ಪದ್ಯ ೫೬: ಅರ್ಜುನನು ಉತ್ತರನಿಗೆ ಏನು ಹೇಳಿದ?

ಹದುಳಿಸಿನ್ನಂಜದಿರು ಬಾಣೌ
ಘದ ವಿದಾರಣವಿದು ವಿಚಾರಿಸ
ಲೆದೆ ಬಿರಿದು ತಾ ನೊಂದೆನಿದೆ ನೋಡೆನ್ನ ಗಾಯವನು
ಒದೆದುಕೊಳುತೈದಾನೆ ಸಿಂಧದ
ತುದಿಯ ಹನುಮನು ವಜ್ರಮಯ ದೇ
ಹದಲಿ ನಟ್ಟವು ಕೋಲು ಮುನಿದೊಡೆ ರುದ್ರನೀ ಭೀಷ್ಮ (ವಿರಾಟ ಪರ್ವ, ೯ ಸಂಧಿ, ೫೬ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ಉತ್ತರಕುಮಾರ, ಸಮಾಧಾನ ಮಾಡಿಕೋ, ನಿನಗೆ ಕೊಟ್ಟ ಕವಚವು ಬಾಣಗಳಿಂದ ನಿನ್ನನ್ನು ರಕ್ಷಿಸುತ್ತದೆ, ಹೆದರಬೇಡ, ಇದೋ ನನ್ನೆದೆಯ ಮೇಲಿರುವ ಈ ಗಾಯವನ್ನು ನೋಡು, ಧ್ವಜದ ಮುಂದಿರುವ ಹನುಮಂತನು ಕೈಕಾಲುಗಳನ್ನು ಕೊಡುವುತ್ತಿದ್ದಾನೆ, ಅವನು ವಜ್ರ ಶರೀರದಲ್ಲೂ ಭೀಷ್ಮನ ಬಾಣಗಳು ನಟ್ಟವು, ಕೋಪಗೊಂಡರೆ ಅವನು ಭೀಷ್ಮನಲ್ಲ, ರುದ್ರ ಎಂದು ಉತ್ತರನಿಗೆ ಹೇಳಿದನು.

ಅರ್ಥ:
ಹದುಳ: ಸೌಖ್ಯ, ಕ್ಷೇಮ; ಅಂಜು: ಹೆದರು; ಬಾಣ: ಸರಳ; ಔಘ: ಗುಂಪು, ಸಮೂಹ; ವಿದಾರಣ: ಸೀಳುವಿಕೆ, ಕೊಲ್ಲುವಿಕೆ; ವಿಚಾರಿಸು: ತಿಳಿಸು; ನೊಂದು: ನೋವು; ಗಾಯ: ಪೆಟ್ಟು; ಸಿಂಧ: ಬಾವುಟ; ತುದಿ: ಅಗ್ರಭಾಗ; ಹನುಮ: ಆಂಜನೇಯ; ವಜ್ರ: ಗಟ್ಟಿಯಾದ, ಬಲವಾದ; ದೇಹ: ತನು; ನಟ್ಟ: ನಡು; ಒಳಹೊಕು; ದೇಹ: ತನು; ಕೋಲು: ಬಾಣ; ಮುನಿ: ಕೋಪ; ರುದ್ರ: ಶಿವ;

ಪದವಿಂಗಡಣೆ:
ಹದುಳಿಸಿನ್+ಅಂಜದಿರು+ ಬಾಣೌ
ಘದ+ ವಿದಾರಣವಿದು +ವಿಚಾರಿಸಲ್
ಎದೆ+ ಬಿರಿದು+ ತಾ ನೊಂದೆನ್+ಇದೆ +ನೋಡೆನ್ನ +ಗಾಯವನು
ಒದೆದುಕೊಳುತ್+ಐದಾನೆ +ಸಿಂಧದ
ತುದಿಯ +ಹನುಮನು+ ವಜ್ರಮಯ +ದೇ
ಹದಲಿ +ನಟ್ಟವು +ಕೋಲು+ ಮುನಿದೊಡೆ +ರುದ್ರನೀ +ಭೀಷ್ಮ

ಅಚ್ಚರಿ:
(೧) ಭೀಷ್ಮನ ಪರಾಕ್ರಮವನ್ನು ಹೇಳುವ ಪರಿ – ಕೋಲು ಮುನಿದೊಡೆ ರುದ್ರನೀ ಭೀಷ್ಮ

ಪದ್ಯ ೫೫: ಅರ್ಜುನನು ಉತ್ತರನಿಗೆ ಏನನ್ನು ನೀಡಿದನು?

