ಪದ್ಯ ೧೪: ಕಂಕನು ರಾಜನಿಗೆ ಏನು ಹೇಳಿದನು?

ಸೋತುದುಂಟರಿಸೇನೆ ಸುರಭಿ
ವ್ರಾತ ಮರಳಿದುದುಂಟು ಗೆಲವಿದು
ಕೌತುಕವಲೇ ಬಗೆಯಲದ್ಭುತವೆಮ್ಮ ಚಿತ್ತದಲಿ
ಮಾತು ಹೋಲುವೆಯಹುದು ಜಗವಿ
ಖ್ಯಾತ ಸಾರಥಿಯಿರೆ ಕುಮಾರಗೆ
ಭೀತಿ ಬಳಿಕೆಲ್ಲಿಯದು ತಪ್ಪೇನೆಂದನಾ ಕಂಕ (ವಿರಾಟ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಆಗ ಕಂಕನು ಶತ್ರು ಸೈನ್ಯವು ಸೋತದ್ದುಂಟು, ಗೋವುಗಳು ಮರಳಿ ಬಂದುದು ನಿಜ, ಈ ಗೆಲವು ಕುತೂಹಲಕರ ಮತ್ತು ಅದ್ಭುತವಾಗಿ ತೋರುತ್ತದೆ. ಜಗದ್ವಿಖ್ಯಾತನಾದ ಸಾರಥಿಯಿದ್ದರೆ ರಥಿಕನಿಗೆ ಎಲ್ಲಿಯ ಭೀತಿ ಎಂದು ಜನರು ಹೇಳುತ್ತಾರೆ, ಹಾಗೆಯೇ ನಡೆದಿದೆ ಎಂದು ಕಂಕನು ವಿರಾಟನಿಗೆ ಹೇಳಿದನು.

ಅರ್ಥ:
ಸೋತು: ಪರಾಭವ; ಅರಿ: ವೈರಿ; ಸೇನೆ: ಸೈನ್ಯ; ಸುರಭಿ: ಗೋವು; ವ್ರಾತ: ಗುಂಪು; ಮರಳು: ಹಿಂದಿರುಗು; ಗೆಲವು: ಜಯ; ಕೌತುಕ: ಕುತೂಹಲ; ಅಧ್ಬುತ: ಆಶ್ಚರ್ಯ; ಬಗೆ: ಯೋಚಿಸು; ಚಿತ್ತ: ಮನಸ್ಸು; ಮಾತು: ವಾಣಿ; ಹೋಲು: ಸದೃಶವಾಗು; ಜಗ: ಪ್ರಪಂಚ; ವಿಖ್ಯಾತ: ಪ್ರಸಿದ್ಧ; ಸಾರಥಿ: ಸೂತ; ಕುಮಾರ: ಪುತ್ರ; ಭೀತಿ: ಭಯ; ಬಳಿಕ: ತರುವಾಯ, ನಂತರ; ತಪ್ಪು: ಸರಿಯಲ್ಲದು;

ಪದವಿಂಗಡಣೆ:
ಸೋತುದುಂಟ್+ಅರಿ +ಸೇನೆ +ಸುರಭಿ
ವ್ರಾತ +ಮರಳಿದುದುಂಟು +ಗೆಲವಿದು
ಕೌತುಕವಲೇ+ ಬಗೆಯಲ್+ಅದ್ಭುತವೆಮ್ಮ +ಚಿತ್ತದಲಿ
ಮಾತು +ಹೋಲುವೆ+ಅಹುದು +ಜಗ+ವಿ
ಖ್ಯಾತ +ಸಾರಥಿಯಿರೆ +ಕುಮಾರಗೆ
ಭೀತಿ+ ಬಳಿಕೆಲ್ಲಿಯದು +ತಪ್ಪೇನೆಂದನಾ +ಕಂಕ

ಅಚ್ಚರಿ:
(೧) ಸಾರಥಿಯನ್ನು ಪ್ರಶಂಸಿದ ಪರಿ – ಜಗ ವಿಖ್ಯಾತ ಸಾರಥಿಯಿರೆ ಕುಮಾರಗೆ ಭೀತಿ ಬಳಿಕೆಲ್ಲಿಯದು

ಪದ್ಯ ೨೦: ಧೌಮ್ಯರು ಪುನಃ ಯಾರನ್ನು ಭಜಿಸಲು ಹೇಳಿದರು?

