ಪದ್ಯ ೩೪: ಧರ್ಮಜನು ಅರ್ಜುನನನಿಗೆ ಏನಾಗಲು ಹೇಳಿ ಹಂಗಿಸಿದನು?

ಎವಗೆ ವಿಕ್ರಮವೆಂಬಡೀ ರೌ
ರವವ ಕಂಡೆನು ಕರ್ಣನಂತಿರ
ಲೆವಗೆ ಧೀವಸಿಯಾಗಿ ಕಾದುವರೆಂಬರವರಿಲ್ಲ
ಬವರ ಗೆಲುವರೆ ಹರಿಗೆ ಕೊಡು ಗಾಂ
ಡಿವವ ಸಾರಥಿಯಾಗು ನೀನೆಂ
ದವಗಡಿಸಿದನು ವೀರ ನಾರಾಯಣನ ಮೈದುನನ (ಕರ್ಣ ಪರ್ವ, ೧೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ಧರ್ಮಜನು ತನ್ನ ನೋವನ್ನು ಮತ್ತು ಕೋಪವನ್ನು ತೋಡಿಕೊಳ್ಳುತ್ತಾ, ನಾವು ಪರಾಕ್ರಮಿಗಳೆಂದು ಹೇಳಿಕೊಳ್ಳೋಣವೇ? ಇಂತಹ ಭಯಂಕರ ನೋವನ್ನುಂಡೆವು. ನಮ್ಮ ಪರವಾಗಿ ಕರ್ಣನಂತೆ ಬುದ್ಧಿ ಪೂರ್ವಕವಾಗಿ ಕಾದಿಗೆಲ್ಲಬಲ್ಲವರು ಯಾರು? ಅಂಥವರು ಯಾರೂ ಇಲ್ಲ. ಅರ್ಜುನ ಯುದ್ಧದಲ್ಲಿ ಗೆಲ್ಲಬೇಕೆಂದಿದ್ದರೆ, ನಿನ್ನ ಗಾಂಡೀವವನ್ನು ಕೃಷ್ಣನಿಗೆ ಕೊಟ್ಟು, ನೀನು ಸಾರಥಿಯಾಗು ಎಂದು ಅರ್ಜುನನನ್ನು ಧರ್ಮಜನು ಹೀಯಾಳಿಸಿದನು.

ಅರ್ಥ:
ಎವಗೆ: ನಮಗೆ; ವಿಕ್ರಮ: ಪರಾಕ್ರಮ, ಶೌರ್ಯ; ರೌರವ: ಭಯಂಕರ; ಕಂಡು: ನೋಡಿ; ಧೀವಸಿ: ಸಾಹಸಿ, ವೀರ; ಕಾದು: ಹೋರಾಡು; ಬವರ: ಕಾಳಗ, ಯುದ್ಧ;ಗೆಲು: ಜಯ; ಹರಿ: ಕೃಷ್ಣ; ಕೊಡು: ನೀಡು; ಸಾರಥಿ: ಸೂತ, ರಥವನ್ನು ಓಡಿಸುವವ; ಅವಗಡಿಸು: ಅಪಮಾನಿಸು, ಸೋಲಿಸು; ಮೈದುನ: ತಂಗಿಯ ಗಂಡ;

ಪದವಿಂಗಡಣೆ:
ಎವಗೆ +ವಿಕ್ರಮವ್+ಎಂಬಡೀ+ ರೌ
ರವವ+ ಕಂಡೆನು +ಕರ್ಣನಂತಿರಲ್
ಎವಗೆ +ಧೀವಸಿಯಾಗಿ +ಕಾದುವರ್+ಎಂಬರವರಿಲ್ಲ
ಬವರ +ಗೆಲುವರೆ +ಹರಿಗೆ +ಕೊಡು +ಗಾಂ
ಡಿವವ+ ಸಾರಥಿಯಾಗು +ನೀನೆಂದ್
ಅವಗಡಿಸಿದನು +ವೀರ +ನಾರಾಯಣನ +ಮೈದುನನ

