ಪದ್ಯ ೪೦: ಭೀಮನು ದುರ್ಜಯನನ್ನು ಹೇಗೆ ಖಂಡಿಸಿದನು?

ಕೀಲಿಸಿದನೆಂಟಂಬಿನಲಿ ತುರ
ಗಾಳಿಯನು ಸಾರಥಿಯನಾತನ
ಕೋಲ ಖಂಡಿಸಿ ಧನುವ ಕಡಿದನು ಮೂರುಬಾಣದಲಿ
ಹೋಳುಗಳೆದನು ಸುಭಟನಿಟ್ಟೆಲು
ಮೂಳೆಯನು ಮುಂಕೊಂಡ ಬಿರುದರ
ಸೀಳಿದನು ಕರೆ ಮತ್ತೆ ಕರ್ಣನನೆನುತ ಬೊಬ್ಬಿರಿದ (ದ್ರೋಣ ಪರ್ವ, ೧೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಭೀಮನು ಎಂಟು ಬಾಣಗಳಿಂದ ದುರ್ಜಯನ ಕುದುರೆಗಳನ್ನು ಸಾರಥಿಯನ್ನು ಕೊಂದು, ಮೂರು ಬಾಣಗಳಿಂದ ಅವನ ಬಿಲ್ಲನ್ನು ಮುರಿದನು. ಮೂರು ಬಾಣಗಳಿಂದ ಅವನ ನೇರವಾದ ಮೂಳೆಯನ್ನು ಕತ್ತರಿಸಿ ಅವನೊಡನಿದ್ದ ಪರಾಕ್ರಮಿ ರಾಜರನ್ನು ಸೋಲಿಸಿ ಮತ್ತೆ ಕರ್ಣನನ್ನು ಕರೆಯಿರಿ ಎಂದು ಗರ್ಜಿಸಿದನು.

ಅರ್ಥ:
ಕೀಲಿಸು: ಜೋಡಿಸು; ಅಂಬು: ಬಾಣ; ತುರಗ: ಅಶ್ವ, ಕುದುರೆ; ಆಳಿ: ಗುಂಪು; ಸಾರಥಿ: ಸೂತ; ಕೋಲು: ಬಾಣ; ಖಂಡಿಸು: ಸೀಳು; ಧನು: ಬಿಲ್ಲು; ಕಡಿ: ಕತ್ತರಿಸು; ಬಾಣ: ಸರಳು; ಹೋಳು: ತುಂಡು; ಸುಭಟ: ಪರಾಕ್ರಮಿ; ಮೂಳೆ: ಎಲುಬು; ಮುಂಕೊಂಡು: ಮೊದಲಾದ; ಬಿರುದರ: ಬಿರುದನ್ನು ಹೊಂದಿದವ; ಸೀಳು: ಖಂಡಿಸು; ಕರೆ: ಬರೆಮಾಡು; ಮತ್ತೆ: ಪುನಃ; ಬೊಬ್ಬಿರಿ: ಆರ್ಭಟಿಸು; ನಿಟ್ಟೆಲವು: ನೇರವಾದ ಮೂಳೆ;

ಪದವಿಂಗಡಣೆ:
ಕೀಲಿಸಿದನ್+ಎಂಟಂಬಿನಲಿ +ತುರ
ಗಾಳಿಯನು +ಸಾರಥಿಯನ್+ಆತನ
ಕೋಲ +ಖಂಡಿಸಿ +ಧನುವ +ಕಡಿದನು +ಮೂರು+ಬಾಣದಲಿ
ಹೋಳು+ಕಳೆದನು +ಸುಭಟ+ನಿಟ್ಟೆಲು
ಮೂಳೆಯನು +ಮುಂಕೊಂಡ +ಬಿರುದರ
ಸೀಳಿದನು +ಕರೆ +ಮತ್ತೆ +ಕರ್ಣನನ್+ಎನುತ +ಬೊಬ್ಬಿರಿದ

ಅಚ್ಚರಿ:
(೧)ಆಂಬು, ಬಾಣ, ಕೋಲ – ಸಮಾನಾರ್ಥಕ ಪದ
(೨) ಕೀಲಿಸಿ, ಖಂಡಿಸು, ಸೀಳು, ಕಡಿ, ಹೋಳು – ಸಾಮ್ಯಾರ್ಥ ಪದಗಳು

ಪದ್ಯ ೩೫: ಭೀಮನು ಕರ್ಣನ ಬಾಣಗಳನ್ನು ಹೇಗೆ ಎದುರಿಸಿದನು?

ಬಳಲಿದವು ತೇಜಿಗಳು ಸಾರಥಿ
ಯಳುಕಿದನು ಶರಹತಿಗೆ ಭೀಮನ
ಬಲು ಪತಾಕೆ ತನುತ್ರ ರಥ ಕರ್ಣಾಸ್ತ್ರಮಯವಾಯ್ತು
ಹಿಳುಕ ಹೊದಿಸಿದನಖಿಲ ದೆಸೆಗಳ
ನಿಲುಕಲರಿದೆನೆ ನಿಮಿಷ ಮಾತ್ರಕೆ
ಕಳಚಿ ಕಳೆದನು ಭೀಮ ತೊಟ್ಟನು ಮತ್ತೆ ಮಾರ್ಗಣವ (ದ್ರೋಣ ಪರ್ವ, ೧೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭೀಮನ ರಥದ ಕುದುರೆಗಳು ಬಳಲಿದವು. ಬಾಣಗಳ ಹೊಡೆತಕ್ಕೆ ಸಾರಥಿಯಾದ ವಿಶೋಕನು ಅಳುಕಿದನು. ಕವಚ ರಥಗಳು ಕರ್ಣಾಸ್ತ್ರಗಳಿಂದ ತುಂಬಿದವು. ಇನ್ನೇನು ಭೀಮನ ಕೈ ನಿಂತಿತೆನ್ನುವಷ್ಟರಲ್ಲಿ ಅವನು ಕರ್ಣನ ಬಾಣಗಳನ್ನೆಲ್ಲಾ ಖಂಡಿಸಿ, ಮತ್ತೆ ಬಾಣವನ್ನು ಹೂಡಿದನು.

