ಪದ್ಯ ೫: ಕೃಷ್ಣನೇಕೆ ಪಾಂಡವರ ಕಡೆ ನಿಂತನು?

ಅವರು ಸುಚರಿತರೆಂದಲೇ ಮಾ
ಧವನು ನೆರೆ ಮರುಳಾದನವರಿಗೆ
ಶಿವನು ಮೆಚ್ಚಿದು ಶರವನಿತ್ತನು ನರನ ಪತಿಕರಿಸಿ
ಭುವನವೆರಡಾದಲ್ಲಿ ಸಾಧುಗ
ಳವರ ದೆಸೆ ದುಸ್ಸಾಧುಗಳು ನಿ
ನ್ನವರ ದೆಸೆಯಾಯ್ತನರ್ಜುನನ ಸೂತಜನ ಸಮರದಲಿ (ಗದಾ ಪರ್ವ, ೧೧ ಸಂಧಿ, ೫ ಪದ್ಯ)

ತಾತ್ಪರ್ಯ:
ಅವರು ಸುಚರಿತರೆಂದೇ ಶ್ರೀಕೃಷ್ಣನು ಅವರಿಗೆ ಮರುಳಾದನು. ಶಿವನು ಅರ್ಜುನನಿಗೆ ಮೆಚ್ಚಿ ಪಾಶುಪತಾಸ್ತ್ರವನ್ನು ನೀಡಿದನು. ಕರ್ಣಾರ್ಜುನರ ಯುದ್ಧದಲ್ಲಿ ಲೋಕವು ಎರಡು ಪಕ್ಷವಾದಾಗ ಸಾಧುಗಳು ಪಾಂಡವರ ಕಡೆಗೂ, ದುಷ್ಟರು ನಿನ್ನ ಕಡೆಗೂ ಬೆಂಬಲಕ್ಕೆ ನಿಂತರಲ್ಲವೇ ಎಂದು ವೇದವ್ಯಾಸರು ಕೇಳಿದರು.

ಅರ್ಥ:
ಸುಚರಿತ: ಒಳ್ಳೆಯ ಚರಿತ್ರೆ ಉಳ್ಳವರು; ಮಾಧವ: ಕೃಷ್ಣ; ನೆರೆ: ಗುಂಪು; ಮರುಳು: ಪ್ರೀತಿ, ಮೋಹ; ಶಿವ: ಶಂಕರ; ಮೆಚ್ಚು: ಒಲುಮೆ, ಪ್ರೀತಿ; ಶರ: ಬಾಣ; ನರ: ಮನುಷ್ಯ; ಪತಿಕರಿಸು: ಅನುಗ್ರಹಿಸು; ಭುವನ: ಭೂಮಿ; ಸಾಧು: ಶುದ್ಧವಾದುದು; ದೆಸೆ: ದಿಕ್ಕು; ದುಸ್ಸಾಧು: ಕೆಟ್ಟವರು, ದುಷ್ಟ; ಸೂತಜ: ಕರ್ಣ; ಸಮರ: ಯುದ್ಧ;

ಪದವಿಂಗಡಣೆ:
ಅವರು +ಸುಚರಿತರ್+ಎಂದಲೇ +ಮಾ
ಧವನು +ನೆರೆ +ಮರುಳಾದನ್+ಅವರಿಗೆ
ಶಿವನು +ಮೆಚ್ಚಿದು +ಶರವನಿತ್ತನು+ ನರನ +ಪತಿಕರಿಸಿ
ಭುವನವ್+ಎರಡಾದಲ್ಲಿ+ ಸಾಧುಗಳ್
ಅವರ +ದೆಸೆ +ದುಸ್ಸಾಧುಗಳು +ನಿ
ನ್ನವರ +ದೆಸೆಯಾಯ್ತನ್+ ಅರ್ಜುನನ +ಸೂತಜನ +ಸಮರದಲಿ

ಅಚ್ಚರಿ:
(೧) ಕೃಷ್ಣನು ಪಾಂಡವರ ಕಡೆಯಿದ್ದ ಕಾರಣ – ಅವರು ಸುಚರಿತರೆಂದಲೇ ಮಾಧವನು ನೆರೆ ಮರುಳಾದನವರಿಗೆ
(೨) ಕರ್ಣನನ್ನು ಸೂತಜ ಎಂದು ಕರೆದಿರುವುದು

ಪದ್ಯ ೨೭: ಶಲ್ಯನನ್ನು ಹೇಗೆ ಹೊಗಳಿದರು?

