ಪದ್ಯ ೩೪: ರಾಕ್ಷಸ ಭಟರು ಹೇಗೆ ಮುನ್ನುಗ್ಗಿದರು?

ಎಲೆಲೆ ಸುರಪತಿಯಾಳು ಕೋಟೆಯ
ನಿಳಿವುತದೆ ನಡೆಯೆನುತ ದಾನವ
ರುಲಿದು ಕವಿದುದು ಖಾತಿಯಲಿ ಮಿಗೆ ಭಾಷೆಗಳ ಕೊಡುತ
ತಲೆಯ ಹೊಯ್ದಡೆಗೆಡಹು ಸುರಪನ
ಲಲನೆಯರು ಮುಂದಲೆಯಕೊಯ್ ಹುಲು
ಸುರರು ಸರಿಯೇ ಮಝಯೆನುತ್ತೈದಿದರು ರಣಭಟರು (ಅರಣ್ಯ ಪರ್ವ, ೧೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ರಾಕ್ಷಸ ಸೈನಿಕರು, ಎಲವೊ ಎಲವೋ ದೇವತೆಗಳು ಕೋಟೆಯೊಳಕ್ಕೆ ಇಳಿಯುತ್ತಿದ್ದಾರೆ, ಮುನ್ನುಗ್ಗಿ, ನಡೆಯಿರಿ ತಡೆಯೋಣ ಎನ್ನುತ್ತಾ ಭಾಷೆಗಳನ್ನು ಮಾಡುತ್ತಾ ಶತ್ರುಗಳ ತಲೆಯನ್ನು ಹೊಯ್ದು ಹಾಕು, ಕೆಳಕ್ಕೆ ಕೆಡವು, ಅಪ್ಸರೆಯರ ಮುಂದಲೆಯನ್ನು ಕೊಯ್, ಈ ಕೆಲಸಕ್ಕೆ ಬಾರದ ದೇವತೆಗಳು ನಮಗೆ ಸರಿಯೇ ಎನ್ನುತ್ತಾ ಮುಂದೆ ನುಗ್ಗಿದರು.

ಅರ್ಥ:
ಸುರಪತಿ: ಇಂದ್ರ; ಆಳು: ಸೇವಕ; ಕೋಟೆ: ದುರ್ಗ; ಇಳಿ: ಕೆಳಕ್ಕೆ ಬಾ; ನಡೆ: ಮುನ್ನುಗ್ಗು; ದಾನವ: ರಾಕ್ಷಸ; ಉಲಿ: ಅರಚು; ಕವಿ: ಆವರಿಸು; ಖಾತಿ: ಕೋಪ, ಕ್ರೋಧ; ಮಿಗೆ: ಮತ್ತು, ಅಧಿಕ; ಭಾಷೆ: ಮಾತು; ಕೊಡು: ನೀಡು; ತಲೆ: ಶಿರ; ಹೊಯ್ದು: ಹೊಡೆ; ಕೆಡಹು: ಕೆಳಕ್ಕೆ ನೂಕು; ಲಲನೆ: ಹೆಣ್ಣು; ಸುರಪ: ಇಂದ್ರ; ಮುಂದಲೆ: ತಲೆಯ ಮುಂಭಾಗ; ಕೊಯ್: ಸೀಳು; ಹುಲು:ಕ್ಷುದ್ರ, ಅಲ್ಪ; ಸುರ: ದೇವತೆ; ಸರಿ: ಸಮಾನ; ಮಝ: ಕೊಂಡಾಟದ ಒಂದು ಮಾತು; ಐದು: ಬಂದು ಸೇರು; ರಣ: ಯುದ್ಧ; ಭಟ: ಸೈನಿಕ, ಪರಾಕ್ರಮಿ;

