೆವೆಂದು +ನಿಂದರು+ ಗುರುಸುತಾದಿಗಳು

ಅಚ್ಚರಿ:
(೧) ಕೋಲ ಕೋಳಾಹಳ – ಪದಗಳ ಜೋಡಣೆ

ಪದ್ಯ ೪೩: ಅರ್ಜುನನು ಎದುರಾಳಿಗಳನ್ನು ಹೇಗೆ ಎದುರಿಸಿದನು?

ಎಸುವನೊಬ್ಬನೆ ಪಾರ್ಥನನಿತುವ
ಕುಸರಿದರಿವರು ಗುರುಸುತಾದಿಗ
ಳೆಸುವರನಿಬರು ತರಿವನೊಬ್ಬನೆ ಅಮರಪತಿಸೂನು
ಎಸುವರಿವರರ್ಜುನನ ಮೈಯ್ಯಲಿ
ಮಸೆಯ ಕಾಣೆನು ಪಾರ್ಥನನಿಬರ
ವಿಶಿಖವನು ನೆರೆಗಡಿದು ಕೆತ್ತುವನನಿಬರೊಡಲುಗಳ (ಭೀಷ್ಮ ಪರ್ವ, ೮ ಸಂಧಿ, ೪೩ ಪದ್ಯ)

ತಾತ್ಪರ್ಯ:
ಇತ್ತ, ಬಾಣಗಳನ್ನು ಬಿಡುವವನು ಅರ್ಜುನನೊಬ್ಬನೇ, ಅವನ ಬಾಣಗಳನ್ನು ತುಂಡುಮಾದುವವರು ಅಶ್ವತ್ಥಾಮನೇ ಮೊದಲಾದ ಅನೇಕರು. ಎದುರಾಳಿಗಳ ಬಾಣಗಳು ಅರ್ಜುನನನ್ನು ಸೋಕುತ್ತಿರಲಿಲ್ಲ. ಅವರೆಲ್ಲರ ಬಾಣಗಳನ್ನು ಅರ್ಜುನನು ಕಡಿದು ಅವರೆಲ್ಲರ ಮೈಗಳನ್ನು ತನ್ನ ಬಾಣಗಳಿಂದ ಕೆತ್ತುವನು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಗುರು: ಆಚಾರ್ಯ; ಸುತ: ಮಗ; ಆದಿ: ಮುಂತಾದ; ಅನಿಬರು: ಅಷ್ಟುಜನ; ತರಿ: ಕಡಿ, ಕತ್ತರಿಸು; ಅಮರಪತಿ: ಇಂದ್ರ; ಸೂನು: ಮಗ; ಮೈ: ತನು; ಮಸೆ: ಹರಿತವಾದುದು; ಕಾಣು: ತೋರು; ವಿಶಿಖ: ಬಾಣ; ನೆರೆ: ಗುಂಪು; ಕಡಿದು: ಕತ್ತರಿಸು; ಕೆತ್ತು: ಅದಿರು, ನಡುಗು; ಒಡಲು: ದೇಹ;

ಪದವಿಂಗಡಣೆ:
ಎಸುವನ್+ಒಬ್ಬನೆ +ಪಾರ್ಥನ್+ಅನಿತುವ
ಕುಸರಿದರ್+ಇವರು +ಗುರುಸುತಾದಿಗಳ್
ಎಸುವರ್+ಅನಿಬರು +ತರಿವನ್+ಒಬ್ಬನೆ +ಅಮರಪತಿಸೂನು
ಎಸುವರ್+ಇವರ್+ಅರ್ಜುನನ +ಮೈಯ್ಯಲಿ
ಮಸೆಯ +ಕಾಣೆನು +ಪಾರ್ಥನ್+ಅನಿಬರ
ವಿಶಿಖವನು +ನೆರೆ+ಕಡಿದು +ಕೆತ್ತುವನ್+ಅನಿಬರ್+ಒಡಲುಗಳ

ಅಚ್ಚರಿ:
(೧) ಪಾರ್ಥ, ಅಮರಪತಿಸೂನು – ಅರ್ಜುನನನ್ನು ಕರೆದ ಪರಿ
(೨) ಮೈ, ಒಡಲು – ಸಮನಾರ್ಥಕ ಪದ
(೩) ಎಸು- ೧, ೩,೪ ಸಾಲಿನ ಮೊದಲ ಪದ

ಪದ್ಯ ೪೨: ಬಾಣಗಳನ್ನೊಳಗೊಂಡ ರಣಕೇಳಿ ಹೇಗಿತ್ತು?

