ಪದ್ಯ ೨೦: ಧೌಮ್ಯರು ಪುನಃ ಯಾರನ್ನು ಭಜಿಸಲು ಹೇಳಿದರು?

ಕ್ಷತ್ರ ತೇಜದ ತೀವ್ರಪಾತ ನಿ
ಮಿತ್ತ ನಿಮಗಂಜನು ಸುರೇಶ್ವರ
ಸತ್ಯಕೆಡುವೊಡೆ ಸಾರೆಯಿದೆಲಾ ಕೌರವನ ನಗರ
ಸತ್ಯಮಾರಿಯ ಸುರಭಿಗಳುಪಿದ
ಕಾರ್ತವೀರ್ಯಾರ್ಜುನನ ಕಥೆಯನು
ಮತ್ತೆ ಹೇಳುವೆ ಭಜಿಸು ಕೃಷ್ಣನನೆಂದನಾ ಧೌಮ್ಯ (ಅರಣ್ಯ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಇಂದ್ರನು ನಿಮ್ಮ ಕ್ಷಾತ್ರ ತೇಜಸ್ಸಿಗೆ ಹೆದರುವವನಲ್ಲ. ಸತ್ಯವನ್ನು ಮೀರಬೇಕೆಂದರೆ ಹತ್ತಿರದಲ್ಲೇ ಕೌರವನ ರಾಜಧಾನಿಯಿದೆ ಅಲ್ಲಿಗೇ ನೀನು ನುಗ್ಗಬಹುದು, ಕಾಮಧೇನುವನ್ನು ಪಡೆಯಲೆಳಸಿದ ಸತ್ಯಹೀನನಾದ ಕಾರ್ತಿವೀರ್ಯಾರ್ಜುನನ ಕಥೆಯನ್ನು ಆಮೇಲೆ ಹೇಳುತ್ತೇನೆ. ಈಗ ಶ್ರೀಕೃಷ್ಣನನ್ನು ಭಜಿಸಿರಿ ಎಂದು ಧೌಮ್ಯನು ಬುದ್ಧಿವಾದವನ್ನು ಹೇಳಿದನು.

ಅರ್ಥ:
ಕ್ಷತ್ರ: ಕ್ಷತ್ರಿಯ; ತೇಜ: ತೇಜಸ್ಸು; ತೀವ್ರ: ಬಹಳ; ಪಾತ: ಪತನ; ನಿಮಿತ್ತ: ನೆಪ, ಕಾರಣ; ಅಂಜು: ಹೆದರು; ಸುರೇಶ್ವರ: ಇಂದ್ರ; ಸತ್ಯ: ದಿಟ, ನಿಜ; ಎಡುವು: ಬೀಳು; ಸಾರೆ: ಪ್ರಕಟಿಸು; ನಗರ: ಊರು; ಸತ್ಯ: ನಿಜ; ಮಾರಿ: ಕೇಡು, ಹಾನಿ; ಸುರಭಿ: ಕಾಮಧೇನುವಿನ ಮಗಳು; ಅಳುಪು: ಭಂಗತರು, ಬಯಸು; ಕಥೆ: ವಿವರಣೆ; ಮತ್ತೆ: ಆಮೇಲೆ; ಹೇಳು: ತಿಳಿಸು; ಭಜಿಸು: ಪ್ರಾರ್ಥಿಸು;

ಪದವಿಂಗಡಣೆ:
ಕ್ಷತ್ರ +ತೇಜದ +ತೀವ್ರ+ಪಾತ +ನಿ
ಮಿತ್ತ +ನಿಮಗ್+ಅಂಜನು +ಸುರೇಶ್ವರ
ಸತ್ಯಕ್+ಎಡುವೊಡೆ +ಸಾರೆಯಿದೆಲಾ+ ಕೌರವನ+ ನಗರ
ಸತ್ಯಮಾರಿಯ +ಸುರಭಿಗ್+ಅಳುಪಿದ
ಕಾರ್ತವೀರ್ಯಾರ್ಜುನನ+ ಕಥೆಯನು
ಮತ್ತೆ+ ಹೇಳುವೆ +ಭಜಿಸು +ಕೃಷ್ಣನನ್+ಎಂದನಾ +ಧೌಮ್ಯ