ಪದವಿಂಗಡಣೆ:
ಎಲೆಲೆ +ಸುರಪತಿ+ಆಳು +ಕೋಟೆಯನ್
ಇಳಿವುತದೆ +ನಡೆ+ಎನುತ +ದಾನವರ್
ಉಲಿದು +ಕವಿದುದು +ಖಾತಿಯಲಿ +ಮಿಗೆ +ಭಾಷೆಗಳ +ಕೊಡುತ
ತಲೆಯ+ ಹೊಯ್ದಡೆ+ಕೆಡಹು+ ಸುರಪನ
ಲಲನೆಯರು+ ಮುಂದಲೆಯ+ಕೊಯ್+ ಹುಲು
ಸುರರು +ಸರಿಯೇ +ಮಝ+ಯೆನುತ್+ಐದಿದರು+ ರಣ+ಭಟರು

ಅಚ್ಚರಿ:
(೧) ಸುರಪತಿ, ಸುರಪ – ಸಮನಾರ್ಥಕ ಪದ
(೨) ರಾಕ್ಷಸರ ಆರ್ಭಟ – ತಲೆಯ ಹೊಯ್ದಡೆಗೆಡಹು ಸುರಪನ ಲಲನೆಯರು ಮುಂದಲೆಯಕೊಯ್ ಹುಲು ಸುರರು ಸರಿಯೇ

ಪದ್ಯ ೩೩: ಅರ್ಜುನನು ಕೋಟೆಯ ಮೇಲೆ ಹೇಗೆ ದಾಳಿ ಮಾಡಿದನು?

ಮುರಿದುದಮರರು ಮತ್ತೆ ಬೊಬ್ಬಿರಿ
ದುರುಬಿದೆನು ಹೆಸರೆನಿಸಿದಸುರರ
ತರಿದೆನದರೊಳು ಕೋಟಿ ಸಂಖ್ಯೆಯನೈಂದ್ರಬಾಣದೊಳು
ಹರಿದುದಮರಾರಿಗಳು ಕೋಟೆಯ
ಹೊರಗೆ ಸುರಬಲವೌಕಿ ಬಿಟ್ಟುದು
ತುರುಗಿತಮರರು ಖಳನದುರ್ಗದ ತುದಿಯ ತೆನೆಗಳಲಿ (ಅರಣ್ಯ ಪರ್ವ, ೧೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ದೇವತೆಗಳು ಸೋತು ಹಿಮ್ಮೆಟ್ಟಿದರು. ಆಗ ನಾನು ಗರ್ಜಿಸಿ ರಾಕ್ಷಸರ ಮೇಲೆ ಬಿದ್ದು ಕೋಟೆ ಸಂಖ್ಯೆಯಲ್ಲಿ ರಾಕ್ಷಸ ವೀರರನ್ನು ಕೊಂದೆನು. ರಾಕ್ಷಸರು ಓಡಿದರು ದೇವ ಸೈನ್ಯವು ರಾಕ್ಷಸರ ಊರ ಕೋಟೆಯವರೆಗೆ ನುಗ್ಗಿ ಕೊತ್ತಳಗಳನ್ನು ಹತ್ತಿತು.

ಅರ್ಥ:
ಮುರಿ: ಸೀಳು; ಅಮರ: ದೇವತೆ; ಬೊಬ್ಬಿರಿ: ಗರ್ಜಿಸು; ಉರುಬು: ಅತಿಶಯವಾದ ವೇಗ; ಅಸುರ: ರಾಕ್ಷಸ; ತರಿ: ಕಡಿ, ಕತ್ತರಿಸು; ಕೋಟಿ: ಅಸಂಖ್ಯಾತ; ಬಾಣ: ಶರ; ಹರಿ: ಸೀಳು; ಅಮರಾರಿ: ದಾನವ; ಹೊರಗೆ: ಆಚೆ; ಸುರ: ದೇವತೆ; ಔಕು: ನೂಕು; ಖಳ: ದುಷ್ಟ; ದುರ್ಗ: ಕೋಟೆ; ತುದಿ: ಕೊನೆ, ಅಗ್ರಭಾಗ; ತೆನೆ: ಕೋಟೆಯ ಮೇಲ್ಭಾಗ, ಕೊತ್ತಳ; ಹೆಸರು: ನಾಮ;

