ಪದ್ಯ ೧: ಯಾವ ಜನರು ಧರ್ಮಜನನ್ನು ನೋಡಲು ಬಂದರು?

ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಗಿರಿ ತೊಡಗಿ ಸಾಗರ
ವೇಲೆ ಪರಿಯಂತಖಿಳ ನಗರ ಗ್ರಾಮ ಪುರವರದ
ಮೇಲುವರ್ಣಪ್ರಮುಖವಾ ಚಾಂ
ಡಾಲರವಧಿ ಸಮಸ್ತ ಭೂಜನ
ಜಾಲ ಹಸ್ತಿನಪುರಿಗೆ ಬಂದುದು ಕಂಡುದವನಿಪನ (ಗದಾ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹಿಮಗಿರಿಯಿಂದ ಸಮುದ್ರದವರೆಗಿರುವ ಎಲ್ಲಾ ನಗರಗಲ ಗ್ರಾಮಗಲ ಎಲ್ಲಾ ವರ್ಣಗಳ ಎಲ್ಲಾ ಜನರೂ ಹಸ್ತಿನಾಪುರಕ್ಕೆ ಬಂದು ಯುಧಿಷ್ಠಿರನನ್ನು ಕಂಡು ಕಾಣಿಕೆ ನೀಡಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಹಿಮಗಿರಿ: ಹಿಮಾಲಯ; ತೊಡಗು: ಒದಗು; ಸಾಗರ: ಸಮುದ್ರ; ಪರಿಯಂತ: ವರೆಗೂ; ನಗರ: ಪುರ; ಗ್ರಾಮ: ಹಳ್ಳಿ; ಪುರ: ಊರು; ವರ್ಣ: ಬಣ, ಪಂಗಡ; ಪ್ರಮುಖ: ಮುಖ್ಯ; ಅವಧಿ: ಕಾಲ; ಸಮಸ್ತ: ಎಲ್ಲಾ; ಭೂ: ಭೂಮಿ; ಜನ: ಗುಂಪು; ಜಾಲ: ಗುಂಪು; ಬಂದು: ಆಗಮಿಸು; ಅವನಿಪ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಹಿಮಗಿರಿ +ತೊಡಗಿ +ಸಾಗರ
ವೇಲೆ +ಪರಿಯಂತ್+ಅಖಿಳ +ನಗರ +ಗ್ರಾಮ +ಪುರವರದ
ಮೇಲುವರ್ಣನ+ಪ್ರಮುಖವಾ+ ಚಾಂ
ಡಾಲರ್+ಅವಧಿ +ಸಮಸ್ತ+ ಭೂಜನ
ಜಾಲ +ಹಸ್ತಿನಪುರಿಗೆ +ಬಂದುದು +ಕಂಡುದ್+ಅವನಿಪನ

ಅಚ್ಚರಿ:
(೧) ಧರಿತ್ರೀಪಾಲ, ಅವನಿಪ – ಸಮಾನಾರ್ಥಕ ಪದ
(೨) ಭಾರತದ ವಿಸ್ತಾರವನ್ನು ಹೇಳುವ ಪರಿ – ಹಿಮಗಿರಿ ತೊಡಗಿ ಸಾಗರವೇಲೆ ಪರಿಯಂತ

ಪದ್ಯ ೭: ಕೌರವಸೇನೆಯು ಹೇಗೆ ಕಂಡಿತು?

ಹತ್ತು ಸಾವಿರದೇಳುನೂರರು
ವತ್ತು ಗಜ ಹನ್ನೊಂದು ಸಾವಿರ
ಹತ್ತಿದವು ರಥವೆರಡು ಲಕ್ಕವನೆಣಿಸಿದರು ಹಯವ
ಪತ್ತಿ ಮೂರೇ ಕೋಟಿಯದು ಕೈ
ವರ್ತಿಸಿತು ದಳಪತಿಗೆ ಸಾಗರ
ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ (ಶಲ್ಯ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ಹತ್ತು ಸಾವಿರದ ಏಳುನೂರು ಅರವತ್ತು ಆನೆಗಳು, ಹನ್ನೊಂದು ಸಾವಿರ ರಥಗಳು, ಒಂದು ಲಕ್ಷ ಕುದುರೆಗಳು, ಮೂರು ಕೋಟಿ ಕಾಲಾಳುಗಳು, ಶಲ್ಯನ ಆಜ್ಞೆಯನ್ನು ಕಾದು ನಿಂತರು ಸಾಗರದಂತಿದ್ದ ಕೌರವಸೇನೆ ಬತ್ತಿಹೋಗಿ ತಳದಲ್ಲಿ ನಿಂತ ನೀರಿನಂತೆ ಕಾಣಿಸಿತು.