ಅಚ್ಚರಿ:
(೧) ಸತ್ಯಹೀನ ಎಂದು ಹೇಳಲು – ಸತ್ಯಮಾರಿ ಪದದ ಬಳಕೆ

ಪದ್ಯ ೫೪: ದೇವತೆಗಳು ಅರ್ಜುನನನ್ನು ಹೇಗೆ ಕೊಂಡಾಡಿದರು?

ಪರಶುರಾಮನ ಕಾರ್ತವೀರ್ಯನ
ವರ ದಿಳೀಪನ ದುಂದುಮಾರನ
ಭರತ ದಶರಥ ನಹುಷ ನಳ ರಾಘವನ ಲಕ್ಷ್ಮಣನ
ಸರಿಮಿಗಿಲು ಕಲಿಪಾರ್ಥನೀ ಮಿ
ಕ್ಕರಸುಗಳ ಪಾಡೇ ಕಿರೀಟಿಯ
ದೊರೆಯದಾವವನೆನುತ ಕೊಂಡಾಡಿತು ಸುರಸ್ತೋಮ (ಕರ್ಣ ಪರ್ವ, ೨೪ ಸಂಧಿ, ೫೪ ಪದ್ಯ)

ತಾತ್ಪರ್ಯ:
ಪರಶುರಾಮ, ಕಾರ್ತವೀರ್ಯ, ದಿಲೀಪ, ದುಂದುಮಾರ, ಭರತ, ದಶರಥ, ನಹುಷ, ನಳ, ರಾಮ, ಲಕ್ಷ್ಮಣರಿಗೆ ಅರ್ಜುನನು ಮೇಲಾಗಿರುವನು, ಅರ್ಜುನನಿಗೆ ಯಾರು ತಾನೆ ಸಮಾನರು ಎಂದು ದೇವತೆಗಳು ಕೊಂಡಾಡಿದರು.

ಅರ್ಥ:
ಸರಿಮಿಗಿಲು: ಒಬ್ಬ ವ್ಯಕ್ತಿಗಿಂತ ಮತ್ತೊಬ್ಬ ವ್ಯಕ್ತಿ ಮೇಲಾಗಿರುವುದು, ಅತಿಶಯ; ಕಲಿ: ಶೂರ; ಅರಸು: ರಾಜ; ಪಾಡು: ಸ್ಥಿತಿ, ಅವಸ್ಥೆ; ದೊರೆ: ಪಡೆ; ಕೊಂಡಾಡು: ಹೊಗಳು; ಸುರಸ್ತೋಮ: ದೇವತೆಗಳ ಗುಂಪು; ವರ: ಶ್ರೇಷ್ಠ;

ಪದವಿಂಗಡಣೆ:
ಪರಶುರಾಮನ +ಕಾರ್ತವೀರ್ಯನ
ವರ +ದಿಳೀಪನ +ದುಂದುಮಾರನ
ಭರತ+ ದಶರಥ+ ನಹುಷ +ನಳ +ರಾಘವನ+ ಲಕ್ಷ್ಮಣನ
ಸರಿಮಿಗಿಲು +ಕಲಿಪಾರ್ಥನೀ +ಮಿಕ್
ಅರಸುಗಳ +ಪಾಡೇ +ಕಿರೀಟಿಯ
ದೊರೆಯದ್+ಆವವ್+ಎನುತ +ಕೊಂಡಾಡಿತು+ ಸುರಸ್ತೋಮ