ಕವಚವಿದೆ ಕೊಳ್ ಬಾಣ ಧಾರಾ
ನಿವಹ ಶಸ್ತ್ರಸಂಭವಿನ್ನಾ
ಹವದೊಳಂಜದಿರೆನುತೆ ಕುಡಲುತ್ತರನು ದುಗುಡದೊಳು
ಬವರದಾದಿಯನರಿಯದನ ಕೊಂ
ದವನು ನೀನೋ ಭೀಷ್ಮನೋ ಎನ
ಲವನ ನುಡಿಗರ್ಜುನನು ನಗುತಪರಾಧವುಂಟೆಂದ (ವಿರಾಟ ಪರ್ವ, ೯ ಸಂಧಿ, ೫೫ ಪದ್ಯ)

ತಾತ್ಪರ್ಯ:
ಅರ್ಜುನನು ಯುದ್ಧದಲ್ಲಿ ಶತ್ರುವಿನ ಬಾಣಗಳ ಸುರಿಮಳೆಯನ್ನು ತಡೆಹಿಡಿಯುವ ಕವಚವನ್ನು ತೆಗೆದುಕೋ, ಇನ್ನು ಮುಂದೆ ನಿನಗೆ ಯುದ್ಧದಲ್ಲಿ ಭಯವಿಲ್ಲವೆಂದು ಕವಚವನ್ನು ಕೊಟ್ಟನು. ಆಗ ಉತ್ತರನು ಯುದ್ಧವೆಂದರೇನೆಂದು ತಿಳಿಯದ ನನ್ನನ್ನುಉ ಕೊಂದವನು ನೀನೋ, ಭೀಷ್ಮನೋ ಹೇಳು ಎನಲು, ಅರ್ಜುನನು ನಕ್ಕು ಇದು ನನ್ನ ಅಪರಾದ, ಒಪ್ಪಿಕೊಂಡೆ ಎಂದನು.

ಅರ್ಥ:
ಕವಚ: ಹೊದಿಕೆ; ಕೊಳ್: ತೆಗೆದುಕೋ; ಬಾಣ: ಸರಳು; ಧಾರೆ: ಮಳೆ; ನಿವಹ: ಗುಂಪು; ಶಸ್ತ್ರ: ಆಯುಧ; ಸಂಭವ: ಹುಟ್ಟು, ಉತ್ಪತ್ತಿ; ಆಹವ: ಯುದ್ಧ; ಅಂಜು: ಹೆದರು; ಕುಡಲು: ನೀಡು; ದುಗುಡ: ದುಃಖ; ಬವರ: ಕಾಳಗ, ಯುದ್ಧ; ಆದಿ: ಮೊದಲು; ಅರಿ: ತಿಳಿ; ಕೊಂದು: ಸಾಯಿಸು; ನುಡಿ: ಮಾತು; ನಗು: ಸಂತಸ; ಅಪರಾಧ: ತಪ್ಪು;

ಪದವಿಂಗಡಣೆ:
ಕವಚವಿದೆ +ಕೊಳ್ +ಬಾಣ +ಧಾರಾ
ನಿವಹ+ ಶಸ್ತ್ರ+ಸಂಭವಿನ್
ಆಹವದೊಳ್+ಅಂಜದಿರೆನುತೆ+ ಕುಡಲ್+ಉತ್ತರನು +ದುಗುಡದೊಳು
ಬವರದ್+ಆದಿಯನ್+ಅರಿಯದನ +ಕೊಂ
ದವನು +ನೀನೋ +ಭೀಷ್ಮನೋ +ಎನಲ್
ಅವನ +ನುಡಿಗ್+ಅರ್ಜುನನು +ನಗುತ್+ಅಪರಾಧ+ಉಂಟೆಂದ

ಅಚ್ಚರಿ:
(೧) ಬವರ, ಆವಹ – ಸಮನಾರ್ಥಕ ಪದ

ಪದ್ಯ ೫೪: ಅರ್ಜುನನು ಉತ್ತರನನ್ನು ಹೇಗೆ ಸಲಹಿದನು?

ಅರಿಯ ಶರಹತಿಗುತ್ತರನು ತನು
ಬಿರಿಯೆ ಬಸವಳಿದನು ಕಪೀಶ್ವರ
ನೊರಲಿದನು ರಾವಣನ ಗಾಯವ ನೆನೆದನಡಿಗಡಿಗೆ
ಮರೆದು ಮಲಗಿದ ಸೂತನನು ನಾ
ಲ್ಕೆರಡು ಗಳಿಗೆಯು ಬೀಸಿ ಮೂಗಿನೊ
ಳೆರಲ ಕಂಡನು ಪಾರ್ಥನೆತ್ತಿದನಳುಕಿದುತ್ತರನ (ವಿರಾಟ ಪರ್ವ, ೯ ಸಂಧಿ, ೫೪ ಪದ್ಯ)

ತಾತ್ಪರ್ಯ:
ಶತ್ರುವಿನ ಬಾಣದ ಪೆಟ್ಟಿಗೆ ದೇಹವು ಬಿರಿಯಲು ಉತ್ತರನು ಎಚ್ಚರ ತಪ್ಪಿದನು. ಹನುಮಂತನು ಚೀರಿ ರಾವಣನ ಪೆಟ್ಟುಗಳನ್ನು ಮತ್ತೆ ಮತ್ತೆ ನೆನಸಿಕೊಂಡನು. ಅರ್ಜುನನು ನಾಲ್ಕೆರಡು ಗಳಿಗೆ ಗಾಳಿಯನ್ನು ಬೀಸಿದ ಮೇಲೆ ಉತ್ತರನ ಮೂಗಿನಲ್ಲಿ ವಾಯುವು ಕಾಣಿಸಿಕೊಂಡಿತು. ಅರ್ಜುನನು ಉತ್ತರನನ್ನು ಮೇಲಕ್ಕೆತ್ತಿದನು.