ಅರ್ಥ:
ಸಾವಿರ: ಸಹಸ್ರ; ಗಜ: ಆನೆ; ಹತ್ತು: ಮೇಲೇರು; ರಥ: ಬಂಡಿ; ಎಣಿಸು: ಲೆಕ್ಕ ಹಾಕು; ಹಯ: ಕುದುರೆ; ಪತ್ತಿ: ಪದಾತಿ; ವರ್ತಿಸು: ಚಲಿಸು, ಗಮಿಸು; ದಳಪತಿ: ಸೇನಾಧಿಪತಿ; ಸಾಗರ: ಸಮುದ್ರ; ಬತ್ತು: ಬರಡಾಗು; ನಿಂದು: ನಿಲ್ಲು; ನೀರು: ಜಲ;

ಪದವಿಂಗಡಣೆ:
ಹತ್ತು+ ಸಾವಿರದ್+ಏಳುನೂರ್
ಅರುವತ್ತು +ಗಜ +ಹನ್ನೊಂದು +ಸಾವಿರ
ಹತ್ತಿದವು +ರಥವೆರಡು +ಲಕ್ಕವನ್+ಎಣಿಸಿದರು +ಹಯವ
ಪತ್ತಿ +ಮೂರೇ +ಕೋಟಿಯದು +ಕೈ
ವರ್ತಿಸಿತು +ದಳಪತಿಗೆ+ ಸಾಗರ
ಬತ್ತಲ್+ಎಡೆಯಲಿ +ನಿಂದ +ನೀರವೊಲಾಯ್ತು +ಕುರುಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಾಗರ ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ
(೨) ಹತ್ತು, ನೂರು, ಸಾವಿರ, ಲಕ್ಕ, ಕೋಟಿ – ಎಣಿಕೆಯ ಬಳಕೆ

ಪದ್ಯ ೬೪: ದ್ರೋಣನು ಸೇನೆಯ ಮೇಲೆ ಹೇಗೆ ಎಗರಿದನು?

ಬಿಲುದುಡುಕಿ ಬಲುಸರಳ ತಿರುವಾಯ್
ಗೊಳಿಸಿ ಮಲೆತನು ಮಾರ್ಬಲಕೆ ಬಲೆ
ಕಳಚಿದರೆ ಮೃಗ ಬಿದ್ದುದಿರುಬಿನ ಕುಳಿಯೊಳೆಂಬಮ್ತೆ
ತಿಳುಹಿ ಹೋದರು ಮುನಿಗಳೀತನ
ತಿಳಿವು ತೊಟ್ಟುದು ಮರವೆಯನು ಮುಂ
ಕೊಳಿಸಿ ಮೊಗೆದನು ಮತ್ತೆ ಪಾಂಡವಸೈನ್ಯಸಾಗರವ (ದ್ರೋಣ ಪರ್ವ, ೧೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ದ್ರೋಣನು ಬಿಲ್ಲನ್ನು ಹಿಡಿದು ಹೆದೆಗೆ ಬಾನವನ್ನೇರಿಸಿ ಶತ್ರುಸೇನೆಗೆ ಇದಿರಾದನು. ಬಲೆ ಹರಿದ ಮೃಗ ಹೊರಬಂದು ಇಕ್ಕಟ್ಟಾದ ಗುಂಡಿಯಲ್ಲಿ ಬಿದ್ದಂತೆ ಯುದ್ಧತಾಮಸದಿಂದ ಮತಿಗೆಟ್ಟನು. ಮುನಿಗಳು ಬಂದು ಬೋಧಿಸಿ ಹೋದರೂ, ಜ್ಞಾನವನ್ನು ಮರೆವು ಆವರಿಸಲು ಪಾಂಡವ ಸೈನ್ಯ ಸಾಗರವನ್ನು ಸಂಹರಿಸಲು ಆರಂಭಿಸಿದನು.

ಅರ್ಥ:
ದುಡುಕು: ಆಲೋಚನೆ ಮಾಡದೆ ಮುನ್ನುಗ್ಗುವುದು; ಬಲು: ಹೆಚ್ಚು; ಸರಳ: ಬಾಣ; ಮಲೆತ: ಗರ್ವಿಸಿದ, ಸೊಕ್ಕಿದ; ಪ್ರತಿಭಟಿಸಿದ; ಮಾರ್ಬಲ: ಶತ್ರು ಸೈನ್ಯ; ಬಲೆ: ಜಾಲ; ಕಳಚು: ಬೇರ್ಪಡಿಸು; ಮೃಗ: ಪ್ರಾಣಿ; ಬಿದ್ದು: ಬೀಳು; ಇರುಬು: ಇಕ್ಕಟ್ಟು ; ಕುಳಿ: ಗುಂಡಿ, ಗುಣಿ, ಹಳ್ಳ; ಮುನಿ: ಋಷಿ; ತಿಳಿವು: ಅರಿವು; ತೊಟ್ಟು: ಮೊದಲಾಗಿ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಮೊಗೆ: ಮಣ್ಣಿನ ಗಡಿಗೆ; ಸಾಗರ: ಸಮುದ್ರ;

ಪದವಿಂಗಡಣೆ:
ಬಿಲುದುಡುಕಿ +ಬಲುಸರಳ +ತಿರುವಾಯ್
ಗೊಳಿಸಿ +ಮಲೆತನು +ಮಾರ್ಬಲಕೆ +ಬಲೆ
ಕಳಚಿದರೆ+ ಮೃಗ +ಬಿದ್ದುದ್+ಇರುಬಿನ+ ಕುಳಿಯೊಳೆಂಬಂತೆ
ತಿಳುಹಿ +ಹೋದರು +ಮುನಿಗಳ್+ಈತನ
ತಿಳಿವು +ತೊಟ್ಟುದು +ಮರವೆಯನು+ ಮುಂ
ಕೊಳಿಸಿ +ಮೊಗೆದನು +ಮತ್ತೆ +ಪಾಂಡವ+ಸೈನ್ಯ+ಸಾಗರವ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮರವೆಯನು ಮುಂಕೊಳಿಸಿ ಮೊಗೆದನು ಮತ್ತೆ

ಪದ್ಯ ೫: ಘಟೋತ್ಕಚನು ಹೇಗೆ ಯುದ್ಧವನ್ನು ಮಾಡಿದನು?