ಅರ್ಥ:
ಬಳಲು: ಆಯಾಸ; ತೇಜಿ: ಕುದುರೆ; ಸಾರಥಿ: ಸೂತ; ಅಳುಕು: ಹೆದರು; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಬಲು: ದೊಡ್ಡ; ಪತಾಕೆ: ಬಾವುಟ; ತನುತ್ರ: ಕವಚ; ರಥ: ಬಂಡಿ; ಅಸ್ತ್ರ: ಶಸ್ತ್ರ, ಆಯುಧ; ಹಿಳುಕು: ಬಾಣದ ಹಿಂಭಾಗ; ಹೊದಿಸು: ಆವರಿಸು; ಅಖಿಲ: ಎಲ್ಲಾ; ದೆಸೆ: ದಿಕ್ಕು; ನಿಲುಕು: ಚಾಚುವಿಕೆ; ಅರಿ: ಸೀಳು; ನಿಮಿಷ: ಕ್ಷಣ; ಕಳಚು: ಬೇರ್ಪಡಿಸು; ಕಳೆ: ಬೀಡು, ತೊರೆ; ತೊಡು: ಧರಿಸು; ಮಾರ್ಗಣ: ಬಾಣ;

ಪದವಿಂಗಡಣೆ:
ಬಳಲಿದವು +ತೇಜಿಗಳು +ಸಾರಥಿ
ಅಳುಕಿದನು +ಶರಹತಿಗೆ +ಭೀಮನ
ಬಲು +ಪತಾಕೆ +ತನುತ್ರ +ರಥ +ಕರ್ಣಾಸ್ತ್ರಮಯವಾಯ್ತು
ಹಿಳುಕ +ಹೊದಿಸಿದನ್+ಅಖಿಲ +ದೆಸೆಗಳ
ನಿಲುಕಲ್+ಅರಿದೆನೆ +ನಿಮಿಷ +ಮಾತ್ರಕೆ
ಕಳಚಿ +ಕಳೆದನು +ಭೀಮ +ತೊಟ್ಟನು +ಮತ್ತೆ +ಮಾರ್ಗಣವ

ಅಚ್ಚರಿ:
(೧) ಕರ್ಣನ ಪರಾಕ್ರಮ – ಶರಹತಿಗೆ ಭೀಮನ ಬಲು ಪತಾಕೆ ತನುತ್ರ ರಥ ಕರ್ಣಾಸ್ತ್ರಮಯವಾಯ್ತು

ಪದ್ಯ ೨೬: ಭೀಮನು ಕರ್ಣನ ಧನುವನ್ನು ಹೇಗೆ ಖಂಡಿಸಿದನು?

ಉಡಿದು ರಥ ಸಾರಥಿಗಳವನಿಗೆ
ಕೆಡೆಯೆ ಕಾಲಾಳಾಗಿ ಭೀಮನ
ಬಿಡದೆ ಥಟ್ಟೈಸಿದನು ಶರನಿಕರದಲಿ ರವಿಸೂನು
ಕಡಿದು ಬಿಸುಡದೆ ಕರುಣಿಸಿದಡವ
ಗಡಿಸಿದನೆ ತಪ್ಪೇನೆನುತ ಕೈ
ಗಡಿಯ ಪವನಜನೆಚ್ಚು ಕರ್ಣನ ಧನುವ ಖಂಡಿಸಿದ (ದ್ರೋಣ ಪರ್ವ, ೧೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ರಥ ಸಾರಥಿಗಳು ಭೂಮಿಗೆ ಬೀಳಲು, ಕರ್ಣನು ಕಾಲಾಳಾಗಿ ಬಿಲ್ಲನ್ನು ಹಿಡಿದು ಭೀಮನನ್ನು ಬಾಣಗಳಿಂದ ಹೊಡೆದನು. ಇವನನ್ನು ಕತ್ತರಿಸದೆ, ಕರುಣೆಯಿಂದ ಉಳಿಸಿದರೆ ನನ್ನೊಡನೆ ಯುದ್ಧಕ್ಕೆ ಬಂದನೇ ತಪ್ಪೇನು ಎನ್ನುತ್ತಾ ಭೀಮನು ಕರ್ಣನ ಕೈಯಲ್ಲಿದ್ದ ಬಿಲ್ಲನ್ನು ಕತ್ತರಿಸಿದನು.