ಅರ್ಥ:
ಅರಿ: ವೈರಿ; ಶರ: ಬಾಣ; ಹತಿ: ಪೆಟ್ಟು; ಬಿರಿ: ಬಿರುಕು, ಸೀಳು; ತನು: ದೇಹ; ಬಸವಳಿ:ಬಳಲಿಕೆ, ಆಯಾಸ; ಕಪೀಶ್ವರ: ಹನುಮ; ಒರಲು: ಅರಚು, ಕೂಗಿಕೊಳ್ಳು; ಗಾಯ: ಪೆಟ್ಟು; ನೆನೆ: ಜ್ಞಾಪಿಸಿಕೊ; ಅಡಿಗಡಿಗೆ: ಹೆಜ್ಜೆ ಹೆಜ್ಜೆ; ಮರೆ: ನೆನಪಿನಿಂದ ದೂರವಾಗು; ಮಲಗು: ನಿದ್ರೆಮಾಡು; ಸೂತ: ಸಾರಥಿ; ಗಳಿಗೆ: ಸಮ್ಯ; ಬೀಸು: ಗಾಳಿ ಹಾಕು; ಮೂಗು: ನಾಸಿಕ; ಎರಲ್: ಗಾಳಿ; ಕಂಡು: ನೋಡು; ಅಳುಕು: ಹೆದರು;

ಪದವಿಂಗಡಣೆ:
ಅರಿಯ+ ಶರಹತಿಗ್+ಉತ್ತರನು +ತನು
ಬಿರಿಯೆ +ಬಸವಳಿದನು +ಕಪೀಶ್ವರನ್
ಒರಲಿದನು +ರಾವಣನ +ಗಾಯವ+ ನೆನೆದನ್+ಅಡಿಗಡಿಗೆ
ಮರೆದು +ಮಲಗಿದ+ ಸೂತನನು+ ನಾ
ಲ್ಕೆರಡು +ಗಳಿಗೆಯು +ಬೀಸಿ +ಮೂಗಿನೊಳ್
ಎರಲ+ ಕಂಡನು +ಪಾರ್ಥನ್+ಎತ್ತಿದನ್+ಅಳುಕಿದ್+ಉತ್ತರನ

ಅಚ್ಚರಿ:
(೧) ಅರಿ, ಬಿರಿ – ಪ್ರಾಸ ಪದ
(೨) ಯುದ್ಧದ ತೀವ್ರತೆ – ಕಪೀಶ್ವರನೊರಲಿದನು ರಾವಣನ ಗಾಯವ ನೆನೆದನಡಿಗಡಿಗೆ

ಪದ್ಯ ೫೩: ಭೀಷ್ಮರ ಪರಾಕ್ರಮ ಹೇಗಿತ್ತು?

ಎಸಲು ಪಾರ್ಥನ ಬಾಣವನು ಖಂ
ಡಿಸುತ ಸೂತನನೆರಡರಲಿ ಕೀ
ಲಿಸಿದನೈದಂಬಿನಲಿ ಹನುಮನ ಹಣೆಯನೊಡೆಯೆಚ್ಚ
ನಿಶಿತ ಶರವೆಂಟರಲಿ ಕವಚಾ
ಕುಸುರಿದರಿದನು ನರನ ವಕ್ಷದ
ಬೆಸುಗೆ ಬಿಡೆ ಮೂರಂಬಿನಲಿ ಮುರಿಯೆಚ್ಚು ಬೊಬ್ಬಿರಿದ (ವಿರಾಟ ಪರ್ವ, ೯ ಸಂಧಿ, ೫೩ ಪದ್ಯ)

ತಾತ್ಪರ್ಯ:
ಭೀಷ್ಮನು ಅರ್ಜುನನ ಬಾಣಗಳನ್ನು ಕಡಿದು ಹಾಕಿದನು. ಸಾರಥಿಯನ್ನು ಎರಡು ಬಾಣಗಳಿಂದಲೂ, ಹನುಮನ ಹಣೆಯನ್ನು ಐದು ಬಾಣಗಳಿಂದಳೂ ಹೊಡೆದನು. ಎಂಟು ಬಾಣಗಳಿಂದ ಅರ್ಜುನನ ಕವಚವನ್ನು ಕಡಿದು ಮೂರು ಬಾಣಗಳಿಂದ ಅವನ ಎದೆಯ್ ಬೆಸುಗೆಯು ಬಿಡುವಂತೆ ಮಾಡಿದನು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಬಾಣ: ಸರಳು; ಖಂಡಿಸು: ನಾಶಮಾಡು; ಸೂತ: ಸಾರಥಿ; ಕೀಲಿಸು: ಜೋಡಿಸು, ಚುಚ್ಚು; ಅಂಬು: ಬಾಣ; ಹಣೆ: ಲಲಾಟ; ಎಚ್ಚು: ಬಾಣ ಬಿಡು; ನಿಶಿತ: ಹರಿತವಾದ; ಶರ: ಬಾಣ; ಕವಚ: ಹೊದಿಕೆ; ಕುಸುರಿ: ಸಣ್ಣತುಂಡು, ಚೂರು; ಅರಿ: ಕತ್ತರಿಸು; ವಕ್ಷ: ಹೃದಯ; ಬೆಸುಗೆ: ಪ್ರೀತಿ; ಬಿಡು: ತೊರೆ; ಅಂಬು: ಬಾಣ; ಮುರಿ: ಸೀಳು; ಬೊಬ್ಬಿರಿ: ಅರ್ಗ್ಜಿಸು, ಕೂಗು;