ಅಚ್ಚರಿ:
(೧) ದಿಗ್ಗಜರ ಹೆಸರು: ಪರಶುರಾಮ, ಕಾರ್ತವೀರ್ಯ, ದಿಳೀಪ, ದುಂದುಮಾರ,ಭರತ, ದಶರಥ, ನಹುಷ, ನಳ, ರಾಘವ, ಲಕ್ಷ್ಮಣ
(೨) ಕಿರೀಟಿ, ಅರ್ಜುನ – ಅರ್ಜುನನ ಹೆಸರುಗಳು

ಪದ್ಯ ೧೦: ಕೌರವ ಭಟರು ಭೀಮಸೇನನಿಗೆ ಏನು ಹೇಳಿದರು?

ಬಂದು ಭಟ್ಟರು ಭೀಮಸೇನಂ
ಗೆಂದರೆಲೆ ಕೌಂತೇಯ ನೀ ನಿ
ನ್ನಂದಿನಗ್ಗದ ದುಂದುಮಾರನ ಕಾರ್ತವೀರ್ಯಕನ
ಸಂದ ಭರತ ಭಗೀರಥಾದಿಗ
ಳಿಂದ ಮಿಗಿಲು ಮಹಾಪ್ರಚಂಡರೊ
ಳಿಂದು ನಿನಗೆಣೆಯಾರು ದನುಜಾಮರರ ಥಟ್ಟಿನಲಿ (ಕರ್ಣ ಪರ್ವ, ೧೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕೌರವನ ಭಟರು ಭೀಮಸೇನನ ಬಳಿ ಬಂದು, ಎಲೈ ಕುಂತಿಯ ಮಗನೇ, ಈ ಹಿಂದೆ ಇದ್ದ ಮಹಾಪರಾಕ್ರಮಿಗಳಾದ ದುಂದುಮಾರ, ಕಾರ್ತವೀರ್ಯ, ಭರತ, ಭಗೀರಥರಿಗಿಂತಲೂ ಶ್ರೇಷ್ಠನಾದವನು. ದೇವದಾನವರಲ್ಲಿ ನಿನಗೆ ಸರಿಸಮಾನರಾರು, ನೀನು ಮಹಾಪರಾಕ್ರಮಿ ಎಂದು ಹೊಗಳಿದರು.

ಅರ್ಥ:
ಬಂದು: ಆಗಮಿಸು; ಭಟ: ಸೈನಿಕರು; ಎಂದರು: ಹೇಳಿದರು; ಅಗ್ಗ: ಶ್ರೇಷ್ಠ; ಆದಿ: ಮುಂತಾದ; ಮಿಗಿಲು: ಹೆಚ್ಚು; ಮಹಾಪ್ರಚಂಡ: ಪರಾಕ್ರಮಿ; ಎಣೆ: ಸಮಾನರು; ದನುಜ: ರಾಕ್ಷಸ; ಅಮರ: ದೇವತೆಗಳು; ಥಟ್ಟು: ಗುಂಪು;

ಪದವಿಂಗಡಣೆ:
ಬಂದು +ಭಟ್ಟರು +ಭೀಮಸೇನಂಗ್
ಎಂದರೆಲೆ +ಕೌಂತೇಯ +ನೀ +ನಿನ್
ಅಂದಿನ್+ಅಗ್ಗದ +ದುಂದುಮಾರನ+ ಕಾರ್ತವೀರ್ಯಕನ
ಸಂದ +ಭರತ+ ಭಗೀರಥಾದಿಗ
ಳಿಂದ +ಮಿಗಿಲು +ಮಹಾಪ್ರಚಂಡರೊಳ್
ಇಂದು +ನಿನಗ್+ಎಣೆಯಾರು +ದನುಜಾಮರರ+ ಥಟ್ಟಿನಲಿ

ಅಚ್ಚರಿ:
(೧) ಹಿಂದಿನ ಪರಾಕ್ರಮಿಗಳ ಪರಿಚಯ: ದುಂದುಮಾರ, ಕಾರ್ತವೀರ್ಯ, ಭರತ, ಭಗೀರಥ
(೨) ವೈರಿ ಪಡೆಯವರಿಂದ ಹೊಗಳಿಕೆಯನ್ನು ಪಡೆಯುವ ಸಂದರ್ಭ

ಪದ್ಯ ೧೧: ಧರ್ಮಜನ ರಾಜ್ಯವನ್ನು ಯಾರಿಗೆ ಹೋಲಿಸಬಹುದು?

