ಪದ್ಯ ೨೮: ಕುಂತಿಯು ಪಾಂಡುವನ್ನು ಯಾವುದರ ಬಗ್ಗೆ ಎಚ್ಚರಿಸಿದಳು?

ಧರೆಯ ರಾಜ್ಯಸ್ಥಿತಿಗೆ ಸುತರವ
ತರಿಸುವರು ಗಾಂಧಾರಿಗಾ ಪು
ತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು
ಧರೆ ಪರಂಪರೆಯಿಂದಲತ್ತಲೆ
ಸರಿವುದೀ ನಿಮ್ಮಡಿಗೆ ದರ್ಭ್ರಾ
ಸ್ತರಣ ಸಮಿಧಾಧಾನವೇ ಕಡೆಗೆಂದಳಾ ಕುಂತಿ (ಆದಿ ಪರ್ವ, ೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಗಾಂಧಾರಿಗೆ ಮಕ್ಕಳು ಹುಟ್ಟಿ ರಾಜರಾಗುತ್ತಾರೆ. ಅವರ ಮಕ್ಕಳು, ಮಕ್ಕಳ ಮಕ್ಕಳು ಹೀಗೆಯೇ ಪರಂಪರೆಯಿಂದ ರಾಜ್ಯವು ಅವರಿಗೆ ಸೇರುತ್ತದೆ. ನಿಮಗೆ ದರ್ಭಾಸ್ತರಣ ಸಮಿಧಾಧಾನಗಳೇ ಗತಿ ಎಂದು ಕುಂತಿಯು ಹೀಳಿದಳು.

ಅರ್ಥ:
ಧರೆ: ಭೂಮಿ; ರಾಜ್ಯ: ರಾಷ್ಟ್ರ; ಸ್ಥಿತಿ: ಅವಸ್ಥೆ, ರೀತಿ; ಸುತ: ಮಕ್ಕಳು, ಮಗ; ಅವತರಿಸು: ಹುಟ್ಟು; ಪುತ್ರ: ಮಗ; ಸುತ: ಮಗ; ಸೂನು: ಮಕ್ಕಳು; ಪರಂಪರೆ: ಒಂದರ ನಂತರ ಮತ್ತೊಂದು ಬರುವುದು, ಸಾಲು, ಪರಿವಿಡಿ; ಅತ್ತ: ಆ ಕಡೆ; ಸರಿ: ಜಾರು; ಅಡಿ: ಪಾದ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಕಡೆ: ಕೊನೆ;

ಪದವಿಂಗಡಣೆ:
ಧರೆಯ +ರಾಜ್ಯಸ್ಥಿತಿಗೆ +ಸುತರ್+ಅವ
ತರಿಸುವರು +ಗಾಂಧಾರಿಗ್+ಆ+ ಪು
ತ್ರರಿಗೆ +ಸುತರ್+ಆ+ ಸುತರ +ಸುತರ್+ಆ +ಸುತರ +ಸೂನುಗಳು
ಧರೆ +ಪರಂಪರೆಯಿಂದಲ್+ಅತ್ತಲೆ
ಸರಿವುದ್+ಈ+ ನಿಮ್ಮಡಿಗೆ+ ದರ್ಭ್ರಾ
ಸ್ತರಣ+ ಸಮಿಧಾಧಾನವೇ +ಕಡೆಗೆಂದಳಾ +ಕುಂತಿ

ಅಚ್ಚರಿ:
(೧) ಸುತರ ಪದದ ಬಳಕೆ – ಪುತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು

ಪದ್ಯ ೧೫: ದ್ರೌಪದಿಯ ದುಃಖಕ್ಕೆ ಕಾರಣವೇನು?