ಪದವಿಂಗಡಣೆ:
ಎಸಲು+ ಪಾರ್ಥನ +ಬಾಣವನು +ಖಂ
ಡಿಸುತ +ಸೂತನನ್+ಎರಡರಲಿ +ಕೀ
ಲಿಸಿದನ್+ಐದ್+ಅಂಬಿನಲಿ +ಹನುಮನ +ಹಣೆಯನ್+ಒಡೆಯೆ+ಚ್ಚ
ನಿಶಿತ +ಶರವ್+ಎಂಟರಲಿ +ಕವಚಾ
ಕುಸುರಿದ್+ಅರಿದನು +ನರನ +ವಕ್ಷದ
ಬೆಸುಗೆ +ಬಿಡೆ + ಮೂರ್+ಅಂಬಿನಲಿ+ ಮುರಿ+ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಬಾಣ, ಅಂಬು, ಶರ – ಸಮನಾರ್ಥಕ ಪದ
(೨) ಅರ್ಜುನನ ಹೃದಯಕ್ಕೆ ಬಾಣ ತಾಗಿತು ಎಂದು ಹೇಳುವ ಪರಿ – ನರನ ವಕ್ಷದ ಬೆಸುಗೆ ಬಿಡೆ ಮೂರಂಬಿನಲಿ ಮುರಿಯೆಚ್ಚು ಬೊಬ್ಬಿರಿದ

ಪದ್ಯ ೫೨: ಅರ್ಜುನನು ಭೀಷ್ಮರಿಗೆ ಹೇಗೆ ಉತ್ತರಿಸಿದನು?

ನಿಮ್ಮ ಕಾರುಣ್ಯಾವಲೋಕನ
ವೆಮ್ಮಸಿರಿ ಬೇರೆಮಗೆ ಕಾಳಗ
ದಮ್ಮುಗೆಯ ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ
ಬಿಮ್ಮು ಬೀಸರವಹುದೆ ನಿಮ್ಮಯ
ಸೊಮ್ಮಿನವರಿಗೆ ಬೇರೆ ರಾಜ್ಯದ
ಹೆಮ್ಮೆ ತಾ ನಮಗೇಕೆನುತ ಕೈಯೊಡನೆ ನರನೆಚ್ಚ (ವಿರಾಟ ಪರ್ವ, ೯ ಸಂಧಿ, ೫೨ ಪದ್ಯ)

ತಾತ್ಪರ್ಯ:
ನಿಮ್ಮ ಕರುಣೆಯ ನೋಟವೇ ನಮ್ಮ ಐಶ್ವರ್ಯ, ಇನ್ನು ಯುದ್ಧದಲ್ಲಿ ಪರಾಕ್ರಮ್ವನ್ನು ತೋರಿಸುವುದು ನಮಗೆ ಫಲಕೊಡುವುದಿಲ್ಲ. ನಿಮ್ಮ ಆಶೀರ್ವಾದವಿದ್ದವರಿಗೆ ಎಂದೂ ಹಿರಿಮೆಯು ಹೋಗುವ ಪ್ರಸಂಗವಿಲ್ಲ. ಹೀಗಿದ್ದು ರಾಜ್ಯವನ್ನು ಪಡೆಯುವ ಹೆಮ್ಮೆ ನಮಗೇಕೆ? ಹೀಗೆಂದು ಅರ್ಜುನನು ಬಾಣಗಳನ್ನು ಬಿಟ್ಟನು.

ಅರ್ಥ:
ಕಾರುಣ್ಯ: ದಯೆ; ಅವಲೋಕನ: ನೋಡುವುದು; ಸಿರಿ: ಐಶ್ವರ್ಯ; ಬೇರೆ: ಅನ್ಯ; ಕಾಳಗ: ಯುದ್ಧ; ದಮ್ಮು: ಉಸಿರು; ವಿಕ್ರಮ: ಶೂರ; ವಿವರಣ: ವಿಸ್ತಾರ; ವಿದ್ಯೆ: ಜ್ಞಾನ; ಫಲ: ಪ್ರಯೋಜನ; ಬಿಮ್ಮು: ದೊಡ್ಡತನ, ಘನತೆ; ಬೀಸರ: ವ್ಯರ್ಥವಾದುದು; ಸೊಮ್ಮು: ಒಡವೆ, ಸ್ವತ್ತು, ಐಶ್ವರ್ಯ; ಬೇರೆ: ಅನ್ಯ; ರಾಜ್ಯ: ರಾಷ್ಟ್ರ; ಹೆಮ್ಮೆ: ಪ್ರತಿಷ್ಠೆ; ಎಚ್ಚು: ಬಾಣವನ್ನು ಬಿಡು; ಅಮ್ಮು: ಶಕ್ತನಾಗು, ಪ್ರತಿಭಟಿಸು;

