ಪದ್ಯ ೨೩: ವಿರಾಟ ಮತ್ತು ಜೀಮೂತನ ಸಂಭಾಷಣೆ ಹೇಗಿತ್ತು?

ಏನು ನಿಮ್ಮಯ ಬರವು ನಗರದ
ಲೇನು ಕೆಲಸವು ನೃಪತಿ ದೇಶದ
ಜಾಣಿಕೆಯು ತಾನೇನು ದರ್ಪದ ಬರವೊ ಹೇಳೆನಲು
ಧ್ಯಾನಿಸಿಯೆ ನಾವ್ ಬಂದ ಕೆಲಸವ
ಕಾಣಿಸುವ ಭಾರವನೇ ನಿಮ್ಮದು
ಮಾನನಿಧಿ ಕೌರವನು ಕಳುಹಿದ ಮಲ್ಲಗಾಳಗಕೆ (ವಿರಾಟ ಪರ್ವ, ೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ವಿರಾಟ ರಾಜನು ಮಲ್ಲರನ್ನು ಕಂಡು, ನಿಮ್ಮ ಆಗಮನದ ಕಾರಣವೇನು, ನಮ್ಮ ನಗರದಲ್ಲಿ ನಿಮಗೇನು ಕೆಲಸ, ನಿಮ್ಮ ದೇಶದಲ್ಲಿನ ವಿಶೇಷತೆಯೇನು, ನಿಮ್ಮ ದೇಹದ ದರ್ಪವನ್ನು ತೋರಲು ಸುಮ್ಮನೆ ಬಂದಿದ್ದೀರಾ ಎಂದು ಕೇಳಿದನು. ಆಗ ಮಲ್ಲರ ಗುಂಪಿನೊಡೆಯನಾದ ಜೀಮೂತನು ನಾವು ಯೋಚಿಸಿಯೇ ಇಲ್ಲಿಗೆ ಬಂದಿದ್ದೇವೆ, ನಾವು ಬಂದ ಕೆಲಸವನ್ನು ನಡೆಸಿಕೊಡುವುದು ನಿಮ್ಮ ಕೈಯಲ್ಲಿದೆ, ಕೌರವನು ಮಲ್ಲ ಕಾಳಗಕ್ಕೆ ನಮ್ಮನ್ನು ಇಲ್ಲಿಗೆ ಕಳಿಸಿದ್ದಾನೆ ಎಂದನು.

ಅರ್ಥ:
ಬರವು: ಆಗಮನ; ನಗರ: ಊರು; ಕೆಲಸ: ಕಾರ್ಯ; ನೃಪತಿ: ರಾಜ; ದೇಶ: ರಾಷ್ಟ್ರ; ಜಾಣ್: ಬುದ್ಧಿವಂತಿಕೆ; ದರ್ಪ: ಹೆಮ್ಮೆ, ಗರ್ವ; ಹೇಳು: ತಿಳಿಸು; ಧ್ಯಾನ: ಚಿಂತನೆ, ಮನನ; ಕೆಲಸ: ಕಾರ್ಯ; ಕಾನಿಸು: ತೋರು; ಭಾರವಣೆ: ಹೊರೆ; ಮಾನ: ಅಭಿಮಾನ, ಜಂಬ; ನಿಧಿ: ಐಶ್ವರ್ಯ; ಮಲ್ಲ: ಜಟ್ಟಿ; ಕಾಳಗ: ಯುದ್ಧ;

ಪದವಿಂಗಡಣೆ:
ಏನು+ ನಿಮ್ಮಯ +ಬರವು +ನಗರದಲ್
ಏನು +ಕೆಲಸವು+ ನೃಪತಿ +ದೇಶದ
ಜಾಣಿಕೆಯು +ತಾನೇನು +ದರ್ಪದ +ಬರವೊ +ಹೇಳೆನಲು
ಧ್ಯಾನಿಸಿಯೆ +ನಾವ್ +ಬಂದ +ಕೆಲಸವ
ಕಾಣಿಸುವ +ಭಾರವನೇ+ ನಿಮ್ಮದು
ಮಾನನಿಧಿ +ಕೌರವನು+ ಕಳುಹಿದ +ಮಲ್ಲ+ಕಾಳಗಕೆ

