ಪದ್ಯ ೧: ವೈಶಂಪಾಯನರು ಯಾವ ಸಂಗತಿಯನ್ನು ಹೇಳಲು ಪ್ರಾರಂಭಿಸಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವ ಭೂಮೀ
ಪಾಲರಿದ್ದರು ಗುಪಿತದಿಂದ ವಿರಾಟನಗರಿಯಲಿ
ಕಾಲಸ್ವಎದುದು ಹತ್ತುತಿಂಗಳ
ಮೇಲೆ ಮತ್ತೊಂದತಿಶಯೋಕ್ತಿಯ
ನಾಲಿಸೈ ವಿಸ್ತರದಲರಿಪುವೆನೆಂದನಾ ಮುನಿಪ (ವಿರಾಟ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ನಿನ್ನ ಪೂರ್ವಜರು ಗುಪ್ತವಾಗಿ ವಿರಾಟನಗರದಲ್ಲಿ ಹತ್ತು ತಿಂಗಳುಗಳನ್ನು ಕಳೆದರು. ನಂತರ ನಡೆದ ಒಂದು ಸಂಗತಿಯನ್ನು ವಿಸ್ತಾರವಾಗಿ ಹೇಳುತ್ತೇನೆ ಕೇಳು ಎಂದು ವೈಶಂಪಾಯನ ಮುನಿಗಳು ಹೇಳಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಪಾಲ: ರಕ್ಷಿಸುವ; ಪೂರ್ವ: ಹಿಂದಿನ; ಭೂಮಿ: ಧರಿತ್ರಿ; ಭೂಮೀಪಾಲ: ರಾಜ; ಗುಪಿತ: ಗೌಪ್ಯ, ರಹಸ್ಯ; ನಗರ: ಊರು; ಕಾಲ: ಸಮಯ; ಸವೆದು: ಕಳೆದು; ತಿಂಗಳು: ಮಾಸ; ಅತಿಶಯ: ಹೆಚ್ಚು; ಉಕ್ತಿ: ಮಾತು; ಆಲಿಸು: ಕೇಳು; ವಿಸ್ತರ: ವಿವರ; ಅರಿಪು: ಮನಸ್ಸಿಗೆ ತಿಳಿಯುವಂತೆ ಹೇಳು; ಮುನಿಪ: ಋಷಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ನಿಮ್ಮಯ +ಪೂರ್ವ +ಭೂಮೀ
ಪಾಲರಿದ್ದರು+ ಗುಪಿತದಿಂದ+ ವಿರಾಟ+ನಗರಿಯಲಿ
ಕಾಲ+ಸವೆದುದು +ಹತ್ತುತಿಂಗಳ
ಮೇಲೆ+ ಮತ್ತೊಂದ್+ಅತಿಶಯ+ಉಕ್ತಿಯನ್
ಆಲಿಸೈ +ವಿಸ್ತರದಲ್+ಅರಿಪುವೆನೆಂದನಾ +ಮುನಿಪ

ಅಚ್ಚರಿ:
(೧) ಧರಿತ್ರೀಪಾಲ, ಭೂಮೀಪಾಲ – ಸಮನಾರ್ಥಕ ಪದ

ಪದ್ಯ ೩೨: ದ್ರೌಪದಿಯು ಯಾರ ಸಖಿಯಾದಳು?

ಎನಲು ಮೆಚ್ಚಿದಳಾ ವಿರಾಟನ
ವನಿತೆ ವೀರರ ವಧುವನಾ ಸಖಿ
ಜನದೊಳಗೆ ನೇಮಿಸಿದಳನಿಬರಿಗಾಯ್ತು ನಿರ್ವಾಹ
ಮನದ ಢಗೆಯಡಗಿದವು ಮತ್ಸ್ಯೇ
ಶನ ಪುರಾಂತರದೊಳಗೆ ಮೈಮರೆ
ಸನುಪಮಿತ ಭುಜ ಸತ್ವರಿದ್ದರು ಭೂಪ ಕೇಳೆಂದ (ವಿರಾಟ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿಗೆ ವಿರಾಟನರಾಣಿಯು ಮೆಚ್ಚಿ ತನ್ನ ಸಖಿಯನ್ನಾಗಿ ನೇಮಿಸಿಕೊಂಡಳು. ಪಾಂಡವರಿಗೂ ದ್ರೌಪದಿಗೂ ಅಜ್ಞಾತವಾಸದ ಸಮಯದಲ್ಲಿ ತಲೆಮರೆಸಿಕೊಂಡಿರಲು ಒಂದು ದಾರಿ ಸಿಕ್ಕಿತು. ಅವರೆಲ್ಲರ ತಾಪಗಳೂ ಅಡಗಿದವು. ಮಹಾ ಪರಾಕ್ರಮಶಾಲಿಗಳಾದ ಅವರು ಮತ್ಸ್ಯನಗರದಲ್ಲಿ ಯಾರಿಗೂ ತಿಳಿಯದಂತೆ ಅಡಗಿಕೊಂಡಿದ್ದರು.