ಹಿಳುಕು ಹಿಳುಕುಗಳಡಸಿ ದೆಸೆ ಕ
ತ್ತಲಿಸಿ ಕೈಕೊಂಡವು ಪತತ್ರಾ
ವಳಿಯ ಪವನನ ಹೊಯ್ಲಿನಲಿ ಬಾಯ್ಧಾರೆ ಕಿಡಿಯೇಳೆ
ಬಳಿಸರಳ ಬಿಲ್ಲಾಳ ದಡ್ಡಿಯ
ಬಲುಹು ತರುಬಿತು ಪಡಿಮುಖದ ಮಂ
ಡಳಿಕರೆಸುಗೆಯನಮಮ ಸಮತಳಿಸಿತ್ತು ರಣಕೇಳಿ (ಭೀಷ್ಮ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಬಾಣಗಳು ಒಂದರ ಮೇಲೊಂದು ಬಿದ್ದು ದಿಕ್ಕುಗಲಲ್ಲಿ ಕತ್ತಲು ಕವಿದವು. ಗರಿಗಳ ಗಾಳಿಯಿಂದ ಬಾಣಗಳ ಬಾಯ್ಧಾರೆಯಲ್ಲಿ ಕಿಡಿಗಳೆದ್ದವು. ಹಿಂದೆಯೇ ಬಂದ ಬಾಣಗಳ ಗುಂಪು ಮತ್ತೆ ಬಿಟ್ಟ ಬಾಣಗಳನ್ನು ತರುಬಿದವು. ಯುದ್ಧ ಕ್ರೀಡೆಯು ಸಮಸಮವಾಗಿ ನಡೆಯಿತು.

ಅರ್ಥ:
ಹಿಳುಕು: ಬಾಣದ ಹಿಂಭಾಗ; ಅಡಸು: ಚುಚ್ಚು, ಒತ್ತು; ದೆಸೆ: ದಿಕ್ಕು; ಕತ್ತಲು: ಅಂಧಕಾರ; ಪತತ್ರಾವಳಿ: ಬಾಣಗಳ ಸಮೂಹ; ಪವನ: ವಾಯು; ಹೊಯ್ಲು: ಹೊಡೆತ, ಏಟು; ಧಾರೆ: ಪ್ರವಾಹ; ಕಿಡಿ: ಬೆಂಕಿ; ಏಳು: ಮೇಲೇರು; ಬಳಿ: ಹತ್ತಿರ; ಸರಳ: ಬಾಣ; ಬಿಲ್ಲಾಳ: ಧನುರ್ವಿದ್ಯಾಚತುರ; ದಡ್ಡಿ: ಪಂಜರ; ಬಲುಹು: ಬಹಳ; ತರುಬು: ತಡೆ, ನಿಲ್ಲಿಸು; ಪಡಿ: ಪ್ರತಿ, ಎಣೆ; ಮುಖ: ಆನನ; ಮಂಡಳಿಕ: ಸಾಮಂತ ರಾಜ; ಎಸು: ಬಾಣ ಪ್ರಯೋಗ ಮಾಡು; ಅಮಮ: ಅಬ್ಬಬ್ಬ; ಸಮತಳ: ಸಮವಾಗಿ; ರಣಕೇಳಿ: ಯುದ್ಧ ಕ್ರೀಡೆ;

ಪದವಿಂಗಡಣೆ:
ಹಿಳುಕು+ ಹಿಳುಕುಗಳ್+ಅಡಸಿ +ದೆಸೆ+ ಕ
ತ್ತಲಿಸಿ +ಕೈಕೊಂಡವು +ಪತತ್ರಾ
ವಳಿಯ +ಪವನನ +ಹೊಯ್ಲಿನಲಿ +ಬಾಯ್ಧಾರೆ +ಕಿಡಿಯೇಳೆ
ಬಳಿ+ಸರಳ+ ಬಿಲ್ಲಾಳ+ ದಡ್ಡಿಯ
ಬಲುಹು +ತರುಬಿತು +ಪಡಿ+ಮುಖದ+ ಮಂ
ಡಳಿಕರ್+ಎಸುಗೆಯನ್+ಅಮಮ +ಸಮತಳಿಸಿತ್ತು+ ರಣಕೇಳಿ

ಅಚ್ಚರಿ:
(೧) ರೂಪಕದ ಪ್ರಯೋಗ – ಹಿಳುಕು ಹಿಳುಕುಗಳಡಸಿ ದೆಸೆ ಕತ್ತಲಿಸಿ ಕೈಕೊಂಡವು