ಪದ್ಯ ೩೦: ಯುವತಿಯರು ಹೇಗೆ ಪ್ರಯಾಣ ಪ್ರಾರಂಭಿಸಿದರು?

ಸವಡಿಯಾನೆಯ ಮೇಲೆ ಗಣಿಕಾ
ನಿವಹ ದಂಡಿಗೆಗಳಲಿ ಕೆಲಬರು
ಯುವತಿಯರು ಕೆಲರಶ್ವಚಯದಲಿ ರಥನಿಕಾಯದಲಿ
ಯುವತಿಮಯವೋ ಸೃಷ್ಟಿ ಗಣಿಕಾ
ಯುವತಿಯರ ನೆಲನೀದುದೋ ದಿಗು
ವಿವರ ಕರೆದುದೊ ಕಾಂತೆಯರನೆನೆ ಕವಿದುದಗಲದಲಿ (ಅರಣ್ಯ ಪರ್ವ, ೧೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಜೋಡಿ ಆನೆಗಳ ಮೇಲೆ, ಪಲ್ಲಕ್ಕಿಗಳಲ್ಲಿ, ಕುದುರೆಗಳ ಮೇಲೆ, ರಥಗಲಲ್ಲಿ, ಗಣಿಕಾಯುವತಿಯರು ಹೋಗುತ್ತಿದ್ದರೆ, ಸೃಷ್ಟಿಯಲ್ಲಿರುವುದು ಬರೀ ಯುವತಿಯರೋ, ನೆಲವು ಇಷ್ಟು ಜನ ಯುವತಿಯರನ್ನು ಸೃಜಿಸಿತೋ ಅಥವಾ ದಿಕ್ಕುಗಳು ಇವರನ್ನು ಕರೆದುಕೊಂಡು ಬಂದವೋ ಎನ್ನುವ ಹಾಗೆ ಕಾಣುತ್ತಿತ್ತು.

ಅರ್ಥ:
ಸವಡಿ: ಜೊತೆ, ಜೋಡಿ; ಆನೆ: ಗಜ; ಗಣಿಕ: ವೇಶ್ಯೆ; ನಿವಹ: ಗುಂಪು; ದಂಡಿಗೆ: ಪಲ್ಲಕ್ಕಿ; ಕೆಲಬರು: ಕೆಲವರು; ಯುವತಿ: ಹೆಣ್ಣು; ಅಶ್ವ: ಕುದುರೆ; ಚಯ: ಸಮೂಹ, ರಾಶಿ; ರಥ: ಬಂಡಿ; ನಿಕಾಯ: ಗುಂಪು; ಮಯ: ತುಂಬಿರುವುದು; ಸೃಷ್ಟಿ: ಉತ್ಪತ್ತಿ, ಹುಟ್ಟು; ನೆಲ:ಭೂಮಿ; ದಿಗು: ದಿಕ್ಕು; ವಿವರ: ವಿಸ್ತಾರ, ಹರಹು; ಕರೆದು: ಬರೆಮಾಡು; ಕಾಂತೆ: ಹೆಣ್ಣು; ಕವಿ: ಆವರಿಸು; ಅಗಲ: ವಿಸ್ತಾರ;

ಪದವಿಂಗಡಣೆ:
ಸವಡಿ+ಆನೆಯ +ಮೇಲೆ +ಗಣಿಕಾ
ನಿವಹ +ದಂಡಿಗೆಗಳಲಿ+ ಕೆಲಬರು
ಯುವತಿಯರು +ಕೆಲರ್+ಅಶ್ವ+ಚಯದಲಿ +ರಥ+ನಿಕಾಯದಲಿ
ಯುವತಿಮಯವೋ +ಸೃಷ್ಟಿ +ಗಣಿಕಾ
ಯುವತಿಯರ +ನೆಲನೀದುದೋ +ದಿಗು
ವಿವರ +ಕರೆದುದೊ +ಕಾಂತೆಯರನ್+ಎನೆ +ಕವಿದುದ್+ಅಗಲದಲಿ

ಅಚ್ಚರಿ:
(೧) ೩ ಸಾಲುಗಳಲ್ಲಿ ಯುವತಿ ಮೊದಲ ಪದವಾಗಿರುವುದು
(೨) ಗಣಿಕಾ – ೧, ೪ ಸಾಲಿನ ಕೊನೆ ಪದ
(೩) ಚಯ, ನಿಕಾಯ, ನಿವಹ; ಕಾಂತೆ, ಯುವತಿ – ಸಮನಾರ್ಥಕ ಪದ