ನೃಗನ ಭರತನ ದುಂದುಮಾರನ
ಸಗರನಾ ಪುರುವಿನ ಪುರೂರನ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳು ವಲ್ಲಭರ ವಂಶದ
ವಿಗಡರೊಳು ಯಮಸೂನು ಸರಿಯೋ
ಮಿಗಿಲೊ ಬಲ್ಲವರಾರೆನಲು ಸಲಹಿದನು ಭೂತಳವ (ಸಭಾ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ನೃಗ, ಭರತ, ದುಂದುಮಾರ, ಸಗರ, ಪುರು, ಪುರೂರವ, ಆಯು, ನಹುಷ, ಕಾರ್ತವೀರ್ಯ, ನಳ, ದಶರಥ ಮೊದಲಾದ ಸೂರ್ಯವಂಶ ಚಂದ್ರವಂಶಗಳ ಮಹಾಬಲಾಢ್ಯರಿಗೆ ಧರ್ಮರಾಯನು ಸರಿಯೋ ಹೆಚ್ಚೋ ತಿಳಿದವರಾರು? ಎನ್ನುವಂತೆ ದರ್ಮಜನು ರಾಜ್ಯವನ್ನು ಪರಿಪಾಲಿಸುತ್ತಿದ್ದನು.

ಅರ್ಥ:
ಮಗ: ಸುತ; ವಂಶ: ಕುಲ; ಸೂನು: ಮಗ; ಬಲ್ಲವ: ತಿಳಿದವ; ಮಿಗಿಲು: ಹೆಚ್ಚು; ಸಲಹು: ನೋಡಿಕೊ; ಭೂತಳ: ಭೂಮಿ; ವಲ್ಲಭ:ಒಡೆಯ, ಪ್ರಭು; ವಿಗಡ: ಶೌರ್ಯ, ಪರಾಕ್ರಮ; ಹಗಲು: ಬೆಳಗ್ಗೆ; ಇರುಳು: ರಾತ್ರಿ;

ಪದವಿಂಗಡಣೆ:
ನೃಗನ +ಭರತನ +ದುಂದುಮಾರನ
ಸಗರನಾ +ಪುರುವಿನ+ ಪುರೂರನ
ಮಗನ+ ನಹುಷನ+ ಕಾರ್ತವೀರ್ಯನ +ನಳನ +ದಶರಥನ
ಹಗಲಿರುಳು +ವಲ್ಲಭರ+ ವಂಶದ
ವಿಗಡರೊಳು +ಯಮಸೂನು +ಸರಿಯೋ
ಮಿಗಿಲೊ +ಬಲ್ಲವರಾರೆನಲು+ ಸಲಹಿದನು +ಭೂತಳವ

ಅಚ್ಚರಿ:
(೧) ಮಗ, ಸೂನು – ಸಮನಾರ್ಥಕ ಪದ
(೨) ೧೧ ಹೆಸರುಗಳನ್ನು ಮೊದಲ ೩ ಸಾಲಲ್ಲಿ ಉಲ್ಲೇಖಿಸಿರುವುದು
(೩) ೨, ೪ ಸಾಲಿನ ಜೋಡಿ ಪದಗಳು: ಪುರುವಿನ ಪುರೂರನ; ವಲ್ಲಭರ ವಂಶದ

ಪದ್ಯ ೩೪: ಯಾರುನ್ನು ಸೋಲಿಸಿದರೆ ರಾಜಸೂಯಯಾಗವು ಸುಗಮವಾಗುವುದು?