ಅಚ್ಚರಿ:
(೧) ಅರ್ಜುನನನ್ನು ಕೃಷ್ಣನ ಮೈದುನ ಎಂದು ಕರೆದಿರುವುದು
(೨) ಅರ್ಜುನನನ್ನು ಹೀಯಾಳಿಸುವ ಬಗೆ – ಹರಿಗೆ ಕೊಡು ಗಾಂಡಿವವ ಸಾರಥಿಯಾಗು ನೀನೆಂ
ದವಗಡಿಸಿದನು

ಪದ್ಯ ೩೩: ಧರ್ಮಜನ ನೀರಸವಾದ ಪ್ರತಿಕ್ರಿಯೆ ಹೇಗಿತ್ತು?

ಬರಿದೆ ಬಯಸಿದಡಹುದೆ ರಾಜ್ಯದ
ಹೊರಿಗೆಯನು ನಿಶ್ಯಂಕೆಯಲಿ ಹೊ
ಕ್ಕಿರಿದು ಬಹ ಸತ್ವಾತಿಶಯ ಬೇಹುದು ರಣಾಗ್ರದಲಿ
ಇರಿದು ಮೇಣ್ ರಿಪುರಾಯರನು ಕು
ಕ್ಕುರಿಸುವರೆ ರಾಧೇಯನಂತಿರ
ಲುರುವನೊಬ್ಬನೆ ಬೇಹುದಲ್ಲದಡಿಲ್ಲ ಜಯವೆಂದ (ಕರ್ಣ ಪರ್ವ, ೧೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ರಾಜ್ಯಭಾರ ಬೇಕೆಂದು ಬಯಸಿದ ಮಾತ್ರದಿಂದ ಅದು ಸಿಕ್ಕೀತೇ? ಶತ್ರುಸೈನ್ಯದಲ್ಲಿ ಹೊಕ್ಕು ಕಾದಿ ಗೆದ್ದು ಬರುವ ಅತಿಶಯಸತ್ವವಿದ್ದರೆ ಮಾತ್ರ ಅದು ಸಾಧ್ಯ. ಶತ್ರುಗಳನ್ನಿರಿದು ಸೋಲಿಸುವ ಸಾಮರ್ಥ್ಯವಿರುವ ಕರ್ಣನಂತಹ ಮಹಾವೀರರೇ ಬೇಕು. ಇಲ್ಲದಿದ್ದರೆ ಜಯವೂ ಇಲ್ಲ, ರಾಜ್ಯವೂ ಇಲ್ಲ ಎಂದು ನಿರಾಶೆಯಿಂದ ಧರ್ಮಜನು ನುಡಿದನು.

ಅರ್ಥ:
ಬರಿದೆ: ಕೇವಲ; ಬಯಸು: ಆಸೆಪಡು; ರಾಜ್ಯ: ರಾಷ್ಟ್ರ; ಹೊರಿಗೆ:ಭಾರ, ಹೊರೆ; ನಿಶ್ಯಂಕ: ಅನುಮಾನವಿಲ್ಲದ; ಹೋಕ್ಕು: ಒಳಹೋಗು, ಸೇರು; ಬಹ: ಬಹಳ; ಸತ್ವ: ಸಾರ; ಅತಿಶಯ: ಹೆಚ್ಚು, ಅಧಿಕ; ಬೇಹುದು: ಇರಬೇಕು; ರಣಾಗ್ರ: ಯುದ್ಧರಂಗ; ಇರಿ: ಚುಚ್ಚು; ಮೇಣ್: ಅಥವಾ; ರಿಪುರಾಯ: ವೈರಿ ರಾಜ; ಕುಕ್ಕುರಿಸು: ಸೋಲಿಸು; ರಾಧೇಯ: ಕರ್ಣ; ಉರು: ಶ್ರೇಷ್ಠವಾದ; ಬೇಹುದು: ಬೇಕು; ಜಯ: ಗೆಲುವು;