ಪದವಿಂಗಡಣೆ:
ಮುರಿದುದ್+ಅಮರರು +ಮತ್ತೆ +ಬೊಬ್ಬಿರಿದ್
ಉರುಬಿದೆನು +ಹೆಸರ್+ಎನಿಸಿದ್+ಅಸುರರ
ತರಿದೆನ್+ಅದರೊಳು +ಕೋಟಿ +ಸಂಖ್ಯೆಯನ್+ಐಂದ್ರ+ಬಾಣದೊಳು
ಹರಿದುದ್+ಅಮರಾರಿಗಳು+ ಕೋಟೆಯ
ಹೊರಗೆ+ ಸುರಬಲವ್+ಔಕಿ +ಬಿಟ್ಟುದು
ತುರುಗಿತ್+ಅಮರರು +ಖಳನ+ದುರ್ಗದ +ತುದಿಯ +ತೆನೆಗಳಲಿ

ಚ್ಚರಿ:
(೧) ಅಸುರ, ಅಮರಾರಿ – ಸಮನಾರ್ಥಕ ಪದ
(೨) ತರಿ, ಹರಿ, ಮುರಿ – ಪ್ರಾಸ ಪದಗಳು

ಪದ್ಯ ೩೨: ಯುದ್ಧದ ತೀವ್ರತೆ ಹೇಗಿತ್ತು?

ಒಡೆದುದಿಳೆಯೆನೆ ಸಮ ವಿಷಮದುರಿ
ಗಡಲು ಶಿವ ಶಿವಯೆನೆ ನಿಹಾರದ
ದಡಿಗೆ ದಾನವರೈದಿ ಕವಿದುದು ಕೆದರಿ ಸುರಬಲವ
ಫಡ ಫಡಿದಿರಾಗಲಿ ಸುರೇಂದ್ರನ
ತುಡುಕ ಹೇಳಾ ಕಾಲವಿದಲಾ
ತೊಡರೆನುತ ಹೊಯ್ದುರುಬಿತಸುರರು ಸುರರ ಸಂದಣಿಯ (ಅರಣ್ಯ ಪರ್ವ, ೧೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಿವ ಶಿವಾ ಭೂಮಿಯೊಡೆಯಿತು. ವಿಷಮಾಗ್ನಿಯ ಸಮುದ್ರ ಎನ್ನುವಂತೆ ಮಹಾಬಲಶಾಲಿಗಳಾದ ಸ್ಥೂಲಕಾಯರಾದ ರಾಕ್ಷಸರು ದೇವಸೈನ್ಯವನ್ನು ಭೇದಿಸಿ ಮತ್ತಿದರು. ಫಡ ಫಡಾ ದೇವೆಂದ್ರನು ಇದಿರಾಗಲಿ, ನಮ್ಮನ್ನು ಕೆಣಕಲಿ. ಯುದ್ಧಕ್ಕೆ ಇದೇ ಕಾಲ ಎನ್ನುತ್ತಾ ರಾಕ್ಷಸರು ದೇವತೆಗಳ ಮೇಲ್ವಾಯ್ದು ಹೋಯ್ದರು.