ಪೂತು ಮಝರೇ ಶಲ್ಯ ಹೊಕ್ಕನೆ
ಸೂತಜನ ಹರಿಬದಲಿ ವೀರ
ವ್ರಾತಗಣನೆಯೊಳೀತನೊಬ್ಬನೆ ಹಾ ಮಹಾದೇಅ
ಧಾತುವೊಳ್ಳಿತು ದಿಟ್ಟನೈ ನಿ
ರ್ಭೀತಗರ್ವಿತನಿವನೆನುತ ಭಟ
ರೀತನನು ಹೊಗಳಿದರು ಸಾತ್ಯಕಿ ಸೋಮಕಾದಿಗಳು (ಶಲ್ಯ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸಾತ್ಯಕಿ ಸೋಮಕ ಮೊದಲಾದವರು, ಭಲೇ, ಕರ್ನನ ಸೇಡನ್ನು ತೀರಿಸಲು ಶಲ್ಯನು ಮುಂದಾದನೇ? ಇವನೇ ಸೇನಾಧಿಪತಿಯಾಗಲು ಅರ್ಹನಾದ ವೀರನು. ನಿಲುಮೆ, ಸತ್ವ, ನಿರ್ಭೀತಿ ದರ್ಪಗಳು ಇವನಲ್ಲಿ ಎದ್ದುಕಾಣುತ್ತಿದೆ ಎಂದು ಶಲ್ಯನನ್ನು ಹೊಗಳಿದರು.

ಅರ್ಥ:
ಪೂತು: ಭಲೇ; ಮಝ: ಕೊಂಡಾಟದ ಮಾತು; ಹೊಕ್ಕು: ಸೇರು; ಸೂತಜ: ಸೂತನ ಮಗ (ಕರ್ಣ); ಹರಿಬ: ಕೆಲಸ, ಕಾರ್ಯ; ವೀರ: ಶೂರ; ವ್ರಾತ: ಗುಂಪು; ಗಣನೆ: ಲೆಕ್ಕ; ಧಾತು: ಮೂಲ ವಸ್ತು, ತೇಜಸ್ಸು; ದಿಟ್ಟ: ನಿಜ; ನಿರ್ಭೀತ: ಭಯವಿಲ್ಲದ; ಗರ್ವಿತ: ಅಹಂಕಾರಿ; ಭಟ: ಸೈನಿಕ; ಹೊಗಳು: ಪ್ರಶಂಶಿಸು; ಆದಿ: ಮುಂತಾದ;

ಪದವಿಂಗಡಣೆ:
ಪೂತು +ಮಝರೇ +ಶಲ್ಯ+ ಹೊಕ್ಕನೆ
ಸೂತಜನ+ ಹರಿಬದಲಿ +ವೀರ
ವ್ರಾತ+ಗಣನೆಯೊಳ್+ಈತನೊಬ್ಬನೆ +ಹಾ +ಮಹಾದೇವ
ಧಾತುವೊಳ್ಳಿತು+ ದಿಟ್ಟನೈ +ನಿ
ರ್ಭೀತ+ಗರ್ವಿತನ್+ಇವನೆನುತ +ಭಟರ್
ಈತನನು +ಹೊಗಳಿದರು +ಸಾತ್ಯಕಿ +ಸೋಮಕಾದಿಗಳು

ಅಚ್ಚರಿ:
(೧) ಶಲ್ಯನನ್ನು ಹೊಗಳಿದ ಪರಿ – ಧಾತುವೊಳ್ಳಿತು, ದಿಟ್ಟ, ನಿರ್ಭೀತ, ಗರ್ವಿತ

ಪದ್ಯ ೧೧: ದುರ್ಯೋಧನನನ್ನು ಹೇಗೆ ಹುರಿದುಂಬಿಸಿದರು?