ಅರ್ಥ:
ಮೆಚ್ಚು: ಪ್ರೀತಿ, ಇಷ್ಟ; ವನಿತೆ: ಹೆಣ್ಣು, ಸ್ತ್ರೀ; ವೀರ: ಪರಾಕ್ರಮ; ವಧು: ಹೆಣ್ಣು; ಸಖಿ: ಗೆಳತಿ; ನೇಮಿಸು: ಅಪ್ಪಣೆ ಮಾಡು; ಅನಿಬರು: ಅಷ್ಟು ಜನ; ನಿರ್ವಾಹ: ವ್ಯವಸ್ಥೆ; ಮನ: ಮನಸ್ಸು; ಢಗೆ: ಕಾವು, ಕಳವಳ; ಅಡಗು: ಮರೆಯಾಗು; ಈಶ: ಒಡೆಯ; ಪುರ: ಊರು; ಅನುಪಮಿತ: ಉಪಮಾತೀತ; ಭುಜ: ಬಾಹು; ಸತ್ವ: ಸಾರ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಎನಲು +ಮೆಚ್ಚಿದಳ್+ಆ+ ವಿರಾಟನ
ವನಿತೆ+ ವೀರರ+ ವಧುವನ್+ಆ+ ಸಖಿ
ಜನದೊಳಗೆ +ನೇಮಿಸಿದಳ್+ಅನಿಬರಿಗಾಯ್ತು +ನಿರ್ವಾಹ
ಮನದ +ಢಗೆ+ಅಡಗಿದವು +ಮತ್ಸ್ಯೇ
ಶನ +ಪುರಾಂತರದೊಳಗೆ+ ಮೈಮರೆಸ್
ಅನುಪಮಿತ +ಭುಜ+ ಸತ್ವರಿದ್ದರು +ಭೂಪ +ಕೇಳೆಂದ

ಅಚ್ಚರಿ:
(೧) ವಿರಾಟನ ರಾಣಿ ಸುದೇಷ್ಣೆಯನ್ನು ವಿರಾಟನ ವನಿತೆ ಎಂದು ಕರೆದಿರುವುದು
(೨) ದ್ರೌಪದಿಯನ್ನು ವೀರರ ವಧು ಎಂದು ಕರೆದಿರುವುದು

ಪದ್ಯ ೩೧: ದ್ರೌಪದಿಯು ಯಾವ ಕೆಲಸವನ್ನು ಮಾಡುವೆನೆಂದು ಹೇಳಿದಳು?

ಏನ ಮಾಡಲು ಬಲ್ಲೆಯೆಂದರೆ
ಮಾನಿನಿಯ ಸಿರಿಮುಡಿಯ ಕಟ್ಟುವೆ
ಸೂನ ಮುಡಿಸುವೆ ವರಕಟಾಕ್ಷಕೆ ಕಾಡಿಯನಿಡುವೆ
ಏನ ಹೇಳಿದ ಮಾಡಬಲ್ಲೆನು
ಸಾನುರಾಗದೊಳೆಂದೆನಲು ವರ
ಮಾನಿನಿಯ ನಸುನಗುತ ನುಡಿಸಿದಳಂದು ವಿನಯದಲಿ (ವಿರಾಟ ಪರ್ವ, ೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ವಿರಾಟ ರಾಣಿಯು ಏನು ಮಾಡಲು ಬಲ್ಲೆ ಎಂದು ಕೇಳಲು, ದ್ರೌಪದಿಯು ಮಹಾರಾಣಿಯವರ ಕೇಶ ವಿನ್ಯಾಸ ಮಾಡಬಲ್ಲೆ, ಅವರ ಮುಡಿಗೆ ಹೂವನ್ನು ಮುಡಿಸಬಲ್ಲೆ, ಅವರ ಕಣ್ಣಿಗೆ ಕಾಡಿಗೆಯನ್ನು ಇಡಬಲ್ಲೆ, ಯಾವ ಕೆಲಸವನ್ನು ಹೇಳಿದರೂ ನಾನು ಪ್ರೀತಿಯಿಂದ ಮಾಡಬಲ್ಲೆ ಎಂದು ಹೇಳಲು, ಸುದೇಷ್ಣೆಯು ದ್ರೌಪದಿಯ ಮಾತಿಗೆ ಮೆಚ್ಚಿದಳು.

ಅರ್ಥ:
ಮಾಡು: ನಿರ್ವಹಿಸು; ಬಲ್ಲೆ: ತಿಳಿ; ಮಾನಿನಿ: ಹೆಣ್ಣು; ಸಿರಿಮುಡಿ: ಶ್ರೇಷ್ಠವಾದ ಶಿರ; ಕಟ್ಟು:ಬಂಧಿಸು; ಸೂನ: ಪುಷ್ಪ, ಹೂವು; ಮುಡಿಸು: ತಲೆಗೆ ಅಲಂಕರಿಸು; ವರ: ಶ್ರೇಷ್ಠ; ಕಟಾಕ್ಷ: ಓರೆನೋಟ, ದೃಷ್ಟಿ; ಕಾಡಿಗೆ: ಕಣ್ಣಿಗೆ ಹಚ್ಚಿಕೊಳ್ಳುವ ಕಪ್ಪು, ಅಂಜನ; ಅನುರಾಗ: ಪ್ರೀತಿ; ನಸುನಗು: ಸಂತಸ; ನುಡಿಸು: ಮಾತನಾಡಿಸು; ವಿನಯ: ಸೌಜನ್ಯ;