ಅರ್ಥ:
ಉಡಿ: ಮುರಿ, ತುಂಡು; ರಥ: ಬಂಡಿ; ಸಾರಥಿ: ಸೂತ; ಅವನಿ: ಭೂಮಿ; ಕೆಡೆ: ಬೀಳಿಸು; ಕಾಲಾಳು: ಸೈನಿಕ; ಬಿಡು: ತೊರೆ; ಥಟ್ಟ: ಪಕ್ಕ, ಕಡೆ; ಶರ: ಬಾಣ; ನಿಕರ: ಗುಂಪು; ರವಿ: ಸೂರ್ಯ; ಸೂನು: ಮಗ; ಕಡಿ: ಸೀಳು; ಬಿಸುಡು: ಹೊರಹಾಕು; ಕರುಣಿಸು: ದಯೆತೋರು; ಅವಗಡಿಸು: ಕಡೆಗಣಿಸು; ತಪ್ಪು: ಸರಿಯಿಲ್ಲದ್ದು; ಕಡಿ: ಸೀಳು; ಪವನಜ: ವಾಯುಪುತ್ರ (ಭೀಮ); ಎಚ್ಚು: ಬಾಣ ಪ್ರಯೋಗ ಮಾಡು; ಧನು: ಬಿಲ್ಲು; ಖಂಡಿಸು: ಸೀಳು;

ಪದವಿಂಗಡಣೆ:
ಉಡಿದು +ರಥ +ಸಾರಥಿಗಳ್+ಅವನಿಗೆ
ಕೆಡೆಯೆ +ಕಾಲಾಳಾಗಿ +ಭೀಮನ
ಬಿಡದೆ +ಥಟ್ಟೈಸಿದನು +ಶರ+ನಿಕರದಲಿ+ ರವಿಸೂನು
ಕಡಿದು +ಬಿಸುಡದೆ +ಕರುಣಿಸಿದಡ್+ಅವ
ಗಡಿಸಿದನೆ +ತಪ್ಪೇನ್+ಎನುತ +ಕೈ
ಕಡಿಯ +ಪವನಜನ್+ಎಚ್ಚು +ಕರ್ಣನ +ಧನುವ +ಖಂಡಿಸಿದ

ಅಚ್ಚರಿ:
(೧) ಉಡಿ, ಕಡಿ – ಪ್ರಾಸ ಪದ
(೨) ರವಿಸೂನು, ಪವನಜ – ಕರ್ಣ, ಭೀಮರನ್ನು ಕರೆದ ಪರಿ

ಪದ್ಯ ೨೫: ಭೀಮನು ಕರ್ಣನನ್ನು ಹೇಗೆ ಹಂಗಿಸಿದನು?

ತೋಳುವಲಕಿದಿರಿಲ್ಲ ಬಿನುಗು ನೃ
ಪಾಲನೆಲವೋ ಕರ್ಣ ಫಡ ಫಡ
ಮೇಳವಾದರೆ ಮೊಗೆವೆನರುಣಾಂಬುವನು ನಿನ್ನೊಡಲ
ಕೋಲ ಸುರಿ ಸುರಿಯೆನುತ ಕುರುಭೂ
ಪಾಲಕನ ಮದದಾನೆಯನು ಹೀ
ಹಾಳಿಗೆಡಿಸಿ ತುರಂಗ ರಥ ಸಾರಥಿಯ ಖಂಡಿಸಿದ (ದ್ರೋಣ ಪರ್ವ, ೧೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಮನು ತನ್ನ ಮಾತನ್ನು ಮುಂದುವರೆಸುತ್ತಾ, ಕರ್ಣಾ, ನೀನು ಬಡ ರಾಜ, ನನ್ನ ತೋಳ್ಬಲಕ್ಕೆ ಎದಿರೇ ಇಲ್ಲ. ಕೈಗೆ ಸಿಕ್ಕರೆ ನಿನ್ನ ಮೈಯ ರಕ್ತವನ್ನು ಕುಡಿಯುತ್ತೇನೆ. ಅದೆಷ್ಟು ಬಾಣಗಳನ್ನು ಸುರಿಯುವೆಯೋ ಸುರಿ, ಎನ್ನುತ್ತಾ ಭೀಮನು ಕೌರವನ ಮದದಾನೆಯಾದ ಕರ್ಣನನ್ನು ಹೀಯಾಳಿಸಿ ಅವನ ರಥ ಸಾರಥಿ ಕುದುರೆಗಳನ್ನು ಕತ್ತರಿಸಿ ಬಿಟ್ಟನು.

ಅರ್ಥ:
ತೋಳುವಲ: ಬಾಹುಬಲ; ಇದಿರು: ಎದುರು; ಬಿನುಗು: ಅಲ್ಪವ್ಯಕ್ತಿ, ಬಡವ; ನೃಪಾಲ: ರಾಜ; ಫಡ: ತಿರಸ್ಕಾರದ ಮಾತು; ಮೇಳ: ಗುಂಪು; ಮೊಗೆ: ಸೆರೆಹಿಡಿ, ಬಂಧಿಸು; ಅರುಣಾಂಬು: ರಕ್ತ; ಒಡಲು: ದೇಹ; ಕೋಲ: ಬಾಣ; ಸುರಿ: ವರ್ಷಿಸು; ಭೂಪಾಲ: ರಾಜ; ಮದದಾನೆ: ಸೊಕ್ಕಿದ ಆನೆ; ಹೀಹಾಳಿ: ಹೀಯಾಳಿಸು, ಹಂಗಿಸು; ಕೆಡಿಸು: ಹಾಳುಮಾಡು; ತುರಂಗ: ಅಶ್ವ; ರಥ: ಬಂಡಿ; ಸಾರಥಿ: ಸೂತ; ಖಂಡಿಸು: ತುಂಡುಮಾಡು;