ಪದವಿಂಗಡಣೆ:
ನಿಮ್ಮ +ಕಾರುಣ್ಯ+ಅವಲೋಕನವ್
ಎಮ್ಮ+ಸಿರಿ +ಬೇರೆಮಗೆ +ಕಾಳಗದ್
ಅಮ್ಮುಗೆಯ +ವಿಕ್ರಮದ +ವಿವರಣ +ವಿದ್ಯೆ +ಫಲಿಸುವುದೆ
ಬಿಮ್ಮು +ಬೀಸರವಹುದೆ+ ನಿಮ್ಮಯ
ಸೊಮ್ಮಿನವರಿಗೆ+ ಬೇರೆ +ರಾಜ್ಯದ
ಹೆಮ್ಮೆ +ತಾ +ನಮಗೇಕೆನುತ +ಕೈಯೊಡನೆ +ನರನೆಚ್ಚ

ಅಚ್ಚರಿ:
(೧) ಅಮ್ಮು, ಬಿಮ್ಮು – ಪ್ರಾಸ ಪದಗಳು
(೨) ವಿ ಕಾರದ ತ್ರಿವಳಿ ಪದ – ವಿಕ್ರಮದ ವಿವರಣ ವಿದ್ಯೆ

ಪದ್ಯ ೫೧: ಭೀಷ್ಮರು ಅರ್ಜುನನಿಗೆ ಏನು ಹೇಳಿದರು?

ಪೂತುರೇ ಕಲಿಪಾರ್ಥ ಭುವನ
ಖ್ಯಾತನಾದೈ ಕಂದ ದ್ರೋಣನ
ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು
ಬೀತುದೇ ನಿಮ್ಮವಧಿ ಕುರುಕುಲ
ಜಾತವನು ಹರೆಗಡಿದು ನಿಮ್ಮಯ
ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ (ವಿರಾಟ ಪರ್ವ, ೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ಭಲೇ ಶೂರನಾದ ಅರ್ಜುನ, ದ್ರೋಣ, ಕೃಪ, ಅಶ್ವತ್ಥಾಮ, ಕರ್ಣರನ್ನು ಗೆದ್ದು ಲೋಕ ಪ್ರಸಿದ್ಧನಾದೆ, ನೀವು ನುಡಿದ ಅವಧಿಯು ಮುಗಿಯಿತೇ? ಕೌರವರನ್ನು ನಾಶಮಾಡಿ ನಿಮ್ಮ ರಾಜ್ಯವನ್ನಾಳುವಿರಾ? ಎನ್ನುತ್ತಾ ಭೀಷ್ಮನು ಬಾಣ ಪ್ರಯೋಗ ಮಾಡಿದನು.

ಅರ್ಥ:
ಪೂತು: ಭಲೇ; ಕಲಿ: ಶೂರ; ಭುವನ: ಭೂಮಿ; ಖ್ಯಾತ: ಪ್ರಸಿದ್ಧ; ಕಂದ: ಮಗು; ಸೂತ: ಸಾರಥಿ; ಸುತ: ಮಗ; ತನೂಜ: ಪುತ್ರ; ಗೆಲಿದು: ಜಯಗಳಿಸು; ಬಳಿಕ: ನಂತರ; ಬೀತುದು: ಮುಗಿಯಿತು; ಜಾತ: ಹುಟ್ಟಿದ; ಅವಧಿ: ಕಾಲ; ಹರೆ: ವ್ಯಾಪಿಸು, ಇಲ್ಲವಾಗು; ಕಡಿ: ನಾಶಮಾದು; ಭೂತಳ: ಭೂಮಿ; ಆಳು: ಅಧಿಕಾರ ನಡೆಸು; ಎಚ್ಚು: ಬಾಣ ಬಿಡು;

ಪದವಿಂಗಡಣೆ:
ಪೂತುರೇ +ಕಲಿಪಾರ್ಥ +ಭುವನ
ಖ್ಯಾತನಾದೈ +ಕಂದ +ದ್ರೋಣನ
ಸೂತಸುತ +ಕೃಪ +ಗುರುತನೂಜರ+ ಗೆಲಿದೆ +ಬಳಿಕೇನು
ಬೀತುದೇ +ನಿಮ್+ಅವಧಿ +ಕುರುಕುಲ
ಜಾತವನು +ಹರೆ+ಕಡಿದು +ನಿಮ್ಮಯ
ಭೂತಳವನ್+ಆಳುವಿರೆ+ ನೀವೆಂದ್+ಎಚ್ಚನಾ +ಭೀಷ್ಮ

ಅಚ್ಚರಿ:
(೧) ಸುತ, ತನುಜ – ಸಮನಾರ್ಥಕ ಪದ
(೨) ಸೂತ, ಖ್ಯಾತ, ಜಾತ – ಪ್ರಾಸ ಪದಗಳು

ಪದ್ಯ ೫೦: ಭೀಷ್ಮನನ್ನು ಪಾಠಕರು ಹೇಗೆ ಹೊಗಳಿದರು?