ಕ್ಷತ್ರ ತೇಜದ ತೀವ್ರಪಾತ ನಿ
ಮಿತ್ತ ನಿಮಗಂಜನು ಸುರೇಶ್ವರ
ಸತ್ಯಕೆಡುವೊಡೆ ಸಾರೆಯಿದೆಲಾ ಕೌರವನ ನಗರ
ಸತ್ಯಮಾರಿಯ ಸುರಭಿಗಳುಪಿದ
ಕಾರ್ತವೀರ್ಯಾರ್ಜುನನ ಕಥೆಯನು
ಮತ್ತೆ ಹೇಳುವೆ ಭಜಿಸು ಕೃಷ್ಣನನೆಂದನಾ ಧೌಮ್ಯ (ಅರಣ್ಯ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಇಂದ್ರನು ನಿಮ್ಮ ಕ್ಷಾತ್ರ ತೇಜಸ್ಸಿಗೆ ಹೆದರುವವನಲ್ಲ. ಸತ್ಯವನ್ನು ಮೀರಬೇಕೆಂದರೆ ಹತ್ತಿರದಲ್ಲೇ ಕೌರವನ ರಾಜಧಾನಿಯಿದೆ ಅಲ್ಲಿಗೇ ನೀನು ನುಗ್ಗಬಹುದು, ಕಾಮಧೇನುವನ್ನು ಪಡೆಯಲೆಳಸಿದ ಸತ್ಯಹೀನನಾದ ಕಾರ್ತಿವೀರ್ಯಾರ್ಜುನನ ಕಥೆಯನ್ನು ಆಮೇಲೆ ಹೇಳುತ್ತೇನೆ. ಈಗ ಶ್ರೀಕೃಷ್ಣನನ್ನು ಭಜಿಸಿರಿ ಎಂದು ಧೌಮ್ಯನು ಬುದ್ಧಿವಾದವನ್ನು ಹೇಳಿದನು.

ಅರ್ಥ:
ಕ್ಷತ್ರ: ಕ್ಷತ್ರಿಯ; ತೇಜ: ತೇಜಸ್ಸು; ತೀವ್ರ: ಬಹಳ; ಪಾತ: ಪತನ; ನಿಮಿತ್ತ: ನೆಪ, ಕಾರಣ; ಅಂಜು: ಹೆದರು; ಸುರೇಶ್ವರ: ಇಂದ್ರ; ಸತ್ಯ: ದಿಟ, ನಿಜ; ಎಡುವು: ಬೀಳು; ಸಾರೆ: ಪ್ರಕಟಿಸು; ನಗರ: ಊರು; ಸತ್ಯ: ನಿಜ; ಮಾರಿ: ಕೇಡು, ಹಾನಿ; ಸುರಭಿ: ಕಾಮಧೇನುವಿನ ಮಗಳು; ಅಳುಪು: ಭಂಗತರು, ಬಯಸು; ಕಥೆ: ವಿವರಣೆ; ಮತ್ತೆ: ಆಮೇಲೆ; ಹೇಳು: ತಿಳಿಸು; ಭಜಿಸು: ಪ್ರಾರ್ಥಿಸು;