ರಾಯ ಹದುಳಿಸು ಹದುಳಿಸಕಟಾ
ದಾಯಿಗರಿಗೆಡೆಗೊಟ್ಟೆಲಾ ನಿ
ರ್ದಾಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ
ವಾಯುಜನ ಜಠರದಲಿ ತೆಗೆಯಾ
ಜೀಯ ನಿನ್ನನುಜರನು ಪಾರ್ಥನ
ಬಾಯಲುಗಿ ಸೂತಜನನೆಮ್ದರು ಜರೆದು ಕುರುಪತಿಯ (ಶಲ್ಯ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೃಪ ಅಶ್ವತ್ಥಾಮರು, ಅರಸ, ಎಚ್ಚೆತ್ತುಕೋ, ದಾಯಾದಿಗಳಿಗೆ ನೆಲವನ್ನಾಕ್ರಮಿಸಲು ದಾರಿಯಾಯಿತು. ರಾಜ್ಯವು ಅವರಿಗೆ ಸೇರುವುದು ಖಂಡಿತ. ಭೀಮನು ತನ್ನ ಪ್ರತಿಜ್ಞೆಯನ್ನು ಪೂರೈಸಿಕೊಂಡನು. ಏಳು ನಿನ್ನ ತಮ್ಮಂದಿರನ್ನು ಭೀಮನ ಹೊಟ್ಟೆಯಿಂದಲೂ, ಕರ್ಣನನ್ನು ಅರ್ಜುನನ ಬಾಯಿಂದಲೂ ಹೊರಕ್ಕೆ ತೆಗೆ ಎಂದು ಕೌರವನನ್ನು ಹುರಿದುಂಬಿಸಿದರು.

ಅರ್ಥ:
ರಾಯ: ರಾಜ; ಹದುಳಿಸು: ಸಮಾಧಾನ ಗೊಳ್ಳು; ಅಕಟಾ: ಅಯ್ಯೋ; ದಾಯಿಗರಿ: ದಾಯಾದಿ; ಎಡೆ: ಅವಕಾಶ; ನಿರ್ದಾಯದ: ಅಖಂಡ; ನೆಲ: ಭೂಮಿ; ಹೋಯ್ತು: ಕಳಚು; ಭಾಷೆ: ನುಡಿ; ಸಂದು: ಅವಕಾಶ; ವಾಯುಜ: ಭೀಮ; ಜಠರ: ಹೊಟ್ಟೆ; ತೆಗೆ: ಹೊರತರು; ಜೀಯ: ಒಡೆಯ; ಅನುಜ: ತಮ್ಮ; ಜರೆ: ತೆಗಳು; ಉಗಿ: ಹೊರಹಾಕು; ಸೂತ: ಸಾರಥಿ;

ಪದವಿಂಗಡಣೆ:
ರಾಯ +ಹದುಳಿಸು +ಹದುಳಿಸ್+ಅಕಟಾ
ದಾಯಿಗರಿಗ್+ಎಡೆಗೊಟ್ಟೆಲಾ +ನಿ
ರ್ದಾಯದಲಿ +ನೆಲ +ಹೋಯ್ತು +ಭೀಮನ +ಭಾಷೆ +ಸಂದುದಲಾ
ವಾಯುಜನ +ಜಠರದಲಿ+ ತೆಗೆಯಾ
ಜೀಯ +ನಿನ್ನನುಜರನು+ ಪಾರ್ಥನ
ಬಾಯಲ್+ಉಗಿ +ಸೂತಜನನ್+ಎಂದರು+ ಜರೆದು+ ಕುರುಪತಿಯ

ಅಚ್ಚರಿ:
(೧) ಭೀಮ, ವಾಯುಜ – ಭೀಮನನ್ನು ಕರೆದ ಪರಿ
(೨) ರಾಯ, ಕುರುಪತಿ – ಪದ್ಯದ ಮೊದಲ ಮತ್ತು ಕೊನೆ ಪದ, ದುರ್ಯೋಧನನನ್ನು ಕರೆಯುವ ಪರಿ
(೩) ವಾಯುಜ, ನಿನ್ನನುಜ, ಸೂತಜ – ಪದಗಳ ಬಳಕೆ

ಪದ್ಯ ೧೬: ಕೌರವ ಸೈನ್ಯದವರು ಏನೆಂದು ಕೂಗಿದರು?