ಅಚ್ಚರಿ:
(೧) ಕೌರವನನ್ನು ಮಾನನಿಧಿ ಎಂದು ಕರೆದಿರುವುದು

ಪದ್ಯ ೨೨: ಮಲ್ಲರು ಹೇಗೆ ಪರಿಚಯಿಸಿಕೊಂಡರು?

ಇಂದುವಂಶದಲಧಿಕರಾಯರ
ವೃಂದದೊಳಗಾ ನಹುಷಪುತ್ರರು
ಸಂದರಾಮಾಲೆಯಲಿ ಬಳಿಕಾ ಶಾಂತ ಭೂಪತಿಗೆ
ನಂದನನು ಜನಿಸಲ್ಕೆಯವನಿಗೆ
ಯಂಧನೃಪ ಜನಿಸಿದನು ಆತನ
ನಂದನನು ಕುರುರಾಯನಾತನ ಮಲ್ಲರಾವೆಂದ (ವಿರಾಟ ಪರ್ವ, ೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಚಂದ್ರವಂಶದಲ್ಲಿ ಹುಟ್ಟಿದ ಅನೇಕ ರಾಜರ ಪರಂಪರೆಯಲ್ಲಿ ನಹುಷನು ಹುಟ್ಟಿದನು. ಅವನ ಪರಂಪರೆಯಲ್ಲಿ ಶಂತನು ಜನಿಸಿದನು. ಅವನ ಮಗನು ವಿಚಿತ್ರವೀರ್ಯ, ಅವನಿಗೆ ಧೃತರಾಷ್ಟ್ರ ಜನಿಸಿದನು. ಅವನ ಮಗನಾದ ದುರ್ಯೋಧನನು ಕುರುಕುಲಾಧಿಪನು, ಅವನ ಮನೆಯ ಮಲ್ಲರು ನಾವು ಎಂದು ಅವರ ಪರಿಚಯವನ್ನು ಮಾಡಿದರು.

ಅರ್ಥ:
ಇಂದು: ಚಂದ್ರ; ವಂಶ: ಕುಲ; ಅಧಿಕ: ಹೆಚ್ಚು; ರಾಯ: ರಾಜ; ವೃಂದ: ಗುಂಪು; ಸಂದು:ಸಂಬಂಧ; ಮಾಲೆ: ಸಾಲು, ಪಂಕ್ತಿ; ಬಳಿಕ: ನಂತರ; ಭೂಪತಿ: ರಾಜ; ನಂದ: ಮಗ; ಜನಿಸು: ಹುಟ್ಟು; ಅಂಧ: ಕುರುಡ; ನೃಪ: ರಾಜ; ಮಲ್ಲ: ಜಟ್ಟಿ;

ಪದವಿಂಗಡಣೆ:
ಇಂದು+ವಂಶದಲ್+ಅಧಿಕ+ರಾಯರ
ವೃಂದದೊಳಗ್+ಆ+ ನಹುಷ+ಪುತ್ರರು
ಸಂದರ್+ಆ+ಮಾಲೆಯಲಿ +ಬಳಿಕಾ+ ಶಾಂತ +ಭೂಪತಿಗೆ
ನಂದನನು +ಜನಿಸಲ್ಕೆ+ಅವನಿಗೆ
ಅಂಧನೃಪ +ಜನಿಸಿದನು +ಆತನ
ನಂದನನು +ಕುರುರಾಯನ್+ಆತನ +ಮಲ್ಲರಾವೆಂದ

ಅಚ್ಚರಿ:
(೧) ನೃಪ, ರಾಯ, ಭೂಪತಿ; ಪುತ್ರ, ನಂದನ – ಸಮನಾರ್ಥಕ ಪದ

ಪದ್ಯ ೨೧: ವಿರಾಟ ರಾಜನು ಯಾವ ಪ್ರಶ್ನೆಯನ್ನು ಕೇಳಿದನು?