ಅಗಡು ದಾನವನಿವನು ಕಡ್ಡಿಗೆ
ಬಗೆವನೇ ಸಾಗರವನರವ
ಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು
ಹೊಗೆದುದೈ ಹೆಚ್ಚಾಳುಗಳ ನಗೆ
ಮೊಗವು ಮೋಡಾಮೋಡಿಯಲಿ ಕೈ
ಮಗುಚಿ ಕಳೆದನು ನಿಮಿಷದಲಿ ಹೇರಾಳ ರಾಶಿಗಳ (ದ್ರೋಣ ಪರ್ವ, ೧೬ ಸಂಧಿ, ೫ ಪದ್ಯ)

ತಾತ್ಪರ್ಯ:
ಅರವಟ್ಟಿಗೆಯಲ್ಲಿ ಸಾಗರವನ್ನಿಟ್ಟಾಗ ಅದನ್ನು ಕುಡಿಯಲು ಬಂಡ ವಡಬನಂತೆ, ಶತ್ರುಗಳ ಮುತ್ತಿಗೆಯನ್ನು ಘಟೋತ್ಕಚನು ಲೆಕ್ಕಿಸಲೇ ಇಲ್ಲ. ಮುತ್ತಿದ ವೀರರ ಮುಖಗಳು ಕಪ್ಪಾದವು. ಸೊಗಸಾದ ಕೈಚಳಕದಿಂದ ನಿಮಿಷ ಮಾತ್ರದಲ್ಲಿ ಅನೇಕ ಯೋಧರ ಗುಂಪುಗಳನ್ನು ಎತ್ತಿಹಾಕಿ ಸಂಹರಿಸಿದನು.

ಅರ್ಥ:
ಅಗಡು: ತುಂಟತನ; ದಾನವ: ರಾಕ್ಷಸ; ಕಡ್ಡಿ: ಸಣ್ಣ ಸಿಗುರು, ಚಿಕ್ಕದೇಟು; ಬಗೆ: ಯೋಚಿಸು; ಸಾಗರ: ಸಮುದ್ರ; ಅರವಟ್ಟಿಗೆ: ದಾರಿಹೋಕರಿಗೆ ನೀರು ಪಾನಕ, ಆಹಾರ, ಇತ್ಯಾದಿ ಕೊಡುವ ಸ್ಥಳ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ನೀರು: ಜಲ; ಕುಡಿ: ಪಾನ ಮಾದು; ಹೊಗೆ: ಸುಡು, ದಹಿಸು; ಹೆಚ್ಚು: ಅಧಿಕ; ಆಳು: ಸೈನಿಕ; ನಗೆ: ಹರ್ಷ; ಮೊಗ: ಮುಖ; ಮೋಡ: ಮುಗಿಲು, ಮೇಘ; ಮೋಡಿ: ರೀತಿ, ಶೈಲಿ; ಮಗುಚು: ಹಿಂದಿರುಗಿಸು, ಮರಳಿಸು; ನಿಮಿಷ: ಕ್ಷನ; ಹೇರಾಳ: ಹೆಚ್ಚು; ರಾಶಿ: ಗುಂಪು;

ಪದವಿಂಗಡಣೆ:
ಅಗಡು +ದಾನವನ್+ಇವನು +ಕಡ್ಡಿಗೆ
ಬಗೆವನೇ +ಸಾಗರವನ್+ಅರವ
ಟ್ಟಿಗೆಯನಿಟ್ಟರೆ +ವಡಬನಲ್ಲಾ +ನೀರ +ಕುಡಿವವನು
ಹೊಗೆದುದೈ +ಹೆಚ್ಚಾಳುಗಳ +ನಗೆ
ಮೊಗವು +ಮೋಡಾಮೋಡಿಯಲಿ +ಕೈ
ಮಗುಚಿ +ಕಳೆದನು +ನಿಮಿಷದಲಿ +ಹೇರಾಳ +ರಾಶಿಗಳ

ಅಚ್ಚರಿ:
(೧) ರೂಪಕದ ಪ್ರಯೋಗ – ಅಗಡು ದಾನವನಿವನು ಕಡ್ಡಿಗೆ ಬಗೆವನೇ ಸಾಗರವನರವ
ಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು

ಪದ್ಯ ೪೧: ಕರ್ಣನು ಮತ್ತೆ ಯುದ್ಧಕ್ಕೆ ಹೇಗೆ ಬಂದನು?