ಪದವಿಂಗಡಣೆ:
ತೋಳುವಲಕ್+ಇದಿರಿಲ್ಲ +ಬಿನುಗು +ನೃ
ಪಾಲನ್+ಎಲವೋ +ಕರ್ಣ +ಫಡ +ಫಡ
ಮೇಳವಾದರೆ +ಮೊಗೆವೆನ್+ಅರುಣಾಂಬುವನು +ನಿನ್ನೊಡಲ
ಕೋಲ +ಸುರಿ +ಸುರಿಯೆನುತ ಕುರು+ಭೂ
ಪಾಲಕನ +ಮದದಾನೆಯನು +ಹೀ
ಹಾಳಿಗೆಡಿಸಿ +ತುರಂಗ +ರಥ +ಸಾರಥಿಯ +ಖಂಡಿಸಿದ

ಅಚ್ಚರಿ:
(೧) ಕರ್ಣನನ್ನು ಕುರುಭೂಪಾಲಕನ ಮದದಾನೆ
(೨) ಸಾಯಿಸುವೆ ಎಂದು ಹೇಳುವ ಪರಿ – ಮೇಳವಾದರೆ ಮೊಗೆವೆನರುಣಾಂಬುವನು ನಿನ್ನೊಡಲ

ಪದ್ಯ ೪೨: ದ್ರೋಣರು ಅರ್ಜುನನಲ್ಲಿ ಏನು ಬೇಡಿದರು?

ಆರಿವನು ಕಲಿಪಾರ್ಥನೇ ತ್ರಿಪು
ರಾರಿ ಹಿಡಿವಂಬಾಯಿತೆಂಬ ದೊ
ಠಾರನೇ ದೈತ್ಯಾರಿ ಸಾರಥಿಯೆಂಬ ಗರ್ವಿತನೆ
ಹಾರುವರು ನಾವಸ್ತ್ರವಿದ್ಯಾ
ಪಾರಗರು ನಾವಲ್ಲ ರಣದೌ
ದಾರಿಯವ ತೋರೆಮಗೆನುತ್ತಡಹಾಯ್ದನಾ ದ್ರೋಣ (ದ್ರೋಣ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಶಕಟವ್ಯೂಹದ ಮುಂಭಾಗದಲ್ಲಿ ನಿಂತಿದ್ದ ದ್ರೋಣನು ಅರ್ಜುನನಿಗೆ ಅಡ್ಡ ಬಂದು ಯಾರಿವನು? ವೀರನಾದ ಅರ್ಜುನನೇ? ಶಿವನ ಪಾಶುಪತಾಸ್ತ್ರವು ದೊರೆಯಿತೆಂಬ ಗರ್ವಿತನೇ? ಶ್ರೀಕೃಷ್ಣನು ಸಾರಥಿಯೆಂದು ಗರ್ವಿತನೇ? ಅರ್ಜುನಾ, ನಾವು ಬ್ರಾಹ್ಮಣರು, ಅಸ್ತ್ರವಿದ್ಯೆಯನ್ನೆಲ್ಲಾ ಕಲಿತವರೂ ನಾವಲ್ಲ, ಯುದ್ಧದಲ್ಲಿ ನಮ್ಮ ಮೇಲೆ ಔದಾರ್ಯವನ್ನು ತೋರಿಸು ಎಂದು ಯಾಚಿಸುತ್ತೇನೆ ಎಂದು ದ್ರೋಣರು ಬೇಡಿದರು.

ಅರ್ಥ:
ಆರು: ಯಾರು; ಕಲಿ: ಶೂರ; ತ್ರಿಪುರಾರಿ: ಶಿವ; ಹಿಡಿ: ಗ್ರಹಿಸು; ಅಂಬು: ಬಾಣ; ದೊಠಾರ: ಶೂರ, ಕಲಿ; ದೈತ್ಯ: ರಾಕ್ಷಸ; ಅರಿ: ವೈರಿ; ದೈತ್ಯಾರಿ: ಕೃಷ್ಣ; ಸಾರಥಿ: ಸೂತ; ಗರ್ವ:ಅಹಂಕಾರ; ಹಾರುವ: ಬ್ರಾಹ್ಮಣ; ಅಸ್ತ್ರ: ಶಸ್ತ್ರ; ಪಾರಗ: ಪಂಡಿತ, ನಿಪುಣ; ರಣ: ಯುದ್ಧ; ಔದಾರ್ಯ: ಉದಾರತೆ, ಘನತೆ; ತೋರು: ಗೋಚರಿಸು; ಅಡಹಾಯ್ದ: ಅಡ್ಡ ಬಂದು;

ಪದವಿಂಗಡಣೆ:
ಆರಿವನು +ಕಲಿ+ಪಾರ್ಥನೇ +ತ್ರಿಪು
ರಾರಿ+ ಹಿಡಿವ್+ಅಂಬಾಯಿತೆಂಬ +ದೊ
ಠಾರನೇ +ದೈತ್ಯಾರಿ +ಸಾರಥಿಯೆಂಬ +ಗರ್ವಿತನೆ
ಹಾರುವರು +ನಾವ್+ಅಸ್ತ್ರವಿದ್ಯಾ
ಪಾರಗರು +ನಾವಲ್ಲ +ರಣದ್
ಔದಾರಿಯವ +ತೋರ್+ಎಮಗ್+ಎನುತ್ತ್+ಅಡಹಾಯ್ದನಾ +ದ್ರೋಣ

ಅಚ್ಚರಿ:
(೧) ದ್ರೋಣನು ಬೇಡುವ ಪರಿ – ಹಾರುವರು ನಾವಸ್ತ್ರವಿದ್ಯಾಪಾರಗರು ನಾವಲ್ಲ ರಣದೌ
ದಾರಿಯವ ತೋರೆಮಗೆ

ಪದ್ಯ ೩೬: ಅಭಿಮನ್ಯುವು ಶಸ್ತ್ರಹೀನನಾದರೂ ಹೇಗೆ ಹೋರಾಡಿದನು?