ಕೊಲುವುದನುಚಿತವೆಂದು ಗಗನ
ಸ್ಥಳಕೆ ರಥವನು ಬಿಸುಡೆ ಯೋಜನ
ದಳವಿಯಲಿ ಲಂಘಿಸಿತು ಹಯತತಿ ಸೂತಜರು ಸಹಿತ
ಎಲೆಲೆ ಕಟಕಾಚಾರ್ಯನಕಟಾ
ಕೊಳುಗುಳದೊಳಪದೆಸೆಯ ಕಂಡನೊ
ಗೆಲಿದನೋ ರಿಪುವೆಂದುಲಿಯೆ ನಿಜಪಾಯದಳವಂದು (ದ್ರೋಣ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಗುರುವನ್ನು ಕೊಲ್ಲುವುದು ಉಚಿತವಲ್ಲೆಂದು ಬಗೆದ ಭೀಮನು ದ್ರೋಣನ ಹೊಸ ರಥವನ್ನು ಹಿಡಿದು ಮತ್ತೆ ಆಕಾಶಕ್ಕೆಸೆದನು. ಸೂತ, ಕುದುರೆ, ದ್ರೋಣರೊಡನೆ ಅದು ಯೋಜನ ದೂರಕ್ಕೆ ಹೋಗಿ ಬಿದ್ದಿತು. ಸೇನಾಪತಿಯು ಯುದ್ಧದಲ್ಲಿ ದುರ್ಗತೀಗೀಡಾದನು, ಶತ್ರುವು ಜಯಿಸಿದನು ಎಂದು ಕೌರವ ಸೈನ್ಯದ ಕಾಲಾಳುಗಳು ಕೂಗಿಕೊಂಡರು.

ಅರ್ಥ:
ಕೊಲು: ಸಾಯಿಸು; ಅನುಚಿತ: ಸರಿಯಿಲ್ಲದು; ಗಗನ: ಆಗಸ; ಸ್ಥಳ: ಜಾಗ; ರಥ: ಬಂಡಿ; ಬಿಸುಡು: ಹೊರಹಾಕು; ಯೋಜನ: ದೂರದ ಅಳತೆಯ ಒಂದು ಪ್ರಮಾಣ, ಹನ್ನೆರಡು ಮೈಲು; ಅಳವು:ಅಳತೆ; ಲಂಘಿಸು: ಹಾರು; ಹಯ: ಕುದುರೆ; ತತಿ: ಗುಂಪು; ಸೂತ: ರಥವನ್ನು ನಡೆಸುವವನು, ಸಾರ; ಸಹಿತ: ಜೊತೆ; ಕಟಕ: ಸೈನ್ಯ; ಆಚಾರ್ಯ: ಗುರು; ಅಕಟ: ಅಯ್ಯೋ; ಕೊಳುಗುಳ: ರಣರಂಗ; ಅಪದೆಸೆ: ಅಪಯಶಸ್ಸು; ಕಂಡು: ನೋಡು; ಗೆಲಿ: ಜಯಿಸು; ರಿಪು: ವೈರಿ; ಉಲಿ: ಕೂಗು; ಪಾಯದಳ: ಸೈನಿಕ;

ಪದವಿಂಗಡಣೆ:
ಕೊಲುವುದ್+ಅನುಚಿತವೆಂದು +ಗಗನ
ಸ್ಥಳಕೆ +ರಥವನು +ಬಿಸುಡೆ +ಯೋಜನದ್
ಅಳವಿಯಲಿ +ಲಂಘಿಸಿತು +ಹಯತತಿ +ಸೂತಜರು +ಸಹಿತ
ಎಲೆಲೆ +ಕಟಕಾಚಾರ್ಯನ್+ಅಕಟಾ
ಕೊಳುಗುಳದೊಳ್+ಅಪದೆಸೆಯ +ಕಂಡನೊ
ಗೆಲಿದನೋ +ರಿಪುವೆಂದ್+ಉಲಿಯೆ +ನಿಜ+ಪಾಯದಳವಂದು

ಅಚ್ಚರಿ:
(೧) ಭೀಮನು ರಥವನ್ನು ಎಸೆದ ಕಾರಣ – ಕೊಲುವುದನುಚಿತವೆಂದು ಗಗನ ಸ್ಥಳಕೆ ರಥವನು ಬಿಸುಡೆ
(೨) ಕಟಕ, ಅಕಟ – ಪ್ರಾಸ ಪದಗಳು

ಪದ್ಯ ೫೭: ಕರ್ಣನ ಧನುಸ್ಸನ್ನು ಯಾರು ಸೀಳಿದರು?