ಏನಿದೇನದುಭುತವೆನುತ ದು
ಮ್ಮಾನದಲಿ ಹರಿತಂದು ಹಿಡಿದನು
ಮಾನಿನಿಯ ಕೈಗಳನು ಕಂಬನಿದೊಡೆದು ಸೆರಗಿನಲಿ
ಹಾನಿಯೇನೆನೆ ಮಡಿದರೆನ್ನಯ
ಸೂನುಗಳು ತನ್ನನುಜರೆನೆ ಪವ
ಮಾನಸುತ ಕೇಳಿದನು ಕೋಳಾಹಳವ ಗುರುಸುತನ (ಗದಾ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧರ್ಮಜನು ಇದೇನಾಶ್ಚರ್ಯ ಎಂದು ಚಿಂತಿಸುತ್ತಾ ದುಃಖದಿಂದ ದ್ರೌಪದಿಯ ಕೈಗಳನ್ನು ಹಿಡಿದು ಸೆರಗಿನಿಂದ ಅವಳ ಕಣ್ಣೀರನ್ನೊರಸಿದನು. ಏನಾಯಿತು ಎಂದು ಕೇಳಲು, ದ್ರೌಪದಿಯು ದುಃಖದಿಂದ ನನ್ನ ಮಕ್ಕಳೂ, ಸಹೋದರರೂ ಮಡಿದರು ಎಂದು ನಡೆದ ಸಂಗತಿಯನ್ನು ಹೇಳಲು, ಭೀಮನು ಅಶ್ವತ್ಥಾಮನ ಈ ಹಾವಳಿಯನ್ನು ಕೇಳಿದನು.

ಅರ್ಥ:
ಅದುಭುತ: ಆಶ್ಚರ್ಯ; ದುಮ್ಮಾನ: ದುಃಖ; ಹರಿತಂದು: ವೇಗವಾಗಿ ಚಲಿಸುತ, ಆಗಮಿಸು; ಹಿಡಿ: ಗ್ರಹಿಸು; ಮಾನಿನಿ: ಹೆಣ್ಣು; ಕೈ: ಹಸ್ತ; ಕಂಬನಿ: ಕಣ್ಣೀರು; ಸೆರಗು: ಸೀರೆಯ ಅಂಚು; ಹಾನಿ: ನಾಶ; ಮಡಿ: ಸಾವು; ಸೂನು: ಮಕ್ಕಳು; ಅನುಜ: ತಮ್ಮ; ಪವಮಾನ: ವಾಯು; ಸುತ: ಮಗ; ಕೇಳು: ಆಲಿಸು; ಕೋಳಾಹಲ: ಗದ್ದಲ; ಗುರು: ಆಚಾರ್ಯ; ಗುರುಸುತ: ಅಶ್ವತ್ಥಾಮ;

ಪದವಿಂಗಡಣೆ:
ಏನಿದೇನ್+ಅದುಭುತವ್+ಎನುತ +ದು
ಮ್ಮಾನದಲಿ +ಹರಿತಂದು +ಹಿಡಿದನು
ಮಾನಿನಿಯ +ಕೈಗಳನು +ಕಂಬನಿದೊಡೆದು +ಸೆರಗಿನಲಿ
ಹಾನಿಯೇನ್+ಎನೆ +ಮಡಿದರ್+ಎನ್ನಯ
ಸೂನುಗಳು +ತನ್ನ್+ಅನುಜರ್+ಎನೆ +ಪವ
ಮಾನಸುತ+ ಕೇಳಿದನು+ ಕೋಳಾಹಳವ +ಗುರುಸುತನ

ಅಚ್ಚರಿ:
(೧) ಸುತ ಪದದ ಬಳಕೆ – ಪವಮಾನಸುತ, ಗುರುಸುತ
(೨) ಏನಿದೇನ್, ಎನುತ, ಎನೆ, ಎನ್ನಯ – ಪದಗಳ ಬಳಕೆ

ಪದ್ಯ ೩೨: ಕೌರವನು ಧರ್ಮಜನನ್ನು ಹೇಗೆ ನಿಂದಿಸಿದನು?

ಹಾನಿಯೆಮಗಾಯ್ತೆಂದು ಕಡುಸು
ಮ್ಮಾನವುಕ್ಕಿತೆ ನಿಮಿಷದಲಿ ದು
ಮ್ಮಾನ ಶರಧಿಯೊಳದ್ದುವೆನು ತಿದ್ದುವೆನು ನಿನ್ನವರ
ಈ ನಗೆಯನೀ ಬಗೆಯನೀ ವಿಜ
ಯಾನುರಾಗವ ನಿಲಿಸುವೆನು ಯಮ
ಸೂನು ಸೈರಿಸೆನುತ್ತ ಜರೆದನು ವಾಮಹಸ್ತದಲಿ (ಗದಾ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕೌರವನು ಎಡಗೈ ನೀಡಿ, ನನಗೆ ಪೆಟ್ಟು ಬಿದ್ದಿತೆಂದು ನಿಮಗೆ ಸಂತೋಷವುಕ್ಕಿತೇ? ಇನ್ನೊಂದು ನಿಮಿಷದಲ್ಲಿ ನಿಮ್ಮನ್ನು ದುಃಖದ ಕಡಲಿನಲ್ಲಿ ಅದ್ದುತ್ತೇನೆ. ಈ ನಗು, ಈ ಹುಮ್ಮಸ್ಸು, ಜಯದ ಸಂತೋಷಗಳನ್ನು ನಿಲ್ಲಿಸುತ್ತೇನೆ ಎಂದು ಧರ್ಮಜನನ್ನು ಜರೆದನು.