ತೊಲಗು ರಾಯ ಪಿತಾಮಹನ ಖತಿ
ಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರುಸಾರೆನುತೆ
ಉಲಿವ ಬಳಿಯ ಮಹಾರಥರ ಕಳ
ಕಳದ ಕಹಳೆಯ ಪಾಠಕರ ಗಾ
ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ (ವಿರಾಟ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಭೀಷ್ಮನ ಸುತ್ತಲಿದ್ದ ಮಹಾರಥರು ಅರ್ಜುನನಿಗೆ, ರಾಜ ಪಿತಾಮಹರಾದ ಭೀಷ್ಮನ ಕೋಪವು ಅತಿಶಯವಾದುದು, ನಿನ್ನನ್ನು ರಕ್ಷಿಸಲು ಹರಿಹರ್ರನ್ನೇ ಕರೆಸು, ನೀನಿನ್ನೂ ಕೂಸು, ಭೀಷ್ಮ ನನ್ನೆದುರಿಸಲು ನಿನ್ನಿಂದಾಗುವುದಿಲ್ಲ. ದೂರ ಹೋಗು ಎಂದು ಕೂಗುತ್ತಿದ್ದರು, ಕಹಳೆಗಳು ಮೊಳಗಿದವು, ಭೀಷ್ಮನ ಬಿರುದುಗಳನ್ನು ಪಾಠಕರು ಉಗ್ಗಡಿಸುತ್ತಿದ್ದರು.

ಅರ್ಥ:
ತೊಲಗು: ಹೊರಡು; ರಾಯ: ರಾಜ; ಪಿತಾಮಹ: ತಾತ; ಖತಿ: ಕೋಪ; ಬಲುಹು: ಹೆಚ್ಚು; ತೆತ್ತಿಗ: ಹೊಣೆಗಾರ, ರಕ್ಷಕ; ರುದ್ರ: ಶಿವನ ಅವತಾರ; ನಳಿನನಾಭ: ವಿಷ್ಣು; ಕರೆಸು: ಬರೆಮಾಡು; ಶಿಶು: ಮಗು; ಸಾರು: ಪ್ರಕಟಿಸು; ಉಲಿ: ಶಬ್ದ; ಬಳಿ: ಹತ್ತಿರ; ಮಹಾರಥ: ಪರಾಕ್ರಮಿ; ಕಳಕಳ: ವ್ಯಥೆ, ಉದ್ವಿಗ್ನತೆ; ಕಹಳೆ: ತುತ್ತೂರಿ; ಪಾಠಕ: ಹೊಗಳುಭಟ್ಟ; ಗಾವಳಿ: ಘೋಷಣೆ; ಬಿರುದು: ಹೊಗಳುವ ಮಾತು; ಬಹಳ:ತುಂಬ; ಐತಂದು: ಬರೆಮಾಡು;

ಪದವಿಂಗಡಣೆ:
ತೊಲಗು+ ರಾಯ +ಪಿತಾಮಹನ+ ಖತಿ
ಬಲುಹು +ತೆತ್ತಿಗರಹರೆ +ರುದ್ರನ
ನಳಿನನಾಭನ+ ಕರೆಸು +ನೀ +ಶಿಶು+ ಸಾರುಸಾರೆನುತೆ
ಉಲಿವ +ಬಳಿಯ +ಮಹಾರಥರ +ಕಳ
ಕಳದ +ಕಹಳೆಯ +ಪಾಠಕರ+ ಗಾ
ವಳಿಯ +ಬಿರುದಿನ+ ಬಹಳತೆಯಲ್+ಐತಂದನಾ +ಭೀಷ್ಮ

ಅಚ್ಚರಿ:
(೧) ಭೀಷ್ಮನನ್ನು ಹೊಗಳುವ ಪರಿ – ರಾಯಪಿತಾಮಹನ ಖತಿಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರುಸಾರೆನುತೆ

ಪದ್ಯ ೪೯: ಅರ್ಜುನನನ್ನು ಯಾರು ಮುತ್ತಿದರು?

ಓಡಿದಾಳಲ್ಲಲ್ಲಿ ಧೈರ್ಯವ
ಮಾಡಿತೆಚ್ಚಾಳೊಗ್ಗಿನಲಿ ಹುರಿ
ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದೊಳು
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ಕವಿದುದೀತನ
ಕೂಡೆ ಘನಗಂಭೀರ ಭೇರಿಯ ಬಹಳ ರಭಸದೊಳು (ವಿರಾಟ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಭೀಷ್ಮನು ಬಂದುದನ್ನು ನೋಡಿ ಓಡಿ ಹೋಗುತ್ತಿದ್ದ ಸೈನಿಕರು ಧೈರ್ಯಮಾಡಿ ಕೂಡಿಕೊಂಡರು. ಭಯದ ಆರ್ತನಾದ ನಿಂತುಹೋಯಿತು, ಚತುರಂಗ ಸೈನ್ಯವು ಒಂದಾಗಿ ಕೂಡಿ ಭೇರಿ ನಿನಾದವನ್ನು ಮಾಡುತ್ತಾ ಅರ್ಜುನನನ್ನು ಮುತ್ತಿತು.