ಉರವಣಿಸಿ ಮುಂದುಗ್ಘಡಿಪ ಭ
ಟ್ಟರುಗಳೆಲ್ಲರ ನಿಲಿಸಿ ತಾಳಿಯ
ವರಮಣಿಗಳಿಂದೆಸೆವ ಭೂಮೀಪತಿಗೆ ಜೀಮೂತ
ಶಿರವ ಬಾಗುತ ನಿಂದಿರಲು ಸಭೆ
ನೆರೆದು ನೋಡಲು ಮತ್ಸ್ಯ ಭೂಪತಿ
ಇರವದೆಲ್ಲಿಯದೆಂದು ಕೇಳಲು ನುಡಿದ ಜೀಮೂತ (ವಿರಾಟ ಪರ್ವ, ೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಮಲ್ಲರನ್ನು ಸ್ತುತಿಮಾಡುತ್ತಿದ್ದ ಸ್ತುತಿಪಾಠಕರನ್ನು ನಿಲ್ಲಿಸಿ, ಅಲಂಕೃತವಾಗಿ ಸಿಂಹಾಸನದ ಮೇಲೆ ಕುಳಿತ ರಾಜನಿಗೆ ಜೀಮೂತನು ತಲೆಬಾಗಿಸಿ ನಿಂತನು. ವಿರಾಟನು ನೀವು ಎಲ್ಲಿಯವರು ಎಂದು ಕೇಳಲು ಜೀಮೂತನು ಹೀಗೆ ನುಡಿದನು.

ಅರ್ಥ:
ಉರವಣೆ: ಆತುರ, ಅವಸರ; ಉಗ್ಘಡ: ಗಟ್ಟಿಯಾಗಿ ಕೂಗು; ಭಟ್ಟ: ಹೊಗಳುವವನು; ನಿಲಿಸು: ತಡೆ; ತಾಳಿ: ಮಂಗಳ ಸೂತ್ರ; ವರಮಣಿ: ಶ್ರೇಷ್ಠವಾದ ರತ್ನ; ಎಸೆ: ತೋರು; ಭೂಮೀಪತಿ: ರಾಜ; ಶಿರ: ತಲೆ; ಬಾಗು: ಎರಗು; ನಿಂದು: ನಿಲ್ಲು; ಸಭೆ: ಓಲಗ; ನೆರೆ: ಜೊತೆಗೂಡು; ನೋಡು: ವೀಕ್ಷಿಸು; ಭೂಪತಿ: ರಾಜ; ಕೇಳು: ಆಲಿಸು; ನುಡಿ: ಮಾತಾಡು;

ಪದವಿಂಗಡಣೆ:
ಉರವಣಿಸಿ +ಮುಂದ್+ಉಗ್ಘಡಿಪ+ ಭ
ಟ್ಟರುಗಳ್+ಎಲ್ಲರ +ನಿಲಿಸಿ +ತಾಳಿಯ
ವರಮಣಿಗಳಿಂದೆಸೆವ +ಭೂಮೀಪತಿಗೆ+ ಜೀಮೂತ
ಶಿರವ +ಬಾಗುತ +ನಿಂದಿರಲು +ಸಭೆ
ನೆರೆದು +ನೋಡಲು +ಮತ್ಸ್ಯ+ ಭೂಪತಿ
ಇರವದೆಲ್ಲಿಯದೆಂದು +ಕೇಳಲು +ನುಡಿದ+ ಜೀಮೂತ

ಅಚ್ಚರಿ:
(೧) ಭೂಮೀಪತಿ, ಭೂಪತಿ – ಸಮನಾರ್ಥಕ ಪದ

ಪದ್ಯ ೨೦: ಮಲ್ಲರು ಯಾರ ಆಸ್ಥಾನವನ್ನು ಪ್ರವೇಶಿಸಿದರು?