ರಥವ ಮೇಳೈಸಿದನು ಹೊಸ ಸಾ
ರಥಿಯ ಕರಸಿದನಾಹವದೊಳತಿ
ರಥಭಯಂಕರನೇರಿದನು ಬಲುಬಿಲ್ಲನೊದರಿಸುತ
ಪೃಥುವಿ ನೆಗ್ಗಲು ಸುಭಟ ಸಾಗರ
ಮಥನ ಕರ್ಣನು ಭೀಮಸೇನನ
ರಥವನರಸುತ ಬಂದು ಪುನರಪಿ ಕಾಳೆಗವ ಹಿಡಿದ (ದ್ರೋಣ ಪರ್ವ, ೧೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅತಿರಥ ಭಯಂಕರನಾದ ಕರ್ಣನು ಹೊಸ ರಥವನ್ನು ಜೋಡಿಸಿದನು. ಹೊಸ ಸಾರಥಿಯನ್ನು ಕರೆಸಿಕೊಂಡನು. ರಥವನ್ನೇರಿ ಹೆದೆಯನ್ನು ಧ್ವನಿಮಾಡಿ, ಭೂಮಿ ಕುಸಿಯುವ ವೇಗದಿಂದ ಸುಭಟ ಸಮುದ್ರವನ್ನು ಕಡೆಯಬಲ್ಲ ಕರ್ಣನು ಭೀಮನ ರಥವನ್ನು ಹುಡುಕುತ್ತಾ ಬಂದು ಅವನೊಡನೆ ಯುದ್ಧವನ್ನಾರಂಭಿಸಿದನು.

ಅರ್ಥ:
ರಥ: ಬಂಡಿ; ಮೇಳೈಸು: ಸೇರು, ಜೊತೆಯಾಗು; ಹೊಸ: ನವೀನ; ಸಾರಥಿ: ಸೂತ; ಕರಸು: ಬರೆಮಾಡು; ಆಹವ: ಯುದ್ಧ; ಅತಿರಥ: ಪರಾಕ್ರಮಿ; ಭಯಂಕರ: ಸಾಹಸಿ, ಗಟ್ಟಿಗ; ಏರು: ಹೆಚ್ಚಾಗು; ಬಲು: ಬಹಳ; ಬಿಲ್ಲು: ಚಾಪ, ಧನುಸ್ಸು; ಒದರು: ಗುಂಪು, ತೊಡಕು; ಪೃಥು: ಭೂಮಿ; ನೆಗ್ಗು: ಕುಗ್ಗು, ಕುಸಿ; ಸುಭಟ: ಪರಾಕ್ರಮಿ; ಸಾಗರ: ಸಮುದ್ರ; ಮಥನ: ಕಡೆಯುವುದು, ಮಂಥನ; ಅರಸು: ಹುಡುಕು; ಬಂದು: ಆಗಮಿಸು; ಪುನರಪಿ: ಪುನಃ; ಕಾಳೆಗ: ಯುದ್ಧ; ಹಿಡಿ: ಗ್ರಹಿಸು;

ಪದವಿಂಗಡಣೆ:
ರಥವ +ಮೇಳೈಸಿದನು +ಹೊಸ +ಸಾ
ರಥಿಯ +ಕರಸಿದನ್+ಆಹವದೊಳ್+ಅತಿ
ರಥ+ಭಯಂಕರನ್+ಏರಿದನು +ಬಲುಬಿಲ್ಲನ್+ಒದರಿಸುತ
ಪೃಥುವಿ +ನೆಗ್ಗಲು +ಸುಭಟ +ಸಾಗರ
ಮಥನ+ ಕರ್ಣನು +ಭೀಮಸೇನನ
ರಥವನ್+ಅರಸುತ +ಬಂದು +ಪುನರಪಿ +ಕಾಳೆಗವ +ಹಿಡಿದ

ಅಚ್ಚರಿ:
(೧) ರಥ, ಅತಿರಥ – ಪ್ರಾಸ ಪದ
(೨) ಕರ್ಣನ ಶಕ್ತಿ – ಸುಭಟ ಸಾಗರ ಮಥನ ಕರ್ಣನು

ಪದ್ಯ ೩೫: ಅರ್ಜುನನು ಏನೆಂದು ಪ್ರಮಾಣ ಮಾಡಿದನು?

ಹರನ ದುರ್ಗದಲಿರಲಿ ಮೇಣಾ
ಹರಿಯ ಕಡಲೊಳಗಿರಲಿ ಬ್ರಹ್ಮನ
ಕರಕಮಂಡಲದೊಳಗೆ ಹುದುಗಲಿ ರವಿಯ ಮರೆಹೊಗಲಿ
ಉರಗ ಭುವನದೊಳಿರಲಿ ಮೇಣ್ ಸಾ
ಗರವ ಮುಳುಗಲಿ ನಾಳೆ ಪಡುವಣ
ತರಣಿ ತೊಲಗದ ಮುನ್ನ ಕೊಲುವೆನು ವೈರಿ ಸೈಂಧವನ (ದ್ರೋಣ ಪರ್ವ, ೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸೈಂಧವನು ಶಿವನ ಕೋಟೆಯಲ್ಲಿರಲಿ, ವಿಷ್ಣುವಿನ ಕ್ಷೀರಸಾಗರದೊಳಗಿರಲಿ, ಬ್ರಹ್ಮನ ಕೈಯಲ್ಲಿರುವ ಕಮಂಡಲದೊಳಗಿರಲಿ, ಸೂರ್ಯನಿಗೆ ಶರಣಾಗಲಿ, ಪಾತಾಳದಲ್ಲಿರಲಿ, ಸಾಗರದಲ್ಲಿ ಮುಳುಗಿರಲಿ, ನಾಳೆ ಸೂರ್ಯನು ಮುಳುಗುವುದರೊಳಗೆ ನನ್ನ ವೈರಿ ಸೈಂಧವನನ್ನು ಸಾಯಿಸುತ್ತೇನೆ ಎಂದು ಅರ್ಜುನನು ಪ್ರಮಾಣ ಮಾಡಿದನು.