ಪದವಿಂಗಡಣೆ:
ಬರಿದೆ +ಬಯಸಿದಡ್+ಅಹುದೆ +ರಾಜ್ಯದ
ಹೊರಿಗೆಯನು +ನಿಶ್ಯಂಕೆಯಲಿ +ಹೊ
ಕ್ಕಿರಿದು +ಬಹ +ಸತ್ವಾತಿಶಯ +ಬೇಹುದು +ರಣಾಗ್ರದಲಿ
ಇರಿದು+ ಮೇಣ್ +ರಿಪು+ರಾಯರನು+ ಕು
ಕ್ಕುರಿಸುವರೆ +ರಾಧೇಯನಂತಿರಲ್
ಉರುವನ್+ಒಬ್ಬನೆ +ಬೇಹುದ್+ಅಲ್ಲದಡ್+ಇಲ್ಲ +ಜಯವೆಂದ

ಅಚ್ಚರಿ:
(೧) ಬರಿ, ಇಲಿ, ಹೊಕ್ಕಿರಿ, ಕುಕ್ಕುರಿ – ಪ್ರಾಸ ಪದಗಳು
(೨) ಕರ್ಣನ ಪರಾಕ್ರಮವನ್ನು ವರ್ಣಿಸುವ ಪರಿ – ರಿಪುರಾಯರನು ಕುಕ್ಕುರಿಸುವರೆ ರಾಧೇಯನಂತಿರಲ್
(೩) ಆಡು ಮಾತಿನ ಶಬ್ದ ಪ್ರಯೋಗ – ಕುಕ್ಕರಿಸು, ಇರಿ

ಪದ್ಯ ೩೨ : ಧರ್ಮಜನ ಚಂಚಲ ಮನಸ್ಸು ಏನು ಹೇಳಿತು?

ಅರಳಿಚದೆ ಮಧುಮಾಸ ಮಾಣಲಿ
ವರುಷ ಋತುವೇ ಸಾಕು ಜಾತಿಗೆ
ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ
ಸಿರಿಗೆ ಕಕ್ಕುಲಿತೆಯ ವಿಪಕ್ಷವ
ಬೆರಸಿ ಬದುಕುವೆವೈಸಲೇ ವರ
ಗುರುವಲಾ ಧೃತರಾಷ್ಟ್ರನೂಣೆಯವೇನು ಹೇಳೆಂದ (ಕರ್ಣ ಪರ್ವ, ೧೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧರ್ಮಜನು ತನ್ನ ಮೇಲಿನ ವಿಶ್ವಾಸವನ್ನು ಕಳೆದುಕೊಂಡವನಂತೆ ತೋರಿ, ಮಧುಮಾಸ ಬಂದು ಪುಷ್ಪಗಳನ್ನು ಅರಳಿಸುವುದಿಲ್ಲವೇ? ನಮಗೆ ಮಳೆಗಾಲವೇ ಸಾಕು, ನಾವು ಹುಟ್ಟಿನಿಂದಲೇ ದುರ್ಬಲರು, ಮೊದಲಿನಂತೆ ವನವಾಸದಿಂದಲೇ ತೃಪ್ತಿಪಟ್ಟುಕೊಳ್ಳೋಣ, ಐಶ್ವರ್ಯದ ಮೇಲೆ ಕಕುಲಾತಿಯೇ? ವಿರೋಧ ಪಕ್ಷದವರೊಡನೆ ಸಂಧಿಮಾಡಿಕೊಂಡು ವಿರೋಧಿಗಳ ಹಿರಿಯರಾದ ಧೃತರಾಷ್ಟ್ರನು ನಮಗೆ ಗುರು ಸಮಾನನಲ್ಲವೇ? ಆದ್ಧರಿಂದ ಈ ಸಂಧಿ ಮಾಡಿಕೊಳ್ಳುವುದರಿಂದ ದೋಷವಾದರೂ ಏನು ಎಂದು ನುಡಿದನು.