ಪರಿಪರಿಯ ಶೃಂಗಾರದಲಿ ಮ
ಲ್ಲರುಗಳೇಳಲು ಮುಂದೆ ನಾದಿಪ
ಬಿರುದು ಜಾಗಟೆ ಡೌಡೆ ಪಾಠಕನಿಕರದೊಗ್ಗಿನಲಿ
ಪುರವ ಹೊಕ್ಕರು ರಾಜಸಭೆಗೊಡ
ನಿರದೆ ನಡೆಯಲು ಮತ್ಸ್ಯಭೂಪತಿ
ಸಿರಿಯೊಳೋಲಗವಿತ್ತು ಕುಳ್ಳಿರ್ದನು ಸರಾಗದಲಿ (ವಿರಾಟ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಲ್ಲರೆಲ್ಲರೂ ಶೃಂಗಾರ ಮಾಡಿಕೊಂಡು ಸ್ತುತಿಪಾಠಕರು, ಜಾಗಟೆ, ನಗಾರಿ ವಾದ್ಯಗಳೊಡನೆ ಊರನ್ನು ಪ್ರವೇಶಿಸಿ ರಾಜ ಸಭೆಗೆ ಬಂದರು. ಅಲ್ಲಿ ವಿರಾಟರಾಜನು ಐಶ್ವರ್ಯಭರಿತನಾಗಿ ಓಲಗದಲ್ಲಿ ಸಂತೋಷದಿ ಆಸೀನನಾಗಿದ್ದನು.

ಅರ್ಥ:
ಪರಿಪರಿ: ಹಲವಾರು; ಶೃಂಗಾರ: ಅಲಂಕಾರ; ಮಲ್ಲ: ಜಟ್ಟಿ; ಏಳು: ಮೇಲೆ ಬಂದು; ನಾದು: ತೋಯಿಸು, ಲೇಪಿಸು; ಬಿರುದು: ಗೌರವಸೂಚಕ ಹೆಸರು; ಜಾಗಟೆ: ಒಂದು ಚರ್ಮವಾದ್ಯ; ಡೌಡೆ: ನಗಾರೈ; ಪಾಠಕ: ಸ್ತುತಿಮಾಡುವವ, ವಂದಿಮಾಗದ; ನಿಕರ: ಗುಂಪು; ಒಗ್ಗು: ಜೊತೆ; ಪುರ: ಊರು; ಹೊಕ್ಕು: ಸೇರು; ರಾಜಸಭೆ: ದರ್ಬಾರು; ನಡೆ: ಚಲಿಸು; ಭೂಪತಿ: ರಾಜ; ಸಿರಿ: ಐಶ್ವರ್ಯ; ಓಲಗ: ದರ್ಬಾರು; ಕುಳ್ಳಿರ್ದ: ಆಸೀನನಾಗು; ಸರಾಗ: ಪ್ರೀತಿ;

ಪದವಿಂಗಡಣೆ:
ಪರಿಪರಿಯ +ಶೃಂಗಾರದಲಿ+ ಮ
ಲ್ಲರುಗಳ್+ಏಳಲು +ಮುಂದೆ +ನಾದಿಪ
ಬಿರುದು+ ಜಾಗಟೆ +ಡೌಡೆ +ಪಾಠಕ+ನಿಕರದ್+ಒಗ್ಗಿನಲಿ
ಪುರವ+ ಹೊಕ್ಕರು +ರಾಜಸಭೆಗೊಡ
ನಿರದೆ +ನಡೆಯಲು +ಮತ್ಸ್ಯ+ಭೂಪತಿ
ಸಿರಿಯೊಳ್+ಒಲಗವಿತ್ತು+ ಕುಳ್ಳಿರ್ದನು +ಸರಾಗದಲಿ

ಅಚ್ಚರಿ:
(೧) ಜಾಗಟೆ, ಡೌಡೆ – ವಾದ್ಯಗಳ ಹೆಸರು;

ಪದ್ಯ ೧೯: ಮಲ್ಲರು ಎಲ್ಲಿಗೆ ಹೊರಟರು?

