ಪದ್ಯ ೨: ದ್ರೋಣಾಚಾರ್ಯರು ಕೌರವನಿಗೆ ಏನು ಹೇಳಿದರು?

ಅವನಿಪಾಲರು ಕಂಗಳಿಂದವೆ
ಕಿವಿಗೆ ಕರವೊಳ್ಳಿದರು ಕಂಡುದ
ನವರು ನಂಬರು ಕೊಂಡೆಯರ ನುಡಿಗೇಳ್ದು ನಂಬುವರು
ನಿವಗೆ ಹೇಳುವುದಲ್ಲ ಲೋಕದ
ಹವಣನೆಂದವು ನಾವು ಪಾಂಡವ
ರವರು ನಿನ್ನವರೆಂಬುದನು ನೀನೆಂದು ನೋಡೆಂದ (ದ್ರೋಣ ಪರ್ವ, ೧೮ ಸಂಧಿ, ೨ ಪದ್ಯ)

ತಾತ್ಪರ್ಯ:
ದ್ರೋಣಾಚಾರ್ಯರು ಉತ್ತರಿಸುತ್ತಾ, ರಾಜರು ಕಣ್ಣುಗಳಿಗಿಂತ ಕಿವಿಗಳಿಗೆ ಬಹಳ ಒಳ್ಳೆಯವರು. ಏಕೆಂದರೆ ನೋಡಿದುದನ್ನು ಅವರು ನಂಬುವುದಿಲ್ಲ, ಚಾಡಿಕಾರರ ಮಾತನ್ನು ಕೇಳಿ ನಂಬುತ್ತಾರೆ. ನಿನ್ನನ್ನು ಕುರಿತು ಈ ಮಾತನ್ನು ಹೇಳುತ್ತಿಲ್ಲ. ಲೋಕದಲ್ಲಿ ನಡೆಯುವುದನ್ನು ಹೇಳುತ್ತಿದ್ದೇನೆ. ನಾವು ಪಾಂಡವರ ಕಡೆಯವರೆಂದು ನೀನು ಹಂಗಿಸುತ್ತಿದ್ದೆಯಲ್ಲಾ, ನಾವು ಪಾಂಡವರ ಕಡೆಯೋ, ನಿನ್ನಕಡೆಯೋ ಎಂಬುದನ್ನು ಈಗ ನೋಡು ಎಂದು ದ್ರೋಣಾಚಾರ್ಯರು ತಿಳಿಸಿದರು.

ಅರ್ಥ:
ಅವನಿಪಾಲ: ರಾಜ; ಕಂಗಳು: ಕಣ್ಣು; ಕಿವಿ: ಕರ್ಣ; ಕರ: ಕೈ; ಕಂಡು: ನೋಡು; ನಂಬು: ವಿಶ್ವಾಸವಿಡು; ನುಡಿ: ಮಾತು; ಕೇಳು: ಆಲಿಸು; ಹೇಳು: ತಿಳಿಸು; ಲೋಕ: ಜಗ; ಹವಣ: ಮಿತಿ, ಅಳತೆ; ನೋಡು: ವೀಕ್ಷಿಸು; ಕೊಂಡೆ: ಚಾಡಿಯ ಮಾತು;

ಪದವಿಂಗಡಣೆ:
ಅವನಿಪಾಲರು+ ಕಂಗಳಿಂದವೆ
ಕಿವಿಗೆ +ಕರವೊಳ್ಳಿದರು +ಕಂಡುದನ್
ಅವರು +ನಂಬರು +ಕೊಂಡೆಯರ +ನುಡಿ+ಕೇಳ್ದು+ ನಂಬುವರು
ನಿವಗೆ+ ಹೇಳುವುದಲ್ಲ +ಲೋಕದ
ಹವಣನೆಂದವು+ ನಾವು +ಪಾಂಡವರ್
ಅವರು +ನಿನ್ನವರೆಂಬುದನು +ನೀನೆಂದು +ನೋಡೆಂದ

ಅಚ್ಚರಿ:
(೧) ಲೋಕೋಕ್ತಿಯ ಬಳಕೆ – ಅವನಿಪಾಲರು ಕಂಗಳಿಂದವೆ ಕಿವಿಗೆ ಕರವೊಳ್ಳಿದರು

ಪದ್ಯ ೧೫: ಅಭಿಮನ್ಯು ಯಾವುದರಿಂದ ಮಾತನಾಡಲು ಹೇಳಿದನು?

ವಿನಯವೇಕಿದು ನಿಮ್ಮ ಭುಜಬಲ
ದನುವ ಬಲ್ಲೆನು ನಿಮ್ಮ ಕೈ ಮೈ
ತನದ ಹವಣನು ಕಾಬೆನೆನ್ನೊಳು ಸೆಣಸಿ ಜಯಿಸಿದರೆ
ಧನುವ ಹಿಡಿಯೆನು ಸಾಕು ಡೊಂಬಿನ
ಬಿನುಗು ನುಡಿಯಂತಿರಲಿ ಬಲ್ಲಡೆ
ಮೊನೆಗಣೆಯಲೇ ಮಾತನಾಡೆಂದೆಚ್ಚನಭಿಮನ್ಯು (ದ್ರೋಣ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಈ ವಿನಯದ ಮಾತೇಕೆ? ನಿಮ್ಮ ಭುಜಬಲದ ಸಾಮರ್ಥ್ಯವು ನನಗೆ ಗೊತ್ತು. ನನ್ನೊಡನೆ ಕಾದಿ ಗೆದ್ದರೆ ನಿಮ್ಮ ಸತ್ವವು ಕಂಡೀತು, ನೀವು ನನ್ನನ್ನು ಗೆದ್ದರೆ ನಾನು ಮತ್ತೆ ಬಿಲ್ಲನ್ನೇ ಹಿಡಿಯುವುದಿಲ್ಲ. ಕೆಲಸಕ್ಕೆ ಬಾರದ ಮಾತು ಸಾಕು, ಗೊತ್ತಿದ್ದರೆ ಬಾಣಗಳಿಂದಲೇ ಮಾತಾಡಿರಿ ಎನ್ನುತ್ತಾ ಅಭಿಮನ್ಯು ಬಾಣಗಳನ್ನು ಬಿಟ್ಟನು.