ಅರ್ಥ:
ಹರ: ಈಶ್ವರ; ದುರ್ಗ: ಕೋಟೆ; ಮೇಣ್: ಅಥವ; ಹರಿ: ವಿಷ್ಣು; ಕಡಲು: ಸಾಗರ್; ಬ್ರಹ್ಮ: ಅಜ; ಕರ: ಹಸ್ತ; ಕಮಂಡಲ: ಮುನಿಗಳು ಕೈಯಲ್ಲಿ ಹಿಡಿಯುವ ಪಾತ್ರೆ; ಹುದುಗು: ಅಡಗು, ಮರೆಯಾಗು; ರವಿ: ಸೂರ್ಯ; ಮರೆ: ಮೊರೆ, ಶರಣಾಗತಿ; ಉರಗ: ಹಾವು; ಭವನ: ಜಗತ್ತು; ಸಾಗರ: ಸಮುದ್ರ; ಮುಳೂಗು: ನೀರಿನಲ್ಲಿ ಮೀಯು, ಕಾಣದಾಗು; ಪಡುವಣ: ಪಶ್ಚಿಮ; ತರಣಿ: ಸೂರ್ಯ; ತೊಲಗು: ಹೊರಡು; ಮುನ್ನ: ಮೊದಲು; ಕೊಲು: ಸಾಯಿಸು; ವೈರಿ: ಶತ್ರು;

ಪದವಿಂಗಡಣೆ:
ಹರನ +ದುರ್ಗದಲಿರಲಿ +ಮೇಣ್+ ಆ
ಹರಿಯ +ಕಡಲೊಳಗಿರಲಿ +ಬ್ರಹ್ಮನ
ಕರಕಮಂಡಲದೊಳಗೆ +ಹುದುಗಲಿ +ರವಿಯ +ಮರೆಹೊಗಲಿ
ಉರಗ +ಭುವನದೊಳಿರಲಿ +ಮೇಣ್ +ಸಾ
ಗರವ +ಮುಳುಗಲಿ +ನಾಳೆ +ಪಡುವಣ
ತರಣಿ +ತೊಲಗದ +ಮುನ್ನ +ಕೊಲುವೆನು +ವೈರಿ +ಸೈಂಧವನ

ಅಚ್ಚರಿ:
(೧) ಸೂರ್ಯಾಸ್ತ ಎಂದು ಹೇಳುವ ಪರಿ – ಪಡುವಣ ತರಣಿ ತೊಲಗದ ಮುನ್ನ

ಪದ್ಯ ೪: ಸಭೆಯಲ್ಲಿ ಯಾರು ಎದ್ದು ನಿಂತರು?

ವೀರರಿದ್ದೇಗುವರು ದೈವದ
ಕೂರುಮೆಯ ನೆಲೆ ಬೇರೆ ನಮಗೊಲಿ
ದಾರು ಮಾಡುವುದೇನೆನುತ ಕಲಿಕರ್ಣ ಬಿಸುಸುಯ್ಯೆ
ಭೂರಿ ಭೂಪರು ವಿಸ್ತರದ ಗಂ
ಭೀರ ಸಾಗರದಂತಿರಲು ರಣ
ಧೀರರೆದ್ದರು ವರ ತ್ರಿಗರ್ತರು ರಾಜಸಭೆಯೊಳಗೆ (ದ್ರೋಣ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ವೀರರಿದ್ದು ಏನು ಮಾಡಿಯಾರು? ದೈವದ ಪ್ರೀತಿ ಬೇರೆ ಕಡೆಗಿದೆ. ನಮಗೊಲಿದು ಯಾರು ತಾನೇ ಏನು ಮಾಡಿಯಾರು? ಹೀಗೆಂದು ಕರ್ಣನು ನಿಟ್ಟುಸಿರಿಟ್ಟನು. ಸಭೆಯಲ್ಲಿದ್ದ ಮಹಾವೀರರಾದ ರಾಜರು ಸದ್ದಿಲ್ಲದ ಸಾಗರದಮ್ತೆ ಮೌನವಾಗಿದ್ದರು. ಆಗ ರಣಧೀರರಾದ ತ್ರಿಗರ್ತರು ಸಭೆಯಲ್ಲಿ ಎದ್ದು ನಿಂತರು.