ಕರವ ಮುಗಿದಾ ದಾರುಕನ ಕೂ
ಡರಸ ನೇಮವನಿತ್ತು ಮಲ್ಲರ
ಕರೆಯೆನಲು ತಿರುಗಿದನು ಭಟ್ಟನ ಸಹಿತ ವಹಿಲದಲಿ
ಪುರದ ಹೊರಬನದಲ್ಲಿಯಿರುತಿ
ರ್ದರನು ಕಂಡು ನೃಪಾಲ ನಿಮ್ಮನು
ಕರೆಯ ಕಳುಹಿದನೆಂದೊಡೆದ್ದರು ಮಲ್ಲರತಿಮುದದಿ (ವಿರಾಟ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ದೂತ ದಾರುಕನು ಬಂದು ಕೈಮುಗಿಯಲು, ಮಲ್ಲರನ್ನು ಕರೆತರಲು ದೊರೆಯು ಅಪ್ಪಣೆ ಮಾಡಿದನು. ಅವನು ಭಟನೊಡನೆ ಊರ ಹೊರಗಿನ ಉಪವನದಲ್ಲಿದ್ದ ಮಲ್ಲರನ್ನು ಕಂಡು ರಾಜನು ನಿಮ್ಮನ್ನು ಕರೆಯ ಕಳಿಸಿದ್ದಾರೆ ಎಂದನು, ಮಲ್ಲರು ಈ ಆದೇಶವನ್ನು ಕೇಳಿ ಸಂತೋಷದಿಂದ ಮೇಲೆದ್ದು ರಾಜಸಭೆಗೆ ಹೊರಟರು.

ಅರ್ಥ:
ಕರ: ಹಸ್ತ; ಕರಮುಗಿ: ನಮಸ್ಕರಿಸು; ಕೂಡ: ಜೊತೆ; ಅರಸ: ರಾಜ; ನೇಮ: ನಿಯಮ, ಅಪ್ಪಣೆ; ಮಲ್ಲ: ಜಟ್ಟಿ; ಕರೆ: ಬರೆಮಾಡು; ತಿರುಗು: ಸುತ್ತು; ಭಟ್ಟ: ಸೈನಿಕ; ಸಹಿತ: ಜೊತೆ; ವಹಿಲ: ಬೇಗ, ತ್ವರೆ; ಪುರ: ಊರು; ಹೊರ: ಆಚೆ; ಬನ: ಕಾಡು; ಇರು: ವಾಸಿಸು; ಕಂಡು: ನೋಡು; ನೃಪಾಲ: ರಾಜ; ಎದ್ದು: ಮೇಲೇಳು; ಅತಿ: ಬಹಳ; ಮುದ: ಸಂತಸ;

ಪದವಿಂಗಡಣೆ:
ಕರವ +ಮುಗಿದ್+ಆ+ ದಾರುಕನ+ ಕೂಡ
ಅರಸ+ ನೇಮವನಿತ್ತು +ಮಲ್ಲರ
ಕರೆ+ಎನಲು +ತಿರುಗಿದನು +ಭಟ್ಟನ +ಸಹಿತ +ವಹಿಲದಲಿ
ಪುರದ +ಹೊರ+ಬನದಲ್ಲಿ+ಇರುತಿ
ರ್ದರನು +ಕಂಡು +ನೃಪಾಲ +ನಿಮ್ಮನು
ಕರೆಯ +ಕಳುಹಿದನೆಂದೊಡ್+ಎದ್ದರು +ಮಲ್ಲರ್+ಅತಿ+ಮುದದಿ

ಅಚ್ಚರಿ:
(೧) ಅರಸ, ನೃಪಾಲ – ಸಮನಾರ್ಥಕ ಪದ