ಅರ್ಥ:
ವಿನಯ: ಒಳ್ಳೆಯತನ, ಸೌಜನ್ಯ; ಭುಜಬಲ: ಪರಾಕ್ರಮ; ಅನುವು: ಸೊಗಸು; ಬಲ್ಲೆ: ತಿಳಿದಿರುವೆ; ಹವಣ: ಮಿತಿ, ಅಳತೆ; ಕಾಬೆ: ನೋಡು, ತಿಳಿ; ಸೆಣಸು: ಹೋರಾಡು; ಜಯಿಸು: ಗೆಲ್ಲು; ಧನು: ಬಿಲ್ಲು; ಹಿಡಿ: ಗ್ರಹಿಸು; ಸಾಕು: ತಡೆ, ನಿಲ್ಲು; ಡೊಂಬಿ: ಮೋಸ, ವಂಚನೆ, ಕಾಳಗ; ಬಿನುಗು: ಅಲ್ಪವಾದ; ನುಡಿ: ಮಾತು; ಬಲ್ಲೆ: ತಿಳಿ; ಮೊನೆ: ತುದಿ, ಕೊನೆ; ಕಣೆ: ಬಾಣ; ಮಾತು: ವಾಣಿ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ವಿನಯವೇಕಿದು +ನಿಮ್ಮ +ಭುಜಬಲದ್
ಅನುವ +ಬಲ್ಲೆನು +ನಿಮ್ಮ +ಕೈ +ಮೈ
ತನದ +ಹವಣನು +ಕಾಬೆನ್+ಎನ್ನೊಳು +ಸೆಣಸಿ +ಜಯಿಸಿದರೆ
ಧನುವ +ಹಿಡಿಯೆನು +ಸಾಕು +ಡೊಂಬಿನ
ಬಿನುಗು +ನುಡಿಯಂತಿರಲಿ +ಬಲ್ಲಡೆ
ಮೊನೆ+ಕಣೆಯಲೇ +ಮಾತನಾಡೆಂದ್+ಎಚ್ಚನ್+ಅಭಿಮನ್ಯು

ಅಚ್ಚರಿ:
(೧) ಅಭಿಮನ್ಯುವಿನ ಪ್ರಮಾಣ – ಎನ್ನೊಳು ಸೆಣಸಿ ಜಯಿಸಿದರೆ ಧನುವ ಹಿಡಿಯೆನು ಸಾಕು ಡೊಂಬಿನ
ಬಿನುಗು ನುಡಿಯಂತಿರಲಿ

ಪದ್ಯ ೧೩: ಅಭಿಮನ್ಯು ಮಹಾರಥಿಕರ ಜೊತೆ ಹೇಗೆ ಹೋರಾಡಿದನು?

ಕೋಡಿದನೆ ಕೊಂಕಿದನೆ ನಾಯಕ
ವಾಡಿಗಳು ಹಲರೆಂದು ಬೆಂಗೊ
ಟ್ಟೋಡಿದನೆ ಕೈಗಾಯದೆಚ್ಚನು ನಚ್ಚಿದಂಬಿನಲಿ
ತೋಡು ಬೀಡಿನ ಹವಣನಾತನ
ಮಾಡಿದಾತನೆ ಬಲ್ಲನೆನೆ ಕೈ
ಮಾಡಿ ಸುರಿದನು ಸರಳ ಮಳೆಯ ಮಹಾರಥರ ಮೇಲೆ (ದ್ರೋಣ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಒಬ್ಬನೇ, ಅವನ ಮೇಲೆ ಬಾಣಬಿಡುವ ವೀರರು ಆರು ಪರಾಕ್ರಮಿಗಳು, ಆದರೂ ಅವನು ಬೆದರಿದನೇ, ಹಿಂಜರಿದನೇ? ಬಹಳ ಮಂದಿಯೆಂದು ಯುದ್ಧದಿಂದ ಓಡಿಹೋದನೇ? ಅವನು ಶತ್ರುಗಳ ಬಾಣಗಳನ್ನು ಕತ್ತರಿಸಿ, ಹೊಡೆಯುವ ಬಗೆಯನ್ನು ಅವನನ್ನು ಸೃಷ್ಟಿಸಿದವನೇ ಬಲ್ಲ. ಅವರೆಲ್ಲರ ಮೇಲೆ ಅವನು ಬಾಣಗಳ ಮಳೆಗೆರೆದನು.