ಪದವಿಂಗಡಣೆ:
ಕ್ಷತ್ರ +ತೇಜದ +ತೀವ್ರ+ಪಾತ +ನಿ
ಮಿತ್ತ +ನಿಮಗ್+ಅಂಜನು +ಸುರೇಶ್ವರ
ಸತ್ಯಕ್+ಎಡುವೊಡೆ +ಸಾರೆಯಿದೆಲಾ+ ಕೌರವನ+ ನಗರ
ಸತ್ಯಮಾರಿಯ +ಸುರಭಿಗ್+ಅಳುಪಿದ
ಕಾರ್ತವೀರ್ಯಾರ್ಜುನನ+ ಕಥೆಯನು
ಮತ್ತೆ+ ಹೇಳುವೆ +ಭಜಿಸು +ಕೃಷ್ಣನನ್+ಎಂದನಾ +ಧೌಮ್ಯ

ಅಚ್ಚರಿ:
(೧) ಸತ್ಯಹೀನ ಎಂದು ಹೇಳಲು – ಸತ್ಯಮಾರಿ ಪದದ ಬಳಕೆ

ಪದ್ಯ ೧೫: ರವಿಯ ಉದಯವು ಹೇಗಾಯಿತು?

ಅರಸ ಕೇಳಭ್ಯುದಿತವಾದುದು
ಸರಸ ಕೈರವ ರಾಜಿ ಕೋಮಲ
ಸರಸಿರುಹವನವಾದುದಾಕ್ಷಣ ಸುರಭಿ ನಿರ್ಮುಕ್ತ
ಕಿರಣ ತೋಮರ ದಕ್ಷಿಣೋರು
ಸ್ಫುರಣ ತಿಮಿರ ಮೃಗೀಕದಂಬಕ
ತರಣಿ ನೂಕಿದನುದಯಶೈಲಕೆ ರತುನಮಯ ರಥವ (ಕರ್ಣ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೂರ್ಯೋದಯವನ್ನು ಬಹಳ ಸುಂದರವಾಗಿ ವರ್ಣಿಸಲಾಗಿದೆ. ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ಸಂಗತಿ ಹೇಳುತ್ತಾ, ನೀರಿನಲ್ಲರಳಿದೆ ನೈದಿಲೆಗಳು ಮುಚ್ಚಿದವು, ಮೃದುವಾದ ತಾವರೆ ವನಗಳ ಸುಗಂಧವು ಸ್ವಚ್ಛಂದವಾಗಿ ಎಲ್ಲೆಡೆ ಹರಡಿತು. ತನ್ನ ಕಿರಣಗಳೆಂಬ ಬಾಣವನ್ನು ತನ್ನ ಬಲಗೈಯಲ್ಲಿ ಹಿಡಿದು, ಕತ್ತಲೆಯ ಮೃಗಗಳನ್ನು ಬೇಟೆಯಾಡಲು ಸೂರ್ಯನ್ ಉದಯಾಚಲಕ್ಕೆ ರತ್ನಮಯ ರಥದಲ್ಲಿ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಅಭ್ಯುದಿತ: ಇಳಿಗೆ; ಸರಸ: ನೀರು; ಕೈರವ: ನೈದಿಲೆ, ನೀಲಕಮಲ; ರಾಜಿ: ಗುಂಪು, ಸಮೂಹ; ಕೋಮಲ: ಮೃದು ಸರಸಿರುಹ: ಕಮಲ; ವನ: ಕಾಡು, ಬನ; ಸುರಭಿ: ಸುಗಂಧ; ನಿರ್ಮುಕ್ತ: ಸಂಪೂರ್ಣವಾಗಿ ಮುಕ್ತಿ ಹೊಂದಿದ; ಕಿರಣ: ರಶ್ಮಿ, ಬೆಳಕಿನ ಕದಿರು; ತೋಮರ: ತಿದಿಯಲ್ಲಿ ಅರ್ಧಚಂದ್ರಾಕೃತಿಯಲ್ಲಿರುವ ಒಂದು ಬಗೆಯ ಬಾಣ, ಈಟಿಯಂತಿರುವ ಆಯುಧ; ದಕ್ಷಿಣ: ಬಲ; ಉರ: ಎದೆ, ವಕ್ಷಸ್ಥಳ; ಸ್ಫುರಣ:ಹೊಳಪು, ಅಲುಗಾಟ; ತಿಮಿರ: ಕತ್ತಲು; ಮೃಗೀಕ: ಮೃಗಗಳು; ಕದಂಬಕ: ಸಮೂಹ; ನೂಕು: ತಳ್ಳು; ಉದಯ: ಹುಟ್ಟು; ಶೈಲ: ಬೆಟ್ಟ; ರತುನ: ರತ್ನ, ಬೆಲೆಬಾಳುವ ಮಣಿ; ರಥ: ತೇರು;