ಅರ್ಥ:
ಹಾನಿ: ಹಾಳು; ಕಡು: ಬಹಳ; ಸುಮ್ಮಾನ:ಸಂತೋಷ, ಹಿಗ್ಗು; ನಿಮಿಷ: ಕ್ಷಣ; ದುಮ್ಮಾನ: ದುಃಖ; ಶರಧಿ: ಸಾಗರ; ಅದ್ದು: ಮುಳುಗಿಸು; ತಿದ್ದು: ಸರಿಪಡಿಸು; ನಗೆ: ಹರ್ಷ; ಬಗೆ: ರೀತಿ; ವಿಜಯ: ಗೆಲುವು; ಅನುರಾಗ: ಪ್ರೀತಿ; ನಿಲಿಸು: ತಡೆ; ಸೂನು: ಮಗ; ಸೈರಿಸು: ತಾಳು; ಜರೆ: ಬಯ್ಯು, ನಿಂದಿಸು; ವಾಮ: ಎಡಭಾಗ; ಹಸ್ತ: ಕೈ;

ಪದವಿಂಗಡಣೆ:
ಹಾನಿ+ಎಮಗಾಯ್ತೆಂದು +ಕಡು+ಸು
ಮ್ಮಾನವುಕ್ಕಿತೆ+ ನಿಮಿಷದಲಿ+ ದು
ಮ್ಮಾನ+ ಶರಧಿಯೊಳ್+ಅದ್ದುವೆನು +ತಿದ್ದುವೆನು +ನಿನ್ನವರ
ಈ +ನಗೆಯನೀ +ಬಗೆಯನೀ +ವಿಜಯ
ಅನುರಾಗವ +ನಿಲಿಸುವೆನು +ಯಮ
ಸೂನು +ಸೈರಿಸೆನುತ್ತ+ ಜರೆದನು +ವಾಮ+ಹಸ್ತದಲಿ

ಅಚ್ಚರಿ:
(೧) ಸುಮ್ಮಾನ, ದುಮ್ಮಾನ – ವಿರುದ್ಧ ಪದಗಳು
(೨) ದುಃಖವನ್ನು ಓಡಿಸುವೆ ಎಂದು ಹೇಳುವ ಪರಿ – ನಿಮಿಷದಲಿ ದುಮ್ಮಾನ ಶರಧಿಯೊಳದ್ದುವೆನು

ಪದ್ಯ ೨೬: ಸಂಜಯನು ಯಾವ ಪ್ರಶ್ನೆಯನ್ನು ದುರ್ಯೋಧನನಿಗೆ ಕೇಳಿದನು?

ಏನು ಸಂಜಯ ಕೌರವೇಶ್ವರ
ನೇನ ಮಾಡಿದನಲ್ಲಿ ಕುಂತೀ
ಸೂನುಗಳೊಳಾರಳಿದರುಳಿದರು ನಮ್ಮ ಥಟ್ಟಿನಲಿ
ಏನು ಹದನೈ ಶಕುನಿ ರಣದೊಳ
ಗೇನ ಮಾಡಿದನೆಂದು ಬೆಸಗೊಳ
ಲೇನನೆಂಬೆನು ತಾಯಿ ಗಾಂಧಾರಿಗೆ ರಣೋತ್ಸವವ (ಗದಾ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಲೈ ಕೌರವೇಶ್ವರ, ನಿನ್ನ ತಾಯಿ ಗಾಂಧಾರಿಯು ನನ್ನನ್ನು ಕಂಡು, ಎಲೈ ಸಂಜಯ ದುರ್ಯೋಧನನು ಏನು ಮಾಡಿದ? ಕುಂತಿಯ ಮಕ್ಕಳಲ್ಲಿ ಯಾರು ಅಳಿದರು, ಯಾರು ಉಳಿದರು? ನಮ್ಮ ಸೇನೆಯಲ್ಲಿ ಯಾರು ಉಳಿದಿದ್ದಾರೆ? ಶಕುನಿಯು ಯುದ್ಧದಲ್ಲಿ ಏನು ಮಾಡಿದೆ ಎಂದು ಕೇಳಿದರೆ ಯುದ್ಧದ ವಾರ್ತೆಯನ್ನು ನಾನು ಏನೆಂದು ಹೇಳಲಿ ಎಂದು ಕೌರವನನ್ನು ಪ್ರಶ್ನಿಸಿದ.