ಅರ್ಥ:
ವೀರ: ಶೂರ; ಏಗು: ಸಾಗಿಸು, ನಿಭಾಯಿಸು; ದೈವ: ಭಗವಂತ; ಕೂರು: ಪ್ರೀತಿ, ಮೆಚ್ಚು; ನೆಲೆ: ಭೂಮಿ; ಬೇರೆ: ಅನ್ಯ; ಒಲಿ: ಪ್ರೀತಿ; ಕಲಿ: ಶೂರ; ಬಿಸುಸುಯ್: ನಿಟ್ಟುಸಿರುಬಿಡು; ಭೂರಿ: ಹೆಚ್ಚು, ಅಧಿಕ; ಭೂಪ: ರಾಜ; ವಿಸ್ತರ: ವಿಶಾಲ; ಗಂಭೀರ: ಆಳವಾದುದು; ಸಾಗರ: ಸಮುದ್ರ; ರಣ: ಸಮುದ್ರ; ಧೀರ: ಶೂರ; ವರ: ಶ್ರೇಷ್ಠ; ತ್ರಿಗರ್ತ: ಒಂದು ದೇಶದ ಹೆಸರು; ಎದ್ದು: ಮೇಲೇಳು; ಸಭೆ: ಓಲಗ;

ಪದವಿಂಗಡಣೆ:
ವೀರರಿದ್+ಏಗುವರು +ದೈವದ
ಕೂರುಮೆಯ +ನೆಲೆ +ಬೇರೆ +ನಮಗ್+ಒಲಿದ್
ಆರು +ಮಾಡುವುದೇನ್+ಎನುತ +ಕಲಿಕರ್ಣ+ ಬಿಸುಸುಯ್ಯೆ
ಭೂರಿ +ಭೂಪರು +ವಿಸ್ತರದ +ಗಂ
ಭೀರ +ಸಾಗರದಂತಿರಲು +ರಣ
ಧೀರರ್+ಎದ್ದರು +ವರ +ತ್ರಿಗರ್ತರು +ರಾಜಸಭೆಯೊಳಗೆ

ಅಚ್ಚರಿ:
(೧) ಕೆಲಸಕ್ಕೆ ದೈವದ ಮಹತ್ವ – ವೀರರಿದ್ದೇಗುವರು ದೈವದ ಕೂರುಮೆಯ ನೆಲೆ ಬೇರೆ
(೨) ಉಪಮಾನದ ಪ್ರಯೋಗ – ಭೂರಿ ಭೂಪರು ವಿಸ್ತರದ ಗಂಭೀರ ಸಾಗರದಂತಿರಲು

ಪದ್ಯ ೩೬: ಆಸ್ಥಾನದವರು ಕರ್ಣನನ್ನೇಕೆ ಹೊಗಳಿದರು?

ಜಾಗು ಜಾಗುರೆ ಕರ್ಣ ಪರರ ಗು
ಣಾಗಮನ ಪತಿಕರಿಸಿ ನುಡಿವವ
ನೀಗಳಿನ ಯುಗದಾತನೇ ಮಝ ಪೂತು ಭಾಪೆನುತ
ತೂಗುವೆರಳಿನ ಮಕುಟದೊಲಹಿನೊ
ಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ ಮಸಗಿತಾಸ್ಥಾನ (ದ್ರೋಣ ಪರ್ವ, ೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕರ್ಣನ ಮಾತುಗಳನ್ನು ಕೇಳಿ ಆಸ್ಥಾನದಲ್ಲಿದ್ದವರೆಲ್ಲರೂ, ಬೆರಳನ್ನೂ ಕಿರೀಟವನ್ನೂ ತೂಗಿ, ಭಲೇ ಕರ್ಣ ಪರರ ಗುಣವನ್ನು ಹೊಗಳುವ ನೀನು ಈ ದ್ವಾಪರಯುದದವನಲ್ಲ ಎಂದು ಹೊಗಳಿದರು. ಆಸ್ಥಾನವು ಅವರ ಕಿರೀಟದ ರತ್ನಗಳ ಬೆಳಕು, ಮಾತಿನ ಲಹರಿಗಳಿಂದ ಸಾಗರದಂತೆ ಕಾಣಿಸಿತು.

ಅರ್ಥ:
ಜಾಗು: ಭಲೇ; ಪರರ: ಅನ್ಯರ; ಗುಣಾಗಮ: ಗುಣವನ್ನು ಹೊಗಳುವವ; ಗುಣ: ನಡತೆ; ಪತಿಕರಿಸು: ಅನುಗ್ರಹಿಸು; ಈಗಳಿನ: ಇಂದಿನ; ಯುಗ: ಸಮಯದ ಬಹು ದೀರ್ಘವಾದ ಕಾಲ; ಮಝ: ಭಲೇ; ಪೂತು: ಕೋಂಡಾಟದ ಮಾಗು; ಭಾಪು: ಭಲೇ; ತೂಗು: ಅಲ್ಲಾಡಿಸು; ಬೆರಳು: ಅಂಗುಲಿ; ಮಕುಟ: ಕಿರೀಟ; ಅಹಿ: ಹಾವು; ಗರುವ: ಹಿರಿಯ; ಭಟ: ಸೈನಿಕ; ಉಲಿ: ಕೂಗು; ಲಹರಿ: ಅಲೆ; ಸಾಗರ: ಸಮುದ್ರ; ಸೌರಂಭ: ಸಡಗರ; ಮಸಗು: ಹರಡು; ಆಸ್ಥಾನ: ದರ್ಬಾರು;