ಅರ್ಥ:
ಅರಳು: ವಿಕಸನಗೊಳ್ಳು; ಮಧುಮಾಸ: ವಸಂತ ಋತು; ಮಾಣು: ಸುಮ್ಮನಿರು; ವರ್ಷ: ಮಳೆ; ಋತು: ಕಾಲ; ಸಾಕು: ಕೊನೆ, ಅಂತ್ಯ; ಜಾತಿ: ಕುಲ; ಜರಡು:ಶಿಥಿಲವಾದುದು; ಪೂರ್ವ:ಹಿಂದಿನ; ಪ್ರಕೃತಿ: ನೈಜ, ನಿಸರ್ಗ; ವನವಾಸ: ಕಾಡಿನ ಜೀವನ; ಸಿರಿ: ಐಶ್ವರ್ಯ; ಕಕ್ಕುಲತೆ: ಲೋಭ; ಆಸಕ್ತಿ; ವಿಪಕ್ಷ: ವೈರಿ; ಬೆರಸು: ಸೇರಿಸು; ಬದುಕು: ಜೀವಿಸು; ಐಸಲೇ: ಅಲ್ಲವೇ; ವರ: ಶ್ರೇಷ್ಠ; ಗುರು: ಆಚಾರ್ಯ; ಊಣೆ: ನ್ಯೂನತೆ, ಕುಂದು; ಹೇಳು: ತಿಳಿಸು;

ಪದವಿಂಗಡಣೆ:
ಅರಳಿಚದೆ +ಮಧುಮಾಸ +ಮಾಣಲಿ
ವರುಷ +ಋತುವೇ +ಸಾಕು +ಜಾತಿಗೆ
ಜರಡರ್+ಎಮಗಿನ್ನೇನು +ಪೂರ್ವಪ್ರಕೃತಿ+ ವನವಾಸ
ಸಿರಿಗೆ+ ಕಕ್ಕುಲಿತೆಯ+ ವಿಪಕ್ಷವ
ಬೆರಸಿ+ ಬದುಕುವೆವ್+ಐಸಲೇ +ವರ
ಗುರುವಲಾ +ಧೃತರಾಷ್ಟ್ರನ್+ಊಣೆಯವೇನು +ಹೇಳೆಂದ

ಅಚ್ಚರಿ:
(೧) ಧರ್ಮಜನ ವಿಶ್ವಾಸ ಹೀನ ನುಡಿಗಳು – ವರುಷ ಋತುವೇ ಸಾಕು ಜಾತಿಗೆ
ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ ಸಿರಿಗೆ ಕಕ್ಕುಲಿತೆಯ ವಿಪಕ್ಷವ ಬೆರಸಿ ಬದುಕುವೆವೈಸಲೇ

ಪದ್ಯ ೩೧: ಯಾರಿದ್ದಿದ್ದರೆ ಯುಧಿಷ್ಠಿರನಿಗೆ ಈ ವಿಪತ್ತು ಬರದಂತಾಗುತ್ತಿತ್ತು?

ಏನನೆಂಬೆನು ನಮ್ಮ ಪುಣ್ಯದ
ಹಾನಿ ತಲೆದೋರಿದರೆ ಭೀಮನ
ಸೂನುವಿರಲಭಿಮನ್ಯು ವಿರಲೆವಗೀ ವಿಪತ್ತಹುದೆ
ಆ ನದೀಜ ದ್ರೋಣರಲಿ ತಾ
ಹಾನಿಯನು ಮಿಗೆ ಕಂಡೆನೇ ನೆರೆ
ಹೀನನು ಕಂಡಾದಡೆಯು ಬದುಕುವುದು ಲೇಸೆಂದ (ಕರ್ಣ ಪರ್ವ, ೧೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನ ನೋವನ್ನು ತೋಡಿಕೊಳ್ಳುತ್ತಾ, ನಮ್ಮ ಪುಣ್ಯಕ್ಕೆ ಹಾನಿಯಾದರೆ ಏನೆಂದು ಹೇಳಬೇಕು! ಘಟೋತ್ಕಚ, ಅಭಿಮನ್ಯುಗಳಿದ್ದರೆ ನಮಗೆ ಈ ವಿಪತ್ತು ಬರುತ್ತಿತ್ತೆ? ಭೀಷ್ಮ ದ್ರೋಣರಿದ್ದಾಗಲೂ ನನಗಿಂತಹ ಕಷ್ಟ ಬರಲಿಲ್ಲ, ಇಂತಹ ಹೀನನನ್ನು ಕಂಡಾದರೂ ಬದುಕಬೇಕಾದುದು ಒಳೆತೆ ಎಂದು ತನ್ನ ನೋವನ್ನು ಅರ್ಜುನನ ಮೇಲಿನ ಕೋಪವನ್ನು ಹೊರಹಾಕಿದ.