ಪದವಿಂಗಡಣೆ:
ಅರಸ +ಕೇಳ್+ಅಭ್ಯುದಿತ+ವಾದುದು
ಸರಸ+ ಕೈರವ+ ರಾಜಿ +ಕೋಮಲ
ಸರಸಿರುಹ+ವನವಾದುದ್+ಆ ಕ್ಷಣ+ ಸುರಭಿ +ನಿರ್ಮುಕ್ತ
ಕಿರಣ+ ತೋಮರ+ ದಕ್ಷಿಣೋರು
ಸ್ಫುರಣ+ ತಿಮಿರ +ಮೃಗೀಕದಂಬಕ
ತರಣಿ +ನೂಕಿದನ್+ಉದಯಶೈಲಕೆ+ ರತುನಮಯ+ ರಥವ

ಅಚ್ಚರಿ:
(೧) ಸೂರ್ಯೋದಯವನ್ನು ಕೈರವ, ತಾವರೆಗಳ ಮೂಲಕ ವಿವರಿಸಿರುವುದು

ಪದ್ಯ ೧೦೨: ಕುಂತಿಯು ತನ್ನ ಅರಮನೆಗೆ ಯಾವ ವಸ್ತುಗಳನ್ನು ತಂದಳು?

ಸುರಪನೈರಾವತವನೇರಿಯೆ
ಪುರದ ಬೀದಿಗಳೊಳಗೆ ಬಂದಳು
ಕರಿನಗರಕೇರಿಯಲಿ ನಡೆದುದು ಸಕಲಜನನಿಕರ
ಅರಸಿ ಸುರಸತಿಯರಿಗೆ ಕೊಟ್ಟಳು
ಹರುಷದಿಂಬಾಗಿನವ ನಿಜಮಂ
ದಿರಕೆ ತಂದಳು ಸುರಭಿ ಸಹ ಸುರಸತಿಯರೊಡಗೂಡಿ (ಆದಿ ಪರ್ವ, ೨೧ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಐರಾವತನ್ನೇರಿ ಗೌರಿವ್ರತವನ್ನು ಮಾಡಿದ ನಂತರ, ಕುಂತಿಯು ಐರಾವತದ ಮೇಲೆಯೆ ಕುಳಿತು ಹಸ್ತಿನಾಪುರದ ಬೀದಿಗಳಲ್ಲಿ ಸಂಚರಿಸಿದಳು. ಹಸ್ತಿನಾಪುರದ ಸಮಸ್ತ ಜನರು ಆಕೆಯ ಸುತ್ತಮುತ್ತ ನಡೆದರು, ಕುಂತಿಯು ದೇವತಾಸ್ತ್ರಿಯರಿಗೆಲ್ಲಾ ಬಾಗಿನವನ್ನು ನೀಡಿದಳು, ಕಾಮಧೇನುವೆ ಮೊದಲಾದ ಸಮಸ್ತ ದೇವತಾವಸ್ತುಗಳನ್ನು ತನ್ನ ಅರಮನೆಗೆ ಕರೆತಂದಳು.