ಪದವಿಂಗಡಣೆ:
ಜಾಗು +ಜಾಗುರೆ +ಕರ್ಣ +ಪರರ +ಗು
ಣಾಗಮನ +ಪತಿಕರಿಸಿ +ನುಡಿವವನ್
ಈ+ಗಳಿನ +ಯುಗದಾತನೇ +ಮಝ +ಪೂತು +ಭಾಪೆನುತ
ತೂಗು+ಬೆರಳಿನ +ಮಕುಟದೊಲಹಿನೊಳ್
ಆ +ಗರುವ +ಭಟರುಲಿಯೆ +ಲಹರಿಯ
ಸಾಗರದ +ಸೌರಂಭದಂತಿರೆ +ಮಸಗಿತ್+ಆಸ್ಥಾನ

ಅಚ್ಚರಿ:
(೧) ರೂಪಕದ ಪ್ರಯೋಗ – ತೂಗುವೆರಳಿನ ಮಕುಟದೊಲಹಿನೊಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ

ಪದ್ಯ ೬೪: ಕೌರವ ಸೈನ್ಯದ ದುಃಸ್ಥಿತಿಯನ್ನು ಯಾರು ಕಂಡರು?

ಒಟ್ಟಿದವು ಕೈದುಗಳು ಸತ್ತಿಗೆ
ಬೆಟ್ಟವಾದವು ಸಿಂಧಸೆಳೆಗಳು
ನಟ್ಟಡವಿ ಪವಡಿಸಿದ ತೆರನಾದುದು ರಣಾಗ್ರದಲಿ
ಥಟ್ಟು ಮುರಿದುದು ಕೂಡೆ ತೆರೆ ಸಾ
ಲಿಟ್ಟ ಸಾಗರದಂತೆ ರಾಯಘ
ರಟ್ಟ ಕಂಡನು ಕೌರವೇಶ್ವರ ಸಕಲ ಮೋಹರವ (ಭೀಷ್ಮ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಶಸ್ತ್ರಾಸ್ತ್ರಗಳೂ, ಧ್ವಜಗಳೂ ಬೆಟ್ಟದಮ್ತೆ ಬಿದ್ದವು. ರಣರಂಗವು ಮರಗಿಡಗಳು ಮಲಗಿದ ಅಡವಿಯಂತೆ ಕಾಣುತ್ತಿತ್ತು. ಸೈನ್ಯವು ಚಲ್ಲಾಪಿಲ್ಲಿಯಾಯಿತು. ಹಿಮ್ಮೆಟ್ಟುವ ಸೈನ್ಯವು ಸಮುದ್ರದ ತೆರೆಗಳಂತೆ ತೋರಿತು. ತನ್ನ ಸಮಸ್ತ ಸೈನ್ಯದ ದುಃಸ್ಥಿತಿಯನ್ನು ಕೌರವನು ನೋಡಿದನು.

ಅರ್ಥ:
ಒಟ್ಟು: ಗುಂಪು; ಕೈದು: ಆಯುಧ; ಸತ್ತಿಗೆ: ಕೊಡೆ, ಛತ್ರಿ; ಬೆಟ್ಟ: ಗಿರಿ; ಸಿಂಧ: ಒಂದು ಬಗೆ ಪತಾಕೆ, ಬಾವುಟ; ಸೆಳೆ: ಜಗ್ಗು, ಎಳೆ; ಅಡವಿ: ಕಾಡು; ಪವಡಿಸು: ಮಲಗು; ತೆರ: ಪದ್ಧತಿ, ತರಹ; ರಣಾಗ್ರ: ಯುದ್ಧದ ಮುಂಭಾಗ; ಥಟ್ಟು: ಗುಂಪು; ಮುರಿ: ಸೀಳು; ಕೂಡೆ: ಜೊತೆ; ತೆರೆ: ತೆಗೆ, ಬಿಚ್ಚು; ಸಾಲು: ಆವಳಿ, ಗುಂಪು; ಸಾಗರ: ಅಂಬುಧಿ, ಸಮುದ್ರ; ರಾಯ: ರಾಜ; ಅಘ: ಪಾಪ; ಕಂಡು: ತೋರು; ಸಕಲ: ಎಲ್ಲಾ; ಮೋಹರ: ಯುದ್ಧ;