ವಿಗಡಯಾಗಕೆ ಸಕಲರಾಯರು
ಹಗೆ ಮರುತ್ತನು ಕಾರ್ತವೀರ್ಯಾ
ದಿಗಳು ಕೆಲಬರಶಕ್ತರಾದರು ರಾಜಸೂಯದಲಿ
ಬಗೆಯಲಿದು ದುಷ್ಕಾಲವಸುರರೊ
ಳಗಡುಮಾಗಧನವನ ಮುರಿದರೆ
ಸುಗಮ ನಿಮ್ಮಯ್ಯಂಗೆ ಸುರಪದವೆಂದನಸುರಾರಿ (ಸಭಾ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಇಂತಹ ಬಹು ಕಷ್ಟಸಾಧ್ಯವಾದ ಈ ಯಾಗಕ್ಕೆ ಎಲ್ಲಾ ರಾಜರು ವಿರೋಧಿಗಳಾಗುತ್ತಾರೆ, ಮರುತ್ತ, ಕಾರ್ತವೀರ್ಯರಂಥ ಮಹಾರಥರೇ ರಾಜಸೂಯಯಾಗ ಮಾಡಲಾಗಲಿಲ್ಲ. ಇಂದಿನ ಈ ಕೆಟ್ಟಕಾಲದಲ್ಲಿ, ಬಹಳ ಬಲಿಷ್ಠನಾದ ಜರಾಸಂಧನನ್ನು (ಮಾಗಧ) ಕೊಂದರೆ, ನಿನ್ನ ಯಾಗವು ಸುಗಮವಾಗಿ ನಡೆಯಲು ಅನುವು ಮಾಡಿದಂತಾಗುತ್ತದೆ, ಹಾಗು ನಿಮ್ಮ ತಂದೆಗೆ ಸ್ವರ್ಗವಾಸವು ಸುಗಮವಾಗುತ್ತದೆ ಎಂದು ಶ್ರೀಕೃಷ್ಣನು ಹೇಳಿದನು.

ಅರ್ಥ:
ವಿಗಡ:ಶೌರ್ಯ, ಪರಾಕ್ರಮ; ಯಾಗ: ಕ್ರತು; ಸಕಲ: ಎಲ್ಲಾ; ರಾಯ: ರಾಜ; ಹಗೆ: ವೈರತ್ವ; ಆದಿ: ಮುಂತಾದ; ಅಶಕ್ತ: ಅನರ್ಹ, ಅಸಮರ್ಥ; ಬಗೆ:ಮತ, ತಂತ್ರ; ದುಷ್ಕಾಲ: ಕೆಟ್ಟ ಕಾಲ; ವಸು:ಮುಖ್ಯವಾದುದು, ದೇವತೆಗಳ ವರ್ಗ; ಮುರಿ: ಸೀಳು; ಸುಗಮ: ಸುಲಭ; ಸುರಪದ: ಸ್ವರ್ಗವಾಸ; ಅಸುರಾರಿ: ಕೃಷ್ಣ; ಅಗಡು: ತುಂಟತನ;

ಪದವಿಂಗಡಣೆ:
ವಿಗಡ+ಯಾಗಕೆ +ಸಕಲ+ರಾಯರು
ಹಗೆ +ಮರುತ್ತನು +ಕಾರ್ತವೀರ್ಯಾ
ದಿಗಳು +ಕೆಲಬರ್+ಅಶಕ್ತರಾದರು +ರಾಜಸೂಯದಲಿ
ಬಗೆಯಲಿದು +ದುಷ್+ ಕಾಲ+ವಸುರರೊಳ್
ಅಗಡು+ಮಾಗಧನ್+ಅವನ +ಮುರಿದರೆ
ಸುಗಮ +ನಿಮ್ಮಯ್ಯಂಗೆ+ ಸುರಪದ+ವೆಂದನ್+ಅಸುರಾರಿ