ಅರ್ಥ:
ಕೋಡು: ತಣ್ಣಗಾಗು, ತಂಪಾಗು; ಕೊಂಕು: ಡೊಂಕು, ವಕ್ರತೆ; ನಾಯಕ: ಒಡೆಯ; ವಾಡಿ: ವಾಸಸ್ಥಳ; ಹಲರು: ಬಹಳ; ಬೆಂಗೊಟ್ಟು: ಬೆನ್ನು ತೋರು; ಓಡು: ಧಾವಿಸು; ಕಾಯು: ಕಾಪಾಡು; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ತೋಡು: ಅಗೆ, ಹಳ್ಳ ಮಾಡು; ಬೀಡು: ತಂಗುದಾಣ, ಬಿಡಾರ; ಹವಣ: ಮಿತಿ, ಅಳತೆ; ಬಲ್ಲ: ತಿಳಿ; ಸುರಿ: ಸುರಿಸು, ಸೋರಿಸು; ಸರಳ: ಬಾಣ; ಮಳೆ: ವರ್ಷ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಕೋಡಿದನೆ +ಕೊಂಕಿದನೆ +ನಾಯಕ
ವಾಡಿಗಳು +ಹಲರೆಂದು +ಬೆಂಗೊಟ್
ಓಡಿದನೆ +ಕೈಗಾಯದ್+ಎಚ್ಚನು +ನಚ್ಚಿದ್+ಅಂಬಿನಲಿ
ತೋಡು +ಬೀಡಿನ +ಹವಣನ್+ಆತನ
ಮಾಡಿದಾತನೆ +ಬಲ್ಲನ್+ಎನೆ +ಕೈ
ಮಾಡಿ +ಸುರಿದನು +ಸರಳ +ಮಳೆಯ +ಮಹಾರಥರ +ಮೇಲೆ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮಳೆಯ ಮಹಾರಥರ ಮೇಲೆ

ಪದ್ಯ ೨೫: ಸೈನಿಕರು ಅರ್ಜುನನನ್ನು ಏನೆಂದು ಜರಿದರು?

ಶಿವನ ಬೇಡಿದ ಶರವ ತೆಗೆ ಗಾಂ
ಡಿವವ ಬಿಗಿ ನಿನ್ನಿಷ್ಟ ದೈವವ
ತವಕದಲಿ ನೀ ಬೇಡಿಕೊಂಬುದು ಪರಮಸದ್ಗತಿಯ
ಅವರಿವರ ಹವಣಲ್ಲ ಗುರು ಮುನಿ
ದವಗಡಿಸಿದರೆ ನಿಲುವನಾವನು
ಬವರಕೇಳೇಳೆಂದು ಜರಿದರು ದೂತರರ್ಜುನನ (ದ್ರೋಣ ಪರ್ವ, ೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಿವನನ್ನು ಬೇಡಿ ಪಡೆದ ಪಾಶುಪತಾಸ್ತ್ರವನ್ನು ಹೊರಗೆ ತೆಗೆ, ನಿನ್ನ ಇಷ್ಟ ದೇವತೆಯನ್ನು ಹೆಚ್ಚಿನ ಸದ್ಗತಿಯನ್ನು ಪಾಲಿಸು ಎಂದು ಬೇಡಿಕೋ, ಅವರಿವರಿಗೆ ಸಾಧ್ಯವಿಲ್ಲ, ದ್ರೋಣನು ಕೆರಳಿದರೆ ಆತನೆದುರು ನಿಲ್ಲುವವರಾರು? ಯುದ್ಧಕ್ಕೇಳು ಎಂದು ಸೈನಿಕರು ಅರ್ಜುನನನ್ನು ಜರೆದರು.

ಅರ್ಥ:
ಶಿವ: ಶಂಕರ; ಬೇಡು: ಕೇಳು; ಶರ: ಬಾಣ; ತೆಗೆ: ಹೊರತರು; ಬಿಗಿ: ಕಟ್ಟು; ಇಷ್ಟ: ಇಚ್ಛೆ; ದೈವ: ಭಗವಂತ; ತವಕ: ಬಯಕೆ, ಆತುರ; ಪರಮ: ಶ್ರೇಷ್ಠ; ಸದ್ಗತಿ: ಒಳ್ಳೆಯ ಸ್ಥಿತಿ; ಹವಣ: ಸಿದ್ಧತೆ, ಪ್ರಯತ್ನ;
ಗುರು: ಆಚಾರ್ಯ; ಮುನಿ: ಕೋಪ; ಅವಗಡಿಸು: ಕಡೆಗಣಿಸು; ನಿಲು: ನಿಲ್ಲು, ತಡೆ; ಬವರ: ಕಾಳಗ, ಯುದ್ಧ; ಜರಿ: ಬಯ್ಯು; ದೂತ: ಸೈನಿಕ;

ಪದವಿಂಗಡಣೆ:
ಶಿವನ +ಬೇಡಿದ +ಶರವ +ತೆಗೆ +ಗಾಂ
ಡಿವವ +ಬಿಗಿ +ನಿನ್ನಿಷ್ಟ +ದೈವವ
ತವಕದಲಿ +ನೀ +ಬೇಡಿಕೊಂಬುದು +ಪರಮ+ಸದ್ಗತಿಯ
ಅವರಿವರ+ ಹವಣಲ್ಲ+ ಗುರು +ಮುನಿದ್
ಅವಗಡಿಸಿದರೆ +ನಿಲುವನ್+ಆವನು
ಬವರಕ್+ಏಳೇಳೆಂದು +ಜರಿದರು+ ದೂತರ್+ಅರ್ಜುನನ

ಅಚ್ಚರಿ:
(೧) ದ್ರೋಣನ ಶ್ರೇಷ್ಠತೆ – ಗುರು ಮುನಿದವಗಡಿಸಿದರೆ ನಿಲುವನಾವನುಬವರಕ್

ಪದ್ಯ ೪೭: ಉಪಪ್ಲಾವ್ಯ ನಗರವು ಹೇಗೆ ಅಲಂಕೃತಗೊಂಡಿತ್ತು?