ಅರ್ಥ:
ಒಡೆದು: ಸೀಳು; ಇಳೆ: ಭೂಮಿ; ಸಮ: ಮಟ್ಟಸವಾದ, ಚಪ್ಪಟೆಯಾದ; ವಿಷಮ: ಸಮವಾಗಿಲ್ಲದಿರುವುದು; ಉರಿ: ಜ್ವಾಲೆ; ಕಡಲು: ಸಮುದ್ರ; ನಿಹಾರ: ಮಂಜಿನಂತೆ ದಟ್ಟವಾಗಿರುವುದು; ಕವಿದು: ಮುಸುಕು; ಕೆದರು: ಹರಡು; ಸುರಬಲ: ದೇವತೆಗಳ ಸೈನ್ಯ; ಫಡ: ಕೋಪಗಳನ್ನು ಸೂಚಿಸುವ ಒಂದು ಮಾತು; ಸುರೇಂದ್ರ: ಇಂದ್ರ; ತುಡುಕು: ಹೋರಾಡು; ಕಾಲ: ಸಮಯ; ತೊಡರು: ಸಂಬಂಧ, ಸಂಕೋಲೆ, ಸರಪಳಿ; ಹೊಯ್ದು: ಹೊಡೆದು; ಉರುಬು: ಅತಿಶಯವಾದ ವೇಗ; ಅಸುರ: ರಾಕ್ಷಸ; ಸುರ: ದೇವತೆ; ಸಂದಣಿ: ಗುಂಪು, ಸಮೂಹ;

ಪದವಿಂಗಡಣೆ:
ಒಡೆದುದ್+ಇಳೆಯೆನೆ +ಸಮ+ ವಿಷಮದ್+ಉರಿ
ಕಡಲು +ಶಿವ +ಶಿವಯೆನೆ +ನಿಹಾರದ
ದಡಿಗೆ+ ದಾನವರ್+ಐದಿ+ ಕವಿದುದು +ಕೆದರಿ +ಸುರಬಲವ
ಫಡ+ ಫಡಿದಿರಾಗಲಿ +ಸುರೇಂದ್ರನ
ತುಡುಕ +ಹೇಳಾ +ಕಾಲವಿದಲಾ
ತೊಡರೆನುತ +ಹೊಯ್ದ್+ಉರುಬಿತ್+ಅಸುರರು+ ಸುರರ+ ಸಂದಣಿಯ

ಅಚ್ಚರಿ:
(೧) ಯುದ್ಧದ ತೀವ್ರತೆಯನ್ನು ಹೇಳುವ ಪರಿ – ಒಡೆದುದಿಳೆಯೆನೆ ಸಮ ವಿಷಮದುರಿ
ಗಡಲು ಶಿವ ಶಿವಯೆನೆ

ಪದ್ಯ ೩೧: ರಾಕ್ಷಸ ಭಟರು ಹೇಗೆ ಮುನ್ನುಗ್ಗಿದರು?

ಜೀಯ ಖಾತಿಯಿದೇಕೆ ದಿವಿಜರ
ರಾಯನರಸಿಯ ನಿನ್ನ ತೊತ್ತಿರ
ಲಾಯದಲಿ ತೋರುವೆವು ತಾತಾ ವೀಳೆಯವನೆನುತ
ಹಾಯಿದರು ತಮತಮಗೆ ಮುಂಗುಡಿ
ದಾಯದಲಿ ಧಟ್ಟಿಸುವ ನಿಸ್ಸಾ
ಳಾಯತದ ಬಹು ವಿಧದ ವಾದ್ಯದ ಲಳಿಯ ಲಗ್ಗೆಯಲಿ (ಅರಣ್ಯ ಪರ್ವ, ೧೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ರಾಕ್ಷಸ ಭಟರು, ಜೀಯ ಇಷ್ಟೇಕೆ ಕೋಪ? ದೇವೇಂದ್ರನ ರಾಣಿಯನ್ನು ನಿನ್ನ ದಾಸಿಯರಿರುವ ಜಾಗಕ್ಕೆ ಸೇರಿಸಿ ತೋರಿಸುತ್ತೇನೆ, ವೀಳೆಯನ್ನು ನೀಡು ಎಂದು ಒಬ್ಬರಿಂದೊಬ್ಬರು ಮುನ್ನುಗ್ಗಿ ಬಹುವಿಧದ ವಾದ್ಯಗಳು ಮೊಳಗುತ್ತಿರಲು ಯುದ್ಧಕ್ಕೆ ಬಂದರು.