ಅರ್ಥ:
ಓಡು: ಧಾವಿಸು; ಆಳು: ಸೈನಿಕ; ಧೈರ್ಯ: ಎದೆಗಾರಿಕೆ, ಕೆಚ್ಚು; ಒಗ್ಗು: ಒಟ್ಟುಗೂಡು, ಗುಂಪಾಗು; ಹುರಿ: ಕೆಚ್ಚು, ಬಲ; ಅಬ್ಬರ: ಜೋರಾದ ಶಬ್ದ; ಮಗುಳೆ: ಮತ್ತೆ; ನಿಬ್ಬರ:ಅತಿಶಯ, ಹೆಚ್ಚಳ; ನಿಮಿಷ: ಕ್ಷಣಮಾತ್ರದೊಳು; ಕೂಡೆ; ಜೊತೆಗೂಡು; ಗರಿಗಟ್ಟು: ಶಕ್ತಿಶಾಲಿಯಾಗು; ಚತುರ್ಬಲ: ಚತುರಂಗ ಸೈನ್ಯ; ಜೋಡು: ಜೊತೆ; ಕವಿ: ಆವರಿಸು; ಕೂಡೆ: ಜೊತೆ; ಘನ: ಶ್ರೇಷ್ಠ, ಗಾಢ; ಗಂಭೀರ: ಆಳವಾದುದು; ಭೇರಿ: ಡಂಗುರ, ನಗಾರಿ; ರಭಸ: ವೇಗ;

ಪದವಿಂಗಡಣೆ:
ಓಡಿದ್+ಆಳ್+ಅಲ್ಲಲ್ಲಿ +ಧೈರ್ಯವ
ಮಾಡಿತೆಚ್ಚಾಳ್+ಒಗ್ಗಿನಲಿ +ಹುರಿ
ಗೂಡಿತ್+ಅಬ್ಬರ +ಮಗುಳೆ +ನಿಬ್ಬರವಾಯ್ತು +ನಿಮಿಷದೊಳು
ಕೂಡೆ +ಗರಿಗಟ್ಟಿತು +ಚತುರ್ಬಲ
ಜೋಡು +ಮಾಡಿತು +ಕವಿದುದ್+ಈತನ
ಕೂಡೆ +ಘನಗಂಭೀರ +ಭೇರಿಯ +ಬಹಳ +ರಭಸದೊಳು

ಅಚ್ಚರಿ:
(೧) ಗರಿಗಟ್ಟು, ಹುರಿಗೂದು, ದೈರ್ಯವಮಾಡು – ಸಾಮ್ಯಾರ್ಥ ಪದಗಳು

ಪದ್ಯ ೪೮: ಅರ್ಜುನನನ್ನು ಯಾರು ತಡೆದರು?

ಬಾಯ ಬಿಟ್ಟುದು ನೆರೆದ ಕೌರವ
ರಾಯದಳ ವಡಮುಖದೊಳದಟರು
ಹಾಯಿದರು ತಮತಮೆಗೆ ತೆರೆದರಸಾಯ್ತು ಕುರುಸೇನೆ
ಕಾಯಬೇಕೆಂದೆನುತ ವರ ಗಾಂ
ಗೇಯ ಚಾಪವ ತುಡುಕಿ ಬೆರಳೊಳು
ಸಾಯಕವ ತೂಗುತ್ತೆ ತಡೆದನು ಪಾರ್ಥನುರವಣೆಯ (ವಿರಾಟ ಪರ್ವ, ೯ ಸಂಧಿ, ೪೮ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಬೆದರಿ ಬಾಯಿ ಬಿಟ್ಟಿತು, ವೀರರು ಸೇನಾನಾಯಕರು ಎಂದು ಕರೆಸಿಕೊಳ್ಳುವವರೆಲ್ಲಾ ಅಡ್ಡಹಾದಿ ಹಿಡಿದು ತೊಲಗಿದರು. ಬಲವು ಅನಾಯಕವಾಯಿತು, ಇದನ್ನು ನೋಡಿ ಭೀಷ್ಮರು ಬಿಲ್ಲನ್ನು ಹಿಡಿದು ಬೆರಳಿನಲ್ಲಿ ಬಾಣವನ್ನು ತೂಗುತ್ತಾ ಈ ಸೈನ್ಯವನ್ನು ರಕ್ಷಿಸಬೇಕು ಎಂದು ನಿರ್ಧರಿಸಿ ಅರ್ಜುನನನ್ನು ತಡೆದರು.

ಅರ್ಥ:
ಬಿಟ್ಟು: ತೆರೆ; ನೆರೆ: ಗುಂಪು; ರಾಯ: ರಾಜ; ದಳ: ಸೈನ್ಯ; ಅದಟ: ಶೂರ, ಪರಾಕ್ರಮಿ; ಹಾಯಿ: ಮೇಲೆಬೀಳು, ಚಾಉ; ತೆರೆ: ಬಿಚ್ಚುವಿಕೆ; ಸೇನೆ: ಸೈನ್ಯ; ಕಾಯ: ರಕ್ಷನೆ; ವರ: ಶ್ರೇಷ್ಠ; ಚಾಪ: ಬಿಲ್ಲು; ತುಡುಕು: ಹೋರಾಡು, ಸೆಣಸು; ಬೆರಳು: ಅಂಗುಲಿ; ಸಾಯಕ: ಬಾಣ; ತೂಗು: ಅಲ್ಲಾಡಿಸು; ತಡೆ: ನಿಲ್ಲಿಸು; ಉರವಣೆ: ಅಬ್ಬರ; ರಭಸ;