ಅರ್ಥ:
ಸೂನು: ಮಕ್ಕಳು; ಅಳಿ: ಸಾವು; ಉಳಿ: ಜೀವಿಸು; ಥಟ್ಟು: ಗುಂಪು; ಹದ: ಸ್ಥಿತಿ; ರಣ: ಯುದ್ಧ; ಬೆಸ:ಅಪ್ಪಣೆ, ಆದೇಶ; ತಾಯಿ: ಮಾತೆ; ಉತ್ಸವ: ಸಂಭ್ರಮ;

ಪದವಿಂಗಡಣೆ:
ಏನು +ಸಂಜಯ +ಕೌರವೇಶ್ವರನ್
ಏನ+ ಮಾಡಿದನಲ್ಲಿ +ಕುಂತೀ
ಸೂನುಗಳೊಳ್+ಆರ್+ಅಳಿದರ್+ಉಳಿದರು +ನಮ್ಮ ಥಟ್ಟಿನಲಿ
ಏನು +ಹದನೈ+ ಶಕುನಿ+ ರಣದೊಳಗ್
ಏನ +ಮಾಡಿದನೆಂದು +ಬೆಸಗೊಳಲ್
ಏನನೆಂಬೆನು +ತಾಯಿ +ಗಾಂಧಾರಿಗೆ +ರಣೋತ್ಸವವ

ಅಚ್ಚರಿ:
(೧) ಅಳಿ, ಉಳಿ – ವಿರುದ್ಧಾರ್ಥಕ ಪದ
(೨) ಏನು, ಏನ ಪದದ ಬಳಕೆ ಎಲ್ಲಾ ಸಾಲುಗಳ ಮೊದಲ ಪದ (೩ ಸಾಲು ಹೊರತುಪಡಿಸಿ)

ಪದ್ಯ ೫೮: ದುರ್ಯೋಧನನು ಗುರುಗಳಿಗೆ ಏನೆಂದು ಹೇಳಿದನು?

ಏನ ಹೇಳುವೆನರ್ಜುನನು ನಿಜ
ಸೂನು ಮಡಿಯೆ ದುರಾಭಿಮಾನದ
ಲೇನನೆಂದನು ಕೇಳಿರೈ ಕರ್ಣಾದಿ ಮಂತ್ರಿಗಳು
ತಾನು ಗಡ ಸೈಂಧವನ ತಲೆಯನು
ಭಾನುವಡಗದ ಮುನ್ನ ಕೊಂಬೆನು
ಹೀನನಾದರೆ ಹೊಗುವೆನೆಂದನು ಹವ್ಯವಾಹನನ (ದ್ರೋಣ ಪರ್ವ, ೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಗುರುಗಳೇ, ನಾನು ಏನೆಂದು ಹೇಳಲಿ, ತನ್ನ ಮಗನು ಮಡಿಯಲು ಅರ್ಜುನನು ದುರಭಿಮಾನದಿಂದ ಏನೆಂದು ಹೇಳಿದನು ಗೊತ್ತೆ? ತಾನು ಸೈಂಧವನ ತಲೆಯನ್ನು ಸೂರ್ಯನು ನಾಳೆ ಮುಳುಗುವ ಮೊದಲು ಕೆಡಹುತ್ತೇನೆ, ಹಾಗ ಮಾಡಲಾಗದಿದ್ದರೆ ಅಗ್ನಿಪ್ರವೇಶ ಮಾಡುತ್ತೇನೆ ಎಂದನಂತೆ.

ಅರ್ಥ:
ಹೇಳು: ತಿಳಿಸು; ಸೂನು: ಮಗ; ಮಡಿ: ಮರಣ ಹೊಂದು; ಅಭಿಮಾನ: ಹೆಮ್ಮೆ, ಅಹಂಕಾರ; ಕೇಳು: ಆಲಿಸು; ಆದಿ: ಮೊದಲಾದ; ಮಂತ್ರಿ: ಸಚಿವ; ಗಡ: ಅಲ್ಲವೆ; ತಲೆ: ಶಿರ; ಭಾನು: ಸೂರ್ಯ; ಅಡಗು: ಮರೆಯಾಗು; ಮುನ್ನ: ಮೊದಲು; ಕೊಂಬು: ಪಡೆ; ಹೀನ: ಕೆಟ್ಟದು; ಹೊಗು: ತೆರಳು; ಹವ್ಯವಾಹನ: ಹವಿಸ್ಸನ್ನು ಒಯ್ಯುವವನು, ಅಗ್ನಿ;