ಪದವಿಂಗಡಣೆ:
ಏನ +ಮಾಡಲು +ಬಲ್ಲೆ+ಎಂದರೆ
ಮಾನಿನಿಯ +ಸಿರಿಮುಡಿಯ +ಕಟ್ಟುವೆ
ಸೂನ +ಮುಡಿಸುವೆ +ವರ+ಕಟಾಕ್ಷಕೆ+ ಕಾಡಿಯನಿಡುವೆ
ಏನ+ ಹೇಳಿದ +ಮಾಡಬಲ್ಲೆನು
ಸಾನುರಾಗದೊಳ್+ಎಂದೆನಲು +ವರ
ಮಾನಿನಿಯ +ನಸುನಗುತ+ ನುಡಿಸಿದಳಂದು+ ವಿನಯದಲಿ

ಅಚ್ಚರಿ:
(೧) ಮಾನಿನಿ – ೨, ೬ ಸಾಲಿನ ಮೊದಲ ಪದ

ಪದ್ಯ ೩೦: ದ್ರೌಪದಿ ತನ್ನನ್ನು ಹೇಗೆ ಪರಿಚಯಿಸಿಕೊಂಡಳು?

ಅತುಳಬಲ ಗಂಧರ್ವರೈವರು
ಪತಿಗಳೆನಗುಂಟೆನ್ನ ಚಿತ್ತಕೆ
ಖತಿಯಮಾಡಿದರೊಂದು ವರುಷವು ಬಿಡುವೆನವರುಗಳ
ಸತತವಾ ಕುಂತೀಕುಮಾರರ
ಸತಿಯನೋಲೈಸಿದ್ದೆ ಬಳಿಕವ
ರತಿಗಹನದಲಿ ನಿಷ್ಠರಾಗಲು ತನಗೆ ಬರವಾಯ್ತು (ವಿರಾಟ ಪರ್ವ, ೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಮಹಾ ಪರಾಕ್ರಮಿಗಳಾದ ಐದು ಗಂಧರ್ವರು ನನ್ನ ಪತಿಗಳು. ನನ್ನ ಮನಸ್ಸಿಗೆ ಬೇಸರವಾದಾಗ ಅವರನ್ನು ಒಂದು ವರ್ಷ ಅಗಲಿ ಭೂಮಿಗೆ ಬರುತ್ತೇನೆ. ಇದುವರೆಗೆ ಹೀಗೆ ಬಂದಿದ್ದಾಗ ದ್ರೌಪದಿಯನ್ನು ಓಲೈಸಿಕೊಂಡಿದ್ದೆ. ಪಾಂಡವರು ಕಾಡಿಗೆ ಹೋದದ್ದರಿಂದ ನಿಮ್ಮ ಬಳಿಗೆ ಬಂದಿದ್ದೇನೆ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಅತುಳಬಲ: ಮಹಾ ಪರಾಕ್ರಮಿ; ಗಂಧರ್ವ: ಖಚರು; ಪತಿ: ಗಂಡ; ಚಿತ್ತ: ಮನಸ್ಸು; ಖತಿ: ಕೋಪ; ವರುಷ: ಸಂವತ್ಸರ; ಬಿಡುವೆ: ತೊರೆ; ಸತತ: ಯಾವಾಗಲು; ಕುಮಾರ: ಮಕ್ಕಳು; ಸತಿ: ಹೆಂಡತಿ; ಓಲೈಸು: ಉಪಚರಿಸು; ಬಳಿಕ: ನಂತರ; ಅತಿ: ಬಹಳ; ಗಹನ: ಕಾಡು, ಅಡವಿ; ನಿಷ್ಠ: ಶ್ರದ್ಧೆಯುಳ್ಳವ; ಬರವು: ಆಗಮನ;

ಪದವಿಂಗಡಣೆ:
ಅತುಳಬಲ +ಗಂಧರ್ವರ್+ಐವರು
ಪತಿಗಳ್+ಎನಗುಂಟ್+ಎನ್ನ +ಚಿತ್ತಕೆ
ಖತಿಯ+ಮಾಡಿದರ್+ಒಂದು +ವರುಷವು+ ಬಿಡುವೆನ್+ಅವರುಗಳ
ಸತತವ್+ಆ+ ಕುಂತೀ+ಕುಮಾರರ
ಸತಿಯನ್+ಓಲೈಸಿದ್ದೆ+ ಬಳಿಕವರ್
ಅತಿ+ಗಹನದಲಿ +ನಿಷ್ಠರಾಗಲು +ತನಗೆ +ಬರವಾಯ್ತು

ಅಚ್ಚರಿ:
(೧) ಪತಿ, ಖತಿ, ಸತಿ, ಅತಿ – ಪ್ರಾಸ ಪದಗಳು