ಹೂಣಿಗರು ಕೆಲರಿವರು ಇವದಿರ
ಗೋಣನರಿವರೆ ಇವರ ಜೀವದ
ಕೇಣಿಕಾರರು ಖಾತಿಗೊಂಬರು ಭೀಮ ಫಲುಗುಣರು
ಮಾಣದಿವದಿರು ಮತ್ತೆ ರಣದಲಿ
ಕಾಣೆನಿದಕಿನ್ನನುವನೆನುತ
ಕ್ಷೀಣ ಭುಜಬಲನೆಚ್ಚು ಕಡಿದನು ಸೂತಜನ ಧನುವ (ದ್ರೋಣ ಪರ್ವ, ೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಈ ಕೆಲವು ಶೂರರನ್ನು ಕೋಂದರೆ ಇವರ ಜೀವವನ್ನು ಕೇಣಿಗೆ ತೆಗೆದು ಕೋಂಡಿರುವ ಭೀಮಾರ್ಜುನರು ಸಿಟ್ಟಾಗುತ್ತಾರೆ. ಇವರೋ ಯುದ್ಧದಲ್ಲಿ ಮತ್ತೆ ಮತ್ತೆ ಬಂದು ಕಾಡಿಸುತ್ತಾರೆ. ಇದರ ಪರಿಹಾರವು ನನಗೆ ಹೊಳೆಯುತ್ತಿಲ್ಲ ಎಂದು ಕ್ಷೀಣಗೊಳ್ಳದ ಬಾಹುಬಲಶಾಲಿ ಅಭಿಮನ್ಯುವು ಕರ್ಣನ್ ಧನುಸ್ಸನ್ನು ಕಡಿದನು.

ಅರ್ಥ:
ಹೂಣಿಗ: ಬಾಣವನ್ನು ಹೂಡುವವನು; ಕೆಲರು: ಸ್ವಲ್ಪ ಜನ; ಇವದಿರು: ಇಷ್ಟು ಜನ; ಗೋಣು: ಕುತ್ತಿಗೆ, ಗಳ; ಕೇಣಿಕಾರ: ಗುತ್ತಿಗೆದಾರ; ಖಾತಿ: ಕೋಪ, ಕ್ರೋಧ; ಮಾಣು: ನಿಲ್ಲಿಸು; ರಣ: ಯುದ್ಧ; ಕಾಣೆ: ತೋರು; ಅನುವು:ಸೊಗಸು, ರೀತಿ; ಕ್ಷೀಣ: ನಾಶ, ಕೇಡು; ಭುಜಬಲ: ಪರಾಕ್ರಮ; ಕಡಿ: ಸೀಳು; ಸೂತಜ: ಕರ್ಣ; ಧನು: ಬಿಲ್ಲು;

ಪದವಿಂಗಡಣೆ:
ಹೂಣಿಗರು +ಕೆಲರಿವರು +ಇವದಿರ
ಗೋಣನ್+ಅರಿವರೆ +ಇವರ +ಜೀವದ
ಕೇಣಿಕಾರರು +ಖಾತಿಗೊಂಬರು +ಭೀಮ +ಫಲುಗುಣರು
ಮಾಣದ್+ಇವದಿರು +ಮತ್ತೆ+ ರಣದಲಿ
ಕಾಣೆನ್+ಇದಕಿನ್+ಅನುವನೆನುತ
ಕ್ಷೀಣ +ಭುಜಬಲನ್+ಎಚ್ಚು +ಕಡಿದನು +ಸೂತಜನ +ಧನುವ

ಅಚ್ಚರಿ:
(೧) ಹೂಣಿಗರು, ಕೇಣಿಕಾರರು – ಪದಗಳ ಬಳಕೆ

ಪದ್ಯ ೩೫: ಶ್ರೀಕೃಷ್ಣನು ಅರ್ಜುನನಿಗೆ ಏನು ಆಜ್ಞಾಪಿಸಿದ?