ಪದವಿಂಗಡಣೆ:
ಏನ+ ಹೇಳುವೆನ್+ಅರ್ಜುನನು +ನಿಜ
ಸೂನು +ಮಡಿಯೆ +ದುರಾಭಿಮಾನದಲ್
ಏನನೆಂದನು +ಕೇಳಿರೈ +ಕರ್ಣಾದಿ +ಮಂತ್ರಿಗಳು
ತಾನು +ಗಡ +ಸೈಂಧವನ +ತಲೆಯನು
ಭಾನುವ್+ಅಡಗದ +ಮುನ್ನ +ಕೊಂಬೆನು
ಹೀನನಾದರೆ +ಹೊಗುವೆನೆಂದನು +ಹವ್ಯವಾಹನನ

ಅಚ್ಚರಿ:
(೧) ಅರ್ಜುನನ ಪ್ರತಿಜ್ಞೆ – ಸೈಂಧವನ ತಲೆಯನು ಭಾನುವಡಗದ ಮುನ್ನ ಕೊಂಬೆನು ಹೀನನಾದರೆ ಹೊಗುವೆನೆಂದನು ಹವ್ಯವಾಹನನ

ಪದ್ಯ ೪೯: ಕೌರವನ ಬಳಿಗೆ ಯಾರು ಬಂದರು?

ರವಿತನುಜ ಗುರುಸೂನು ಭೂರಿ
ಶ್ರವ ಸುಲೋಚನ ಶಲ್ಯ ಕೃಪ ಸೈಂ
ಧವ ವಿವಿಂಶತಿ ಚಿತ್ರಸೇನರು ಕರ್ಣನಂದನರು
ತವತವಗೆ ಬೆದರಿದರು ರಿಪುಕೌ
ರವನ ಹೊರೆಗೈತಂದರಂದಿನ
ರವದ ರೌದ್ರದ ರಾಜಕಾರ್ಯವ ತಿಳಿವ ತವಕದಲಿ (ದ್ರೋಣ ಪರ್ವ, ೮ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕರ್ಣ, ಅಶ್ವತ್ಥಾಮ, ಭೂರಿಶ್ರವ, ಸುಲೋಚನ, ಶಲ್ಯ, ಕೃಪ, ಜಯದ್ರಥ, ವಿವಿಂಶತಿ, ಚಿತ್ರಸೇನ, ಕರ್ಣಪುತ್ರರು ಈ ದೊಡ್ಡ ಶಬ್ದವನ್ನು ಕೇಳಿ ವಿಷಯವೇನು ಎಂದ್ ತಿಳಿದುಕೊಳ್ಳಲು ಕೌರವನ ಬಳಿಗೆ ಬಂದರು.

ಅರ್ಥ:
ರವಿ: ಸೂರ್ಯ; ತನುಜ: ಮಗ; ಗುರು: ಆಚಾರ್ಯ; ಸೂನು: ಮಗ; ನಂದನ: ಮಗ; ಬೆದರು: ಹೆದರು; ರಿಪು: ವೈರಿ; ಹೊರೆ:ರಕ್ಷಣೆ; ಐತಂದು: ಬಂದು ಸೇರು; ರವ: ಶಬ್ದ; ರೌದ್ರ: ಭಯಂಕರ; ತಿಳಿ: ಗೊತ್ತುಪಡಿಸು; ತವಕ: ಆತುರ;

ಪದವಿಂಗಡಣೆ:
ರವಿ+ತನುಜ ಗುರು+ಸೂನು +ಭೂರಿ
ಶ್ರವ +ಸುಲೋಚನ +ಶಲ್ಯ +ಕೃಪ +ಸೈಂ
ಧವ +ವಿವಿಂಶತಿ +ಚಿತ್ರಸೇನರು +ಕರ್ಣ+ನಂದನರು
ತವತವಗೆ +ಬೆದರಿದರು +ರಿಪು+ಕೌ
ರವನ +ಹೊರೆಗೈತಂದರ್+ಅಂದಿನ
ರವದ+ ರೌದ್ರದ +ರಾಜಕಾರ್ಯವ +ತಿಳಿವ +ತವಕದಲಿ

ಅಚ್ಚರಿ:
(೧) ತನುಜ, ಸೂನು, ನಂದನ – ಸಮಾನಾರ್ಥಕ ಪದ
(೨) ರ ಕಾರದ ತ್ರಿವಳಿ ಪದ – ರವದ ರೌದ್ರದ ರಾಜಕಾರ್ಯವ

ಪದ್ಯ ೪೨: ಕೌರವ ಸೈನ್ಯವು ಏಕೆ ನಡುಗಿತು?