ಪದವಿಂಗಡಣೆ:
ಬಾಯ+ ಬಿಟ್ಟುದು +ನೆರೆದ +ಕೌರವ
ರಾಯದಳ +ವಡಮುಖದೊಳ್+ಅದಟರು
ಹಾಯಿದರು +ತಮತಮೆಗೆ +ತೆರೆದರ+ಸಾಯ್ತು +ಕುರುಸೇನೆ
ಕಾಯಬೇಕೆಂದೆನುತ +ವರ+ ಗಾಂ
ಗೇಯ +ಚಾಪವ +ತುಡುಕಿ +ಬೆರಳೊಳು
ಸಾಯಕವ +ತೂಗುತ್ತೆ +ತಡೆದನು +ಪಾರ್ಥನ್+ಉರವಣೆಯ

ಅಚ್ಚರಿ:
(೧) ಬಾಯ, ರಾಯ, ಕಾಯ – ಪ್ರಾಸ ಪದ

ಪದ್ಯ ೪೭: ಕೌರವ ಸೇನೆಯವರು ಹೇಗೆ ಮಾತಾಡಿಕೊಂಡರು?

ಎಲೆಲೆ ಕರ್ಣದ್ರೋಣ ಗುರುಸುತ
ರಲಘು ಭುಜಬಲ ಕೃಪನು ಹೊಕ್ಕಿರಿ
ದಳುಕಿದರು ಮಝ ಭಾಪುರೆಂತುಟೊ ಪಾರ್ಥನಗ್ಗಳಿಕೆ
ಗೆಲುವನೊಬ್ಬನೆ ನಮ್ಮ ಬಲದಲಿ
ನಿಲುಕಿ ಹಿಂಗುವ ಸುಭಟರಿನಿಬರು
ಸುಲಭವೆಮಗೀ ಸೋಲವೆಂದುದು ಕೂಡೆ ಕುರುಸೇನೆ (ವಿರಾಟ ಪರ್ವ, ೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕೌರವನ ಸೇನೆಯವರು ಮಾತಾಡಿಕೊಳ್ಳುತ್ತಿದ್ದರು. ಎಲಾ ಕರ್ಣ, ದ್ರೋಣ, ಅಶ್ವತ್ಥಾಮ, ಕೃಪ ಇವರೆಲ್ಲರೂ ಅರ್ಜುನನೊಡನೆ ಸೆಣಸಿ ಸೋತು ಹೋದರು. ಅರ್ಜುನನ ಹಿರಿಮೆಯು ಎಷ್ಟಿದೆಯೋ ಏನೋ? ಗೆಲ್ಲುವವನು ಅವನೊಬ್ಬನು. ನಮ್ಮ ಸೈನ್ಯದ ವೀರರು ಅವನನ್ನೆದುರಿಸಿ ಹಿಂಜರಿಯುವವರು. ಆಹಾ ನಮಗೆ ಸೋಲು ಎಂಬುದು ಎಷ್ಟು ಸುಲಭ ಎಂದು ಮಾತಾಡಿಕೊಂಡರು.

ಅರ್ಥ:
ಅಲಘು: ಭಾರವಾದ; ಭುಜಬಲ: ಪರಾಕ್ರಮ; ಹೊಕ್ಕು: ಸೇರು; ಇರಿ: ಚುಚ್ಚು; ಅಳುಕು: ಹೆದರು, ನಡುಗು; ಮಝ: ಭಲೇ; ಭಾಪು: ಕೊಂಡಾಟದ ಒಂದು ಮಾತು; ಅಗ್ಗಳಿಕೆ: ಶ್ರೇಷ್ಠತೆ; ಗೆಲುವು: ಜಯ; ಬಲ: ಶಕ್ತಿ; ನಿಲುಕು: ಚಾಚುವಿಕೆ; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ; ಭಟ: ಸೈನಿಕ; ಇನಿಬರು: ಇಷ್ಟುಜನ; ಸುಲಭ: ನಿರಾಯಾಸ; ಸೋಲು: ಪರಾಭವ; ಕೂಡು: ಸೇರು, ಈಡೇರು;

ಪದವಿಂಗಡಣೆ:
ಎಲೆಲೆ +ಕರ್ಣ+ದ್ರೋಣ +ಗುರುಸುತರ್
ಅಲಘು +ಭುಜಬಲ+ ಕೃಪನು +ಹೊಕ್ಕಿರಿದ್
ಅಳುಕಿದರು +ಮಝ +ಭಾಪುರೆಂತುಟೊ+ ಪಾರ್ಥನ್+ಅಗ್ಗಳಿಕೆ
ಗೆಲುವನ್+ಒಬ್ಬನೆ +ನಮ್ಮ +ಬಲದಲಿ
ನಿಲುಕಿ +ಹಿಂಗುವ +ಸುಭಟರ್+ಇನಿಬರು
ಸುಲಭವ್+ಎಮಗೀ +ಸೋಲವೆಂದುದು +ಕೂಡೆ +ಕುರುಸೇನೆ

ಅಚ್ಚರಿ:
(೧) ಕೌರವ ಸೇನೆಯವರ ಸ್ಥಿತಿ – ನಮ್ಮ ಬಲದಲಿ ನಿಲುಕಿ ಹಿಂಗುವ ಸುಭಟರಿನಿಬರು ಸುಲಭವೆಮಗೀ ಸೋಲು