ತುಡುಕುವರೆ ಧನುವಿಲ್ಲ ಮುಂದಡಿ
ಯಿಡಲು ಸಾರಥಿಯಿಲ್ಲ ರಥ ಕಡಿ
ವಡೆದುದಿನ್ನೆಂತೊದಗುವನೊ ಸುಕುಮಾರ ತಾನೆನುತ
ಪಡೆ ಬಿಡದೆ ಬೊಬ್ಬಿರಿಯೆ ಬೆದರದೆ
ಕಡುಗಿ ಖಡ್ಗವ ಕೊಂಡು ರಿಪುಗಳ
ಕಡಿದು ಹರಹುತ ಬೀದಿವರಿದನು ಕಣನ ಮಧ್ಯದಲಿ (ದ್ರೋಣ ಪರ್ವ, ೬ ಸಂಧಿ, ೩೬ ಪದ್ಯ)

ತಾತ್ಪರ್ಯ:
ಹಿಡಿಯಲು ಬಿಲ್ಲಿಲ್ಲ, ಮುಂದಕ್ಕೆ ಹೋಗೋಣವೆಂದರೆ ಅವನ ಬಳಿ ಸಾರಥಿಯಿಲ್ಲ. ರಥವು ಮುರಿದು ಬಿದ್ದಿದೆ, ಈಗ ಈ ಪರಾಕ್ರಮಿ ಕುಮಾರ ಹೇಗೆ ಯುದ್ಧ ಮಾಡುವನೋ ನೋಡೋಣ ಎಂದು ಕೌರವ ಸೈನ್ಯವು ಬೊಬ್ಬಿರಿದಿತು. ಅಭಿಮನ್ಯುವು ಹೆದರದೆ ಕತ್ತಿಯನ್ನು ಹಿಡಿದು ಶತ್ರುಗಳನ್ನು ಕಡಿಯುತ್ತಾ ರಣರಂಗದಲ್ಲಿ ತಿರುಗಾಡಿದನು.

ಅರ್ಥ:
ತುಡುಕು: ಹೋರಾಡು, ಸೆಣಸು; ಧನು: ಬಿಲ್ಲು; ಮುಂದೆ: ಎದುರು; ಅಡಿಯಿಡು: ಹೆಜ್ಜೆಹಾಕು; ಸಾರಥಿ: ಸೂತ; ರಥ: ಬಂಡಿ; ಕಡಿ: ಸೀಳು; ಒದಗು: ಲಭ್ಯ, ದೊರೆತುದು; ಸುಕುಮಾರ: ಪುತ್ರ; ಪಡೆ: ಸೈನ್ಯ; ಬಿಡು: ತ್ಯಜಿಸು; ಬೊಬ್ಬಿರಿ: ಕೂಗು; ಬೆದರು: ಹೆದರು; ಕಡು: ವಿಶೇಷವಾಗಿ, ಹೆಚ್ಚಾಗಿ; ಖಡ್ಗ: ಕತ್ತಿ; ರಿಪು: ವೈರಿ; ಕಡಿ: ಸೀಳು; ಹರಹು: ಹಬ್ಬುವಿಕೆ, ಪ್ರಸರ; ಬೀದಿಗ: ದಿಕ್ಕಿಲ್ಲದವ; ಅರಿ: ಚುಚ್ಚು; ಕಣ: ಯುದ್ಧರಂಗ; ಮಧ್ಯ: ನಡುವೆ;

ಪದವಿಂಗಡಣೆ:
ತುಡುಕುವರೆ +ಧನುವಿಲ್ಲ +ಮುಂದಡಿ
ಯಿಡಲು +ಸಾರಥಿಯಿಲ್ಲ +ರಥ +ಕಡಿ
ವಡೆದುದ್+ಇನ್ನೆಂತ್+ಒದಗುವನೊ +ಸುಕುಮಾರ +ತಾನೆನುತ
ಪಡೆ +ಬಿಡದೆ +ಬೊಬ್ಬಿರಿಯೆ +ಬೆದರದೆ
ಕಡುಗಿ +ಖಡ್ಗವ +ಕೊಂಡು +ರಿಪುಗಳ
ಕಡಿದು +ಹರಹುತ +ಬೀದಿವ್+ಅರಿದನು +ಕಣನ+ ಮಧ್ಯದಲಿ

ಅಚ್ಚರಿ:
(೧) ಅಭಿಮನ್ಯುವಿನ ಶೌರ್ಯ – ಬೆದರದೆ ಕಡುಗಿ ಖಡ್ಗವ ಕೊಂಡು ರಿಪುಗಳ ಕಡಿದು ಹರಹುತ ಬೀದಿವರಿದನು ಕಣನ ಮಧ್ಯದಲಿ

ಪದ್ಯ ೩೫: ಅಶ್ವತ್ಥಾಮನ ರಥವನ್ನು ಯಾರು ಕಡೆದರು?