ದೇವ ನೀ ಬಹನೆಂದು ಬಂದರು
ದಾವಣಿಯ ಹವಣರಿದು ಬಳಿಕ ಮ
ಹಾವಿಳಾಸದೊಳೊಪ್ಪವಿಟ್ಟರು ತಮ್ಮ ನಗರಿಗಳ
ಹೂವಲಿಯ ವೀಧಿಗಳ ನವ ರ
ತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು ಕೇರಿಕೇರಿಗಳು (ವಿರಾಟ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕುದುರೆ ಆನೆಯ ಲಾಯಗಳ ಸಿದ್ಧತೆಯಿಂದ ಸೈನ್ಯವು ಮುಂದುವರಿದು ಬಂದುದನ್ನು ಖಚಿತಪಡಿಸಿಕೊಂಡು ದೂತರು, ಶ್ರೀಕೃಷ್ಣನು ಇಗೋ ಬಂದನು ಎಂದು ಹೇಳಿದರು. ಉಪಪ್ಲಾವ್ಯ ನಗರಿಯನ್ನು ಉತ್ತಮವಾಗಿ ಅಲಂಕರಿಸಿದ್ದರು, ಬೀದಿಗಳಲ್ಲಿ ಪುಷ್ಪಾಲಂಕಾರ, ನವರತ್ನಗಲ ಕುಚ್ಚುಗಳು, ಅಲಂಕೃತವಾದ ಛಾವಣಿಯ ಮುಂಭಾಗಗಳು, ಉಪಪ್ಲಾವ್ಯದ ಬೀದಿ ಬೀದಿಗಳಲ್ಲೂ ಕಂಡು ಬಂದವು.

ಅರ್ಥ:
ದೇವ: ಭಗವಂತ; ಬಹನೆಂದು: ಬರುವೆಯೆಂದು; ಬಂದು: ಆಗಮಿಸು; ದಾವಣಿ: ಗುಂಪು, ಸಮೂಹ; ಹವಣ: ಸಿದ್ಧತೆ, ಪ್ರಯತ್ನ; ಅರಿ: ತಿಳಿದು; ಬಳಿಕ: ನಂತರ; ವಿಲಾಸ: ಅಂದ, ಸೊಬಗು; ನಗರ: ಪಟ್ಟಣ; ಹೂವಲಿ: ರಂಗವಲ್ಲಿಯಂತೆ ರಚಿಸಿದ ಹೂವುಗಳ ಅಲಂಕಾರ; ವೀಧಿ: ಬೀದಿ, ರಸ್ತೆ; ನವ: ಹೊಸ; ರತ್ನಾವಳಿ: ವಜ್ರ, ಮಾಣಿಕ್ಯಗಳ ಗುಂಪು; ಸೂಸಕ: ಒಂದು ಬಗೆಯ ಆಭರಣ, ಬೈತಲೆ ಬೊಟ್ಟು; ಭದ್ರ: ಮಂಗಳಕರವಾದ, ಶುಭಕರವಾದ; ಲೋವೆ: ಛಾವಣಿಯ ಚೌಕಟ್ಟು; ಲಂಬಳ: ತೂಗಾಡುವ; ಎಸೆ: ತೋರು; ಕೇರಿ: ಬೀದಿ;

ಪದವಿಂಗಡಣೆ:
ದೇವ+ ನೀ +ಬಹನೆಂದು+ ಬಂದರು
ದಾವಣಿಯ+ ಹವಣರಿದು+ ಬಳಿಕ+ ಮ
ಹಾ+ವಿಳಾಸದೊಳ್+ ಒಪ್ಪವಿಟ್ಟರು +ತಮ್ಮ +ನಗರಿಗಳ
ಹೂವಲಿಯ +ವೀಧಿಗಳ+ ನವ +ರ
ತ್ನಾವಳಿಯ +ಸೂಸಕದ +ಭದ್ರದ
ಲೋವೆಗಳ +ಲಂಬಳದಲ್+ಎಸೆದವು+ ಕೇರಿ+ಕೇರಿಗಳು

ಅಚ್ಚರಿ:
(೧) ನಗರವನ್ನು ಸಿಂಗರಿಸಿದ ಪರಿ – ಹೂವಲಿಯ ವೀಧಿಗಳ ನವ ರತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು

ಪದ್ಯ ೩೫: ಕಂಕನು ಯಾವ ಉಪಾಯವನ್ನು ಹೇಳಿದನು?

ಬವರವನು ಮನ್ನಿಸಲು ಬೇಕೆಂ
ದವನಿಪತಿ ನೆರೆನುಡಿಯೆ ಮಲ್ಲರ
ನಿವಹವೈತಹುದೆಂದು ನೇಮವನಿತ್ತುದೊಳಿತಾಯ್ತು
ಅವರು ಬಂದರೆ ನಾಳೆ ಮಾಡುವ
ಹವಣದಾವುದು ಬಿಟ್ಟುಕಳೆ ಹೇ
ಳುವೆನು ನಿನಗಿನ್ನೊಮ್ಮೆ ಗೆಲುಗೈಯಹ ಮನೋರಥವ (ವಿರಾಟ ಪರ್ವ, ೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಯುದ್ಧವನ್ನು ಒಪ್ಪಿಕೊಳ್ಳಲೇಬೇಕಲ್ಲಾ ಎಂದು ವಿರಾಟ ರಾಜನು ಹೇಳಲು, ಕಂಕನು ನಾಳೆ ನೀವು ಮಲ್ಲರನ್ನು ಮತ್ತೆ ಬರಲು ಹೇಳಿದುದು ಒಳಿತಾಯಿತು. ನಾಳೆ ಅವರು ಬಂದರೆ ಏನು ಮಾಡಬೇಕೆಂಬ ಚಿಂತೆ ಬೇಡ, ಗೆಲ್ಲಲು ನಾನೊಂದು ಮಾರ್ಗವನ್ನು ನಿನಗೆ ಹೇಳುತ್ತೇನೆಂದು ನುಡಿದನು.

ಅರ್ಥ:
ಬವರ: ಕಾಳಗ, ಯುದ್ಧ; ಮನ್ನಿಸು: ಅಂಗೀಕರಿಸು; ಅವನಿಪತಿ: ರಾಜ; ಅವನಿ: ಭೂಮಿ; ನೆರೆ: ಸಮೀಪ, ಗುಂಪು; ನುಡಿ: ಮಾತು; ಮಲ್ಲ: ಜಟ್ಟಿ; ನಿವಹ: ಗುಂಪು; ನೇಮ: ನಿಯಮ; ಬಂದರೆ: ಆಗಮಿಸು; ನಾಳೆ: ಮರುದಿನ; ಹವಣ: ಸಿದ್ಧತೆ, ಪ್ರಯತ್ನ; ಬಿಡು: ತೊರೆ; ಕಳೆ: ಕಾಂತಿ; ಹೇಳು: ತಿಳಿಸು; ಗೆಲುವು: ಜಯ; ಮನೋರಥ: ಆಸೆ, ಬಯಕೆ;

ಪದವಿಂಗಡಣೆ:
ಬವರವನು +ಮನ್ನಿಸಲು +ಬೇಕೆಂದ್
ಅವನಿಪತಿ +ನೆರೆ+ನುಡಿಯೆ +ಮಲ್ಲರ
ನಿವಹವ್+ಐತಹುದೆಂದು +ನೇಮವನಿತ್ತುದ್+ಒಳಿತಾಯ್ತು
ಅವರು+ ಬಂದರೆ +ನಾಳೆ +ಮಾಡುವ
ಹವಣದ್+ಆವುದು +ಬಿಟ್ಟು+ಕಳೆ+ ಹೇ
ಳುವೆನು +ನಿನಗಿನ್ನೊಮ್ಮೆ +ಗೆಲುಗೈಯಹ +ಮನೋರಥವ

ಅಚ್ಚರಿ:
(೧) ಕಂಕನ ಉಪಾಯ – ಕಳೆ ಹೇಳುವೆನು ನಿನಗಿನ್ನೊಮ್ಮೆ ಗೆಲುಗೈಯಹ ಮನೋರಥವ

ಪದ್ಯ ೫೦: ಮುನಿಗಳು ಯಾರ ಬಗ್ಗೆ ಹೇಳಲು ಪ್ರಾರಂಭಿಸಿದರು?

ಅರಸ ಮರುಗದಿರಾವ ಪಾಡಿನ
ನರಪತಿಗಳೈ ನೀವು ವಿಶ್ವಂ
ಭರನ ಘನತೆಯ ಕೇಳಿದರಿಯಾ ಕೈಟಭಾಂತಕನ
ವರಮುನಿಯ ಶಾಪವನು ತಾನೇ
ಧರಿಸಿ ನರರೂಪಿನಲಿ ನವೆದುದ
ನರಸ ಬಣ್ಣಿಸಲೆನ್ನ ಹವಣಲ್ಲೆಂದನಾ ಮುನಿಪ (ಅರಣ್ಯ ಪರ್ವ, ೨೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಮಾರ್ಕಂಡೇಯ ಮುನಿಗಳು ಮಾತನಾಡುತ್ತಾ, ಧರ್ಮಜ ನಿಮ್ಮದೇನು ಮಹಾಕಷ್ಟ, ನೀವು ರಾಜರು ಅಷ್ಟೇ. ಈ ಜಗತ್ತನ್ನು ಪಾಲಿಸುವ ಕೈಟಭನನ್ನು ಸಂಹರಿಸಿದ ವಿಷ್ಣುವಿನ ವಿಷಯ ನಿನಗೆ ಗೊತ್ತಿರಬಹುದು, ಅವನು ನಾರದ ಮುನಿಗಳ ಶಾಪದಿಂದ ಮನುಷ್ಯನಾಗಿ ಹುಟ್ಟಿ ಭಂಗಪಟ್ಟುದನ್ನು ವರ್ಣಿಸುವುದು ನನಗೆ ಅಸಾಧ್ಯ.

ಪೂರ್ವ ವಿವರಣೆ: ಅಂಬರೀಷನ ಮಗಳಾದ ಶ್ರೀಮತಿಯು ನಾರದನನ್ನು ಮದುವೆಯಾಗಲಿರುವಾಗ, ವಿಷ್ಣುವು ನಾರದನಿಗೆ ಕಪಿಯ ಮುಖವಾಗುವಂತೆ ಮಾಡಿ ಅವಳನ್ನು ಅಪಹರಿಸಿದನು. ನಾರದನು ಕೋಪಗೊಂಡು ಹೆಣ್ಣಿಗಾಗಿ ನೀನು ನನಗೆ ಮೋಸ ಮಾಡಿದುದರಿಂದ ನೀನೂ ಮನುಷ್ಯನಾಗಿ ಹುಟ್ಟಿ ಸ್ತ್ರೀವಿರಹದಿಂದ ದುಃಖಿಸು, ಕಪಿಗಳು ನಿನಗೆ ಸಹಾಯ ಮಾಡಲಿ ಎಂದು ಶಪಿಸಿದನು.

ಅರ್ಥ:
ಅರಸ: ರಾಜ; ಮರುಗು: ತಳಮಳ, ಸಂಕಟ; ಪಾಡು: ಸ್ಥಿತಿ, ಅವಸ್ಥೆ; ನರಪತಿ: ರಾಜ;
ವಿಶ್ವಂಭರ: ಜಗತ್ತನ್ನು ಕಾಪಾಡುವವನು; ಘನತೆ: ಶ್ರೇಷ್ಠ; ಕೇಳು: ಆಲಿಸು; ಅಂತಕ: ಕೊಲ್ಲುವವ; ವರಮುನಿ: ನಾರದ; ಶಾಪ: ನಿಷ್ಠುರದ ನುಡಿ; ಧರಿಸು: ಹೊರು, ಹೊತ್ತುಕೊಳ್ಳು; ನರರೂಪ: ಮನುಷ್ಯನ ರೂಪ; ನವೆ: ಕೊರಗು; ಬಣ್ಣಿಸು: ಹೇಳು, ವಿವರಿಸು; ಹವಣ: ಅಳತೆ, ಪ್ರಯತ್ನ; ಮುನಿ: ಋಷಿ;

ಪದವಿಂಗಡಣೆ:
ಅರಸ +ಮರುಗದಿರ್+ಆವ +ಪಾಡಿನ
ನರಪತಿಗಳೈ+ ನೀವು +ವಿಶ್ವಂ
ಭರನ +ಘನತೆಯ +ಕೇಳಿದ್+ಅರಿಯಾ +ಕೈಟಭಾಂತಕನ
ವರಮುನಿಯ +ಶಾಪವನು +ತಾನೇ
ಧರಿಸಿ+ ನರರೂಪಿನಲಿ+ ನವೆದುದನ್
ಅರಸ +ಬಣ್ಣಿಸಲೆನ್ನ +ಹವಣಲ್ಲೆಂದನಾ +ಮುನಿಪ

ಅಚ್ಚರಿ:
(೧) ವಿಷ್ಣುವನ್ನು ವಿಶ್ವಂಭರ, ನಾರದರನ್ನು ವರಮುನಿ ಎಂದು ಕರೆದಿರುವುದು
(೨) ಅರಸ, ನರಪತಿ – ಸಮನಾರ್ಥಕ ಪದಗಳು

ಪದ್ಯ ೪೮: ಅರ್ಜುನನು ದ್ರೌಪದಿಗೆ ಯಾವ ಶುಭವಾರ್ತೆಯನ್ನು ಹೇಳಬೇಕೆಂದುಕೊಂಡನು?

ಶಿವನ ಶರವೆನಗಾಯ್ತು ರಿಪುಕೌ
ರವರ ರಕುತದ ರಾಟಳವನೆ
ತ್ತುವೆನು ಕಟ್ಟಾಮುಡಿಯನೆಂಬೆನು ದ್ರೌಪದೀ ಸತಿಗೆ
ಇವಳು ಭಂಗಿಸಿ ಬೂತುಗೆಡಹಿದ
ಹವಣನಾರಿಗೆ ಹೇಳುವೆನು ವರ
ಯುವತಿಗೀ ನುಡಿಯೊಸಗೆಯೇ ಹಾಯೆನುತ ಬಿಸುಸುಯ್ದ (ಅರಣ್ಯ ಪರ್ವ, ೯ ಸಂಧಿ, ೪೮ ಪದ್ಯ)

ತಾತ್ಪರ್ಯ:
ದ್ರೌಪದಿಯ ಬಳಿ ಹೋಗಿ, ನನಗೆ ಪಾಶುಪಾಸ್ತ್ರ ಸಿಕ್ಕಿದೆ. ಶತ್ರುಗಳ ರಕ್ತವನ್ನು ರಾಟೆಯಲ್ಲೆತ್ತುತ್ತೇನೆ, ಮುಡಿಯನ್ನು ಕಟ್ಟು ಎನ್ನುತ್ತೇನೆ. ಊರ್ವಶಿಯು ನನ್ನನ್ನು ಭಂಗಿಸಿ ನಾಚಿಕೆಗೇಡು ಮಾಡಿದ ವಿಷಯವನ್ನು ನಾನು ಯಾರಿಗೆ ಹೇಳಲಿ? ದ್ರೌಪದಿಗೆ ಇದೊಂದು ಶುಭವಾರ್ತೆ ಅಯ್ಯೋ ಎನ್ನುತ್ತಾ ಅರ್ಜುನನು ನಿಟ್ಟುಸಿರುಬಿಟ್ಟನು.

ಅರ್ಥ:
ಶಿವ: ಶಂಕರ; ಶರ: ಬಾಣ; ರಿಪು: ವೈರಿ; ರಕುತ: ನೆತ್ತರು; ರಾಟಳ: ರಾಟೆ, ಗಾಲಿ; ಎತ್ತು: ಮೇಲಕ್ಕೆ ತರು; ಕಟ್ಟು: ಬಂಧಿಸು, ಹೂಡು; ಮುಡಿ: ಶಿರ; ಸತಿ: ಹೆಂಡತಿ; ಭಂಗಿಸು: ಅಪಮಾನ ಮಾಡು; ಬೂತು: ಕುಚೋದ್ಯ, ಕುಚೇಷ್ಟೆ; ಕೆಡಹು: ತಳ್ಳು, ಬೀಳಿಸು; ಹವಣ: ಉಪಾಯ, ಸಿದ್ಧತೆ; ಹೇಳು: ತಿಳಿಸು; ವರ: ಶ್ರೇಷ್ಠ; ಯುವತಿ: ಹೆಣ್ಣು; ನುಡಿ: ಮಾತು; ಒಸಗೆ: ಶುಭ; ಬಿಸುಸುಯ್: ನಿಟ್ಟುಸಿರುಬಿಡು;

ಪದವಿಂಗಡಣೆ:
ಶಿವನ +ಶರವೆನಗಾಯ್ತು +ರಿಪು+ಕೌ
ರವರ +ರಕುತದ +ರಾಟಳವನ್
ಎತ್ತುವೆನು +ಕಟ್ಟ್+ಆ+ಮುಡಿಯನ್+ಎಂಬೆನು +ದ್ರೌಪದೀ +ಸತಿಗೆ
ಇವಳು +ಭಂಗಿಸಿ +ಬೂತು+ಕೆಡಹಿದ
ಹವಣನಾರಿಗೆ+ ಹೇಳುವೆನು +ವರ
ಯುವತಿಗ್+ಈ +ನುಡಿ+ಒಸಗೆಯೇ +ಹಾಯೆನುತ +ಬಿಸುಸುಯ್ದ

ಅಚ್ಚರಿ:
(೧) ಅರ್ಜುನನ ಗೊಂದಲ – ಇವಳು ಭಂಗಿಸಿ ಬೂತುಗೆಡಹಿದ ಹವಣನಾರಿಗೆ ಹೇಳುವೆನು
(೨) ದ್ರೌಪದಿಗೆ ನೀಡುವ ವಾರ್ತೆ – ವರಯುವತಿಗೀ ನುಡಿಯೊಸಗೆಯೇ ಹಾಯೆನುತ ಬಿಸುಸುಯ್ದ

ಪದ್ಯ ೩೭: ಕರ್ಣನು ಅಶ್ವಸೇನ ಸರ್ಪನಿಗೆ ಏನು ಹೇಳಿದ?

ಅರಿಯೆ ನಾ ನೀನೆಂದು ಲೋಗರ
ಮರೆಯಲರಿಗಳ ಗೆಲುವ ಕರ್ಣನೆ
ಯರಿಯಲಾ ನೀನೆನ್ನ ಹವಣನು ತೊಡುವುದಿಲ್ಲೆನಲು
ಮರುಗಿದನು ಶಲ್ಯನು ನೃಪಾಲನ
ನಿರಿದೆಯೋ ರಾಧೇಯ ನೀನೆಂ
ದುರುಬೆಯಲಿ ಕೋಪಿಸುತ ಕರ್ಣನ ಬಯ್ದು ಗಜರಿದನು (ಕರ್ಣ ಪರ್ವ, ೨೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕರ್ಣನು ಅಶ್ವಸೇನ ಸರ್ಪರಾಜನನ್ನು ಉದ್ದೇಶಿಸುತ್ತಾ, ನನಗೆ ನೀನಾರೆಂದು ತಿಳಿದಿರಲಿಲ್ಲ. ಈ ಕರ್ಣನು ಜನರ ಮರೆಯಲ್ಲಿ ನಿಂತು ಶತ್ರುಗಳನ್ನು ಕೊಲ್ಲುವವನಲ್ಲ. ನಿನ್ನನ್ನು ನಾನು ಮತ್ತೆ ತೊಡುವುದಿಲ್ಲ ಎಂದನು. ಇದನ್ನು ಕೇಳಿದ ಶಲ್ಯನು ಅತೀವ ಸಂಕಟಪಟ್ಟು, ಕರ್ಣ ನೀನು ದುರ್ಯೋಧನನನ್ನು ಕೊಂದೆ, ಎಂದು ಕೋಪಿಸುತ್ತ ಕರ್ಣನನ್ನು ಗದರಿ ಬಯ್ದನು.

ಅರ್ಥ:
ಅರಿ: ತಿಳಿ; ಲೋಗರ:ಜನತೆ, ಸಾಮಾನ್ಯ; ಮರೆ: ಗುಟ್ಟು, ರಹಸ್ಯ; ಅರಿ: ವೈರಿ; ಗೆಲುವ: ಜಯಿಸುವ; ಅರಿ: ಹವಣ: ಸಿದ್ಧತೆ, ಉಪಾಯ; ತೊಡು: ಧರಿಸು; ಮರುಗು: ತಳಮಳ, ಸಂಕಟ; ನೃಪಾಲ: ರಾಜ; ಇರಿ: ಚುಚ್ಚು; ಉರುಬು:ಅತಿಶಯವಾದ ವೇಗ; ಕೋಪ: ಸಿಟ್ಟುಗೊಳ್ಳು; ಬಯ್ದು: ಜರಿದು; ಗದರು: ಅಬ್ಬರಿಸು, ಗರ್ಜಿಸು;

ಪದವಿಂಗಡಣೆ:
ಅರಿಯೆ +ನಾ +ನೀನೆಂದು +ಲೋಗರ
ಮರೆಯಲ್+ಅರಿಗಳ +ಗೆಲುವ +ಕರ್ಣನೆ
ಅರಿಯಲಾ +ನೀನೆನ್ನ +ಹವಣನು+ ತೊಡುವುದಿಲ್+ಎನಲು
ಮರುಗಿದನು +ಶಲ್ಯನು +ನೃಪಾಲನನ್
ಇರಿದೆಯೋ +ರಾಧೇಯ +ನೀನೆಂದ್
ಉರುಬೆಯಲಿ +ಕೋಪಿಸುತ +ಕರ್ಣನ +ಬಯ್ದು +ಗಜರಿದನು

ಅಚ್ಚರಿ:
(೧) ಕರ್ಣನ ದಿಟ್ಟ ನುಡಿ: ಲೋಗರ ಮರೆಯಲರಿಗಳ ಗೆಲುವ ಕರ್ಣನೆ ಯರಿಯಲಾ
(೨) ಶಲ್ಯನ ಕೋಪದ ನುಡಿ: ನೃಪಾಲನನಿರಿದೆಯೋ ರಾಧೇಯ

ಪದ್ಯ ೨೯: ಅರ್ಜುನನಿಗೆ ವೃಷಸೇನನು ಯಾವ ಬಾಣ ಪ್ರಯೋಗಿಸಲು ಹೇಳಿದ?

ಅದು ಬಳಿಕ ಲೋಕಾಯತಾಂಗ
ಚ್ಛದನ ಪರನಾರಾಚ ನಿರ್ಮಾ
ಣದಲಿ ಭಂಗಿತವಾಯ್ತು ಪಾರ್ಥನ ಬಾಣದೊಡ್ಡವಣೆ
ಬಿದಿರ ಮೆಳೆಯಲಿ ಹರಿವುದೇ ಬೆ
ಟ್ಟದಲಿ ಹರಿಯದ ವಸ್ತು ಹರನಿಂ
ದೊದಗಿದಂಬಿನ ಹವಣ ತೋರೆಂದೆಚ್ಚನರ್ಜುನನ (ಕರ್ಣ ಪರ್ವ, ೨೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಆ ಬಾಣಗಳ ಆವಳಿಯು ವೃಷಸೇನನ ಲೋಕದಷ್ಟು ವಿಸ್ತಾರವಾದ ಬಾಣಗಳಿಂದ ಭಂಗವಾಯಿತು. ವೃಷಸೇನನು, ಎಲೈ ಅರ್ಜುನ ಬಿಟ್ಟದಿಂದ ಇಳಿದು ಬರಲು ಕಷ್ಟಪಡುವ ನೀರು ಬಿದಿರ ಮಳೆಯಲ್ಲಿ ಹರಿದೀತೇ? ಇದು ನಿನ್ನಿಂದಾಗದ ಕೆಲಸ, ಶಿವನು ನಿನಗೆ ನೀಡಿದ ಅಸ್ತ್ರದ ಸತ್ವವನ್ನು ತೋರಿಸು ಎಂದು ಹೇಳಿದನು.

ಅರ್ಥ:
ಬಳಿಕ: ನಂತರ; ಲೋಕಾಯತ: ಲೋಕದಷ್ಟು ವಿಸ್ತಾರವಾದ; ಅಂಗಚ್ಛದನ: ಕವಚ; ಪರ: ಬೇರೆ, ವೈರಿ; ನಾರಾಚ: ಬಾಣ; ನಿರ್ಮಾಣ: ರಚನೆ; ಭಂಗಿತ: ಸೀಳು, ಮುರಿ; ಬಾಣ: ಶರ; ಒಡ್ಡವಣೆ: ಗುಂಪು; ಬಿದಿರ: ಬೊಂಬು; ಮಳೆ: ವರ್ಷ; ಹರಿ: ಚಲಿಸು; ಬೆಟ್ಟ: ಗಿರಿ; ವಸ್ತು: ಸಾಮಗ್ರಿ; ಹರ: ಶಿವ; ಒದಗು: ಸಿಕ್ಕ; ಅಂಬು: ಬಾಣ; ಹವಣ: ಮಿತಿ, ಸಿದ್ಧತೆ, ತೂಗು; ತೋರು: ಪ್ರದರ್ಶಿಸು; ಎಚ್ಚು: ಬಾಣಬಿಡು;

ಪದವಿಂಗಡಣೆ:
ಅದು +ಬಳಿಕ +ಲೋಕಾಯತ+ಅಂಗ
ಚ್ಛದನ +ಪರ+ನಾರಾಚ +ನಿರ್ಮಾ
ಣದಲಿ +ಭಂಗಿತವಾಯ್ತು +ಪಾರ್ಥನ +ಬಾಣದ್+ಒಡ್ಡವಣೆ
ಬಿದಿರ+ ಮೆಳೆಯಲಿ +ಹರಿವುದೇ +ಬೆ
ಟ್ಟದಲಿ +ಹರಿಯದ+ ವಸ್ತು +ಹರನಿಂದ್
ಒದಗಿದ್+ಅಂಬಿನ +ಹವಣ +ತೋರೆಂದ್+ಎಚ್ಚನ್+ಅರ್ಜುನನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಿದಿರ ಮೆಳೆಯಲಿ ಹರಿವುದೇ ಬೆಟ್ಟದಲಿ ಹರಿಯದ ವಸ್ತು
(೨) ವೈರಿ ಬಾಣ ಎಂದು ಹೇಳಉ – ಪರನಾರಾಚ ಪದದ ಬಳಕೆ