ಅರ್ಥ:
ಜೀಯ: ಒಡೆಯ; ಖಾತಿ: ಕೋಪ, ಕ್ರೋಧ; ದಿವಿಜ: ದೇವ, ಸುರರು; ರಾಯ: ಒಡೆಯ; ಅರಸಿ: ರಾಣಿ; ತೊತ್ತು: ದಾಸಿ; ಲಾಯ: ಸ್ಥಳ; ತೋರು: ಕಾಣಿಸು; ತಾ: ಕೊಡು; ವೀಳೆ: ತಾಂಬೂಲ; ಹಾಯಿ: ಮೇಲೆಬೀಳು; ಧಟ್ಟಿಸು: ಗದರಿಸು; ನಿಸ್ಸಾಳ: ಚರ್ಮವಾದ್ಯ; ಆಯತ: ನೆಲೆ; ಬಹು: ಬಹಳ; ವಿಧದ: ಬಗೆ; ವಾದ್ಯ: ಸಂಗೀತದ ಸಾಧನ; ಲಳಿ: ರಭಸ; ಲಗ್ಗೆ: ಮುತ್ತಿಗೆ, ಆಕ್ರಮಣ;

ಪದವಿಂಗಡಣೆ:
ಜೀಯ +ಖಾತಿ+ಇದೇಕೆ +ದಿವಿಜರ
ರಾಯನ್+ಅರಸಿಯ +ನಿನ್ನ +ತೊತ್ತಿರ
ಲಾಯದಲಿ +ತೋರುವೆವು +ತಾ+ತಾ +ವೀಳೆಯವನ್+ಎನುತ
ಹಾಯಿದರು +ತಮತಮಗೆ+ ಮುಂಗುಡಿದ್
ಆಯದಲಿ +ಧಟ್ಟಿಸುವ +ನಿಸ್ಸಾ
ಳಾಯತದ +ಬಹು +ವಿಧದ +ವಾದ್ಯದ +ಲಳಿಯ +ಲಗ್ಗೆಯಲಿ

ಅಚ್ಚರಿ:
(೧) ದಿವಿಜರನ್ನು ಸೋಲಿಸುವೆ ಎಂದು ಹೇಳುವ ಪರಿ – ದಿವಿಜರ ರಾಯನರಸಿಯ ನಿನ್ನ ತೊತ್ತಿರ
ಲಾಯದಲಿ ತೋರುವೆವು ತಾತಾ ವೀಳೆಯವನೆನುತ

ಪದ್ಯ ೩೦: ದಾನವ ರಾಜನು ಹೇಗೆ ಅಬ್ಬರಿಸಿದನು?

ನೆರೆದಿರೈ ಪರಿಭವದ ನೆಲೆಯಲಿ
ನೆರೆದಿರೈ ದುಷ್ಕೀರ್ತಿ ಸತಿಯಲಿ
ನೆರೆದಿರೈ ಸಲೆ ಹೊರೆದಿರೈ ದುರ್ಗತಿಗೆ ಡೊಳ್ಳುಗಳ
ಸುರರಲೇ ನೀವ್ ನಿಮ್ಮ ಹೆಂಡಿರ
ಕುರುಳ ಕೈದೊಳಸಿಂಗೆ ಮಿಗೆ ಕಾ
ತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆಂದ (ಅರಣ್ಯ ಪರ್ವ, ೧೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ದಾನವ ರಾಜನು ತನ್ನ ಸೈನಿಕರಿಗೆ, ಸೋಲಿನ ಬೀಡಿನಲ್ಲಿ ಸೇರಿದ್ದೀರಿ, ದುಷ್ಕೀರ್ತಿ ನಾರಿಯ ಸಂಗಕ್ಕೆ ಹೋದಿರಿ, ಈ ದುರ್ಗತಿಯನ್ನು ಅನುಭವಿಸಲೆಂದು ಡೊಳ್ಳು ಹೊಟ್ಟೆಗಳನ್ನು ಬೆಳೆಸಿದ್ದೀರಿ, ನಿಮ್ಮ ಹೆಂಡಿರ ಕರುಳಿನಲ್ಲಿ ದೇವತೆಗಳು ಕೈಯಾಡಿಸಲು ಕಾತರರಗಿದ್ದಾರೆ, ನೀವಿಲ್ಲಿ ತೆಪ್ಪಗಿದ್ದೀರಿ, ದೇವೇಂದ್ರನ ಮೇಲಿನ ಕೋಪವನ್ನು ಬಿಟ್ಟು ತೆಪ್ಪಗಿರಿ ಎಂದು ದಾನವರಾಜನು ಅಬ್ಬರಿಸಿದನು.