ಎನಲು ಲಜ್ಜಿತನಾಗಿ ತಿರುಗಿದ
ನನುವರದಲೀ ಕರ್ಣನಾತನ
ಧನು ಮುರಿಯೆ ಕೈಕೊಂಡರೀ ದ್ರೋಣಾದಿ ನಾಯಕರು
ಕನಕ ರಥವನು ದ್ರೋಣನಾ ಗುರು
ತನುಜ ಸಾರಥಿಯನು ಕೃಪಾಚಾ
ರ್ಯನು ತುರಗವನು ಶಲ್ಯ ಕಡಿದನು ಭಟನ ಠೆಕ್ಕೆಯವ (ದ್ರೋಣ ಪರ್ವ, ೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಹೀಗೆ ನುಡಿಯಲು ಕರ್ಣನು ನಾಚಿಕೆಗೊಂಡು ಯುದ್ಧವನ್ನು ಬಿಟ್ಟು ಹೋದನು. ಅಭಿಮನ್ಯುವಿನ ಚಿನ್ನದ ರಥವನ್ನು ದ್ರೋಣನೂ, ಅಶ್ವತ್ಥಾಮನು ಸಾರಥಿಯನ್ನೂ, ಕೃಪನು ಕುದುರೆಗಳನ್ನೂ, ಶಲ್ಯನು ಧ್ವಜವನ್ನು ಕಡಿದು ಹಾಕಿದರು.

ಅರ್ಥ:
ಲಜ್ಜೆ: ನಾಚಿಕೆ; ತಿರುಗು: ಹಿಂದೆ ನೋಡು; ಅನುವರ: ಯುದ್ಧ; ಧನು: ಬಿಲ್ಲು; ಮುರಿ: ಸೀಳು; ನಾಯಕ: ಒಡೆಯ; ಕನಕ: ಚಿನ್ನ; ರಥ: ಬಂಡಿ; ಗುರು: ಆಚಾರ್ಯ; ತನುಜ: ಮಗ; ಸಾರಥಿ: ಸೂತ; ತುರಗ: ಕುದುರೆ; ಕಡಿ: ಸೀಳು; ಭಟ: ಪರಾಕ್ರಮಿ; ಠೆಕ್ಕೆ: ಬಾವುಟ;

ಪದವಿಂಗಡಣೆ:
ಎನಲು +ಲಜ್ಜಿತನಾಗಿ +ತಿರುಗಿದನ್
ಅನುವರದಲೀ +ಕರ್ಣನ್+ಆತನ
ಧನು +ಮುರಿಯೆ +ಕೈಕೊಂಡರ್+ಈ+ ದ್ರೋಣಾದಿ +ನಾಯಕರು
ಕನಕ +ರಥವನು +ದ್ರೋಣನ್+ಆ+ ಗುರು
ತನುಜ +ಸಾರಥಿಯನು +ಕೃಪಾಚಾ
ರ್ಯನು +ತುರಗವನು +ಶಲ್ಯ +ಕಡಿದನು +ಭಟನ +ಠೆಕ್ಕೆಯವ

ಅಚ್ಚರಿ:
(೧) ಯುದ್ಧದಿಂದ ಹಿಂದಿರುಗಿದ ಎಂದು ಹೇಳಲು – ತಿರುಗಿದನನುವರದಲೀ ಕರ್ಣನ್

ಪದ್ಯ ೫೧: ಅಭಿಮನ್ಯುವನ್ನು ಮತ್ತೆ ಯಾರು ತಡೆದರು?

ಅಹಹ ಕೈತಪ್ಪಾಯ್ತು ರಾಯನ
ಸಹಭವನು ನೊಂದನು ಶಿವಾ ಎನು
ತಹಿತ ಸುಭಟರು ಸರಿಯೆ ಸಾರಥಿ ತಿರುಹಿದನು ರಥವ
ಬಹಳ ಬಲ ನುಗ್ಗಾಯ್ತು ಶಿಶುವಿನ
ಸಹಸ ಕುಂದದೆನುತ್ತ ಖತಿಯಲಿ
ಮಿಹಿರಸುತನಡಹಾಯ್ದು ತಡೆದನು ಮತ್ತೆ ಬಾಲಕನ (ದ್ರೋಣ ಪರ್ವ, ೫ ಸಂಧಿ, ೫೧ ಪದ್ಯ)

ತಾತ್ಪರ್ಯ:
ಅಯ್ಯೋ ತಪ್ಪಾಯಿತೇ, ದೊರೆಯ ತಮ್ಮನು ನೊಂದನು ಎಂದು ಕೌರವ ಸೈನ್ಯವು ಹಿಂದಕ್ಕೆ ಸರಿಯಿತು. ದುಶ್ಯಾಸನನ ರಥವನ್ನು ಸಾರಥಿಯು ಹಿಂದಕ್ಕೆ ಸರಿಸಿದನು. ಇದನ್ನು ನೋಡಿದ ಕರ್ಣನು, ಬಹಳ ಸೈನ್ಯವು ನಾಶವಾಯಿತು, ಅಭಿಮನ್ಯುವಿನ ಪರಾಕ್ರಮವು ಇನ್ನು ಕಡಿಮೆಯಾಗಲಿಲ್ಲ ಎಂದು ಮತ್ತೆ ಅವನನ್ನು ಅಡ್ಡಗಟ್ಟಿದನು.