ಅರ್ಥ:
ಸುರಪ: ಇಂದ್ರ; ಏರು: ಹತ್ತು; ಪುರ: ಊರು; ಬೀದಿ: ರಸ್ತೆ; ಬಂದು: ಆಗಮಿಸು; ಕರಿ: ಆನೆ; ನಗರ: ಊರು; ಕರಿನಗರ: ಹಸ್ತಿನಾಪುರ; ಕೇರಿ: ಬೀದಿ,ಓಣಿ; ಸಕಲ: ಎಲ್ಲಾ; ನಿಕರ: ಗುಂಪು; ಅರಸಿ: ರಾಣಿ; ಸುರಸತಿ: ಅಪ್ಸರೆಯರು; ಬಾಗಿನ: ಕಾಣಿಕೆ, ಉಡುಗೊರೆ; ನಿಜಮಂದಿರ: ತನ್ನ ಅರಮನೆ; ಸುರಭಿ: ಕಾಮಧೇನು; ಸಹ: ಜೊತೆ; ಸುರಸತಿ: ಅಪ್ಸರೆ;

ಪದವಿಂಗಡಣೆ:
ಸುರಪನ್+ಐರಾವತವನ್+ಏರಿಯೆ
ಪುರದ+ ಬೀದಿಗಳ್+ಒಳಗೆ +ಬಂದಳು
ಕರಿನಗರ+ಕೇರಿಯಲಿ +ನಡೆದುದು +ಸಕಲ+ಜನನಿಕರ
ಅರಸಿ +ಸುರಸತಿಯರಿಗೆ+ ಕೊಟ್ಟಳು
ಹರುಷದಿಂ+ಬಾಗಿನವ +ನಿಜಮಂ
ದಿರಕೆ +ತಂದಳು +ಸುರಭಿ +ಸಹ +ಸುರಸತಿಯರ್+ಒಡಗೂಡಿ

ಅಚ್ಚರಿ:
(೧) “ಸ” ಕಾರದ ತ್ರಿವಳಿ ಪದಗಳು – ಸುರಭಿ ಸಹ ಸುರಸತಿ
(೨) ಹಸ್ತಿನಾಪುರದ ಬೀದಿಗಳಲ್ಲಿ ಎಂದು ಹೇಳಲು – ಕರಿನಗರಕೇರಿ ಎಂಬ ಪ್ರಯೋಗ

ಪದ್ಯ ೯೯: ಕುಂತಿ ನಡೆಸಿದ ಗಜಗೌರಿ ಉತ್ಸವದ ಪರಿ ಹೇಗಿತ್ತು?

ಸುರಭಿಕರೆದರೆ ಧರಣಿ ದಣಿದುದು
ನೆರೆದಜನ ನೆರೆವುಂಡು ದಣಿದುದು
ಸುರತರುವಿನಶನದಲಿ ಲೋಕದ ಬಾಯ ಕಡೆಬಿಟ್ಟು
ಸುರರ ಸತಿಯರ ಕಂಡು ಕಂಗಳು
ಹಿರಿದು ದಣಿದುವು ಹೇಳಲೇನದ
ನರಸ ಕೇಳೈ ಕುಂತಿದೇವಿಯ ನೋಂಪಿಯುತ್ಸಹವ (ಆದಿ ಪರ್ವ, ೨೧ ಸಂಧಿ, ೯೯ ಪದ್ಯ)

ತಾತ್ಪರ್ಯ:
ವ್ರತಾಚರಣೆಯು ಕೊನೆಗೊಳ್ಳುತ್ತಿದ್ದಂತೆ ಎಲ್ಲರಲ್ಲೂ ಸಂತಸ ಮೂಡಿತ್ತು. ಕಾಮಧೇನುವು ಹಾಲನ್ನು ಕರೆಯಲು ಭೂಮಿ ತೃಪ್ತವಾಯಿತು, ಸೇರಿದ ಜನರೆಲ್ಲರೂ ಮೃಷ್ಟಾನ ಭೋಜನದಿಂದ ತೃಪ್ತರಾದರು, ಬೇಡಿದುದನ್ನು ನೀಡುವ ಕಲ್ಪವೃಕ್ಷವು ಬೇಡಿದುದನ್ನೆಲ್ಲಾ ನೀಡಿತು, ಅಪ್ಸರೆಯರನ್ನು ಕಂಡು ಕಣ್ಣು ತೃಪ್ತಿಹೊಂದಿತು, ಹೀಗೆ ಕುಂತೀದೇವಿಯ ವ್ರತದ ಉತ್ಸವವನ್ನು ಹೇಗೆಂದು ವರ್ಣಿಸಲಿ ರಾಜ ಜನಮೇಜಯ ಎಂದು ವೈಶಂಪಾಯನರು ಹೇಳಿದರು.

ಅರ್ಥ:
ಸುರಭಿ:ದೇವಲೋಕದ ಹಸು, ಕಾಮಧೇನು; ಕರೆ:ಹಿಂಡು (ಹಾಲನ್ನು), ಒದಗಿಸು; ದಣಿ:ತೃಪ್ತಿಹೊಂದು; ನೆರೆ: ಹೆಚ್ಚಳ, ಅತಿಶಯ; ಜನ: ಮನುಷ್ಯ; ಉಂಡು: ಊಟಮಾಡು; ಸುರತರು: ದೇವಲೋಕದ ಮರ, ಕಲ್ಪವೃಕ್ಷ; ಅಶನ: ಆಹಾರ, ಅನ್ನ; ಲೋಕ: ಜಗತ್ತು; ಬಾಯ:ಮುಖದ ಅಂಗ; ಸುರ:ದೇವತೆ; ಸತಿ: ಸ್ತ್ರೀ; ಕಂಗಳು: ಕಣ್ಣು,ನಯನ; ಹಿರಿ: ಹೊರಕ್ಕೆ ಎಳೆ,ಸೆಳೆ; ಅರಸ: ರಾಜ; ಕೇಳು: ಆಲಿಸು; ನೋಂಪು: ವ್ರತ; ಉತ್ಸವ: ಹಬ್ಬ;

ಪದವಿಂಗಡಣೆ:
ಸುರಭಿ+ಕರೆದರೆ +ಧರಣಿ +ದಣಿದುದು
ನೆರೆದಜನ +ನೆರೆ+ವುಂಡು +ದಣಿದುದು
ಸುರತರುವಿನ್+ಅಶನದಲಿ +ಲೋಕದ +ಬಾಯ +ಕಡೆಬಿಟ್ಟು
ಸುರರ +ಸತಿಯರ +ಕಂಡು +ಕಂಗಳು
ಹಿರಿದು +ದಣಿದುವು +ಹೇಳಲೇನ್+ಅದನ್
ಅರಸ+ ಕೇಳೈ +ಕುಂತಿದೇವಿಯ +ನೋಂಪಿ+ಯುತ್ಸಹವ

ಅಚ್ಚರಿ:
(೧) ದಣಿದುದು – ೧, ೨ ಸಾಲಿನ ಕೊನೆ ಪದ, ದಣಿ ಪದ ೫ ಸಾಲಿನಲ್ಲೂ ಪ್ರಯೋಗ
(೨) ನೆರೆ – ೨ ಸಾಲಿನ ಮೊದಲೆರಡು ಪದದ ಮೊದಲನೆ ಪದ, ನೆರೆದಜನ, ನೆರೆಯುಂಡು
(೩) ೪ ಸಾಲಿನಲ್ಲಿ ಸ,ಕ ಅಕ್ಷರಗಳ ಜೋಡಿ ಪದಗಳ ಬಳಕೆ – ಸುರರ ಸತಿಯರ; ಕಂಡು ಕಂಗಳು
(೪) ಸುರಭಿ – ಕಾಮಧೇನು, ಸುರತರು – ಕಲ್ಪವೃಕ್ಷ, ಸುರಸತಿ – ಅಪ್ಸರೆ – “ಸುರ” ಪದದ ಬಳಕೆ