ಅರ್ಥ:
ಎಂಬೆನು: ಹೇಳಲಿ; ಪುಣ್ಯ: ಸದಾಚಾರ; ಹಾನಿ: ನಾಶ; ತಲೆದೋರು: ಕಾಣಿಸು, ಬಂದು; ಸೂನು: ಮಗ; ವಿಪತ್ತು: ಆಪತ್ತು, ತೊಂದರೆ; ನದೀಜ: ಭೀಷ್ಮ; ಮಿಗೆ: ಅಧಿಕವಾಗಿ, ಮತ್ತು; ಕಂಡು: ನೋಡು; ನೆರೆ: ಸಮೀಪ, ಹತ್ತಿರ; ಹೀನ: ಕೆಟ್ಟ, ದುಷ್ಟ, ತೊರೆದ; ಕಂಡು: ನೋಡು; ಬದುಕು: ಜೀವಿಸು; ಲೇಸು: ಒಳಿತು;

ಪದವಿಂಗಡಣೆ:
ಏನನೆಂಬೆನು+ ನಮ್ಮ +ಪುಣ್ಯದ
ಹಾನಿ +ತಲೆದೋರಿದರೆ+ ಭೀಮನ
ಸೂನುವಿರಲ್+ಅಭಿಮನ್ಯು +ವಿರಲ್+ಎವಗೀ+ ವಿಪತ್ತಹುದೆ
ಆ +ನದೀಜ +ದ್ರೋಣರಲಿ +ತಾ
ಹಾನಿಯನು +ಮಿಗೆ +ಕಂಡೆನೇ+ ನೆರೆ
ಹೀನನು +ಕಂಡಾದಡೆಯು +ಬದುಕುವುದು +ಲೇಸೆಂದ

ಅಚ್ಚರಿ:
(೧) ಧರ್ಮಜನು ತನ್ನ ಕೋಪವನ್ನು ಅರ್ಜುನನ ಮೇಲೆ ಮಾತಿನ ಮೂಲಕ ತೋರಿಸುತ್ತಿರುವುದು

ಪದ್ಯ ೩೦: ಧರ್ಮಜನು ಅರ್ಜುನನ ಮಾತಿಗೆ ಹೇಗೆ ಉತ್ತರಿಸಿದನು?

ತೊಡಕಿದನು ಗಡ ಗರುಡ ಹಾವಿನ
ತಡಿಕೆವಲೆಯಲಿ ನಿನ್ನ ಗಮನವ
ತಡೆದರೈ ತಪ್ಪೇನು ಕೌರವ ದಳದ ನಾಯಕರು
ಕಡುಹಿನಲಿ ತಡವಾದುದುಳಿದಂ
ತೆಡೆಯಲುಳಿವರ್ಜುನನೆ ನಮ್ಮವ
ಗಡುವ ಕೇಳಿದು ನಿಲ್ಲನೆಂದನು ನಗುತ ಯಮಸೂನು (ಕರ್ಣ ಪರ್ವ, ೧೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನು ಅರ್ಜುನನ ಮಾತನ್ನು ಕೇಳಿ ನಕ್ಕು ಹಾವು ಹಾಕಿದ ತಡಿಕೆ ಬಲೆಯಲ್ಲಿ ಗರುಡನು ಸಿಕ್ಕಿಹಾಕಿಕೊಂಡನಂತೆ ಹಾಗಾಯಿತು ನಿನ್ನ ಮಾತು, ಕೌರವ ಸೇನಾನಾಯಕರು ನಿನ್ನನ್ನು ತಡೆದರೇ? ತಪ್ಪೇನು, ಭಾರಿ ಯುದ್ಧದಲ್ಲಿ ಸ್ವಲ್ಪ ತಡವಾಯಿತು ಅಷ್ಟೆ, ಉಳಿದಂತೆ ನಮಗೆ ಆಪತ್ತು ಬಂದುದನ್ನು ಕೇಳಿದರೆ ಅರ್ಜುನನು ಒಂದು ಕ್ಷಣವೂ ನಿಲ್ಲದ ಬಂದುಬಿಡುತ್ತಿದ್ದ ಎಂದು ಅರ್ಜುನನನ್ನು ಹಂಗಿಸಿದನು.