ಏನಿದೆತ್ತಣ ರಭಸ ತ್ರೈಲೋ
ಕ್ಯಾನುಕಂಪನವಾಯ್ತು ಶಿವ ಎನು
ತಾ ನರೇಂದ್ರನಿಕಾಯ ನಡುಗಿತು ಕೌರವೇಶ್ವರನ
ಸೇನೆ ತಲೆಕೆಳಕಾಯ್ತು ಪಾರ್ಥನ
ಸೂನುವಿನ ಮರಣದಲಿ ಮಂತ್ರ
ಧ್ಯಾನ ನಮಗಾಯ್ತೆಂದು ತಲ್ಲಣಿಸಿತ್ತು ನೃಪಕಟಕ (ದ್ರೋಣ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕೌರವ ಪಕ್ಷದ ರಾಜರು ಮೂರು ಲೋಕಗಳು ನಡುಗುವಂತಹ ಈ ಭಯಂಕರವಾದ ಸದ್ದು ಎಲ್ಲಿಂದ ಬಂತು ಶಿವಶಿವಾ ಎಂದು ರಾಜರ ಗುಂಪು ಬೆದರಿದರು. ಕೌರವ ಸೇನೆಯು ತಲೆಕೆಳಗಾಯಿತು, ಹೆಚ್ಚಿನ ಭಯದಿಂದ ನಡುಗಿತು. ಅಭಿಮನ್ಯುವಿನ ಮರಣವು ನಮ್ಮನ್ನು ಮಂತ್ರವನ್ನು ಜಪಿಸುವಂತೆ ಮಾಡಿತು ಎಂದು ಕೌರವಸೈನ್ಯ ತಲ್ಲಣಿಸಿತು.

ಅರ್ಥ:
ಎತ್ತಣ: ಎಲ್ಲಿಗೆ; ರಭಸ: ವೇಗ; ತ್ರೈಲೋಕ: ಮೂರು ಲೋಕ; ಅನುಕಂಪ: ಕನಿಕರ, ಸಹಾನುಭೂತಿ; ಶಿವ: ಶಂಕರ; ನರೇಂದ್ರ: ಇಂದ್ರ; ನಿಕಾಯ: ಗುಂಪು; ನಡುಗು: ಭಯಪಡು, ಕಂಪನ; ಸೇನೆ: ಸೈನ್ಯ; ತಲೆಕೆಳಗೆ: ಉಲ್ಟ, ಮೇಲೆ ಕೆಳಗೆ; ಸೂನು: ಮಗ; ಮರಣ: ಸಾವು; ಮಂತ್ರ: ದೇವತಾ ಸ್ತುತಿ; ಧ್ಯಾನ: ಚಿಂತನೆ, ಮನನ; ತಲ್ಲಣ: ಅಂಜಿಕೆ, ಭಯ; ನೃಪ: ರಾಜ; ಕಟಕ: ಸೈನ್ಯ;

ಪದವಿಂಗಡಣೆ:
ಏನಿದೆತ್ತಣ +ರಭಸ +ತ್ರೈಲೋಕ್ಯ
ಅನುಕಂಪನವಾಯ್ತು +ಶಿವ+ ಎನುತ್
ಆ+ ನರೇಂದ್ರನಿಕಾಯ +ನಡುಗಿತು +ಕೌರವೇಶ್ವರನ
ಸೇನೆ +ತಲೆಕೆಳಕಾಯ್ತು +ಪಾರ್ಥನ
ಸೂನುವಿನ +ಮರಣದಲಿ +ಮಂತ್ರ
ಧ್ಯಾನ +ನಮಗಾಯ್ತೆಂದು +ತಲ್ಲಣಿಸಿತ್ತು +ನೃಪ+ಕಟಕ

ಅಚ್ಚರಿ:
(೧) ಪಾರ್ಥನ ಪ್ರಮಾಣದ ಪರಿಣಾಮ – ನರೇಂದ್ರನಿಕಾಯ ನಡುಗಿತು ಕೌರವೇಶ್ವರನ ಸೇನೆ ತಲೆಕೆಳಕಾಯ್ತು

ಪದ್ಯ ೭೪: ವ್ರತಕ್ಕೆ ಪರಿವಾರದವರನ್ನು ಕುಂತಿ ಹೇಗೆ ಆಹ್ವಾನಿಸಿದಳು?