ಈಗಲೀ ಧರ್ಮಶ್ರವಣ ನೀ
ನಾಗಳೇರಿಸಿ ನುಡಿದ ಭಾಷೆಗೆ
ಮೂಗುಹೋದುದೆ ಮರೆದಲಾ ಮಾತುಗಳು ಹಳಸುವವೆ
ಹೋಗಲೆಲೆ ಮರುಳೇ ವಿಭಾಡಿಸು
ಬೇಗದಲಿ ಬಹುರಾಜಕಾರ್ಯವ
ನೀಗಳೇ ತಿದ್ದುವೆನು ತೊಲಗಿಸು ಸೂತಜನ ಶಿರವ (ಕರ್ಣ ಪರ್ವ, ೨೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ಏನಿದು ಅರ್ಜುನ ಈಗಲೇ ಏನೋ ಧರ್ಮ ಶ್ರವಣ ಮಾಡಿಸುತ್ತಿರುವೇ? ನೀನು ಹಿಂದೆ ಮಾಡಿದ ಶಪಥ ಮೂಗು ಕತ್ತರಿಸಿ ಹೋಯಿತೇ? ನಿನ್ನ ಶಪಥ ಹಳಸಿಹೋಯಿತೇ? ಅರ್ಜುನ ನಿನಗೆಲ್ಲೋ ಹುಚ್ಚು ಹಿಡಿದಿದೆ, ಕರ್ಣನನ್ನು ಬೇಗೆ ಬಡಿದುಕೊಲ್ಲು, ರಾಜಕಾರ್ಯವನ್ನು ಸರಿಪಡಿಸುತ್ತೇನೆ, ಕರ್ಣನ ತಲೆಯನ್ನು ಕದಿದುರುಳಿಸು ಎಂದು ಶ್ರೀಕೃಷ್ಣನು ಹೇಳಿದನು.

ಅರ್ಥ:
ಈಗಲೆ: ಕೂಡಲೆ; ಧರ್ಮ: ಧಾರಣೆ ಮಾಡಿದುದು, ನಿಯಮ; ಶ್ರವಣ: ಕೇಳು; ಏರಿಸಿ: ಜೋರಾದ, ಹೆಚ್ಚಾದ; ನುಡಿ: ಮಾತಾಡು; ಭಾಷೆ: ಮಾತು, ಪ್ರತಿಜ್ಞೆ; ಮೂಗುಹೋಗು: ಮೂಗು ಕತ್ತರಿಸು, ವಿಮುಖನಾಗು; ಮರೆ: ನೆನಪಿನಿಂದ ದೂರ ಸರಿ; ಮಾತು: ವಾಣಿ; ಹಳಸು: ಕೆಟ್ಟುಹೋಗು, ಹಳೆಯದಾಗು; ಹೋಗು: ತೆರಳು; ಮರುಳು: ಮೂರ್ಖ,ಹುಚ್ಚು; ವಿಭಾಡಿಸು: ನಾಶಮಾಡು; ಬೇಗ: ಶೀಘ್ರ; ಬಹು: ದೊಡ್ಡ; ರಾಜಕಾರ್ಯ: ರಾಜಕಾರಣ, ರಾಜಕೆಲಸ; ತಿದ್ದು: ಸರಿಪಡಿಸು; ತೊಲಗಿಸು: ನಾಶಮಾಡು, ಹೊರಹಾಕು; ಸೂತಜ: ಸೂತಪುತ್ರ; ಶಿರ: ತಲೆ;

ಪದವಿಂಗಡಣೆ:
ಈಗಲೀ ಧರ್ಮಶ್ರವಣ ನೀ
ನಾಗಳೇರಿಸಿ ನುಡಿದ ಭಾಷೆಗೆ
ಮೂಗುಹೋದುದೆ ಮರೆದಲಾ ಮಾತುಗಳು ಹಳಸುವವೆ
ಹೋಗಲೆಲೆ ಮರುಳೇ ವಿಭಾಡಿಸು
ಬೇಗದಲಿ ಬಹುರಾಜಕಾರ್ಯವ
ನೀಗಳೇ ತಿದ್ದುವೆನು ತೊಲಗಿಸು ಸೂತಜನ ಶಿರವ

ಅಚ್ಚರಿ:
(೧) ಅರ್ಜುನನನ್ನು ಮೂದಲಿಸುವ ಪರಿ – ನೀನಾಗಳೇರಿಸಿ ನುಡಿದ ಭಾಷೆಗೆ
ಮೂಗುಹೋದುದೆ, ಮರೆದಲಾ ಮಾತುಗಳು ಹಳಸುವವೆ, ಹೋಗಲೆಲೆ ಮರುಳೇ

ಪದ್ಯ ೨೩: ಕರ್ಣನ ಯಾವುದರಲ್ಲಿ ರಸಿಕನೆಂದು ಧರ್ಮಜನು ವರ್ಣಿಸಿದನು?