ಪದವಿಂಗಡಣೆ:
ಒಟ್ಟಿದವು +ಕೈದುಗಳು +ಸತ್ತಿಗೆ
ಬೆಟ್ಟವಾದವು +ಸಿಂಧ+ಸೆಳೆಗಳು
ನಟ್ಟಡವಿ +ಪವಡಿಸಿದ+ ತೆರನಾದುದು +ರಣಾಗ್ರದಲಿ
ಥಟ್ಟು +ಮುರಿದುದು +ಕೂಡೆ +ತೆರೆ +ಸಾ
ಲಿಟ್ಟ +ಸಾಗರದಂತೆ +ರಾಯಘ
ರಟ್ಟ +ಕಂಡನು +ಕೌರವೇಶ್ವರ +ಸಕಲ +ಮೋಹರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಟ್ಟಿದವು ಕೈದುಗಳು ಸತ್ತಿಗೆ ಬೆಟ್ಟವಾದವು; ಥಟ್ಟು ಮುರಿದುದು ಕೂಡೆ ತೆರೆ ಸಾಲಿಟ್ಟ ಸಾಗರದಂತೆ

ಪದ್ಯ ೧೯: ರಾಕ್ಷಸ ಸೈನ್ಯದವರು ಹೇಗೆ ಮುನ್ನುಗ್ಗಿದರು?

ಧರಣಿಪತಿ ಚಿತ್ತೈಸು ವೇಲೆಯ
ಶಿರವನೊಡೆದುಬ್ಬೇಳ್ವ ಘನ ಸಾ
ಗರದವೊಲು ಪಿರಿದೊದರಿ ಕವಿದುದು ಕೂಡೆ ವಂಕದಲಿ
ಕರಿತುರಗ ರಥವಾಜಿ ಕಾಲಾ
ಳುರವಣಿಸಿತೇನೆಂಬೆನಸುರರ
ದೊರೆಯ ಸನ್ನೆಗೆ ಸೂಳವಿಪ ನಿಸ್ಸಾಳ ರಭಸದಲಿ (ಅರಣ್ಯ ಪರ್ವ, ೧೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಣ್ಣ ಯುಧಿಷ್ಠಿರ ಕೇಳು, ಸಮುದ್ರ ತಡಿಯ ಮರಳ ದಿನ್ನೆಯನ್ನು ದೂಡಿ ಉಬ್ಬುವ ಸಾಗರದಂತೆ, ಹಿರಣ್ಯಕಪುರದ ಕೋಟೆಯ ಮಹದ್ವಾರದಲ್ಲಿ ಚತುರಂಗ ಸೈನ್ಯವು, ದೈತ್ಯರಾಜನ ಸನ್ನೆಯಂತೆ ಕಹಳೆಗಳು ಮೊಳಗಲು ಮುನ್ನುಗ್ಗಿತು.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಚಿತ್ತೈಸು: ಗಮನವಿಟ್ಟು ಕೇಳು; ವೇಲೆ: ಸಮುದ್ರದ ಅಲೆ; ಶಿರ: ತುದಿ, ತಲೆ; ಒಡೆದು: ಸೀಳು; ಉಬ್ಬೇಳು: ಅಧಿಕವಾಗು; ಸಾಗರ: ಸಮುದ್ರ; ಘನ: ದೊಡ್ಡ; ಪಿರಿದು: ದೊಡ್ಡ, ಹೆಚ್ಚಾದುದು; ಕವಿ: ಆವರಿಸು; ಕೂಡೆ: ಜೊತೆ; ಅಂಕ: ಕಾಳಗ, ಬಿರುದು; ಕರಿ: ಆನೆ; ತುರಗ: ಅಶ್ವ; ರಥ: ಬಂಡಿ; ವಾಜಿ: ಕುದುರೆ; ಕಾಲಾಳು: ಸೈನಿಕ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಅಸುರ: ರಾಕ್ಷಸ; ದೊರೆ: ರಾಜ; ಸನ್ನೆ: ಗುರುತು; ಸೂಳು:ಆರ್ಭಟ, ಬೊಬ್ಬೆ; ನಿಸ್ಸಾಳ: ಚರ್ಮವಾದ್ಯ; ರಭಸ: ಆವೇಗ;

ಪದವಿಂಗಡಣೆ:
ಧರಣಿಪತಿ +ಚಿತ್ತೈಸು +ವೇಲೆಯ
ಶಿರವನ್+ಒಡೆದ್+ಉಬ್ಬೇಳ್ವ +ಘನ+ ಸಾ
ಗರದವೊಲು +ಪಿರಿದ್+ಒದರಿ +ಕವಿದುದು +ಕೂಡೆ +ವಂಕದಲಿ
ಕರಿ+ತುರಗ +ರಥ+ವಾಜಿ +ಕಾಲಾಳ್
ಉರವಣಿಸಿತ್+ಏನೆಂಬೆನ್+ಅಸುರರ
ದೊರೆಯ +ಸನ್ನೆಗೆ +ಸೂಳವಿಪ +ನಿಸ್ಸಾಳ +ರಭಸದಲಿ

ಅಚ್ಚರಿ:
(೧) ಚತುರಂಗ ಸೈನ್ಯದ ವರ್ಣನೆ – ಕರಿತುರಗ ರಥವಾಜಿ ಕಾಲಾಳುರವಣಿಸಿತ್
(೨) ಉಪಮಾನದ ಪ್ರಯೋಗ – ವೇಲೆಯ ಶಿರವನೊಡೆದುಬ್ಬೇಳ್ವ ಘನ ಸಾಗರದವೊಲು ಪಿರಿದೊದರಿ ಕವಿದುದು ಕೂಡೆ ವಂಕದಲಿ