ಭಾನುಮತಿ ಮೊದಲಾದ ಸೊಸೆಯರು
ಸೂನು ಮಕ್ಕಳ ಸಹಿತಲಾ ವರ
ಮಾನಿನಿಯರೆಲ್ಲರನು ನೀವೊಡಗೊಂಡು ಲೀಲೆಯಲಿ
ಸಾನುರಾಗದಿ ಬಂದು ನೋಂಪಿಯ
ನ್ಯೂನವಿಲ್ಲದೆ ನೋನ ಬೇಹುದು
ಮಾನನಿಧಿ ನೀವ್ ತೆರಳಿ ಬೇಗದೊಳೆಂದಳಾ ಕುಂತಿ (ಆದಿ ಪರ್ವ, ೨೧ ಸಂಧಿ, ೭೪ ಪದ್ಯ)

ತಾತ್ಪರ್ಯ:
ಕುಂತಿ ಗಾಂಧಾರಿ ಒಬ್ಬರನ್ನೇ ಆಹ್ವಾನಿಸದೆ ಅವರ ಪರಿವಾರದವರಾದ ಭಾನುಮತಿ ಮೊದಲಾದ ಸೊಸೆಯರೊಡನೆ ಮತ್ತು ಮಗಳಾದ ದುಶ್ಯಳೆಯೊಡನೆ ಬಂದು ಸ್ವಲ್ಪವೂ ನ್ಯೂನವಾಗದಂತೆ ವ್ರತವನ್ನು ಮಾಡಬೇಕು, ನೀವು ಬೇಗ ಬನ್ನಿರಿ, ಎಂದು ಕುಂತಿಯು ಗಾಂಧಾರಿಗೆ ಹೇಳಿದಳು.

ಅರ್ಥ:
ಮೊದಲಾದ: ಮುಂತಾದ; ಸೊಸೆ: ಗಂಡನ ಹೆಂಡತಿ; ಸೂನು:ಪುತ್ರ; ಮಕ್ಕಳು: ಮಗು, ಪುತ್ರಪುತ್ರಿಯರು; ಸಹಿತ: ಜೊತೆ; ಮಾನಿನಿ: ಹೆಂಗಸರು; ವರ:ಶ್ರೇಷ್ಠ; ಒಡಗೊಂಡು: ಜೊತೆ; ಲೀಲೆ: ಸಂತೋಷ; ಸಾನುರಾಗ:ಅನುರಾಗ; ಬಂದು: ಆಗಮಿಸಿ; ಬೇಹುದು: ಮಾಡಬೇಕು; ಮಾನ:ಗೌರವ; ನಿಧಿ: ಸಂಪತ್ತು; ತೆರಳು: ನಡೆ; ಬೇಗ: ವೇಗ, ಶೀಘ್ರ; ನೋನ: ವ್ರತವನ್ನು ಮಾಡು;

ಪದವಿಂಗಡಣೆ:
ಭಾನುಮತಿ +ಮೊದಲಾದ +ಸೊಸೆಯರು
ಸೂನು +ಮಕ್ಕಳ+ ಸಹಿತಲಾ+ ವರ
ಮಾನಿನಿಯರ್+ಎಲ್ಲರನು +ನೀವ್+ಒಡಗೊಂಡು +ಲೀಲೆಯಲಿ
ಸಾನುರಾಗದಿ+ ಬಂದು +ನೋಂಪಿಯ
ನ್ಯೂನವಿಲ್ಲದೆ+ ನೋನ +ಬೇಹುದು
ಮಾನನಿಧಿ+ ನೀವ್ +ತೆರಳಿ +ಬೇಗದೊಳ್+ಎಂದಳಾ +ಕುಂತಿ

ಅಚ್ಚರಿ:
(೧) ಸೊಸೆ, ಸೂನು, ಸಹಿತ, ಸಾನುರಾಗ; ನೋಂಪು, ನೋನ, ನ್ಯೂನತೆ – ಮ, ನ, ಕಾರದ ಪದಗಳ ಬಳಕೆ
(೨) ಗಾಂಧಾರಿಯನ್ನು ಮಾನನಿಧಿ ಎಂದು ಕುಂತಿ ಕರೆದಿರುವುದು
(೩) ನೋಂಪಿಯ ನ್ಯೂನವಿಲ್ಲದೆ ನೋನ – ನ ಕಾರದ ತ್ರಿವಳಿ ಪದ

ಪದ್ಯ ೨೮: ಕುಂತಿಯ ಮಕ್ಕಳು ದ್ರೌಪದಿಯ ಏನಾಗಬೇಕೆಂದು ಕೃಷ್ಣನು ವಿವರಿಸಿದನು?