ಅರ್ಥ:
ತೊಡಕು: ಸಿಕ್ಕು, ಗೋಜು, ಗೊಂದಲ; ಗಡ: ಅಲ್ಲವೆ; ತ್ವರಿತವಾಗಿ; ಗರುಡ: ವಿಷ್ಣುವಿನ ವಾಹನ, ಒಂದು ಜಾತಿಯ ಪಕ್ಷಿ; ಹಾವು: ಉರಗ; ತಡಿಕೆ: ಒಂದು ಬಗೆಯ ಬಲೆ; ಗಮನ: ನಡಿಗೆ, ಸಂಚಾರ; ತಡೆ: ನಿಲ್ಲಿಸು; ತಪ್ಪು: ಸುಳ್ಳಾಗು; ದಳ: ಸೈನ್ಯ; ನಾಯಕ: ಒಡೆಯ; ಕಡುಹು:ಸಾಹಸ, ಹುರುಪು; ತಡ: ಅಡ್ಡಿ, ತಡೆ; ಉಳಿದ: ಮಿಕ್ಕ; ಎಡೆ: ಬಹಳವಾಗಿ; ಅವಗಡ: ಅಪಾಯ, ಅಡ್ಡಿ; ಕೇಳು: ಆಲಿಸು; ನಿಲ್ಲು: ತಾಳು; ನಗು: ಸಂತಸ; ಸೂನು: ಮಗ;

ಪದವಿಂಗಡಣೆ:
ತೊಡಕಿದನು +ಗಡ +ಗರುಡ +ಹಾವಿನ
ತಡಿಕೆವಲೆಯಲಿ +ನಿನ್ನ +ಗಮನವ
ತಡೆದರೈ+ ತಪ್ಪೇನು+ ಕೌರವ+ ದಳದ+ ನಾಯಕರು
ಕಡುಹಿನಲಿ +ತಡವಾದುದ್+ಉಳಿದಂತ್
ಎಡೆಯಲ್+ಉಳಿವ್+ಅರ್ಜುನನೆ+ ನಮ್ಮ್+ಅವ
ಗಡುವ +ಕೇಳಿದು +ನಿಲ್ಲನೆಂದನು +ನಗುತ +ಯಮಸೂನು

ಅಚ್ಚರಿ:
(೧) ತೊಡಕು, ತಡಿಕೆ, ತಡೆ – ತ ಕಾರದ ಪದಗಳ ಬಳಕೆ
(೨) ಉಪಮಾನದ ಪ್ರಯೊಗ – ಗರುಡ ಹಾವಿನ ತಡಿಕೆವಲೆಯಲಿ

ಪದ್ಯ ೨೯: ಅರ್ಜುನನು ಧರ್ಮಜನಿಗೆ ತನ್ನ ಯುದ್ಧದ ಬಗ್ಗೆ ಏನು ತಿಳಿಸಿದ?