ಎಲ್ಲಿ ಕರ್ಣನು ತಿರುಗಿ ನೋಡಿದ
ಡಲ್ಲಿ ತಾನೆಡವಂಕ ಬಲ ಮುಖ
ದಲ್ಲಿ ಸೂತಜನೆಂಟು ದೆಸೆಗಳ ನೋಡೆ ಕರ್ಣಮಯ
ಎಲ್ಲಿ ನೋಡಿದಡಲ್ಲಿ ಕರ್ಣನ
ಬಿಲ್ಲ ಬೊಬ್ಬೆ ರಥಾಶ್ವರವವೆದೆ
ದಲ್ಲಣದ ದೆಖ್ಖಾಳ ರಚನಾ ರಸಿಕನವನೆಂದ (ಕರ್ಣ ಪರ್ವ, ೧೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯಾವ ಕಡೆ ತಿರುಗಿ ನೋಡಿದರೂ ಅಲ್ಲಿ ಕರ್ಣನೇ ಕಾಣುತ್ತಿದ್ದನು. ಎಡಕ್ಕೆ, ಬಲಕ್ಕೆ, ರಾಧೇಯನೇ, ಎಂತು ದಿಕ್ಕುಗಳೂ ಕರ್ಣಮಯವಾಗಿತ್ತು. ಎಲ್ಲಿ ಹೋದರೂ ಅಲ್ಲಿ ಕರ್ಣನ ಧನುಷ್ಟಂಕಾರ, ಅಲ್ಲಿ ಅವನ ಕುದುರೆಗಳ ಹೇಷಾರವ. ಎದೆ ನಡುಗಿಸುವಂತಹ ಯುದ್ಧ ಚಾತುರ್ಯ, ಅವನು ಶತ್ರುಗಳಿಗೆ ಭೀತಿಹುಟ್ಟಿಸುವಲ್ಲಿ ರಸಿಕ ನೆಂದು ಕರ್ಣನ ಪರಾಕ್ರಮವನ್ನು ಧರ್ಮಜನು ವರ್ಣಿಸಿದನು.

ಅರ್ಥ:
ತಿರುಗು: ಅಲೆದಾಡು, ಸುತ್ತು, ಸಂಚರಿಸು; ನೋಡು: ವೀಕ್ಷಿಸು; ವಂಕ: ಬದಿ, ಮಗ್ಗುಲು; ಎಡ: ವಾಮ; ಬಲ: ದಕ್ಷಿಣ ಪಾರ್ಶ್ವ; ಮುಖ: ಆನನ; ಸೂತಜ: ಸೂತನಮಗ (ಕರ್ಣ); ದೆಸೆ: ದಿಕ್ಕು; ಬಿಲ್ಲು: ಚಾಪ; ಬೊಬ್ಬೆ: ಆರ್ಭಟ; ರಥ: ಬಂಡಿ; ಅಶ್ವ: ಕುದುರೆ; ರವ: ಶಬ್ದ; ಎದೆ: ವಕ್ಷಸ್ಥಳ; ತಲ್ಲಣ: ಅಂಜಿಕೆ, ಭಯ; ದೆಖ್ಖಾಳ: ಗೊಂದಲ, ಗಲಭೆ; ರಚನೆ: ನಿರ್ಮಾಣ; ರಸಿಕ: ಆಸಕ್ತಿಯುಳ್ಳವನು

ಪದವಿಂಗಡಣೆ:
ಎಲ್ಲಿ +ಕರ್ಣನು +ತಿರುಗಿ +ನೋಡಿದಡ್
ಅಲ್ಲಿ +ತಾನ್+ಎಡವಂಕ+ ಬಲ+ ಮುಖ
ದಲ್ಲಿ +ಸೂತಜನ್+ಎಂಟು +ದೆಸೆಗಳ +ನೋಡೆ +ಕರ್ಣಮಯ
ಎಲ್ಲಿ +ನೋಡಿದಡಲ್ಲಿ +ಕರ್ಣನ
ಬಿಲ್ಲ+ ಬೊಬ್ಬೆ+ ರಥ+ಅಶ್ವ+ರವವ್+ಎದೆ
ತಲ್ಲಣದ +ದೆಖ್ಖಾಳ +ರಚನಾ +ರಸಿಕನ್+ಅವನೆಂದ

ಅಚ್ಚರಿ:
(೧) ಕರ್ಣನ ರಸಿಕತೆ – ಎದೆ ದಲ್ಲಣದ ದೆಖ್ಖಾಳ ರಚನಾ ರಸಿಕ
(೨) ಕರ್ಣ, ಸೂತಜ – ಕರ್ಣನನ್ನು ಕರೆದ ಬಗೆ