ಏನಹರು ನಿಮಗಿಂದು ಕುಂತೀ
ಮಾನಿನಿಯರತ್ತೆಯರಲೇ ತ
ತ್ಸೂನುಗಳು ಮೈದುನರು ತತ್ಪತ್ನಿಯರು ತಂಗಿಯರು
ಸಾನುರಾಗವೆ ಮನಕೆ ಸಂಶಯ
ವೇನಿದಕೆ ತಪ್ಪಿಲ್ಲ ಕುಂತೀ
ಸೂನುಗಳು ದ್ರೌಪದಿಗೆ ರಮಣರು ನೋಡಿ ನೀವೆಂದ (ಆದಿ ಪರ್ವ, ೧೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಬಲರಾಮನು ಬಿಲ್ಲನ್ನು ಹೆದೆಯೇರಿಸಲು ಹೊರಟಿದ್ದನ್ನು ಕಂಡ ಕೃಷ್ಣನು ಬಲರಾಮನಿಗೆ, ಏನಾಗಿದೆ ನಿಮಗೆ? ಕುಂತಿದೇವಿಯು ನಿಮಗೆ ಅತ್ತೆಯಲ್ಲವೆ, ಹಾಗಾದರೆ ಅವರ ಮಕ್ಕಳು ಮೈದುನರು ಮತ್ತು ಆ ಮಕ್ಕಳ ಹೆಂಡತಿ ನಿಮಗೆ ತಂಗಿಯ ಸಮಾನ, ಹೀಗಿರುವಾಗ ನೀವು ಬಿಲ್ಲನ್ನು ಎತ್ತಲು ಹೋಗುವುದು ಒಳಿತೆ? ಇದರಲ್ಲಿ ಯಾವ ತಪ್ಪಿಲ್ಲ, ಕುಂತಿಯ ಮಕ್ಕಳೆ ದ್ರೌಪದಿಗೆ ಯಜಮಾನರಾಗುವರು.

ಅರ್ಥ:
ಏನಹರು:ಏನಾಗಬೇಕು; ಮಾನಿನಿ: ಹೆಂಗಸು; ಅತ್ತೆ: ಅಪ್ಪನ ತಂಗಿ; ಸೂನು: ಮಕ್ಕಳು; ಪತ್ನಿ: ಭಾರ್ಯ; ಸಾನುರಾಗ: ಪ್ರೀತಿ; ಮನ: ಮನಸ್ಸು; ಸಂಶಯ: ಅನುಮಾನ; ರಮಣ: ಪ್ರಿಯ;

ಪದವಿಂಗಡಣೆ:
ಏನಹರು +ನಿಮಗಿಂದು +ಕುಂತೀ
ಮಾನಿನಿಯರ್+ಅತ್ತೆ+ಯರಲೇ+ ತತ್
ಸೂನುಗಳು+ ಮೈದುನರು+ ತತ್+ಪತ್ನಿಯರು +ತಂಗಿಯರು
ಸಾನುರಾಗವೆ +ಮನಕೆ +ಸಂಶಯವ್
ಏನಿದಕೆ +ತಪ್ಪಿಲ್ಲ +ಕುಂತೀ
ಸೂನುಗಳು+ ದ್ರೌಪದಿಗೆ+ ರಮಣರು+ ನೋಡಿ +ನೀವೆಂದ

ಅಚ್ಚರಿ:
(೧) ಅತ್ತೆ, ಮೈದುನ, ಪತ್ನಿ, ಸೂನು, ತಂಗಿ, ರಮಣ – ಸಂಬಂಧಗಳ ವಿವರ
(೨) “ತ” ಕಾರದ ಬಳಕೆ – ತತ್ಸೂನುಗಳು ಮೈದುನರು ತತ್ಪತ್ನಿಯರು ತಂಗಿಯರು
(೩) ಸೂನು – ೩, ೬ ಸಾಲಿನ ಮೊದಲ ಪದ