ಅರ್ಥ:
ತಪ್ಪು: ಸರಿಯಿಲ್ಲದ; ರಾಯ: ರಾಜ; ಸಹಭವ: ಜೊತೆಯಲ್ಲಿ ಹುಟ್ಟಿದ; ನೊಂದು: ನೋವನ್ನುಂಡು; ಅಹಿತ: ವೈರಿ; ಸುಭಟ: ಪರಾಕ್ರಮಿ; ಸರಿ: ಸಮಾನ, ಸದೃಶ, ಸಾಟಿ; ಸಾರಥಿ: ಸೂತ; ತಿರುಹು: ತಿರುಗಿಸು; ರಥ: ಬಂಡಿ; ಬಲ: ಸೈನ್ಯ; ನುಗ್ಗು: ತಳ್ಳು; ಶಿಶು: ಮಗು; ಸಹಸ: ಪರಾಕ್ರಮ; ಕುಂದು: ಬತ್ತು; ಖತಿ: ಕೋಪ; ಮಿಹಿರ: ಸೂರ್ಯ; ಸುತ: ಮಗ; ಅಡಹಾಯ್ದು: ಅಡ್ಡ ಬಂದು; ತಡೆ: ನಿಲ್ಲುಸು; ಬಾಲಕ: ಚಿಕ್ಕವ;

ಪದವಿಂಗಡಣೆ:
ಅಹಹ+ ಕೈ+ತಪ್ಪಾಯ್ತು +ರಾಯನ
ಸಹಭವನು+ ನೊಂದನು +ಶಿವಾ +ಎನುತ್
ಅಹಿತ +ಸುಭಟರು +ಸರಿಯೆ +ಸಾರಥಿ+ ತಿರುಹಿದನು +ರಥವ
ಬಹಳ +ಬಲ +ನುಗ್ಗಾಯ್ತು +ಶಿಶುವಿನ
ಸಹಸ+ ಕುಂದದ್+ಎನುತ್ತ +ಖತಿಯಲಿ
ಮಿಹಿರಸುತನ್+ಅಡಹಾಯ್ದು +ತಡೆದನು +ಮತ್ತೆ +ಬಾಲಕನ

ಅಚ್ಚರಿ:
(೧) ತಮ್ಮ ಎಂದು ಹೇಳಲು ಸಹಭವನು ಪದದ ಬಳಕೆ
(೨) ಕರ್ಣನನ್ನು ಮಿಹಿರಸುತ ಎಂದು ಕರೆದಿರುವುದು

ಪದ್ಯ ೪೧: ಅಭಿಮನ್ಯುವು ದುಶ್ಯಾಸನನ ಸೈನ್ಯವನ್ನು ಹೇಗೆ ಸೋಲಿಸಿದನು?

ತಿರುಹು ತೇಜಿಯನಿತ್ತಲಿವದಿರ
ನೊರಸಿ ದುಶ್ಯಾಸನನ ಬೆನ್ನಲಿ
ಕರುಳ ತೆಗೆವೆನು ನೋಡು ಸಾರಥಿ ಬೆಚ್ಚಬೇಡೆನುತ
ಅರಗಿನರಸನ ಬಾಗಿಲಲಿ ದ
ಳ್ಳುರಿಗೆ ತಡವೇ ಹೊಕ್ಕು ನಿಮಿಷದೊ
ಳೊರಸಿದನು ಚತುರಂಗ ಬಲವನು ಕೌರವಾನುಜನ (ದ್ರೋಣ ಪರ್ವ, ೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ದುಶ್ಯಾಸನನನ್ನು ನೋಡಿ ಅಭಿಮನ್ಯುವು ತನ್ನ ಸಾರಥಿಗೆ, “ಕುದುರೆಗಲನ್ನು ಇವನ ರಥದತ್ತ ತಿರುಗಿಸು, ದುಶ್ಯಾಸನನ ಬೆನ್ನಿನಲ್ಲಿ ಕರುಳನ್ನು ತೆಗೆಯುತ್ತೇನೆ, ಸಾರಥಿ ನೀನು ಹೆದರಬೇಡ ಎಂದು ಹೇಳಿದನು. ಅರಗಿನ ರಾಜನ ಹೆಬ್ಬಾಗಿಲನ್ನು ಹೋಗಲು ಉರಿಗೆ ಯಾವ ಅಡ್ಡಿ, ಒಂದು ನಿಮಿಷದಲ್ಲಿ ದುಶ್ಯಾಸನನ ಸುತ್ತಲಿದ್ದ ಚತುರಂಗ ಸೈನ್ಯವನ್ನು ನಿರ್ನಾಮ ಮಾಡಿದನು.

ಅರ್ಥ:
ತಿರುಹು: ತಿರುಗಿಸು, ಹಿಂದಿರುಗು; ತೇಜಿ: ಕುದುರೆ; ಇವದಿರ: ಇಷ್ಟು ಜನ; ಒರಸು: ನಾಶಮಾಡು; ಬೆನ್ನು: ಹಿಂಬದಿ; ಕರುಳು: ಪಾನಾಂಗ; ತೆಗೆ: ಹೊರತರು; ನೋಡು: ವೀಕ್ಷಿಸು; ಸಾರಥಿ: ಸೂತ; ಬೆಚ್ಚು: ಹೆದರು; ಅರಗು: ಮೇಣ, ಲಾಕ್ಷ; ಅರಸ: ರಾಜ; ಬಾಗಿಲು: ಕದ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ತಡ: ನಿಧಾನ; ಹೊಕ್ಕು: ಸೇರು; ನಿಮಿಷ: ಕ್ಷಣ ಮಾತ್ರ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಅನುಜ: ತಮ್ಮ;