ಅರ್ಥ:
ನೆರೆ: ಸೇರು, ಗುಂಪು; ಪರಿಭವ: ಸೋಲು, ಪರಾಜಯ; ನೆಲೆ: ಸ್ಥಾನ; ದುಷ್ಕೀರ್ತಿ: ಅಪಯಶಸ್ಸು; ಸತಿ: ಹೆಂಡತಿ; ಸಲೆ: ಒಂದೇ ಸಮನೆ, ಸದಾ; ಹೊರೆ: ಹೊದಿಕೆ; ದುರ್ಗತಿ: ಕೆಟ್ಟ ಸ್ಥಿತಿ; ಡೊಳ್ಳು: ಬೊಜ್ಜು ಬೆಳೆದ ಹೊಟ್ಟೆ; ಸುರ: ದೇವತೆ; ಹೆಂಡಿರು: ಪತ್ನಿ; ಕುರುಳ: ಮರುಕ, ಪ್ರೀತಿ, ಅಂತಃಕರಣ; ಕೈದೊಳಸು: ಕೈವಶ, ಅಧೀನ; ಮಿಗೆ: ಅಧಿಕ, ಮತ್ತು; ಕಾತರಿಸು: ತವಕಗೊಳ್ಳು; ವಾಸವ: ಇಂದ್ರ; ವಾಸಿ: ಛಲ, ಹಠ; ಬಿಡಿ: ತೊರೆ;

ಪದವಿಂಗಡಣೆ:
ನೆರೆದಿರೈ +ಪರಿಭವದ +ನೆಲೆಯಲಿ
ನೆರೆದಿರೈ+ ದುಷ್ಕೀರ್ತಿ +ಸತಿಯಲಿ
ನೆರೆದಿರೈ +ಸಲೆ +ಹೊರೆದಿರೈ+ ದುರ್ಗತಿಗೆ+ ಡೊಳ್ಳುಗಳ
ಸುರರಲೇ+ ನೀವ್+ ನಿಮ್ಮ+ ಹೆಂಡಿರ
ಕುರುಳ +ಕೈದೊಳಸಿಂಗೆ +ಮಿಗೆ +ಕಾ
ತರಿಸುತಿದೆ+ ವಾಸವನೊಡನೆ+ ವಾಸಿಗಳ+ ಬಿಡಿಯೆಂದ

ಅಚ್ಚರಿ:
(೧) ಸೋಲಿಸುತ್ತಾರೆ ಎಂದು ಹೇಳುವ ಪರಿ – ನೆರೆದಿರೈ ಪರಿಭವದ ನೆಲೆಯಲಿ, ನೆರೆದಿರೈ ದುಷ್ಕೀರ್ತಿ ಸತಿಯಲಿ, ಸುರರಲೇ ನೀವ್ ನಿಮ್ಮ ಹೆಂಡಿರ ಕುರುಳ ಕೈದೊಳಸಿಂಗೆ
(೨) ಇಂದ್ರನನ್ನು ಕರೆದ ಪರಿ – ಕಾತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆಂದ