ಪದ್ಯ ೧೫: ಸುಭದ್ರೆಯು ನೋವಿನಿಂದ ಏನೆಂದು ನುಡಿದಳು?

ಮಗನು ಪಂಚ ದ್ರೌಪದೇಯರ
ಬಗೆಯನೆನ್ನವನಿರಲು ರಾಜ್ಯವ
ಹೊಗಿಸಲನುವಿಲ್ಲೆಂದು ಕಂದನ ರಣಕೆ ನೂಕಿದಿರಿ
ಬಗೆಯೊಲವು ಫಲವಾಯ್ತಲಾ ಕಾ
ಳೆಗವ ಗೆಲಿದೈವರು ಕುಮಾರರು
ಹೊಗಿಸಿರೈ ಗಜಪುರವನೆಂದು ಸುಭದ್ರೆ ಹಲುಬಿದಳು (ದ್ರೋಣ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸುಭದ್ರೆ ತನ್ನ ನೋವನ್ನು ಹೊರಹಾಕುತ್ತಾ, ಅಭಿಮನ್ಯುವಿದ್ದರೆ ದ್ರೌಪದಿಯ ಮಕ್ಕಳನ್ನು ಲೆಕ್ಕಿಸದೆ ರಾಜ್ಯವಾಳುವನೆಂದು ಬಗೆದು ಕಂದನನ್ನು ಯುದ್ಧಕ್ಕೆ ನೂಕಿದಿರಲ್ಲವೇ? ನಿಮ್ಮ ಇಷ್ಟ ಸಿದ್ಧಿಸಿತು. ಯುದ್ಧವನ್ನು ಗೆದ್ದು ಐವರು ಉಪಪಾಂಡವರನ್ನು ಹಸ್ತಿನಾವತಿಯ ಅರಸರನ್ನಾಗಿ ಮಾಡಿರಿ ಎಂದು ಅಳುತ್ತಾ ನುಡಿದಳು.

ಅರ್ಥ:
ಮಗ: ಪುತ್ರ; ಪಂಚ: ಐದು; ಬಗೆ: ರೀತಿ; ರಾಜ್ಯ: ರಾಷ್ಟ್ರ; ಹೊಗಿಸು: ಒಳಹೋಗಿಸು; ಕಂದ: ಮಗು; ರಣ: ಯುದ್ಧ; ನೂಕು: ತಳ್ಳು; ಒಲವು: ಪ್ರೀತಿ; ಫಲ: ಪ್ರಯೋಜನ; ಕಾಳೆಗ: ಯುದ್ಧ; ಗೆಲಿದು: ಜಯಿಸು; ಕುಮಾರ: ಮಕ್ಕಳು; ಗಜಪುರ: ಹಸ್ತಿನಾಪುರ; ಹಲುಬು: ದುಃಖಪಡು;

ಪದವಿಂಗಡಣೆ:
ಮಗನು +ಪಂಚ +ದ್ರೌಪದೇಯರ
ಬಗೆಯನ್+ಎನ್ನವನಿರಲು +ರಾಜ್ಯವ
ಹೊಗಿಸಲ್+ಅನುವಿಲ್ಲೆಂದು +ಕಂದನ +ರಣಕೆ +ನೂಕಿದಿರಿ
ಬಗೆ+ಒಲವು +ಫಲವಾಯ್ತಲಾ +ಕಾ
ಳೆಗವ +ಗೆಲಿದ್+ಐವರು +ಕುಮಾರರು
ಹೊಗಿಸಿರೈ +ಗಜಪುರವನೆಂದು +ಸುಭದ್ರೆ +ಹಲುಬಿದಳು

ಅಚ್ಚರಿ:
(೧) ಮಗ, ಕುಮಾರ, ಕಂದ; ರಣ, ಕಾಳೆಗ – ಸಾಮ್ಯಾರ್ಥ ಪದ

ಪದ್ಯ ೧೦: ಧರ್ಮಜನು ಹೇಗೆ ದುಃಖಿಸಿದನು?

ಬಂದು ಫಲುಗುಣನೆನ್ನ ಮೋಹದ
ಕಂದನಾವೆಡೆಯೆಂದಡಾನೇ
ನೆಂದು ಮಾರುತ್ತರವ ಕೊಡುವೆನು ವೈರಿನಾಯಕರು
ಕೊಂದರೆಂಬೆನೊ ಮೇಣು ನಾನೇ
ಕೊಂದೆನೆಂಬೆನೊ ಶಿವ ಮಹಾದೇ
ವೆಂದು ಪುತ್ರಸ್ನೇಹಸೌರಂಭದಲಿ ಹಲುಬಿದನು (ದ್ರೋಣ ಪರ್ವ, ೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧರ್ಮಜನು ಅತಿಶಯ ಪುತ್ರಸ್ನೇಹದಿಂದ ಅರ್ಜುನನು ಬಂದು ನನ್ನ ಪ್ರೀತಿಯ ಪುತ್ರನೆಲ್ಲಿ ಎಂದು ಕೇಳಿದರೆ ನಾನೇನು ಉತ್ತರ ಕೊಡಲಿ, ವೈರಿನಾಯಕರು ಕೊಂದರು ಎನ್ನಲೇ ಅಥವಾ ನಾನೇ ಅವನನ್ನು ಯುದ್ಧಕ್ಕೆ ಕಳಿಸಿ ಕೊಲ್ಲಿಸಿದೆ ಎನ್ನಲೇ ಶಿವ ಶಿವಾ ಎಂದು ಪುತ್ರ ಪ್ರೇಮದಿಂದ ದುಃಖಿಸಿದನು.

ಅರ್ಥ:
ಬಂದು: ಆಗಮಿಸು; ಮೊಹ: ಇಚ್ಛೆ; ಕಂದ: ಮಗ; ಆವೆಡೆ: ಯಾವ ಕಡೆ; ಉತ್ತರ: ಬಿನ್ನಹ; ಕೊಡು: ನೀಡು; ವೈರಿ: ಶತ್ರು; ನಾಯಕ: ಒಡೆಯ; ಕೊಂದು: ಸಾಯಿಸು; ಮೇಣ್: ಅಥವ; ಶಿವ: ಶಂಕರ; ಪುತ್ರ: ಮಗ; ಸ್ನೇಹ: ಮಿತ್ರ; ಸೌರಂಭ: ಸಂಭ್ರಮ; ಹಲುಬು: ದುಃಖಪಡು;

ಪದವಿಂಗಡಣೆ:
ಬಂದು +ಫಲುಗುಣನ್+ಎನ್ನ +ಮೋಹದ
ಕಂದನ್+ಆವೆಡೆ+ಎಂದಡ್+ಆನ್
ಏನೆಂದು +ಮಾರುತ್ತರವ+ ಕೊಡುವೆನು +ವೈರಿನಾಯಕರು
ಕೊಂದರೆಂಬೆನೊ +ಮೇಣು +ನಾನೇ
ಕೊಂದೆನೆಂಬೆನೊ +ಶಿವ +ಮಹಾದೇ
ವೆಂದು +ಪುತ್ರ+ಸ್ನೇಹ+ಸೌರಂಭದಲಿ +ಹಲುಬಿದನು

ಅಚ್ಚರಿ:
(೧) ಧರ್ಮಜನ ದುಃಖದ ಕಾರಣ – ಪುತ್ರಸ್ನೇಹಸೌರಂಭದಲಿ ಹಲುಬಿದನು

ಪದ್ಯ ೮೫: ಅರ್ಜುನನು ಕೃಷ್ಣನಲ್ಲಿ ಏನು ಬೇಡಿದನು?

ಮರೆದು ನಾಲಗೆಗೊನೆಗೆ ನಾಮದ
ನಿರುಗೆ ನೆಲೆಗೊಳೆ ನಿನ್ನನೇ ಸಲೆ
ತೆರುವ ಬಿರುದನು ಬಲ್ಲೆನೊರಲಿದು ನಿನ್ನ ಹಲುಬಿದರೆ
ಉರುವ ಹೆಂಗುಸಿನುನ್ನತಿಕೆಯಲಿ
ಸೆರಗು ಬೆಳೆದುದ ಕಂಡೆನೈ ಸೈ
ಗರೆವುದೈ ಕಾರಣ್ಯವರುಷವನೆನ್ನ ಮೇಲೆಂದ (ಭೀಷ್ಮ ಪರ್ವ, ೩ ಸಂಧಿ, ೮೫ ಪದ್ಯ)

ತಾತ್ಪರ್ಯ:
ನಾಲಗೆಯ ತುದಿಗೆ ಮರೆತು ನಿನ್ನ ನಾಮವು ಬಂದರೂ, ಸ್ಮರಿಸಿದವನಿಗೆ ನಿನ್ನನ್ನೇ ತೆರುವೆ ಎನ್ನುವುದು ನಿನ್ನ ಬಿರುದು, ನಿನ್ನನ್ನು ನೆನೆದು ಹಲುಬಿದ ದ್ರೌಪದಿಯ ಸೆರಗು ಬೆಳೆದು ಅಕ್ಷಯವಾದುದನ್ನು ನಾನೇ ಕಂಡಿದ್ದೇನೆ, ನನ್ನ ಮೇಲೆ ಕಾರುಣ್ಯದ ಮಳೆಯನ್ನು ಸುರಿಸಬೇಕೆಂದು ಬೇಡಿದನು.

ಅರ್ಥ:
ಮರೆ: ಜ್ಞಾಪಕವಿಲ್ಲದ ಸ್ಥಿತಿ; ನಾಲಗೆ: ಜಿಹ್ವೆ; ಕೊನೆ: ತುದಿ; ನಾಮ: ಹೆಸರು; ನಿರುಗೆ: ಕೋರಿಕೆ; ನೆಲೆ: ಸ್ಥಾನ; ಸಲೆ: ಒಂದೇ ಸಮನೆ; ಬಿರುದು: ಹೆಗ್ಗಳಿಕೆ; ಬಲ್ಲೆ: ತಿಳಿ; ಒರಲು: ಹೇಳು; ಹಲುಬು: ಬೇಡಿಕೋ; ಉರುವ: ಶ್ರೇಷ್ಠ; ಹೆಂಗುಸು: ಹೆಣ್ಣು; ಉನ್ನತಿ: ಅಧಿಕ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬೆಳೆದು: ಹೆಚ್ಚಾಗು; ಕಂಡು: ನೋದು; ಸೈಗರೆ: ಬರೆಮಾಡು; ಕಾರುಣ್ಯ: ದಯೆ; ವರುಷ: ಮಳೆ;

ಪದವಿಂಗಡಣೆ:
ಮರೆದು +ನಾಲಗೆ+ಕೊನೆಗೆ +ನಾಮದ
ನಿರುಗೆ +ನೆಲೆಗೊಳೆ+ ನಿನ್ನನೇ+ ಸಲೆ
ತೆರುವ+ ಬಿರುದನು+ ಬಲ್ಲೆನ್+ಒರಲಿದು +ನಿನ್ನ +ಹಲುಬಿದರೆ
ಉರುವ +ಹೆಂಗುಸಿನ್+ಉನ್ನತಿಕೆಯಲಿ
ಸೆರಗು +ಬೆಳೆದುದ+ ಕಂಡೆನೈ +ಸೈ
ಕರೆವುದೈ +ಕಾರಣ್ಯ+ವರುಷವನ್+ಎನ್ನ +ಮೇಲೆಂದ

ಅಚ್ಚರಿ:
(೧) ಕೃಷ್ಣನ ಬಿರುದು – ಮರೆದು ನಾಲಗೆಗೊನೆಗೆ ನಾಮದ ನಿರುಗೆ ನೆಲೆಗೊಳೆ ನಿನ್ನನೇ ಸಲೆ ತೆರುವ

ಪದ್ಯ ೭೨: ಕೃಷ್ಣನ ಸ್ಥಾನ ಎಂತಹುದು?

ನೊರಜು ತಾನೆತ್ತಲು ಮಹತ್ವದ
ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ
ನರಮೃಗಾಧಮನೆತ್ತಲುನ್ನತ
ಪರಮತತ್ವವಿದೆತ್ತಲಕಟಾ
ಮರುಳು ನನ್ನವಗುಣವಾದಾವುದ ಕಡೆಗೆ ಹಲುಬುವೆನು (ಭೀಷ್ಮ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ನಾನೋ ಸಣ್ಣ ಕೀಟ, ಕೃಷ್ಣನೋ ಮೇರು ಪರ್ವತ, ನಾನೋ ಮಿಂಚುಹುಳ, ಕೃಷ್ಣನೋ ಕೋಟಿ ಸೂರ್ಯರ ಪ್ರಕಾಶವುಳ್ಳವನು. ನರಮೃಗಾಧಮನಾದ ನಾನೆಲ್ಲಿ, ಪರಮತತ್ವವಾದ ಅವನೆಲ್ಲಿ? ಹುಚ್ಚನಾದ ನನ್ನ ಅವಗುಣವನ್ನು ಹೇಗೆ ಹಳಿದುಕೊಳ್ಳಲಿ, ಏನೆಂದು ಬೇಡಲಿ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ನೊರಜು: ಸಣ್ಣ ಕೀಟ; ಮಹತ್ವ: ಮುಖ್ಯವಾದ; ಗಿರಿ: ಬೆಟ್ಟ; ಮಿಂಚುಬುಳು: ಮಿಂಚುಹುಳ; ಕಿರಣ: ಪ್ರಕಾಶ; ಹೊಳಹು: ಕಾಂತಿ; ಸೂರಿಯರು: ಸೂರ್ಯ, ರವಿ; ನರ: ಮನುಷ್ಯ; ಮೃಗ: ಪ್ರಾಣಿ; ಅಧಮ: ಕೀಳು; ಉನ್ನತ: ಎತ್ತರದ; ಪರಮ: ಶ್ರೇಷ್ಠ; ತತ್ವ: ಸಿದ್ಧಾಂತ; ಅಕಟ: ಅಯ್ಯೋ; ಮರುಳು: ಮೂಢ; ಅವಗುಣ: ದುರ್ಗುಣ, ದೋಷ; ಕಡೆಗೆ: ಕೊನೆಗೆ; ಹಲುಬು: ಬೇಡಿಕೋ, ದುಃಖಪಡು;

ಪದವಿಂಗಡಣೆ:
ನೊರಜು +ತಾನೆತ್ತಲು +ಮಹತ್ವದ
ಗಿರಿಯದೆತ್ತಲು +ಮಿಂಚುಬುಳುವಿನ
ಕಿರಣವೆತ್ತಲು +ಹೊಳಹಿದೆತ್ತಲು +ಕೋಟಿಸೂರಿಯರ
ನರ+ಮೃಗ+ಅಧಮನ್+ಎತ್ತಲ್+ಉನ್ನತ
ಪರಮತತ್ವವಿದ್+ಎತ್ತಲ್+ಅಕಟಾ
ಮರುಳು+ ನನ್ನ್+ಅವಗುಣವ್+ಅದಾವುದ +ಕಡೆಗೆ +ಹಲುಬುವೆನು

ಅಚ್ಚರಿ:
(೧) ಉಪಮಾನಗಳ ಬಳಕೆ – ನೊರಜು ತಾನೆತ್ತಲು ಮಹತ್ವದ ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ

ಪದ್ಯ ೯೮: ದ್ರೌಪದಿಯನ್ನು ಕೀಚಕನ ತಮ್ಮಂದಿರು ಎಲ್ಲಿಗೆ ಕಟ್ಟಿದರು?

ತೆಗೆದು ಮಂಚದಲವನ ಹೆಣನನು
ಬಿಗಿದರವಳನು ಕಾಲದೆಸೆಯಲಿ
ನಗುವುದಿನ್ನೊಮ್ಮೆನುತ ಕಟ್ಟಿದರವರು ಕಾಮಿನಿಯ
ಬೆಗಡುಗೊಂಡಂಭೋಜಮುಖಿಯು
ಬ್ಬೆಗದೊಳೊದರಿದಳಕಟಕಟ ಪಾ
ಪಿಗಳಿರಾ ಗಂಧರ್ವರಿರ ಹಾಯೆನುತ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೯೮ ಪದ್ಯ)

ತಾತ್ಪರ್ಯ:
ಕೀಚಕನ ಹೆಣವನ್ನು ಚಟ್ಟದಲ್ಲಿ ಕಟ್ಟಿ ಇನ್ನೊಮ್ಮೆ ನಗು ಎಂದು ಆಕೆಯನ್ನು ಅವನ ಪಾದದಬಳಿ ಕಟ್ಟಿದರು. ದ್ರೌಪದಿಯು ಆಶ್ಚರ್ಯಗೊಂಡು ಉದ್ವೇಗದಿಂದ ಅಯ್ಯೋ ಪಾಪಿಗಳಿರಾ ಓ ಗಂಧರ್ವರೇ ಎಂದು ದುಃಖಭರಿತಳಾಗಿ ಕೂಗಿದಳು.

ಅರ್ಥ:
ತೆಗೆ: ಹೊರತರು; ಮಂಚ: ಪಲ್ಲಂಗ; ಹೆಣ: ಮೃತ ದೇಹ; ಬಿಗಿ: ಬಂಧಿಸು; ಕಾಲು: ಪಾದ; ನಗು: ಸಂತಸ; ಕಟ್ಟು: ಬಂಧಿಸು; ಕಾಮಿನಿ: ಹೆನ್ಣು; ಬೆಗಡು: ಆಶ್ಚರ್ಯ, ಬೆರಗು; ಅಂಭೋಜಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ಉಬ್ಬೆಗ: ದುಃಖ, ಚಿಂತೆ; ಒದರು: ಕೊಡಹು, ಜಾಡಿಸು; ಅಕಟ: ಅಯ್ಯೋ; ಪಾಪಿ: ದುಷ್ಟ; ಹಲುಬು: ದುಃಖಿಸು;

ಪದವಿಂಗಡಣೆ:
ತೆಗೆದು +ಮಂಚದಲ್+ಅವನ +ಹೆಣನನು
ಬಿಗಿದರ್+ಅವಳನು +ಕಾಲದೆಸೆಯಲಿ
ನಗುವುದ್+ಇನ್ನೊಮ್ಮೆನುತ +ಕಟ್ಟಿದರ್+ಅವರು +ಕಾಮಿನಿಯ
ಬೆಗಡುಗೊಂಡ್+ಅಂಭೋಜಮುಖಿ
ಉಬ್ಬೆಗದೊಳ್+ಒದರಿದಳ್+ಅಕಟಕಟ+ ಪಾ
ಪಿಗಳಿರಾ+ ಗಂಧರ್ವರಿರ+ ಹಾಯೆನುತ +ಹಲುಬಿದಳು

ಅಚ್ಚರಿ:
(೧) ದ್ರೌಪದಿಯನ್ನು ಕರೆದ ಪರಿ – ಅಂಭೋಜಮುಖಿ, ಕಾಮಿನಿ

ಪದ್ಯ ೯೬: ಕೀಚಕನ ತಮ್ಮಂದಿರು ಹೇಗೆ ದುಃಖಿಸಿದರು?

ಆರು ಗತಿಯೆಮಗಕಟ ಕೀಚಕ
ವೀರ ದೇಸಿಗರಾದೆವಾವಿ
ನ್ನಾರ ಸೇರುವೆವೆನುತ ಹಲುಬಿದರವನ ತಕ್ಕೈಸಿ
ಕ್ರೂರ ಕರ್ಮರು ನಿನ್ನ ಕೊಂದವ
ರಾರು ಹಾಹಾಯೆನುತ ಹಲುಬಲು
ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ (ವಿರಾಟ ಪರ್ವ, ೩ ಸಂಧಿ, ೯೬ ಪದ್ಯ)

ತಾತ್ಪರ್ಯ:
ಕೀಚಕನ ತಮ್ಮಂದಿರು ಅವನ ದೇಹವನ್ನು ನೋಡಿ ದುಃಖತಪ್ತರಾಗಿ, ಅಯ್ಯೋ ವೀರ ಕೀಚಕನೇ, ನಮಗೆ ಇನ್ನಾರು ಗತಿ, ನಾವು ಅನಾಥರಾದೆವೆಂದು ದುಃಖಿಸಿ ಅವನ ದೇಹವನ್ನು ತಬ್ಬಿಕೊಂಡರು. ನಿನ್ನ ಕೊಂದ ಕ್ರೂರಿಗಳಾರು ಎನ್ನುತ್ತಾ ಹಾಹಾಕಾರ ಮಾಡುತ್ತಿರುವುದನ್ನು ದ್ರೌಪದಿಯು ನೋಡಿ ಮುಗುಳುನಗೆಯನ್ನು ಬೀರಿದಳು.

ಅರ್ಥ:
ಗತಿ: ಮಾರ್ಗ, ಸ್ಥಿತಿ; ಅಕಟ: ಅಯ್ಯೋ; ವೀರ: ಶೂರ; ದೇಸಿಗ:ದೇಶದ ನಿವಾಸಿ, ಅನಾಥ; ಸೇರು: ಜೊತೆ; ಹಲುಬು: ದುಃಖಪಡು; ತಕ್ಕೈಸು: ತಬ್ಬಿಕೊ; ಕ್ರೂರ: ದುಷ್ಟ; ಕರ್ಮ: ಕೆಲಸ; ಕೊಲ್ಲು: ಸಾಯಿಸು; ವಾರಿಜಾನನೆ: ಕಮಲದಂತ ಮುಖವುಳ್ಳವಳು (ದ್ರೌಪದಿ); ಮುಗುಳುನಗೆ: ಹಸನ್ಮುಖಿ; ನೋಡು: ವೀಕ್ಷಿಸು; ಖಳ: ದುಷ್ಟ;

ಪದವಿಂಗಡಣೆ:
ಆರು +ಗತಿ+ಎಮಗ್+ಅಕಟ +ಕೀಚಕ
ವೀರ +ದೇಸಿಗರಾದೆವಾವ್
ಇನ್ನಾರ +ಸೇರುವೆವೆನುತ +ಹಲುಬಿದರ್+ಅವನ +ತಕ್ಕೈಸಿ
ಕ್ರೂರ +ಕರ್ಮರು +ನಿನ್ನ +ಕೊಂದವ
ರಾರು +ಹಾಹಾ+ಎನುತ +ಹಲುಬಲು
ವಾರಿಜಾನನೆ +ಮುಗುಳುನಗೆಯಲಿ +ನೋಡಿದಳು +ಖಳರ

ಅಚ್ಚರಿ:
(೧) ದುಃಖವನ್ನು ಹೇಳುವ ಪರಿ – ಆರು ಗತಿಯೆಮಗಕಟ, ದೇಸಿಗರಾದೆವಾವ್

ಪದ್ಯ ೬೩: ಪಾಂಡವರಿಗಾವುದು ಬೇಡವೆಂದು ದ್ರೌಪದಿ ದುಃಖಿಸಿದಳು?

ಧರೆಯ ಭಂಡಾರವನು ರಥವನು
ಕರಿತುರಗರಥಪಾಯದಳವನು
ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ
ದುರುಳ ಕೀಚಕಗೆನ್ನ ಕೊಟ್ಟಿರಿ
ಪರಿಮಿತದಲಿರವಾಯ್ತು ನಿಮ್ಮೈ
ವರಿಗೆ ಲೇಸಾಯ್ತಕಟಯೆಂದಬುಜಾಕ್ಷಿ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಭೂಮಿ, ಕೋಶ, ಚತುರಂಗ ಸೈನ್ಯ, ಇವೆಲ್ಲವೂ ದುರ್ಯೋಧನನು ನಿಮ್ಮಿಂದ ಕಿತ್ತುಕೊಂಡು ಹೊರಯಟ್ಟಿದನು, ಉಳಿದವಳು ನಾನು, ನನ್ನನ್ನು ಈಗ ಕೀಚಕನಿಗೆ ಕೊಟ್ಟಿರಿ, ಐವರೇ ಇರಲು ನಿಮಗೆ ಅನುಕೂಲವಾಯ್ತು, ರಾಜ್ಯವಾಗಲೀ, ಹೆಂಡತಿಯಾಗಲೀ ನಿಮಗೆ ಭೂಷಣವಲ್ಲ ಅಯ್ಯೋ ಎಂದು ದ್ರೌಪದಿಯು ದುಃಖಿಸಿದಳು.

ಅರ್ಥ:
ಧರೆ: ಭೂಮಿ; ಭಂಡಾರ: ಬೊಕ್ಕಸ, ಖಜಾನೆ; ರಥ: ತೇರು; ಕರಿ: ಆನೆ; ತುರಗ: ಕುದುರೆ; ಪಾಯದಳ: ಸೈನಿಕರು; ಕುಲ: ವಂಶ; ಅಗ್ರಣಿ: ಶ್ರೇಷ್ಠ, ಮೊದಲಿಗ; ಸೆಳೆ: ವಶಪಡಿಸಿಕೊಳ್ಳು; ಹೊರವಡಿಸು: ದೂರವಿಟ್ಟನು; ದುರುಳ: ದುಷ್ಟ; ಕೊಟ್ಟು: ನೀಡು; ಪರಿಮಿತ: ಮಿತ, ಸ್ವಲ್ಪವಾದ; ಇರವು: ಜೀವಿಸು, ಇರು; ಲೇಸು: ಒಳಿತು; ಅಕಟ: ಅಯ್ಯೋ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಹಲುಬು: ದುಃಖಿಸು;

ಪದವಿಂಗಡಣೆ:
ಧರೆಯ +ಭಂಡಾರವನು +ರಥವನು
ಕರಿ+ತುರಗ+ರಥ+ಪಾಯದಳವನು
ಕುರುಕುಲಾಗ್ರಣಿ +ಸೆಳೆದುಕೊಂಡನು +ನಿಮ್ಮ +ಹೊರವಡಿಸಿ
ದುರುಳ +ಕೀಚಕಗ್+ಎನ್ನ +ಕೊಟ್ಟಿರಿ
ಪರಿಮಿತದಲ್+ಇರವಾಯ್ತು +ನಿಮ್ಮೈ
ವರಿಗೆ +ಲೇಸಾಯ್ತ್+ಅಕಟ+ಎಂದ್+ಅಬುಜಾಕ್ಷಿ +ಹಲುಬಿದಳು

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ಪರಿಮಿತದಲಿರವಾಯ್ತು ನಿಮ್ಮೈವರಿಗೆ

ಪದ್ಯ ೬೧: ದ್ರೌಪದಿಯು ಪಾಂಡವರನ್ನು ಯಾರಿಗೆ ಹೋಲಿಸಿದಳು?

ಹಗೆಗಳಿಗೆ ತಂಪಾಗಿ ಬದುಕುವ
ಮುಗುದರಿನ್ನಾರುಂಟು ಭಂಗಕೆ
ಹೆಗಲಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ
ವಿಗಡ ಬಿರುದನು ಬಿಸುಟು ಬಡಿಹೋ
ರಿಗಳು ಪಾಂಡವರಂತೆ ಮೂರು
ರ್ಚಿಗಳದಾರುಂಟೆಂದು ದ್ರೌಪದಿ ಹಿರಿದು ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ವೈರಿಗಳು ಸುಖವಾಗಿರಲೆಂದು ಬಯಸಿ, ಶಾಂತರಾಗಿ ಬದುಕುವ ಮುಗ್ಧರು ನಿಮ್ಮನ್ನು ಬಿಟ್ಟು ಇನ್ನಾರಿದ್ದಾರೆ, ಎಲ್ಲರೂ ಮೋಸವನ್ನು ದ್ವೇಷಿಸಿದರೆ, ನೀವು ಭಂಗವನ್ನು ಹೆಗಲುಕೊಟ್ಟು ಹೊರುತ್ತೀರಿ, ವೀರರೆಂಬ ಬಿರುದನ್ನು ದೂರಕ್ಕೆಸೆದು ಹೋರಿಗಳಂತೆ ಹೊಡಿಸಿಕೊಂಡು ಮೂಗುದಾರವನ್ನು ಹಾಕಿಕೊಂಡಿರುವವರು ನಿಮ್ಮನ್ನು ಬಿಟ್ಟು ಇನ್ನಾರಿದ್ದಾರೆ ಎಂದು ದ್ರೌಪದಿಯು ಅತೀವ ದುಃಖದಿಂದ ಹೇಳಿದಳು.

ಅರ್ಥ:
ಹಗೆ: ವೈರತ್ವ; ತಂಪು: ತೃಪ್ತಿ, ಸಂತುಷ್ಟಿ; ಬದುಕು: ಜೀವಿಸು; ಮುಗುದ: ಕಪಟವರಿಯದ; ಭಂಗ: ಮೋಸ, ವಂಚನೆ; ಹೆಗಲು: ಭುಜ; ವಿರೋಧಿ: ವೈರಿ; ಲೋಕ: ಜಗತ್ತು; ವಿಗಡ: ಶೌರ್ಯ, ಪರಾಕ್ರಮ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಬಿಸುಟು: ಹೊರಹಾಕು; ಬಡಿ: ಹೊಡೆ, ತಾಡಿಸು; ಬಡಿಹೋರಿ: ಹೋರಿಯಂತೆ ಬಡಿಸಿಕೊಳ್ಳುವವ; ಮೂಗು: ನಾಸಿಕ; ಮೂಗುರ್ಚು: ಮೂಗುದಾರ ಹಾಕಿಸಿಕೊಂಡಿರುವವರು; ಹಿರಿದು: ಹೆಚ್ಚಾಗಿ; ಹಲುಬು: ದುಃಖಪಡು;

ಪದವಿಂಗಡಣೆ:
ಹಗೆಗಳಿಗೆ +ತಂಪಾಗಿ +ಬದುಕುವ
ಮುಗುದರ್+ಇನ್ನಾರುಂಟು +ಭಂಗಕೆ
ಹೆಗಲಕೊಟ್ಟಾನುವ+ ವಿರೋಧಿಗಳುಂಟೆ+ ಲೋಕದಲಿ
ವಿಗಡ+ ಬಿರುದನು +ಬಿಸುಟು +ಬಡಿಹೋ
ರಿಗಳು +ಪಾಂಡವರಂತೆ +ಮೂರು
ರ್ಚಿಗಳದ್+ಆರುಂಟೆಂದು +ದ್ರೌಪದಿ+ ಹಿರಿದು +ಹಲುಬಿದಳು

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ವಿಗಡ ಬಿರುದನು ಬಿಸುಟು ಬಡಿಹೋರಿಗಳು ಪಾಂಡವರಂತೆ

ಪದ್ಯ ೫೮: ದ್ರೌಪದಿಯು ತನ್ನ ದುಃಖವನ್ನು ಹೇಗೆ ಹೊರಹಾಕಿದಳು?

ಇನ್ನು ಹುಟ್ಟದೆಯಿರಲಿ ನಾರಿಯ
ರೆನ್ನವೊಲು ಭಂಗಿತರು ಭುವನದೊ
ಳಿನ್ನು ಜನಿಸಲು ಬೇಡ ಗಂಡರು ಭೀಮ ಸನ್ನಿಭರು
ಎನ್ನವೋಲ್ ಪಾಂಡವರವೋಲ್ ಸಂ
ಪನ್ನ ದುಃಖದೊಳಾರು ನವೆದರು
ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ನನ್ನಂತೆ ಅಪಮಾನಕ್ಕೊಳಗಾದ ಹೆಂಗಸರು ಇನ್ನು ಮೇಲೆ ಹುಟ್ಟದಿರಲಿ, ಭೀಮನಂತೆ ಅಸಹಾಯಕರಾದ ಪರಮವೀರರು ಇನ್ನು ಮೇಲೆ ಹುಟ್ಟದಿರಲಿ, ನನ್ನಂತೆ ಪಾಂಡವರಂತೆ ಸಂಪೂರ್ಣ ದುಃಖದಿಂದ ಕೊರಗಿದವರು ಈ ಹಿಂದೆ ಯಾರೂ ಇರಲಾರರು ಎಂದು ದ್ರೌಪದಿಯು ದುಃಖಿಸಿದಳು.

ಅರ್ಥ:
ಹುಟ್ಟು: ಜನನ; ನಾರಿ: ಹೆಣ್ಣು; ಭಂಗ: ಕುಂದು, ದೋಷ, ನಾಶ; ಭುವನ: ಭೂಮಿ; ಜನಿಸು: ಹುಟ್ಟು; ಬೇಡ: ಸಲ್ಲದು, ಕೂಡದು; ಗಂಡ: ಪತಿ; ಸನ್ನಿಭ: ಸದೃಶ, ಸಮಾನವಾದ; ಸಂಪನ್ನ: ಸಮೃದ್ಧವಾದ; ದುಃಖ: ದುಗುಡು; ನವೆ:ದುಃಖಿಸು, ಕೊರಗು; ಮುನ್ನ: ಹಿಂದೆ; ಹಿರಿದು: ಹೆಚ್ಚು; ಹಲುಬು: ದುಃಖಿಸು;

ಪದವಿಂಗಡಣೆ:
ಇನ್ನು +ಹುಟ್ಟದೆಯಿರಲಿ+ ನಾರಿಯರ್
ಎನ್ನವೊಲು +ಭಂಗಿತರು+ ಭುವನದೊ
ಳಿನ್ನು +ಜನಿಸಲು +ಬೇಡ +ಗಂಡರು +ಭೀಮ +ಸನ್ನಿಭರು
ಎನ್ನವೋಲ್ +ಪಾಂಡವರವೋಲ್+ ಸಂ
ಪನ್ನ +ದುಃಖದೊಳಾರು+ ನವೆದರು
ಮುನ್ನಿನವರ್+ಒಳಗೆಂದು+ ದ್ರೌಪದಿ+ ಹಿರಿದು+ ಹಲುಬಿದಳು

ಅಚ್ಚರಿ:
(೧) ಹುಟ್ಟು, ಜನಿಸು – ಸಮನಾರ್ಥಕ ಪದ

ಪದ್ಯ ೨೪: ಮುನಿಗಳು ಮರಣ ಸಮಯದಲ್ಲಿ ಯಾರನ್ನು ನೆನೆದರು?

ಹೇಳಲೇನದು ಮೃತ್ಯುವಿನ ಗೋ
ನಾಳಿಯೊಳಗಂದಿಳಿಯಲೊಲ್ಲದೆ
ಕಾಳು ಮಾಡಿದೆನೇ ಮುರಾರಿಯ ಭಜಿಸಿ ಭಕ್ತಿಯಲಿ
ಬಾಲಕನೊಳವಗುಣವನಕಟಾ
ತಾಲಬಹುದೇ ತಾಯೆ ಮೃತ್ಯುವೆ
ತಾಳಿಗೆಯ ತೆಗೆದೆನ್ನನೊಳಕೊಳ್ಲೆಂದು ಹಲುಬಿದೆನು (ಅರಣ್ಯ ಪರ್ವ, ೧೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮಾರ್ಕಂಡೇಯ ಮುನಿಗಳು ವಿವರಿಸುತ್ತಾ, ಆಗ ನಾನು ಮರಣಕಾಲ ಬಂದಾಗ ಶ್ರೀ ಹರಿಯನ್ನು ಭಕ್ತಿಯಿಂದ ಭಜಿಸಿ ಮೃತ್ಯುವಿನ ಬಾಯಲ್ಲಿ ಸಿಕ್ಕಿದುದನ್ನು ಏಕಾದರೂ ತಪ್ಪಿಸ್ಕೊಂಡೆನೋ ಏನೋ ತಾಯೇ ಮೃತ್ಯುವೇ ನನ್ನಲ್ಲಿನ್ನು ಅವಗುಣವನ್ನು ಕಂಡು ಏಕೆ ಕುಪಿತಳಾದ ಈಗಲೂ ಬಾಯ್ತೆರೆದು ನನ್ನನ್ನು ನುಂಗು ಎಂದೆನು.

ಅರ್ಥ:
ಹೇಳು: ತಿಳಿಸು; ಮೃತ್ಯು: ಮರಣ; ಗೋನಾಳಿ: ಕುತ್ತಿಗೆಯ ನಾಳ; ಇಳಿ: ಕೆಳಕ್ಕೆ ಬೀಳು; ಒಲ್ಲದೆ: ಬಯಸದೆ; ಕಾಳು: ಕೆಟ್ಟದ್ದು, ಕೀಳಾದುದು; ಮಾಡು: ಆಚರಿಸು; ಭಜಿಸು: ಆರಾಧಿಸು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಬಾಲಕ: ಪುತ್ರ; ಅವಗುಣ: ದುರ್ಗುಣ, ದೋಷ; ಅಕಟ: ಅಯ್ಯೋ; ತಾಳು: ಸಹಿಸು; ತಾಯೆ: ಮಾತೆ; ಮೃತ್ಯು: ಸಾವು; ತಾಳು: ಹೊಂದು, ಪಡೆ; ತೆಗೆ: ಹೊರತರು; ಒಳಕೊಳ್ಳು: ಸೇರಿಸು; ಹಲುಬು: ದುಃಖಪಡು, ಬೇಡಿಕೋ;

ಪದವಿಂಗಡಣೆ:
ಹೇಳಲೇನ್+ಅದು+ ಮೃತ್ಯುವಿನ+ ಗೋ
ನಾಳಿಯೊಳಗ್+ಅಂದ್+ಇಳಿಯಲ್+ಒಲ್ಲದೆ
ಕಾಳು +ಮಾಡಿದೆನೇ +ಮುರಾರಿಯ +ಭಜಿಸಿ +ಭಕ್ತಿಯಲಿ
ಬಾಲಕನೊಳ್+ಅವಗುಣವನ್+ಅಕಟಾ
ತಾಳಬಹುದೇ +ತಾಯೆ +ಮೃತ್ಯುವೆ
ತಾಳಿಗೆಯ +ತೆಗೆದ್+ಎನ್ನನ್+ಒಳಕೊಳ್ಳೆಂದು +ಹಲುಬಿದೆನು

ಅಚ್ಚರಿ:
(೧) ಮೃತ್ಯುವನ್ನು ಆಹ್ವಾನಿಸುವ ಪರಿ – ಮೃತ್ಯುವೆ ತಾಳಿಗೆಯ ತೆಗೆದೆನ್ನನೊಳಕೊಳ್ಲೆಂದು ಹಲುಬಿದೆನು