ಪದವಿಂಗಡಣೆ:
ತಿರುಹು +ತೇಜಿಯನ್+ಇತ್ತಲ್+ಇವದಿರನ್
ಒರಸಿ +ದುಶ್ಯಾಸನನ +ಬೆನ್ನಲಿ
ಕರುಳ +ತೆಗೆವೆನು +ನೋಡು +ಸಾರಥಿ+ ಬೆಚ್ಚಬೇಡೆನುತ
ಅರಗಿನ್+ಅರಸನ +ಬಾಗಿಲಲಿ +ದ
ಳ್ಳುರಿಗೆ +ತಡವೇ +ಹೊಕ್ಕು +ನಿಮಿಷದೊಳ್
ಒರಸಿದನು +ಚತುರಂಗ +ಬಲವನು+ ಕೌರವ+ಅನುಜನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅರಗಿನರಸನ ಬಾಗಿಲಲಿ ದಳ್ಳುರಿಗೆ ತಡವೇ

ಪದ್ಯ ೬೪: ಕೃಷ್ಣನು ಅರ್ಜುನನು ಮರುಳಾದನೆಂದೇಕೆ ಹೇಳಿದನು?

ಕಾದುವಾತನು ನೀನು ವೈರಿಯ
ಕೈದುವನು ನೀ ಗೆಲಿದೆಯಿನ್ನುರೆ
ಕಾದುವವರಾವಲ್ಲ ಸಾರಥಿತನವೆ ಸಾಕೆಮಗೆ
ಕೈದುವಿದೆಕೋ ಕೃಷ್ನನೀನೇ
ಕಾದು ವಾಘೆಯ ತಾಯೆನಲು ಮರು
ಳಾದನೈ ನರನೆನುತ ನಗುತ ಮುರಾರಿಯಿಂತೆಂದ (ದ್ರೋಣ ಪರ್ವ, ೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣಾ ಯುದ್ಧಮಾದುತ್ತಿರುವವನು ನೀನೇ, ವೈರಿಯು ಪ್ರಯೋಗಿಸಿದ ಆಯುಧವನ್ನು ನೀನೇ ಗೆದ್ದೆ, ಹಾಗಿರುವಾಗ ಇನ್ನು ಮುಂದೆ ನಾನು ಯುದ್ಧಮಾಡುವುದಿಲ್ಲ. ನನಗೆ ಸಾರಥಿತನವೇ ಸಾಕು. ಕೃಷ್ಣಾ ಈ ಆಯುಧಗಳನ್ನು ತೆಗೆದುಕೋ, ಕುದುರೆಯ ಲಗಾಮುಗಳನ್ನು ನನ್ನ ಕೈಗೆ ಕೊಡು ಎಂದು ಅರ್ಜುನನು ಹೇಳಲು, ಅರ್ಜುನನಿಗೆ ಹುಚ್ಚು ಹಿಡಿಯಿತು ಎಂದು ನಗುತ್ತಾ ಕೃಷ್ಣನು ಹೀಗೆ ನುಡಿದನು.

ಅರ್ಥ:
ಕಾದು: ಹೋರಾಟ, ಯುದ್ಧ; ವೈರಿ: ಶತ್ರು; ಕೈದು: ಆಯುಧ, ಶಸ್ತ್ರ; ಗೆಲಿದು: ಜಯಿಸು; ಉರೆ: ಅತಿಶಯವಾಗಿ; ಕಾದು:ಹೋರಾಟ, ಯುದ್ಧ; ಸಾರಥಿ: ಸೂತ; ಸಾಕು: ಇನ್ನು ಬೇಡ; ವಾಘೆ: ಲಗಾಮು; ತಾ: ಕೊಂಡು ಬಾ; ಮರುಳು: ಬುದ್ಧಿಭ್ರಮೆ; ನರ: ಅರ್ಜುನ; ನಗು: ಹರ್ಷ; ಮುರಾರಿ: ಕೃಷ್ಣ;

ಪದವಿಂಗಡಣೆ:
ಕಾದುವಾತನು +ನೀನು +ವೈರಿಯ
ಕೈದುವನು +ನೀ +ಗೆಲಿದೆ+ಇನ್ನುರೆ
ಕಾದುವವರಾವಲ್ಲ +ಸಾರಥಿತನವೆ+ ಸಾಕೆಮಗೆ
ಕೈದುವಿದೆಕೋ +ಕೃಷ್ಣ+ನೀನೇ
ಕಾದು +ವಾಘೆಯ +ತಾಯೆನಲು +ಮರು
ಳಾದನೈ +ನರನೆನುತ +ನಗುತ+ ಮುರಾರಿ+ಇಂತೆಂದ

ಅಚ್ಚರಿ:
(೧) ಕಾದು – ೧, ೩, ೫ ಪದ್ಯದ ಮೊದಲ ಪದ, ಕಾದು – ೨, ೪ ಮೊದಲ ಪದ
(೨) ಅರ್ಜುನನನ್ನು ಸ್ನೇಹದಲಿ ಮಾತನಾಡಿಸುವ ಪರಿ – ಮರುಳಾದನೈ ನರನೆನುತ ನಗುತ ಮುರಾರಿಯಿಂತೆಂದ