ಇಟ್ಟಣಿಸಿಕೊಂಡೆನ್ನೊಡನೆ ಸರಿ
ಗಟ್ಟಿ ಕಾದಿದ ರವಿಸುತನ ಹುಡಿ
ಗುಟ್ಟಿದೆನು ರಥವಾಜಿ ಸೂತ ಶರಾಸನಾದಿಗಳ
ಮುಟ್ಟೆ ಬಂದನು ಖಡುಗದಲಿ ಮೈ
ಮುಟ್ಟಿ ಹೆಣಗಿದೆನಾಕ್ಷಣಕೆ ಸಾ
ಲಿಟ್ಟು ಸರಿದುದು ಸಕಲ ಕೌರವ ಸೇನೆ ಸರಿಸದಲಿ (ಕರ್ಣ ಪರ್ವ, ೧೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ನನ್ನ ಮೇಲೆ ಆಕ್ರಮಣ ಮಾಡಿ, ಸರಿಸಮವಾಗಿ ಯುದ್ಧ ಮಾದಿದ ಕರ್ಣನ ರಥದ ಕುದುರೆಗಳು, ಸಾರಥಿ, ಬಿಲ್ಲುಗಳನ್ನು ಪುಡಿ ಮಾಡಲು, ಅವನು ಖಡ್ಗವನ್ನು ಹಿಡಿದು ಕಾದಿದನು. ನಾನು ಅವನೊಡನೆ ಹೆಣಗುತ್ತಿರಲು ಕೌರವ ಸೈನ್ಯವು ಬಂದು ಮುತ್ತಿತು ಎಂದು ಅರ್ಜುನನು ಧರ್ಮಜನಿಗೆ ತಿಳಿಸಿದನು.

ಅರ್ಥ:
ಇಟ್ಟಣ: ಹಿಂಸೆ, ಆಘಾತ; ಎನ್ನೊಡನೆ: ನನ್ನೊಡನೆ; ಸರಿಗಟ್ಟು: ಸರಿಸಮಾನನಾಗಿ; ಕಾದಿ: ಹೋರಾಡಿದ; ಸುತ: ಮಗ; ಹುಡಿಗುಟ್ಟು: ಪುಡಿ ಮಾಡು; ರಥ: ಬಂಡಿ; ವಾಜಿ: ಕುದುರೆ; ಸೂತ:ರಥವನ್ನು ಓಡಿಸುವವ; ಶರ: ಬಾಣ; ಶರಾಸನ: ಬಿಲ್ಲು; ಆದಿ: ಮುಂತಾದವು; ಮುಟ್ಟು: ತಾಗು; ಬಂದು: ಆಗಮಿಸು; ಖಡುಗ: ಕತ್ತಿ; ಮೈಮುಟ್ಟು: ದೇಹಕ್ಕೆ ತಾಗು; ಹೆಣಗು: ಹೋರಾಡು; ಸಾಲು: ಗುಂಪು; ಸರಿ: ಪಕ್ಕಕ್ಕೆ ಹೋಗು, ಜರುಗು;ಸಕಲ: ಎಲ್ಲಾ; ಸೇನೆ: ಸೈನ್ಯ; ಸರಿಸ: ಮುಂಭಾಗ, ಸಮ್ಮುಖ, ಸಮ;

ಪದವಿಂಗಡಣೆ:
ಇಟ್ಟಣಿಸಿಕೊಂಡ್+ಎನ್ನೊಡನೆ +ಸರಿ
ಗಟ್ಟಿ +ಕಾದಿದ +ರವಿಸುತನ +ಹುಡಿ
ಗುಟ್ಟಿದೆನು+ ರಥ+ವಾಜಿ +ಸೂತ +ಶರಾಸನ್+ಆದಿಗಳ
ಮುಟ್ಟೆ +ಬಂದನು +ಖಡುಗದಲಿ +ಮೈ
ಮುಟ್ಟಿ +ಹೆಣಗಿದೆನ್+ಆ+ಕ್ಷಣಕೆ +ಸಾ
ಲಿಟ್ಟು +ಸರಿದುದು +ಸಕಲ+ ಕೌರವ+ ಸೇನೆ+ ಸರಿಸದಲಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸಾಲಿಟ್ಟು ಸರಿದುದು ಸಕಲ