ಅಚ್ಚರಿ:
(೧) ಸ್ವರ್ಗವನ್ನು ಸುರಪದ ಎಂದು ಬಣ್ಣಿಸಿರುವುದು
(೨) ಹಗೆ, ಬಗೆ – ೨, ೪ ಸಾಲಿನ ಮೊದಲ ಪದ ಪ್ರಾಸ ಪದಗಳು

ಪದ್ಯ ೮೬: ನಾರದರು ಯುಧಿಷ್ಠಿರನನ್ನು ಯಾರಿಗೆ ಹೋಲಿಸಿದರು?

ನೃಗನ ಭರತನ ದುಂದುಮಾರನ
ಸಗರನ ಪುರೂರವ ಯಯಾತಿಯ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳುವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಎನಿಸುವ ನೀತಿಯುಂಟೇ ರಾಯ ನಿನಗೆಂದ (ಸಭಾ ಪರ್ವ, ೧ ಸಂಧಿ, ೮೬ ಪದ್ಯ)

ತಾತ್ಪರ್ಯ:
ನೃಗ, ಭರತ, ದುಂದುಮಾರ, ಸಗರ, ಪುರೂರವ, ಯಯಾತಿಯ ಮಗನಾದ ಪುರು, ನಹುಷ, ಕಾರ್ತವೀರ್ಯ, ನಳ, ದಶರಥ, ಇವರಲ್ಲದೆ ಚಂದ್ರವಂಶ ಮತ್ತು ಸೂರ್ಯವಂಶಗಳಲ್ಲಿ ಹುಟ್ಟಿ ಭೂಮಿಯನ್ನಾಳಿದ ಹಲವು ರಾಜರಿದ್ದಾರೆ, ಇವರೆಲ್ಲರಿಗೆ ನೀನು ಸರಿಸಮವೋ ಹೆಚ್ಚೋ ಎಂದು ಗಣಿಸುವ ರಾಜನೀತಿ ನಿನ್ನಲ್ಲಿದೆಯೆ, ಎಂದು ನಾರದರು ಯುಧಿಷ್ಠಿರನನ್ನು ಪ್ರಶ್ನಿಸಿದರು.

ಅರ್ಥ:
ಹಗಲು: ದಿನ; ಇರುಳು: ರಾತ್ರಿ; ವಲ್ಲಭ: ಪ್ರಭು, ಒಡೆಯ; ವಂಶ: ಕುಲ; ವಿಗಡ: ಶೌರ್ಯ, ಸಾಹಸ; ಸೂನು: ಪುತ್ರ; ಮಿಗಿಲು: ಹೆಚ್ಚು; ನೀತಿ:ಮಾರ್ಗ, ದರ್ಶನ; ರಾಯ: ರಾಜ;

ಪದವಿಂಗಡಣೆ:
ನೃಗನ +ಭರತನ+ ದುಂದುಮಾರನ
ಸಗರನ+ ಪುರೂರವ+ ಯಯಾತಿಯ
ಮಗನ +ನಹುಷನ +ಕಾರ್ತವೀರ್ಯನ +ನಳನ+ ದಶರಥನ
ಹಗಲ್+ಇರುಳು+ವಲ್ಲಭರ+ ವಂಶದ
ವಿಗಡರಲಿ +ಯಮಸೂನು +ಸರಿಯೋ
ಮಿಗಿಲೊ+ಎನಿಸುವ +ನೀತಿಯುಂಟೇ +ರಾಯ +ನಿನಗೆಂದ

ಅಚ್ಚರಿ:
(೧) ಮೊದಲ ೩ ಸಾಲುಗಳಲ್ಲಿ ೧೦ ರಾಜರ ಹೆಸರನ್ನು ಹೇಳಿರುವುದು
(೨) ವಲ್ಲಭ, ರಾಯ – ಸಮನಾರ್ಥಕ ಪದ